ಆಗಸ್ಟ್ 06, 2011

ನೆನೆಪುಗಳ ’ಮಾಯಾಚಾಪೆ’ಯಲ್ಲಿ ಕೂರಿಸುವ ಡೋರ್ ನಂಬರ್ 142




ನೆನಪುಗಳು, ಅದರಲ್ಲೂ ಬಾಲ್ಯದ ನೆನಪುಗಳು ಪ್ರತಿಯೊಬ್ಬರಿಗೂ ಮುದನೀಡುವಂತವವು. ದೊಡ್ಡವರಾಗುತ್ತಾ ಹೋದಂತೆಲ್ಲಾ ಆ ನೆನಪುಗಳು ನಮಗೆ ಹೆಚ್ಚು ಕಾಡುತ್ತಾ ಹೋಗುವುತ್ತವೆ. ಹೀಗೆ ದಿನನಿತ್ಯದ ಬದುಕಿನಲ್ಲಿ ಇಣುಕುವ, ಕಾಡುವ ನೆನಪುಗಳನ್ನು ವಿಶಿಷ್ಟ ರೀತಿಯಲ್ಲಿ ತೆರೆದಿಡುತ್ತದೆ ಅಂಕಿತ ಪ್ರಕಾಶನ ಪ್ರಕಟಿಸಿರುವ ಜಿ.ಎನ್.ಮೋಹನ್ ಅವರ ಡೋರ್ ನಂಬರ್ ೧೪೨.
 ’ಡೋರ್ ನಂಬರ್ ೧೪೨’ರ ಒಳಕ್ಕೆ ಪ್ರವೇಶಿಸಿದಂತೆ, ಲೇಖಕರು ತಮ್ಮ ಬದುಕಿನ ನೆನಪುಗಳನನ್ನು ಒಂದಿಒಂದಾಗಿ ಹೇಳುತ್ತಾ ಹೋದಂತೆ ನಮ ಒಂದೊಂದಾಗಿ ನಮ್ಮವೇ ನೆನಪುಗಳು ಬಿಚ್ಚಿಕೊಳ್ಳುತ್ತವೆ. ವ್ಯಕ್ತಿ, ಸನ್ನಿವೇಶ ಬೇರೆ. ಅನುಭವ ಒಂದೇ ಎನ್ನಿಸುವಂತೆ. ಈ ಕೃತಿಯ ವೈಶಿಷ್ಟ್ಯವೆಂದರೆ ಲೇಖಕರು ಅವರು ಬಾಲ್ಯದ ನೆನಪುಗಳನ್ನು ಬಿಚ್ಚುವಾಗ ಬಾಲ್ಯದಲ್ಲೇ ಮುಳುಗಿ ಬರೆಯುವುದಿಲ್ಲ. ಬದಲಾಗಿ ಅವರ ಒಂದೊಂದು ನೆನಪುಗಳ ಹಿಂದೆಯೂ ವರ್ತಮಾನದ ಯಾವುದೋ ಒಂದು ಘಟನೆಯಿದೆ. ಗೆಳೆಯನೊಬ್ಬನ ಮಾತು ನೆನಪಿಸಿದ ನಂಜನಗೂಡು ಟೂತ್ ಪೌಡರ್, ಚೀತಾಫೈಟ್ ಬೆಂಕಿಪೊಟ್ಟಣ, ಎಂಜಿ ರೋಡಿನ ಬುಕ್ ಸ್ಟಾಲ್‌ನಲ್ಲಿರೋ ಪುಸ್ತಕ ನೆನಪಿಸಿದ ಡಾಕ್ಟರ್ ಆಂಟಿಯ ಡೈಲಾಗ್, ಟೈಮ್ಸ್ ಆಫ್ ಇಂಡಿಯಾದ ಶಾರೂಕ್ ಜಾಹೀರಾತು ನೆನಪಿಸಿದ ಅಂಟವಾಳ ಸಿಪ್ಪೆ.... ಹೀಗೆ ಪ್ರತಿಯೊಂದು ನೆನಪೂ ಇಂದಿನ ಯಾವುದೋ ಸಂದರ್ಭದ ಹಿನ್ನೆಲೆಯಲ್ಲಿ ಮೂಡುತ್ತಾ ಹೋಗುವುದು ವಿಶಿಷ್ಟವಾಗಿದೆ. 
