ಅವರಲ್ಲಿ ಸಿದ್ದರಾಮಯ್ಯ ಸಹ ಸಂಪೂರ್ಣ ವಿಶ್ವಾಸ ಇರಿಸಿದ್ದರು...

 

ಡಾ. ವೆಂಕಟೇಶಯ್ಯ  ನೆಲ್ಲುಕುಂಟೆ

ಮೊನ್ನೆ ಸೋಷಲ್ ಮೀಡಿಯಾದಲ್ಲಿ ಸಿ ಎಂ ಸಿದ್ದರಾಮಯ್ಯ ಅವರು ವಿದಾನಸಭೆಯಲ್ಲಿ ಮಾಡಿದ್ದ ಭಾಷಣದ ತುಣುಕೊಂದು ವೈರಲ್ ಆಗಿದ್ದನ್ನು ಗಮನಿಸಿದೆ. ಬಿಜೆಪಿ ಸರ್ಕಾರ ತರಲು ಹೊರಟಿದ್ದ ಮತಾಂತರ ಕಾಯ್ದೆಯನ್ನು ವಿರೋಧಿಸುತ್ತಾ ಸಿದ್ದರಾಮಯ್ಯ ಅವರು ಬಿಡುತ್ತಿದ್ದ ಒಂದೊಂದೇ ಮಾತಿನ ಬಾಣಗಳನ್ನು ಕೇಳಿ ಅಂದಿನ ಬಿಜೆಪಿ ಸರ್ಕಾರದ ಮಹಾಮಹಿಮರೆಲ್ಲಾ ಗರಬಡಿದಂತೆ ಕುಳಿತ ದೃಶ್ಯ ಅದು. ʼರನ್ನ ಯಾವ ಧರ್ಮದಲ್ಲಿ ಹುಟ್ಟಿದ್ದ? ಯಾವ ಧರ್ಮಕ್ಕೆ ಸೇರಿದ್ದ? ಪಂಪ ಯಾವ ಜಾತಿ, ಸೇರಿದ್ದು ಯಾವ ಧರ್ಮ? ಸಾಮ್ರಾಟ ಅಶೋಕ ಯಾವ ಧರ್ಮದಲ್ಲಿದ್ದ ಯಾವ ಧರ್ಮ ಸೇರಿದ್ದ? ಅಂಬೇಡ್ಕರ್ ಯಾವ ಧರ್ಮಕ್ಕೆ ಸೇರಿದ್ದರು? ನಮ್ಮ ದೇಶದಲ್ಲಿ ಯಾರೆಲ್ಲಾ ಯಾಕಾಗಿ ಮತಾಂತರ ಆಗಿದ್ದರು?”

ಬಹಳ ಜನಕ್ಕೆ ತಿಳಿದಿರಲಿಕ್ಕಿಲ್ಲ. ಬೆಂಕಿಯಂತ ಭಾಷಣವನ್ನು ಅಂದು ವಿಪಕ್ಷ ನಾಯಕ ಸಿದ್ದರಾಮಯ್ಯನವರಿಗೆ ಸಿದ್ಧಪಡಿಸಿದ್ದು ಬೇರಾರೂ ಅಲ್ಲ ಅವರ ಆಪ್ತ ಕಾರ್ಯದರ್ಶಿಯಾಗಿದ್ದ ಡಾ.ನೆಲ್ಲುಕುಂಟೆ ವೆಂಕಟೇಶಯ್ಯನವರು.

ಸಿದ್ದರಾಮಯ್ಯನವರು ಎರಡನೇ ಸಲಕ್ಕೆ ಮುಖ್ಯಮಂತ್ರಿಯಾದ ನಂತರ ತಮ್ಮ ಆಪ್ತ ಕಾರ್ಯದರ್ಶಿಯಾಗಿ ಡಾ. ನೆಲ್ಲುಕುಂಟೆ ವೆಂಕಟೇಶಯ್ಯ ಅವರನ್ನೇ ನೇಮಿಸಿಕೊಂಡಾಗ ಕೆಲವರಿಗೆ ಅಚ್ಚರಿಯಾಗಿದ್ದಿರಬಹುದು. ಆದರೆ ವೆಂಕಟೇಶಯ್ಯ ಅವರಿಗೆ ಇಂತಹ ಗುರುತರ ಹೊಣೆಗಾರಿಕೆ ಸಿಕ್ಕಿದ್ದು ಕರ್ನಾಟಕದ ಪ್ರಗತಿಪರ ವಲಯಕ್ಕೆ ಸಂತೋಷದ ಸಂಗತಿಯಾಗಿತ್ತು. ಯಾಕೆಂದರೆ ಅದಾಗಲೇ ವೆಂಕಟೇಶಯ್ಯ ಅವರು ಒಬ್ಬ KAS ಅಧಿಕಾರಿಯಾಗಿ ಕೆಲಸ ನಿರ್ವಹಿಸುತ್ತಲೇ ಸಾಹಿತ್ಯವನ್ನೂ ರಚಿಸುತ್ತಾ ಸಂಶೋಧನಾ ಬರೆಹಗಳನ್ನೂ ಬರೆಯುತ್ತಾ ಚಿರಪರಿಚಿತರಾಗಿದ್ದರು. ಅವರಿಗಿದ್ದ ಸೈದ್ಧಾಂತಿಕ ದೃಷ್ಟಿಕೋನ ಹಾಗೂ ಜನಪರ ಚಳವಳಿಗಳ ಹಿನ್ನೆಲೆಯ ಕಾರಣಕ್ಕಾಗಿ ಸಿದ್ದರಾಮಯ್ಯ ಅವರ ತೀರ್ಮಾನ ಹಲವರಿಗೆ ಸಮಾಧಾನ ತಂದಿತ್ತು. ಈಗ ಮೂರು ವರ್ಷಗಳ ನಂತರ ಹಿಂದೆ ತಿರುಗಿ ನೋಡಿದರೆ ಡಾ. ವೆಂಕಟೇಶಯ್ಯ ಅವರು ಸಿದ್ದರಾಮಯ್ಯ ಅವರ ನಿರೀಕ್ಷೆಯನ್ನು ನೂರಕ್ಕೆ ನೂರು ಉಳಿಸಿಕೊಂಡು ಬಂದಿದ್ದಾರೆ. ತಮ್ಮ ಚಿಂತನೆ ಮತ್ತು ಛಾತಿಗೆ ತಕ್ಕ ಆಪ್ತ ಕಾರ್ಯದರ್ಶಿಯಾಗಿ ವಿಧಾನ ಸೌಧದ ಮೂರನೇ ಮಹಡಿಯ ಸಿಎಂ ಕಚೇರಿಯನ್ನು ಜನಸಮಾನ್ಯರ ದುಗುಡ ದುಮ್ಮಾನವನ್ನು ಆಲಿಸುವ ಕಚೇರಿಯಾಗಿ ಮಾಡಿ ನಿಜಕ್ಕೂ ಹೊಸ ಮಾದರಿಯನ್ನು ಸೃಷ್ಟಿಸಿದ್ದಾರೆ.

