ಅಕ್ಟೋಬರ್ 26, 2011

ಸಹಜ ಕೃಷಿಯಿಂದ ನಮ್ಮನ್ನು ನಾವು ಉಳಿಸಿಕೊಳ್ಳಬಹುದು- ಕಡಿದಾಳು ಶಾಮಣ್ಣ


ಕಡಿದಾಳು ಶಾಮಣ್ಣನವರನ್ನು ಹತ್ತಿರದಿಂದ ನೋಡಿದ್ದು ಹತ್ತು ವರ್ಷದ ಹಿಂದೆಕುದುರೆಮುಖ ಗಣಿಗಾರಿಕೆಯ ವಿರುದ್ಧ ನಡೆಯುತ್ತಿದ್ದ ಜನಾಂದೋಲನದ ಸಂದರ್ಭದಲ್ಲಿ. ನಮ್ಮಂತಹ ಯುವಕರನ್ನು ತಮ್ಮ ನಡೆನುಡಿಗಳಿಂದ  ಪ್ರಭಾವಿಸಿ ಪ್ರೇರೇಪಿಸುತ್ತಿದ್ದ ಶಾಮಣ್ಣನವರನ್ನು  ಸಂಡೆ ಇಂಡಿಯನ್ ಗಾಗಿ ಒಂದೆರಡು ಗಂಟೆಗಳ ಕಾಲ ಭಗವತಿಕೆರೆಯ ಮನೆಯಲ್ಲಿ ಸಂದರ್ಶಿಸುವ ಸಂದರ್ಭ ಒದಗಿ ಬಂದಾಗ ಸಹಜವಾಗಿ ಸಂತೋಷವಾಗಿತ್ತು. ನಾನು ಮತ್ತು ಗೆಳೆಯ ಕಿರಣ್ ಮಾರಶೆಟ್ಟಿಹಳ್ಳಿ ಜೊತೆಗೂಡಿ ಹೋದೆವು. ನಿಜಕ್ಕೂ ಅದೊಂದು ಆಪ್ಯಾಯ ಮಾನವಾದ ಮಾತುಕತೆ. ಶ್ರೀದೇವಿ ಅಕ್ಕ ತೋರಿದ ಅಕ್ಕರೆ ಮರೆಯಲಾರದ್ದು. ಹೊತ್ತು ಸರಿದದ್ದೇ ತಿಳಿಯಯಲಿಲ್ಲಕೊನೆಗೆ ತಮ್ಮ ಸರೋದ್ ಹಾಗೂ ಹಾರ್ಮೋನಿಯಂ ನುಡಿಸಿ ನಮ್ಮ ಮನಸ್ಸನ್ನು ಮುದಗೊಳಿಸಿದರು ಶಾಮಣ್ಣಮತ್ತಷ್ಟು ಹೊತ್ತು ಅವರೊಂದಿಗೆ ಕಳೆಯುವ ಮನಸ್ಸಾಗುತ್ತಿದ್ದರೂ ಕತ್ತಲುಗೂಡಿದ್ದರಿಂದ ಅವರಿಂದ ಬೀಳ್ಕೊಂಡೆವು. ಮರುದಿನ ಶ್ರೀದೇವಿ ಅಕ್ಕನಿಂದ ಒಂದು ಕರೆ ಬಂದಿತು. "ಹರ್ಷಾ, ನೆನ್ನೆ ತುಂಬಾ ಬೇಸರವಾಗಿಬಿಟ್ಟಿತು. ಎಷ್ಟೊಂದು  ಹಣ್ಣುಗಳಿದ್ದವು ಮನೆಯಲ್ಲಿ. ಗಡಿಬಿಡಿಯಲ್ಲಿ ನಿಮಗೆ ಕೊಡಲು ನೆನಪೇ ಆಗಲಿಲ್ಲ. ನೀವು ಹೋದ ಮೇಲೆ ನೆನಪಾಗಿ  ಇಬ್ಬರಿಗೂ ಬಹಳ ನೋವಾಯಿತು. ಮತ್ತೊಮ್ಮೆ ಮನಗೆ ನೀವು ಬರಲೇ ಬೇಕು". ನನಗೂ ಹೃದಯ ತುಂಬಿ ಬಂತು. ’ಖಂಡಿತಾ ಬರ್ತೀವಕ್ಕಾ" ಎಂದೆ.

ಸಹಜ ಕೃಷಿಯಿಂದ ನಮ್ಮನ್ನು ನಾವು ಉಳಿಸಿಕೊಳ್ಳಬಹುದು- ಕಡಿದಾಳು ಶಾಮಣ್ಣ

ನಾಡಿನ ರೈತ ಹಾಗೂ ಸಮಾಜವಾದಿ ಚಳವಳಿಯಲ್ಲಿ ಕಡಿದಾಳು ಶಾಮಣ್ಣ ದೊಡ್ಡ ಹೆಸರು. ಕಳೆದ ನಾಲ್ಕೈದು ದಶಕಗಳಿಂದಲೂ ನಾನಾ ಬಗೆಯ ಕ್ರಿಯಾಶೀಲತೆಯಲ್ಲಿ ತಮ್ಮನ್ನು ಹಾಗೂ ತಮ್ಮ ಸುತ್ತಲ ಪರಿಸರವನ್ನು ಆರೋಗ್ಯವಾಗಿಟ್ಟಿರುವ ಶಾಮಣ್ಣ ಹಲವಾರು ಪ್ರಸ್ತುತ ವಿಷಯಗಳ  ಕುರಿತು ಇಲ್ಲಿ ಮಾತಾಡಿದ್ದಾರೆ.

ನಮ್ಮ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪನವರು ಜೈಲು ಸೇರಿದ್ದಾರೆ. ಈ ಕುರಿತು ಏನು ಪ್ರತಿಕ್ರಿಯೆ ನೀಡುತ್ತೀರಿ? 
ಇದು ನ್ಯಾಯಾಲಯದ ವಿಚಾರ.ಶಿವಮೊಗ್ಗದಲ್ಲಿ ನಡೆಯುತ್ತಿದ್ದ ಚಟುವಟಿಕೆಗಳನ್ನು ನೋಡಿ ಬಹಳ ಬೇಸರವಾಗಿತ್ತು. ಕಡಿದಾಳು ಮಂಜಪ್ಪ, ಶಾಂತವೇವೇರಿ ಗೋಪಾಲಗೌಡರಂತವರು ಇದ್ದ ಜಿಲ್ಲೆಯಲ್ಲಿ ಇವರು ಹೀಗೆ ಮಾಡಬಾರದಿತ್ತು. ಇಲ್ಲಿ ಅಭಿವೃದ್ಧಿ ಅಂತ ರಸ್ತೆ ಅಗಲೀಕರಣ ಮಾಡಿದಾರೆ. ಅದೇನೋ ಸರಿ. ಆದರೆ ಮುಖ್ಯರಸ್ತೆ ಬಿಟ್ಟು ಸ್ವಲ್ಪ ಒಳಗೆ ನೋಡಿದರೆ ಯಾವ ಅಭಿವೃದ್ಧಿಯೂ ಇಲ್ಲ. ಆದರೆ ಇವರು ಸ್ವಂತಕ್ಕೆ ತಡೆ ಇಲ್ಲದೆ ಆಸ್ತಿ ಮಾಡಿಕೊಂಡಿದ್ದು ಸರಿ ಅಂತ ನನಗೆ ಅನ್ನಿಸಿಲ್ಲ. ಯಡಿಯೂರಪ್ಪ ಹೋರಾಟದ ಹಿನ್ನೆಲೆಯಿಂದ ಬಂದವರು, ದಕ್ಷಿಣ ಭಾರತದಲ್ಲಿ ಬಿಜೆಪಿ ಮೊದಲ ಬಾರಿಗೆ ಅಧಿಕಾರವನ್ನು ಪಡೆಯುವಂತೆ ಮಾಡಿದವರು. ಎಲ್ಲಾ ಸರಿ. ಆದರೆ ಈಗ ಹೀಗೆ ಗಂಭೀರ ಅಪವಾದಗಳನ್ನು ಹೊತ್ತು ಜೈಲಿಗೆ ಹೋಗುವಂತಾಗಿದ್ದು ಮಾತ್ರ ಅವಮಾನಕರ.