ಎಲ್ಲರಿಗೂ ನೆನಪುಗಳಿರುತ್ತವಾದರೂ ಮೋಹನ್‌ರ ರೀತಿ ದಟ್ಟವಾಗಿ ದಾಖಲಿಸುವುದು ಆಗುವುದಿಲ್ಲವೇನೋ ಎಂಬಷ್ಟು ತೀವ್ರವಾಗಿದೆ ಅವರ ಬರಹ. ’ಜೀವನ ಅಂದ್ರೆ ಕೆಂಪು ಡಬ್ಬಿ ಇದ್ದಂU’, ’ಸುಬ್ಬಣ್ಣ ಮೇಸ್ಟ್ರ ಸುತ್ತಮುv’, ’ತಂಗಿಗೆ ಕೊಟ್ಟ ಪೆನ್ಸಿಲ್’, ’ನಿದ್ರಾ ಸುಂದರಿಯ ನೆನಪಲ್ಲಿ’, ’ಅತ್ತಾರೆ ಅತ್ತು ಬಿಡು ಹೊನಲು ಬರಲಿ’, ಮುಂತಾದವು ಬರೀ ನೆನಪುಗಳು ಮಾತ್ರವಾಗಿರದೇ ಬದುಕಿನ ಸಾರವನ್ನೂ ತಿಳಿಸುತ್ತವೆ. 
ಕೃತಿ ಓದಿವ ಯಾರಿಗಾದರೂ ಲೇಖಕರ ಅನುಭವಗಳ ವೈವಿಧ್ಯತೆ ಅಚ್ಚರಿ ಮೂಡಿಸುತ್ತದೆ ಮಾತ್ರವಲ್ಲ ತಮಾಷೆ ಎನಿಸುವ, ಕಚಗುಳಿ ಇಡುವ, ಕಣ್ಣಂಚಿನಲ್ಲಿ ನೀರಹನಿಯನ್ನು ಉಕ್ಕಿಸುವ, ವಿಷಾಧವೆನಿಸುವ, ಅಚ್ಚರಿದಯಕ ಎನಿಸುವ ಅನುಭವಗಳು ದಂಡಿಯಾಗಿವೆ ಈ ಡೋರ್‌ನಂಬರ್ ೧೪೨ರಲ್ಲಿ. 
ಜಿಎನ್‌ಅವರು ತಮ್ಮ ನೆನಪುಗಳನ್ನು ಅನಾವರಣಗೊಳಿಸಲು ಬಳಸಿರುವ ಭಾಷೆಯೂ ಅವರ ಹಿಂದಿನ ಕೃತಿಗಳಲ್ಲಿರುವಂತೆಯೇ ಆಪ್ಯಾಯವೆನಿಸುತ್ತದೆ. ದೂರದ ಕ್ಯೂಬಾದ ಅನುಭವಗಳನ್ನೇ ನಮ್ಮೊಳಗೆ ಇನ್ನಿಲ್ಲದಂತೆ ದಾಖಲಿಸಿರುವ ಜಿ.ಎನ್.ರಿಗೆ ಇನ್ನು ತಮ್ಮದೇ ಬದುಕಿನ ಅನುಭವಗಳನ್ನು ನಮಗೆ ದಾಟಿಸುವುದು ಕಷ್ಟವಾಗಲು ಹೇಗೆ ಸಾಧ್ಯ?. ’ಅವ್ರು ನಮ್ದೆಲ್ಲಾ ಬರೆದವ್ರೆ ಅಂದ್ರೆ ನಂ ಥರಾನೇ’ ಎಂಬ ಬರಹದಲ್ಲಿ ಲಂಕೇಶ್ ಲೇಖಕರನ್ನು ಪ್ರಭಾವಿದ ಬಗೆಯನ್ನು ತಿಳಿಸಿರುವುದು ವಿಶಿಷ್ಟವಾಗಿದೆ. ’ರೋಷದ ರಾಗಗಳು’ ಲೇಖಕರ ಲೋಕದೃಷ್ಟಿಯನ್ನು ಬದಲಾಯಿಸಿದ ಬಗೆಯೂ ಕೂಡಾ. ಹಾಗೆಯೇ ಅಣ್ಣನಾದವನು ತಮ್ಮನ ನಡೆನುಡಿಯ ಮೇಲೆ ಬೀರುತ್ತಾ ಬರತೊಡಗಿದ ಪ್ರಭಾವಗಳಿಗೂ ಮತ್ತು ಅಪ್ಪ ಬೀರಿದ ಪ್ರಭಾವಗಳಿಗೂ ಅಜಗಜಾಂತರ. ಅಪ್ಪ ಲೇಖಕರಿಗೆ ಎಂದೂ  ನೆಗೆಟಿವ್ ವ್ಯಕ್ತಿಯೇ ಆಗಿರುವುದು ವಿಷಾಧವನ್ನು ತರಿಸುತ್ತದೆ. ಆದರೂ, ನೀನು ಥೇಟ್ ನಿಮ್ಮನ ಥರಾನೇ’ ಎಂದು ಅಮ್ಮ ಹೇಳಿದ ದಿನ ಲೇಖಕರ ಮನದಲ್ಲಿ ಚೇಳು ಕುಟುಕಿದಂತಾಗುತ್ತದೆ. ’ಹುಚ್ಚು ಕುದುರೆಯ ಬೆನ್ನನೇರಿ’ದಾಗ ಅಣ್ಣ ತಂದ ’ಪುಸ್ತಕ’ಗಳನ್ನು ನೋಡಿ ಲೇಖಕರಿಗಾದ ಅನುಭವಗಳನ್ನು ಪ್ರಾಮಾಣಿಕವಾಗಿ ಹೇಳಿಕೊಂಡಿದ್ದಾರೆ. 
ಕೃತಿಯಲ್ಲಿ ಒಂದೆಡೆ ’ನೀ ಯಾರೋ ಏನೋ ಎಂತೋ, ಅಂತು ಪೋಣಿಸಿತು ಕಾಣದ ತಂತೂ....’ ಸಾಲುಗಳ ಉಲ್ಲೇಖವಿದೆ. ವಾಸ್ತವದಲ್ಲಿ ಡೋರ್ ನಂಬರ್ ೧೪೨ಕೃತಿಗೂ ಕೂಡಾ ಇದೇ ಸಾಲು ಅನ್ವಯವಾಗುತ್ತವೆ. ಲೇಖಕರು ದಾಖಲಿಸುವ  ಅನುಭವಗಳನ್ನೂ, ಓದುಗರ ಭಾವನೆಗಳನ್ನೂ ಪೋಣಿಸುತ್ತಾ ಹೋಗುತ್ತದೆ ಕೃತಿ. ಕೃತಿಯಲ್ಲಿ ಬಹಳವಾಗಿ ಕಾಡುವುದು ಬಾಲ್ಯದ ಅನುಭವಗಳೇ ಆದರೂ ಕೃತಿ ಅಷ್ಟಕ್ಕೇ ಸೀಮಿತವಾಗೇನೂ ಇಲ್ಲ. ಯೌವನಕ್ಕೆ ಕಾಲಿಟ್ಟ, ಪ್ರೀತಿಸಿದ, ಮದುವೆಯಾದ ಹಾಗೂ ನಂತರದ ಬದುಕಿನ ಚಿತ್ರಗಳೂ ಕೆಲವಾರು ಲೇಖನಗಳಲ್ಲಿ ಪ್ರತಿಬಿಂಬಿತವಾಗಿವೆ. ಆದರೆ ಬಾಲ್ಯದ ದೃಶ್ಯಗಳಷ್ಟು ತೀವ್ರವಾಗಿ ಅಲ್ಲ. ದಿಸ್ ಈಸ್ ಮೈ ಬಾಡಿ- ಐ ಎಂಜಿನೀರ್ ಇಟ್, ಆರ್ ಯು ವರ್ಜಿನ್?, ಮಾತಾಡೋನೇ ಮಹಾಶೂರ, ಬಿಚ್ಚ ಬೇಕಾದ ಕಟ್ಟಡಗಳು, ಆಲಿಸಬೇಕಾದ ದನಿಗಳು, ಮುಂತಾದ ಶೀರ್ಷಿಕೆಗಳಲ್ಲಿ ಲೇಖಕರು ಲೈಂಗಿಕತೆಯ ವಿಚಾರಗಳ ಬಗೆಗೆ ಪ್ರಾಸ್ತಾಪಿಸುತ್ತಾರೆ. ಇವುಗಳಲ್ಲಿ ಬಹುತೇಕವು ಈ ಮನೋವೈಜ್ಞಾನಿಕ ಲೇಖನಗಳಂತೆ ಭಾಸವಾಗಿ ಅವುಗಳಲ್ಲಿ ಆತ್ಮಕತೆಯ ಅಂಶಗಳು ಗೌಣವಾಗಿಬಿಡುತ್ತವೆ. ಲೇಖಕರ ಬಾಲ್ಯದ ವಿವರಗಳನ್ನು ಸವಿಯುತ್ತಾ ಬರುವ ಓದುಗರಿಗೆ ಕ್ರಮೇಣದ ಬದುಕಿನ ವಿವರಗಳು ಕ್ಷೀಣವಾಗುತ್ತಾ ಹೋಗಿಬಿಡುತ್ತವಾದ್ದರಿಂದ ಎಲ್ಲೋ ಅಸಮಾಧಾನವಾಗತೊಡಗುತ್ತದೆ. ಅಥವಾ ಆ ವಿವರಗಳು ಮನೆ ನಂಬರ್ ೧೪೨ರ ಹೊರಗಿನವಾದ್ದರಿಂದ ಲೇಖಕರು ಅವುಗಳನ್ನು ದಾಖಲಿಸಲು ಹೋಗಿಲಲ್ಲವೇನೋ?. 
ಇಡೀ ಕೃತಿಯಲ್ಲಿ ಜಿ.ಎನ್.ಮೋಹನ್ ತಮ್ಮ ಎಂದುನ ನವಿರಾದ ಭಾಷೆಯಲ್ಲಿ ಪ್ರತಿಯೊಂದು ಅನಿಸಿಕೆ, ಅನುಭವ, ಘಟನೆಗಳನ್ನೂ ಪೋಣಿಸುತ್ತಾ ಹೋಗುವುದರಿಂದ ಕೃತಿ ಸುಲಭವಾಗಿ ಓದಿಸಿಕೊಂಡು ಹೋಗಿಬಿಡುತ್ತದೆ. ಅಲ್ಲಲ್ಲಿ ಲೇಖಕರು ಹಲವಾರು ಕವಿತೆಗಳನ್ನು, ಹೇಳಿಕೆಗಳನ್ನು ಉಲ್ಲೇಖಿಸುತ್ತಾ ಹೋಗುತ್ತಾರೆ. ಓದುಗರ ಮಟ್ಟಿಗೆ ಹೊಸದೆನ್ನಿಸುವ ಮಾಹಿತಿಗಳನ್ನು ನೀಡುತ್ತಾರೆ. ಆದರೆ ಅವುಗಳ ಮೂಲವನ್ನು ಹೇಳುವ ತೊಂದರೆ ತೆಗೆದುಕೊಳ್ಳುವುದಿಲ್ಲ. ಅಷ್ಟು ತೊಂದರೆ ತೆಗೆದುಕೊಂಡಿದ್ದರೆ ಓದುಗರಿಗೆ ಅನುಕೂಲವಾಗುತ್ತಿತ್ತು. ಕೃತಿಯ ಒಳಪುಟಗಳಲ್ಲಿನ ಅನುಭವಗಳಿಗೆ ಪೂರಕವಾಗಿ ಪ.ಸ.ಕುಮಾರ್ ಗೀಚಿರುವ ಚಿತ್ರಗಳು ಹಾಗೂ ಕೊನೆಯಲ್ಲಿರುವ ಕವಿತೆ ಇಡೀ ಕೃತಿಗೆ ಕಸುವು ತುಂಬಿವೆ. ಅಪಾರ ಅವರ ಮುಖಪುಟ ವಿನ್ಯಾಸ ಕೂಡಾ ಸೊಗಸಾಗಿದೆ. 

