ಮೇ 28, 2012

ಫೇಸ್ ಥ್ರೀ ಫೇಸ್!




ಇದು ಮೂರು ವ್ಯಕ್ತಿಗಳ ಆರು ಮುಖಗಳ ಕತೆ. ಮೊನ್ನೆಯಷ್ಟೇ  ಶಾಂತಿನಗರದ 'ಗ್ಯಾಲರಿ ಸುಮುಖ’ದಲ್ಲಿ  ಮುಕ್ತಾಯವಾದ  ’ಫೇಸ್ ಟೂ ಫೇಸ್’ (Face 2 Face)  ಛಾಯಾಚಿತ್ರ ಹಾಗೂ ವಿಡಿಯೋ ಪ್ರದರ್ಶನದ ವೇಳೆ ಕಂಡ ಮುಖಗಳಿವು.

ಫೇಸ್ ವನ್:
ಆ ವ್ಯಕ್ತಿ ಹೆಸರು ಬಗಡೆ ಹಳ್ಳಿ ಬಸವರಾಜು. ವೃತ್ತಿಯಲ್ಲಿ ಶಿಕ್ಷಕ ಪ್ರವೃತ್ತಿಯಲ್ಲಿ ಗಾಂಧೀಜಿ. ಅದೇ ಮಹಾತ್ಮ ಗಾಂಧೀಜೀನೇ!. ಗಾಂಧೀಜಿಯವರ ತತ್ವಗಳಿಂದ ಪ್ರೇರಿತನಾಗಿದ್ದ ಈ ಯುವಕ ಅವನ್ನು ಜನಮಾನಸದಲ್ಲಿ ಮತ್ತಷ್ಟು ದಟ್ಟಗೊಳಿಸಲು ಆಯ್ಕೆ ಮಾಡಿಕೊಂಡ ದಾರಿ ವಿಶಿಷ್ಟವಾದದ್ದು. ಅದೆಂದರೆ ಗಾಂಧೀಜಿಯವರನ್ನು ಹೋಲುವಂತೆಯೇ ಮೈತುಂಬಾ ಬೆಳ್ಳಿಯ ಬಣ್ಣ ಬಳಿದುಕೊಂಡು ಗಾಂಧೀಜಿಯವರ ಜೀವಂತ ವಿಗ್ರಹದಂತೆ  ಕೋಲೊಂದನ್ನು ಹಿಡಿದು ಜನರ ಮಂದೆ ಓಡಾಡುವುದು. ಈ ವೇಶದಲ್ಲಿ ಬಸವರಾಜ್ ನಾನಾ ಸಾರ್ವಜನಿಕ ಸಮಾರಂಭಗಳಲ್ಲಿ ಮೆರವಣಿಗೆಗಳಲ್ಲಿ ಪಾಲ್ಗೊಂಡಿದ್ದಾರೆ. ಈ ’ಗಾಂಧೀ’ ಬಸವರಾಜ್‌ರನ್ನು ಕಂಡು ಜನರು ಗೌರವಿಸಿದ್ದಿದೆ, ಕೈ ಮುಗಿದಿದ್ದಿದೆ, ಅಪಹಾಸ್ಯ ಮಾಡಿ ಚುಡಾಯಿಸಿದ್ದಿದೆ, ವಿಚಿತ್ರವಾಗೊ ನೋಟ ಬೀರಿದ್ದೂ ಇದೆ. ಆದರೆ ಈ ಎಲ್ಲಾ ಪ್ರತಿಕ್ರಿಯೆಗಳಿಗೂ ಬಸವರಾಜ್‌ದು ಒಂದೇ ಉತ್ತರ. ಅದೇ ಗಾಂಧೀ ಸ್ಮೈಲು

ಫೇಸ್ ಟೂ:
ಈ ವ್ಯಕ್ತಿಯ ಹೆಸರು ವಿದ್ಯಾಸಾಗರ. ತಮ್ಮ ಯೌವನದಿಂದಲೂ ಇವರಿಗೆ ತಮಿಳು ನಟ ಎಂ.ಜಿ.ಆರ್ ಅವರನ್ನು ಕಂಡರೆ ವಿಚಿತ್ರ ಅಭಿಮಾನ. ತಮ್ಮ ಶಾಲಾ ಕಾಲೇಜು ದಿನಗಳಿಂದಲೇ ಎಂ.ಜಿ.ಆರ್‌ರನ್ನು ಅನುಕರಿಸಲು ತೊಡಗಿದವರು. ಮಾತ್ರವಲ್ಲ ಒಂದು ಬಗೆಯ ಗೀಳನ್ನೇ ಹಚ್ಚಿಕೊಂಡು ಬಿಟ್ಟರು. ಎಂಜಿಆರ್ ರಂತೆಯೇ ಮಾತು, ನಡಿಗೆ, ಉಡುಗೆ, ತೊಡುಗೆ, ಕೊನೆಗೆ ಕೂದಲು ಬಾಚಿಕೊಳ್ಳುವುದೂ ಎಂಜಿಆರ್ ತರಾನೇ. ನಂತರ ವಿದ್ಯಾಸಾಗರ್ ಸಿವಿಲ್ ಇಂಜಿನಿಯರ್ ಆದರು. ಆಗಲೂ ಈ ಗೀಳು ಬಿಡಲಿಲ್ಲ. ಇಂದಿಗೂ ಬಿಟ್ಟಿಲ್ಲ. ’ನನಗೆ ಎಂಜಿಆರ್ ಎಂದರೆ ನನಗೆ ಜೀವ, ಅವರು ಬೇರೆ ನಡರಂತಲ್ಲ್ಲ. ತಾವು ಸಿನಿಮಾದಲ್ಲಿ ದುಡಿದಿದ್ದೆಲ್ಲವನ್ನೂ ಬಡ ಬಗ್ಗರಿಗೆ ಹಂಚಿದ ಮಹಾತ್ಮ. ಅವರನ್ನು ಬಿಟ್ಟರೆ ಕನ್ನಡದಲ್ಲಿ ನನಗೆ ಇಷ್ಟವಾಗುವುದು ಡಾ. ರಾಜ್‌ಕುಮಾರ್ ಮಾತ್ರ’ ಎಂದು ಅರೆ ಬರೆ ಇಂಗ್ಲಿಷಿನಲ್ಲಿ ಎಂಜಿಆರ್ ಶೈಲಿಯಲ್ಲೇ ಹೇಳುತ್ತಾರೆ ವಿದ್ಯಾಸಾಗರ್.


ಫೇಸ್ ಥ್ರೀ:
ಇವರ ಹೆಸರು ಶಿವರಾಜು ಬಿ. ಎಸ್ ವೃತ್ತಿಯಲ್ಲಿ ಪೊಲೀಸ್. ಹಾಗಾಗಿ ಇವರು ಕಾಪ್ ಶಿವ. ಪ್ರವೃತ್ತಿಯಲ್ಲಿ ಛಾಯಾಗ್ರಾಹಕ. ಮೇಲಿನ ಎರಡೂ ವ್ಯಕ್ತಿಗಳ ಅಭಿನಯಗಳನ್ನು ಅದ್ಭುತವೆನ್ನುವಂತೆ ತನ್ನ ಕ್ಯಾಮೆರಾದಲ್ಲಿ ಸೆರೆಹಿಡಿದಿರುವ ಕಾಪ್ ಶಿವ ಕೂಡಾ ಒಮ್ಮೆ ಪೊಲೀಸ್ ಆಗಿ ಮತ್ತೊಮ್ಮೆ ಛಾಯಾ ಚಿತ್ರ ಕಲಾವಿದನಾಗಿ ದ್ವಿಪಾತ್ರದಲ್ಲಿ ಬದುಕು ನಡೆಸುತ್ತಿದ್ದಾರೆ. ಪೊಲೀಸ್ ವೃತ್ತಿಯ ಒತ್ತಡದಲ್ಲಿ ತಮ್ಮೊಳಗಿನ ಕಲಾವಿದನನ್ನು ಪೊರೆಯುವುದು ಅಷ್ಟು ಸುಲಭದ ಮಾತಲ್ಲ. ಆದರೆ ಕಷ್ಟವನುಂಡೇ ಬೆಳೆದಿರುವ ಶಿವರಾಜು ಅವರಲ್ಲಿರುವ ಕಲಾವಿದನ ಬದ್ಧತೆ, ಆಸಕ್ತಿ ಅವರಿಗೆ ವಿಶೇಷ ಶಕ್ತಿ ನೀಡಿರಿಲಿಕ್ಕೂ ಸಾಕು. ಮೊದಮೊದಲಿಗೆ ಯಾವುದೇ ತರಬೇತಿಯನ್ನೂ ಪಡೆಯದೆ ಫೋಟೊಗ್ರಫಿಗಿಳಿದ ಶಿವ ಕ್ರಮೇಣ ಹಿರಿಯ ಛಾಯಾಗ್ರಾಹಕರ ಸಲಹೆ ಸಹಕಾರಗಳ ಮೂಲಕ ತನ್ನದೇ ಛಾಪನ್ನು ಒತ್ತಿದ್ದಾರೆ. ರಾಜ್ಯ, ದೇಶಗಳ ಗಡಿಯಾಚೆಗೂ ಕಾಪ್ ಶಿವ ಅವರ ಚಿತ್ರಗಳು ಪ್ರದರ್ಶನಗೊಂಡಿವೆ. ಪ್ರಾಯಶಃ ತಾನು ಈ ರೀತಿ ತನ್ನ ವೃತ್ತಿ ಮತ್ತು ಪ್ಯಾಷನ್‌ಗಳನು ನಿಭಾಯಿಸುವ ಸಂಘರ್ಷದಲ್ಲೇ ಕಾಪ್ ಶಿವ ಅವರಿಗೆ ತನ್ನಂತೆಯೇ ಇರುವ ಮೇಲಿನ ಎರಡು ಅದ್ಭುತ ವ್ಯಕ್ತಿತ್ವಗಳ ಕುರಿತು ಆಲೋಚಿಸುವಂತಾಗಿ ತನ್ನ ಕ್ಯಾಮೆರಾ ಕಣ್ಣನ್ನು ಆ ಕಡೆ ತಿರುಗಿಸುವಂತೆ ಮಾಡಿರಬಹುದು.


ಮೊನ್ನೆ ಈ ಚಿತ್ರ ಪ್ರದರ್ಶನ ಇನ್ನು ಕೇವಲ ಒಂದೇ ದಿನ ಬಾಕಿ ಇರುವಾಗ ನಾನು ಹೋದೆ. ’ಛೇ! ಮಿಸ್ ಮಾಡ್ಕೊಂಡು ಬಿಡ್ತಾ ಇದ್ನಲ್ಲಾ' ಎನ್ನಿಸಿತು.