ಸಿದ್ದರಾಮಯ್ಯ ಅವರ ಆಪ್ತ ಕಾರ್ಯದರ್ಶಿಯಾದ ಕ್ಷಣದಿಂದ ನೆನ್ನೆ ಸಿದ್ದರಾಮಯ್ಯ ಅವರು ತಮ್ಮ ರಾಜೀನಾಮೆ ಘೋಷಿಸಿದ ಕ್ಷಣದವರೆಗೂ ವೆಂಕಟೇಶಯ್ಯ ಸರ್ ಹೇಗೆ ಕೆಲಸ ಮಾಡಿದ್ದಾರೆ ಎಂಬುದನ್ನು ಇಡೀ ನಾಡು ಕಂಡಿದೆ. ನೆನ್ನೆ ವಿಧಾನಸೌಧಕ್ಕೆ ಅವರನ್ನು ಮಾತಾಡಿಸಲೆಂದೇ ಹೋಗಿದ್ದ ನಮಗೆ ಸಿಎಂ ಕಛೇರಿಯಲ್ಲಿ ಸದಾ ಗಿಜಿಗುಡುವ ಜನರ ನಡುವೆ ಅವರು ಕಾಣಲಿಲ್ಲ. ಬದಲಿಗೆ ತಮ್ಮನ್ನು ತಾವು ನಿರಾಳಗೊಳಿಸಿಕೊಂಡಿದ್ದವರಂತೆ ಕಂಡರು. ʼಹರ್ಷ, ರಾಶಿ ರಾಶಿ ಓದೋದು ಬಿದ್ದಿದೆ. ಓದಲು ಶುರು ಮಾಡಬೇಕು. ಮೊದಲು ಚನ್ನಾಗಿ ನಿದ್ದೆ ಮಾಡಬೇಕುʼ ಎಂದರು. ಮೂರು ವರ್ಷಗಳಲ್ಲಿ ಒಂದೇ ಒಂದು CL ಹಾಕದೇ, ಬಹುತೇಕ ಶನಿವಾರ ಭಾನುವಾರಗಳಲ್ಲೂ ಕಚೇರಿಯಲ್ಲಿ ಬಂದು, ಹಬ್ಬಗಳ ದಿನಗಳಲ್ಲೂ ಬಂದು ಸಿಎಂ ಭಾಷಣ, ಪ್ರತ್ಯುತ್ತರಗಳಿಗೆ ಬೇಕಾದ ಮಾಹಿತಿಗಳನ್ನು ಕಲೆಹಾಕುತ್ತಾ ಕೂರುತ್ತಿದ್ದ ಅಧಿಕಾರಿಮೊದಲು ನಿದ್ದೆ ಮಾಡಬೇಕುಎಂದಿದ್ದು ತಮಾಷೆಗೆ ಹೇಳಿದ್ದ ಮಾತಾಗಿರಲಿಲ್ಲ. ಪ್ರತಿದಿನ ರಾತ್ರಿ 10 ಗಂಟೆಯವರೆಗೂ ಕಚೇರಿಯಲ್ಲಿದ್ದು ಹೊರಡುವ ಮುನ್ನ ವಿಧಾನಸೌಧದ ಸುತ್ತಲೂ ಒಂದೆರಡು ಸುತ್ತು ವಾಕ್ ಮಾಡಿ ಹೊರಡುತ್ತಿದ್ದ ವೆಂಕಟೇಶಯ್ಯ ಅವರು ತೋರಿದ ಬದ್ಧತೆ ಮತ್ತು ದಕ್ಷತೆಗಳನ್ನು ಮತ್ತೊಬ್ಬ ಅಧಿಕಾರಿಯಲ್ಲಿ ಇತ್ತೀಚಿನ ವರ್ಷಗಳಲ್ಲಿ ನಾನಂತೂ ಕಂಡಿಲ್ಲ.

ಸರ್ಕಾರದ ಉನ್ನತ ಹುದ್ದೆಗಳನ್ನು ಅಲಂಕರಿಸುವ ಅಧಿಕಾರಿಗಳಲ್ಲಿ ಬುದ್ಧಿವಂತಿಕೆ (intelligence) ಕಾರ್ಯಕ್ಷಮತೆ (efficiency), ಸಂವೇದನಾಶೀಲತೆ (sensibility), ಸೃಜನಶೀಲತೆ (creativeness) ಹಾಗೂ ಜನಪರ ದೃಷ್ಟಿಕೋನ ಎಲ್ಲ ಗುಣಗಳೂ ಒಬ್ಬರಲ್ಲೇ ಇರುವ ಸಂದರ್ಭಗಳು ಬಹಳ ಅಪರೂಪ. ನಮ್ಮ ಡಾ. ವೆಂಕಟೇಶಯ್ಯ ಸರ್ ಎಲ್ಲಾ ಗುಣಗಳನ್ನು + additional ಆದ ಕವಿಮನಸ್ಸು ಹೊಂದಿರುವ ಬಹು ಅಪರೂಪದಲ್ಲೇ ಅಪರೂಪದ ವ್ಯಕ್ತಿತ್ವವೆಂದೇ ಹೇಳಬೇಕು. ಇಂದು ಸಿದ್ದರಾಮಯ್ಯ ಅವರು ಅತ್ಯಂತ ಘನತೆಯಿಂದ ತಮ್ಮ ಸ್ಥಾನದಿಂದ ಹೊರನಡೆದ ಸಂದರ್ಭದಲ್ಲಿ ಅವರ ಹೆಗಲಿಗೆ ಹೆಗಲಾಗಿ ನಿಂತು ತಮ್ಮ ಸೇವೆ ಸಲ್ಲಿಸಿರುವ ವೆಂಕಟೇಶಯ್ಯ ಅವರ ಹೆಸರೂ ಕೆಲವು ಮಾಧ್ಯಮಗಳಲ್ಲೂ ಕಾಣುತ್ತಿರುವುದು ತೋರಿಕೆಯಿಂದಲ್ಲ. ಸಿದ್ದರಾಮಯ್ಯ ಅವರು ಹೇಗೆ ಎಂದೂ ತೋರಿಕೆ, ಬೂಟಾಟಿಕೆ ನಡೆಸಲಿಲ್ಲವೋ ಹಾಗೇ ಒಬ್ಬ ಅಧಿಕಾರಿಯಾಗಿ ವೆಂಕಟೇಶಯ್ಯ ಸರ್ ಕೂಡಾ ಸೀದಾ ಸಾದಾ ವ್ಯಕ್ತಿಯಾಗಿ ಯಾವ ಹಮ್ಮುಬಿಮ್ಮು ಇಲ್ಲದೆ ಕೆಲಸ ಮಾಡಿದ ಕಾರಣಕ್ಕಾಗಿ ದೊಡ್ಡ ವ್ಯಕ್ತಿತ್ವವಾಗಿ ಕಾಣುತ್ತಿದ್ದಾರೆ. ಅವರ ವ್ಯಕ್ತಿತ್ವದ ಕುರಿತು ಇಲ್ಲಸಲ್ಲದ ಸಂಗತಿಗಳನ್ನು ಕೆಲದಿನಗಳ ಹಿಂದೆ ಆಡಿದ ಗೆಳೆಯರನ್ನು ಅವರೆಂದೂ ದ್ವೇಷಿಸುವುದಿಲ್ಲ. ಆದರೆ ಆಗ ಅವರು ಅನುಭವಿಸಿದ ಸಂಕಟ ಬೇಸರವನ್ನು ನಾನು ಕಂಡಿದ್ದೇನೆ. ‘ಇದೆಲ್ಲಾ ಹೇಗೆ ಸಾಧ್ಯ ಹರ್ಷಎಂಬ ಅವರ ಪ್ರಶ್ನೆಗೆ ಬಹುಶಃ ಮನುಷ್ಯ ಸ್ವಭಾವ- ಸಂಬಂಧಗಳ ಫಿಲಾಸಫಿಯಲ್ಲೇ ಏನಾದರೂ ಉತ್ತರವಿರಬಹುದೇನೋ!

ಸಿ ಎಂ ಆದನಂತರ ಸಿದ್ದರಾಮಯ್ಯ ಅವರು ವೆಂಕಟೇಶಯ್ಯ ಅವರನ್ನೇ ತಮ್ಮ ಆಪ್ತ ಕಾರ್ಯದರ್ಶಿಯಾಗಿ ಮಾಡಿಕೊಳ್ಳಲು ಇದ್ದ ಪ್ರಬಲ ಕಾರಣವೆಂದರೆ ಅವರು 2018ರಿಂದ 2023ರವರೆಗೆ ವಿಪಕ್ಷ ನಾಯಕರಾಗಿದ್ದ ಸಂದರ್ಭದಲ್ಲಿ ಅವರಿಗೆ ಆಪ್ತ ಸಹಾಯಕರಾಗಿ ಇದ್ದಂತಹ ಇದೇ ವೆಂಕಟೇಶಯ್ಯ ಸರ್ ಅವರ ಕಾರ್ಯವೈಖರಿ ಮತ್ತು ಕಾರ್ಯಕ್ಷಮತೆಗಳ ಅನುಭವ. ಹೊತ್ತಿಗಾಗಲೇ ಸಿದ್ದರಾಮಯ್ಯ ತಮ್ಮ ವೈಚಾರಿಕತೆ ಹಾಗೂ ವಿಚಾರ ಪ್ರಖರತೆಗೆ ಸರಿಹೊಂದುವ ಒಬ್ಬ ನಿಷ್ಠಾವಂತ ಹಾಗೂ ದಕ್ಷ ಬ್ಯೂರಾಕ್ರಾಟ್ ನ್ನು ವೆಂಕಟೇಶಯ್ಯ ಅವರಲ್ಲಿ ಕಂಡುಕೊಂಡಿದ್ದರು. ಅವರನ್ನು ಹತ್ತಿರದಿಂದ ಕಂಡ ಅವರ ಸಹೋದ್ಯೋಗಿಯೊಬ್ಬರು ಹೇಳುತ್ತಿದ್ದ ವಿಷಯವೇನೆಂದರೆ, CM ಬಳಿ ಹಿರಿಯ IAS ಅಧಿಕಾರಿಗಳು ಬ್ರೀಫಿಂಗ್ ಮಾಡುವಾಗಲೂ ತಮ್ಮ ಆಪ್ತ ಕಾರ್ಯದರ್ಶಿ ಪಕ್ಕದಲ್ಲೇ ಇರುವ ಪರಿಪಾಠವನ್ನು ಸಿದ್ದರಾಮಯ್ಯ ಅಭ್ಯಾಸ ಮಾಡಿದ್ದು ಸಣ್ಣ ವಿಷಯವಾಗಿರಲಿಲ್ಲ. ಯಾಕೆಂದರೆ ಸಾಮಾನ್ಯವಾಗಿ ಇದನ್ನು ಹಿರಿಯ ಅಧಿಕಾರಿಗಳು ಇಷ್ಟ ಪಡುವುದಿಲ್ಲ. ಆದರೆ, CM ಹೀಗೆ ಮಾಡಿಕೊಂಡಿದ್ದರಿಂದ ವೆಂಕಟೇಶಯ್ಯ ಅವರು ಇರುವಾಗ CM ಅವರ ಬಳಿ ಯಾವುದೇ ಆಧಿಕಾರಿ ತಪ್ಪು ಮಾಹಿತಿ ನೀಡುವುದಾಗಲೀ, ದಿಕ್ಕು ತಪ್ಪಿಸುವುದಾಗಲೀ ಸಾಧ್ಯವಿರಲಿಲ್ಲ. ಯಾವ ಸಲಹೆಯ ರಾಜಕೀಯ ಪರಿಣಾಮ ಏನಾಗಬಹುದು ಎಂಬುದನ್ನು ಕರಾರುವಕ್ಕಾಗಿ ಗ್ರಹಿಸುತ್ತಿದ್ದ ವೆಂಕಟೇಶಯ್ಯ ಅವರು ಕೂಡಲೇ ಸಿಎಂಗೆ ಮನವರಿಕೆ ಮಾಡಿಕೊಡುತ್ತಿದ್ದುದು ಬಹಳ ಸಲ ಸಿಎಂ ಸಿದ್ದರಾಮಯ್ಯ ಅವರಿಗೆ ವಸ್ತುಸ್ಥಿತಿ ಅರಿಯಲು ಸಹಾಯವಾಗಿತ್ತು.