                                                           *********************************
ಒಂದು ಕಾಕತಾಳೀಯ.................
  ಡೋರ್ ನಂ 142ರ ಬಗ್ಗೆ ಬರೆದ ಈ ಬರೆಹವು  ಸಂಡೆ ಇಂಡಿಯನ್ ಪತ್ರಿಕೆಯ ಈ ಹೊತ್ತಗೆ ಕಾಲಂನಲ್ಲಿ  ಪ್ರಕಟ ಆದ ಮೇಲೆ ಒಂದು ತಮಾಷೆ ನಡೆಯಿತು.  ಆಮೇಲೆ ನನಗೆ ತಿಳಿದಿದ್ದೇನೆಂದರೆ ಈಗ 15  ವರ್ಷಗಳ ಹಿಂದೆ ನಾನೂ ಕೂಡಾ ಇದೇ ಡೋರ್. ನಂಬರ್ ೧೪೨ರ ಸದಸ್ಯನಾಗಿದ್ದೆ!!  ಈ ಕೃತಿಯ   ಅಮ್ಮನೊಂದಿಗೆ ಐದಾರು ತಿಂಗಳು ಕಳೆದಿದ್ದೆ!. ನಾನು ಇದನ್ನು ಓದಿ ಬರೆಯುವವರೆಗೂ ಈ ವಿಷಯ ಹೊಳೆದೇ ಇರಲಿಲ್ಲ. ಯಾವಾಗ   ಈ  ಪತ್ರಿಕೆಯನ್ನು ಕಳುಹಿಸಲು ಮೋಹನ್ ಸರ್ ಅಡ್ರೆಸ್ ಕಳುಹಿಸಿದರೋ ಆಗಲೇ ನನಗೆ ಫ್ಲಾಷ್ ಆದದ್ದು. ಅರೆ ಈ ಅಡ್ರೆಸ್ ನಂಗೆ ತುಂಬಾ ಫೆಮಿಲಿಯರ್ ಇದೆಯಲ್ಲಾ ಅಂತ...

