ಡಿಸೆಂಬರ್ 02, 2010

ಇರಬೇಕು ಇದ್ದರೆ ಇಂಥಾ ಶಾಲೆ





ಮಕ್ಕಳನ್ನು ಇಂಗ್ಲಿಷ್ ಕಾನ್ವೆಂಟಿಗೆ ಸೇರಿಸೋದು ಇಂದು ಒಂದು ಬಗೆಯ ಮಾಸ್ ಹಿಸ್ಟೀರಿಯಾ ಆಗಿಬಿಟ್ಟಿದೆ. ಆದರೆ ಪ್ರಪಂಚದೆಲ್ಲೆಡೆ ಸಾಬೀತಾಗಿರುವ ವಾಸ್ತವ ಸತ್ಯ ಏನೆಂದರೆ ಯಾವುದೇ ಒಂದು ಮಗು ತನ್ನ ಪರಿಪೂರ್ಣ ಬೌದ್ಧಿಕ ಬೆಳವಣಿಗೆಯನ್ನು ಸಾಧಿಸಲು ಸಾಧ್ಯವಾಗೋದು ಮಾತೃಭಾಷಾ ಶಿಕ್ಷಣದ ಮೂಲಕ ಮಾತ್ರ. ಪ್ರಪಂಚದಲ್ಲಿ ಯಾವ್ಯಾವ ದೇಶಗಳು ಮುಂದುವರೆದಿವೆಯೋ ಅಲ್ಲೆಲ್ಲಾ ಈ ವ್ಯವಸ್ಥೆ ಇದೆ. ಆದರೆ ಮೆಕಾಲೆಯ ವಾರಸುದಾರರಾಗಿರುವ ನಮ್ಮ ಆಳುವ ಮಂದಿಗೆ ಮಾತ್ರ ಈ ಸತ್ಯ ಅರಿವಾಗೋದೇ ಇಲ್ಲ. ಒಂದು ಕಡೆ ಶಿಕ್ಷಣವನ್ನು ದುಡ್ಡು ಮಾಡಲು ಒಂದು ದಂದೆಯಾಗಿ ಮಾತ್ರ ನೋಡುವ ಉದ್ಯಮಿಗಳು ನಾಯಿಕೊಡೆಗಳಂತೆ ಬೆಳೆಸುತ್ತಿರುವ ಕಾನ್ವೆಂಟುಗಳು ಇನ್ನೊಂದೆಡೆ ದರಿದ್ರ ಶಿಕ್ಷಕರಿಂದ ಮಕ್ಕಳ ಕ್ರಿಯೇಟಿವಿಟಿಯನ್ನೆಲ್ಲಾ ಹಾಳುಮಾಡುತ್ತಿರುವ ಸರ್ಕಾರಿ ಶಾಲೆಗಳು.


ಇದರೆ ನಡುವೆ ನಮ್ಮಲ್ಲೂ ಒಂದಷ್ಟು ಮಂದಿ ಎಚ್ಚೆತ್ತಿದ್ದಾರೆ. ಹೊಸ ಬಗೆಯ ಮಾದರಿಯ ಶಾಲೆಗಳನ್ನು ಸ್ಥಾಪಿಸಿ ನಡೆಸಿಕೊಂಡು ಹೋಗುತ್ತಿದ್ದಾರೆ.
ಕನ್ನಡ ಮಾದ್ಯಮ ಶಿಕ್ಷಣದ ಬಗ್ಗೆ ಗಂಟೆಗಟ್ಟಲೆ ಉಪನ್ಯಾಸ ನೀಡಿ ತಮ್ಮ ಮಕ್ಕಳನ್ನು ಇಂಗ್ಲಿಷ್ ಕಾನ್ವೆಂಟಿಗೆ ಕಳುಹಿಸುವ ಸೋಗಲಾಡಿ ಮಂದಿಯಲ್ಲ ಇವರು... ಶಿಕ್ಷಣದ ವ್ಯಾಪಾರ ಮಾಡಲು ಇಳಿದವರೂ ಅಲ್ಲ... ಕನ್ನಡ ಮಿಡಿಯಂ ಶಾಲೆ ನಡೆಸುತ್ತಿರುವ ತಮ್ಮನ್ನು ಯಾರಾದರೂ ಗುರುತಿಸಬೇಕು, ಪ್ರಶಸ್ತಿ, ಪದವಿ ನೀಡಬೇಕು ಎಂಬ ಹಪಹಪಿಕೆಯೂ ಇವರಿಗಿಲ್ಲ. ಆದರೆ ಈ ನಾಡಿನ ಮುಂದಿನ ಪ್ರಜೆಗಳಾಗಲಿರುವ ಮಕ್ಕಳ ಬಗ್ಗೆ ಅಗಾಧವಾದ ಪ್ರೀತಿ, ಅವರ ಮೂಲಕವೇ ಈ ನಾಡಿನ ಸಂಸ್ಕೃತಿ ಉಳಿದು ಬೆಳೆಯಲು ಸಾಧ್ಯ ಎಂಬ ನಂಬಿಕೆ ಇವರಿಗಿದೆ. ಇಂಗ್ಲಿಷ್ ಕಾನ್ವೆಂಟ್ ಸೇರಿಸುವ ಹಿಸ್ಟೀರಿಯಾಗೆ ಬಲಿಯಾಗದೇ ಕನ್ನಡ ಶಾಲೆಗಳನ್ನು ಕರ್ತವ್ಯವೆಂಬಂತೆ ಮುನ್ನಡೆಸುತ್ತಿದ್ದಾರೆ. ಇಂತಹ ನಾಲ್ಕು ಶಾಲೆಗಳನ್ನು ಸುತ್ತಿ ಬರೋಣ ಬನ್ನಿ...
ಇಂದು ಎಷ್ಟೋ ಶಾಲೆಗಳು ಮಕ್ಕಳ ಪಾಲಿಗೆ ಸಕ್ಷಾತ್ ನರಕದ ಕೂಪಗಳು. ಅಲ್ಲಿ ಮಕ್ಕಳು ಬಾಲ್ಯದ ಸವಿಯುಣ್ಣದೆ, ಪ್ರತಿ ಕ್ಷಣವೂ ಹೋಂವರ್ಕ್ ಟ್ಯೂಷನ್, ಎಕ್ಸಾಮ್, ಕಾಂಪಿಟೇಷನ್ ಹೀಗೆ ಸರಣಿ ಒತ್ತಡದಲ್ಲಿ ತೊಳಲಾಡುತ್ತಾ ಮುಖದ ಮೇಲೆ ಕೃತಕ ನಗುವನ್ನೂ, ಎದೆಯಲ್ಲಿ ದುಗುಡವನ್ನೂ ತುಂಬಿಕೊಂಡು ಒದ್ದಾಡುತ್ತಿರುವ ಹೊತ್ತಿನಲ್ಲೇ ಸದ್ದಿಲ್ಲದೇ ವಿದ್ಯಾನಾದ ಹರಿಸುತ್ತಿರುವ ಈ ಕನ್ನಡ ಶಾಲೆಗಳು ಮಕ್ಕಳ ಮುಖದಲ್ಲಿ ಸಹಜ ನಗು ಅರಳಲು ಕಾರಣವಾಗುತ್ತಿವೆ.





