ಅಕ್ಟೋಬರ್ 26, 2011

"ಲೋಕಾಯತ ಜನಸಾಮಾನ್ಯರ ತತ್ವ ಪ್ರಣಾಳಕೆ"- ಡಾ. ಜಿ.ರಾಮಕೃಷ್ಣ



ಡಾ. ಜಿ. ರಾಮಕೃಷ್ಣ ಅವರು ನಮ್ಮ ನಾಡು ಕಂಡ ಅಪರೂಪದ ಚಿಂತಕ. ಜೀವಮಾನವಿಡೀ ಸಮಾಜಮುಖಿ ಚಿಂತನೆ ಹಾಗೂ ಕೃತಿಯಲ್ಲಿ ತೊಡಗಿರುವವವರು. ತತ್ವಶಾಸ್ತ್ರ ಕ್ಷೇತ್ರದಲ್ಲಿ ಕನ್ನಡ ಜನತೆಗೆ ಅಪಾರ ಕೊಡುಗೆ ಸಲ್ಲಿಸಿರುವ ಜಿಆರ್ ಎಡಪಂಥೀಯ ಚಿಂತನೆ ಚಿಂತನೆ, ಶಿಕ್ಷಣ, ಸಮಾಜ ಮುಂತಾದವುಗಳ ಬಗ್ಗೆ  ದ ಸಂಡೆ ಇಂಡಿಯನ್ ಅವರೊಂದಿಗೆ ನಡೆಸಿದ ಸಂದರ್ಶನ.


ನೀವು ಎಡಪಂಥೀಯ ಚಿಂತನೆಯಲ್ಲಿ ನಂಬಿಕೆ ಇರುವವರು. ಆದರೆ ಸೋವಿಯತ್ ರಷ್ಯಾ ಹಾಗೂ ಚೀನಾಗಳಲ್ಲಿ ಹಿನ್ನಡೆಯಾದ ನಂತರ ಕುಸಿದ ನಂತರ ಕಮ್ಯುನಿಸಂಗೆ ಭವಿಷ್ಯವಿಲ್ಲ ಎನ್ನುವ ಮಾತಿದೆ.  ಇದಕ್ಕೆ ಏನು ಹೇಳುತ್ತ್ತೀರಿ?
ಮಾರ್ಕ್ಸ್‌ವಾದಕ್ಕೆ ಭವಿಷ್ಯ ಇಲ್ಲ ಎಂದರೆ ಸಮಾಜದ ವಿಕಾಸಕ್ಕೆ ಭವಿಷ್ಯ ಇಲ್ಲ ಎಂದಾಗುತ್ತದೆ. ಸಮಾಜದ ವಿಕಾಸದ ನಿಯಮ ಏನು ಎನ್ನುವುದನ್ನು ಹೇಳುವುದೇ ಮಾರ್ಕ್ಸ್‌ವಾದ. ಸೋವಿಯತ್ ಒಕ್ಕೂಟದಲ್ಲಿ, ಚೀನಾದಲ್ಲಿ ಸಮಾಜವಾದ ಬಿದ್ದೊಡನೆ ಕಮ್ಯೂನಿಸಂ ಸತ್ತೇ ಹೋಯಿತು ಅನ್ನಲಾಗುವುದಿಲ್ಲ. ಸಮಾಜ ಮುಂದೆ ಚಲಿಸುತ್ತದೆಯೇ ಹೊರತು ಹಿಮ್ಮುಖವಾಗಿಲ್ಲ. ಮಾರ್ಕ್ಸ್ ಎನ್ನುವನು ಹುಟ್ಟಿದ್ದಕ್ಕೆ ಸಮಾಜ ಬದಲಾಗಿಲ್ಲ. ಸಮಾಜ ತನ್ನಂತೆ ತಾನು ವಿಕಾಸವಾಗುತ್ತದೆ. ಒಂದು ಶತಮಾನದಲ್ಲಿ ಆಗುವ ಏಳುಬೀಳುಗಳಿಂದ ಏನೂ ಆಗುವುದಿಲ್ಲ. ತಕ್ಷಣದಲ್ಲಿ ವಿಶ್ವಾಸ ಕುಂದಿರಬಹುದು, ಹಾಗಂತ ಮುಂದೆಂದೂ ಹೀಗೇ ಇರುತ್ತದೆಂದಲ್ಲ. ಮಾನವ ಜನಾಂಗದಲ್ಲಿನ ಆಂತರಿಕ ಸಂಘರ್ಷಗಳು ನಡೆಯುತ್ತಲೇ ಇವೆ. ಇಂದೇನೋ ಅಮೆರಿಕ ಸೈನಿಕವಾಗಿ ಬಲಿಷ್ಟವಾಗಿರಬಹುದು. ಎಲ್ಲಾ ಕಡೆ ಹಿಂಸೆ ನಡೆಸುತ್ತಿರಬಹುದು. ಆದರೆ ಮುಂದೆಂದೂ ಅದು ಹೀಗೇ ಇರುತ್ತದೆ ಎಂಬ ನಿಯಮ ಇಲ್ಲ. ಅಮೆರಿಕದಲ್ಲಿ ದಿನಬೆಳಗಾದರೆ ಬಿಕ್ಕಟ್ಟನ್ನು ನೋಡುತ್ತೇವಲ್ಲ. ಏನು ತೋರಿಸುತ್ತದೆ ಅದು?
ಜಗತ್ತಿನ ಸರ್ವಾಧಿಕಾರಿಗಳ ಮಾತು ಬಂದಾಗ ಸ್ಟಾಲಿನ್, ಪೋಲ್‌ಪಾಟ್‌ನಂತಹ ಕಮ್ಯುನಿಸ್ಟರ ಹೆಸರಿರುತ್ತದೆ. ಇವರನ್ನು ಸಮರ್ಥಿಸಿಕೊಳ್ಳಲು ಹೇಗೆ ಸಾಧ್ಯ? 