ಸಿಎಂ ಕಚೇರಿಯಲ್ಲಿ ಮುಖ್ಯಮಂತ್ರಿಗಳ ಆಪ್ತ ಕಾರ್ಯದರ್ಶಿಗಳಾಗಿ (PS) ಕೆಲಸ ಮಾಡುವವರು ಬಹಳಷ್ಟು ಅಧಿಕಾರಿಗಳು ಯಾವ ಪರಿ ದರ್ಪ ಗತ್ತು ತೋರುತ್ತಾರೆ ಎಂಬುದು ಜನರಿಗೆ ತಿಳಿದಿರುತ್ತದೆ. ಸಾಮಾನ್ಯ ಜನರಿರಲಿ ಶಾಸಕರು ಹೋಗಿ ಮಾತಾಡಿಸುವುದು ಸಹ ಕಷ್ಟವಿರುತ್ತದೆ. ಆದರೆ ಕಳೆದ ಮೂರು ವರ್ಷಗಳಲ್ಲಿ ವಿಧಾನ ಸೌಧದ ಮೂರನೇ ಮಹಡಿಯಲ್ಲಿ ಸಿಎಂ ಕಚೇರಿಯ ಪಕ್ಕದಲ್ಲಿದ್ದ ಅವರ ಆಪ್ತ ಕಾರ್ಯದರ್ಶಿಗಳ ಕಚೇರಿಯ ಒಳಗೆ ಹೊರಗೆ ಇದ್ದ ಚಿತ್ರಣ ಸಂಪೂರ್ಣ ಬೇರೆಯದೇ ಆಗಿತ್ತು. ರಾಜ್ಯದ ಮೂಲೆ ಮೂಲೆಗಳಿಂದ ಪ್ರತಿ ದಿನ ನೂರಾರು ಜನರು ತಮ್ಮ ಕುಂದು ಕೊರತೆಗಳನ್ನು ತೆಗೆದುಕೊಂಡು ಹೋಗುತ್ತಿದ್ದರು. ಎಂತಹುದೇ ಒತ್ತಡವಿರಲಿ ಯಾರನ್ನೂ ಅವರ ಸಮಸ್ಯೆ ಏನು ಎಂದು ನೋಡದೇ ಹಾಗೇ ಕಳಿಸಿದ ಉದಾಹರಣೆಯೇ ಇಲ್ಲ. ಒಂದೇ ಫೋನ್ ಕರೆಯಿಂದ ಬಗೆಹರಿಯಬಹುದಾದ ಎಷ್ಟೋ ಸಮಸ್ಯೆಗಳನ್ನು ಅಲ್ಲೇ ಪರಿಹರಿಸುತ್ತಿದ್ದುದನ್ನು ನಾನು ಖುದ್ದಾಗಿ ನೋಡಿದ್ದೇನೆ.

ನಾನೂ ಸಹ ಒಂದೆರಡು ಕೆಲಸಗಳನ್ನು ವೆಂಕಟೇಶಯ್ಯ ಅವರ ಬಳಿ ಮಾಡಿಸಿಕೊಂಡಿದ್ದೇನೆ. ಅವು ನನ್ನ ವೈಯಕ್ತಿಕ ಕೆಲಸಗಳಲ್ಲ. ಹಾಗೆ ವೈಯಕ್ತಿಕವಾದ ಯಾವುದನ್ನೂ ಅವರ ಬಳಿ ಕೊಂಡೊಯ್ಯುವ ಪ್ರಮೇಯವೇ ಇರಲಿಲ್ಲವೆನ್ನಿ. ಆದರೆ ತಿಂಗಳಿಗೆ ಒಂದೆರಡು ಸಲವಾದರೂ ವಿಧಾನ ಸೌಧಕ್ಕೆ ಹೋಗಿ ವೆಂಕಟೇಶಯ್ಯ ಸರ್ ಅವರನ್ನು ಅವರ ಬ್ಯುಸಿ ಶೆಡ್ಯೂಲ್ ನಲ್ಲೇ ಮಾತಾಡಿಸಿಕೊಂಡು ಬಂದರೇನೇ ಸಮಾಧಾನ ಅನಿಸುತ್ತಿತ್ತು. ಇದು ಅವರು ವಿಪಕ್ಷ ನಾಯಕರ ಆಪ್ತಕಾರ್ಯದರ್ಶಿಯಾಗಿದ್ದಾಗಿಂದಲೂ ಅಭ್ಯಾಸವಾಗಿತ್ತು. ಅವರು CM ಆಪ್ತಕಾರ್ಯದರ್ಶಿಯಾದ ಮೊದಲೆರಡು ತಿಂಗಳಲ್ಲಿ ಮಾತ್ರ ಒಂದು ಕೆಲಸಕ್ಕಾಗಿ ಒಂದೆರಡು ತಿಂಗಳು ಎಡಬಿಡದೆ ಓಡಾಡಿದ್ದು ಮಾತ್ರ ಮರೆಯಲು ಸಾಧ್ಯವಿಲ್ಲ. ಅದು ಬೇರೇನಲ್ಲ. ರಾಮನಗರದ ಡಾ.ಕೃಷ್ಣಮೂರ್ತಿ ಎಂಬ ಇರುಳಿಗ ಸಮುದಾಯದ ಸ್ಕಾಲರ್ ಒಬ್ಬರಿಗೆ ಅದಾಗಲೇ ಆದೇಶವಾಗಿದ್ದ ಒಂದು ಹೊರಗುತ್ತಿಗೆ ಕೆಲಸ ಕೊಡಿಸುವ ವಿಷಯದಲ್ಲಿ. ಡಾ. ಕೃಷ್ಣಮೂರ್ತಿ ಅವರ ಶೈಕ್ಷಣಿಕ ಅರ್ಹತೆಯಿಂದಾಗಿ ಆಲ್ರೆಡಿ ಬೊಮ್ಮಾಯಿ ಸರ್ಕಾರದ ಅವಧಿಯಲ್ಲೇ ಅವರನ್ನು ಮೈಸೂರಿನ ಮೂಲ ಆದಿವಾಸಿ ಸಂಶೋಧನಾ ಕೇಂದ್ರದ ಸಂಶೋಧನಾ ಅಧಿಕಾರಿಯಾಗಿ (RO) ನೇಮಕಗೊಳಿಸಲಾಗಿತ್ತು. ಡಾ.