ಡಬ್ಬಿಂಗ್ : ‘ಗುಮ್ಮ’ನೂ ಅಲ್ಲ ‘ಅಮ್ಮ’ನೂ ಅಲ್ಲ



(ದ ಸಂಡೆ ಇಂಡಿಯನ್ ಪಾಕ್ಷಿಕದಲ್ಲಿ ಪ್ರಕಟವಾದ ಮುಖಪುಟ ಲೇಖನ)

ಡಬ್ಬಿಂಗ್ ‘ಗುಮ್ಮ’ ಮತ್ತೆ ಎದುರಾಗಿದೆ. ಡಬ್ಬಿಂಗ್ ಪರವಾಗಿ ವಾದಗಳು, ಮಾತುಗಳು ಹಾಗೂ ‘ಡಬ್ಬಿಂಗ್ ಗುಮ್ಮನ’ ವಿರುದ್ಧವಾದ ವಾದಗಳು ಮತ್ತು ಬೆದರಿಕೆಗಳು ಟೀವಿ, ಪತ್ರಿಕೆ ಮತ್ತು ಸಾಮಾಜಿಕ ತಾಣಗಳಲ್ಲಿ ರಾರಾಜಿಸುತ್ತಿವೆ. ಅದರಲ್ಲೂ ಅಮಿರ್ ಖಾನ್ ಅವರ ಸಾಮಾಜಿಕ ಕಳಕಳಿಯ ‘ಸತ್ಯ ಮೇವ ಜಯತೇ’ ಕಾರ್ಯಕ್ರಮದ ಡಬ್ ಮಾಡಲಾದ ಕನ್ನಡ ಅವತರಣಿಕೆಯನ್ನು  ಸುವರ್ಣ ವಾಹಿನಿಯವರು ಪ್ರಸಾರ ಮಾಡದಂತೆ ನಿರ್ಬಂಧಿಸುವ ಪ್ರಯತ್ನಗಳು ಆರಂಭವಾಗುತ್ತಿದ್ದಂತೆ ಈ ಡಬ್ಬಿಂಗ್ ಬೇಕು-ಬೇಡ ಚರ್ಚೆಗಳು ಜೋರಾಗಿ ನಡೆದಿವೆ. ಇಡೀ ಚರ್ಚೆಯಲ್ಲಿ ಒಂದೋ ಡಬ್ಬಿಂಗ್ ಎಂದರೆ ಕನ್ನಡ ಚಿತ್ರರಂಗವನ್ನು, ಕನ್ನಡ ಭಾಷೆ - ಸಂಸ್ಕೃತಿಗಳನ್ನು ಕ್ಷಣಾರ್ಧದಲ್ಲಿ ತಿಂದು ತೇಗಿ ನೀರು ಕುಡಿದು ಬಿಡುವ ಭಯಂಕರ ಗುಮ್ಮನಂತೆ ತೋರಿಸಲಾಗುತ್ತಿದೆ ಇಲ್ಲವೇ ‘ಗುಮ್ಮನಿಗೆ ಬೆದರಿ ಅಮ್ಮನಿಗೂ ಬಾಗಿಲು ತೆರೆಯದಂತಾಗಿದೆ’ ಎಂದು ಹೇಳುತ್ತಾ ಕನ್ನಡವನ್ನು ಉಳಿಸಿ ಬೆಳೆಸಲು ಇರುವ ಏಕೈಕ ‘ಅಮ್ಮ’ ಈ ಡಬ್ಬಿಂಗ್‌ನ್ನು ಎಂಬಂತೆ ತೋರಿಸಲಾಗುತ್ತಿದೆ. ಇದೆರಡರಲ್ಲಿ ಯಾವುದು ಎಷ್ಟು ಸತ್ಯ? ಯಾವುದು ಎಷ್ಟು ಮಿಥ್ಯ? ಈ ಡಬ್ಬಿಂಗ್ ‘ಬೇಕು- ಬೇಡ’ದ ವಾದ-ವಿವಾದಗಳಲ್ಲಿ ಹೊರಬರುತ್ತಿರುವ ಸತ್ಯಸಂಗತಿಗಳಾದರೂ ಏನು ಎಂದು ಪರಾಂಬರಿಸಲು ಇದು ಸಕಾಲ ಎಂದೆನಿಸುತ್ತದೆ.
ಡಬ್ಬಿಂಗ್ ಪರವಾಗಿ ಮಾತುಬಂದೊಡನೆ ನಮ್ಮ ಚಿತ್ರರಂಗ ಹಿಂದಿನಿಂದಲೂ ಯಾವ ರೀತಿಯಲ್ಲಿ ಪ್ರತಿಕ್ರಿಯಿಸುತ್ತಾ ಬಂದಿದೆಯೋ ಈ ಸಲವೂ ಅದೇ ರೀತಿ ಪ್ರತಿಕ್ರಿಯೆ ಬಂದಿದೆ. ಅದೂ ನಟ ಶಿವಣ್ಣ ಅವರ ‘ಧಮಕಿ’ಶೈಲಿಯ ಮಾತುಗಳ ಮೂಲಕ. ದೊಡ್ಡ ಅಭಿಮಾನಿ ಬಳಗವನ್ನೇ ಹೊಂದಿರುವ ಶಿವಣ್ಣ ಅವರಿಗೆ ಒಬ್ಬ ನಟರಾಗಿ ಅವರನ್ನು ಅತ್ಯಂತ ಮೆಚ್ಚಿಕೊಳ್ಳುವ ಅವರ ಕಟ್ಟಾ ಅಭಿಮಾನಿ ದೇವರುಗಳೂ ಸಹ ಇಂದು ಡಬ್ಬಿಂಗ್ ಪರವಾದ ಅಭಿಪ್ರಾಯ ಹೊಂದಿರಬಹುದಲ್ಲವೇ ಎಂಬ ಸಣ್ಣ ಸಂಶಯವೂ ಅವರಿಗೆ ಇದ್ದಂತಿಲ್ಲ. ಇಂದು ಡಬ್ಬಿಂಗ್ ವಿರುದ್ಧವಾಗಿ ವ್ಯಕ್ತವಾಗುತ್ತಿರುವ ಎಷ್ಟು ಅನಿಸಿಕೆಗಳು ಪ್ರಾಮಾಣಿಕವಾದವು? ಎಷ್ಟು ಆತಂಕಗಳು ವಸ್ತುಸ್ಥಿತಿಯನ್ನಾಧರಿಸಿರುವಂತವು ಎಂಬುದನ್ನೂ ಕೊಂಚ ನೋಡುವ ಅಗತ್ಯವಿದೆ. 
ಮೊದಲನೆಯದಾಗಿ, ಡಬ್ಬಿಂಗ್‌ನಿಂದಾಗಿ ಕನ್ನಡ ಸಿನಿಮಾ ಬೆಳೆಯಲು ಸಾಧ್ಯವಾಗುವುದಿಲ್ಲ ಎಂದು ಅ.ನ.ಕೃಷ್ಣರಾಯರಂತ ಕನ್ನಡ ಸಾಹಿತಿವರೇಣ್ಯರು ನಿಷೇಧಿಸಿದ್ದರು. ಶಿವಣ್ಣರಿಗೆ ಅಪ್ಪಾಜಿಯೂ, ಕೋಟಿ ಕೋಟಿ ಕನ್ನಡಿಗರ ಮೇರುನರೂ ಆದ ಡಾ. ರಾಜ್‌ಕುಮಾರ್ ಅಂತವರು ಇದಕ್ಕಾಗಿ ಹೋರಾಡಿದ್ದರು. ಹೀಗಾಗಿ ಆ ನಿಷೇಧವನ್ನೇ ಇಂದೂ ಮುಂದುವರೆಸಿಕೊಂಡು ಹೋಗಬೇಕೆಂಬುದು ಇವರ ಒತ್ತಾಯ. ನಿಜ. ೧೯೪೦ ರಿಂದ ೧೯೬೦ರ ದಶಕವು ಕನ್ನಡ ಸಿನಿಮಾಗಳೇ ಅತ್ಯಂತ ವಿರಳವಾಗಿದ್ದ ಕಾಲ. ಅಂದು ಸಿನಿಮಾ ನಿರ್ಮಿಸುವವರು ಪರಭಾಷೆಯವರೇ ಆಗಿದ್ದು ಪರಭಾಷೆಗಳಿಂದ ಕನ್ನಡಕ್ಕೆ ಡಬ್ ಆದ ಸಿನಿಮಾಗಳು ಬಿಡುಗಡೆಯಾಗುತ್ತಿದ್ದ ಕಾಲ ಅದು. ಕನ್ನಡ ಸಿನಿಮಾಗಳನ್ನೂ ಬೇರೆಯವರೇ ನಿರ್ಮಿಸಬೇಕಾಗಿತ್ತು. ಅಂದು ಕನ್ನಡ ಕಲಾವಿದರು ತಮ್ಮ ಅಸ್ತಿತ್ವಕ್ಕಾಗಿ ಹರಸಾಹಸಪಡಬೇಕಾಗಿತ್ತು. ಈ ಕಾರಣದಿಂದಾಗಿ ಡಬ್ಬಿಂಗ್ ನಿಷೇಧಿಸಿ ಕನ್ನಡ ಚಿತ್ರರಂಗ ತನ್ನ ಕಾಲಮೇಲೆ ತಾನು ನಿಂತುಕೊಳ್ಳಲು ಅನುವು ಮಾಡಿಕೊಟ್ಟಿದ್ದು ಅನಿವಾರ್ಯವಾದ ಮತ್ತು ಸರಿಯಾದ ಕ್ರಮವೇ ಆಗಿತ್ತು. ನಂತರದ ೫೦ ವರ್ಷಗಳಲ್ಲಿ ಇಂದು ಚಿತ್ರರಂಗ ಬಹು ಎತ್ತರಕ್ಕೆ ಬೆಳೆದು ನಿಂತಿದೆ. ನೂರಾರು ನಟ ನಟಿಯರು ಸಾವಿರಾರು ಕಲಾವಿದರು, ತಂತ್ರಜ್ಞರು ಇಂದು ಹಿರಿತೆರೆ ಮತ್ತು ಕಿರುತೆರೆಗಳನ್ನು ಓಡಿಸುತ್ತಿದ್ದಾರೆ. ಈ ಹೊತ್ತಿನಲ್ಲೂ ನಾಲ್ಕು ದಶಕಗಳ ಹಿಂದೆ ನೀಡಿದ್ದ ಕಾರಣಗಳನ್ನೇ ಇಟ್ಟುಕೊಂಡು ನಮ್ಮವರು ಇಂದಿಗೂ ಡಬ್ಬಿಂಗ್ ವಿರೋಧಿಸುತ್ತಿದ್ದಾರೆಂದರೆ ಎಂಥಹ ಸ್ಥಿತಿ! ಈ ದುಸ್ಥಿತಿಗೆ ನಿಜಕ್ಕೂ ಕಾರಣ ಏನು ಎನ್ನುವುದನ್ನು ಗಂಭೀರವಾಗಿಯೇ ಆಲೋಚಿಸಬೇಕಾಗಿದೆ. 