ಇವು ಬರೀ ಕನ್ನಡ ಮೀಡಿಯಂ ಶಾಲೆಗಲ್ಲ, ವೈಜ್ಞಾನಿಕ ಶಿಕ್ಷಣ ಕಲಿಸುವ ಶಾಲೆಗಳು. ಸಮಾಜದ ಎಲ್ಲಾ ಸ್ತರಗಳಿಂದಲೂ ಬಂದು ಮಾತೃಭಾಷೆ ಕನ್ನಡದಲ್ಲಿ ಜ್ಞಾನ ಸಂಪಾದನೆಯ ನಿಜವಾದ ಆನಂದವನ್ನು ಅನುಭವಿಸುತ್ತಿರುವ ಈ ಮಕ್ಕಳನ್ನೊಮ್ಮೆ ನೀವು ನೋಡಲೇಬೇಕು. ಇಂದಿನ ವ್ಯಾವಹಾರಿಕ ಬದುಕಿಗೆ ಬೇಕಾದ ಇಂಗ್ಲಿಷನ್ನೂ ಯಾವ ಒತ್ತಡವೂ ಇಲ್ಲದೇ ಕಲಿತು ಇತರೆಲ್ಲರಿಗೂ ಸಮಾನರಾಗಿಯೇ ಓಡುತ್ತಿರುವ ಪರಿ ಕಂಡು ಸ್ಪೂರ್ತಿ ಪಡೆಯಬೇಕು. ಸಾಧ್ಯವಾದರೆ ಅಲ್ಲಿ ಆಟಪಾಟಗಳಲ್ಲಿ ತಮ್ಮನ್ನೇ ತಾವು ಮರೆತಿರುವ ಮಕ್ಕಳ ಜೊತೆಗೆ ಕೊಂಚ ಸಮಯ ಕಳೆದು ಬರಬೇಕು. ಮಾತ್ರವಲ್ಲ ಈ ಶಾಲೆಗಳನ್ನು ನಡೆಸಲು ತಮ್ಮ ಬದುಕನ್ನು ಮುಡುಪಾಗಿಟ್ಟವರಿಗೊಮ್ಮೆ ಸೆಲ್ಯೂಟ್ ಹೊಡೆಯಬೇಕು!

`ತಕ್ಷಶಿಲೆ'ಯಂತಿಪ್ಪ `ಸ್ನೇಹ ಶಿಲೆ'
`ಒಂದೇ ಮಾತಲ್ಲಿ ಹೇಳಬೇಕೆಂದರೆ `ಇಟ್ಸ್ ನಾಟ್ ಮಿಯರ್ ಎ ಸ್ಕೂಲ್. ಇಟ್ಸ್ ರಿಯಲಿ ಎ ಹೆವನ್ ಆನ್ ಅರ್ಥ್. ಈ ಕ್ಷಣದಲ್ಲೂ ಕೂಡ ನಾನು ಅದನ್ನ ಮಿಸ್ ಮಾಡಿಕೊಳ್ತಾ ಇದ್ದೀನಿ, ಬೇರೆಲ್ಲೂ ಆ ಅನುಭವ ಸಿಗಲು ಸಾಧ್ಯವೇ ಇಲ್ಲ' ಎಂದು ಈಗ ಮಂಗಳೂರಿನಲ್ಲಿ ಬಿಎಸ್ಸಿ ಓದುತ್ತಿರುವ ಚೈತ್ರಾ ಭಾವಪರವಶತೆಯಿಂದ ಹೇಳುತ್ತಾರೆ.
ಆಕೆ ಹೇಳುವುದು ತಾನು ಹೈಸ್ಕೂಲ್ ಓದಿದ ದಕ್ಷಿಣ ಕನ್ನಡಜಿಲ್ಲೆಯ ಸುಳ್ಯದಲ್ಲಿರುವ `ಸ್ನೇಹಶಿಲಾ' ಶಾಲೆಯ ಬಗ್ಗೆ.


1996ರಲ್ಲಿಯೇ ಈ ಶಾಲೆಯನ್ನು ಚಂದ್ರಶೇಖರ್ ದಾಮ್ಲೆ ಆರಂಭಿಸಿದಾಗ ಅವರಿಗೆ ಅಪಾರ ವಿಶ್ವಾಸವಿತ್ತು. ಆದರೆ ಕನ್ನಡ ಮೀಡಿಯಂ ಶಾಲೆಯನ್ನು ಆರಂಭಿಸಲು ಶಿಕ್ಷಣ ಇಲಾಖೆ ಅನುಮತಿ ಕೇಳಿದಾಗ ಇವರನ್ನು ಸಂಶಯದಿಂದ ನೋಡಿದವರೇ ಹೆಚ್ಚು. ಹೀಗಾಗಿ ಅನುಮತಿ ಪಡೆಯಲೆಂದೇ ಹತ್ತಾರು ಬಾರಿ ಬೆಂಗಳೂರಿಗೆ ಅಲೆಯಬೇಕಾಯಿತು.
ಅದೇ ಸುಳ್ಯ ಪೇಟೆಯಲ್ಲಿ ಇಲಾಖೆಯ ಅಧಿಕಾರಿಗಳಿಗೆ ಲಂಚ ನೀಡಿ ಕನ್ನಡ ಮೀಡಿಯಂ ಅನುಮತಿ ಪಡೆದು ಇಂಗ್ಲಿಷ್ ಮೀಡಿಯಂ ಶಾಲೆಗಳನ್ನು ನಡೆಸುತ್ತಾ ಪ್ರತಿವರ್ಷ ಲಕ್ಷಾಂತರ ರೂಪಾಯಿ ಸಂಪಾದಿಸಿ ಶಿಕ್ಷಣದ ಬಿಸಿನೆಸ್ನ್ನು ಜೋರಾಗಿಯೇ ನಡೆಸುತ್ತಿರುವವರ ನಡುವೆ ಚಂದ್ರಶೇಖರ್ ದಾಮ್ಲೆ ಮತ್ತು ಜಯಲಕ್ಷ್ಮಿದಾಮ್ಲೆ ದಂಪತಿ ಬೇರೆಯದೇ ದಾರಿ ಹಿಡಿದಿದ್ದರು. ಅವರ ಅಚಲ ವಿಶ್ವಾಸ, ಸೇವಾ ನಿಷ್ಠೆ ಇಂದು ಅಲ್ಲೊಂದು ಸೊಬಗಿನ ಸ್ನೇಹಲೋಕವನ್ನೇ ಸೃಷ್ಟಿಸಿದೆ.
ಇಂದು `ಸ್ನೇಹಶಿಲಾ' ಶಾಲೆಯ ಆವರಣದಲ್ಲಿ `ಬರಹದ ಮನೆ, ಕಲಾಶಾಲೆ, ಎಲ್.ಸಿ.ಡಿ ಹೋಂ, ಬಯಲು ರಂಗ ಮಂದಿರಗಳು ತಲೆಎತ್ತಿವೆ. ಇವು ಕಲಿಯುತ್ತಿರುವ ಚಿಣ್ಣರಿಗೆ ನೀಡುತ್ತಿರುವ ಅನುಭವ ಅನನ್ಯ. ಇಲ್ಲಿನ ಔಷಧಿ ವನ ಹಾಗೂ ಶಾಲೆಯ ವತಿಯಿಂದಲೇ ಬೆಳೆಸಿರುವ ಅರಣ್ಯ ಮಕ್ಕಳಲ್ಲಿ ನಿಸರ್ಗ ಪ್ರೀತಿಯನ್ನು ಹೆಚ್ಚಿಸಿದೆ. `ಇಲ್ಲಿ ಕಲಿಯಲು ಬರುವ ಪ್ರತಿ ಮಗುವೂ ತನ್ನಲ್ಲಿರುವ ಪ್ರತಿಭೆಯನ್ನು ಅನಾವರಣಗೊಳಿಸಿ ತಾನೇನೂ ಯಾರಿಗೂ ಕಡಿಮೆಯಿಲ್ಲ' ಎಂಬ ಆತ್ಮಾಭಿಮಾನ ಬೆಳೆಸಿಕೊಳ್ಳುವಂತೆ ಮಾಡುವಲ್ಲಿ ಮುಖ್ಯ ಶಿಕ್ಷಕಿ ಜಯಲಕ್ಷ್ಮಿ ದಾಮ್ಲೆ ಶ್ರಮ ವಿಶೇಷವಾಗಿ ಎದ್ದು ಕಾಣುತ್ತದೆ.