ರಾಜ್ಯದ ಇನ್ನೂ ಕೆಲವಾರು ರಾಜಕೀಯ ನಾಯಕರು ಜೈಲು ಸೇರಿದ್ದಾರೆ. ಇದು ನಮ್ಮ ನ್ಯಾಯಾಂಗದ ಬಗ್ಗೆ ವಿಶ್ವಾಸವಿಡಲು ಕಾರಣವಾಗಿದೆಯಲ್ಲವಾ?
ಹೌದ. ಜೊತೆಗೆ ಅಣ್ಣಾ ಹಜಾರೆಯವರ ಚಳವಳಿ ಕೂಡಾ ಒಂದು ವಿಶ್ವಾಸ ತರಿಸಿದೆ. ಇಂತವೆಲ್ಲಾ ಆಗಲಿಲ್ಲ ಅಂದಿದ್ದರೆ ಈ ಆಯೋಗಗಳ ವರದಿಗೆ ಯಾವ ಬೆಲೆಯೂ ಇರುತ್ತಿರಲಿಲ್ಲ. ಲೋಕಾಯುಕ್ತ ಆಯೋಗ ನಿಜಕ್ಕೂ ಪ್ರಾಮಾಣಿಕವಾಗಿ ವರದಿಯನ್ನು ನೀಡದ್ದು. ಗೆದ್ದು ಹೋದವನು ಸರಿ ಇಲ್ಲ ಎಂದರೆ ವಾಪಾಸು ಕರೆಸಿಕೊಳ್ಳುವ ಹಕ್ಕು ಇರಬೇಕು ಎಂದು ಲೋಹಿಯಾ ಬಹಳ ಹಿಂದೆಯೇ ಹೇಳಿದ್ದರು. ಇಂತಹ ವಿಚಾರಗಳಿಗೆಲ್ಲಾ  ಇಂದು ಬೆಲೆ ಬರುತ್ತಿರುವುದು ಸಂತೋಷದ ವಿಷಯ.
ನೀವು ರೈತ ಚಳವಳಿಯಲ್ಲಿ ಸಕ್ರಿಯವಾಗಿರುವವರು. ಇಂದು ರಾಜ್ಯದಲ್ಲಿ ರೈತರ ಸ್ಥಿತಿಗತಿ ಹೇಗಿದೆ?
ಈಗಿರುವ ಸರ್ಕಾರ ರೈತರ ಹೆಸರು ಹೇಳಿಕೊಂಡೇ ಸರ್ಕಾರ ಅಧಿಕಾರವಹಿಸಿಕೊಂಡಿತ್ತು. ಆದರೆ ರೈತರಿಗೆ ಶೇಕಡಾ ಒಂದು ದರದಲ್ಲಿ ಸಾಲ ಕೋಡುತ್ತೇವೆ ಎಂದದ್ದು, ಕೃಷಿ ಕಾರ್ಮಿಕರಿಗೆ ಮೂರು ರೂಪಾಯಿ ಕೆಜಿ ಅಕ್ಕಿ ಕೊಡುತ್ತೇವೆ ಎಂದದ್ದು, ಇಂತಹ ಆಶ್ವ್ವಾಸನೆಗಳೆಲ್ಲಾ ಅಂದು ಹೇಳಿದ್ದಷ್ಟೇ. ಮತ್ತೆ ಅನುಷ್ಟಾನಕ್ಕೆ ಬರಲೇ ಇಲ್ಲ. ರೈತರಿಗೆ ಯಾವುವೂ ತಲುಪಲೇ ಇಲ್ಲ. ವ್ಯವಸಾಯ ಇಲಾಖೆ, ಕೃಷಿ ಸಚಿವಾಲಯ ಇದೆ. ಅವರೆಲ್ಲಾ ಕೆಲಸ ಮಾಡಬೇಕಿತ್ತು. ರೆಡ್ಡಿಯವರನ್ನು ಕೃಷಿ ಮಂತ್ರಿಯಾಗಿ ಮಾಡಿದಾರೆ. ಕೃಷಿ ಬಗ್ಗೆ ಅವರಿಗೇನು ಗೊತ್ತು ಹೇಳಿ. ಮದ್ಯಾಹ್ನ ಊಟಕ್ಕೆ ಸಂಡೂರಿಗೆ ಹೆಲಿಕ್ಯಾಪ್ಟರಿನಲ್ಲಿ ಹೋಗಿ ಬರುತ್ತಾರಂತೆ ಆ ಅಸಾಮಿ. ಈಗ ನೋಡಿ ಬಗರ್ ಹುಕುಂ ಸಾಗುವಳಿ ಮಾಡುವ ರೈತರ ಜಮೀನು ಕಿತ್ತುಕೊಳ್ಳೂವ ಪ್ರಯತ್ನ ನಡೆಯುತ್ತಿದೆ. ೫೨ ಶೇಕಡಾ ಅರಣ್ಯವನ್ನು ತೋರಿಸಬೇಕು ಎಂದು ಸುಪ್ರೀಂ ಕೋರ್ಟು ಹೇಳಿದೆ ಅದಕ್ಕಾಗಿ ಹೀಗೆ ಮಾಡುತ್ತೇವೆ ಎನ್ನುತ್ತಿದೆ ಸರ್ಕಾರ. ಹಾವೇರಿಯಲ್ಲಿ ಗೋಲಿಬಾರ್‌ಗೆ ಸಿಕ್ಕಿ ರೈತರು ಸತ್ತರಲ್ಲಾ. ಅವರಿಗೆ ಇನ್ನೂ ಪರಿಹಾರ ಕೊಟ್ಟಿಲ್ಲ. ಇಂದು ಅವರು ರೈತರೇ ಅಲ್ಲ ಎಂದು ವಾದಿಸುತ್ತಿದ್ದಾರೆ. ಇದೆಲ್ಲಾ ಸರಿಯಲ್ಲ. ಈ ಹಿಂದೆ ಸಾಲ ಕೊಟ್ಟರೆ ವಸೂಲಿಗೆ ಬರುತ್ತಿದ್ದರು. ಹರಾಜು ಮಾಡುತ್ತಿದ್ದರು. ಆದರೆ ಈಗ ಏನು ಮಾಡುತ್ತಿದ್ದಾರೆಂದರೆ ಅವರು ಕಂತು ಕಟ್ಟಲಿಲ್ಲ ಎಂದಾಕ್ಷಣ ಕೋರ್ಟಿಗೆ ಹಾಕಿಬಿಡುತ್ತಿದ್ದಾರೆ. ರೈತರು ಹೊಲ ಮನೆ ಬಿಟ್ಟು ಕೋರ್ಟಿಗೆ ಅಲೆದಾಡಬೇಕಾಗಿದೆ. ಇದು ಯಾರ ಕಾಲದಲ್ಲಿತ್ತು ಹೇಳಿ? ಬಗರ್ ಹುಕುಂ ರೈತರನ್ನು ತೆಗೆದುಕೊಂಡು ಮೊದಲು ಹೋರಾಟ ಮಾಡಿದ್ದು ಮೊದಲು ಯಡಿಯೂರಪ್ಪನವರೇ. ಅವರಿಗೆ ಸಮಸ್ಯೆಗಳೇನೂ ಗೊತ್ತಿಲ್ಲ ಎಂದಲ್ಲ. ಆದರೆ ಮೂರು ವರ್ಷಗಳಿಂದ ರೈತರಿಗೆ ಏನೂ ಮಾಡಿಲ್ಲ. ಮಾತೆತ್ತಿದರೆ ಗುಜರಾತ್ ಮಾದರಿ ಎನ್ನುತ್ತಾರೆ. ಇಲ್ಲಿ ಗುಜರಾತ್ ಮಾದರಿ ನಡೆಯುವುದಿಲ್ಲ. ಗುಜರಾತ್ ಆದರೆ ವ್ಯಾಪಾರಿ ರಾಜ್ಯ. ಇಲ್ಲಿ ಅಂತಹ ಗುಜರಾತ್ ಅಳತೆಗೋಲಾಗಿಟ್ಟುಕೊಂಡು ಇಲ್ಲಿ ಅಭಿವೃದ್ಧಿಗೆ ಹೋಗಬಾರದು. ಇಲ್ಲಿ ಕೈಗಾರಿಕೆ ಎಂದರೆ ಕೃಷಿಯೊಂದಿಗೆ ಸಂಬಂಧವಿರುವ ಸಣ್ಣ, ಗೃಹ ಕೈಗಾರಿಕೆಗಳಿಕೆ ಪ್ರಮುಖ ಪಾಶಸ್ತ್ಯ ನೀಡಬೇಕು. ಇಲ್ಲಿ ಗ್ರಾಮ ಪಂಚಾಯ್ತಿ ಮಟ್ಟದಲ್ಲಿ ಕೈಗಾರಿಕೆಗಳು ಬರಬೇಕು. ಆಯಾ ವ್ಯಾಪ್ತಿಯಲ್ಲಿ ಯಾವ ಸಂಪನ್ಮೂಲ ಸಿಗುತ್ತೋ ಅದಕ್ಕೆ ಸಂಬಂಧಿಸಿದ ಕೈಗಾರಿಕೆ ಬೆಳೆಯಬೇಕು. ಗುಡಿ ಕೈಗಾರಿಕೆಗಳು ಹೆಚ್ಚಬೇಕು. ಕೂಲಿಗಾಗಿ ಕಾಳು ಯೋಜನೆ ಇದೆ. ಆದರೆ ಇಲ್ಲಿ ನೋಡಿ ರಸ್ತೆ ಕೆಲಸ ಟ್ರಾಕ್ಟರ್, ಯಂತ್ರಗಳಿಂದಲೇ ನಡೆಯುತ್ತಿದೆ. ಇದನ್ನೆಲ್ಲಾ ಕೂಲಿ ಜನರಿಂದಲೇ ಮಾಡಬಹುದಲ್ಲಾ. ಇಂತಹ ಯಾವ ವಿಚಾರಗಳನ್ನೂ ಚರ್ಚಿಸಲು ಇಲ್ಲಿ ಆಸ್ಪದವೇ ಇಲ್ಲ. ಮಾತೆತ್ತಿದರೆ ಬರೀ ಹಗರಣಗಳು. ತಾವು ಹೇಳಿದ್ದ ಯಾವ ಕಾರ್ಯಕ್ರಮವನ್ನೂ ಕಾರ್ಯಗತಗೊಳಿಸಿಲ್ಲ.
ಗ್ರಾಮೀಣ ಬದುಕಿನಲ್ಲಿ ಬದಲಾವಣೆಗಳು ಯಾವ ದಿಸೆಯಲ್ಲಿವೆ.