ಇಂದಿನ ನಮ್ಮ ಚಿತ್ರರಂಗದ ದುರಂತದ ದುಸ್ಥಿತಿಯೇ ಎಲ್ಲವನ್ನೂ ಹೇಳುತ್ತದೆ. ನಮ್ಮಲ್ಲಿ ಈಗ ಬಿಡುಗಡೆಯಾಗುತ್ತಿರುವ ಸಿನಿಮಾಗಳಲ್ಲಿ ರಿಮೇಕ್ ಸಿನಿಮಾಗಳೇ ಬಹುತೇಕವೇ ಎನ್ನುವುದಕ್ಕೆ ಸಾಕ್ಷಿ ಪುರಾವೆ ಏನೂ ಬೇಕಿಲ್ಲ ತಾನೇ? ಶಿವರಾಜ್ ಕುಮಾರ್‌ನಂತಹ ನಟ ಮಾತ್ರ ತಾನು ರಿಮೇಕ್ ಚಿತ್ರಗಳಲ್ಲಿ ನಟಿಸುವುದಿಲ್ಲ ಎಂದು ನಿರ್ಧರಿಸಿರಬಹುದು. ಆದರೆ ಕನ್ನಡದ ಬಹುತೇಕ ನಿರ್ಮಾಪಕರು, ನಿರ್ದೇಶಕರ ಚಿತ್ರಕತೆಗಳ ಕತೆ ಬೇರೆಯದೇ. ಕಳೆದ ಕೆಲವು ವರ್ಷಗಳಲ್ಲಿ ಬಿಡುಗಡೆಯಾಗಿರುವ ಸಾಲು ಸಾಲು ಸಿನಿಮಾಗಳಲ್ಲಿ ಇವರು ಹೇಳುವ ‘ಕನ್ನಡತನ’ ಏನಿದೆ ಎಷ್ಟಿದೆ ಎಂದು ನೊಡಿದರೆ ನಿರಾಸೆಯಾಗುತ್ತದೆ. ‘ತಮಿಳಿನ ‘ಸುಬ್ರಹ್ಮಣ್ಯಪುರಂ’ನ್ನು ‘ಅಡ್ಡ’ ಹೆಸರಿನಲ್ಲಿ ಕೊಳ್ಳೆಗಾಲದಲ್ಲಿ ಚಿತ್ರೀಕರಿಸಿದೊಡನೆ ಅದಕ್ಕೆ ಕನ್ನಡತನ ಬರುವುದು ಸಾಧ್ಯವಾ? ಕೆಲ ಸಿನಿಮಾಗಳಲ್ಲಂತೂ ಮುಖಗಳು ಮಾತ್ರ ಈ ರಾಜ್ಯದವರು ಎಂಬುದನ್ನು ಬಿಟ್ಟರೆ ಚಿತ್ರಕತೆ, ನಿರೂಪಣೆ, ಸೆಟ್, ಪ್ರತಿಯೊಂದು ಕನ್ನಡಿಗರಿಗೆ ಪರಕೀಯವೇ ಆಗಿರುತ್ತದೆಯಲ್ಲವೇ?. ಸುದೀಪ್, ದರ್ಶನ್, ಉಪೇಂದ್ರgಂತವರು ನಡಿಸುವ ರಿಮೇಕ್ ಸಿನೆಮಾಗಳನ್ನು ನೋಡುತ್ತಿದ್ದರೆ ಈ ನಟರನ್ನು ಹಾಕಿಕೊಂಡು ತಮಿಳು ಅಥವಾ ತೆಲುಗಿನವರು ತೆಗೆದ ಸಿನಿಮಾಗಳನ್ನೇ ‘ಡಬ್ಬಿಂಗ್’ ಮಾಡಿ ತೋರಿಸಲಾಗುತ್ತಿದೆ ಎಂದು ಅನ್ನಿಸದಿದ್ದರೆ ಕೇಳಿ. ಇವರಲ್ಲಿ ಯಾರಾದರೂ ಕನ್ನಡ ಸಿನೆಮಾವನ್ನು ಕನ್ನಡದ ನೆಲದ ಸೊಗಡಿಗೆ ತಕ್ಕಂತೆ ಉಳಿಸಿ ಬೆಳೆಸುವ ರಿಸ್ಕ್ ತೆಗೆದುಕೊಳ್ಳಲು ತಯಾರಿದ್ದಾರಾ? ಕೇವಲ ಹಣಕ್ಕಾಗಿ ಮತ್ತು ಕೆಲಸಕ್ಕಾಗಿ ‘ಕನ್ನಡತನವನ್ನೇ’ ಹರಾಜಿಗಿಟ್ಟಿರುವ ದಂಧೆಯಲ್ಲವಾ ಈ ರಿಮೇಕ್ ದಂಧೆ? ಈ ರಿಮೇಕ್ ದಂಧೆಯಲ್ಲಿ ಲಾಭದ ರುಚಿ ನೋಡಿರುವ ನಿರ್ಮಾಪಕ, ನಿರ್ದೇಶಕರು, ನಟರು ಒಂದೊಮ್ಮೆ ‘ಡಬ್ಬಿಂಗ್’ಗೆ ಅವಕಾಶವಾದರೆ ಈಗ ಕೈ ಹತ್ತಿರುವ ಇಂತಹ ಸುಲಭದ ಲಾಭದ ದಾರಿಯೇ ಮುಚ್ಚೀ ಹೋಗುತ್ತದಲ್ಲಾ ಎಂದು ಯೋಚಿಸಿಯೇ ಈಗ ಒಂದಾಗುತ್ತಿದ್ದಾರೆ ಎಂಬ ಗುಮಾನಿ ಜನರಲ್ಲಿದ್ದರೆ ಅದಕ್ಕೆ ಯಾರು ಕಾರಣ? ಡಬ್ಬಿಂಗ್‌ಗೆ ಇಷ್ಟು ದೊಡ್ಡ ದನಿಯಲ್ಲಿ ವಿರೋಧ ಪಡಿಸುತ್ತಿರುವವರು ಸಿನಿಮಾಗಳಲ್ಲಿ ಕನ್ನಡತನವನ್ನು ಕೊಲೆ ಮಾಡುತ್ತಿರುವ ರಿಮೇಕ್ ಚಿತ್ರಗಳನ್ನೂ ತಿರಸ್ಕರಿಸುವ ಘೋಷಣೆ ಹೊರಡಿಸಲಿ. ಇದು ಇವರಿಂದ ಸಾಧ್ಯವೇ?
ಎರಡನೆಯದಾಗಿ, ಟೀವಿ ಚರ್ಚೆಗಳಲ್ಲಿರಬಹುದು ಅಥವಾ ಬೇರೆಡೆ ಇರಬಹುದು ನಮ್ಮ ಸಿನಿಮಾದ ಮಂದಿ ‘ಡಬ್ಬಿಂಗ್’ ವಿರೋಧಿಸಲು ನೀಡುತ್ತಿರುವ ಅತ್ಯಂತ ಬಾಲಿಶ ಮತ್ತು ಹಾಸ್ಯಾಸ್ಪದ ಕಾರಣ ಎಂದರೆ ಡಬ್ಬಿಂಗ್‌ನಿಂದ ಕನ್ನಡ ಸಂಸ್ಕೃತಿ ಹಾಳಾಗುತ್ತದೆ ಹಾಗೂ ಕನ್ನಡ ಭಾಷೆ ಹಾಳಾಗುತ್ತದೆ. ಹೀಗೆ ಮಾತನಾಡುವಾಗ ಅವರಿಗೆ ತಾವು ಏನು ಮಾತನಾಡುತ್ತಿದ್ದೇವೆ ಎಂಬ ಅರಿವೂ ಇದ್ದಂತಿರುವುದಿಲ್ಲ. ಯಾಕೆಂದರೆ ಕಳೆದ ಹತ್ತಾರು ವರ್ಷಗಳಲ್ಲಿ ಕನ್ನಡಿಗರ ಅಭಿರುಚಿ, ಭಾಷೆ ಸಂಸ್ಕೃತಿಗಳೇನಾದರೂ ಪಾತಾಳಕ್ಕೆ ಸೇರಿದ್ದರೆ ಅದಕ್ಕೆ ಇತರೆಲ್ಲ ಸಾಮಾಜಿಕ ರಾಜಕೀಯ ಕಾರಣಗಳ ಜೊತೆಗೆ ನಮ್ಮ ಚಿತ್ರರಂಗದ ಕೊಡುಗೆಯೂ ಬಹಳಷ್ಟಿದೆ ಎಂಬುದರ ಆತ್ಮಾವಲೋಕನಕ್ಕೆ ನಮ್ಮವರು ತಯಾರಿದ್ದಾರಾ? ಲಾಗಾಯ್ತಿನಿಂದಲೂ ಎಂದಿಗೂ ಮಚ್ಚು ಲಾಂಗು ರೌಡಿಸಂಗಳು ಕನ್ನಡದ ಉತ್ತಮ ಸಂಸ್ಕೃತಿಯ ಭಾಗವಾಗಿರಲಿಲ್ಲ. ಆದರೆ ‘ಓಂ’ ಸಿನಿಮಾದಿಂದ  ಶುರುವಾಗಿ ಇಂದಿನವರೆಗೂ ಬಂದಿರುವ ಈ ಕಡಿ-ಕೊಚ್ಚು ಹೊಡಿಮಗ ಹೊಡಿಮಗ ಸಂಸ್ಕೃತಿಯನ್ನು ಬಿಂಬಿಸುವ ಸಿನಿಮಾಗಳು ನಾಡಿನ ಎಷ್ಟು ಯುವಕರನ್ನು ಹಾದಿ ತಪ್ಪಿಸಿವೆ, ಎಷ್ಟು ಕೊಲೆ ಸುಲಿಗೆಗಳಿಗೆ ಪ್ರಚೋದಿಸಿವೆ ಎಂಬುದರ ಲೆಕ್ಕವನ್ನು ಗಳಿಸಿದ ಹಣದ ಲೆಕ್ಕದಂತೆ ಇಟ್ಟಿದ್ದಾರಾ ಸಿನಿಮಾ ಮಂದಿ? ಸಮಾಜದ ದೌರ್ಬಲ್ಯಗಳಿಗೇ ಹೆಂಡ ಕುಡಿಸುವ ‘ಉಪೇಂದ್ರ’, ಹಲವಾರು ಹೆಣ್ಣುಮಕ್ಕಳ ಕಣ್ಣೀರಿಗೆ ಕಾರಣವಾದ ‘ಪ್ರೀತ್ಸೆ’ಯಂತಹ ಸಿನೆಮಾಗಳು ತರುಣರ ಮೇಲೆ ಬೀರಿದ ಅಡ್ಡ ಪರಿಣಾಮಗಳ ಬಗ್ಗೆ ಯೋಚಿಲು ಇವರಿಗೆ ಪುರುಸೊತ್ತು ಸಿಕ್ಕಿದೆಯಾ? ಅತ್ತ ಕಿರುತೆರೆಯಲ್ಲಿ ತೆಗೆದುಕೊಂಡರೂ ವರ್ಷಗಟ್ಟಲೆ ಮೆಲ್ಲಗೆ ಕಾಲು ಹಾಕುವ ಮೇಲ್ಮಧ್ಯಮ ವರ್ಗದ ಕುಟುಂಬಗಳಲ್ಲಿನ ಕತೆಗಳೇ ತುಂಬಿರುವ ಮೆಗಾ ಸೀರಿಯಲ್ ಧಾರಾವಾಹಿಗಳು ಬಿಂಬಿಸುತ್ತಿರುವ ‘ಸಂಸ್ಕೃತಿ’ಯಾವುದು? ಹೆಣ್ಣನ್ನು ದುಷ್ಟತೆಯ ಸಂಕೇತವನ್ನಾಗಿಸಿಬಿಟ್ಟಿರುವ ಈ ಬಹುತೇಕ ಧಾರವಾಹಿಗಳು ‘ಕನ್ನಡ ಸಂಸ್ಕೃತಿ’ಯನ್ನು ಪೊರೆಯುತ್ತಿವೆಯಾ?  ಟಿ. ಎನ್. ಸೀತಾರಾಂ, ಮತ್ತೊಂದಿಬ್ಬರನ್ನು ಬಿಟ್ಟರೆ ಇತರರಿಗೆ ಅನೈತಿಕ ಸಂಬಂಧ, ಮೌಢ್ಯ ಮಾಟ ಮಂತ್ರ ಬಿಟ್ಟರೆ ಬೇರೆ ವಿಷಯಗಳೇ ನಾಡಿನಲ್ಲಿ ಸಿಗುವುದಿಲ್ಲವೇ? 

