ಡಿಸೆಂಬರ್ 19, 2012

ಡಿಸೆಂಬರ್ 21ನ್ನು ಕುರಿತ ಮಿಥ್‌ಗಳು




(೨೦೧೨ರಲ್ಲಿ ಪ್ರಳಯವಾಗುತ್ತದೆ ಎಂಬ ಅಪಕಲ್ಪನೆ ಮತ್ತು ಅಪಪ್ರಚಾರಗಳು ೨೦೦೯ರಲ್ಲಿ ಆರಂಭವಾದ ಸಂದರ್ಭದಲ್ಲಿ ಈ ಲೇಖನವು 'ಗೈಡ್' ಮಾಸಪತ್ರಿಕೆಯಲ್ಲಿ ಪ್ರಕಟವಾಗಿತ್ತು)


೨೦೧೨ರ ಡಿಸೆಂಬರ್ ೨೧ ರಂದು ಜಗತ್ತಿನ ಅಂತ್ಯವಾಗಲಿದೆ. ಭೂಗ್ರಹವು ಯಾವುದೋ ಒಂದು ರೀತಿಯಲ್ಲಿ ಭಾರೀ ಮಾರ್ಪಾಡಿಗೆ ಒಳಗಾಗಲಿದೆ. ಭೂಮಿಯ ಮೇಲಿನ ಬಹುಪಾಲು ಮನುಷ್ಯರು ನಾಶವಾಗಲಿದ್ದಾರೆ. ಭೂಖಂಡಗಳು ಪ್ರತ್ಯೇಕಗೊಳ್ಳಲಿವೆ, ಇಡೀ ಜಗತ್ತೇ ಅಲ್ಲೋಲ ಕಲ್ಲೋಲವಾಗುತ್ತದೆ. ಆ ದಿನವೇ ಡೂಮ್ಸ್ ಡೇ ೨೦೧೨. ಅದು ಭೂಮಂಡಲದ ಅಂತ್ಯದ ದಿನ..... ಈ ಬಗೆಯ ಊಹಾಪೋಹಗಳು ಈಗಾಗಲೇ ನಮ್ಮ ಇಡೀ ಜಗತ್ತಿನಾದ್ಯಂತ ವ್ಯಾಪಕವಾದ ಪ್ರಚಾರವನ್ನು ಪಡೆದುಕೊಂಡು ಬಿಟ್ಟಿವೆ. ಅದರ ಈ ಕುರಿತ ಸಾವಿರಾರು ಸಂಖ್ಯೆಯ ಅಂತರ್ಜಾಲ ತಾಣಗಳಿಂದ, ಟೀವಿ ಚಾನಲ್‌ಗಳ ಕಾರ್ಯಕ್ರಮಗಳ ಟಿಆರ್‌ಪಿ ಕಾರ್ಯಕ್ರಮಗಳಿಂದ, ಕೆಲವು ಧಾರ್ಮಿಕ ವ್ಯಕ್ತಿಗಳು ಬರೆದಿರುವ ಪುಸ್ತಕಗಳಿಂದ, ಹೀಗೆ ನಾನಾ ಮೂಲಗಳಿಂದ ಈ ತಥಾಕಥಿತ ಪ್ರಳಯದ ಕುರಿತ ವಿಷಯಗಳನ್ನು ಓದಿ, ಕೇಳಿ ಜನರು ತೀವ್ರ ಆತಂಕ, ಕುತೂಹಲಗಳಿಗೊಳಗಾಗಿದ್ದಾರೆ. ಬೆಂಗಳೂರಿನ ಹತ್ತಿರ ಚಿಕ್ಕಗುಬ್ಬಿಯಲ್ಲಿರುವ ಮಾನಸ ಫೌಂಡೇಶನ್ ಸಂಸ್ಥೆಯ ಸಂಸ್ಥಾಪಕರಾಗಿರುವ ಕೃಷ್ಣಾನಂದ ಎಂಬ ಸ್ವಾಮಿ ೨೦೧೨ ನೇ ಇಸವಿಯಲ್ಲಿ ನಡೆಯಬಹುದಾದ ಘಟನೆಗಳನ್ನು ತಮ್ಮ ದಿವ್ಯದರ್ಶನದ ಸಹಾಯದಿಂದ, ೨೦೧೨-ಎಂಡ್ ಆರ್ ಬಿಗಿನಿಂಗ್ ಎಂಬ ಕೃತಿಯನ್ನು ಬರೆದಿದ್ದರು. ಉತ್ತರ ಕನ್ನಡ ಜಿಲ್ಲೆಯ ಜೋಯಿಡ ತಾಲ್ಲೂಕು, ಶಿವಪುರದ ಶ್ರೀ ಚೆನ್ನಬಸವಾನಂದ ಸ್ವಾಮೀಜಿ ಕಾಲಜ್ಞಾನ ನಿರ್ಣಯ ಕರ್ಮಕಾಂಡ ಅಂತ್ಯಕಾಲ ಎಂಬ ಡಿವಿಡಿಯನ್ನೂ ತಂದಿದ್ದರು.