ಅದೇ ಸಮಸ್ಯೆ. ಅಲ್ಲಿ ಸ್ಟಾಲಿನ್ ಹೆಸರಿರುತ್ತದೆ. ಜಾರ್ಜ್ ಬುಷ್ ಹೆಸರಿರುವುದಿಲ್ಲ. ಯಾರು ದೊಡ್ಡ ಸರ್ವಾಧಿಕಾರಿ. ಯಾರು ಹೆಚ್ಚು ಹಿಂಸೆ ನಡೆಸಿರುವುದು? ಅಮೆರಿಕ ಕೊಂದಷ್ಟು ಜನರನ್ನು ಯಾರೂ ಕೊಂದಿಲ್ಲ. ಸ್ಟಾಲಿನ್ ತನ್ನ ದೇಶದಲ್ಲಿ ಜನರನ್ನು ಕೊಂದ ಎಂಬ ಆಪಾದನೆ  ನಿಜ ಎನ್ನುವುದಾದರೆ ಇವನು ಹತ್ತಾರು ದೇಶಗಳಲ್ಲಿ ಕೊಲ್ಲುತ್ತಲೇ ಇರುವುದನ್ನು ಹಿಂಸೆ ಎಂದು ಕರೆಯುವುದಿಲ್ಲ ಏಕೆ? ಇರಾಕ್, ಅಫಘಾನಿಸ್ತಾನ, ಲಿನಿಯಾ ಎಲ್ಲಾ ಏನು ಹೇಳುತ್ತವೆ? ನಾನು ಪೆರು ಮತ್ತು ಕ್ಯೂಬಾಗೆ ಕಳೆದ ಸಲ ಹೋಗಿ ಬಂದಿದೀನಿ. ಅಲ್ಲಿ ನೋಡಿಬಿಟ್ಟರೆ ಅದೆಷ್ಟು ಜನರನ್ನು ಕೊಂದಿದಾರೆ, ಎಷ್ಟು ನಾಶ ಮಾಡಿದಾರೆ ಅಂದರೆ ಹೇಳಲಾಗಲ್ಲ. ಇನ್ನು ಪೋಲ್ ಪೋಟ್‌ನ್ನು ಯಾರಾದರೂ ಕಮ್ಯುನಿಸ್ಟ್ ಎಂದರೆ ಅವರಿಗೆ ಹುಚ್ಚು ಹಿಡಿದಿದೆ ಅಂತ ಅರ್ಥ. ಅವನು ರಾಕ್ಷಸ. ಅವನಿಗೆ ಸಹಾಯ ಮಾಡಿದ್ದು ಅಮೆರಿಕವೇ. ವಿಶ್ವ ಸಂಸ್ಥೆಯಲ್ಲಿ ಅವನನ್ನು ರಕ್ಷಿಸಿದ್ದು ಅಮೆರಿಕ ಮತ್ತು ಚೀನಾಗಳೇ. ಸ್ಟಾಲಿನ್ ಜನರನ್ನು ಕೊಂದಿದ್ದು ತಪ್ಪಲ್ಲ ಎಂದು ನಾನು ಸಮರ್ಥನೆ ಕೊಡುವುದಿಲ್ಲ ನಾನು. ಆದರೆ ಆಗ ಏನಾಯ್ತು ನೋಡಿ. ಅಂದು ಚರ್ಚಿಲ್ ಸಂಸತ್ ಭಾಷಣದಲ್ಲಿ ಒಂದು ಮಾತು ಹೇಳಿದ್ದ. ’ಕಮ್ಯುನಿಸ್ಟ್ ಕೂಸೊಂದು ಹುಟ್ಟಿಕೊಂಡಿದೆ. ತೊಟ್ಟಿಲಲ್ಲೇ ಅದನ್ನು ಕತ್ತು ಹಿಸುಕಿ ಸಾಯಿಸಿಬಿಡಬೇಕು’ ಅಂತ. ಹೀಗೆ ಸೋವಿಯತ್‌ನ್ನು ಬುಡಮೇಲು ಮಾಡಲು ಸುತ್ತಲಿನಿಂದ ನಡೆದ ಪ್ರಯತ್ನಗಳ ಪರಿಣಾಮವಾಗಿ ಕಂಡವರನ್ನೆಲ್ಲಾ ಅನುಮಾನಿಸುವ ಸ್ಥಿತಿ ಸ್ಟಾಲಿನ್‌ಗೆ ಇತ್ತು. ತನ್ನ ಸರ್ಕಾರದೊಳಗೆ ಇರುವ ಕೆಲವರು ಅಮೆರಿಕದ ಏಜೆಂಟ್‌ಗಳ ಎಂದು ತಿಳಿದಾಗ ಪರಿಸ್ಥಿತಿ ಇನ್ನೂ ಬಿಗಡಾಯಿಸಿತ್ತು. ಜರ್ಮನಿ ರಷ್ಯಾವನ್ನು ಆಕ್ರಮಣ ಮಡಿದಾಗ ಉಳಿದವರೆಲ್ಲರೂ ಸುಮ್ಮನೇ ಕುಳಿತಿದ್ದರು. ಇಂತಹ ಸ್ಥಿತಿಯಲ್ಲಿ ಉಂಟಾದ ಕಷ್ಟನಷ್ಟಗಳು ಕಡಿಮೆಯದಲ್ಲ. ಇವನ್ನೆಲ್ಲಾ ಗಣನೆಯಲ್ಲಿಟ್ಟುಕೊಂಡೇ ಎಲ್ಲವನ್ನೂ ನೋಡಬೇಕು. ಸ್ಟಾಲಿನ್‌ನ್ನು ಮೀರಿಸಿದಂತಹ ಚಂಡಾಲರು ಪ್ರಪಂಚದಲ್ಲಿದ್ದಾರೆ. ಇಂದೂ ಬದುಕಿರುವ ಇಂತವರ ಬಗ್ಗೆ ನನಗೆ ಹೆಚ್ಚು ಆಸಕ್ತಿ. ಕಾಶ್ಮೀರದಲ್ಲಿ ಸ್ಟಾಲಿನ್ ಇಲ್ಲ. ಅಲ್ಲಿ ನಾವು ಎಷ್ಟು ಜನರನ್ನು ಕೊಂದಿದ್ದೇವೆ. ಈಶಾನ್ಯ ಭಾರತದಲ್ಲಿ ಎಷ್ಟು ಕೊಲೆ ಮಾಡಿದ್ದೇವೆ? ನಾವು ಹೇಗೆ ಸ್ಟಾಲಿನ್‌ಗಿಂತ ಕಡಿಮೆ ಆಗುತ್ತೇವೆ.