      ನಾನು ಏಳನೇ ತರಗತಿ ಇದ್ದಾಗ ಜಿ.ಎನ್.ಮೋಹನ್‌ರ ಅಣ್ಣ ಎಸ್.ಎಲ್.ಎನ್ ಸ್ವಾಮಿ ಹಾಗೂ ಅವರ ಪತ್ನಿ ನೊಮಿಟೋ ಮೇಡಂ ನಮ್ಮ ಮನೆಗೆ ಆಗಾಗ ಬರ್ತಾ ಇದ್ರು.  ಆಗ ಬೇಸಿಗೆ ರಜೆ ಬಂದಿತ್ತು.  ಸರಿ ಬೆಂಗಳೂರು ನೋಡುವಂತೆ ಬಾ ಎಂದು ನನ್ನನ್ನು ಅವರ ವ್ಯಾನ್‌ನಲ್ಲಿ ಎತ್ತಿ ಹಾಕ್ಕೊಂಡು ಹೋದರು. ಅಲ್ಲಿಂದ ಮಂಗಳೂರಿನಲ್ಲಿದ್ದ ಮೋಹನ್ ಸರ್ ಅವರ ಮನಗೆ, ನಂತರ ಬೆಂಗಳೂರಿನ ಈ ಡೋರ್ ನಂಬರ್ ೧೪೨ರಲ್ಲಿ ನನ್ನನ್ನು ಬಿಟ್ಟರು.  ನಾನು ಒಂದು ಮನೆಯಲ್ಲಿ ರಾಶಿ ರಾಶಿ ಪುಸ್ತಕಗಳ ಸಂಗ್ರಹ ನೋಡಿದ್ದು ಅಂದು ಮೋಹನ್ ಸರ್ ಮನೆಯಲ್ಲೇ . ಮರುದಿನ ಬಂಗಳೂರಿಗೆ ಕರೆದುಕೊಂಡು ಹೋದರು. ಅದು ನನ್ನ ಮೊತ್ತ ಮೊದಲ ಬೆಂಗಳೂರು ಭೇಟಿ.   ಕುಗ್ವೆಯಿಂದ ಸೀದಾ ಬೆಂಗಳೂರಿಗೆ ಬಂದು ಬಿದ್ದಿದ್ದೆ. ಮರುದಿನವೇ  ಒಂದು ಸೈಕಲ್‌ನ್ನೂ ಕೊಟ್ಟು  "ನಡಿ ಬೆಂಗಳುರು ತಿರುಗು" ಎಂದಿದ್ರು.  ನಾನು ಸೈಕಲ್ ಹೊಡೆಯೋಕೆ ಬರುತ್ತಿತ್ತಾದರೂ ಬೆಂಗಳೂರಿನ ರಸ್ತೆಯಲ್ಲಾ.... ಅಬ್ಬಬ್ಬಾ.. ಭಾರೀ ಹೆದರಿಕೆ ಆಗಿತ್ತು. ಆದರೆ ಕೊನೆಗೆ ನೋಡೇ ಬಿಡಾನ  ಒಂದು ಕೈ ಅಂತ ಹೇಳಿ ಸೈಕಲ್ ಹತ್ತಿದ್ದೆ.  ನಿಜ ಎಂದರೆ ನಾನು ಈ ಮನೆಯಿಂದ ರಾಜಾಜಿ ನಗರ ಮುಖ್ಯ ಅಂಚೆ ಕಛೇರಿಯ ನಡುವಿನ ರಸ್ತೆಯಲ್ಲಿ ಯಾವಾಗ ಸೈಕಲ್ ಹೊಡೆಯೋಕೆ ಶುರು ಮಾಡಿದ್ನೋ ಆಮೇಲೇನೆ ಸೈಕಲ್ ಹೊಡೆಯೋದರಲ್ಲಿ ಪಕ್ಕಾ ಆದದ್ದು. ನಂತರದಲ್ಲಿ  ಜೀವನ ನನಗೆ ಬಹಳಾನೇ 'ಸೈಕಲ್' ಹೊಡೆಸಿದೆಯಾದರೂ ಇಲ್ಲಿ ಸೈಕಲ್ ಹೊಡೆದ ಗಳಿಗೆ ಮರೆಯುವಮತಿಲ್ಲ.  ಬೆಂಗಳೂರಿನ   ಆ ಮೊದಲ ಭೇಟಿ, ಹಾಗೂ ಡೋರ್ ನಂಬರ್ 142 ರ  ಅನುಭವಗಳು ಮರೆಯಲಾಗದ್ದು.  