ಶಾಲಾ ಕಾರ್ಯಕ್ರಮಗಳಲ್ಲಿ ಸಹ ಇಲ್ಲಿ ಮಕ್ಕಳ ಹಾಗೂ ಪೋಷಕ ಕೇಂದ್ರಿತವಾದ ಕಾರ್ಯಕ್ರಮಗಳನ್ನು ನಡೆಸಲಾಗುತ್ತದೆ. ಎಲ್ಲರಿಗೂ ಬೋರು ಹೊಡೆಸುವ `ಗಣ್ಯರ' ಭಾಷಣಗಳನ್ನು ಇಲ್ಲಿ ಕಡ್ಡಾಯವಾಗಿ ನಿಷೇಧಿಸಲಾಗಿದೆ.
`ನಮ್ಮ ಮಕ್ಕಳು ಇಲ್ಲಿ ಯಾಂತ್ರಿಕವಾಗಿ ಏನನ್ನೂ ಕಲಿಯುತ್ತಿಲ್ಲ. ಹೆಚ್ಚಿನದಾಗಿ ಉತ್ತಮ ಸಂಸ್ಕಾರವನ್ನು ಇಲ್ಲಿ ಮೈಗೂಡಿಸಿಕೊಳ್ಳುತ್ತಿರವ ಬಗ್ಗೆ ನಮಗೆ ಹೆಮ್ಮೆ ಇದೆ' ಎನ್ನುತ್ತಾರೆ ತಮ್ಮ ಇಬ್ಬರು ಮಕ್ಕಳನ್ನು (ಸಿಂಚನ, ಸುದೀಪ್) ಬಿಟ್ಟಿರುವ ಡಾ.ವಿದ್ಯಾ.
ಸ್ನೇಹಶಿಲೆಯ ಮಕ್ಕಳು ತಾವೇ ಬರೆದ ಚುಟುಕು, ಕತೆ, ಕವನ ತುಂಬಿದ `ಅಂಕುರ' ಹಾಗೂ `ಇಂಚರ' ಎಂಬ ಕೈಬರಹದ ಪತ್ರಿಕೆಗಳನ್ನು ಹೊರ ತರುತ್ತಿದ್ದಾರೆ. `ನನಗೂ ಕತೆ, ಕವಿತೆ ಬರೆಯಲು ಬರುತ್ತೆ ಅಂತ ನನಗೆ ಗೊತ್ತಾಗಿದ್ದೆ ನಾನು ಏಳನೆಯ ತರಗತಿಗೆ ಇಲ್ಲಿ ಸೇರಿದ ಮೇಲೇನೇ. ನಂತರ ಎಸ್ಎಸ್ಎಲ್ಸಿಯಲ್ಲಿರುವಾಗ ನಾನೂ ಹಾಗೂ ನನ್ನ ಇತರ ಮೂವರು ಗೆಳತಿಯರೂ ಸೇರಿ ನಾವೇ ಬರೆದಿದ್ದ ಬರಹಗಳ ಒಂದು ಸಂಕಲನ 'ಚತುರ್ಧ್ವನಿ' ಯನ್ನು ಹೊರತಂದಿದ್ದು ನನ್ನ ಜೀವನದ ಮರೆಯಲಾಗದ ಹೆಮ್ಮೆಯ ಅನುಭವ' ಎನ್ನುತ್ತಾರೆ ಚೈತ್ರಾ. ಬೇರಾವ ಶಾಲೆ ಈ ಮಟ್ಟಿಗಿನ ಶಿಕ್ಷಣ ನೀಡೀತು?

`ಅರಿವು' ಎಂಬ ಕಿನ್ನರ ಲೋಕ
ವೃತ್ತಿಯಲ್ಲಿ ವೈದ್ಯರಾಗಿ ಖ್ಯಾತಿಗಳಿಸಿರುವ ಮೈಸೂರಿನ ಡಾ.ಮನೋಹರ್ ಹಾಗೂ ಡಾ.ಸುದರ್ಶನ್ ಮತ್ತು ಅವರ ಆಪ್ತ ಬಳಗದವರಿಗೆಲ್ಲಾ ನಮ್ಮ ಈ ಶಿಕ್ಷಣ ವ್ಯಸಸ್ಥೆಯನ್ನು ನೋಡಿದಾಗಲೆಲ್ಲಾ ಇಲ್ಲಿ ಎಲ್ಲವೂ ಸರಿಯಿಲ್ಲ ಎನ್ನಿಸುತ್ತಿತ್ತು. ಒಂದೆಡೆ ನಾಯಿಕೊಡೆಗಳಂತೆ ಬೆಳೆಯುತ್ತಿರುವ ಇಂಗ್ಲಿಷ್ ಕಾನ್ವೆಂಟ್ಗಳು ಮಕ್ಕಳನ್ನು ಗಿಳಿಪಾಠ ಹೇಳುವಂತೆ ಮಾಡುತ್ತಿದ್ದರೆ ಇನ್ನೊಂದೆಡೆ ಅವರನ್ನು ನಿರುತ್ಸಾಹಿಗಳನ್ನಾಗಿ ಮಾಡಿ ಅವರ ಕ್ರಿಯೇಟಿವಿಟಿಗೆ ಅವಕಾಶವನ್ನೇ ನೀಡದ ಸರ್ಕಾರಿ ಶಾಲೆಗಳು. ಉತ್ತಮ ಶಿಕ್ಷಕ ಪ್ರಶಸ್ತಿ ಪಡೆಯಲಷ್ಟೇ ಇಲ್ಲದ ಗಿಮಿಕ್, ಸಲ್ಲದ ಪಾಲಿಟಿಕ್ಸ್ ಮಾಡುವ ಕೆಲವು ಹಾಗೂ ಕ್ಲಾಸ್ ರೂಂಗಳಲ್ಲಿ ನಿದ್ದೆ ಹೊಡೆಯುವ ಹಲವು ಮೇಸ್ಟ್ರುಗಳು. ಹಾಗಂತ ಯಾರ ಬಳಿ ಅಲವತ್ತುಕೊಳ್ಳುವುದು, ಸರ್ಕಾರಕ್ಕೆ ಬೈಯುತ್ತಾ ಕುಳಿತರೆ ಆಡಳಿತದಲ್ಲಿರುವವರಿಗೆ ಅರ್ಥ ಆಗುವುದುಂಟೇ, ಹಾಗೆಂದು ಇವರ್ಯಾರೂ ಸುಮ್ಮನೆ ಕೂರಲಿಲ್ಲ.