ಭಾರತದಲ್ಲಿ ತಮ್ಮನ್ನು ತಾವು ಮಾರ್ಕ್ಸ್‌ವಾದಿಗಳು ಎಂದು ಕೊಳ್ಳುವವರ ನೂರಾರು ಬಣಗಳಿವೆ. ಇದಕ್ಕೆ ಕಾರಣವೇನು?
ನಮ್ಮ ದೇಶದಲ್ಲಿ ಮಾರ್ಕ್ಸ್‌ವಾದಿಗಳಿಗೆ ಇರುವ ಜಾಡ್ಯ ಏನೆಂದರೆ ನಾನು ತಿಳಿದುಕೊಂಡಿರೋದೇ ಮಾರ್ಕ್ಸ್‌ವಾದ ಎಂಬ ಮಡಿವಂತಿಕೆಯಲ್ಲಿರುತ್ತಾರೆ. ಇದು ನಿಜವಾದ ಮಾರ್ಕ್ಸ್‌ವಾದ ಅಲ್ಲ. ಇಲ್ಲಿ ಶೋಷಣೆ ಮಾಡುವವರು ಐಕ್ಯತೆಯಿಂದ ಮಾಡುತ್ತಾರೆ. ದೇಶದ ಸಂಪತ್ತನ್ನು ಲೂಟಿ ಮಾಡುವವರು ಒಟ್ಟಾಗಿ ಮಾಡುತ್ತಾರೆ. ಶೋಷಣೆ ವಿರುದ್ಧ ಹೋರಾಡುವವರು ಒಗ್ಗಟ್ಟಾಗಿರುವುದಿಲ್ಲ. ತಮ್ಮದು ಮಾತ್ರ ನಡೆಯುತ್ತದೆ ಎಂಬ ನಿಲುವು ಅವರದ್ದು.
ಶಸ್ತ್ರ ಹಿಡಿದು ಕಾಡಿನಲ್ಲಿರುವ ಮಾವೋವಾದಿಗಳೂ ತಮ್ಮನ್ನು ತಾವು ಮಾರ್ಕ್ಸ್‌ವಾದಿಗಳು    ಎಂದುಕೊಳ್ಳುತ್ತಾರೆ. ಮಾವೋವಾದಿಗಳ ಮಾರ್ಗ ಎಷ್ಟರಮಟ್ಟಕ್ಕೆ ಕಾರ್ಯಸಾಧ್ಯವಾದದ್ದು?
ಶಸ್ತ್ರ ರೂಪದಲ್ಲಿ ಹಿಡಿದುಕೊಂಡು ಹೋರಾಟ ಮಾಡಬೇಕಾ ಇಲ್ಲವೇ ಎಂಬುದನ್ನು ಸೂತ್ರರೂಪದಲ್ಲಿ ಹೇಳಲು ಸಾಧ್ಯವಿಲ್ಲ. ಗಾಂಧಿಯ ಕಾಲದಲ್ಲಿ ಕೆಲವರು ನಾವು ಸಶಸ್ತ್ರ ಹಿಡಿದು ಹೋರಾಡುತ್ತೇವೆಂದಾಗ ಅವರು ನೀವು ಇದರಿಂದ ಗೆಲ್ಲುತ್ತೇವೆ ಎನ್ನುವದಾದರೆ ಇದರಿಂದಲೇ ಗೆಲ್ಲಿ ಹಾಗಾದರೆ ಎಂದು ಹೇಳಿದ್ದರಂತೆ. ಕಡೆಗೆ ಗೆದ್ದಿದ್ದು ಗಾಂಧಿಯೇ ಬಿಡಿ. ಇಲ್ಲಿ ಹಿಂಸೆ ಯಾವುದು ಅಹಿಂಸೆ ಯಾವುದು ಎಂಬುದೆಲ್ಲಾ ಬಹಳ ಅಮೂರ್ತ ಚರ್ಚೆ. ಒಬ್ಬನನ್ನು ಹೊಟ್ಟೆಗೆ ನೀಡದೆ ಸಾಯಿಸುವುದೂ ಹಿಂಸೆಯೇ ಅಲ್ಲವೇ? ಆದರೆ ಅವರ ಶಸ್ತ್ರಕ್ಕೆ ನಿಜವಾದ ಶಕ್ತಿ ಯಾವಾಗ ಬರುತ್ತದೆ ಎಂದರೆ ಜನರ ಮನಸ್ಸು ಆ ಶಸ್ತ್ರದ ಪರವಾಗಿದ್ದಾಗ ಮಾತ್ರ. ಆದರೆ ಆ ಬಂದೂಕಿಗೆ ಜನರೇ ಭಯಬೀಳುತ್ತಾರೆ ಎಂದಾಗ ಅದು ಯಾವ ಬದಲಾವಣೆಯನ್ನೂ ತರುವುದಿಲ್ಲ. ಜನಗಳ ಮನಸ್ಸನ್ನು ಪ್ರವೇಶ ಮಾಡದೇ ಇದ್ದರೆ ಶಸ್ತ್ರ ಹಿಡಿದಾಗಲೀ, ನಿಶಸ್ತ್ರವಾಗಲೀ ವ್ಯತ್ಯಾಸ ಬೀರುವುದಿಲ್ಲ. ಗೆಲುವಿನ ಖಾತ್ರಿ ಇರಬೇಕು, ಧ್ಯೇಯ ಮಕ್ಕಾಗಬಾರದು ಹಾಗೂ ತಲೆಗಳನ್ನು ಕೊಚ್ಚಿ ಹಾಕುವುದಾಗಬಾರದು. ಪೋಸ್ಕೋ ವಿರುದ್ಧ ಹೋರಾಟವನ್ನು ನೋಡಿ. ಜನರ ಮನಸ್ಸನ್ನು ಪ್ರವೇಶ ಮಾಡಿದಾಗ ಆಗುವ ಪರಿಣಾಮ ಏನೆಂದು ತಿಳಿಯುತ್ತದೆ.