ಜಗತ್ತು ಮುಳುಗಿ ಹೋಗುವ ಪ್ರಳಯದ ಭೀತಿಯನ್ನು ಹಲವಾರು ಪ್ರಳಯಾಂತಕರು ಹಿಂದಿನಿಂದಲೂ ಸೃಷ್ಟಿಸುತ್ತಲೇ ಬಂದಿದ್ದಾರೆ. ಈ ಹಿಂದೆ ೧೯೯೯ ರಲ್ಲಿಯೂ ಜನರು ಪ್ರಳಯದ ಭೀತಿಗೆ ಒಳಗಾಗಿದ್ದರು. ಅದೇ ರೀತಿ ಇದೀಗ ಡಿಸೆಂಬರ್ ೨೧, ೨೦೧೨ರಲ್ಲಿ ಜಗತ್ತು ಅಂತ್ಯವಾಗುತ್ತದೆ ಎನ್ನಲು ಹಲವಾರು ವೈಜ್ಞಾನಿಕ ಸಮರ್ಥನೆಗಳನ್ನು ಬೇರೆ ನೀಡಲಾಗುತ್ತಿದೆ. ಅದರಲ್ಲಿ ಪ್ರಮುಖವಾಗಿ ಕ್ರಿ.ಶ.೨೫೦ರಿಂದ ಕ್ರಿ.ಶ.೯೦೦ ರ ಅವಧಿಯಲ್ಲಿ ರಚಿಸಲಾದ ಮಾಯಾ ನಾಗರೀಕತೆಯ ಜನರ ಕ್ಯಾಲೆಂಡರ್ ೨೧.೧೨.೨೦೧೨ಕ್ಕೆ ಕೊನೆಗೊಳ್ಳುತ್ತದೆ ಎಂಬುದು ಒಂದು. ಇದೇ ಹೊತ್ತಿಗೆ ಭೂಮಿಯು ಕ್ಷೀರ ಪಥದ ಕೇಂದ್ರದೊಳಕ್ಕೆ ಪ್ರವೇಶ ಪಡೆಯುತ್ತದೆಂದೂ, ಅದನ್ನನುಸರಿಸಿ ಭೂಮಿಯ ಮೆಲೆ ಹಲವಾರು ಪರಿವರ್ತನೆಗಳಾಗುತ್ತವೆ ಎಂದೂ ಹೇಳಲಾಗುತ್ತಿದೆ. ಇದರ ಜೊತೆಗೆ ಭೂಮಿಯ ಮೆಲೆ ಕ್ಷುದ್ರಗ್ರಹಗಳು ಅಪ್ಪಳಿಸುತ್ತವೆಂದೂ, ಭೂಮಿಯ ಧೃವಗಳು ಅದಲು ಬದಲಾಗುತ್ತವೆಂದೂ ಹೇಳಲಾಗುತ್ತಿದೆ. ಭೂಮಿಯ ಮೆಲೆ ರಹಸ್ಯ ಗ್ರಹವೊಂದು ಎರಗಲಿದೆ ಎಂದೂ ನಂಬಲಾಗುತ್ತಿದೆ. ಎಲ್ಲಾ ನಾಶವಾದ ಮೇಲೆ ಬದುಕುವ ಕೆಲವೇ ಸಜ್ಜನರು ಮಾತ್ರ ನಂತರದಲ್ಲಿ ಕೇವಲ ಬೆಳಕನ್ನು ಮಾತ್ರ ಸೇವಿಸಿ ಬದುಕುತ್ತಾರೆನ್ನುವ ಕಥೆಗಳನ್ನೂ ಹರಿಬಿಡಲಾಗುತ್ತದೆ. ಮೇಲೆ ತಿಳಿಸಿದ ಕರ್ನಾಟಕದ ಸ್ವಾಮಿಗಳು ಜನರು ಆಧ್ಯಾತ್ಮಿಕ ಚಿಂತನೆಗೆ ತೊಡಗಿಕೊಂಡಲ್ಲಿ ಮಾತ್ರ ಜನರು ಉಳಿದುಕೊಳ್ಳಬಹುದೆಂದು ಉಚಿತ ಸಲಹೆಗಳನ್ನೂ ನೀಡತೊಡಗಿದ್ದಾರೆ. ನುಡಿದಿದ್ದಾರೆ. ಪ್ರಳಯದ ಕುರಿತೇ ಕೆಲವಾರು ಹಾಲಿವುಡ್ ಸಿನಿಮಾಗಳೂ ಬಿಡುಗಡೆಯಾಗುತ್ತಿವೆ. ಪ್ರಳಯ ಅಥವಾ ಭೂಮಿಯ ಅಂತ್ಯದ ಕುರಿತ ಇಂತಹ ವಿಚಾರಗಳನ್ನು ಹಿಂದೆಮುಂದೆ ನೋಡದೆ ಒಪ್ಪಿಕೊಳ್ಳುವ ಅಥವಾ ತಳ್ಳಿ ಹಾಕುವ ಮುನ್ನ ಈ ಕುರಿತು ಪ್ರಚಲಿತದಲ್ಲಿರುವ ಕೆಲ ಊಹಾಪೋಹಗಳನ್ನು ಅಥವಾ ಮಿಥ್‌ಗಳನ್ನು ಪರಿಶೀಲಿಸೋಣ.

ಮಿಥ್೧ : ಮಾಯನ್ ಕ್ಯಾಲೆಂಡರ್ ಪ್ರಕಾರ ಜಗತ್ತು ಅಂತ್ಯಗೊಳ್ಳುತ್ತದೆ.

ಅಮೆರಿಕ ಖಂಡದಲ್ಲಿ ಕ್ರಿಸ್ತಪೂರ್ವದಲ್ಲಿ ಅಸ್ತಿತ್ವದಲ್ಲಿದ್ದ ಮಾಯಾನಾಗರೀಕತೆಯ ಜನರು ಆಕಾಶಕಾಯಗಳ ದೀರ್ಘಕಾಲ ಅಧ್ಯಯನದಿಂದ ಹಾಗೂ ಗಣಿತ ಲೆಕ್ಕಾಚಾರದ ಸಹಾಯಗಳಿಂದ ಕೆಲವು ರೀತಿಯ ಕ್ಯಾಲೆಂಡರ್‌ಗಳನ್ನು ಅಭಿವೃದ್ಧಿಪಡಿಸಿಕೊಂಡಿದ್ದರು. ಈ ಮಾಯಾ ಜನರು ಖಗೋಳ ಶಾಸ್ತ್ರದಲ್ಲಿ ಬಹಳ ಚಾಣಾಕ್ಷರಾಗಿದ್ದರು. ಆಕಾಶಕಾಯಗಳ ವೀಕ್ಷಣೆಗಾಗಿ ವೀಕ್ಷಣಾಲಯಗಳನ್ನೂ ನಿರ್ಮಿಸಿದ್ದರು. ನಮ್ಮಲ್ಲಿನ ಪಂಚಾಂಗದಂತೆ ಅವರ ಕ್ಯಾಲೆಂಡರ್ ಕೂಡಾ ಸಾಮಾಜಿಕ, ಆಡಳಿತಾತ್ಮಕ ಹಗೂ ಧಾರ್ಮಿಕ ಕಾರ್ಯಗಳಿಗಾಗಿ ರಚಿಸಲ್ಪಟ್ಟಿತ್ತು. ಮಾಯಾ ಜನರ ಮೊದಲ ಕ್ಯಾಲೆಂಡರ್‌ಗಳು ಲಘು ಅವಧಿಯವಾಗಿದ್ದವು. ಅವುಗಳಲ್ಲಿ ೨೬೦ ದಿನಗಳ ಝೋಕ್ ಹಾಗೂ ೩೬೦ ದಿನಗಳಹಾಬ್ ಮುಖ್ಯವಾದವು. ಕ್ರಮೇಣ ಈ ಎರಡೂ ಕ್ಯಾಲೆಂಡರ್‌ಗಳನ್ನೂ ಒಂದುಗೂಡಿಸಿದ್ದರು. ಅದು ೫೨ ಹಾಬ್‌ಗಳನ್ನೊಳಗೊಂಡಿತ್ತು.(ಸು. ೫೨ ವರ್ಷಗಳು.) ಅವರ ಕ್ಯಾಲೆಂಡರ್ ೧೩ ದಿನಗಳ ಒಂದು ಕಾಲಚಕ್ರ, ೨೦ ದಿನಗಳ ಒಂದು ಕಾಲಚಕ್ರ ಹಾಗೂ ರಾತ್ರಿವೇಳೆಯ ಶುಕ್ರಗ್ರಹದ ಗತಿಯನ್ನಾದರಿಸಿದ ಶುಕ್ರಚಕ್ರಗಳನ್ನು ಒಳಗೊಂಡಿರುತ್ತಿತ್ತು. ಈ ಕ್ಯಾಲೆಂಡರ್‌ನಲ್ಲಿ ೫೨ ವರ್ಷಗಳಿಗಿಂತ ಹೆಚ್ಚು ಕಾಲಾವಧಿಯನ್ನು ನೋಡಲಾಗುತ್ತಿರಲಿಲ್ಲ. ಇದಕ್ಕೆ ಮಾಯಾ ಜನರು ಒಂದು ಪರಿಹಾರವನ್ನು ಕಂಡುಕೊಂಡರು. ೨೦ನ್ನು ಮೂಲಘಟಕವನ್ನಾಗಿಟ್ಟುಕೊಂಡು ಅವರು ದೀರ್ಘಕಾಲದ ಒಂದು ಕ್ಯಾಲೆಂಡರ್‌ನ್ನು ಅಭಿವೃದ್ಧಿಪಡಿಸಿಕೊಂಡರು. ಇದನ್ನು ದೀರ್ಘಲೆಕ್ಕಾಚಾರದ ಕ್ಯಾಲೆಂಡರ್ ಎನ್ನಲಾಗುತ್ತದೆ. ಇದರ ಪ್ರಕಾರ ೩೬೦ ದಿನಗಳಿಗೆ ಒಂದು ಟುನ್ ಆಗುತ್ತದೆ. ೨೦ ಟುನ್‌ಗಳಿಗೆ ಒಂದು ಕಟೂನ್. ೨೦ ಕಟೂನ್‌ಗಳಿಗೆ ಒಂದು ಬಕ್ಟೂನ್. (ಸು.೪೦೦ ವರ್ಷಗಳು.) ಈ ಮಾಯನ್ ಕ್ಯಾಲೆಂಡರ್ ೦.೦.೦.೦.೦. ರಿಂದ ಶುರುವಾಗುತ್ತದೆ. ಒಂದೊಂದು ಸೊನ್ನೆಯೂ ೦-೧೯ರವರೆಗೆ ಬಂದು ನಂತರದ ದಿನವು ಹಿಂದಿನ ಸಂಖ್ಯೆಗೆ ಹೋಗುತ್ತದೆ. ಉದಾಹರಣೆಗೆ ಮಯನ್ನರ ಪ್ರಕಾರ ಮೊದಲನೆಯ ದಿನವು ೦.೦.೦.೦.೧. ೧೯ ನೆಯ ದಿನವು ೦.೦.೦.೦.೧೯. ಅದೇ ೨೦ನೆಯ ದಿನವು ೦.೦.೦.೧.೦ ಎಂದಾಗುತ್ತದೆ. ಹೀಗೆ ಇದು ಒಂದು ವರ್ಷವನ್ನು ೦.೦.೧.೦.೦, ೨೦ ವರ್ಷವನ್ನು ೦.೧.೦.೦.೦, ೪೦೦ ವರ್ಷ ಅಥವಾ ಒಂದು ಬಕ್ಟುನ್‌ನನ್ನು ೧.೦.೦.೦.೦ಎಂದು ಬರೆಯಲಾಗುತ್ತದೆ. ಮಾಯನ್ ಕ್ಯಾಲೆಂಡರ್ ಪ್ರಕಾರ ೨.೧೦.೧೨೦೭.೧ ಎಂದು ಬರೆದರೆ ಅದರ ಅರ್ಥ ೧೦೧೨ ವರ್ಷ. ೭ ತಿಂಗಳು ಒಂದು ದಿನವಾಗುತ್ತದೆ.