ಹಳ್ಳಿಗಳಲ್ಲಿ ನಮ್ಮ ಕೈಗಾರಿಕಾಕರಣ, ಖಾಸಗೀಕರಣ, ಜಾಗತೀಕರಣದ ಪರಿಣಾಮ ಎಷ್ಟಾಗದೆ ಎಂದರೆ ಗ್ರಾಮಗಳಲ್ಲಿ ಜನರು ವ್ಯವಸಾಯ ಮಾಡಲು ಜನರೇ ಸಿಗುವುದಿಲ್ಲ. ಈಗ ಅಡಿಕೆ ಸುಲಿಯಲು, ನಾಟಿ ಮಾಡಲು, ಒಕ್ಕಲು ಕೆಲಸಕ್ಕೆ ಎಲ್ಲದಕ್ಕೂ ಯಂತ್ರಗಳು ಬಂದಿವೆ. ರೈತರು ನಗರಗಳಗೆ ಗುಳೇ ಹೋಗುತ್ತಿದ್ದಾರೆ. ಇದೆಲ್ಲದರಿಂದ ಕೃಷಿಯ ಮೇಲೆ ಹೊಡೆತ ಬೀಳುತ್ತಿದೆ. ಗುಳೇ ಹೋಗಲಿಕ್ಕೆ ಬೇರೆ ಕಾರಣಗಳನ್ನು ಕೊಡುತ್ತೀವಿ. ಇಂದು ಬಂದಿರುವ ಹಲವಾರು ಸೌಲತ್ತುಗಳು ಸಹ ಇಂತವಕ್ಕೆ ಕಾರಣವಾಗಿವೆ. ಇವನ್ನೆಲ್ಲಾ ತಪ್ಪು ಎನ್ನಲಾಗುವುದಿಲ್ಲ. ಎಲ್ಲರೂ ಶಿಕ್ಷಣ ಪಡೆಯುತ್ತಿದ್ದಾರೆ. ಕೆಲಸ ಹುಡುಕಿಕೊಂಡು ನಗರಗಳಿಗೆ ಹೋಗುತ್ತಿದ್ದಾರೆ. ಇಲ್ಲಿ ಬೇರೆ ಜನರ ಕೂಲಿ ಕೆಲಸಗಳನ್ನು ಯಂತ್ರಗಳು ಆವರಿಸಿಕೊಳ್ಳುತ್ತಿವೆ.  ಹೀಗಾಗಿ ಬದಲಾದ ಸನ್ನಿವೇಶಕ್ಕೆ ನಾವು ಹೊಂದಿಕೊಳ್ಳಲೇ ಬೇಕಾಗಿದೆ. ಆದರೆ ನಾವು ಯಾಂತ್ರೀಕರಣ ಎನ್ನುವಾಗ ಕುರುಡಾಗಿ ಪಾಶ್ಚಿಮಾತ್ಯರನ್ನು ಅನುಸರಿಸುತ್ತೇವೆ. ಅವರ ಯಂತ್ರಗಳನ್ನು ಇಲ್ಲಿ ಉಪಯೋಗಿಸಿತ್ತಿದ್ದೇವೆ. ಇದು ನಮಗೇನೂ ಒಳ್ಳೆಯದು ಮಾಡುವುದಿಲ್ಲ. ನಮ್ಮ ಗ್ರಾಮಕ್ಕೆ ಯಾವ ಬಗೆಯ ಯಂತ್ರಗಳು ಬೇಕೆಂದು ಸರ್ಕಾರ ತಲೆ ಓಡಿಸಬೇಕು. ಇದರ ಜೊತೆಗೆ ಹಳ್ಳಿಗಳಲ್ಲೂ ಹೆಂಗಸರಿಗೆ ಸಮಾನ ವೇತನವನ್ನೂ ಕೊಡುವಂತಾಬೇಕು.