ದೇವಿಪ್ರಸಾದ್ ಚಟ್ಟೋಪಾದ್ಯಾಯರ ’ಲೋಕಾಯತ’ ಗ್ರಂಥದ ಅನುವಾದ ಮಾಡಿ ಮುಗಿಸಿದ್ದೀರಿ. ಭಾರತೀತ ತತ್ವಶಾಸ್ತ್ರದಲ್ಲಿ ಲೋಕಾಯತದ ಪ್ರಾಮುಖ್ಯತೆಯ ಬಗ್ಗೆ ಹೇಳಬಹುದಾ?
ಲೋಕಾಯತ ಪದವೇ ಹೇಳವಂತೆ ಅದು ಜನರಿಂದಲೇ ಬಂದಿರುವಂತಹ ತತ್ವಸಾಸ್ತ್ರ. ತತ್ವಶಾಸ್ತ್ರದಲ್ಲಿ ಬಹಳ ಮೂಲಭೂತ ಪ್ರಮೇಯ ಏನೆಂದರೆ ಈ ಜಗತ್ತು ಇದೆಯಾ ಎನ್ನುವುದು. ಲೋಕಾಯತ ಎಂಬುದು ವಾಸ್ತವಿಕ  ಪ್ರಪಂಚವು ನಮ್ಮ ಪ್ರಜ್ಞೆಯಾಚೆಗೂ ಅಸ್ತಿತ್ವ ಪಡೆದಿದೆ ಎಂದು ಸಾರುತ್ತದೆ. ವಸ್ತುನಿಷ್ಠ ರೀತಿಯ ವಿಶ್ಲೇಷಣೆಗೆ ಪ್ರಾಮುಖ್ಯತೆ ನೀಡುತ್ತದೆ. ಅಮೂರ್ತವಾದದ್ದಕ್ಕೆ ಪ್ರಾಮುಖ್ಯತೆ ನೀಡಿ ಮೂರ್ತವಾದ್ದನ್ನು ಕಡೆಗಳಿಸುವುದನ್ನು ಅದು ಒಪ್ಪುವುದಿಲ್ಲ. ಚರಿತ್ರೆಯ ಒಂದು ಹಂತದಲ್ಲಿ ಯೋಚನೆ ಮಾಡುವ ಮನಸ್ಸು, ಕೆಲಸ ಮಾಡುವ ಕೈಗಳು ಜೊತೆಜೊತೆ ಸಾಗಿವೆ. ಮುಂದೊಂದು ಹಂತದಲ್ಲಿ ಚಿಂತಿಸುವ ಮನಸ್ಸು ಕೈಗಳಿಗಿಂತ ಶ್ರೇಷ್ಠ ಎಂದು ಘೋಷಿಸಿಬಿಟ್ಟವು. ಋಗ್ವೇದದಲ್ಲಿ ಒಬ್ಬ ಕವಿಯನ್ನು ’ಬಡಗಿ ಇದ್ದಂಗೆ ಕಣಯ್ಯಾ ನೀನು’ ಎಂದು ಹೊಗಳುವ ಮಾತು ಬರುತ್ತದೆ. ಇಂದು ಒಬ್ಬ ಕವಿಯನ್ನು ಕರೆದು ಹಾಗೆ ಹೇಳಿದರೆ ಅದನ್ನು ಹೊಗಳಿಕೆ ಎಂದೇ ಸ್ವೀಕರಿಸದಿರಬಹುದು. ಅದು ಅವಮಾನಕರವಾಗಿ ಅವನಿಗೆ ಅನಿಸಬಹುದು. ಇದು ಶ್ರಮ ಹಾಗೂ ಬುದ್ಧಿಯ ನಡುವೆ ಅಂತರವನ್ನುಂಟು ಮಾಡಿದ ಪರಿಣಾಮ. ಈ ರೀತಿಯಲ್ಲಿ ಶ್ರೇಷ್ಠ ಕನಿಷ್ಠ ಎಂದು ವಿಗಡಿಸುವುದನ್ನು ಒಪ್ಪದಿರುವ ತತ್ವ ಪ್ರಣಾಳಿಕೆಯೇ ಲೋಕಾಯತ.
ತತ್ವಶಾಸ್ತ್ರ ಎನ್ನುವುದು ಒಂದು ಆಯುಧವಾಗಿ ಬಳಕೆಯಾಗಿದೆ. ಪಾರಮಾರ್ಥಿಕ ಸತ್ಯದ ಬಗ್ಗೆ ಪುಂಕಾನುಪುಂಖವಾಗಿ ಮಾತನಾಡುವವರು ಲೌಕಿಕ ಸುಖಗಳಲ್ಲೇ ತೇಲುತ್ತಿರುತ್ತಾರೆ. ಇಹ ಸತ್ಯವಲ್ಲ, ಪಾರಮಾರ್ಥಿಕವೇ ಸತ್ಯ ಎನ್ನುವವರು ಹಾಗಾದರೆ ಅದನ್ನು ಪಡೆಯಲಿಕ್ಕಾಗಿ ಉಪವಾಸ ಇದ್ದು ಸತ್ತುಹೋಗಿ ಬಿಡಬಹುದಲ್ಲ? ಯಾವ ತತ್ವಸಾಶ್ತ್ರವು ಒಂದು ಆಯುಧವಾಗಿ ಬಳಕೆಸದೇ ಜನರ ಶ್ರೇಯಕ್ಕಾಗಿಯೇ ಇರುವ ಒಂದು ತತ್ವಪ್ರಣಾಳಿಕೆಯೇ ಲೋಕಾಯತ. ಭಗವದ್ಗೀತೆ ಹೇಳುತ್ತೆ ’ಯದ್ಭಾವಂ ತದ್ಭವತಿ’ ಅಂತ. ಬಡತನ ಅಂತ ಯಾಕೆ ಒದ್ದಾಡ್ತೀಯಾ. ಅದು ಬಡತನ ಅಲ್ಲ. ಮನೆ ಇಲ್ಲ ಅಂತ ಯಾಕೆ ಒದ್ದಾಡ್ತೀಯಾ ಅದು ಸತ್ಯ ಅಲ್ಲ. ಜಗತ್ತು ಮಿಥ್ಯೆ ಎಂದೆಲ್ಲಾ ಸಾಗುತ್ತದೆ ಈ ವಾದ. ಹೀಗೆ ವಾಸ್ತವತೆಯಿಂದ ಜನರನ್ನು ದಿಕ್ಕುತಪ್ಪಿಸುವುದೇ ಒಂದು ತತ್ವಶಾಸ್ತ್ರದ ಉದ್ದೇಶವಾದರೆ ಜನರನ್ನು ಸತ್ಯದೆಡೆಗೆ ಕರೆದೊಯ್ಯುವುದು ಲೋಕಾಯತ.