ಭಾಷೆಯ ವಿಷಯಕ್ಕೆ ಬಂದರೂ ಇವರು ಹೇಳುವಂತೆ ನಮ್ಮ ಕನ್ನಡ ಚಿತ್ರಗಳು ಕನ್ನಡ ನುಡಿಯ ಬೆಳವಣಿಗೆಗೆ 
ನೆರವಾಗುತ್ತಿದೆಯಾ ಎಂದು ನೋಡಿದರೆ ನಿರಾಸೆಯಾಗುತ್ತದೆ. ಡಗಾರು, ಫಿಗರ್ರು, ಮಚ್ಚ, ಇಂತಹ ಕೀಳು ದರ್ಜೆಯ ಪದಗಳೇ ಇದುವರಗೆ ಚಿತ್ರರಂಗ ನೀಡಿರುವ ಬಳುವಳಿಗಳು. ಅಪ್ಪಾ ಲೂಸಾ, ಅಮ್ಮಾ ಲೂಸಾ, ಹಳೇ ಕಬ್ಣಾ ಹಳೇ ಪೇಪರ್‌ಗಳ ನಡುವೆ ಕಾಯ್ಕಿಣಿಯಂತವರ ಇತ್ತೀಚಿನ ಮುಂಗಾರು ಮಳೇ ಸಿನಿಮಾ ಹಾಡುಗಳು ಶವಕ್ಕೆ ಮಾಡಿದ ಶೃಂಗಾರದಂತಾಗಿದೆ ಅಷ್ಟೆ.  
ಇದೇ ಹೊತಿನಲ್ಲಿ ನಾವು ಒಂದು ಮುಖ್ಯ ಪ್ರಶ್ನೆಯನ್ನು ಕೇಳಿಕೊಳ್ಳಬೇಕು. ಹಾಗಂತ ಕಳೆದ ಐದು ಹತ್ತು ವರ್ಷಗಳಲ್ಲಿ ಕನ್ನಡದ್ದೇ ಮಣ್ಣಿನ ಉತ್ತಮ ಸಿನಿಮಾಗಳನ್ನು ಸೃಷ್ಟಿವ ನಿಟ್ಟಿನಲ್ಲಿ ಸಾಹಿತ್ಯ ಬಂದಿಲ್ಲವಾ? ವರ್ಷಂಪ್ರತಿ ರಚನೆಯಾಗುವ ಸಾವಿರಾರು ಕತೆ ಕಾದಂಬರಿಗಳಲ್ಲಿ ಒಳ್ಳೆಯ ಜನ ನೋಡುವ ಸಿನಿಮಾಗಳಿಗೆ ಕತೆಗಳೇ ದಕ್ಕಿಲ್ಲವೇ? ನಾಗತಿಹಳ್ಳಿಯಂತವರು ಬಿಟ್ಟರೆ ಬೇರಾರಿಗೂ ಈ ಪ್ರಯತ್ನಗಳೇ ಒಗ್ಗುವುದಿಲ್ಲ ಯಾಕೆ? ಎಷ್ಟೇ ದುಡ್ಡು ಚೆಲ್ಲಲಿ ಸಿನಿಮಾಗಳು ನೆಲಕಚ್ಚುವುದೇ ಖಾಯಂ ಆಗಿದ್ದಾಗ ಇಂತಹ ನಮ್ಮ ನೆಲದ ಪ್ರಯತ್ನಗಳಿಗೆ ಇವರೇಕೆ ಮನಸ್ಸು ಮಾಡುವುದಿಲ್ಲ? ಈ ನೆಲದ ತಾಜಾತನವನ್ನುಳಿಸಿಕೊಳ್ಳುವ ಚಿತ್ರಕತೆ ಬರೆಯುವಂತವರಿಗೆ ನಾಡಿನಲ್ಲಿ ಬರವಿದೆಯೋ ಅಥವಾ ಅಂಥವರನ್ನು ಹುಡುಕಿ ಪ್ರೋತ್ಸಾಹಿಸಲು ನಮ್ಮ ನಿರ್ಮಾಪಕರ ತಲೆಯಲ್ಲಿರುವ ‘ದುಡ್ಡಿನ ದೆವ್ವ’ ಬಿಡುತ್ತಿಲ್ಲವೋ? ಹೀಗೆ ಸಂಸ್ಕೃತಿ-ಭಾಷೆಗಳ ವಿಷಯಕ್ಕೆ ಬಂದರೆ ನಮ್ಮ ನಿರ್ಮಾಪಕರಿಗಾಗಲೀ ನಿರ್ದೇಶಕರಿಗಾಗಲೀ ಮಾತನಾಡಲು ಮುಖವಿಲ್ಲದಂತಾಗುತ್ತದೆ. ಆದರೆ ಡಬ್ಬಿಂಗ್ ವಿಷಯಕ್ಕೆ ಬಂದೊಡನೆ ಸಂಸ್ಕೃತಿ ರಕ್ಷಣೆಯ ಮಾತು ಬರಲು ಹೇಗೆ ಸಾಧ್ಯ? ಡಬ್ಬಿಂಗ್‌ನ್ನು ’ಸಂಸ್ಕೃತಿ ಆಚರಣೆ ದೇಸೀಯತೆ ಮತ್ತು ಕನ್ನಡತನಗಳನ್ನು ನಾಶಮಾಡಿಬಿಡುವಂತಹ ಸುನಾಮಿ’ ಎಂದು ಹೇಳುವವರು ಡಬ್ಬಿಂಗ್ ಇಲ್ಲದೆಯೇ ಇವೆಲ್ಲವೂ ಈಗಾಗಲೇ ಸರ್ವನಾಶ ಮಾಡಿರುವ ಚಂಡಮಾರುತ ಯಾವುದು ಎಂದು ತಿಳಿಸಿಕೊಡಬೇಕು.  