ಕೃಷ್ಣಮೂರ್ತಿ DrKrishna Murthy Kv Iruliga ಇರುಳಿಗ ಸಮುದಾಯದಲ್ಲಿ ಮೊದಲ ಡಾಕ್ಟರೇಟ್ ಪಡೆದ ವ್ಯಕ್ತಿ. ಆದಿವಾಸಿ ಸಮುದಾಯಗಳ ಕುರಿತು ಅಪಾರ ಕಾಳಜಿ ಕನಸು ಹೊಂದಿರುವ ಯುವಕ. ಆದರೆ ಒಬ್ಬ so called ಮೇಲ್ಜಾತಿ ಅಧಿಕಾರಿಯೊಬ್ಬ ಇವರನ್ನು ಅದೆಷ್ಟು ಸತಾಯಿಸುತ್ತಿದ್ದ, ಎಷ್ಟು ಗೋಳು ಹೊಯ್ದುಕೊಂಡಿದ್ದ ಎಂದರೆ ಅವರು ವಿಷಯವನ್ನು ನನ್ನ ಬಳಿ ಮೊದಲು ಹೇಳಿಕೊಂಡಾಗ ಆಧಿಕಾರಿಗೆ ಹೋಗಿ ನಾಲ್ಕು ತದುಕಿ ಬರಬೇಕು ಎನ್ನುವಷ್ಟು ಸಿಟ್ಟು ಬಂದಿತ್ತು. ಪ್ರತಿಸಲ ಹೋದಾಗಲೂ ಒಂದೊಂದು ತಗಾದೆ ಆತನದು. ನೂರಾರು ಬಾರಿ ಇವರು ತಮ್ಮನ್ನು ನಿಯೋಜನೆ ಮಾಡಲು ಪರಿಪರಿಯಾಗಿ ಕೇಳಿಕೊಂಡರೂ ನಿರಾಕರಿಸುತ್ತಲೇ ಬಂದಿದ್ದ ದುಷ್ಟ ಅಧಿಕಾರಿ. ಸಿದ್ದರಾಮಯ್ಯ ಅವರು ವಿಪಕ್ಷ ನಾಯಕರಾಗಿದ್ದಾಗಲೇ ಸಮಸ್ಯೆ ನನ್ನ ಗಮನಕ್ಕೆ ಬಂದು ಆಗಲೇ ವಿಷಯವನ್ನು ವೆಂಕಟೇಶಯ್ಯ ಅವರ ಗಮನಕ್ಕೆ ತಂದಿದ್ದೆವು. ಅವರು ಒಂದು ಲೆಟರ್ ಕೂಡಾ ಮಾಡಿ ಕಳಿಸಿದರು. ನಂತರ ಸಿದ್ದರಾಮಯ್ಯ ಅವರು CM ಆದ ಕೂಡಲೇ ಹೇಗಾದರೂ ಮಾಡಿ ಇದನ್ನು ಮಾಡೋಣ ಎಂದುಕೊಂಡೆವು. ಈಗ ಸಿಎಂ ಕಚೇರಿಯಿಂದಲೇ ಲೆಟರ್ ಹೋಯಿತು. ಅದಕ್ಕೆ ಅಧಿಕಾರಿ ಮತ್ತೇನೋ ಕ್ಯಾತೆ ತೆಗೆದು ನಿರಾಕರಿಸಿದ. ಇವರ ಅರ್ಹತೆಗೆ ಸಂಬಂಧಿಸಿದ ಎಲ್ಲಾ ದಾಖಲೆ ಸಲ್ಲಿಸಿ ಮತ್ತೆ ಹೋಗಿ ಹೇಳಿದಾಗಲೂ ಕೇಳಲಿಲ್ಲ. ಆಗ ವೆಂಕಟೇಶಯ್ಯ ಸರ್ ಅಧಿಕಾರಿಗೆ ಕರೆ ಮಾಡಿ ಮಾಡಿ ಹೇಳಿದರು. ಆಯ್ತು ಎಂದ ಅಧಿಕಾರಿ ಮತ್ತೂ ತನ್ನ ಮೊಂಡುತನವನ್ನೇ ಮುಂದುವರೆಸಿದ. ಎರಡು- ಮೂರು ತಿಂಗಳು ಹೀಗೇ ವಾರಕ್ಕೆರಡು ಸಲ ವಿಧಾನ ಸೌಧಕ್ಕೆ ಹೋಗುವುದು ಬರುವುದೇ ಆಗಿಹೋಯ್ತು ನನಗೆ. ನಂತರ ಒಂದು ದಿನ ಹೀಗೇ ಮತ್ತೆ ವೆಂಕಟೇಶಯ್ಯ ಸರ್ ಬಳಿ ಹೋಗಿ, ʼಸರ್, ಆಫೀಸರ್ ಯಾಕಿಂಗೆ ಮಾಡ್ತಿದಾನೆ ಸರಿಯಾಗಿ ವಿಚಾರಿಸಿ ಸರ್ʼ ಎಂದು ವಿನಂತಿಸಿದೆ. ʼತಾಳು ನೋಡೋಣʼ ಎಂದ ವೆಂಕಟೇಶಯ್ಯ ಸರ್ ನನ್ನೆದುರಿಗೇ ಅಧಿಕಾರಿಗೆ ಪೋನ್ ತೆಗೆದುಕೊಂಡರು. ಆತ ರಿಸೀವ್ ಮಾಡಿದ.