ಸರ್ಕಾರ ಹೇಳುವ ಸಾವಯವ ಕೃಷಿ ಬಗ್ಗೆ ನಿಮ್ಮ ತಕರಾರು ಏನು?
ಸಾವಯವ ಎನ್ನುವುದು ಒಂದು ಕೃಷಿ ವಿಧಾನವಲ್ಲ. ಅದು ಗೊಬ್ಬರದ ಒಂದು ವಿಧ ಅಷ್ಟೆ. ಸಾವಯವ ಗೊಬ್ಬರ ಹಾಕಿ ಮಾಡುವ ಕೃಷಿಗೆ ನೈಸರ್ಗಿಕ ಕೃಷಿ ಅಥವಾ ಸಹಜ ಕೃಷಿ ಎಂದು ಕರೆಯಬೇಕು. ನನ್ನ ತಕರಾರು ಇರುವುದು ಅಷ್ಟೆ. ಇದನ್ನು ಸಾವಯವ ಕೃಷಿ ಎನ್ನುವುದು ಸರಿ ಬರುವುದಿಲ್ಲ. ಇದಕ್ಕಾಗಿ ೨೦- ೨೫ ಕೋಟಿ ಬಜೆಟ್ಟಿನಲ್ಲಿ ತೆಗೆದಿಟ್ಟಿದ್ದಾರೆ. ಆದರೆ ಅದರ ಸಂಪೂರ್ಣ ಲಾಭ ಪಡೆಯುತ್ತಿರುವುದು ಅವರ ಪಾರ್ಟಿಯ ಕಾರ್ಯಕರ್ತರು ಮಾತ್ರ. ಇದರ ಬಗ್ಗೆಯೆಲ್ಲಾ ನಮ್ಮೊಂದಿಗೆ ಮಾತಾಡುತ್ತೇವೆ ಎಂದ ಶಂಕರಮೂರ್ತಿಯವರು ಎರಡು ಸಲ ನಮ್ಮನ್ನು ಕಾಯಿಸಿದರು. ಆದರೆ ಬರಲಿಲ್ಲ. ರಸಗೊಬ್ಬರ, ಕೀಟನಾಶಕಗಳಿಲ್ಲದೆ ಸಹಜ ಕೃಷಿಯನ್ನು ಉತ್ತೇಜಿಸುವ ಸರ್ಕಾರದ ಕ್ರಮವನ್ನು ನಾನು ಬೆಂಬಲಿಸುತ್ತೇನೆ. ಇಲ್ಲಿ ನೋಡಿ, ನಮ್ಮ ಹೊಲಗದ್ದೆಗಳಲ್ಲಿ ನಾವು ಉಪಯೋಗಿಸುವ ರಸಗೊಬ್ಬರಗಳಿಂದಾಗಿ ಎರೆಹುಳುಗಳು ಆಳಕ್ಕೆ ಹೋಗಿವೆ. ಆದರೆ ಇಲ್ಲಿ ಸಾಮಯವ ಕೃಷಿ ಹೆಸರಲ್ಲಿ ಆಫ್ರಿಕಾದಿಂದ ದೊಡ್ಡ ಎರೆಹುಳುಗಳನ್ನು ಆಮದು ಮಾಡಿಕೊಂಡು ಅದೇ ಒಂದು ದೊಡ್ಡ ದಂದೆಯಾಗಿದೆ. ಇದರ ಪರಿಣಾಮ ಏನಾಗುತ್ತದೆಯೋ ಗೊತ್ತಿಲ್ಲ. ಇಂತಹ ನೈಸರ್ಗಿಕ ಕೃಷಿಯ ಉಳಿಕೆ ಕೇವಲ ಸರ್ಕಾರದ ಮೇಲೆ ಅವಲಂಬಿಸಿಲ್ಲ. ಸಹಜ ಕೃಷಿಯ ಪದ್ಧತಿಯಿಂದ ಬೆಳೆದ ಧಾನ್ಯಗಳಿಗೆ ಬೇಡಿಕೆ ಸಿಗುವ ನಿಟ್ಟಿನಲ್ಲಿ ಪ್ರತಿಯೊಬ್ಬರೂ ಮುಂದಾಗಬೇಕು. ನಾವು ಅದನ್ನೇ ಮಾಡುತ್ತಿದ್ದೇವೆ. ನಾವೆಲ್ಲಾ ಉಪಯೋಗಿಸುತ್ತಿರುವುದು ಸ್ಥಳೀಯವಾಗಿ ಕೆಲವು ರೈತರು ನೈಸರ್ಗಿಕ ಕೃಷಿಯಲ್ಲಿ ಬೆಳೆದಿದ್ದನ್ನೇ.
ರೈತರ ಕಷ್ಟಗಳು ಹೆಚ್ಚುತ್ತಿವೆ. ಆದರೆ ರೈತ ಚಳವಳಿ ಅಗತ್ಯ ಪ್ರಮಾಣದಲ್ಲಿ ಶ್ವನಿ ಹೊರಡಿಸುತ್ತಿಲ್ಲ. ಏಕೆ?
ಇಲ್ಲಿ ಇನ್ನು ಚುನಾವಣೆಯ ಆಶೆಗಳು ಉಳಿಸುಕೊಂಡಿವೆ. ಚುನಾವಣೆ ತಂಟೆಗೇ ಹೋಗಬಾರದು. ಅದರಲ್ಲಿ ಭಾಗವಹಿಸಬೇಕು ಎಂದಾಗಲೆಲ್ಲಾ ಮತ್ತೆ ದುಡ್ಡು ಖರ್ಚು ಮಾಡಬೇಕಾಗುತ್ತದೆ. ಯಾವ ಉಪಯೋಗವೂ ರೈತರಿಗಾಗುವುದಿಲ್ಲ. ಈ ಹಿಂದೆ ನಾವು ಹೀಗೆ ವಾದಿಸಿದಾಗ ನಂಜುಂಡಸ್ವಾಮಿಯವರು ನಾವು ಚುನಾವಣೆಗೆ ಹೋಗಲಿಲ್ಲ ಎಂದರೆ ಭ್ರಷ್ಟರಿಗೆ ಒಳ್ಳೇಯದೇ ಆಗುತ್ತದೆ ಎನ್ನುತ್ತಿದ್ದರು. ಆದರೆ ಅವರು ಹೇಳುತ್ತಿದ್ದುದು ಒಂದೊಮ್ಮೆ ನಾವು ಚುನಾವಣೆಗೆ ಹೋಗುವುದಾದರೂ ರೈತ ಸಂಘದ ಪ್ರಣಾಳಿಕೆಯನ್ನಾಧರಿಸಿ ಹೋಗಬೇಕು ಎಂದು. ಇಂದು ಯಾರೂ ಅದನ್ನು ಪಾಲಿಸುತ್ತಿಲ್ಲ. ಒಂದೊಮ್ಮೆ ಪಾಲಿಸಿದರೂ ಜನರೇ ಅದನ್ನು ಕೇಳುವುದಿಲ್ಲ. ತಮ್ಮ ಕೊನೆಯ ದಿನಗಳಲ್ಲಿ ನಂಜುಂಡಸ್ವಾಮಿಯವರಿಗೂ ಇದು ಕಾರ್ಯಸಾಧು ಅಲ್ಲ ಎಂದು ಮನವರಿಕೆಯಾಗಿತ್ತು. ಚುನಾವಣೆಗಳನ್ನು ಬಿಟ್ಟೇ ಬಿಡಬೇಕು ಎಂದು ತೀರ್ಮಾನಿಸಿದ್ದರು.
ಇಬ್ಬಾಗವಾಗಿದ್ದ ರೈತಸಂಘವನ್ನು ವಿಲೀನಗೊಳಿಸುವ ನಿಮ್ಮ ಪ್ರಯತ್ನ ಎಲ್ಲಿಯವರೆಗೆ ಕೈಗೂಡಿದೆ?
ಎರಡೂ ಗುಂಪುಗಳನ್ನು ಒಂದು ಮಾಡಲು ಎರಡು ವರ್ಷ ಕಾಲ ಮುಕ್ಕಾಲು ಕರ್ನಾಟಕವನ್ನು ಸುತ್ತಾಡಿದ್ದೆವು. ಈಗ ಕೆಲವರನ್ನು ಬಿಟ್ಟರೆ ಎಲ್ಲರೂ ಒಂದಾಗಿದ್ದಾರೆ. ಉನ್ನತ ಹುದ್ದೆಗಳ ವಿಚಾರದಲ್ಲಿ ಭಿನ್ನಾಭಿಪ್ರಾಯ ಹೊಂದಿ ಕೆಲವರು ದೂರವಿದ್ದಾರೆ. ಬರುವ ದಿನಗಳಲ್ಲಿ ಕೆಲವು ಬದಲಾವಣೆಗಳೊಂದಿಗೆ ಉಳಿದ ಎಲ್ಲರನ್ನೂ ಒಂದು ಮಾಡುವ ಪ್ರಯತ್ನ ಮಾಡುತ್ತೇವೆ.
ನಮ್ಮ ಬರಹಗಾರ, ಬುದ್ಧಿಜೀವಿ ವರ್ಗ ಎಷ್ಟರ ಮಟ್ಟಿಗೆ ಕ್ರಿಯಾಶೀಲವಾಗಿದೆ ಎನ್ನಿಸುತ್ತದೆ?
ಲಂಕೇಶ್, ರಾಮದಾಸ್ ರಂತವರು ಎಲ್ಲರನ್ನೂ ಒಳಗೊಳಿಸಿಕೊಂಡು ಏನಾದರೂ ಮಾಡಬೇಕೆಂದು ಹೊರಡುತ್ತಿದ್ದರು ಇಂದು ಅಂತಹ ಪ್ರಯತ್ನಗಳನ್ನು ಯಾರೂ ಮಾಡುತ್ತಿಲ್ಲ. ದೇವನೂರು ಮಹಾದೇವ ಅವರು ಒಂದು ಹಂತದಲ್ಲಿ ಸ್ವಲ್ಪ ಉತ್ಸಾಹ ತೋರಿದರು. ಇಂದು ಶಿಕ್ಷಕರಿಗೆ, ಸಾಫ್ಟ್ ವೇರ್ ಇಂಜಿನಿಯರ್‌ಗಳಿಗೆ ಒಂದು ಲಕ್ಷ ರೂಪಾಯಿವರೆಗೆ ಸಂಬಳ. ರೈತರಿಗೆ, ಕೃಷಿ ಕೂಲಿ ಕಾರ್ಮಿಕರಿಗೆ ದಿನಕ್ಕೆ ನೂರು ನೂರೈವತ್ತು ರೂಪಾಯಿ ಸಿಗುವುದೂ ಕಷ್ಟ. ಇದರ ಬಗ್ಗೆ ಶಿಕ್ಷಕ, ಬುದ್ಧಿಜೀವಿ  ವಲಯದಿಂದ ಯಾರಾದರೂ ಪ್ರತಿರೋಧಿಸಿದ್ದಾರಾ? ಶಿಕ್ಷಕರೇ ಇದನ್ನು ವಿರೋಧೀಸಬೇಕಿತ್ತು. ರೈತರು ಆತ್ಮಹತ್ಯೆ ಮಾಡಿಕೊಳ್ಳುವ ಪರಿಸ್ಥಿತಿ ಇರುವಾಗ ತಮಗೆ ಈ ಪ್ರಮಾಣದಲ್ಲಿ ಸಂಬಳ ಬೇಡ ಎನ್ನಬೇಕಿತ್ತು. ಆ ಬಗೆಯ ರಾಜಕೀಯ ಚಿಂತನೆಗಳಿಗೇ ಇಲ್ಲಿ ಬರವಾಗಿದೆ. ಹಿಂದಾದರೆ ಸಮಾಜವಾದಿ ಪಕ್ಷಗಳಂತವು ಇದ್ದವು. ಹೀಗೆ ಸಂಬಳ ಹೆಚ್ಚಿಸುವುದರ ಹಿಂದೆ ಸರ್ಕಾರದ ತರ್ಕ ಬಹಳ ಸರಳವಾದದ್ದು. ಕಂಪನಿಗಳು ಉತ್ಪಾದಿಸುವ ಕಾರು, ವಾಹನ, ದುಬಾರಿ ಉಪಭೋಗಿ ಸರಕುಗಳನ್ನು ಕೊಳ್ಳಲು ಈ ದೇಶದಲ್ಲಿ ಒಂದು ವರ್ಗ ಸೃಷ್ಟಿಯಾಗಬೇಕು, ಒಂದು ಮಾರುಕಟ್ಟೆ ಬೇಕು ಎನ್ನುವುದಷ್ಟೆ ಅದರ ಒಳಗುಟ್ಟು.
ನೇಕ ಅಂತರ್ಜಾತಿ ವಿವಾಹಗಳನ್ನು ತಾವು ಮುಂದೆ ನಿಂತು ನಡೆಸಿದ್ದೀರಿ. ಇಂತಹ ಪ್ರಯತ್ನಗಳು ಸಮಾಜದಲ್ಲಿ ಜಾತಿ ತಾರತಮ್ಯವನ್ನು ಹೋಗಲಾಡಿಸುವುದಕ್ಕೆ ಎಷ್ಟರ ಮಟ್ಟಿಗೆ ಸಹಕಾರಿಯಾಗಿವೆ? 