ಕನ್ನಡ ಚಿತ್ರರಂಗದಲ್ಲಿ ‘ಕನ್ನಡತನ’ವೆನ್ನುತ್ತಿದ್ದಂತೆಯೇ ಮತ್ತೊಂದು ವಿಷಯವನ್ನೂ ಪರಿಗಣಿಸೋಣ. ನಯನತಾರಾ (ಸೂಪರ್), ಸದಾ (ಮೈಲಾರಿ), ಭಾವನಾ (ಜಾಕಿ, ವಿಷ್ಣುವರ್ಧನ, ರೋಮಿಯೋ), ಚಾರ್ಮಿ (ದೇವ್), ಭಾವನಾ), ನಿಖಿತಾ (ನಾರಿಯ ಸೀರೆಕದ್ದ, ಸಂಗೊಳ್ಳಿ ರಾಯಣ್ಣ), ನಮಿತಾ (ಹೂ), ಸುಮಿತ್ ಕೌರ್ (ಜೋಗಯ್ಯ), ಕರಿಷ್ಮಾ ತನ್ನಾ (ಸಾರಿ...ಮತ್ತೆ ಪ್ರೀತ್ಸೋಣ ), ಮಂಜರಿ (ಮುಂಜಾನೆ), ರೋಮಿಯೋ (ಭಾವನಾ), ಭಾಮಾ (ಶೈಲು), ಸಮೀರಾ ರೆಡ್ಡಿ (ವರದನಾಯಕ), ಆಕಾಂಕ್ಷಾ ಭಟ್ (ದಶಮುಖ), ಇಲಿಯಾನಾ (ಹುಡುಗಾ ಹುಡುಗಿ), ಉದಯತಾರಾ (ಪ್ರೀತ್ಸೆ ಪ್ರೀತ್ಸೆ), ಸಲೋನಿ (ತೀರ್ಥ, ಬುದ್ಧಿವಂತ), ಪಾರ್ವತಿ ಮೆನನ್ (ಮಿಲನ, ಮಳೆಯೂ ಬರಲಿ ಮಂಜೂ ಇರಲಿ, ಅಂದರ್ ಬಾಹರ್), ಇವರೆಲ್ಲ ನಮ್ಮ ಸೂಪರ್ ಸ್ಟಾರ್‌ಗಳ ಫೇಮಸ್ ಸಿನಿಮಾಗಳ ಹೀರೋಯಿನ್‌ಗಳು! ಇವರನ್ನೆಲ್ಲಾ ಚಿತ್ರಗಳಲ್ಲಿ ತೊಡಗಿಸುವಾಗ ಕನ್ನಡದ ಪ್ರತಿಭಾವಂತ ನಟಿಯರೇಕೆ ಇವರ ಕಣ್ಣೀಗೆ ಬೀಳುವುದಿಲ್ಲ? ರಾಜೇಶ್ ಕೃಷ್ಣನ್‌ನಂತಹ ಅದ್ಭುತ ಗಾಯಕರನ್ನು ಕಡೆಗಣಿಸಿ ಸೋನು ನಿಗಮ್, ಶ್ರೇಯಾ, ಕೈಲಾಶ್ ಖೇರ್‌ರಂತಹ ಕನ್ನಡ ಬಾರದವರಿಗೆ ಅವಕಾಶ ನೀಡುವ ಹಕೀಕತ್ತೇನು? ಡಬ್ಬಿಂಗ್ ಬಂದುಬಿಟ್ಟರೆ ಕನ್ನಡದ ಚಿತ್ರ ಕಲಾವಿದರಿಗೆ ಭಾರೀ ಅನ್ಯಾಯವಾಗುತ್ತದೆ ಎಂದು ಆಕಾಶ ಭೂಮಿ ಒಂದು ಮಾಡುವವರ ಅಪ್ರಮಾಣಿಕತೆ ಮತ್ತೆ ಇಲ್ಲಿ ಧುತ್ ಎಂದು ಎದುರಾಗುತ್ತದೆ. 
ಡಬ್ಬಿಂಗ್ ಎನ್ನುವುದು ಒಂದು ನಾಡಿನ ಭಾಷೆಯನ್ನು, ಉದ್ದಿಮೆಯನ್ನು ಹಾಳುಗೆಡವುತ್ತದೆಯೆನ್ನುವುದಾದರೆ ಕನ್ನಡದ ಸಿನೆಮಾಗಳಿಗೂ ಅದೇ ಅನ್ವಯಿಸುತ್ತದೆ ತಾನೇ? ಆದರೆ ಜಾಕಿ, ಸೂಪರ್‌ನಂತಹ ಚಿತ್ರಗಳು ಬೇರೆ ಭಾಷೆಗಳಲ್ಲಿ ಬಿಡುಗಡೆಯಾಗಿವೆ. ಅಲ್ಲಿನವರಿಗೆ ನಾವು ಹೇಳುವ ಯಾವ ನಿಯಮಗಳೂ ಅನ್ವಯಿಸುವುದಿಲ್ಲವೆಂದರೆ ಈ ಮಾತುಗಳ ಮೇಲೆಯೇ ನಂಬಿಕೆ ಹುಟ್ಟುವುದಿಲ್ಲ. 
ಈ ಮೇಲೆ ಹೇಳಿದ ಗಂಭೀರ ಸಮಸ್ಯೆಗಳನ್ನು ಕನ್ನಡ ಚಿತ್ರರಂಗ ಎದುರಿಸುತ್ತಿರುವ ಹೊತ್ತಿನಲ್ಲಿ ಚಿತ್ರರಂಗದವರ ಮಾತುಗಳಲ್ಲಿ ಕನ್ನಡಿಗರಿಗೆ ನಂಬಿಕೆ ಬರುತ್ತಿಲ್ಲ ಎನ್ನುವುದನ್ನು ಅವರೂ ಪರಿಗಣಿಸಲೇಬೇಕಾಗಿದೆ. ಸಮಾಜದ ನಾನಾ ವರ್ಗಗಳ ಜನರು ಇಂದು ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಲು ಬೇರೆಲ್ಲೂ ಅವಕಾಶವಿರದ ಕಾರಣ ಫೇಸ್‌ಬುಕ್, ಬ್ಲಾಗ್‌ನಂತಹ ಸಾಮಾಜಿಕ ತಾಣಗಳಲ್ಲಿ ಜೋರು ದನಿಯಲ್ಲಿ ಸದ್ದು ಮಾಡುತ್ತಿದ್ದಾರೆ. ಈ ಸದ್ದು ದಿನಪತ್ರಿಕೆ, ಟಿವಿ ಚರ್ಚೆಗಳಲ್ಲಿ ಅನುರಣನೆಗೊಳ್ಳುತ್ತಿದೆ. ಇದು ಐನೂರು ಮಂದಿಯ ಚೀರಾಟ ಹಾರಾಟ ಎಂದು ಡಬ್ಬಿಂಗ್ ಪರವಾಗಿ ಎದ್ದಿರುವ ಧ್ವನಿಯನ್ನು ಕಡೆಗಣಿಸುವ ಸ್ಥಿತಿಯಂತೂ ಇಲ್ಲಿಲ್ಲವೆಂದೇ ತೋರುತ್ತದೆ. ಅಷ್ಟಕ್ಕೂ ಡಬ್ಬಿಂಗ್ ಎನ್ನುವಂತಹ ಒಂದು ಮಾಹಿತಿ ಪ್ರಸರಣ ವಿಧಾನ ಚಿತ್ರರಂಗದ ಮಂದಿ ಹಾಗೂ ಇತರ ಕೆಲವರು ಭೂತಗನ್ನಡಿಯಿಟ್ಟು ತೋರಿಸುತ್ತಿರುವಂತೆ ‘ದೊಡ್ಡ ಗುಮ್ಮ’ ಅಂತೂ ಅಲ್ಲ. ಯಾಕೆಂದರೆ ಜಗತ್ತಿನಲ್ಲಿ ನಾನಾ ಕಡೆಗಳಲ್ಲಿ ಕರ್ನಾಟಕಕ್ಕಿಂತಲೂ ಕಡಿಮೆ ಜನಸಂಖ್ಯೆಯ ದೇಶಗಳಲ್ಲಿ, ರಾಜ್ಯಗಳಲ್ಲಿ ಡಬ್ಬಿಂಗ್‌ಗೆ ಅವಕಾಶ ಮಾಡಿಕೊಡಲಾಗಿದೆ. ಅಲ್ಲೆಲ್ಲೂ ಮೂಲ ಚಿತ್ರರಂಗವೇ ನಾಶವಾಗಿ ಹೋದ ಅಥವಾ ಡಬ್ಬಿಂಗ್‌ನ ಕಾರಣಕ್ಕಾಗಿಯೇ ಭಾಷೆ ಸಂಸ್ಕೃತಿಗಳು ಹಳ್ಳಹಿಡಿದ ಉದಾಹರಣೆಗಳಿಲ್ಲ. ೧೯೯೬ರಲ್ಲಿ ಸ್ಪೇನ್‌ನ ಬಾರ್ಸೆಲೋನಾದಲ್ಲಿ ವಿಶ್ವಸಂಸ್ಥೆಯ ಯುನೆಸ್ಕೋ ನಡೆಸಿದ ಭಾಷಾ ಹಕ್ಕುಗಳ ವಿಶ್ವ ಸಮ್ಮೇಳನದಲ್ಲಿಅಂಗೀಕರಿಸಲಾದ ಸಂವಿಧಾನದ ೪೪ ನೇ ವಿಧಿಯು ಡಬ್ಬಿಂಗ್‌ನ್ನೂ ಕೂಡ ಸಂಸ್ಕೃತಿಯ, ಭಾಷೆಯ ಬೆಳವಣಿಗೆಗೆ ಸಹಾಕಾರಿಯಾದ ಒಂದು ಉಪಯುಕ್ತ ಸಾಧನ ಎಂದೇ ಗುರುತಿಸಿದೆ. ಹಾಗಂತ ಲಂಗು ಲಗಾಮಿಲ್ಲದೆ ಡಬ್ಬಿಂಗ್‌ನ್ನು ಜಾರಿಗೊಳಿಸಿದರೆ ಖಂಡಿತವಾಗಿಯೂ ಸಮಸ್ಯೆಗಳುದ್ಭವಿಸಬಹುದು. ಈ ಬಗ್ಗೆ ನೆರೆಹೊರೆಯವರಿಂದ ಪಾಠ ಕಲಿತು ಸೂಕ್ತ ಮುನ್ನೆಚ್ಚರಿಕಾ ಕ್ರಮಗಳ ಮುಖೇನ ಡಬ್ಬಿಂಗ್‌ಗೆ ಅವಕಾಶ ನೀಡಿದರೆ ಯಾರೂ ಆತಂಕಿತರಾಗಬೇಕಿಲ್ಲ. ವಾಸ್ತವವಾಗಿ ಡಬ್ಬಿಂಗ್ ನಮ್ಮಲ್ಲಿರುವ ಸಾಮರ್ಥ್ಯವನ್ನು ಒರೆಗಲ್ಲಿಗೆ ಹಚ್ಚಿ ಕನ್ನಡದಲ್ಲೇ ಉತ್ತಮ ಪ್ರಯತ್ನಗಳಿಗೆ ದಾರಿ ಮಾಡಿಕೊಡುವುದರಲ್ಲೂ ಸಂದೇಹವಿರಬೇಕಿಲ್ಲ. ಡಬ್ಬಿಂಗ್‌ನಿಂದ ನಮ್ಮ ಕಲಾವಿದರೆಲ್ಲರೂ ಮಣ್ಣುತಿನ್ನಬೇಕಾಗುತ್ತದೆ, ಐದು ಸಾವಿರ ಮಂದಿ ಕೆಲಸ ಕಳೆದುಕೊಳ್ಳಬೇಕಾಗುತ್ತದೆ ಎಂಬಂತಹ ವಾದಗಳು ಇಂದಿನ ಕಾಲಮಾನದಲ್ಲಿ ಅರ್ಥಕಳೆದುಕೊಂಡಿವೆ ಎಂದೇ ಹೇಳಬೇಕು. ಡಬ್ಬಿಂಗ್ ಶುರುವಾದೊಡನೆ ಕನ್ನಡ ಪ್ರೇಕ್ಷಕ ಬರೀ ಡಬ್ಬಿಂಗ್ ಆದ ಸಿನಿಮಾಗಳನ್ನೇ ನೋಡಲಾರಂಭಿಸಿ ಮೂಲ ಕನ್ನಡ ಸಿನಿಮಾಗಳ ಕಡೆ ತಲೆಯೂ ಹಾಕುವುದಿಲ್ಲ ಎಂದು ಸುಖಾ ಸುಮ್ಮನೇ ಆತಂಕ ಸೃಷ್ಟಿಸಿ ಕತ್ತಿ ಗುರಾಣಿ ಹಿಡಿದು ರಣಕಹಳೆ ಊದುವುದಿದೆಯಲ್ಲಾ ಇದು ಇಂದು ಕನ್ನಡ ಚಿತ್ರನಟರಾದಿಯಾಗಿ ಇಡೀ ಚಿತ್ರರಂಗವನ್ನು ದಶಕಗಳ ಕಾಲ ಪೊರೆಯುತ್ತಾ ಬಂದಿರುವ ಕನ್ನಡಿಗರಿಗೆ ಚಿತ್ರರಂಗದವರು ಮಾಡುವ ಅವಮಾನವಲ್ಲದೇ ಬೇರೇನೂ ಅಲ್ಲ. ಉತ್ತಮ ಸಿನಿಮಾಗಳು ಬಂದಾಗ ಎಂದೂ ಕನ್ನಡ ಪ್ರೇಕ್ಷಕ ಆ ಚಿತ್ರಗಳನ್ನು ಎಂಥಹ ಪರಿಸ್ಥಿತಿಯಲ್ಲೂ ಗೆಲ್ಲಿಸದೇ ಬಿಟ್ಟಿಲ್ಲ ಎಂಬುದನ್ನು ಯಾರೂ ಮರೆಯಬಾರದು. ಮುಂದೆಯೂ ಆ ವಿಶ್ವಾಸ ಎಲ್ಲರಿಗೂ ಇರಬೇಕು. ಅಷ್ಟಕ್ಕೂ ಡಬ್ಬಿಂಗ್ ಚಿತ್ರಗಳು ಎಂದೂ ಮೂಲಸಿನಿಮಾ ನೋಡಿದಂತಾಗುವುದಿಲ್ಲ. ಇಡೀ ಸಾಹಿತ್ಯದಲ್ಲಿ ಅನುವಾದ ಸಾಹಿತ್ಯ ಯಾವ ಪಾತ್ರವಹಿಸುತ್ತಿದೆಯೋ ಅಷ್ಟೇ ಪಾತ್ರ ದೃಶ್ಯ ಮಾಧ್ಯಮದಲ್ಲಿ ಡಬ್ಬಿಂಗ್‌ಗೆ ಇರುತ್ತದೆ. ಡಬ್ ಆದ ಚಿತ್ರಗಳು ತೀರಾ ಕೆಟ್ಟದಾಗಿದ್ದರೆ ಅವೂ ಮಕಾಡೆ ಮಲಗಲೇಬೇಕಾಗುತ್ತದೆ. ಡಬ್ಬಿಂಗ್ ವಿಷಯ ಬಂದೊಡನೆ ಚಿತ್ರರಂಗದ ಕಾರ್ಮಿಕರ ಹತೈಷಿಗಳಾಗಿ ಮಾತನಾಡುವವರೆಲ್ಲಾ ನಿಜಕ್ಕೂ ಕಾರ್ಮಿಕರ ಪರವೇ ಇದ್ದಾರೆ ಎಂದುಕೊಳ್ಳೋಣವೇ? ತಮ್ಮ ಕನಿಷ್ಠ ಹಕ್ಕುಗಳಿಗಾಗಿ ಯಾವಾಗೆಲ್ಲಾ ಚಿತ್ರರಂಗದ ಕಾರ್ಮಿಕರು ದನಿ ಎತ್ತಿದ್ದಾರೋ ಆಗೆಲ್ಲಾ ಇದೇ ಸಿನಿಮಾ ಪ್ರಭೃತಿಗಳು ಹೇಗೆ ನಡೆದುಕೊಂಡಿದ್ದಾರೆ ಎಂಬುದು ಯಾರಿಗೂ ತಿಳಿಯದ ವಿಷಯವೇನಲ್ಲ. ಕನಿಷ್ಠ ಕಾರ್ಮಿಕರು ಪ್ರತಿವರ್ಷ ಆಚರಿಸುವ ಮೇ ದಿನಾಚರಣೆಯಲ್ಲಿ ಯಾವ ನಟನೂ ಪಾಲ್ಗೊಳ್ಳಲಾರದಷ್ಟು ಕಾರ್ಮಿಕರ ಮೇಲೆ ಅಕ್ಕರೆ ಇರುವವರು ಕಾರ್ಮಿಕರ ಬಗ್ಗೆ ಕಂಬನಿಗರೆಯುತ್ತಾರೆಂದರೆ ಸುಲಭವಾಗಿ ನಂಬುವುದು ಅಭಿಮಾನಿ ದೇವರುಗಳಿಗೆ ತುಸು ಕಷ್ಟವೇ. 
ಮತ್ತೊಂದು ಕಡೆ ಇಂದು ಕನ್ನಡ ಚಿತ್ರ ರಂಗಕ್ಕೆ ದೊಡ್ಡಮಟ್ಟದಲ್ಲಿ ಪೆಟ್ಟು ನೀಡುತ್ತಿರುವುದು ಪರಭಾಷಾ ಚಿತ್ರೋದ್ಯಮ ಎಂಬುದು ನಿಚ್ಛಳವಾಗಿದೆ. ರಾಜ್ಯದ ಯಾವುದೇ ಮೂಲೆಯಲ್ಲಿ ಹೋಗಿ ನೋಡಿ ಇಂದು ಹೆಚ್ಚು ದಿನ ಪ್ರದರ್ಶನ ಕಾಣುವುದು ತಮಿಳು, ತೆಲುಗು ಹಿಂದಿ ಸಿನಿಮಾಗಳೇ ವಿನಃ ಕನ್ನಡ ಭಾಷೆಯ ಸಿನಿಮಾಗಳಲ್ಲ. ಇಂತಹ ಪರಿಸ್ಥಿತಿಯಲ್ಲಿ ಕನ್ನಡ ಮಾತ್ರ ಬಲ್ಲ ಕನ್ನಡ ಪ್ರೇಕ್ಷಕ ಏನು ಮಾಡಬೇಕು? ಕ್ರಮೇಣ ಕನ್ನಡ ಕೈಬಿಟ್ಟು ಆತನೂ ತಮಿಳು ತೆಲುಗು ಮಲಯಾಳಂ ಭಾಷೆ ಕಲಿತು ಅದೇ ಸಿನಿಮಾಗಳನ್ನು ನೋಡುವುದಾ? ಆಗ ಅವನನ್ನೇ ಕನ್ನಡ ನಿರಭಿಮಾನಿ ಎನ್ನಲು ಸಾಧ್ಯವಾ? ತಮಿಳಿನಲ್ಲೋ, ತೆಲುಗಿನಲ್ಲೋ ಅದ್ಭುತವಾಗಿ ಮೂಡಿ ಬರುವ ಸಿನಿಮಾಗಳು ಕನ್ನಡದಲ್ಲಿ ಪೇಲವವಾಗಿ ಬಂದಾಗ ಎರಡನ್ನೂ ನೋಡಿದ ಪ್ರೇಕ್ಷಕ ಮುಂದಿನ ಸಲ ಯಾವುದರೆಡೆ ವಾಲುತ್ತಾನೆ? ಇದಕ್ಕೆ ತೀರಾ ಇತ್ತೀಚಿನ ಉದಾಹರಣೆ ತಮಿಳಿನ ‘ಮೈನಾ’ ವನ್ನು ಕನ್ನಡದಲ್ಲಿ ಭಟ್ಟಿ ಇಳಿಸಿದ ‘ಶೈಲೂ’. ಇವರು ಮಾಡುವುದೇ ಪರಭಾಷೆಯ ಸಿನಿಮಾ ಎಂದಾದ ಆ ಪರಭಾಷೆಯ ಮೂಲ ಸಿನಿಮಾವನ್ನೇ ಪ್ರೇಕ್ಷಕ ಇಷ್ಟಪಟ್ಟರೆ ತಪ್ಪು ಯಾರದು ಹೇಳಿ. ಡಬ್ಬಿಂಗ್‌ಗೆ ಅವಕಾಶವಾದರೆ ಕನಿಷ್ಟ ಈ ಹಿಂಸೆ ತಪ್ಪುತ್ತದೆ ಎಂದು ಎಷ್ಟೋ ಜನ ಯೋಚಿಸುವವರಿದ್ದಾರೆ. ಈ ಮೂಲಕ ನಮ್ಮ ಭಾಷೆಯಲ್ಲೇ ಪರಭಾಷೆಯ ಸಿನಿಮಾ ನಮಗೆ ದಕ್ಕುತ್ತದಲ್ಲ ಎಂದು ಯೋಚಿಸುವುದು ತಪ್ಪಾಗುವುದಿಲ್ಲ. 