ʼಕೃಷ್ಣಮೂರ್ತಿಯವರನ್ನು ನಿಯೋಜನೆಗೊಳಿಸುವ ಕೆಲಸ ಏನಾಯಿತುಎಂದ ಕೂಡಲೇ ಆಧಿಕಾರಿ ಏನೋ ಹೇಳಲು ಬಾಯಿ ತೆರೆಯುತ್ತಿದ್ದಂತೆ, ಅವನ ಬಾಯಿ ಮುಚ್ಚಿಸಿದ ವೆಂಕಟೇಶಯ್ಯ ಸರ್ ನಂತರ ಅಧಿಕಾರಿಗೆ ಹದಿನೈದು ನಿಮಿಷಗಳ ಕ್ಲಾಸ್ ತೆಗೆದುಕೊಂಡ ಪರಿ ಕಂಡು ಒಂದು ಕ್ಷಣ ಬೆಚ್ಚಿಬಿದ್ದಿದ್ದೆ. ಮಾತುಗಳು ಹೇಗಿದ್ದವೆಂದರೆ ಪ್ರಾಯಶಃ ಅಧಿಕಾರಿ ತನ್ನ ಜೀವನ ಪರ್ಯಂತ ಆತ ಮರೆಯಲಾರ. “ಏನ್ರಿ ನೀವು. ಜೀವನದಲ್ಲಿ ಬಹಳ ಆರಾಮಾಗಿದ್ದೀರಿ ಅಂತ ಕಾಣತ್ತೆ. ಆದರೆ ಆದಿವಾಸಿ ಹುಡುಗ ನಿಮ್ಮ ಬಳಿ ಬರುತ್ತಿರೋದು ಇದು ಎಷ್ಟನೇ ಸಲರೀ? ನತದೃಷ್ಟ ಪರಿಶಿಷ್ಟ ಸಮುದಾಯಗಳ ವಿದ್ಯಾವಂತರಿಗೆ ನಿಮ್ಮಂತವರ ಕಪಟಗಳು ಅರ್ಥವಾಗುತ್ತವೇನ್ರಿ? ಕನಿಷ್ಟ ಒಂದು ವರ್ಷದಿಂದ ಅವನ್ನು ಇಷ್ಟು ಸತಾಯಿಸುತ್ತಿದ್ದೀರಲ್ಲ ನೀವು ಮನುಷ್ಯರೇನ್ರಿ? ಮುಗ್ಧ ಹುಡುಗನ ಬಳಿ ನಿಮ್ಮ ಜಾತಿ ಅಹಂಕಾರ ತೋರಿಸ್ತಾ ಇದ್ದೀರಾ? ನಿಮಗೆ ಕನಿಷ್ಟ ಮನುಷ್ಯತ್ವ ಅನ್ನೋದು ಇದ್ದಿದ್ದರೆ ಹೀಗೆ ಮಾಡ್ತಾ ಇದ್ರ? ಇಂತಹ ಅನಾಥ ಸಮುದಾಯಗಳಿಂದ ಎಲ್ಲೋ ಬೆರಳೆಣಿಕೆಯ ಸ್ಕಾಲರುಗಳು ಬರುತ್ತಾರೆ. ಅವರು ಹಂತಕ್ಕೆ ಬರುವುದೇ ದೊಡ್ಡ ಸಾಹಸವಾಗಿರುತ್ತದೆ. ಎಷ್ಟೋ ಬಗೆಯ ಕಷ್ಟಗಳನ್ನು ಎದುರಿಸಿ ಒಂದು ಉನ್ನತ ಶಿಕ್ಷಣ ಪಡೆದು, ಒಂದು ಡಾಕ್ಟರೇಟ್ ಪಡೆದು ಬಂದಿರುತ್ತಾರೆ. ಅಂತವರನ್ನು ಗುರುತಿಸಿ ನಾಲ್ಕು ಮೆಚ್ಚುಗೆಯ ಮಾತಾಡಿ ಅವರಿಗೆ ಅವಕಾಶಗಳನ್ನು ಕೊಡಬೇಕಾದ ಜವಾಬ್ದಾರಿ ನಿಮಗಿಲ್ವಾ? ನೀವು ಮಾಡ್ತಿರೋದೇನು? ಅವರ ಅರ್ಹತೆಯ ಪ್ರಕಾರ ಅವರಿಗೆ ಈಗಾಗಲೇ ಆದೇಶವಾದ ಒಂದು ಹುದ್ದೆಯನ್ನು ನೀಡಲು ಸಹ ಅನಗತ್ಯವಾಗಿ ಸತಾಯಿಸುತ್ತೀದ್ದೀರಿ ಅಂದರೆ ನಿಮ್ಮಂತವರು ಸಮಾಜಕ್ಕೆ ಯಾವ ರೀತಿಯಲ್ಲಿ ಉಪಯೋಗಕ್ಕೆ ಬರುತ್ತೀರ ಹೇಳಿ. ಹುಡುಗನ ಪರಿಸ್ಥಿತಿಯಲ್ಲೇ ನೀವು ಇದ್ದಿದ್ದರೆ ಅಥವಾ ನಿಮ್ಮದೇ ಜಾತಿಯ ಒಬ್ಬ ವ್ಯಕ್ತಿ ಇದ್ದಿದ್ದರೆ ನೀವು ಇದೇ ರೀತಿ ಸೈಕಲ್ ಹೊಡೆಸ್ತಾ ಇದ್ರ? ಇದೇ ರೀತಿ ಸತಾಯಿಸ್ತಾ ಇದ್ರ? ಇನ್ನೆರಡು ದಿನದಲ್ಲಿ ಅವನು ಕೆಲಸಕ್ಕೆ ರಿಪೋರ್ಟ್ ಮಾಡಿಕೊಳ್ಳದೇ ಇದ್ರೆ ಸಿಎಂ ಸಾಹೇಬರು ನಿಮ್ಮ ಮೇಲೆ ಕ್ರಮ ತೊಗೊಬೇಕಾಗುತ್ತೆ ನೋಡಿ. ನೋಡಿ, ಹುಡುಗ ಮತ್ತೆ ನನ್ನ ಆಫೀಸಿಗೆ ಬರಕೂಡದು. ಬಂದರೆ, ಗಂಭೀರ ಪರಿಣಾಮ ನೀವು ಎದುರಿಸಬೇಕಾಗುತ್ತೆʼ ಎಂದು ಹೇಳಿ ಫೋನಿಟ್ಟರು. ಅಷ್ಟು ಸಿಟ್ಟಿನಲ್ಲಿ ಮಾತಾಡಿದ ವೆಂಕಟೇಶಯ್ಯ ಸರ್ ನ್ನು ನಾನು ಕಂಡೇ ಇರಲಿಲ್ಲ. ಅವರು ಹೀಗೆ ಜಾಡಿಸುತ್ತಿದ್ದಾಗ ನನಗಂತೂ ಒಳಗೊಳಗೇ ಖುಶಿಯಾಗಿತ್ತೆನ್ನಿ. ಮತ್ತೆ ಒಂದೇ ವಾರದಲ್ಲಿ ಕೃಷ್ಣಮೂರ್ತಿ ಅಧಿಕಾರಿಯಾಗಿ ನಿಯೋಜನೆಗೊಂಡರು. ಅದೇನೂ ಪರ್ಮನೆಂಟ್ ಕೆಲಸವಲ್ಲ. ಆದರೆ ತನ್ನ ಸಮುದಾಯ ಮತ್ತು ತನ್ನಂತೆ ಇರುವ ಆದಿವಾಸಿ ಸಮುದಾಯಗಳಿಗಾಗಿ ಕೆಲಸ ಮಾಡಬೇಕು ಎಂದು ಹಂಬಲಿಸುತ್ತಿದ್ದ ಕೃಷ್ಣಮೂರ್ತಿ ಸಂಶೋಧನಾ ಅಧಿಕಾರಿಯಾಗಿ ಕುಳಿತ ಕ್ಷಣ ನನಗೆ ಬಾಬಾಸಾಹೇಬ್ ಅಂಬೇಡ್ಕರ್ ಮುಗುಳ್ನಕ್ಕಂತಾಯಿತು. ನಂತರ ಮೈಸೂರಿಗೆ ಹೋದಾಗ ಒಮ್ಮೆ ಅವರ ಕಚೇರಿಗೆ ನಾನು ಹೋಗಿದ್ದಾಗ, ಕೂಡಲೇ ಕೈ ಹಿಡಿದು ತನ್ನ ಚೇಂಬರ್ ಗೆ ಕರೆದುಕೊಂಡು ಹೋದಾಗ ನಾನಲ್ಲಿ ಕಂಡದ್ದು ಅವರ ಚೇರಿನ ಮೇಲ್ಗಡೆ ವೆಂಕಟೇಶಯ್ಯ ಅವರ ಫೋಟೋ! ನನ್ನ ಕಣ್ಣಾಲಿಗಳು ತುಂಬಿ ಬಂದವು. ಆದರೆ, ಕೃಷ್ಣಮೂರ್ತಿಗೆ ಹೇಳಿದೆ, 'ಹಾಗೆ ಅವರ ಫೋಟೋ ಹಾಕಬೇಡಿ ಬ್ರದರ್, ಅದು ವೆಂಕಟೇಶಯ್ಯ ಸರ್ ಕೂಡಾ ಇಷ್ಟ ಪಡಲ್ಲ' ಅಂದೆ. ಆದರೆ ಯುವ ಅಧಿಕಾರಿ, 'ಸರ್, ನಾವು ಇಂತಹ ಅಧಿಕಾರಿಗಳಲ್ಲೇ ಬಾಬಾಸಾಹೇಬರನ್ನ ಕಾಣ್ತಾ ಇದ್ದೀವಿ ಸರ್. ನಾನು ಫೋಟೋ ಹಾಕಿಕೊಂಡಿದ್ದು ಅವರಿಗೇನೂ ತಿಳಿಯಲ್ಲ ಬಿಡಿ' ಅಂದ