ಉದಾಹರಣೆಗೆ ನಮ್ಮ ಭಗವತಿಕೆರೆ. ಇಲ್ಲಿ ನಾವು ಬಂದಾಗ ೫೮ ಮನೆಗಳಷ್ಟೇ ಇದ್ದವು. ನಾವು ಜಮೀನಿನಲ್ಲೇ ಮನೆ ಮಾಡಿಕೊಂಡಿದ್ದೇವೆ. ಲಂಕೇಶ್, ರಾಮದಾಸ್ ಅಂತವರು ಬಂದು ಹೋಗುತ್ತಿದ್ದರು. ಅಂದಿನ ದಿನದಲ್ಲಿ ಕೃಷಿಕೂಲಿಕಾರರ ಒಂದು ಕ್ಯಾಂಪ್ ಇತ್ತು. ಅವೆಲ್ಲಾ ಸೋಗೆಮನೆಗಳಾಗಿದ್ದವು. ಆದರೆ ಒಂದು ದಿನ ಕೆಲಸ ಮಾಡುವಾಗ ಬೆಂಕಿ ಬಿದ್ದು ಗುಡಿಸಲುಗಳೆಲ್ಲಾ ಸುಟ್ಟು ಹೋದವು. ಒಂದು ಮಗು ಕೂಡಾ ಸುಟ್ಟು ಹೋಗಿತ್ತು. ಆಗ ಒಂದಷ್ಟು ಜನತಾ ಮನೆಗಳು ಮಂಜೂರು ಮಾಡಿಸಿದೆವು. ಅವೆಲ್ಲಾ ೪೦*೬೦ ಸೈಟುಗಳು. ಆದರೆ ಮನೆಗಳನ್ನು ನೀಡುವಾಗ ನಾವು ಮಾಡಿದ ಒಂದೇ ತಂತ್ರ ಎಂದರೆ ಅವುಗಳನ್ನು ಚೀಟಿ ಮೂಲಕ ಹಂಚಿದ್ದು. ಅದರಂದ ಜಾತಿ ಆಧಾರದಲ್ಲಿ ಕೇರಿಗಳಾಗಲಿಲ್ಲ. ಲಂಬಾಣಿಗಳು, ದೊಂಬರು, ಜೋಗಿಗಳು ಮೂಂತಾದ ಐದಾರು ಜಾತಿ ಜನರು ಒಟ್ಟಿಗೇ ಜೀವನ ಶುರು ಮಾಡಿದರು. ಇಂದು ನಮ್ಮಲ್ಲಾಗಿರುವ ಮದುವೆಗಳಲ್ಲಿ ನೂರಕ್ಕೆ ಎಪ್ಪತ್ತು ಭಾಗ ಅಂತರ್ಜಾತಿ ಮದುವೆಗಳೇ. ನಾವೂ ನಮ್ಮ ಹಿರೇ ಮಗಳನ್ನು ಕೊಟ್ಟಿದ್ದು ಬೇರೆ ಜಾತಿ ಹುಡುಗನಿಗೆ. ನಮ್ಮ ಮನೆ ಬಾಗಿಲಲ್ಲೇ ನಾಲ್ಕಾರು ಮದುವೆಗಳನ್ನು ನಾನು ಮಾಡಿಸಿದ್ದೇನೆ. ಇತ್ತೀಚೆಗೆ ಶಿವಮೊಗ್ಗದಲ್ಲಿ ನಡೆದ ಅಂತರ್ಜಾತಿ ವಿವಾಹಿತರ ಸಮ್ಮೇಳನ ಬಹಳ ಚೆನ್ನಾಗಿ ನಡೆಯಿತು. ನಮ್ಮ ನಮ್ಮ ಊರುಗಳಲ್ಲಿ ಈ ಬಗೆಯ ಸಣ್ಣ ಪ್ರಯತ್ನಗಳನ್ನಾದರೂ ಮಾಡಿದಾಗ ಜಾತಿ ಭೇಧಗಳು ಅಷ್ಟು ಕಾಡುವುದಿಲ್ಲ.