ಒಂದೊಮ್ಮೆ ಕನ್ನಡವನ್ನುಳಿಸಲು ಡಬ್ಬಿಂಗ್ ಬೇಡ ಎಂದು ಧ್ವನಿ ಎತ್ತಿದ್ದ ಕನ್ನಡಿಗ ಇಂದು ಕನ್ನಡದ ಉಳಿವಿಗಾಗಿ ಡಬ್ಬಿಂಗ್ ಬೇಕು ಎಂದು ಕೂಗಿ ಹೇಳುತ್ತಿರುವುದು ನಿಜಕ್ಕೂ ಎಂಥಹ ವಿಪರ‍್ಯಾಸವಲ್ಲವೇ?! 

ಕನ್ನಡ ನುಡಿ, ಸಂಸ್ಕೃತಿ ಎಂದೊಡನೆ ಕನ್ನಡ ಸಿನಿಮಾಕ್ಕೆ ಸಮೀಕರಿಸುವುದಾಗಲೀ ಡಬ್ಬಿಂಗ್ ಎಂದ ಕೂಡಲೇ ಚಿತ್ರ ರಂಗಕ್ಕೆ ಮಾತ್ರ ಸೀಮಿತಗೊಳಿಸುವುದಾಗಲೀ ತಪ್ಪು. ಹಿಂದೊಂದು ಕಾಲವಿತ್ತು. ಕನ್ನಡದ ಸಂಸ್ಕೃತಿಯಲ್ಲಿ ಚಿತ್ರರಂಗವೆನ್ನುವುದು ಮಹತ್ತರ ಪಾತ್ರವಹಿಸುತ್ತಿತ್ತು. ಆದರೆ ಇಂದು ಹಾಗಿಲ್ಲ. ಕನ್ನಡ ಸಂಸ್ಕೃತಿಯ ಬೆಳವಣಿಗೆಯಲ್ಲಿ ಚಿತ್ರರಂಗದ ಪಾತ್ರ ಇಂದು ಅತ್ಯಲ್ಪ. ಹಾಗೆಯೇ ಡಬ್ಬಿಂಗ್‌ನ್ನು ಇಂದು ಅನೇಕರು ಬಯಸುತ್ತಿರುವುದು ಹಿರಿತೆರೆಯನ್ನು ಹೊರತುಪಡಿಸಿದ ‘ಜ್ಞಾನದ ಹರಿವಿನ’ ಕಾರಣಕ್ಕೂ ಎಂಬುದನ್ನು ಪರಾಂಬರಿಸಬೇಕು. ತಮಿಳು, ತೆಲುಗಿನವರು ನ್ಯಾಷನಲ್ ಜಿಯಾಗ್ರಫಿಕ್, ಡಿಸ್ಕವರಿ, ಹಿಸ್ಟರಿ, ಪೋಗೋದಂತಹ ವಾಹಿನಿಗಳನ್ನು, ಸ್ಟೀಫನ್ ಹಾಕಿಂಗ್‌ನ ‘ಇನ್ ಟು ದ ಯೂನಿವರ್ಸ್’ನಂತಹ ಅತ್ಯದ್ಭುತ ಕಾರ್ಯಕ್ರಮಗಳನ್ನು ತಮ್ಮ ಭಾಷೆಯಲ್ಲೇ ನೋಡಿ ತಮ್ಮ ಜ್ಞಾನದ ಹಸಿವನ್ನು ಇಂಗಿಸಿಕೊಳ್ಳುತ್ತಿದ್ದರೆ ನಾವು ನಮಗೆ ಸರಿಯಾಗಿ ಅರ್ಥವಾಗದ ಇಂಗ್ಲಿಷ್‌ನಲ್ಲಿ ನೋಡುತ್ತಾ ನಮ್ಮ ಮಕ್ಕಳಿಗೂ ತೋರಿಸುತ್ತಾ ಇರುವುದು ಅನ್ಯಾಯವಲ್ಲವಾ? ಅನೇಕ ಮಕ್ಕಳು ಇಷ್ಟಪಡುವ ‘ಚೋಟಾ ಭೀಮ್’ನನ್ನು ಕನ್ನಡದಲ್ಲೇ ತಮ್ಮ ಮಕ್ಕಳಿಗೆ ತೋರುವಂತಾಗಿದ್ದಿದ್ದರೆ ಎಂದು ಹಂಬಲಿಸುವ ಎಷ್ಟೋ ತಂದೆ ತಾಯಿಯರಿದ್ದಾರೆ. ಜುರಾಸಿಕ್ ಪಾರ್ಕ್, ಬೇಬೀಸ್ ಡೇಔಟ್, ಕಿಂಗ್ ಕಾಂಗ್, ಟೈಟಾನಕ್, ಅವತಾರ್‌ನಂತಹ ತಾಂತಿಕ ಅದ್ದೂರಿಯ ಹಾಗೂ ಮನರಂಜನಾ ಸಿನಿಮಾಗಳನ್ನು ಕನ್ನಡದಲ್ಲಿ ತಯಾರಿಸಲಾಗದಿದ್ದರೂ ಕನಿಷ್ಠ ಕನ್ನಡ ಭಾಷೆಯಲ್ಲಾದರೂ ನೋಡುವ ಅವಕಾಶ ಡಬ್ಬಿಂಗ್‌ನಿಂದ ಬರುತ್ತದೆಯಾದರೆ ಅದಕ್ಕೆ ಅಡ್ಡಗಾಲು ಹಾಕುವುದಾದರೂ ಯಾಕೆ? ನಮ್ಮದೇ ನಾಡಿನಲ್ಲಿ ರಾಷ್ಟ್ರ ಪ್ರಶಸ್ತಿಗಳನ್ನು ಬಾಚಿಕೊಳ್ಳುತ್ತಿರುವ ‘ಬ್ಯಾರಿ’ಯಂತಹ ಬ್ಯಾರಿ ಭಾಷೆಯ ಹಾಗೂ ತುಳು ಭಾಷೆಯ ಸಿನಿಮಾಗಳು ಇಂಗ್ಲಿಷ್ ಸಬ್‌ಟೈಟಲ್ ಅರ್ಥವಾಗದ ಕನ್ನಡಿಗರಿಗೆ ತಲುಪುವ ದಾರಿ ‘ಡಬ್ಬಿಂಗ್’ ಅಲ್ಲವೇ? ಕನ್ನಡಿಗರೇ ಹಿಂದಿಯಲ್ಲಿ ನಿರ್ಮಿಸಿ ನಿರ್ದೇಶಿಸಿ ನಟಿಸಿದ ಮಾಲ್ಗುಡಿ ಡೇಸ್‌ನ್ನೂ ಕನ್ನಡದಲ್ಲಿ ನೋಡಡದಷ್ಟು ದೌರ್ಭಾಗ್ಯ ಕನ್ನಡಿಗರಿಗೇಕೆ? ಇವೆಲ್ಲವನ್ನೂ ಕನ್ನಡದಲ್ಲಿ ನೋಡುವುದು ನಮ್ಮ ಹಕ್ಕು ಎಂದು ಕನ್ನಡಿಗರು ಪ್ರತಿಪಾದಿಸುತ್ತಿದ್ದರೆ ‘ಅಲ್ಲ’ ಎನ್ನಲು ಯಾರಿದ್ದಾರೆ. ಆದರೆ ಚಿತ್ರರಂಗವು ತನ್ನದೇ ಲೆಕ್ಕಾಚಾರಗಳಿಂದ ಕನ್ನಡಿಗರ ಈ ಹಕ್ಕನ್ನು ಕಿತ್ತುಕೊಳ್ಳುತ್ತಿದೆ ಎನ್ನುವುದು ಸುಳ್ಳೇನೂ ಅಲ್ಲ. 
ಇಷ್ಟು ಹೇಳಿದ ಮಾತ್ರಕ್ಕೆ ಡಬ್ಬಿಂಗ್ ಇಂದು ಕನ್ನಡಿಗರ ವಿಮೋಚನೆಯ ಏಕೈಕ ಮಾರ್ಗ ಎಂದುಕೊಳ್ಳುವುದಾಗಲೀ ಡಬ್ಬಿಂಗ್ ಗುಮ್ಮನಲ್ಲವೆಂದೊಡನೆ ಅಮ್ಮನೇ ಎಂದು ಭ್ರಮಿಸುವುದು ಮತ್ತೊಂದು ಅತಿರೇಕವಾದೀತು. ಜಾಗತಿಕರಣದ ಹಾವಳಿಯಲ್ಲಿ ಇಡೀ ಸಿನಿಮಾ ರಂಗವೇ ದೊಡ್ಡ ಉದ್ದಿಮೆಯಾಗಿ ಮಾರ್ಪಟ್ಟು ಪ್ರೇಕ್ಷಕನನ್ನೂ ಗ್ರಾಹಕನನ್ನಾಗಿ ಮಾರ್ಪಡಿಸಿರುವ ಇಂದಿನ ದಿನಗಳಲ್ಲಿ ಪ್ರೇಕ್ಷಕರ ಅಭಿರುಚಿಗಳೂ ಕೆಟ್ಟು ನಿಂತಿವೆ. ಒಳ್ಳೆಯದು ಕೆಟ್ಟದ್ದರ ನಡುವಿನ ಅಂತರವನ್ನೂ ಗ್ರಹಿಸಲಾಗದ ಮಟ್ಟಿಗೆ ಜನಮಾನಸವೆಂಬುದು ಸಂವೇದನೆ ಕಳೆದುಕೊಂಡಿದೆ ಎಂದರೆ ತಪ್ಪಾಗಲಿಕ್ಕಿಲ್ಲ. ಅದರಲ್ಲೂ ಇಂದು ಕನ್ನಡದಲ್ಲೇ ಬಿಡುಗಡೆಯಾಗುತ್ತಿರುವ  ಬದುಕಿಗೆ ಹತ್ತಿರವಾದ ಒಳ್ಳೆಯ ಸಿನೆಮಾಗಳನ್ನೂ ಕನ್ನಡ ಪ್ರೇಕ್ಷಕ ಸಲೀಸಾಗಿ ಸ್ವೀಕರಿಸುತ್ತಿಲ್ಲ ಎನ್ನುವುದೂ ವಾಸ್ತವ. ಗಿರೀಶ್ ಕಾಸರವಳ್ಳಿ, ಬಿ. ಸುರೇಶ್, ಪಿ.ಶೇಷಾದ್ರಿಯಂತವರ ಅತ್ಯುತ್ತಮ ಸಿನಿಮಾಗಳು ಸೀಮಿತವಲಯಕ್ಕೇ ಸೀಮಿತವಾಗುತ್ತಿರುವುದರಲ್ಲಿ ಈ ನಿರ್ದೇಶಕರ ‘ಅಪ್ಪಟ ಪರಿಶುದ್ಧತೆಯ’ ನೀತಿ ಕಾರಣವಾಗುವ ಜೊತೆಯಲ್ಲಿ  ಅಭಿರುಚಿಹೀನ ಕನ್ನಡ ಪ್ರೇಕ್ಷಕರ ಪಾಲೂ ಇದೆ. ಇಂತಹ ವಿಷಮ ಗಳಿಗೆಯಲ್ಲಿ ಎಗ್ಗಿಲ್ಲದೇ ಬಿಟ್ಟುಕೊಂಡರೆ ಡಬ್ಬಿಂಗ್ ವ್ಯತಿರಿಕ್ತ ಪರಿಣಾಮ ಬೀರಬಹುದು. ಎಲ್ಲಾ ಕ್ಷೇತ್ರಗಳಂತೆ ಡಬ್ಬಿಂಗ್ ಕ್ಷೇತ್ರದಲ್ಲೂ ಕೋಟ್ಯಧಿಪತಿಗಳೇ ಕೈಯಾಡಿಸುವುದರಿಂದ ಅವರು ಕನ್ನಡಕ್ಕೆ ಬೇಡವಾದ ಕಸವನ್ನೂ ತಂದು ರಾಶಿ ಹಾಕಬಹುದು. ಇದಕ್ಕೆ ನಾವ್ಯಾರೂ ಕುರುಡರಾಗಿರಬೇಕಿಲ್ಲ. ಆದರೆ ಇಂದಿನ ಬದಲಾದ ಸನ್ನಿವೇಶಗಳಲ್ಲಿ, ಕನ್ನಡಿಗರ ಹೆಚ್ಚುತ್ತಿರುವ ಆಕಾಂಕ್ಷೆ, ಅಭಿಲಾಷೆ ಮತ್ತು ಕನ್ನಡ ಭಾಷೆಯ ಹಿತದಿಂದ ಡಬ್ಬಿಂಗ್‌ಗೆ ಅವಕಾಶ ನೀಡುವುದು ಅತ್ಯವಶ್ಯ. ಅದೇ ರೀತಿ ನಮ್ಮ ಸೀಮಿತ ಸಿನಿಮಾ ಮಾರುಕಟ್ಟೆಯಲ್ಲಿ ಡಬ್ಬಿಂಗ್‌ನ್ನು ಎಷ್ಟರ ಮಟ್ಟಿಗೆ ಒಳಬಿಟ್ಟುಕೊಳ್ಳಬೇಕು, ಏನನ್ನು ಬಿಟ್ಟುಕೊಳ್ಳಬೇಕು ಇತ್ಯಾದಿಗಳನ್ನೂ ನಿರ್ದಿಷ್ಟೀಕರಿಸಿಕೊಂಡು ಮುಂದಡಿಯಿಡುವುದೂ ಅಷ್ಟೇ ಅವಶ್ಯಕ. ಇದೇನೂ ಆಗದ ಕೆಲಸವಲ್ಲ. ಆದರೆ ಈ ಕುರಿತು ಕನಿಷ್ಠ ಆರೋಗ್ಯಕರವಾದ ಚರ್ಚೆಗೂ ಅವಕಾಶ ನೀಡದೇ ಕನ್ನಡಿಗರ ನಾಲ್ಗೆ ಸೀಳ್ಸಿ, ಬಾಯಿ ಹೊಲ್ಸಾಕಲು ಯತ್ನಿಸುತ್ತಿರುವ ಪ್ರಯತ್ನಗಳು ಮಾತ್ರ ಅನಾರೋಗ್ಯಕರ. 



