ಆಗಸ್ಟ್ 24, 2011

ಅಣ್ಣಾ ಹೋರಾಟದಾಚೆಯ ಬಿಡಿ ಚಿತ್ರಗಳು


  ಸರ್ಕಾರ ಅಣ್ಣಾ ಹೋರಾಟಕ್ಕೆ ಬಗ್ಗುವ ಸೂಚನೆ ನೀಡಿ  ಮತ್ತೆ ಕೈಕೊಡುವಂತೆ ತೋರುತ್ತಿದೆ. ಸರ್ಕಾರ ಹಾಗೂ ಟೀಂ ಅಣ್ಣಾ ಎರಡೂ ಪಕ್ಷಗಳೂ ಸಹ ತಂತಮ್ಮ ಹಠಮಾರಿತನಗಳನ್ನು ಬಿಟ್ಟು ದೇಶದ ಹಿತವನ್ನು ಕಾಪಾಡಬೇಕೆಂಬುದು ಎಲ್ಲಾ ಪ್ರಜಾತಂತ್ರ ಪ್ರೇಮಿಗಳ ಆಶಯ.
ಒಂದೊಮ್ಮೆ ಜನಲೋಕಪಾಲ ಕಾಯ್ದೆ ಜಾರಿಯಾದರೂ ಭ್ರಷ್ಟಾಚಾರದ ವಿರುದ್ಧದ ಹೋರಾಟ ಸಾಗಬೇಕಾದ ಹಾದಿ ತುಂಬಾ ದೀರ್ಘವಾದದ್ದು. ಒಂದು ಕಾಯ್ದೆ ಮಾತ್ರ ಭ್ರಷ್ಟಾಚಾರವನ್ನು ಹೋಗಲಾಡಿಸಿಬಿಡುತ್ತದೆ ಎಂಬುದು ಮೂರ್ಖತನವಾಗುತ್ತದೆ.
ಆದರೆ, ಇದುವರೆಗೆ ನಡೆದಿರುವ ಈ ಅಣ್ಣಾ ಹಜಾರೆ ಹೋರಾಟದಿಂದ ಆಗಿರುವ ಒಂದು ಅತ್ಯಂತ ಒಳ್ಳೆಯ ಪರಿಣಾಮ ಏನೆಂದರೆ ನಮ್ಮ ದೇಶದ ಯುವ ಸಮೂಹದಲ್ಲಿ ಭ್ರಷ್ಟಾಚಾರದ ವಿರುದ್ಧ ಒಂದು ಎಚ್ಚರಿಕೆ ಮೂಡಿರುವುದು. ಆದರೆ ಈಗ ವ್ಯಕ್ತಗೊಂಡಿರುವ ಅಸಹನೆ, ಉಂಟಾಗಿರುವ ಜಾಗೃತಿ ಮುಂದೆ ಕೃತಿಯಾಗಿ ಮಾರ್ಪಡುತ್ತದೆಯಾ? ಇಂದು ಈ ಹೋರಾಟದಲ್ಲಿ ಭಾಗಿಯಾದ ಮಧ್ಯಮ ವರ್ಗ ಎಷ್ಟರ ಮಟ್ಟಿಗೆ ಭ್ರಷ್ಟತೆಯಿಂದ ದೂರವಾಗಿ ಬದುಕಲು ಪ್ರಯತ್ನಿಸುತ್ತದೆ? ಅಥವಾ ಸಂದರ್ಭಕ್ಕೆ ತಕ್ಕಂತೆ ಮತ್ತೆ ತನ್ನ ಇದುವರೆಗಿನ ತಟಸ್ಥತೆಗೇ ಹೊರಳಿಕೊಂಡು ಈ ದೇಶಕ್ಕೂ, ಇಲ್ಲಿನ ರಾಜಕೀಯಕ್ಕೂ ತನಗೂ ಸಂಬಂಧವೇ ಇಲ್ಲ ಎಂದು ಮುಗುಮ್ಮಾಗಿಬಿಡುತ್ತದೆಯಾ? ಇವೆಲ್ಲಾ ಪ್ರಶ್ನೆಗಳಿಗೆ ಕಾಲವೇ ಉತ್ತರ ನೀಡಬೇಕು.
ನೋಡೋಣ.
ಈಗ ಇಲ್ಲಿ ನಾನು ಹಂಚಿಕೊಳ್ಳಬೇಕಿರೋದು ಈಗ ನಡೆದ ಅಣ್ಣಾ ಹೋರಾಟದ 'ಬೆಂಗಳೂರು ಚಾಪ್ಟರ್‌'ನಲ್ಲಿನ ಕೆಲ ಬಿಡಿ ಚಿತ್ರಗಳು.