ಮಾಯನ್ನರು ತಮ್ಮ ಸಂಖ್ಯಾಶಾಸ್ತ್ರಗಳಲ್ಲಿ ೧೩ ಹಾಗೂ ೨೦ನ್ನು ಮೂಲ ಘಟಕಗಳನ್ನಾಗಿಟ್ಟುಕೊಳ್ಳುತ್ತಿದ್ದರು ೨೦೧೨ರ ಡಿಸೆಂಬರ್ ೨೧ಕ್ಕೆ ಅವರ ಕ್ಯಾಲೆಂಡರ್ ಪ್ರಕಾರ ೧೩ ಬಕ್ಟುನ್‌ಗಳು ಮುಗಿಯುತ್ತವೆ . ಆದಿನವನ್ನು ೧೩.೦.೦.೦.೦.ಗೆ ಎಂದು ಓದಬೇಕಾಗುತ್ತದೆ. ಮಾಯಾ ಜನರ ದೀರ್ಘ ಲೆಕ್ಕಾಚಾರದ ಕ್ಯಾಲೆಂಡರ್ ಆರಂಭವಾದ ಆಗಸ್ಟ್೧೧, ೩೧೧೪ಕ್ರಿ.ಪೂ.ದಿಂದ ೫೧೨೬ವರ್ಷಗಳಾಗುತ್ತದೆ.. ಇಲ್ಲಿ ಗಮನಿಸಬೆಕಾದುದು ಏನೆಂದರೆ ಈ ದಿನಕ್ಕೆ ಮಾಯಾ ಜನರು ಮಾಡಿಕೊಂಡಿದ್ದ ಕ್ಯಾಲೆಂಡರ್ ಅವಧಿಯು ಒಂದು ಮಹಾಚಕ್ರ್ರವನ್ನು ಪೂರೈಸುತ್ತದೆ. ಅಂದರೆ ಅದರ ಅರ್ಥ ಅದರ ಮರು ದಿನವು ಮಾಯನ್ನರ ಪ್ರಕಾರ ಮತ್ತೆ .೦.೦.೦.೦.೦ಎಂದು ಆರಂಭವಾಗುತ್ತದೆ. ನಮ್ಮ ಪ್ರಕಾರ ಡಿಸೆಂಬರ್ ೩೧ರ ನಂತರ ಜನವರಿ ೧ ಆರಂಭವಾಗುವುದಿಲ್ಲವೇ ಹಾಗೆ. ಇದರಾಚೆಗೂ ಹಲವು ಪಂಡಿತರು ಮಾಯನ್ನರ ಕ್ಯಾಲೆಂಡರ್‌ನ ಒಂದು ಮಹಾಚಕ್ರವು ಮುಗಿಯುವುದು ೨೦ ಬಕ್ತುನ್‌ಗಳಿಗೆ ಎಂದೂ ವಾದಿಸುತ್ತಾರೆ. ಆದರೆ ಮಾಯನ್ನರು ಎಲ್ಲೂ ಆ ದಿನವೇ ಜಗತ್ತಿನ ಅಂತ್ಯವಾಗುತ್ತದೆ ಎಂದು ಹೇಳಿರಲಿಲ್ಲ. ಜಗತ್ತು ಮುಂದೊಮ್ಮೆ ಮುಗಿದುಬಿಡುತ್ತದೆ ಎಂದು ಮಾಯಾ ಜನರು ಎಲ್ಲಿಯೂ ಉಲ್ಲೇಖಿಸಿಯೂ ಇಲ್ಲ. ಇಂದಿಗೂ ಅಮೆರಿಕಾದಲ್ಲಿ ಬದುಕುತ್ತಿರುವ ಮಾಯಾ ಜನರೇ ಜಗತ್ತಿನ ಅಂತ್ಯದ ಬಗೆಗಿನ ಈ ಪ್ರಚಾರವನ್ನು ನಂಬುವುದಿಲ್ಲ. ಆದರೆ ಕೆಲವು ಸ್ವಾರ್ಥ ಹಿತಾಸಕ್ತಿಗಳು ಮಾಯಾ ಕ್ಯಾಲೆಂಡರ್‌ನ್ನು ಕಪೋಲ ಕಲ್ಪಿತ ಜಗತ್ತಿನ ಅಂತ್ಯ ದೊಂದಿಗೆ ಸಂಬಂಧ ಕಲ್ಪಿಸಿ ಭಾರೀ ಪ್ರಚಾರ ಪಡಿಸುತ್ತಿದ್ದಾರೆ.