‘ಸತ್ಯಮೇವ ಜಯತೇ’ ಹಚ್ಚಿದ ಕಿಚ್ಚು




ಈ ಬಾರಿ ಡಬ್ಬಿಂಗ್ ವಿವಾದ ಮುನ್ನೆಲೆಗೆ ಮತ್ತೆ ಬಂದಿದ್ದೇ ಬಾಲಿವುಡ್‌ನ ನಟ ಅಮೀರ್ ಖಾನ್‌ನ ಮಹತ್ವಾಕಾಂಕ್ಷೆಯ ‘ಸತ್ಯ ಮೇವ ಜಯತೇ’ ಕಾರ್ಯಕ್ರಮವನ್ನು ಕನ್ನಡಕ್ಕೆ ಡಬ್ ಮಾಡುವ ವಿಷಯದಲ್ಲುಂಟಾದದ ಕಿರಿಕ್‌ನಿಂದ. ಮೊದಲಿಗೆ ಸುವರ್ಣ ಸ್ಟಾರ್ ನಿರ್ದೇಶಕರು ಅದನ್ನು ಕರ್ನಾಟಕದಲ್ಲಿ ಕನ್ನಡದಲ್ಲೇ ಪ್ರಸಾರ ಮಾಡುವುದಾಗಿ ಹೇಳಿದ್ದರು. ಆ ಕೂಡಲೇ ಕಾರ್ಯಪ್ರವ್ರತ್ತರಾದ ಚಲನ ಚಿತ್ರ ಮಂಡಳಿ ಹಾಗೂ ಕಿರುತೆರೆ ಕಲಾವಿದರ ಸಂಘದ ಪದಾಧಿಕಾರಿಗಳು ಒತ್ತಡ ತಂದು ಸುವರ್ಣದ ನಿರ್ದೇಶಕರಿಂದ ಕನ್ನಡದಲ್ಲಿ ಪ್ರಸಾರ ಮಾಡುವುದಿಲ್ಲ ಎಂದು ಮರುಹೇಳಿಕೆ ಕೊಡಿಸಿದರು. ಮೊದಲಿನ ಘೋಷಣೆಯಿಂದ ಸಹಜವಾಗಿ ಸಂತಸಗೊಂಡಿದ್ದ ಪ್ರೇಕ್ಷಕರು ಈಗ ತೀವ್ರ ನಿರಾಸೆಗೊಳಗಾಗಿದ್ದರು. ಕೂಡಲೇ ಒಂದು ಅನ್‌ಲೈನ್ ಅರ್ಜಿ ಸಾವಿರಾರು ಜನರಿಂದ ಸಹಿ ಹಾಕಿಸಿಕೊಂಡು ಸುವರ್ಣ ಕಛೇರಿ ತಲುಪಿತ್ತು. ಇದಾದ ಬಳಿಕ ‘ಸತ್ಯಮೇವ ಜಯತೆ’ ಕಾರ್ಯಕ್ರಮದ ಕನ್ನಡ ಅವತರಣಿಕೆಯನ್ನು ಯೂಟ್ಯೂಬ್‌ನಲ್ಲಿ ವೆಬ್‌ಕಾಸ್ಟ್ ಮಾಡುವುದಾಗಿ ಭರವಸೆ ಬಂದು ಅದರಂತೆ ಮಾಡಲಾಯಿತು. ಈ ಕಾರ್ಯಕ್ರಮದ ಕನ್ನಡದ ಡಬ್ ಆಗಿ ಯೂಟ್ಯೂಬ್‌ನಲ್ಲಿ ಕಾಣಿಸಿಕೊಂಡ ಎರಡೇ ದಿನಗಳಲ್ಲಿ ೩೦,೦೦೦ ಜನರು ವೀಕ್ಷಿಸಿದ್ದರು! ಹಿಂದಿ ಬಾರದ ಅದೆಷ್ಟೋ ಕನ್ನಡಿಗರು ಆ ಕಾರ್ಯಕ್ರಮದಲ್ಲಿ ಭ್ರೂಣಹತ್ಯೆಯ ಕುರಿತು ನತದೃಷ್ಟ ಹೆಣ್ಣುಮಕ್ಕಳ ಮಾತುಗಳನ್ನು ಕನ್ನಡದಲ್ಲಿ ಕೇಳಿಸಿಕೊಂಡು ಕಣ್ಣೀರಿಟ್ಟಿದ್ದರಲ್ಲದೆ ಇಂತಹ ಒಂದು ಸಾಮಾಜಿಕ ಕಳಕಳಿಯ ಅದ್ಭುತ ಕಾರ್ಯಕ್ರಮವನ್ನು ನಡೆಸಲು ಹೊರಟಿರುವ ಅಮೀರನ ಹೃದಯ ಶ್ರೀಮಂತಿಕೆಗೆ ಮನದಲ್ಲೇ ಅಭಿನಂಸಿದಿದ್ದರು. ಆದರೆ ಸಾಮಾಜಿಕ ತಾಣ ಯೂಟ್ಯೂಬ್‌ನಲ್ಲಿ ಅಷ್ಟು ಜನರು ನೋಡಿದ್ದೇ ತಪ್ಪಾಗಿ ಮೂರನೇ ದಿನ ಅಲ್ಲಿಂದಲೂ  ದನ್ನು ಕಿತ್ತು ಹಾಕಿಸಿ ಕನ್ನಡಿಗರಿಗೆ ಅನ್ಯಾಯವೆಸಗಲಾಗಿತ್ತು. ಆಗ ಕನ್ನಡಿಗರು ಕೇಳಿಕೊಂಡ ಮೊದಲ ಪ್ರಶ್ನೆ ಕನ್ನಡ ನಾಡಿನಲ್ಲಿ ಸತ್ಯಕ್ಕೆ ಜಯ ದೊರೆವುದು ಯಾವಾಗ ? ಎಂದು. ಸತ್ಯಮೇವ ಜಯತೆಯು ಝೀ ಕನ್ನಡದ ರಿಯಾಲಿಟಿ ಶೋಗಳಂತಲ್ಲದೆ ಸ್ಪಷ್ಟ ಸಾಮಾಜಿಕ ಸಂದೇಶವನ್ನೂ ಬೀರುವ, ಪ್ರಜೆಗಳ ಅರಿವನ್ನು ಹೆಚ್ಚಿಸುವ, ಹಾಗೂ ದೇಶದ ಆಡಳಿತಗಾರರ ಮೇಲೆ ಒತ್ತಡವನ್ನು ಹೇರುವಂತಹದು. ಇದರ ಎರಡನೇ ಕಾರ್ಯಕ್ರಮದ ಪರಿಣಾಮವಾಗಿ ಸಂತ್ತಿನಲ್ಲಿ ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ತಡೆಯುವ ನಿಟ್ಟಿನಲ್ಲಿ ಮಸೂದೆಯೊಂದು ಅನುಮೋದನೆಗೊಂಡಿದೆ. ದೇಶದ ಆರೋಗ್ಯ ರಂಗದ ದುಸ್ಥಿತಿಯನ್ನೂ, ಔಷಧಿ ಕ್ಷೇತ್ರದ ಅವ್ಯವಹಾರಗಳನ್ನೂ, ಸರ್ಕಾರಗಳು ತೆಗೆದುಕೊಳ್ಳಬೇಕಾದ ತುರ್ತು ಕ್ರಮಗಳನ್ನೂ ಮನಮುಟ್ಟುವ ಇತ್ತೀಚಿನ ಎಪಿಸೋಡ್ ಕೂಡಾ ಪರಿಣಾಮಕಾರಿಯಾಗಿತ್ತು. ಹೇಳಿ. ಇಂತಹ ಕಾರ್ಯಕ್ರಮ ಯಾಕೆ ಡಬ್ ಆಗಬಾರದು??

ಹೊಸತು - ಹಳತು : ಬುದ್ದ ತತ್ವ

ಲೋಕದ ಪ್ರತಿಯೊಂದೂ ಎಡೆಬಿಡದ ಚಲನೆಯಲ್ಲಿದೆ. ಕೆಲವೊಮ್ಮೆ ಬರಿಗಣ್ಣಿಗೆ ಚಲಿಸದೇ ಜಡವಾಗಿವೆ ಎಂದು ತೋರುವ ಪ್ರತಿಯೊಂದೂ ಚಲನೆಯಲ್ಲಿದೆ. ಒಂದು ಮರದ ತುಂಡು, ಕಬ್ಬಿಣದ ಬಿಲ್ಲೆ,...

ಮರದೊಂದು ಎಲೆ ನಾನು..

ನನ್ನ ಫೋಟೋ
A Writer, Researcher, Journalist and Activist. Born and brought up from Kugwe a village near Sagara, Shimoga district of Karnataka state. Presently working as the Editor In Chief of PEEPAL MEDIA /PEEPAL TV.