ನೀವು ಸಮಾಜವಾದಿ ತತ್ವಗಳಲ್ಲಿ ನಂಬಿಕೆ ಇಟ್ಟವರು. ಇಂದಿನ ಸಂದರ್ಭದಲ್ಲಿ ಸಮಾಜವಾದಿ ಸಿದ್ದಾಂತದ ಭವಿಷ್ಯವೇನು?
ಹಿಂದೆ ಲೋಹಿಯಾ, ಕಿಶನ್ ಪಾಟ್ನಾಯಕ್ ಅಂತವರಿದ್ದರು. ಗೌಪಾಲ ಗೌಡರಿದ್ದರು. ಅಂತವರು ಇಂದು ಇಲ್ಲ. ಹೀಗಾಗಿ ಸಮಾಜವಾದಿ ತತ್ವಗಳ ಪ್ರಚಾರ ಆ ಪ್ರಮಾಣದಲ್ಲಿ ಇಂದು ಇಲ್ಲ. ಹಾಗಂತ ತೀರಾ ನಿರಾಶೆಯೇನೂ ಇಲ್ಲ. ಅಲ್ಲಲ್ಲಿ ಸಣ್ಣ ಪ್ರಮಾಣದಲ್ಲಿಯಾದರೂ ಸಮಾಜವಾದಿ ಚಿಂತನೆಗಳನ್ನು ಜೀವಂತವಾಗಿಟ್ಟುಕೊಳ್ಳುವ ಪ್ರಯತ್ನಗಳು ನಡೆಯುತ್ತಿವೆ. ಕಳೆದ ಸಲ ಹೆಗ್ಗೋಡಿನಲ್ಲಿ ಈ ಸಲ ಕುಪ್ಪಳಿಯಲ್ಲಿ ಶಿಬಿರ ನಡೆಯುತ್ತಿವೆ. ಅಂದು ನಡೆಯುತ್ತಿದ್ದ ಅನೇಕ ಶಿಬಿರಗಳಲ್ಲಿ ನಾನು ಮತ್ತು ನಮ್ಮ ಕೆ.ವಿ.ಸುಬ್ಬಣ್ಣನವರು ಭಾಗವಹಿಸುತ್ತಿದ್ದೆವು. ಅವರಂತೂ ಎಲ್ಲೇ ಶಿಬಿರಗಳಿರಲಿ ಅಲ್ಲಿಗೆ ಖಾಯಂ ಗಿರಾಕಿ. ಇಂದು ಸಹ ಸಣ್ಣ ಪ್ರಮಾಣದಲ್ಲಿ ನಡೆಯುತ್ತಿವೆ. ಹಿಂದೆ ನಮ್ಮ ವೀರಶೈವ ಮಠಗಳೂ ಬಹಳ ಒಳ್ಳೆಯ ಕೆಲಸ ಮಾಡುತ್ತಿದ್ದವು. ಆದರೆ ಇಂದು ನೋಡಿ ಏನಾಗಿದೆ. ಅವೆಲ್ಲಾ ಭ್ರಷ್ಟರ ಬೆಂಬಲಕ್ಕೆ ನಿಂತುಬಿಟ್ಟಿವೆ. ಯಡಿಯೂರಪ್ಪ ಮಠಗಳಿಗೆ ಕೋಟಿ ಕೋಟಿ ನೀಟಿ ಅವುಗಳನ್ನೂ ಭ್ರಷ್ಟಗೊಳಿಸಿದರು. ಈಗ ಅವು ಇವರಿಗೆ ಬೆಂಬಲಿಸಿವೆ. ಸರ್ಕಾರದ ಖಜಾನೆಯಿದ ಯಾವತ್ತೂ ಮಠಗಳಿಗೆ ಹಣ ಕೊಡಬಾರದು.

ನಮ್ಮ ಸಮಾಜವನ್ನು ಕಾಡುತ್ತಿರುವ ಸಮಸ್ಯೆಗಳಲ್ಲಿ ಯಾವುದು ಪ್ರಧಾನ ಎನ್ನಿಸುತ್ತದೆ?  