ಚಿತ್ರ ಒಂದು
ಅಣ್ಣಾ ಹಜಾರೆ ಹೋರಾಟ ಬೆಂಬಲಿಸಿ ಫ್ರೀಡಂ ಪಾರ್ಕ್‌ನಲ್ಲಿ ನಿರಶನ ಧರಣಿ ಪ್ರತಿದಿನ ನಡೆಯುತ್ತಿದೆಯಲ್ಲಾ, ಅಲ್ಲಿ ಒಂದು ದೊಡ್ಡ ಪೆಂಡಾಲ್ ಹಾಕಲಾಗಿದೆ. ವೇದಿಕೆ ಮೇಲೆ ಕೆಲವರು ಉಪವಾಸ ನಡೆಸುತ್ತಿದ್ದಾರೆ. ಈ ಪೆಂಡಾಲ್‌ನ ಪಕ್ಕದಲ್ಲಿ ಒಂದು ಮನೆ ಇದೆ. ಅಲ್ಲಿ ಗುಲ್ಬರ್ಗದಿಂದ ಗುಳೇ ಬಂದು ಕೂಲಿ ಕೆಲಸ ಮಾಡುತ್ತಿರುವ ಒಂದು ಕುಟುಂಬ ಇದೆ. ಈ ಹೋರಾಟದ ಪೆಂಡಾಲ್‌ನ ಪಕ್ಕದಲ್ಲೇ ಇರುವ ಆ ಮನೆಯ ಸದ್ಯರನ್ನು ಅಲ್ಲಿ ಹೋರಾಟ ಶುರುವಾದ ೭ ದಿನಗಳ ನಂತರ ಈ ಪತ್ರಕರ್ತ ಮಾತನಾಡಿಸಲಾಗಿ ಕಂಡು ಬಂದ ಸಂಗತಿ ಏನೆಂದರೆ..
'ಅಕ್ಕಾ, ಇಲ್ಲಿ ಹೋರಾಟ ನಡೀತಾ ಇದೆಯಲ್ಲ. ನಿಮಗೆ ಏನನ್ನಿಸುತ್ತೆ. ಇದರ ಬಗ್ಗೆ?'
'ಇಲ್ಲಾ ಸಾರ್. ನಮಗೆ ಅದರ ಬಗ್ಗೆ ಏನೂ ತಿಳಿಯಾಕಿಲ್ಲ. ಒಟ್ಟು ಒಂದು ವಾರದಿಂದ ಹಿಂಗೇ ಜನ ಬತ್ತಾ ಹೋಗ್ತಾ ಅವ್ರೆ. ಒಂದಿಷ್ಟು ಜನ ಮಕ್ಕಂಡೇ ಇರ್ತಾರೆ. ನಮಗೆ ಏನೋಂದೂ ತಿಳೀವಲ್ದು ಸಾರ್..'
'ಇಲ್ಲಾ ಅಕ್ಕ. ಅದೂ... ಅಣ್ಣಾ ಹಜಾರೆ ಅನ್ನೋರು ಭ್ರಷ್ಟಾಚಾರದ ವಿರುದ್ಧ ಉಪವಾಸ ಹೋರಾಟ ನಡೆಸ್ತಿದಾರೆ. ನೀವು ಅವರಿಗೆ ಬೆಂಬಲ ನೀಡಬೇಕು'
'ಅಣ್ಣಾ....? ಯಾರಣ್ಣ ಅವರು? ನಮಗೇನೂ ಗೊತ್ತಿಲ್ಲ ಸಾರ್.... ಯಾಕೆ ಉಪವಾಸ ಕುಂತವ್ರೆ?'
'ಇಲ್ಲ ಅಕ್ಕ.. ಅದೇ ಈ ರಾಜಕಾರಣಿಗಳು, ಆಫೀಸರ್‌ಗಳು ಲಂಚ ಹೊಡೀತಾರಲ್ಲಾ.. ಅದರ ವಿರುದ್ಧ ಕಾನೂನು ತರೋಕೆ ಉಪವಾಸ ಕುಳಿತಿದ್ದಾರೆ.'
'ಹೌದಾ..?! ನಾವೂ ಬಾಳಾ ದಿನ ಉಪವಾಸನೇ ಇರೋದು ಸಾರ್. ಹಂಗಂತ ಈಗ ನಾವು ಈ ಫಂಕ್ಷನ್‌ಗೆ ಬಂದ್ರೆ ಮತ್ತೆ ಉಪವಾಸಾನೇ ಬೀಳಬೇಕಾಯ್ತದೆ ಸಾರ್. ಅವೊತ್ತಿನ ಗಂಜಿ ಅವತ್ತೇ ದುಡೀಬೇಕು ನಾವು.........'
  --
ನನಗೆ ಮತ್ತೆ ಅವರ ತಲೆ ತಿನ್ನಬೇಕೆನ್ನಿಸಲಿಲ್ಲ. ಆಯ್ತಕ್ಕಾ ಬರ‍್ತೀನಿ ಅಂತ ಹೇಳಿ ಬಂದೆ.