ಮೈಸೂರಿನ ಸುಮಾರು 40 ಮಂದಿ ಪೋಷಕರು, ಶಿಕ್ಷಣಪ್ರೇಮಿಗಳು ಒಂದೆಡೆ ಕಲೆತು ಒಂದು ನಿರ್ಧಾರಕ್ಕೆ ಬಂದ ಪರಿಣಾಮ 3 ವರ್ಷಗಳ ಹಿಂದೆ ಆರಂಭವಾದ ಅರಿವು ವಿದ್ಯಾ ಸಂಸ್ಥೆ. ಸಿಟಿಯಿಂದ 9 ಕಿ.ಮೀ. ದೂರದ ಲಿಂಗಾಂಭುದಿ ಪಾಳ್ಯದ ಹಸಿರಿನ ಗಿಡಮರಗಳ ನಡುವೆ ಶಾಲೆ ನಿರ್ಮಾಣವಾಗಿದೆ. ಇಲ್ಲಿ ಮಕ್ಕಳಿಗೆ ಹೇಗೆ ಕಲಿಸಬೇಕು, ಏನು ಕಲಿಸಬೇಕು ಎಂಬುದೆಲ್ಲವನ್ನೂ ಈ ನಲವತ್ತು ಜನರ ಸಮಿತಿಯೇ ನಿರ್ಧರಿಸುತ್ತದೆ.
ಪೂಣರ್ಾವಧಿ ಶಿಕ್ಷಕರಾಗಿರುವುದು ನಾಲ್ಕೇ ಜನರಾದರೂ ಸಂಪನ್ಮೂಲ ವ್ಯಕ್ತಿಗಳಾಗಿ ಬರುವ ಹಲವಾರು ಪ್ರತಿಭಾನ್ವಿತರು ಈ ಮಕ್ಕಳೊಂದಿಗೆ ಬೆರೆತು ಚಿಣ್ಣರ ಅರಿವಿನ ಪರಿಧಿ ವಿಸ್ತರಿಸಿ ಹೋಗುವ ಪರಿ ನಿಜಕ್ಕೂ ಅದ್ಭುತ.
`ನನ್ನ ಮಗಳಿಗೆ ನಾನು ಚಿಕ್ಕಂದಿನಲ್ಲಿ ಹೇಗೆ ಕಲಿತಿದ್ದೆನೋ ಅದೇ ಬಗೆಯ ವಾತಾವರಣ ಇರಬೇಕೆಂಬುದು ನನ್ನ ಬಯಕೆಯಾಗಿತ್ತು. ಅಕೆಯನ್ನು ಎರಡನೇ ತರಗತಿವರೆಗೆ ಸಿಬಿಎಸ್ಸಿ ಸಿಲೆಬಸ್ ಇರುವ ಬೇರೊಂದು ಇಂಗ್ಲಿಷ್ ಕಾನ್ವೆಂಟಿಗೆ ಸೇರಿಸಿದ್ದೆ. ಆದರೆ ಮನಸ್ಸಿಗೆ ಯಾಕೋ ಕಸಿವಿಸಿಯಾಗತೊಡಗಿ ಇಲ್ಲಿಗೆ ಮತ್ತೆ ಎರಡನೇ ತರಗತಿಗೇ ಸೇರಿಸಿದ್ದೇನೆ' ಎನ್ನುತ್ತಾರೆ ಇಂಜಿನಿಯರ್ ಆಗಿರುವ ನಾರಾಯಣ ಸ್ವಾಮಿ.
ಈ ಶಾಲೆ ಸೇರಿದ ಮೆಲೆ ಅವರ ಮಗಳು ನಮಿತಾ ಬಾಲ್ಯವನ್ನು ಮರಳಿ ಪಡೆದಿದ್ದಾಳೆ. "ಹಿಂದಿನ ಶಾಲೆಯಲ್ಲಿದ್ದಾಗ ಏನನ್ನೂ ಕೇಳದಿದ್ದ ನನ್ನ ಮಗಳು ಈಗ ಸಿಕ್ಕಾ ಪಟ್ಟೆ ಪ್ರಶ್ನೆ ಕೇಳುತ್ತಾ, ತನಗೆ ಗೊತ್ತಿಲ್ಲದಿರುವುದನ್ನೆಲ್ಲಾ ಕುತೂಹಲದಿಂದ ಕಲಿಯುತ್ತಾ ಸಾಗುತ್ತಿರುವ ರೀತಿ ನಿಜಕ್ಕೂ ನನಗೆ ತೃಪ್ತಿ ನೀಡಿದೆ" ಎಂದೆನ್ನುತ್ತಾರವರು. ಇಲ್ಲಿ ಮಕ್ಕಳಿಗೆ ಯಾವ ಒತ್ತಡವೂ ಆಗದಂತೆ ಎಲ್ಲವನ್ನೂ ಪ್ರಾಕ್ಟಿಕಲ್ ಆಗಿಯೇ, ಅವು ಯೋಚಿಸುವ ಭಾಷೆಯಲ್ಲಿಯೇ ಕಲಿಸುವುದರಿಂದ ಅವರು ಪ್ರತಿಯೊಂದನ್ನೂ ಬಹುಬೆಗನೇ ಅರ್ಥೈಸಿಕೊಳ್ಳುತ್ತಾರೆ.
ಇಲ್ಲಿ ಯಾವ ಮಗುವೂ ಎನನ್ನೂ ಕಷ್ಟ ಪಟ್ಟು ಕಲಿಯುವುದಿಲ್ಲ. ಬದಲಿಗೆ ಪ್ರತಿಯೊಂದನ್ನೂ ಇಷ್ಟ ಪಟ್ಟು ಕಲಿಯುವಂತೆ ಮಾಡಲಾಗುತ್ತಿದೆ. ಅಸಲಿಗೆ ಶಾಲೆ ಅಥವಾ ಒಂದು ಶಿಕ್ಷಣ ಪದ್ಧತಿ ಮಾಡಬೇಕಿರುವುದು ಇದನ್ನೇ ಅಲ್ಲವೇ? ಮೊದಲು ಬೇರೊಂದು ಶಾಲೆಯಲ್ಲಿ ಕೆಲಸ ಮಾಡಿ ಈಗ ಇಲ್ಲಿ ಮಕ್ಕಳಿಗೆ ಕಲಿಸುತ್ತಿರುವ ಮಂಜುಳಾ `ಈ ಮಕ್ಕಳಿಗೆ ಕಲಿಸುವುದಕ್ಕಿಂತ ಅವರಂದಲೇ ಬಹಳಷ್ಟನ್ನು ಕಲಿಯಲಿಕ್ಕಿದೆ ಎಂಬುದು ಅರ್ಥವಾಗಿದೆ' ಎನ್ನುತ್ತಾರೆ.
`ನನ್ನ ಮಗ ನಿರರ್ಗಳವಾಗಿ ಕನ್ನಡ ಮಾತನಾಡುವುದನ್ನು, ಸರಾಗವಾಗಿ ಬರೆಯುವುದನ್ನು ಕಂಡಾಗ ಆಗುವ ಸಂತೋಷ ಬೇರೇನೇ' ಎಂದು ಬೀಗುತ್ತಾರೆ ಎರಡನೇ ತರಗತಿಯಲ್ಲಿ ಓದುವ ಸುಮುಖನ ತಂದೆ, ವೃತಿಯಲ್ಲಿ ಕಲಾವಿದ ಸಚ್ಚು. ಅರಿವು ಶಾಲೆಯಲ್ಲಿ ಎಲ್ಲಾ ಮಕ್ಕಳೂ ಅದ್ಭುತವಾಗಿ ಡ್ರಾಯಿಂಗ್ ಮಾಡುತ್ತಾರೆ, ಮೀನಿನಂತೆ ಈಜುವುದನ್ನೂ ಕಲಿತಿದ್ದಾರೆ. ಮಾತ್ರವಲ್ಲ ಈ ಮಕ್ಕಳ ದೆಸೆಯಿಂದ ಪೋಷಕರೂ ಈಜು ಕಲಿತ್ತಿದ್ದಾರೆ. ಪೋಷಕರೇ ಸೇರಿಕೊಂಡು ವಾಹನ ವ್ಯವಸ್ಥೆಯನ್ನು ಮಾಡಿ ಸಿಟಿಯಿಂದ ದೂರದಲ್ಲಿರುವ ಈ ಶಾಲೆಗೆ ತಮ್ಮ ಮಕ್ಕಳನ್ನು ಕಳುಹಿಸುವುದು ಅಷ್ಟು ಸುಲಭವಲ್ಲವಾದರೂ ನಿಜವಾದ ಶಿಕ್ಷಣದೆಡೆಗಿನ ಅವರ ತುಡಿತ ಅದನ್ನು ಸಾಧ್ಯ ಮಾಡಿದೆ.