ಇರುಳಿಗ ಅಧಿಕಾರಿ ಡಾ ಕೃಷ್ಣಮೂರ್ತಿ ಅವರ ಚೇಂಬರ್

ಕೆಲವು ತಿಂಗಳ ಹಿಂದೆ ಕೃಷ್ಣಮೂರ್ತಿ ಕಳೆದ ಏರಡೂವರೆ ವರ್ಷಗಳಲ್ಲಿ ತಾವು ಸಂಶೋಧನಾ ಆಧಿಕಾರಿಯಾಗಿ ನಿಯೋಜನೆಗೊಂಡ ಮೇಲೆ ಮೂಲ ಆದಿವಾಸಿಗಳ ವಿಷಯದಲ್ಲಿ ಆದ ಕೆಲಸಗಳ ಒಂದು ದೊಡ್ಡ ಪಟ್ಟಿಯನ್ನೇ ಕಳಿಸಿದ್ದರು. ಅದರಲ್ಲಿ ಸಂಶೋಧನಾ ಅಧಿಕಾರಿ ಡಾ ಕೃಷ್ಣಮೂರ್ತಿ ಅವರ ಮೂಲಕವೇ ಕಾಡಂಚಿನ ಮೊದಲ ತಲೆಮಾರಿನ 11 ಬೇರೆ ಬೇರೆ ಆದಿವಾಸಿ ಸಮುದಾಯಗಳ ಯುವಕ ಯುವತಿಯರಿಗೆ ಹೊರಗುತ್ತಿಗೆ ಉದ್ಯೋಗ ನೀಡಿದ್ದು, ಎರಡು ಸಲ ಸರ್ಕಾರದ ಮುಖ್ಯ ಕಾರ್ಯದರ್ಶಿಗಳು ಹಾಗೂ ಹತ್ತಕ್ಕೂ ಹೆಚ್ಚು ಬಾರಿ ಇಲಾಖೆಯ ಕಾರ್ಯದರ್ಶಿ ಮತ್ತು ನಿರ್ದೇಶಕರೊಂದಿಗೆ ಸಭೆ ನಡೆಸಿದ್ದು, ವಿವಿಧ ಮಂತ್ರಿಗಳೊಂದಿಗೆ ಮೂಲ ಆದಿವಾಸಿಗಳ ಸಭೆ ನಡೆಸಿದ್ದು, ಮೂಲ ಆದಿವಾಸಿ ಸಮುದಾಯಗಳ ಸಮೀಕ್ಷೆಗಳನ್ನು ನಡೆಸಿದ್ದು, ಹಲವು ಸೆಮಿನಾರ್ ಗಳನ್ನು ನಡೆಸಿದ್ದು, ಹೀಗೆ ಅನೇಕ ಕೆಲಸಗಳಾಗಿದ್ದವು. ಕೃಷ್ಣಮೂರ್ತಿಯವರೇ ಮುಂದಾಳತ್ವ ವಹಿಸಿ ಆದಿವಾಸಿ ಮುಖಂಡರು ಮತ್ತು ಯುವಕರೊಂದಿಗೆ ನಾಲ್ಕು ಬಾರಿ ಸಿ ಎಂ ಸಿದ್ದರಾಮಯ್ಯ ಅವರ ಸಮ್ಮುಖದಲ್ಲಿ ಸಭೆ ನಡೆಸಿ ಇವರೇ ಸಮುದಾಯಗಳ ಸ್ಥಿತಿಗತಿಗಳನ್ನು ಸಿಎಂಗೆ ಮನವರಿಕೆ ಮಾಡಿಕೊಟ್ಟಿದ್ದರು.

ಡಾ. ಕೃಷ್ಣಮೂರ್ತಿ ಅಧಿಕಾರಿಯಾಗಿ ಸಿಎಂ ಗೆ ಆದಿವಾಸಿಗಳ ಕುರಿತು ಮನವರಿಕೆ ಮಾಡುತ್ತಿರುವುದು, ಹಿಂದೆ ಆಪ್ತಕಾರ್ಯದರ್ಶಿ ವೆಂಕಟೇಶಯ್ಯ ಸರ್


 ಇದನ್ನೆಲ್ಲಾ ಇಷ್ಟು ವಿವರವಾಗಿ ಯಾಕೆ ಬರೆದೆ ಎಂದರೆ ಒಂದು ಸಂವಿಧಾನಬದ್ಧ ವ್ಯವಸ್ಥೆಯಲ್ಲಿ ಉನ್ನತ ಅಧಿಕಾರಿಗಳು ಸ್ವಲ್ಪ ಮಟ್ಟಿಗೆ ಹೃದಯವಂತರಾಗಿದ್ದರೂ, ಎಷ್ಟೊಂದು ಕೆಲಸಗಳು ಸಂವಿಧಾನಕ್ಕೆ ಗೌರವ ತರುವ ನಿಟ್ಟಿನಲ್ಲಿ ನಡೆದುಬಿಡುತ್ತವೆ ಎಂದು ಹೇಳಲು. ಇಡೀ ರಾಜ್ಯದಲ್ಲಿ, ಇಡೀ ದೇಶದಲ್ಲಿ ಇಂತಹ ನೂರಾರು, ಸಾವಿರಾರು ಕೃಷ್ಣಮೂರ್ತಿಗಳು ಒಂದೊಂದು ಘನತೆಯ ಪರ್ಮನೆಂಟ್ ನೌಕರಿ ಪಡೆದರೆ ಅದೆಷ್ಟು ಸಮುದಾಯಗಳು ಅದೆಷ್ಟು ಕುಟುಂಬಗಳು ನೆಮ್ಮದಿಯ ಉಸಿರು ಬಿಡಬಹುದು ಯೋಚಿಸಿ. ಆದರೆ, ನಮ್ಮ ಹೃದಯಹೀನ ಆಡಳಿತ ವ್ಯವಸ್ಥೆಯಲ್ಲಿ ಒಬ್ಬ ಕೃಷ್ಣಮೂರ್ತಿ ಒಂದು ಚಿಕ್ಕ ತಾತ್ಕಾಲಿಕ ಕೆಲಸ ಪಡೆಯಲೂ ಎರಡು ವರ್ಷಗಳ ಕಾಲ ಹೆಚ್ಚೂಕಡಿಮೆ ಜೀವನ್ಮರಣದ ಹೋರಾಟದಂತೆ ಪರದಾಡಿದ ರೀತಿ ನೆನೆಸಿಕೊಂಡಾಗ ಸಂಕಟವಾಗುತ್ತದೆ. ನಿರ್ಗತಿಕ ಸಮುದಾಯಗಳು ಪಡೆಯುವ ಶಿಕ್ಷಣಕ್ಕೆ ಇರುವ ಬೆಲೆ ಇದೇನಾ ಇಲ್ಲಿ? ಎನಿಸಿಬಿಡುತ್ತದೆ. ಇಂತಹ ಸಂದರ್ಭದಲ್ಲಿ ನಮಗೆ ವೆಂಕಟೇಶಯ್ಯ ಅವರಂತಹ ಒಬ್ಬ ಜನಪರ ಅಧಿಕಾರಿ ಪ್ರತಿಭಾವಂತ ಯುವಕನಿಗೆ ಸ್ಪಂದಿಸದೇ ಹೋಗಿದ್ದರೆ, ನಮ್ಮ ಅಹವಾಲನ್ನು ಕೇಳಿಸಿಕೊಂಡಿರದಿದ್ದರೆ ಇರುಳ ಸಮುದಾಯದ ಸ್ಕಾಲರ್ ಎಲ್ಲಾ ಅರ್ಹತೆಗಳನ್ನು ಪಡೆದೂ ಹುದ್ದೆ ಪಡೆಯಲು ಸಾಧ್ಯವಾಗುತ್ತಲೇ ಇರಲಿಲ್ಲ. ಅಲ್ಲವೆ? ಇಲ್ಲಿ ನಾನು ಹೇಳಿದ್ದು ಕಳೆದ ಮೂರು ವರ್ಷಗಳಲ್ಲಿ ಸಿಎಂ ಆಪ್ತ ಕಾರ್ಯದರ್ಶಿಗಳ ಕಚೇರಿಯ ಮೂಲಕ ಆಗಿರುವ ನೂರಾರು ಜನಮುಖಿ ಕೆಲಸಗಳಲ್ಲಿ ಒಂದು ಸಣ್ಣ ಉದಾಹರಣೆಯಷ್ಟೆ.