ಮಿಥ್ ಎರಡು: ಪ್ರತ್ಯೇಕಗೊಳ್ಳುವ ಖಂಡಗಳು ನಾಗರೀಕತೆಯನ್ನು ನಾಶ ಮಾಡುತ್ತವೆ.
ಪ್ರಳಯಾಂತಕರ ಪ್ರಕಾರ ಭೂಮಿಯ ಕೇಂದ್ರದಲ್ಲಿರುವ ದ್ರವ - ಲೋಹದ ಹೊರ ಕವಚದ ಮೇಲಿರುವ ಭೂಮಿಯ ಮೇಲ್ಪದರಗಳು ತಿರುಗಿಕೊಂಡು ಬಿಡುತ್ತವೆ. ಭಾರೀ ಪ್ರಮಾಣದ ಸೌರ ವಿಕಿರಣಗಳು ಹಾಗೂ ಗ್ಯಾಲೆಕ್ಟಿಕ್ ಅಲೈನ್‌ಮೆಂಟ್ನ ಪರಿಣಾಮವಾಗಿ ಭೂಮಿಯ ಗುರುತ್ವಾಕರ್ಷಣೆಯ ಮೇಲಾಗುವ ಪರಿಣಾಮದಿಂದಾಗಿ ಭೂಮಿಯ ಧೃವಗಳು ಅದಲು ಬದಲಾಗಿ ಬಿಡುತ್ತದೆ ಎಂದು ಅವರ ಅಂಬೋಣ. ಇತ್ತೀಚೆಗೆ ಮಿಡುಗಡೆಯಾಗಿರುವ ೨೦೧೨ ಎಂಬ ಹಾಲಿವುಡ್ ಸಿನೆಮಾದಲ್ಲೂ ಇದನ್ನು ಭಯನಕವಾಗಿ ತೋರಿಸಲಾಗಿದೆ. ಈ ಧೃವ ಸ್ಥಳಾಂತರದಿಂದ ಹಲವು ಖಂಡಗಳು ಸಾಗರಗಳಲ್ಲಿ ಮುಳುಗುತ್ತವೆ, ಭಾರೀ ಸುನಾಮಿಗಳು, ಭೂಕಂಪಗಳಾಗುತ್ತವೆ ಎಂದು ಹೇಳಲಾಗುತ್ತವೆ. ಆದರೆ ನಾಸಾದ ವಿಜ್ಙಾನಿಗಳು ಹಾಗೂ ಜಗತ್ತಿನ ಹಲವಾರು ಖಗೋಳ ಶಾಸ್ತ್ರೀಯ ಸಂಶೋಧನೆಗಳು ಈ ಬಗೆಯ ದಿಢೀರ್ ಬೆಳವಣಿಗೆಗಳನ್ನು ಸ್ಪಷ್ಠವಾಗಿ ತಳ್ಳಿ ಹಾಕಿವೆ. ಭೂಮಿಯ ಇತಿಹಾಸದಲ್ಲಿ ಖಂಡಗಳು ಕೋಟ್ಯಾಂತರ ವರ್ಷಗಳಿಂದಲೂ ಸರಿಯುತ್ತಿವೆ. ಹಾಗೆಯೇ ಭೂಮಿಯ ಧೃವಗಳೂ ಬದಲಾಗುತ್ತವೆ. ಆದರೆ ಈ ಬೆಳವಣಿಗೆಗಳು ಅರಿವಿಗೇ ಬರದಷ್ಟು ನಿಧಾನ ಗತಿಯಲಿ ಸಾವಿರಾರು ವರ್ಷಗಳವರೆಗೆ ನಡೆಯುತ್ತಿರುತ್ತವೆ. ಹಾಗೆಯೇ ಸೂರ್ಯನಿಂದ ಭೂಮಿಯ ರಚನೆಯನ್ನೇ ಪ್ರಭಾವಿಸುವಷ್ಟು ತೀವ್ರವಾದ ವಿಕಿರಣಗಳಾಗಲೀ, ಸೌರ ಬಿರುಗಳಾಗಲೀ ಇದುವರೆಗೂ ಯಾರ ಅರಿವಿಗೂ ಬಂದಿಲ್ಲ.

ಮಿಥ್ ಮೂರು: ಗಾಲೆಕ್ಟಿಕ್ ಅಲೈನ್‌ಮೆಂಟ್ ಜಗತ್ತನ್ನು ನಾಶಗೊಳಿಸುತ್ತದೆ.
ಗ್ಯಾಲೆಕ್ಟಿಕ್ ಅಲೈನ್‌ಮೆಂಟ್(Galectic Alignment) ಎಂದರೆ ನಮ್ಮ ಗ್ರಹವಾದ ಭೂಮಿ, ನಕ್ಷತ್ರವಾದ ಸೂರ್ಯ ಹಾಗೂ ನಾವಿರುವ ಗ್ಯಾಲಾಕ್ಸಿಯಾದ ಕ್ಷೀರಪಥ ಗ್ಯಾಲಾಕ್ಷಿಯ ಕೇಂದ್ರಗಳು ತಮ್ಮ ತಂತಮ್ಮ ಪ್ರದಕ್ಷಿಣೆಯ ಪ್ರಕ್ರಿಯೆಯಲ್ಲಿ ಗ್ಯಾಲಾಕ್ಷಿಯ ಸಮಭಾಜಕ ವೃತ್ತದಲ್ಲಿ ಒಂದೇ ಸರಳರೇಖೆಯಲ್ಲಿ ಜೋಡಣೆಯಾಗುವುದು. ನಮ್ಮ ಭೂಮಿಯು ಸೂರ್ಯನ ಸುತ್ತಲೂ ಹೇಗೆ ಪ್ರದಕ್ಷಿಣೆ ಹಾಕುತ್ತದೆಯೋ ಹಾಗೆಯೇ ಸೂರ್ಯನೂ ತನ್ನ ಪರಿವಾರದ ಸದಸ್ಯರೊಂದಿಗೆ( ಸೌರವ್ಯೂಹ) ಕ್ಷೀರಪಥದ ಕೇಂದ್ರದ ಸುತ್ತಲೂ ತಿರುಗುತ್ತಿರುತ್ತದೆ ತಾನೆ?. ಸಾಮಾನ್ಯವಾಗಿ ಇಂತಹ ಒಂದು ಅಲೈನ್‌ಮೆಂಟ್ ಭೂಮಿಯಿಂದ ನಿಂತು ನೋಡಿದಾಗ ಆಗಾಗ ಸಂಭವಿಸುತ್ತಲೇ ಇರುತ್ತದೆ. ೧೯೯೮ ರಲ್ಲಿ ನಡೆದ ಈ ಬಗೆಯ ಅಲೈನ್‌ಮೆಂಟ್ ಸರಳರೇಖೆಗೆ ಬಹುತೇಕ ಹತ್ತಿರವಿತ್ತು. ಆದರೆ ಈಗ ಸಂಭವಿಸುತ್ತದೆ ಎಂದು ಹೇಳಲಾಗುತ್ತಿರುವುದು ಸೂರ್ಯ ಹಾಗೂ ಭೂಮಿಗಳು ಕ್ಷೀರಪಥದ ಕೇಂದ್ರವನ್ನೇ ಪ್ರವೇಶ ಮಾಡಿಬಿಡುತ್ತವೆ ಎಂದು ಹೆಳಲಾಗುವ ಗ್ಯಾಲೆಕ್ಟಿಕ್ ಅಲೈನ್‌ಮೆಂಟು. ಸೂರ್ಯನು ಇಡೀ ಕ್ಷೀರಪಥ ಗ್ಯಾಲಕ್ಸಿಯ ಕೇಂದ್ರವನ್ನು ಒಂದು ಬಾರಿ ಸುತ್ತುಹೊಡೆಯಲು ತೆಗೆದುಕೊಳ್ಳುವ ಸಮಯ ಸು.೨೨೦ ಮಿಲಿಯನ್ ವರ್ಷಗಳು. ಇಂತಾದ್ದರಲ್ಲಿ ಅದು ಗ್ಯಾಲಕ್ಸಿಯ ಕೇಂದ್ರದ  ನೇರಕ್ಕೆ ಬರಲು ಅದೆಷ್ಟೋ ಲಕ್ಷ ವರ್ಷಗಳೇ ಬೇಕಾಗುತ್ತದೆ. ಅದು ಯವಾಗ ಎನ್ನುವುದು ಇದುವರೆಗೆ ಖಗೋಳಶಾಸ್ತ್ರಜ್ಞರ ಅರಿವಿಗೂ ನಿಲುಕಿಲ್ಲ. ಬರುವ ಡಿಸೆಂಬರ್ ೨೧ ಕ್ಕೇ ಅಂತಹ ಗ್ಯಾಲೆಕ್ಟಿಕ್ ಅಲೈನ್‌ಮೆಂಟ್ ಸಂಭವಿಸಿಬಿಡುತ್ತದೆ ಎಂದು ನಮ್ಮ ಕವಡೆ ಶಾಸ್ತ್ರಿಗಳು ಹಾಗೂ ಟಿ.ಆರ್‌ಪಿ. ರೇಟ್ ಹೆಚ್ಚಿಸಿಕೊಳ್ಳಲು ಏನಾದರೂ ಮಾಡಲು ತಯಾರಿರುವ ಚಾನಲ್‌ಗಳು ಬೊಬ್ಬೆ ಹೊಡೆಯುತ್ತಿರುವುದರಲ್ಲಿ ಜನರನ್ನು ಆತಂಕದಲ್ಲಿ ಮುಳುಗಿಸಿ ತಮ್ಮ ಬೇಳೆಕಾಳು ಬೇಯಿಸಿಕೊಳ್ಳುವ ಹಿತಾಸಕ್ತಿ ಮಾತ್ರವೇ ಕಾಣುತ್ತಿದೆ. 