`ಬಾಲಬಳಗ'ದ ಮೋಡಿ






`ಜಗತ್ತಿನ ಎಲ್ಲಾ ಶಿಕ್ಷಣ ತಜ್ಞರೂ, ಮನಶಾಸ್ತ್ರಜ್ಞರೂ ಹೇಳಿರುವುದು ಒಂದೇ ವಿಚಾರ. ಅದೆಂದರೆ `ಪ್ರತಿ ಮಗುವೂ ತನ್ನ ಪ್ರಾಥಮಿಕ ಶಿಕ್ಷಣವನ್ನು ಪಡೆಯಬೇಕಾದದ್ದು ಮಾತೃಭಾಷೆಯಲ್ಲಿಯೇ ಎಂದು. ಅದು ಮಾತ್ರವೆ ಮಗುವಿನ ಕ್ರಿಯಾಶೀಲತೆಯನ್ನು ವಿಸ್ತರಿಸ ಬಲ್ಲದು ಆ ಮಗುವಿನ ಮನವನ್ನು ಅರಳಿಸಬಲ್ಲದು. ಕಲಿಕೆಯ ನಿಜವಾದ ಸ್ವಾದವನ್ನು ಮಗುವಿಗೆ ನೀಡಬಲ್ಲದು.'ಇದನ್ನು ಬಲವಾಗಿ ನಂಬಿದ್ದ ನಾನು ನನ್ನ ಮಗ ಚೈತನ್ಯ ಷರೀಫ್ ಮತ್ತು ಇನ್ನಿಬ್ಬರು ಮಕ್ಕಳನ್ನಿಟ್ಟುಕೊಂಡು 96ರಲ್ಲಿ ನನ್ನ ಮನೆಯ ಒಂದು ಕೊಠಡಿಯಲ್ಲಿಯೇ ಈ ಶಾಲೆಯನ್ನು ಆರಂಭಿಸಿದ್ದೆ'
`ಆಗ ಇದಕ್ಕೆ ಮೊದಲ ಟೀಚರ್ ಆಗಿ ಬಂದವರು ನೀನಾಸಂ ತರಬೇತಿ ಪಡೆದಿದ್ದ ರಜನಿ ಗರುಡ...
' ಹೀಗೆ ತಾವು `ಬಾಲಬಳಗ' ಶಾಲೆಯನ್ನು ಆರಂಭಿಸಿದ ಸಂದರ್ಭ ನೆನೆಸಿಕೊಳ್ಳುವ ಡಾ.ಸಂಜೀವ್ ಕುಲಕರ್ಣಿ ಇಂದು ಧಾರವಾಡದಲ್ಲಿ ಮನೆಮಾತಾಗಿದ್ದಾರೆ.
`ಮಕ್ಕಳಿಗೆ ಕನ್ನಡದ ಅಡಿಪಾಯ ಸಿಗಬೇಕು, ಇಂಗ್ಲಿಷಿನ ಬಗ್ಗೆ ಆತ್ಮ ವಿಶ್ವಾಸ ಮೂಡಬೇಕು. ಮುಂದೆ ಅವರು ಸಮಾಜಮುಖಿಯಾಗಿ, ಮತ್ತೆ ತಮ್ಮೂರು, ಹಳ್ಳಿಗಳತ್ತ ಮುಖ ಮಾಡಿ ಬದುಕಬೇಕು' ಇದು ಸಂಜೀವ್ ಕುಲಕರ್ಣಿಯವರು `ಬಾಲ ಬಳಗದ' ಮೂಲಕ ಜಾರಿಗೊಳಿಸುತ್ತಿರುವ ಶಿಕ್ಷಣ ತತ್ವ.