ಅಣ್ಣಾ ಹಜಾರೆ ನೇತೃದ್ವದಲ್ಲಿ ದೇಶದ ಮಧ್ಯಮ ವರ್ಗ ಬೀದಿಗಿಳಿದಿದೆ. ಈ ಭ್ರಷ್ಟಾಚಾರ ವಿರೋಧಿ ಹೋರಾಟದ ಕುರಿತ ನಿಮ್ಮ ಅಭಿಮತವೇನು?
ಇದನ್ನು ಕೆಲವರು ’ಎರಡನೇ ಸ್ವಾತಂತ್ರ್ಯ ಹೋರಾಟ’ ಎಂದು ಕರೆದರು. ನಮ್ಮ ದೇಶದಲ್ಲಿ ಈ ’ಎರಡನೆಯದು’ ಅದೆಷ್ಟು ಸಲ ಬರುತ್ತೆ ಅಂತ? ಮೂರನೆಯದು ಇಲ್ಲವೇ ಇಲ್ಲ. ಈಗ ನಾಗರಿಕ ಸಮಾಜ ಎಂದು ಕರೆದುಕೊಳ್ಳುವ ಶಕ್ತಿ ಈ ಮೂರು ಜನರಿಗೆ ಬಂದಿದ್ದೆಲ್ಲಿಂದ. ಆ ಅರವಿಂದ ಕೇಜ್ರಿವಾಲ್ ಫೋರ್ಡ್ ಫೌಂಡೇಷನ್ ಹಾಗೂ ಸ್ವಲ್ಪ ಹಿಂದೆ ಮುಳುಗಿ ಹೋದ ಅಮೆರಿಕದ ಲೆಹಮನ್ ಬ್ರದರ್ಸ್ ಕಂಪನಿಯಿಂದ ನಾಲ್ಕು ಲಕ್ಷ ಡಾಲರ್ ಪಡೆದುಕೊಂಡು ಈಗ ಭ್ರಷ್ಟಾಚಾರದ ಪಾಠ ಮಾಡುತ್ತಿದ್ದಾರೆ. ಹಾಗಂತ ಭ್ರಷ್ಟಾಚಾರವನ್ನು ಸಹಿಸಬೇಕು ಎಂದು ನಾನು ಹೇಳುತ್ತಿಲ್ಲ. ಆದರೆ ಭ್ರಷ್ಟಾಚಾರದ ಬಗ್ಗೆ ನಮ್ಮ ಕಲ್ಪನೆಯಾದರೂ ಏನು? ನನ್ನ ಪ್ರಕಾರ ಸಾರ್ವಜನಿಕ ಸಂಪತ್ತನ್ನು ಖಾಸಗೀ ಲಾಭ ಮಾಡಿಕೊಳ್ಳಲು ಅವಕಾಶ ಇರುವಾಗೆಲ್ಲಾ ಭ್ರಷ್ಟಾಚಾರ ಇದ್ದೇ ಇರುತ್ತದೆ. ಇದೇ ಅದರ ಮೂಲ. ನಮ್ಮ ಅರ್ಥಿಕ ನೀತಿ ಸಾರ್ವಜನಿಕ ಸಂಪತ್ತನ್ನು ಸಾರ್ವಜನಿಕರಿಗೆ ರೂಢಿಸಿಕೊಳ್ಳಬೇಕು ಎಂಬುದಾಗಿಲ್ಲದಿರುವಾಗ ಭ್ರಷ್ಟಾಚಾರವನ್ನು ತಡೆಯಲು ಆಗೋದೇ ಇಲ್ಲ. ನನ್ನ ಮಾತು ನಿಮಗೆ ಸಿನಿಕತೆಯಿಂದ ಕೂಡಿದ್ದು ಎಂದು ನಿಮಗೆ ಅನ್ನಿಸಬಹುದು. ಇಂದು ಪ್ರತಿಯೊಂದನ್ನೂ ಖಾಸಗಿಯವರಿಗೆ ಕೊಡುತ್ತಿರುವಾಗ ಯಾವ ’ಪಾಲ’ದಿಂದಲೂ ಭ್ರಷ್ಟಾಚಾರ ನಿರ್ಮೂಲನೆ ಆಗುವುದಿಲ್ಲವೇನೋ. ನೋಡಿ. ಕನಕಪುರ ರಸ್ತೆಯಲ್ಲಿ ರೈತರ ಜಮೀನು ಕಿತ್ತುಕೊಂಡು ತಾನೇ ದೊಡ್ಡ ಭ್ರಷ್ಟ ಆಗಿ ರೈತರಿಂದ ಒದೆತ ತಿನ್ನದೇ ಬಚಾವಾಗಿರುವ ರವಿಶಂಕರ್ ಗುರೂಜಿ ಈ ಹೋರಾಟದಲ್ಲಿ ಭಾಗವಹಿಸಿದರು. ಯಾವ ನೈತಿಕ ಹಕ್ಕು ಇವರಿಗಿತ್ತು? ಇಂತವರನ್ನು ಈ ಹೋರಾಟದಲ್ಲಿ ಬಿಟ್ಟುಕೊಂಡದ್ದು ಹೇಗೆ?
ನಿಮ್ಮ ಅಭಿಪ್ರಾಯದಲ್ಲಿ ಸಮಾಜವನ್ನು ಇಂದು ಕಾಡುತ್ತಿರುವ ಸಮಸ್ಯೆಗಳಲ್ಲಿ ಯಾವ ಸಮಸ್ಯೆ ಗಂಭೀರವಾದದ್ದು? 