ಮಿಥ್ ನಾಲ್ಕು: ರಹಸ್ಯ ಗ್ರಹ ಎಕ್ಸ್ ಭೂಮಿಗೆ ಅಪ್ಪಳಿಸುತ್ತದೆ.
ಪ್ಲಾನೆಟ್ ಎಕ್ಸ್ ಅಥವಾ ನಿಬಿರು ಎಂಬ ರಹಸ್ಯ ಗ್ರಹವೊಂದು ಭೂಮಿಗೆ ಅದೆಲ್ಲಿಂದಲೋ ಬಂದು ಭೂಮಿಗೆ ಅಪ್ಪಳಿಸಲಿದೆ ಎಂಬುದು ಮತ್ತೊಂದು ಮಿಥ್ಯೆ. ಇದರೊಂದಿಗೆ ಹಲವು ಕ್ಷುದ್ರ ಆಕಾಶಕಾಯಗಳು, ಉಲ್ಕೆಗಳು, ಅಥವಾ ಧೂಮಕೇತು ಭೂಮಿಗೆ ಬಡಿದು ಭೂಮಿಯನ್ನು ಛಿದ್ರ ಮಾಡಿಬಿಡುತವೆ ಎಂದೂ ಹೇಳಲಾಗುತ್ತದೆ. ಈ ಕುರಿತು ಅಮೆರಿಕದ ಬಹ್ಯಾಕಾಶ ಸಂಸ್ಥೆ ನಾಸಾದ ಖಗೋಳಜೀವಿಜ್ಞಾನಿ ಮೋರಿಸನ್ ಈ ವಿಚಾರಕ್ಕೆ ಸಂಬಂಧಿಸಿದಂತೆ ನೇರವಾಗಿ ಹೇಳಬಹುದಾದ ಒಂದೇ ಉತ್ತರವೆಂದರೆ ಇಲ್ಲ ಅಂತಾದ್ದೇನೂ ಆಗುವುದಿಲ್ಲ ಎನ್ನುತ್ತಾರೆ. ನಿಜವೆಂದರೆ ಈ ನಿಬಿರು ರಹಸ್ಯ ಗ್ರಹದ ಕುರಿತ ಪುಕಾರನ್ನು ೨೦೦೩ ರಲ್ಲೇ ಹರಿಬಿಡಲಾಗಿತ್ತು. ಆದರೆ ಆ ಪ್ರಚಾರವು ಕೊನೆಗೆ ಸುಳ್ಳು ಎಂದು ಸಾಬೀತಾಗಿತ್ತು. ಅಂತಹ ಯಾವುದಾದರೂ ಆಕಾಶಕಾಯವು ಇನ್ನು ಮೂರೇ ವರ್ಷಗಳಲ್ಲಿ ಭೂಮಿಯನ್ನು ಸಮೀಪಿಸುವುದಾದಲ್ಲಿ ಅದು ಇಷ್ಟು ಹೊತ್ತಿಗಾಗಲೇ ಸೌರವ್ಯೂಹವನ್ನು ಪ್ರವೇಶಿಸಿರಬೇಕಿತ್ತು ಹಾಗೂ ಅದು ಬರಿಗಣ್ಣಿಗೆ ಕಾಣಿಸಬೇಕಿತ್ತು ಎಂದು ಮೋರಿಸನ್ ಹೇಳುತ್ತಾರೆ. ಈಗ್ಗೆ ಹಲವಾರು ವರ್ಷಗಳಿಂದಲೂ ಸೌರವ್ಯೂಹದಾಚೆಗೂ ಆಕಾಶವನ್ನು ವೀಕ್ಷಿಸುತ್ತಿರುವ ಭಾರೀ ಗಾತ್ರದ ಟೆಲೆಸ್ಕೋಪುಗಳಿಗಾಗಲೀ, ಕೃತಕ ಉಪಗ್ರಹಗಳಿಗಾಗಲೀ ಕಾಣದ ಈ ಆಕಾಶಕಾಯಗಳು ನಮ್ಮ ನಡುವಿನ ಪ್ರಳಯಾಂತಕರಿಗೆ ಅದು ಹೇಗೆ ಕಂಡಿವೆ ಎಂದೇ ತಿಳಿಯುವುದಿಲ್ಲ.