ಇಂದು ಕರ್ನಾಟಕ ವಿಶ್ವ ವಿದ್ಯಾಲಯದ ಸನಿಹದಲ್ಲೆ ವಿಶಾಲವಾದ ಜಾಗದಲ್ಲಿ ಸ್ಥಾಪಿಸಲಾಗಿರುವ ಬಾಲಬಳಗದಲ್ಲಿ ಮುನ್ನೂರು ವಿದ್ಯಾರ್ಥಿಗಳಿದ್ದಾರೆ. ಈ ಶಾಲೆಯನ್ನು ಕಟ್ಟಿ ಬೆಳೆಸಿರುವುದು ಪೂರ್ತಿಯಾಗಿ ಇಲ್ಲಿಗೆ ಬರುವ ಮಕ್ಕಳ ಪೋಷಕರೇ. ಈಗ ಬಾಲಬಳಗದ ಮುಖ್ಯಶಿಕ್ಷಕಿಯಾಗಿ ಕಾರ್ಯನಿರ್ವಹಿಸಿತ್ತಿರುವವರು ಕುಲಕರ್ಣಿಯವರ ಪತ್ನಿ ಪ್ರತಿಭಾ. ಇಲ್ಲಿ ಸಹ ಪ್ರತಿ ಹಂತದಲ್ಲೂ ಮಗುಸ್ನೇಹಿ, ನಿಸರ್ಗಸ್ನೇಹಿ ವಾತಾವರಣವಿದೆ.
ಮಕ್ಕಳಿಂದ `ಮೌಂಶಿ' ಹಾಗೂ `ಮಾಮಾ' ಎಂದು ಕರೆಸಿಕೊಳ್ಳುವ ಶಿಕ್ಷಕರನ್ನು ತಮ್ಮ ಆತ್ಮೀಯ ಸ್ನೇಹಿತರನ್ನಾಗಿಯೇ ಮಕ್ಕಳು ಕಾಣುತ್ತಾರೆ. ತಿಂಗಳಿಗೊಂದಾವರ್ತಿ ನಡೆಸಲಾಗುವ `ಪುಸ್ತಕ ಪ್ರೀತಿ' ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು, ಪೋಷಕರು ಸೇರಿ ಒಂದರ್ಧ ಗಂಟೆ ಯಾವುದಾದರೂ ಪುಸ್ತಕವನ್ನು ಓದಿ ಅದರ ಬಗ್ಗೆ ಚರ್ಚಿಸುವ ಪರಿಪಾಠವಿದೆ. ಪ್ರತಿ ಶಾನಿವಾರ ಸಂಜೆ ನಡೆಯುವ `ಸಂಗೀತ ಸಭೆ'ಯ ಸಂಗೀತ ಸುಧೆಯಲ್ಲಿ ಎಲ್ಲರೂ ತೇಲಿ ಹೋಗುತ್ತಾರೆ.
`ಇಲ್ಲಿ ಎಂಟನೇ ತರಗತಿ ಓದುತ್ತಿರುವ ನನ್ನ ಮಗನಿಗೆ ಶಾಲೆಯ ಪ್ರತಿಯೊಬ್ಬರೂ ಗೊತ್ತು. ಆ ಮಟ್ಟಿಗೆ ತರಗತಿ, ವಯಸ್ಸಿನ ಹಂಗಿಲ್ಲದೇ ಎಲ್ಲಾ ಮಕ್ಕಳೂ ಬೆರೆಯುಂತೆ ಮಾಡಲಾಗುತ್ತದೆ' ಎನ್ನುತ್ತಾರೆ ಗುರುಮೂರ್ತಿ ಮೆಹಂದಾಳೆ.
`ಇದು ನಮಗೆ ಬೇರೆ ಯಾರೋ ನಡೆಸುತ್ತಿರುವ ಶಾಲೆ ಎನ್ನಿಸಿಲ್ಲ. ಇದು ನಮ್ಮದೇ ಶಾಲೆ ಎಂದು ಎಲ್ಲಾ ಪಾಲಕರೂ ಭಾವಿಸುತ್ತಾರೆ. ಒಂದನೇ ತರಗತಿಯಲ್ಲಿ ಕಲಿಯುತ್ತಿರುವ ಮಗ ಚಿನುವ ತೋರಿಸುವ ಧೈರ್ಯ, ಆತ್ಮ ವಿಶ್ವಾಸ ಕಂಡು ಆಚ್ಚರಿಗೊಳ್ಳುವ ಅನಿತಾ ಪೈಲೂರು `ಬೇರೆ ಶಾಲೆಗೆ ಸೇರ್ತೀಯಾ ಎಂದೇನಾದರೂ ಕೇಳಿದರೆ ಅವನು ಸುತಾರಾಂ ಒಪ್ಪುವುದಿಲ್ಲ. ಇಲ್ಲಿ ಅವನು ಯಾವ ಅಳುಕೂ ಇಲ್ಲದೇ, ಯಾವ ಒತ್ತಡವೂ ಇಲ್ಲದೇ ಕಲಿಯುತ್ತಿರುವಂತೆ ಬೇರೆಲ್ಲೂ ಕಲಿಯಲು ಸಾಧ್ಯವೆ ಇಲ್ಲ' ಎನ್ನುತ್ತಾರೆ.
ಬಾಲಬಳಗದಲ್ಲಿ ಎಲ್ಲಾ ಮಕ್ಕಳೂ ವಾರಕ್ಕೆರಡು ದಿನ ಖಾದಿ ಬಟ್ಟೆ ಧರಿಸಬೇಕು. ಸ್ವದೇಶಿ ಚಿಂತನೆಯನ್ನು ಬೆಳೆಸುವ ಒಂದು ಕ್ರಮ ಇದು.