ಸಮಾಜದಲ್ಲಿರುವ ಆರ್ಥಿಕ ತಾರತಮ್ಯವೇ ಬಹಳ ಪ್ರಮುಖವಾದುದು. ದುಡ್ಡಿದವನೇ ದೊಡ್ಡಪ್ಪ ಎನ್ನುವ ನೀತಿ ಇಲ್ಲಿದೆ. ಇಲ್ಲಿ ಯಾವುದೇ ಒಂದು ಸಮಸ್ಯೆಯನ್ನು ಪ್ರತ್ಯೇಕವಾಗಿ ಬಗೆಹರಿಸಲಾಗಲ್ಲ. ಎಲ್ಲವೂ ಒಂದಕ್ಕೊಂದು ತಳುಕು ಹಾಕಿಕೊಂಡಿದಾವೆ.
ನಮ್ಮ ಯುವಕರಿಗೆ ಏನು ಸಂದೇಶ ನೀಡಬಯಸುತ್ತೀರಿ?
ಯುವಕರು ಗ್ರಾಮೀಣ ಜನರಿಗೆ ಅನುಕೂಲವಾಗುವಂತಹ ಸಂಶೋಧನೆಗಳಲ್ಲಿ ತೊಡಗಬೇಕು. ಇಂತಹ ಪ್ರಯತ್ನ ನಡೆಸುವ ಯುವಜನರೇ ಈ ಸಮಾಜಕ್ಕೆ ಆಸ್ತಿಯಾಗುತ್ತಾರೆ ಎನ್ನುವುದು ನನ್ನ ಭಾವನೆ.

"ಲೋಕಾಯತ ಜನಸಾಮಾನ್ಯರ ತತ್ವ ಪ್ರಣಾಳಕೆ"- ಡಾ. ಜಿ.ರಾಮಕೃಷ್ಣ



ಡಾ. ಜಿ. ರಾಮಕೃಷ್ಣ ಅವರು ನಮ್ಮ ನಾಡು ಕಂಡ ಅಪರೂಪದ ಚಿಂತಕ. ಜೀವಮಾನವಿಡೀ ಸಮಾಜಮುಖಿ ಚಿಂತನೆ ಹಾಗೂ ಕೃತಿಯಲ್ಲಿ ತೊಡಗಿರುವವವರು. ತತ್ವಶಾಸ್ತ್ರ ಕ್ಷೇತ್ರದಲ್ಲಿ ಕನ್ನಡ ಜನತೆಗೆ ಅಪಾರ ಕೊಡುಗೆ ಸಲ್ಲಿಸಿರುವ ಜಿಆರ್ ಎಡಪಂಥೀಯ ಚಿಂತನೆ ಚಿಂತನೆ, ಶಿಕ್ಷಣ, ಸಮಾಜ ಮುಂತಾದವುಗಳ ಬಗ್ಗೆ  ದ ಸಂಡೆ ಇಂಡಿಯನ್ ಅವರೊಂದಿಗೆ ನಡೆಸಿದ ಸಂದರ್ಶನ.