ನೂರಾ ಐವತ್ತು ಕೋಟಿ ಜನರು ಅಣ್ಣಾ ಹೋರಾಟಕ್ಕೆ ಬೆಂಬಲಿಸುತ್ತಿದ್ದಾರೆ ಅನ್ನೋ ಟೀವಿ ಆಂಕರ್ ಗಳ ಭಾವಾವೇಶದ ಮಾತು ನೆನಪಾಯಿತು..

 ಚಿತ್ರ ಎರಡು
ಹೋರಾಟದ ಎಂಟನೇ ದಿನ. ನನಗೆ ನಮ್ಮ ದಿಹಲಿ ಆಫೀಸ್‌ನಿಂದ ಒಂದು ಕೆಲಸ ವಹಿಸಲಾಯ್ತು. ಅಣ್ಣಾ ಹಜಾರೆಯವ ಹೋರಾಟದಲ್ಲಿ ಭಾಗವಹಿಸುತ್ತಿರುವ Underclass ನ ಒಬ್ಬ  ವ್ಯಕ್ತಿಯನ್ನು  ಸಂದರ್ಶನ ಮಾಡಿಕೊಂಡು ಫೋಟೋ ತೆಗೆದುಕೊಂಡು ಬನ್ನಿ.  ಅಂದರೆ ಈ ಹೋರಾಟದಲ್ಲಿ ಕುಳಿತ ಅಗ್ದಿ ಬಡ ಹಿನ್ನೆಲೆಯ ವ್ಯಕ್ತಿಯೊಬ್ಬನ ಸಂದರ್ಶನ.
ಸೈ ಎಂದು ಹೋದವನೇ ಹುಡುಕಲು ಶುರು ಮಾಡಿದೆ. ನೆರೆದವರ ಮುಖ, ಡ್ರೆಸ್ ಎಲ್ಲಾ ಒಂದು ಕಡೆಯಿಂದ ಪರೀಕ್ಷಿಸಿದೆ. ಸಂಜೆ ನಾಲ್ಕೂವರೆಯಿಂದ ರಾತ್ರಿ ಎಂಟೂವರೆಗೆ ಕ್ಯಾಂಡಲ್ ಲೈಟ್ ಮೆರವಣಿಗೆ ಮುಗಿಯುವವರೆಗೂ ಒಬ್ಬರನ್ನೂ ಬಿಡದೇ ಮೈಕ್ರೋಸ್ಕೋಪ್, ಟೆಲಿಸ್ಕೋಪ್ ಹಿಡಿದು ಹುಡುಕುವಂತೆ ಹುಡುಕಿದ್ರೂ ಒಬ್ಬರೂ ಅಲ್ಲಿ ಸಿಗಲಿಲ್ಲ. ಶಾನೇ ಬೇಜಾರಾಗಿಬಿಡ್ತು. ನನಗೆ ವಹಿಸಲಾದ ಕೆಲಸ ಮಾಡಲಾಗಲಿಲ್ಲವಲ್ಲಾ ಎಂದು!

...