ಮಿಥ್ ಐದು: ಸೌರ ಬಿರುಗಾಳಿಯು ಭೂಮಿಯನ್ನು ತೀವ್ರವಾಗಿ ದಾಳಿಮಾಡಲಿದೆ.
ಸಾಮಾನ್ಯವಾಗಿ ಸೂರ್ಯನಿಂದ ಭೂಮಿಗೆ ಹಲವು ಬಗೆಯ ವಿಕಿರಣಗಳು ಬರುತ್ತಲೇ ಇರುತ್ತವೆ. ಇವುಗಳಲ್ಲಿ ಹನಿಕಾರಕವಾದವುಗಳನ್ನು ಭೂಮಿಯ ವಾಯುಮಂಡಲದಲ್ಲಿರುವ ಓಝೋನ್ ಪದರವು ತಡೆಯುತ್ತದೆ. ಹಾಗೆಯೇ ಕೆಲವು ವಿಕಿರಣಗಳು ತೀವ್ರ ಸ್ವರೂಪದಲ್ಲಿದ್ದು ಭೂಮಂಡಲವನ್ನು ತಾಕುವುದೂ ಉಂಟು. ಆದರೆ ಇಂದು ಪ್ರಳಯಾಂತಕರು ಹೇಳುವ ರೀತಿಯಲ್ಲಿ ಇಡೀ ಭೂಮಿಯನ್ನೇ ಗುಡಿಸಿ ಹಾಕಬಲ್ಲಂತಹ ಸೌರ ಬಿರುಗಾಳಿಯೇನೂ ಭೂಮಿಯನ್ನು ತಾಕುವ ಯವುದೇ ಸಾಧ್ಯತೆಗಳಿಲ್ಲ. ಅಥವಾ ಇಂತಹ ವಾದಕ್ಕೆ ಪುಷ್ಠಿ ನೀಡುವ ಯಾವುದೇ ಸಾಕ್ಷ್ಯಗಳೂ ಇಲ್ಲ. ಇದೊಂದು ಊಹಾಪೋಹವಷ್ಟೇ. ಇಂದು ಭೂಮಿಯಲ್ಲಿ ಹಸಿರುಮನೆ ಅನಿಲಗಳ ಹೆಚೆಚ್ಚು ಹೊರಸೂಸುವಿಕೆಯಿಂದ ಓಝೋನ್ ಪದರದ ಮೇಲೆ ವ್ಯತಿರಿಕ್ತ ಪರಿಣಾಮಗಳು ಉಂಟಾಗುತ್ತಿರುವುದು ಎಲ್ಲರಿಗೂ ತಿಳಿದ ವಿಷಯ. ಅಲ್ಲದೇ ಭೂಗ್ರಹದ ತಾಪಮನವು ಹೆಚ್ಚಾಗುತ್ತಿರುವುದೂ ಸತ್ಯ. ಆದರೆ ಈ ವಿದ್ಯಮಾನಗಳಿಗೂ ಇಂಟರ್‌ನೆಟ್, ಸಿನೆಮಾ ಟೀವಿ ಪ್ರಚಾರಗಳ ಪ್ರಳಯ, ಡೂಮ್ಸ್ ಡೇ ಅಥವಾ ಅಪೋಕ್ಯಾಲಿಪ್ಸ್ ಅರ್ಥಾತ್ ಜಗತ್ತಿನ ಅಂತ್ಯ ದಂತಹ ಕಟ್ಟುಕಥೆಗಳಿಗೂ ಯಾವುದೇ ಸಂಬಂಧವಿಲ್ಲ.

ಈ ಮೇಲಿನ ಮಿಥ್‌ಗಳಲ್ಲದೇ ಜಗತ್ತಿನ ನಾಶದ ಕುರಿತು ಇನ್ನೂ ಹಲವಾರು ಬಗೆಯ ಊಹಾಪೋಹಗಳಿವೆ. ನ್ಯಾನೋತಂತ್ರಜ್ಞಾನವು ಮಿತಿಮೀರಿ ನಿಯಂತ್ರಣಕ್ಕೇ ಸಿಗದೇ ಹೋಗುವ ಗ್ರೇ ಗೂ(gಡಿeಥಿ goo) ಇಂತದೇ ಇನ್ನೊಂದು ಪ್ರಚಾರ. ಇದರ ಪ್ರಕಾರ ಸ್ವಯಂ ದ್ವಿಗುಣಗೊಳ್ಳುವ ರೋಬೋಟ್‌ಗಳು ಮನುಷ್ಯ ಕುಲವನ್ನೇ ನಾಶ ಮಡಿಬಿಡುತ್ತವಂತೆ. ಮಾನವ ನಿರ್ಮಿತ ಸೂಪರ್ ಕಂಪ್ಯೂಟರ್‌ಗಳು ಮನುಷ್ಯನ ಶೋಷಣೆಯನ್ನು ತಾಳದೆ ದಂಗೆ ಎದ್ದುಬಿಡುತ್ತವೆ ಎನ್ನುವುದು ಇನ್ನೊಂದು ಊಹೆ. ಹೀಗೆ ಇನ್ನೂ ಮುಂದಿನ ದಿನಗಳಲ್ಲಿ ಇನ್ನಷ್ಟು ಇಂತಹ ತಲೆಕೆಟ್ಟ ಪ್ರಳಯದ ವಾದಗಳನ್ನು ಹುಟ್ಟಿಹಾಕಬಹುದು. ದುರಂತವೆಂದರೆ ಇಂದು ಚಾಲ್ತಿಯಲ್ಲಿರುವ ಈ ಪ್ರಳಯದ ಸಿದ್ಧಾಂತಗಳನ್ನು ಪ್ರಚಾರ ಮಾಡುವವರು ಯವಾಗಲೂ ಒಂದಷ್ಟು ವಿಜ್ಞಾನದ ವಿಷಯಗಳನ್ನೂ ತಮ್ಮ ಕುತರ್ಕಗಳಿಗೆ ಸೇರಿಸಿಬಿಟ್ಟಿರುತ್ತಾರೆ. ಆಗ ವಿದ್ಯಾವಂತ ಜನರೂ ಸಹ ನಿಜವೆನೋ? ಎಂದುಕೊಂಡು ಆತಂಕಗಳಿಗೀಡಾಗುತ್ತಾರೆ. ಈ ಬಗೆಯ ಪ್ರಳಯದ ಪ್ರಚಾರಕ್ಕೆ ಭಯಗೊಂಡು ಸಾಯಲು ಅಣಿಯಾದ ಕೆಲವರು ನಾಸಾದಂತಹ ವೈಜ್ಞಾನಿಕ ಸಂಸ್ಥೆಗಳ ಪ್ರಯತ್ನದಿಂದ ಬದುಕಿ ಉಳಿದಿದ್ದಾರೆ. ಆದರೆ ಬದುಕಿನಲ್ಲಿ ಸರಿಯಾದ ವೈಜ್ಞಾನಿಕ ದೃಷ್ಟಿಕೋನವನ್ನು ಅಳವಡಿಸಿಕೊಳ್ಳುವವರು ಈ ಬಗೆಯ ಪುಕಾರುಗಳಿಗೆ ತಲೆಕೆಡಿಸಿಕೊಳ್ಳುವುದಿಲ್ಲ.