ಇಂದು ಮುಖ್ಯವಾದ ಸಮಸ್ಯೆ ಜನರ ಪರಿಸ್ಥಿತಿಯನ್ನು ವಿಶ್ಲೇಷಣೆ ಮಾಡಲಿಕ್ಕೆ ಬೇಕಾದ ಸಾಮಗ್ರಿಯನ್ನೇ ನಾವು ಜನರಿಗೆ ತಲುಪಿಸದಿರುವುದು. ’ಸಮಸ್ಯೆ ಯಾಕಿದೆ ಎನ್ನುವುದು ತಿಳಿಯದಿರುವುದೇ ಇಂದು ದೊಡ್ಡ ಸಮಸ್ಯೆ ಎಂಬುದು ನನ್ನ ಭಾವನೆ.
ಮತ್ತೆ ಶಿಕ್ಷಣ ಮಾಧ್ಯಮದ ಬಗ್ಗೆ ಚರ್ಚೆ ನಡೆಯುತ್ತಿದೆ. ಶಿಕ್ಷಣ ಕ್ಷೇತ್ರದಲ್ಲಿ ಕೆಲಸಮಾಡಿರುವ ಶಿಕ್ಷಣ ಕ್ಷೇತ್ರದ ಸ್ಥಿತಿಗತಿಯ ಬಗ್ಗೆ ಏನು ಹೇಳುತ್ತೀರಿ?
 ಇಂಗ್ಲಿಷ್ ಓದಿದೋರೆಲ್ಲಾ ಅಮೆರಿಕಕ್ಕೆ ಹೋಗ್ತಾರೆ ಎನ್ನೋ ಒಂದು ಯೂಫೋರಿಯಾ ಇದೆ. ಎಂತಹಾ ಪರಿಸ್ಥಿತಿ ಇದೆ ಈ ಕಾನ್ವೆಂಟ್‌ಗಳಲ್ಲಿ ಅಂದರೆ  ಮಕ್ಕಳಿಗೆ ಜೋಕುಗಳನ್ನೂ ಗಟ್ಟು ಮಾಡಿಸಿ ಹೇಳಿಸುತ್ತಾರೆ. ಅದರ ಅರ್ಥವೇ ಅವರಿಗೆ ತಿಳಿದಿರುವುದಿಲ್ಲ. ನಮ್ಮಲ್ಲಿ ಹೆಚ್ಚು ಯಾಕೆ ವಿಜ್ಞಾನಿಗಳು ಬರುತ್ತಿಲ್ಲ?. ಈ ಕ್ಷೇತ್ರಗಳಿಗೆ ಇಷ್ಟೆಲ್ಲಾ ಹಣ ಖರ್ಚು ಮಾಡುವಾಗ ಅದಕ್ಕೆ ತಕ್ಕ ಉತ್ಪಾದನೆ ಯಾಕೆ ಬರುತ್ತಿಲ್ಲ? ಪ್ರಾಥಮಿಕ ಹಂತದಲ್ಲಿ ಮಕ್ಕಳಿಗೆ ಪರಿಕಲ್ಪನೆಗಳನ್ನು ಅರ್ಥ ಮಾಡಿಸುವ ಬದಲಿಗೆ ಗಟ್ಟು ಹೊಡೆಸುತ್ತಾರೆ. ಇದರಿಂದಾಗಿ ಮಕ್ಕಳಲ್ಲಿ ಹೊಸದನ್ನು ಕಂಡುಕೊಳ್ಳುವ ಸಾಮರ್ಥ್ಯವೇ ಹೊರಟು ಹೋಗುತ್ತ್ತಿದೆ. ನಮ್ಮ ದೇಶದಲ್ಲಿ ಮಾಧ್ಯಮದ ಒಂದೇ ಕಾರಣದಿಂದಾಗಿ ಮಕ್ಕಳ ಪ್ರತಿಭೆ ಕುಂಠಿತವಾಗುತ್ತ್ತಿದೆ. ಇಂಗ್ಲಿಷ್ ಕಲಿಯುವುದರಲ್ಲೇ ಅವರ ಎಲ್ಲಾ ಶಕ್ತಿ ಉಡುಗಿ ಹೋಗುತ್ತದೆ.  
ಮೊನ್ನೆ ಶಿಕ್ಷಣ ಹಕ್ಕು ಕಾಯ್ದೆ ಜಾರಿಯಗಿದೆ. ಖಾಸಗಿಯವರು ಅದರ ವಿರುದ್ಧ ನ್ಯಾಯಾಲಯಕ್ಕೆ ಹೋಗಿದ್ದಾರೆ. ಅವರ ಕೈಯೇ ಮೇಲಾಗಲೂಬಹುದು. ಇಲ್ಲಿ ಯಾವಾಗ ಶಿಕ್ಷಣದಲ್ಲಿ ಎಲ್ಲಾ ವರ್ಗಗಳಿಗೂ ಪ್ರವೇಶ ಸಾಧ್ಯವಾಯಿತೋಯಿತೋ ಆ ನಂತರದಲ್ಲಿ ಸಮಾಜದ ಮೇಲುಸ್ತರದ, ಮೇಲ್ವರ್ಗಗಳು ಶಿಕ್ಷಣದ ಖಾಸಗೀಕರಣಕ್ಕೆ ಒತ್ತಾಸೆಯಾಗಿ ನಿಂತು ತಮ್ಮ ಮಕ್ಕಳನ್ನು ಖಾಸಗಿ ಶಾಲಾ ಕಾಲೇಜುಗಳಿಗೆ ಕಳುಹಿಸುವ ವ್ಯವಸ್ಥೆ ಮಾಡಿಕೊಂಡರು. ಶಿಕ್ಷಣ ಖಾಸಗಿಕರಣಗೊಳಿಸಿರುವುದರಲ್ಲಿ ಸಮಾಜದ ಮೇಲ್ಜಾತಿ ಮನಸ್ಸುಗಳು ಕೆಲಸಮಾಡಿವೆ.