ಆದರೆ, ತಾವು ನಿರ್ವಹಿಸಿದ ಹುದ್ದೆಯ ಬಗ್ಗೆ ವೆಂಕಟೇಶಯ್ಯ ಸರ್ ವರಸೆ ಬೇರೆಯೇ ಇದೆ.

ʼ ಹುದ್ದೆಯನ್ನು ನಾನು ಯಾವತ್ತೂ ಅನುಭವಿಸಲಿಲ್ಲ, ನನಗೆ ಸಿಎಂ ಬಗ್ಗೆ ಅಟ್ಯಾಚ್ಮೆಂಟ್ ಇತ್ತು ಆದರೆ ಹುದ್ದೆ ಬಗ್ಗೆ ಡಿಟ್ಯಾಚ್ ಮೆಂಟ್ ಇಟ್ಟುಕೊಂಡೇ ಇದ್ದೆ ಅನ್ಸತ್ತೆ. ಆದರೆ ಒಂದು ವಿಷಯ ಯಾವಾಗ್ಲೂ ನನ್ನ ತಲೆಯಲ್ಲಿ ಇರುತ್ತಿತ್ತು. ಇಲ್ಲಿ ನನ್ನ ಕೆಲಸಗಳ ಮೂಲಕ ಸಿದ್ದರಾಮಯ್ಯ ಅವರನ್ನು ನಾಡಿನ ಜನರು ಅಳೆಯುತ್ತಾರೆ ಎಂಬುದು ಚನ್ನಾಗಿ ಅರಿವಿತ್ತುʼ ಎನ್ನುವ ವೆಂಕಟೇಶಯ್ಯ ಸರ್ ತಮ್ಮ ಕೆಲಸಗಳ ಮೂಲಕ ನಿಜಕ್ಕೂ ಸಿದ್ದರಾಮಯ್ಯ ಅವರಿಗೆ ತಕ್ಕ ಅಧಿಕಾರಿಯಾಗಿ ಕಾರ್ಯನಿರ್ವಹಿಸಿದ್ದಾರೆ. ಹಾಗೆಂದೇ ಸಿದ್ದರಾಮಯ್ಯ ಸಹ ಅವರ ಮೇಲೆ ಸಂಪೂರ್ಣ ವಿಶ್ವಾಸವಿರಿಸಿಕೊಂಡಿದ್ದರೆನ್ನಬಹುದು. ಇಂತಹ ಘನ ಅಧಿಕಾರಿಗಳ ತಂಡವನ್ನು ಇಟ್ಟುಕೊಂಡು ಸಿದ್ದರಾಮಯ್ಯ ಅವರು ಇನ್ನಷ್ಟು ಮೈಕೊಡವಿ ಮುಂದೆ ಹೋಗಿದ್ದರೆ ಪರಿಸ್ಥಿತಿ ಬೇರೆಯೇ ಇರುತ್ತಿತ್ತೆನಿಸುತ್ತದೆ.

ಸಂದರ್ಭದಲ್ಲಿ ಒಬ್ಬ ಮಹಾನ್ ಜನನಾಯಕನೊಂದಿಗೆ ಅವರಷ್ಟೇ ತೀಕ್ಷ್ಣತೆ, ಜನಪ್ರೀತಿ ಮತ್ತು ಬದ್ಧತೆಗಳಿಂದ ಕೆಲಸ ಮಾಡಿದ ವೆಂಕಟೇಶಯ್ಯ ಸರ್ ಅವರ ಸೇವೆಯನ್ನು ಸಹ ನಾಡು ಎಂದಿಗೂ ಮರೆಯುವುದಿಲ್ಲ. ಇಂತಹ ಅವಕಾಶಗಳು ಡಾ. ನೆಲ್ಲುಕುಂಟೆ ವೆಂಕಟೇಶಯ್ಯ ಅವರಿಗೆ ಮತ್ತೆ ಮತ್ತೆ ಸಿಗಲಿ, ತನ್ಮೂಲಕ ದನಿ ಇಲ್ಲದವರ ದನಿಗಳಿಗೆ ಬಲ ಸಿಗಲಿ ಎಂದು ಆಶಿಸುವೆ


ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಬ್ರಹ್ಮಶ್ರೀ ನಾರಾಯಣ ಗುರುಗಳ ಬದುಕು ಮತ್ತು ಸೋಶಿಯಲ್ ಫಿಲಾಸಫಿ

ಹೊಸತು - ಹಳತು : ಬುದ್ದ ತತ್ವ

ಮೇಘಾನೆಯಿಂದ ಬೆಳ್ಳಿಗುಂಡಿಯವರೆಗೆ....- ಒಂದು ಚಾರಣದ ಅನುಭವ