ಶಿರಸಿ ಮಡಿಲಲ್ಲೊಂದು ಚಂದನ

ಮಕ್ಕಳ ದೈಹಿಕ, ಮಾನಸಿಕ ಆರೋಗ್ಯ ಕಾಪಾಡುತ್ತಾ, ಅವರ ಆಲೋಚನಾ ಶಕ್ತಿ, ಕ್ರಿಯಾಶೀಲತೆಗೆ ಗರಿಷ್ಠ ಪ್ರಮಾಣದಲ್ಲಿ ಇಂಬು ನೀಡುತ್ತಾ, ಅವರು ಭವಿಷ್ಯದಲ್ಲಿ ಜೀವನದ ಯಾವುದೇ ಕಠಿಣ ಸವಾಲನ್ನು ಬುದ್ಧಿವಂತಿಕೆಯಿಂದ, ಸೂಕ್ಷ್ಮತೆಯಿಂದ ಎದುರಿಸುವಂತಹ ಸಾಮಥ್ರ್ಯ ಬೆಳೆಸುವ ಶಿಕ್ಷಣ ನೀಡುವ ಕನಸನ್ನು ಬೆನ್ನತ್ತಿದವರು ಶಿಸರ್ಿ-ನೆರೆಬೈಲು ಗ್ರಾಮದ ಎಲ್.ಎಂ.ಹೆಗ್ಡೆ. ಅವರಿಗೆ ಹತ್ತು ವರ್ಷದ ಹಿಂದಿನಿಂದ ಹೆಗಲಾದವರು ಡಾ.ರಮೇಶ್. 1998ರಲ್ಲಿ ಗೋಳಿಕೊಪ್ಪದ ಯುವಕರು ಆರಂಭಿಸಿದ ಮಲೆನಾಡು ಶಿಕ್ಷಣ ಹಾಗೂ ಗ್ರಾಮಾಭಿವೃದ್ಧಿ ಸಂಸ್ಥೆ 2000ನೇ ಇಸವಿಯಲ್ಲಿ ಚಂದನ ಶಾಲೆಯನ್ನು ಆರಂಭಿಸಿತ್ತು.
ಈ `ಮಾಂಟೆಸ್ಸರಿ' ಮಾದರಿಯ `ಚಂದನ' ಶಾಲೆ ಆರಂಭವಾದಾಗ ಇದ್ದ ಹೇಗೋ, ಏನೋ ಎಂಬ ಆತಂಕ ಇಂದು ಪೋಷಕರಿಗಾಗಲೀ. ಮ್ಯಾನೇಜ್ಮೆಂಟ್ನವರಿಗಾಗಲೀ ಇಲ್ಲ. ಅ ಮಟ್ಟದ ಪ್ರಗತಿಯನ್ನು ಚಂದನ ಶಾಲೆ ಸಾಧಿಸಿರುವುದೇ ಇದಕ್ಕೆ ಕಾರಣ. ಇಲ್ಲಿ ಮಕ್ಕಳು ಪ್ರಾಥಮಿಕ ತರಗತಿಗಳನ್ನು ಕನ್ನಡ ಮಾಧ್ಯಮದಲ್ಲೇ ಓದುತ್ತಾ ಹೈಸ್ಕೂಲಿಗೆ ಬರುವಷ್ಟರಲ್ಲಿ ಇಂಗ್ಲಿಷಿನ ಮೇಲೂ ಹಿಡಿತ ಸಾಧಿಸುವ ಸಾಮರ್ಥ್ಯವನ್ನು ಬೆಳೆಸಿಕೊಂಡಿದ್ದಾರೆ.
`ಬೇರೆ ಶಾಲೆಗಳಲ್ಲಿ ನಾಲ್ಕು ಪೇಜ್ ಬರೀಲಿಕ್ಕೆ ಹೋಂ ವರ್ಕ್ ಕೊಟ್ಟು ಬರೆಯದೇ ಇದ್ರೆ ಮರುದಿನ ಪನಿಷ್ಮೆಂಟ್ ಕೊಡ್ತಾರೆ. ಆದ್ರೆ ಇಲ್ಲಿ ಹಾಗಿಲ್ಲ. ಹೋಂವರ್ಕ್ ಮಾಡದೇ ಇದ್ರೆ ಮಕ್ಕಳನ್ನು ಪನಿಷ್ ಮಾಡಲ್ಲ ಆದ್ರೂ ನಮ್ಮ ಮಕ್ಕಳು ಬಹಳ ಖುಷಿಯಿಂದಲೇ ಓದುತ್ತಾರೆ. ಬರೀತಾರೆ' ಅಂತಾರೆ ವಂದನಾ ಹೆಗಡೆ.

ಪೋಷಕರಿಂದ ಅತಿಯಾದ ಡೊನೇಷನ್ ವಸೂಲಿ ಮಾಡದ ಚಂದನ ಶಾಲೆಗೆ ಇತ್ತೀಚೆಗೆ ದೇಶಪಾಂಡೆ ಪೌಂಡೇಷನ್ ಹಾಗೂ ಎಲ್ಐಸಿಯ ಇನ್ಷೂರೆನ್ಸ್ ವತಿಯಿಂದ ಒಂದಷ್ಟು ಹಣ ಬಿಡುಗಡೆಯಾಗಿದೆ. ಸುತ್ತಲಿನ ಹಳ್ಳಿಗಳಿಂದ ಮಕ್ಕಳನ್ನು ಕರೆತರಲು ವಾಹನ ವ್ಯವಸ್ಥೆಯನ್ನೂ ತಾವೇ ಮಾಡಿದ್ದ ಎಲ್.ಎಂ. ಹೆಗಡೆ ಆರಂಭದಲ್ಲಿ ಸಾಕಷ್ಟು ಪರದಾಡಿದ್ದೂ ನಿಜ. ಇಂದು ಬನವಾಸಿ, ಮಂಚಿಕೇರಿಗಳಿಂದೆಲ್ಲಾ ಮಕ್ಕಳು ಇಲ್ಲಿಗೆ ಕಲಿಯಲು ಬರುತ್ತಾರೆ.
`ನಮಗೆ ಇಲ್ಲಿ ಪಾಠದಲ್ಲಿರುವುದಕ್ಕಿಂತಲೂ ಹೆಚ್ಚಿನ ಜ್ಞಾನ ಇತರ ರೀತಿಯಲ್ಲಿ ಲಭ್ಯವಾಗುತ್ತಿದೆ. ಎಲ್ಸಿಡಿ ಟಿವಿಗಳ ಮೂಲಕ ಡಾಕ್ಯುಮೆಂಟರಿಗಳನ್ನು ವೀಕ್ಷಿಸುತ್ತೇವೆ. ಹಾಗೆಯೇ ನಮಗೆ ಏನು ಬೇಕು, ಏನು ಬೇಡ ಎಂದು ವಿದ್ಯಾರ್ಥಿಗಳಿಂದಲೇ ರಚಿತವಾಗಿರುವ ಕ್ಯಾಬಿನೆಟ್ ನಿರ್ಧರಿಸುತ್ತೆ'ಎನ್ನುತ್ತಾನೆ ಎಂಟನೆಯ ತರಗತಿಯಲ್ಲಿರುವ ಫಸ್ಟ್ ಬ್ಯಾಚ್ ಸ್ಟುಡೆಂಟ್ ಅಮಿತ್ ಹೆಗ್ಡೆ.


ಈ ಎಲ್ಲಾ ಶಾಲೆಗಳಲ್ಲೂ ಕೂಡಾ....