ಕನ್ನಡ ಸಾಹಿತ್ಯ ಕ್ಷೇತ್ರ ಯಾವ ದಿಸೆಯಲ್ಲಿ ಸಾಗುತ್ತಿದೆ ಎಂದು ನಿಮ್ಮ ಅವಗಾಹನೆ?
ಹಿಂದೆ ಒಬ್ಬ ಆಧುನಿಕ ಕವಿ ಏನಾದರೂ ಬರೆದದ್ದು ’ನನಗೆ ಅರ್ಥ ಆಯ್ತು’ ಎಂದರೆ ’ಮಹಾ ಜಂಭ ನಿನಗೆ. ಅವರು ಬರೆದದ್ದು ಅರ್ಥ ಆಗಿ ಬಿಟ್ಟಿತೋ’ ಎಂದು ಕೇಳುತ್ತಿದ್ದರು. ’ಏನೂ ಅರ್ಥ ಆಗಿಲ್ಲ’ ಎಂದರೆ ದಡ್ಡ ನೀನು ನಿನಗೇನು ಅರ್ಥ ಆಗುತ್ತೆ ಸಾಹಿತ್ಯ?’ ಎಂದು ಬೈಯುತ್ತಿದ್ದರು. ಹೇಗೂ ಬೈಸಿಕೊಳ್ಳೋದೇ ಆಗಿತ್ತು. ಪಾಶ್ಚಾತ್ಯ ದೇಶದಲ್ಲಿ ಏನೇನು ಸಾಹಿತ್ಯ ಪರಿಕಲ್ಪನೆಗಳು ಬರುತ್ತೋ ಅದು ಭಾರತದಲ್ಲಿ ಮೊತ್ತಮೊದಲು ಕನ್ನಡದಲ್ಲೇ ಬರುವುದು. ನೋಡಿ ಈಗ ’ರಾಚನಿಕೋತ್ತರ’ ಎನ್ನುತ್ತಾರೆ. ಏನು ಹಾಗಂದರೆ ಎಂದು ಯಾರಿಗಾದರೂ ಕೇಳಿ. ಇವೆಲ್ಲಾ ನಮ್ಮ ಸಂದರ್ಭದಲ್ಲಿ ಹುಟ್ಟಿರುವುದಲ್ಲ. ಯಾರದ್ದೋ ಅನುಭವವನ್ನು ಹಾಗೆ ಹೇಳುತ್ತಾನೆ. ನಾವು ಕೋತಿಗಳು. ಅದನ್ನು ಯಥಾವತ್ ಹಾಗೇ ಆಧುನಿಕೋತ್ತರ, ರಾಚನಿಕೋತ್ತರ ಎಂದೆಲ್ಲಾ ಬಡಬಡಿಸುತ್ತೇವೆ. ಕನಕದಾಸ ಸಾಹಿತ್ಯದಲ್ಲಿ ’ಪೋಸ್ಟ್ ಸ್ಟ್ರಕ್ಚರಲಿಸಂ’ ಇದೆ, ಡೆರಿಡಾನ ಮೆಥಡ್ ಇದೆ, ಡಿಕನ್ಸ್ಟ್ರಕ್ಷನ್ ಇದೆ ಎಂದೆಲ್ಲಾ ಎಲ್ಲಾ ಪಾರಿಭಾಷಿಕ ಪದಗಳನ್ನೂ ತುರುಕುತ್ತಿದ್ದೇವೆ. ಇದು ಪಂಡಿತರ ಒಂದು ಶಾಕೆ. ಮತ್ತೊಂದು ಎಲ್ಲರಿಗೂ ತಿಳಿಯುವಂತೆ ಬರೆಯುವ, ಸಾಮಾನ್ಯ ತುಮುಲಗಳನ್ನು ಪ್ರತಿಫಲಿಸುವ ಶಾಖೆ ಒಂದಿದೆ. ಈಗ ಇದ್ದುದರಲ್ಲಿ ಪಂಡಿತರ ಶಾಖೆ ದುರ್ಬಲಗೊಂಡಿದೆ ಎಂದೇ ಕಾಣಿಸತ್ತೆ. ಅದು ವಿಶ್ವವಿದ್ಯಾಲಯ ವಿಚಾರಸಂಕಿರಣ ಹಾಗೂ ಕೆಲವೇ ಸಾಹಿತ್ಯ ಪತ್ರಿಕೆಗಳಿಗೆ ಸೀಮಿತವಾಗಿದೆ. ಆದರೆ ಸಾಮಾನ್ಯರ ಸಾಹಿತ್ಯ, ಜನರ ಹತ್ತಿರಕ್ಕೆ ಹೋಗುತ್ತಿರುವ ಸಾಹಿತ್ಯ ಇಂದು ಮೊದಲಿಗಿಂತ ಹೆಚ್ಚಿಗೆ ಬರುತ್ತಿದೆ. ಬರೆಯುವಂತವರೂ ಎಲ್ಲಾ ಸ್ತರಗಳಿಂದಲೂ ಬರುತ್ತಿದ್ದಾರೆ. ಅಷ್ಟರ ಮಟ್ಟಿಗೆ ಇದು ಸ್ವಾಗತಾರ್ಹ.

ಬಿಜೆಪಿ ಸರ್ಕಾರವು ಮೂರುವರ್ಷಗಳನ್ನು ಪೂರೈಸಿರುವ ಹೊತ್ತಿನಲ್ಲಿ ಅದರ ಆಡಳಿತ ವೈಖರಿಯ ಕುರಿತು   ಹೇಳುತ್ತೀರಿ?