ಪ್ರಳಯಭೀತಿಯ ಉದ್ದಿಮೆ.
ಭೂಕಂಪ, ಬಿರುಗಾಳಿ, ಅತಿವೃಷ್ಟಿ, ನೆರೆ, ಪ್ರವಾಹಗಳಂತಹ ನಮ್ಮ ಸುತ್ತ ಮುತ್ತಲೂ ನಡೆಯುವ ಪ್ರಕೃತಿ ವಿಕೋಪಗಳನ್ನೇ ಪ್ರಳಯದ ಮುನ್ಸೂಚನೆ ಎಂದು ಹೇಳಲಾಗುತ್ತಿದೆ. ಆದರೆ ಇಂತಹ ನೈಸರ್ಗಿಕ ವಿಕೋಪಗಳು ಸಾವಿರಾರು ವರ್ಷಗಳಿಂದಲೂ ನಡೆಯುತ್ತಿವೆ. ಕೆಲವೊಮ್ಮೆ ಅವು ಸಣ್ಣ ಪ್ರಮಾಣದಲ್ಲಿಯೂ ಇನ್ನು ಕೆಲವೊಮ್ಮೆ ದೊಡ್ಡ ಪ್ರಮಾಣದಲ್ಲಿಯೂ ನಡೆಯಬಹುದು. ಭೂಮಿಯ ಮೇಲೆ ಕೆಲವು ಹಿಮಯುಗಗಳೇ ಕಳೆದಿವೆ ಎಂದು ಹೇಳಲಾಗುತ್ತದೆ. ಆದರೆ ಅಂತಹ ಯಾವ ಪ್ರಕ್ರಿಯೆಯೂ ಇಡೀ ಭೂಮಿಯನ್ನೇ ಮುಳುಗಿಸುವ ಮಟ್ಟಕ್ಕಾಗಲೀ, ಅದನ್ನು ನಾಶ ಮಾಡುವ ಮಟ್ಟಕ್ಕಾಗಲೀ ನಡೆದಿಲ್ಲ. ಹೀಗಿರುವಾಗ ಈಗ ಇದ್ದಕ್ಕಿದ್ದಂತೆ ಇಡೀ ಪ್ರಪಂಚವೇ ನಾಶವಾಗುತ್ತದೆ ಎನ್ನುವುದು ಶುದ್ಧ ಮೂರ್ಖತನವಾಗುತ್ತದೆ. ವಾಸ್ತವದಲ್ಲಿ ಇಂತಹ ಪ್ರಚಾರಗಳಿಂದ ಇಂದು ಭಾರೀ ಲಾಭ ಪಡೆದುಕೊಳ್ಳುತ್ತಿರುವ ಒಂದು ವರ್ಗವಿದೆ. ಈ ವರ್ಗದಲ್ಲಿ ಜನರಲ್ಲಿ ಆತಂಕ ಹುಟ್ಟಿಸಿ ಅವರು ಪ್ರಳಯದ ಕುರಿತು ಭಾರೀ ಭಯ ಕುತೂಹಲ ಬೆಳೆಸಿಕೊಳ್ಳುವಂತೆ ಮಾಡಿ ಜನರ ದಿನನಿತ್ಯದ ಕೆಲಸ ಕಾರ್ಯಗಳು, ಮತುಕತೆಗಳು ಇದರ ಸುತ್ತಲೇ ಸುತ್ತುವಂತೆ ಮಾಡುವ ಬಂಡವಾಳಿಗ ವರ್ಗವು ಒಂದು. ಇಂದು ಇಂಟರ್‌ನೆಟ್‌ನಲ್ಲಿ ಇರುವ ಸಾವಿರಾರು ಪ್ರಳಯದ ವೆಬ್‌ಸೈಟುಗಳ ಒಡೆಯರು ಪ್ರತಿದಿನ ಕೋಟ್ಯಾಂತರ ರೂಗಳನ್ನು ಬಾಚುತ್ತಿದ್ದಾರೆ. ಹಾಗೆಯೇ ಪ್ರಳಯದ ಕುರಿತ ಸಿನಿಮಾಗಳೂ ಅಷ್ಟೇ ಹಣವನ್ನು ಬಾಚಿಕೊಳ್ಳುತ್ತಿವೆ. ಹಿಸ್ಟರಿ ಚಾನೆಲ್‌ನ ರೂಪಕ್ ಮುರ್ಡೋಕ್‌ನಂತಹ ಟೀವಿ ಚಾನಲ್ ಒಡೆಯರು ಇಂತಹ ಮೌಡ್ಯಗಳ ಸುತ್ತ ಕಾರ್ಯಕ್ರಮ ನಡೆಸಿ ತಮ್ಮ ಚಾನೆಲ್‌ಗಳ ಟಿಆರ್‌ಪಿ. ದರವನ್ನು ಹೆಚ್ಚಿಸಿಕೊಂಡು ಜನರನ್ನು ಭಯಕ್ಕೂ, ಹತಾಶೆಗೂ ತಳ್ಳುತ್ತಿವೆ. ಪತ್ರಿಕೆಗಳು ತಮ್ಮ ಪ್ರಸಾರವನ್ನು ಹೆಚ್ಚಿಸಿಕೊಳ್ಳುತ್ತಿವೆ. ಇವರಿಗೆಲ್ಲಾ ಪ್ರಳಯವೂ ಸಹ ಲಾಭ ತರುವ ಒಂದು ವ್ಯಾಪಾರ ಮಾತ್ರ. ಇವರ ನಡುವೆ ಮೌಢ್ಯವನ್ನೇ ಜನರ ತಲೆಗೆ ತುಂಬಿ ತಾವು ಮಾತ್ರ ದೇವಮಾನವರಾಗಲು ಹವಣಿಸುವ ಜೋತಿಷಿಗಳೂ, ಧಾರ್ಮಿಕ ಮೂಲಭೂತವಾದಿಗಳೂ ಇದ್ದಾರೆ. ಇವರು ಜನರು ಪ್ರಳಯದಿಂದ ಪಾರಾಗಲು ಹೋಮ ಹವನಗಳನ್ನೂ, ಆಧ್ಯಾತ್ಮವನ್ನೂ, ಪೂಜೆ ಪುನಸ್ಕಾರಗಳನ್ನೂ, ಧ್ಯಾನವನ್ನೂ ಹೆಚೆಚ್ಚು ಆಚರಿಸಬೇಕೆಂದು ತಾಕೀತು ಮಾಡುತ್ತಾರೆ. ಸನ್ಮಾರ್ಗದಲ್ಲಿ ಜನರು ನಡೆಯಬೇಕೆಂದು ಹೇಳುವ ಇಂತಹ ಕವಡೆ ಶಾಸ್ತ್ರಿಗಳೇ ಜನರನ್ನು ಮೌಢ್ಯದ ಪರಮಾವಧಿಗೆ ತಳ್ಳುತ್ತಾ, ಅಧಿಕಾರಸ್ತರ ಸಂಗದಲ್ಲಿ ದುರ್ಮಾರ್ಗದಲ್ಲಿ ನಡೆಯುತ್ತಿರುತ್ತಾರೆ. ಈ ಹಿಂದೆ ೧೯೯೯ ರಲ್ಲಿಯೇ ಪ್ರಳಯ ಸಂಭವಿಸಿ ಬಿಡುತ್ತದೆ ಎಂದು ಪುಕಾರು ಹಬ್ಬಿಸಿದವರೂ ಇವರೇ. ಇಂತಹವರ ಮಾತುಗಳನ್ನು ಕೇಳಿದ ಜನರು ತಾವು ನಾಶವಾಗುವ ಭೀತಿಗೆ ಒಳಗಾಗಿ ಈ ಜ್ಯೋತಿಷಿಗಳು ಹೇಳಿದಂತೆ ಕೇಳುತ್ತಾ ಹೋದರೆ ಮನುಷ್ಯ ಸಮಾಜವು ಪ್ರಗತಿಯೆಡೆ ಚಲಿಸುವ ಬದಲಾಗಿ ಅಧೋಗತಿಗಿಳಿಯುತ್ತದೆ ಅಷ್ಟೆ. 