ಚಿತ್ರ ಮೂರು.
ಆದರೆ ಈ ಹೋರಾಟದಲ್ಲಿ ಭಾಗವಹಿಸಿದ್ದ ಬಡತನದ ಹಿನ್ನೆಲೆಯ ಒಬ್ಬ ಹುಡುಗ ಸಿಕ್ಕಿದ. ಆತ ನಮ್ಮದೇ ಕಂಪನಿಯಲ್ಲಿ ಈ ಹಿಂದೆ ಆಫೀಸ್ ಬಾಯ್ ಆಗಿದ್ದವನು.ವನಿಗೆ ಮಾತನಾಡಿಸಿದೆ. ''ಸಾರ್, ಅಣ್ಣಾ ಅವರನ್ನು ಅರೆಸ್ಟ್ ಮಾಡಿದಾರೆ ಅಂದ ತಕ್ಷಣ ತಡೆಯೋಕಾಗ್ಲಿಲ್ಲ ಸಾರ್. ಹಿಂದೆ ಮುಂದೆ ನೋಡದೆ ಹೋಗಿ ಫ್ರೀಡಂ ಪಾರ್ಕ್‌ನಲ್ಲಿ ಉಪವಾಸ ಕುಳಿತವರ ಜೊತೆ ನಾನೂ ಸೇರಿಕೊಂಡೆ. ಮಾರನೆ ದಿನ ಎಲ್ಲೋ ಒಂದು ಖಾದಿ ಅಂಗಿ ಹೊಂದಿಸಿಕೊಂಡು ಹೋದೆ ಸಾರ್. ಮೂರು ದಿನ ಉಪವಾಸ ಮಾಡಿದೆ. ಆಮೇಲೆ ಆಗಲಿಲ್ಲ. ಈ ಮಧ್ಯೆ ನನ್ನ ಮೊಬೈಲ್ ಸ್ವಿಚ್ ಆಫ್ ಆಗಿತ್ತು. ಆಮೇಲೆ ಅದು ಹೇಗೋ ಚಾರ್ಜ್ ಮಾಡಿಕೊಂಡು ಆನ್ ಮಾಡುವಷ್ಟರಲ್ಲಿ ನಾನಿದ್ದ ಹೋಟೆಲ್‌ನ ಓನರ್ ಕಾಲ್ ಮಾಡಿ ನಾಳೆಯಿಂದ ಕೆಲಸಕ್ಕೆ ಬರ‍್ಬೇಡ ಅಂದುಬಿಟ್ಟ ಸಾರ್. ..ಪ್ಲೀಸ್..ಈಗ ನಂಗೆ ಕೆಲಸ ಇಲ್ಲ.ಎಲ್ಲಾದ್ರೂ  ಏನಾದ್ರೂ ಕೆಲಸ ಇದ್ರೆ ನೋಡಿ ಸಾರ್"
ನಾನು ಕೇಳಿದೆ-

'ನೀನು ಮೊದಲೇ ಹೇಳಿರಲಿಲ್ವಾ?'

'ಇಲ್ಲ ಸಾರ್. ಹೇಳಿದ್ರೆ ಆವಾಗ್ಲೇ ಹೇಳಿರೋರು. ಆಮೇಲೆ ಬರಬೇಡ ಅಂತ. ನಮ್ಮಂತೋರಿಗೆ ಯಾವ ಕಿಮ್ಮತ್ತು ಸಾರ್?'
...
ವಂದೇ ಮಾತರಂ, ಬೋಲೋ ಭಾರತ್ ಮಾತಾ ಕೀ ಜೈ... ಕೂಗುತ್ತಾ ಒಂದು ಕೈಯಲ್ಲಿ ಬಾವುಟ ಹಿಡಿದು ಎರಡೂ ಕೆನ್ನೆಗಳ ಮೇಲೆ ಮೂರು ಬಣ್ಣಗಳನ್ನು ಹಚ್ಚಿಕೊಂಡು ಫೋಟೋಗೆ ಫೋಸು ನೀಡುತ್ತಿದ್ದ ಮುಖಗಳು ಕಣ್ಣ್ಣೆದುರು ಬಂದಂಗಾಯ್ತು....


ಹೊಸತು - ಹಳತು : ಬುದ್ದ ತತ್ವ

ಲೋಕದ ಪ್ರತಿಯೊಂದೂ ಎಡೆಬಿಡದ ಚಲನೆಯಲ್ಲಿದೆ. ಕೆಲವೊಮ್ಮೆ ಬರಿಗಣ್ಣಿಗೆ ಚಲಿಸದೇ ಜಡವಾಗಿವೆ ಎಂದು ತೋರುವ ಪ್ರತಿಯೊಂದೂ ಚಲನೆಯಲ್ಲಿದೆ. ಒಂದು ಮರದ ತುಂಡು, ಕಬ್ಬಿಣದ ಬಿಲ್ಲೆ,...

ಮರದೊಂದು ಎಲೆ ನಾನು..

ನನ್ನ ಫೋಟೋ
A Writer, Researcher, Journalist and Activist. Born and brought up from Kugwe a village near Sagara, Shimoga district of Karnataka state. Presently working as the Editor In Chief of PEEPAL MEDIA /PEEPAL TV.