      ಆಮೇಲೆ ಒಂದು ವರ್ಷದ ನಂತರ  ಸ್ವಾಮಿ, ನೊಮಿಟೋ, ಲೀಸಾ ಗಾರ್ಫಿಂಕಲ್, ವೆಂಕಿ ಮುಂತಾದವರು ಸೇರಿ ಹುಟ್ಟು ಹಾಕಿದ್ದ ಅಡ್ವೆಂಚರರ‍್ಸ್ ಸಂಸ್ಥೆ ಹೊನ್ನೆಮರಡುವಿನಲ್ಲಿ ತನ್ನ ಜಲ ಸಾಹಸ ಚಟುವಟಿಕೆಗಳನ್ನು ಜೋರಾಗಿ ನಡೆಸುತ್ತಿದ್ದ ಸಂದರ್ಭದಲ್ಲಿ  ಅವರೆಲ್ಲರೊಂದಿಗೆ ನಿಕಟ ಸಂಪರ್ಕ  ಇತ್ತು. ನನ್ನಪ್ಪ ಕೂಡಾ ಅದರ ಭಾಗವಾಗಿ ಸಕ್ರಿಯವಾಗಿದ್ದರು.  ಅಲ್ಲಿ ಶುರುವಾಗಿದ್ದ ’ನೇಚರ್ ಸ್ಕೂಲ್’ ಎಂಬು ’ಶಾಂತಿನಿಕೇತನ’ ಶಾಲೆಯ  ಮೊದಲ ಹಾಗೂ ಕೊನೆಯ  ತಂಡದಲ್ಲಿ ನಾನೂ ಇದ್ದೆ.  ಅಗ ಬೆಂಗಳೂರಿನ ಡೋರ್ ನಂಬರ್ 142 ರಲ್ಲಿ ನಾಲ್ಕು  ತಿಂಗಳು ಇದ್ದೆ.  
ಆದರೆ ಆ ಹೊತ್ತಿಗೆ ಮೋಹನ್ ಸರ್ ಬೇರಡ ಕಡೆ ಇದ್ದಿದ್ದರಿಂದ  ಅಲ್ಲಿ ನಮಗೆ ಎಂದೂ ಅವರ ದರ್ಶನ  ಆಗಿರಲಿಲ್ಲ. 

ಹೀಗೆ ನಾನು  ಆ  ಮನೆಯಲ್ಲಿ ಇದ್ದಿದ್ದು, ಅದರ ಬಗ್ಗೆ ಮೋಹನ್ ಸರ್ ಬರೆದದ್ದು, ಅದರ ಬಗ್ಗೆ ನಾನು ನನಗರಿವಿಲ್ಲದೇ ವಿಮರ್ಷೆ ಬರೆದಿದ್ದು....... ಎಂತಹಾ ತಮಾಷೆಯ ಕೊ ಇನ್ಸಿಡೆನ್ಸ್ ಅಲ್ವಾ.....???? 
                                                                      **************************

ಹೊಸತು - ಹಳತು : ಬುದ್ದ ತತ್ವ

ಲೋಕದ ಪ್ರತಿಯೊಂದೂ ಎಡೆಬಿಡದ ಚಲನೆಯಲ್ಲಿದೆ. ಕೆಲವೊಮ್ಮೆ ಬರಿಗಣ್ಣಿಗೆ ಚಲಿಸದೇ ಜಡವಾಗಿವೆ ಎಂದು ತೋರುವ ಪ್ರತಿಯೊಂದೂ ಚಲನೆಯಲ್ಲಿದೆ. ಒಂದು ಮರದ ತುಂಡು, ಕಬ್ಬಿಣದ ಬಿಲ್ಲೆ,...

ಮರದೊಂದು ಎಲೆ ನಾನು..

ನನ್ನ ಫೋಟೋ
A Writer, Researcher, Journalist and Activist. Born and brought up from Kugwe a village near Sagara, Shimoga district of Karnataka state. Presently working as the Editor In Chief of PEEPAL MEDIA /PEEPAL TV.