ಅಷ್ಟಕ್ಕೂ ಡಿಸೆಂಬರ್ ೨೧ರಂದು ಆಗಲಿರುವುದು ಏನು??
ಡಿಸೆಂಬರ್ ೨೧ರಂದು ಭೂಗೋಳಿಕವಾಗಿ ನಡೆಯುವ ಒಂದು ಕ್ರಿಯೆ ಎಂದರೆ ಅದು ಪ್ರತಿ ವರ್ಷದಂತೆ ಸಂಭವಿಸುವ ಸೂರ್ಯನ ಪಥ ಬದಲಾವಣೆ. ಅಂದು ಸೂರ್ಯನ ಸುತ್ತಲೂ ಸುತ್ತುವ ಪ್ರದಕ್ಷಿಣೆಯಲ್ಲಿ  ಭೂಮಿಯ ಕರ್ಕಾಟಕ ಸಂಕ್ರಾಂತಿ ವೃತ್ತವು ಸೂರ್ಯನಿಗೆ  ನೇರಕ್ಕೆ ಎದುರು ಬದುರಾಗಿ ನಿಲ್ಲುತ್ತದೆ. ಇದರ ವಿರುದ್ಧ ಕ್ರಿಯೆ ಜೂನ್ ೨೧ರಂದು ನಡೆಯುತ್ತದೆ. ಜೂನ್ ೨೧ರಂದು ಮಕರ ಸಂಕ್ರಾಂತಿ ವೃತ್ತವು ಸೂರ್ಯನಿಗೆ ಎದುರಾಗಿರುತ್ತದೆ. ಭೂಮಿಯು ನೇರವಾಗಿರದೇ ಕೊಂಚ ಓರೆಯಾಗಿದ್ದುಕೊಂಡೇ ಸೂರ್ಯನ ಪ್ರದಕ್ಷಿಣೆ ಹಾಕುವುದೇ ಈ ಬದಲಾವಣೆಗೆ ಕಾರಣ ಮತ್ತು ಇದರಿಂದಾಗಿಯೇ ಭೂಮಿಯ ಮೇಲೆ ಕಾಲಮಾನಗಳ ವ್ಯತ್ಯಾಸ ಕಾಣಿಸಿಕೊಳ್ಳುವುದು. ಹೀಗಾಗಿ ಡಿಸೆಂಬರ್ ೨೧ರಂದು ಪ್ರತಿವರ್ಷವೂ ಭೂಮಿಯ ಉತ್ತರಾರ್ಧ ಗೋಳದಲ್ಲಿ ಚಳಿಗಾಲವೂ ದಕ್ಷಿಣಾರ್ಧ ಗೋಳದಲ್ಲಿ ಬೇಸಗೆ ಕಾಲವೂ ಆರಂಭವಾಗುವ ದಿನವಾಗಿರುತ್ತದೆ. 
ಪ್ರತಿ ದಿನದಂತೆಯೇ ೨೦೧೨ರ ಡಿಸೆಂಬರ್ ೨೧ರ ಮುಂಜಾನೆಯೂ ಸೂರ್ಯೋದಯವಾಗುತ್ತದೆ. ಸಂಜೆಯ ಹೊತ್ತಿಗೆ ಮತ್ತೆ ಸೂರ್ಯಾಸ್ತವಾಗುತ್ತದೆ. ಎಲ್ಲಾ ದಿನಗಳಂತೆಯೇ ಅದೂ ಮತ್ತೊಂದು ದಿನವಾಗುತ್ತದೆ ಅಷ್ಟೆ.  ಡಿಸೆಂಬರ್ 22, 23 ಮತ್ತೆ ದಿನಗಳು ಸಾಗುತ್ತವೆ. ಅಷ್ಟೆ. ಆದರೆ ಮಾಧ್ಯಮಗಳ ಅಥವಾ ಇನ್ನಿತರರ ದುರುದ್ದೇಶಪೂರಿತ ಕಪೋಲಕಲ್ಪಿತ ಪ್ರಚಾರಗಳಿಂದ ನಮ್ಮ ಜನರು ಭಯಗೊಳ್ಳುತ್ತಿದ್ದಾರಂದರೆ ಅದು ನಾವಿನ್ನೂ ವಿಜ್ಞಾನವನ್ನು ಮೈಗೂಡಿಸಿಕೊಳ್ಳಲು ಬಹಳ ದೂರದವರೆಗೆ ಕ್ರಮಿಸಬೇಕು ಎಂಬುದರ ದ್ಯೋತಕ ಮಾತ್ರ. 

-ಹರ್ಷಕುಮಾರ್ ಕುಗ್ವೆ



1 ಕಾಮೆಂಟ್‌:

ಮಹೇಶ ಭಟ್ಟ ಹೇಳಿದರು...

ಪ್ರಳಯದ ಮಿಥ್ ಗಳ ಕುರಿತು ಅತ್ಯಂತ ಸುಂದರವಾಗಿ ವಿವರಿಸಿದ್ದೀರಿ. ನಿಜ ಖಂಡಿತ ಪ್ರಳಯದ ಉದ್ದಿಮೆಯವರಿಗೆ ಮಾತ್ರ ಪ್ರಳಯದಿಂದ ಲಾಭವಾಯಿತು. ಡಿಸೆಂಬರ್ 22 ಎಂದಿನಂತೆ ಯಾವುದೇ ವಿಶೇಷಗಳಿಲ್ಲದೇ ಬಂದು ಹೋಯಿತು.

ನೀವು ಕೊನೆಯಲ್ಲಿ ವಿವರಿಸಿದ ಸೂಪರ್ ರೋಬಾಟ್ ಗಳ ಭಯ ಖಂಡಿತವಾಗಿ ನನಗಂತೂ ಇದೆ. ಮನುಷ್ಯನ ವಿಚಾರ ಕ್ರಮಗಳನ್ನು ಅಲ್ಗೋರಿದಮ್ ಗಳ ಮೂಲಕ ಸಾಕಷ್ಟು ಬಿಚ್ಚಿಡಲಾಗಿದೆ. ಯಂತ್ರಗಳ ಮೂಲಕ ಅವುಗಳನ್ನು ಇಂಪ್ಲಿಮೆಂಟ್ ಮಾಡಲೂ ಪ್ರಯತ್ನಿಸಲಾಗುತ್ತಿದೆ. ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಎಂಬ ಬಹುದೊಡ್ಡ ಶಾಸ್ತ್ರವಾಗಿ ಬೆಳೆದು ನಿಂತಿದೆ. ಮುಂದಿನ ದಿನಗಳಲ್ಲಿ ವಾಸ್ತವವಾಗಿರುವ ಬುದ್ಧಿವಂತ ಯಂತ್ರಗಳ ಭಯ ನನ್ನನ್ನು ಆಗಾಗ ಬೆಚ್ಚಿ ಬೀಳಿಸುತ್ತಿರುತ್ತದೆ.

ಹರ್ಷರವರೇ , ಉತ್ತಮ ಬರಹಕ್ಕಾಗಿ ಧನ್ಯವಾದಗಳು. ನಿಮ್ಮಿಂದ ಇಂತಹ ಬರಹಗಳನ್ನು ಪದೇ ಪದೇ ನಿರೀಕ್ಷಿಸುತ್ತೇನೆ.

ಹೊಸತು - ಹಳತು : ಬುದ್ದ ತತ್ವ

ಲೋಕದ ಪ್ರತಿಯೊಂದೂ ಎಡೆಬಿಡದ ಚಲನೆಯಲ್ಲಿದೆ. ಕೆಲವೊಮ್ಮೆ ಬರಿಗಣ್ಣಿಗೆ ಚಲಿಸದೇ ಜಡವಾಗಿವೆ ಎಂದು ತೋರುವ ಪ್ರತಿಯೊಂದೂ ಚಲನೆಯಲ್ಲಿದೆ. ಒಂದು ಮರದ ತುಂಡು, ಕಬ್ಬಿಣದ ಬಿಲ್ಲೆ,...

ಮರದೊಂದು ಎಲೆ ನಾನು..

ನನ್ನ ಫೋಟೋ
A Writer, Researcher, Journalist and Activist. Born and brought up from Kugwe a village near Sagara, Shimoga district of Karnataka state. Presently working as the Editor In Chief of PEEPAL MEDIA /PEEPAL TV.