*ಕೆಲವೇ ಮಕ್ಕಳಿಂದ ಆರಂಭವಾದ ಈ ಶಾಲೆಗಳಲ್ಲಿ ಇಂದು ಸರಾಸರಿ 300 ಮಕ್ಕಳಿದ್ದಾರೆ.
*ಯೂನಿಫಾರಂನ ಸಮಸ್ಯೆ ಮಕ್ಕಳಿಗಿಲ್ಲ. ಮಕ್ಕಳು ಅವರಿಗಿಷ್ಟವಾದ ರೀತಿಯ ಬಟ್ಟೆ ಧರಿಸುತ್ತಾರೆ. ಮಣ್ಣಿನಲ್ಲಿ ಆಡುತ್ತಾರೆ. ಯಾವ ಸ್ಟಾಂರ್ಡ್ ಗಳೂ ಇವರ ಬಾಲ್ಯವನ್ನು ಕಾಡುವುದಿಲ್ಲ. 
* ಶಾಲೆಗಳನ್ನು ಪರಿಸರ ಸ್ನೇಹಿಯಗಿಯೇ ನಿರ್ಮಿಸಿರುವುದರಿಂದ ಮಕ್ಕಳಲ್ಲಿ ಪರಿಸರದ ಮೇಲಿನ ಪ್ರೀತಿ, ಕಾಳಜಿ ಹಸುರಾಗಿದೆ.
*ಮಕ್ಕಳು ಪರಕೀಯ ಭಾಷೆಯೊಂದಿಗೆ ಪರಕೀಯ ಸಂಸ್ಕೃತಿಗೆ ತಮ್ಮನ್ನು ಒಡ್ಡಿಕೊಳ್ಳುವ ಪ್ರಮೆಯವಿಲ್ಲ. ಬದಲಿಗೆ ಇಲ್ಲಿನ ಪ್ರತಿಯೊಬ್ಬ ವಿದ್ಯಾರ್ಥಿ, ವಿದ್ಯಾರ್ಥಿನಿಯೂ ಈ ನೆಲದ ಸಂಸ್ಕೃತಿಯನ್ನು ಪಾಲಿಸುವ, ಗೌರವಿಸುವುದರೊಂದಿಗೆ ಈ ನಾಡಿನ ನಿಜವಾದ ಸಾಂಸ್ಕೃತಿಕ ವಾರಸುದಾರರಾಗಿ ಹೊರ ಹೊಮ್ಮುತ್ತಿದ್ದಾರೆ. 
* ಮತ್ತೊಬ್ಬನನ್ನು ತುಳಿದಾದರೂ ಮೇಲೆ ಬರುವ, ಇಲ್ಲವೇ ಮತ್ತೊಬ್ಬನ ಏಳಿಗೆಯನ್ನು ಕಂಡು ಕರುಬುವ ಸೋಕಾಲ್ಡ್ 'ಸ್ಪರ್ಧೆ' ಇಲ್ಲಿ ನಿಷಿದ್ಧ. ಬದಲಾಗಿ `ನೀನೂ ಬದುಕು, ಇತರರಿಗೂ ಬದುಕಗೊಡು' ಎಂಬ ಸಹಕಾರಿ ತತ್ವ ಈ ಮಕ್ಕಳಲ್ಲಿ ಅಂತರ್ಗತವಾಗಿದೆ.
*ಒಂದು ತರಗತಿಗೆ 30 ಮಕ್ಕಳಿಗಿಂತ ಹೆಚ್ಚಿರದಂತೆ ನೋಡಿಕೊಳ್ಳಲಾಗುತ್ತದೆ. ಹೀಗಾಗಿ ಇಲ್ಲಿ ಪ್ರತಿ ವಿದ್ಯಾರ್ಥಿ, ವಿದ್ಯಾರ್ಥಿನಿಯ ಮೇಲೂ ಗಮನ ಕೇಂದ್ರೀಕರಿಸಲು ಸಾಧ್ಯವಾಗುತ್ತಿದೆ. 
* ಇಲ್ಲಿ ನಡೆಸಲಾಗುವ ಪರೀಕ್ಷೆಗಳು ಮಕ್ಕಳಿಗೆ `ದಡ್ಡ ಅಥವಾ ದಡ್ಡಿ' ಎಂಬ ಹಣೆ ಪಟ್ಟಿ ಹಚ್ಚುವುದೇ ಇಲ್ಲ. ಪ್ರತಿ ಪಾಠದ ನಂತರವೂ ನಡೆಯುವ ಘಟಕ ಪರೀಕ್ಷೆ ಇಲ್ಲವೇ ಪನರಾವರ್ತನಗಳು ಮಕ್ಕಳಿಗೆ ಆ ಪಾಠ ಇನ್ನಷ್ಟು ಅರ್ಥವಾಗಲು ಇಲ್ಲವೆ ಮನನವಾಗಲು ಸಹಕರಿಸುತ್ತವೆ. 
* ಇಲ್ಲಿ ಪಾಠ ಹೇಳಿಕೊಡುವ ಶಿಕ್ಷಕರಿಗೆ ಅದು ವೃತ್ತಿ ಮಾತ್ರವಲ್ಲ. ಪ್ರತಿ ವಿದ್ಯಾರ್ಥಿ, ವಿದ್ಯಾರ್ಥಿನಿಯ ಸುಪ್ತ ಪ್ರತಿಭೆಯನ್ನು ಗುರುತಿಸಿಕೊಂಡು, ಅನಾವರಣಗೊಳಿಸಲು ಸಹಾಯ ಮಾಡುವ ಮಹೋನ್ನತ ಕಲೆಯೂ ಹೌದು. * ಈ ಶಾಲೆಗಳು ಸ್ಟೇಟ್ ಸಿಲೆಬಸ್ನಲ್ಲಿಯೇ ಕಲಿಸುತ್ತಿವೆಯಾದರೂ ಇಲ್ಲಿನ ಗುಣಮಟ್ಟ ಮಾತ್ರ ಸೆಂಟ್ರಲ್ ಅಥವಾ ಇಂಟರ್ನ್ಯಾಷನಲ್ ಸಿಲೆಬಸ್ನ್ನೂ ಮೀರಿಸುವಂತಾದ್ದು. 
*ಮಕ್ಕಳು-ಶಿಕ್ಷಕರು-ಪಾಲಕರು ಈ ಮೂವರ ಸಂಬಂಧ ಈ ಎಲ್ಲಾ ಶಾಲೆಗಳಲ್ಲಿ ಅತ್ಯುತ್ತಮ ರೀತಿಯಲ್ಲಿ ಏರ್ಪಡುತ್ತದೆ. ಶಿಕ್ಷಕರಾದವರು ಮಕ್ಕಳೊಂದಿಗೆ ಅವರಂತೆಯೇ ಬೆರೆತು, ಪಾಲಕರೂ ಶಾಲೆಗಳಲ್ಲಿ ಶಿಕ್ಷಕರಾಗಿ ಪಾಲ್ಗೊಳ್ಳುವ ಕ್ರಮವೇ ಮಕ್ಕಳ ದೃಷ್ಟಿಯಿಂದ ಅದ್ಭುತವಾದದ್ದು.

ಹೊಸತು - ಹಳತು : ಬುದ್ದ ತತ್ವ

ಲೋಕದ ಪ್ರತಿಯೊಂದೂ ಎಡೆಬಿಡದ ಚಲನೆಯಲ್ಲಿದೆ. ಕೆಲವೊಮ್ಮೆ ಬರಿಗಣ್ಣಿಗೆ ಚಲಿಸದೇ ಜಡವಾಗಿವೆ ಎಂದು ತೋರುವ ಪ್ರತಿಯೊಂದೂ ಚಲನೆಯಲ್ಲಿದೆ. ಒಂದು ಮರದ ತುಂಡು, ಕಬ್ಬಿಣದ ಬಿಲ್ಲೆ,...

ಮರದೊಂದು ಎಲೆ ನಾನು..

ನನ್ನ ಫೋಟೋ
A Writer, Researcher, Journalist and Activist. Born and brought up from Kugwe a village near Sagara, Shimoga district of Karnataka state. Presently working as the Editor In Chief of PEEPAL MEDIA /PEEPAL TV.