ಒಂದೇ ಮಾತಲ್ಲಿ ಹೇಳುವುದಾದರೆ ಇವರ ಹಿಂದೆ ಆಡಳಿತ ನಡೆಸಿದವರು ಮೂವತ್ತು ವರ್ಷದಲ್ಲಿ ಕಮಾಯಿಸಿದ್ದನ್ನು ಇವರು ಮೂರೇ ವರ್ಷದಲ್ಲಿ ಕಮಾಯಿಸಿದ್ದಾರೆ. ಕಾಂಗ್ರೆಸ್ ನವರಿಗೆ ಸ್ವಲ್ಪ ತಾಳ್ಮೆಯಾದರೂ ಇತ್ತು. ಈ ಸಲ ಧರ್ಮಸಿಂಗ್ ತಿನ್ನಲಿ ಮುಂದಿನವರ್ಷ ನಾನು ತಿನ್ನಬಹುದು ಎಂದು. ಆದರೆ ಇವರು ಹಾಗಲ್ಲ ಮುಂದೇ ಅವಕಾಶವೇ ಸಿಗುವುದಿಲ್ಲ ಎಂಬಂತೆ ತಿನ್ನುತ್ತಿದ್ದಾರೆ. ಅದಕ್ಕಾಗಿ ಇವರ ಕಚ್ಚಾಟ ನೋಡಿ. ಸಾಮಾನ್ಯವಾಗಿ ಸರ್ಕಾರದಲ್ಲಿ ಬೇರೆ ಬೇರೆ ಪಕ್ಷಗಳು ಸೇರಿ ಸಂಯುಕ್ತ ಸರ್ಕಾರ ರಚಿಸುತ್ತವೆ. ಆದರೆ ನಮ್ಮ ರಾಜ್ಯದಲ್ಲಿ ಒಂದೇ ಪಕ್ಷವೇ ಸಂಯುಕ್ತ ಸರ್ಕಾರ ರಚಿಸಿಕೊಂಡಿದೆ. ಅತ್ಯಂತ ಹೀನಾಯ ಮಟ್ಟವನ್ನು ಮುಟ್ಟಿದೆ. ಮೌಲ್ಯಗಳಿಗೆ ಅರ್ಥವೇ ಇಲ್ಲ. ರಾಜಕೀಯ ಸಿದ್ಧಾಂತಕ್ಕೆ ಸ್ಥಾನವೇ ಇಲ್ಲ. ಶಿಸ್ತು ಅದೂ ಇದೂ ಎಂದು ಮಾತಾಡುವ ಆರ್‌ಎಸ್‌ಎಸ್ ಇದಕ್ಕೆ ಏನು ಮಾಡಿದೆ?. ಸಂಘದಿಂದಲೇ ಮೌಲ್ಯ ಕಲಿಯಲು ಸಾಧ್ಯ ಎನ್ನುತ್ತಿದ್ದರಲ್ಲಾ. ನಾವು ಈಗ ನೋಡುತ್ತಿರುವುದೇನು? ಸಂಘದಿಂದ ಬಂದವರೇ ಮಾಡುತ್ತಿರುವುದೇನು? ಬೇರೇನೂ ಬೇಡ. ಈ ಹಿಂದೆ ಗೋಡೌನ್‌ಗಳಲ್ಲಿ ತುಂಬಿದ್ದ ೧೭ ಕೋಟಿ ರೂಪಾಯಿಗಳ ರಾಷ್ಟ್ರೋತ್ಥಾನದ ಪುಸ್ತಕಗಳನ್ನು ಬಿಜೆಪಿ ಸರ್ಕಾರ ಬಂದ ಮೇಲೆ ಶಾಲಾ ಕಾಲೇಜು ಲೈಬ್ರಿಗಳಿಗೆ ತುಂಬಿದರು. ಅದರಲ್ಲಿ ಒಳ್ಳೆಯದೂ ಇರಬಹುದು ಕೆಟ್ಟದೂ ಇರಬಹುದು. ನನ್ನ ಸರ್ಕಾರ ಬಂದೊಡನೆ ಹೀಗೆ ಒಂದೇ ಪ್ರಕಾಶನದ ಪುಸ್ತಕಗಳನ್ನು ಮಾರಿಬಿಡುವುದು ಯಾವ ಮೌಲ್ಯವನ್ನು ತೋರಿಸುತ್ತೆ? ನಾನು ಆರೆಸ್ಸೆಸ್ ವಿರೋಧಿಯಾದರೂ ಅವರಲ್ಲಿ ಕೆಲವರಾದೂ ನೀತಿ ನಿಯಮ ಇಟ್ಟುಕೊಂಡು ಬದುಕಿದವರಿದ್ದಾರೆ. ಅವರ ಭಾವನೆ ಸಿದ್ದಾಂತ ನಂಬದೇ ಇದ್ದರೂ ಅವರಲ್ಲಿ ಹಿಂದೆ ಕೆಲವರಾದರೂ ಒಳ್ಳೆಯ ನಡೆತೆಯವರು ಇರುತ್ತಿದ್ದರು. ವ್ಯಕ್ತಿಗತವಾಗಿ ಕಾಗೇರಿ ಬಗ್ಗೆ ನನಗೆ ಕೊಂಚ ಒಳ್ಳೆಯ ಭಾವನೆ ಇದೆ. ಆದರೆ ಉಳಿದ ಸಂಘದ ಹಿನ್ನೆಲೆಯ ವ್ಯಕ್ತಿಗಳನ್ನು ನೋಡಿ. ಅಸಹ್ಯ ಬರುತ್ತದೆ.

ಕಾಮೆಂಟ್‌ಗಳಿಲ್ಲ:

ಹೊಸತು - ಹಳತು : ಬುದ್ದ ತತ್ವ

ಲೋಕದ ಪ್ರತಿಯೊಂದೂ ಎಡೆಬಿಡದ ಚಲನೆಯಲ್ಲಿದೆ. ಕೆಲವೊಮ್ಮೆ ಬರಿಗಣ್ಣಿಗೆ ಚಲಿಸದೇ ಜಡವಾಗಿವೆ ಎಂದು ತೋರುವ ಪ್ರತಿಯೊಂದೂ ಚಲನೆಯಲ್ಲಿದೆ. ಒಂದು ಮರದ ತುಂಡು, ಕಬ್ಬಿಣದ ಬಿಲ್ಲೆ,...

ಮರದೊಂದು ಎಲೆ ನಾನು..

ನನ್ನ ಫೋಟೋ
A Writer, Researcher, Journalist and Activist. Born and brought up from Kugwe a village near Sagara, Shimoga district of Karnataka state. Presently working as the Editor In Chief of PEEPAL MEDIA /PEEPAL TV.