ನೀವು ಎಡಪಂಥೀಯ ಚಿಂತನೆಯಲ್ಲಿ ನಂಬಿಕೆ ಇರುವವರು. ಆದರೆ ಸೋವಿಯತ್ ರಷ್ಯಾ ಹಾಗೂ ಚೀನಾಗಳಲ್ಲಿ ಹಿನ್ನಡೆಯಾದ ನಂತರ ಕುಸಿದ ನಂತರ ಕಮ್ಯುನಿಸಂಗೆ ಭವಿಷ್ಯವಿಲ್ಲ ಎನ್ನುವ ಮಾತಿದೆ.  ಇದಕ್ಕೆ ಏನು ಹೇಳುತ್ತ್ತೀರಿ?
ಮಾರ್ಕ್ಸ್‌ವಾದಕ್ಕೆ ಭವಿಷ್ಯ ಇಲ್ಲ ಎಂದರೆ ಸಮಾಜದ ವಿಕಾಸಕ್ಕೆ ಭವಿಷ್ಯ ಇಲ್ಲ ಎಂದಾಗುತ್ತದೆ. ಸಮಾಜದ ವಿಕಾಸದ ನಿಯಮ ಏನು ಎನ್ನುವುದನ್ನು ಹೇಳುವುದೇ ಮಾರ್ಕ್ಸ್‌ವಾದ. ಸೋವಿಯತ್ ಒಕ್ಕೂಟದಲ್ಲಿ, ಚೀನಾದಲ್ಲಿ ಸಮಾಜವಾದ ಬಿದ್ದೊಡನೆ ಕಮ್ಯೂನಿಸಂ ಸತ್ತೇ ಹೋಯಿತು ಅನ್ನಲಾಗುವುದಿಲ್ಲ. ಸಮಾಜ ಮುಂದೆ ಚಲಿಸುತ್ತದೆಯೇ ಹೊರತು ಹಿಮ್ಮುಖವಾಗಿಲ್ಲ. ಮಾರ್ಕ್ಸ್ ಎನ್ನುವನು ಹುಟ್ಟಿದ್ದಕ್ಕೆ ಸಮಾಜ ಬದಲಾಗಿಲ್ಲ. ಸಮಾಜ ತನ್ನಂತೆ ತಾನು ವಿಕಾಸವಾಗುತ್ತದೆ. ಒಂದು ಶತಮಾನದಲ್ಲಿ ಆಗುವ ಏಳುಬೀಳುಗಳಿಂದ ಏನೂ ಆಗುವುದಿಲ್ಲ. ತಕ್ಷಣದಲ್ಲಿ ವಿಶ್ವಾಸ ಕುಂದಿರಬಹುದು, ಹಾಗಂತ ಮುಂದೆಂದೂ ಹೀಗೇ ಇರುತ್ತದೆಂದಲ್ಲ. ಮಾನವ ಜನಾಂಗದಲ್ಲಿನ ಆಂತರಿಕ ಸಂಘರ್ಷಗಳು ನಡೆಯುತ್ತಲೇ ಇವೆ. ಇಂದೇನೋ ಅಮೆರಿಕ ಸೈನಿಕವಾಗಿ ಬಲಿಷ್ಟವಾಗಿರಬಹುದು. ಎಲ್ಲಾ ಕಡೆ ಹಿಂಸೆ ನಡೆಸುತ್ತಿರಬಹುದು. ಆದರೆ ಮುಂದೆಂದೂ ಅದು ಹೀಗೇ ಇರುತ್ತದೆ ಎಂಬ ನಿಯಮ ಇಲ್ಲ. ಅಮೆರಿಕದಲ್ಲಿ ದಿನಬೆಳಗಾದರೆ ಬಿಕ್ಕಟ್ಟನ್ನು ನೋಡುತ್ತೇವಲ್ಲ. ಏನು ತೋರಿಸುತ್ತದೆ ಅದು?
ಜಗತ್ತಿನ ಸರ್ವಾಧಿಕಾರಿಗಳ ಮಾತು ಬಂದಾಗ ಸ್ಟಾಲಿನ್, ಪೋಲ್‌ಪಾಟ್‌ನಂತಹ ಕಮ್ಯುನಿಸ್ಟರ ಹೆಸರಿರುತ್ತದೆ. ಇವರನ್ನು ಸಮರ್ಥಿಸಿಕೊಳ್ಳಲು ಹೇಗೆ ಸಾಧ್ಯ? 
ಅದೇ ಸಮಸ್ಯೆ. ಅಲ್ಲಿ ಸ್ಟಾಲಿನ್ ಹೆಸರಿರುತ್ತದೆ. ಜಾರ್ಜ್ ಬುಷ್ ಹೆಸರಿರುವುದಿಲ್ಲ. ಯಾರು ದೊಡ್ಡ ಸರ್ವಾಧಿಕಾರಿ. ಯಾರು ಹೆಚ್ಚು ಹಿಂಸೆ ನಡೆಸಿರುವುದು? ಅಮೆರಿಕ ಕೊಂದಷ್ಟು ಜನರನ್ನು ಯಾರೂ ಕೊಂದಿಲ್ಲ. ಸ್ಟಾಲಿನ್ ತನ್ನ ದೇಶದಲ್ಲಿ ಜನರನ್ನು ಕೊಂದ ಎಂಬ ಆಪಾದನೆ  ನಿಜ ಎನ್ನುವುದಾದರೆ ಇವನು ಹತ್ತಾರು ದೇಶಗಳಲ್ಲಿ ಕೊಲ್ಲುತ್ತಲೇ ಇರುವುದನ್ನು ಹಿಂಸೆ ಎಂದು ಕರೆಯುವುದಿಲ್ಲ ಏಕೆ? ಇರಾಕ್, ಅಫಘಾನಿಸ್ತಾನ, ಲಿನಿಯಾ ಎಲ್ಲಾ ಏನು ಹೇಳುತ್ತವೆ? ನಾನು ಪೆರು ಮತ್ತು ಕ್ಯೂಬಾಗೆ ಕಳೆದ ಸಲ ಹೋಗಿ ಬಂದಿದೀನಿ. ಅಲ್ಲಿ ನೋಡಿಬಿಟ್ಟರೆ ಅದೆಷ್ಟು ಜನರನ್ನು ಕೊಂದಿದಾರೆ, ಎಷ್ಟು ನಾಶ ಮಾಡಿದಾರೆ ಅಂದರೆ ಹೇಳಲಾಗಲ್ಲ. ಇನ್ನು ಪೋಲ್ ಪೋಟ್‌ನ್ನು ಯಾರಾದರೂ ಕಮ್ಯುನಿಸ್ಟ್ ಎಂದರೆ ಅವರಿಗೆ ಹುಚ್ಚು ಹಿಡಿದಿದೆ ಅಂತ ಅರ್ಥ. ಅವನು ರಾಕ್ಷಸ. ಅವನಿಗೆ ಸಹಾಯ ಮಾಡಿದ್ದು ಅಮೆರಿಕವೇ. ವಿಶ್ವ ಸಂಸ್ಥೆಯಲ್ಲಿ ಅವನನ್ನು ರಕ್ಷಿಸಿದ್ದು ಅಮೆರಿಕ ಮತ್ತು ಚೀನಾಗಳೇ. ಸ್ಟಾಲಿನ್ ಜನರನ್ನು ಕೊಂದಿದ್ದು ತಪ್ಪಲ್ಲ ಎಂದು ನಾನು ಸಮರ್ಥನೆ ಕೊಡುವುದಿಲ್ಲ ನಾನು. ಆದರೆ ಆಗ ಏನಾಯ್ತು ನೋಡಿ. ಅಂದು ಚರ್ಚಿಲ್ ಸಂಸತ್ ಭಾಷಣದಲ್ಲಿ ಒಂದು ಮಾತು ಹೇಳಿದ್ದ. ’ಕಮ್ಯುನಿಸ್ಟ್ ಕೂಸೊಂದು ಹುಟ್ಟಿಕೊಂಡಿದೆ. ತೊಟ್ಟಿಲಲ್ಲೇ ಅದನ್ನು ಕತ್ತು ಹಿಸುಕಿ ಸಾಯಿಸಿಬಿಡಬೇಕು’ ಅಂತ. ಹೀಗೆ ಸೋವಿಯತ್‌ನ್ನು ಬುಡಮೇಲು ಮಾಡಲು ಸುತ್ತಲಿನಿಂದ ನಡೆದ ಪ್ರಯತ್ನಗಳ ಪರಿಣಾಮವಾಗಿ ಕಂಡವರನ್ನೆಲ್ಲಾ ಅನುಮಾನಿಸುವ ಸ್ಥಿತಿ ಸ್ಟಾಲಿನ್‌ಗೆ ಇತ್ತು. ತನ್ನ ಸರ್ಕಾರದೊಳಗೆ ಇರುವ ಕೆಲವರು ಅಮೆರಿಕದ ಏಜೆಂಟ್‌ಗಳ ಎಂದು ತಿಳಿದಾಗ ಪರಿಸ್ಥಿತಿ ಇನ್ನೂ ಬಿಗಡಾಯಿಸಿತ್ತು. ಜರ್ಮನಿ ರಷ್ಯಾವನ್ನು ಆಕ್ರಮಣ ಮಡಿದಾಗ ಉಳಿದವರೆಲ್ಲರೂ ಸುಮ್ಮನೇ ಕುಳಿತಿದ್ದರು. ಇಂತಹ ಸ್ಥಿತಿಯಲ್ಲಿ ಉಂಟಾದ ಕಷ್ಟನಷ್ಟಗಳು ಕಡಿಮೆಯದಲ್ಲ. ಇವನ್ನೆಲ್ಲಾ ಗಣನೆಯಲ್ಲಿಟ್ಟುಕೊಂಡೇ ಎಲ್ಲವನ್ನೂ ನೋಡಬೇಕು. ಸ್ಟಾಲಿನ್‌ನ್ನು ಮೀರಿಸಿದಂತಹ ಚಂಡಾಲರು ಪ್ರಪಂಚದಲ್ಲಿದ್ದಾರೆ. ಇಂದೂ ಬದುಕಿರುವ ಇಂತವರ ಬಗ್ಗೆ ನನಗೆ ಹೆಚ್ಚು ಆಸಕ್ತಿ. ಕಾಶ್ಮೀರದಲ್ಲಿ ಸ್ಟಾಲಿನ್ ಇಲ್ಲ. ಅಲ್ಲಿ ನಾವು ಎಷ್ಟು ಜನರನ್ನು ಕೊಂದಿದ್ದೇವೆ. ಈಶಾನ್ಯ ಭಾರತದಲ್ಲಿ ಎಷ್ಟು ಕೊಲೆ ಮಾಡಿದ್ದೇವೆ? ನಾವು ಹೇಗೆ ಸ್ಟಾಲಿನ್‌ಗಿಂತ ಕಡಿಮೆ ಆಗುತ್ತೇವೆ.
ಭಾರತದಲ್ಲಿ ತಮ್ಮನ್ನು ತಾವು ಮಾರ್ಕ್ಸ್‌ವಾದಿಗಳು ಎಂದು ಕೊಳ್ಳುವವರ ನೂರಾರು ಬಣಗಳಿವೆ. ಇದಕ್ಕೆ ಕಾರಣವೇನು?
ನಮ್ಮ ದೇಶದಲ್ಲಿ ಮಾರ್ಕ್ಸ್‌ವಾದಿಗಳಿಗೆ ಇರುವ ಜಾಡ್ಯ ಏನೆಂದರೆ ನಾನು ತಿಳಿದುಕೊಂಡಿರೋದೇ ಮಾರ್ಕ್ಸ್‌ವಾದ ಎಂಬ ಮಡಿವಂತಿಕೆಯಲ್ಲಿರುತ್ತಾರೆ. ಇದು ನಿಜವಾದ ಮಾರ್ಕ್ಸ್‌ವಾದ ಅಲ್ಲ. ಇಲ್ಲಿ ಶೋಷಣೆ ಮಾಡುವವರು ಐಕ್ಯತೆಯಿಂದ ಮಾಡುತ್ತಾರೆ. ದೇಶದ ಸಂಪತ್ತನ್ನು ಲೂಟಿ ಮಾಡುವವರು ಒಟ್ಟಾಗಿ ಮಾಡುತ್ತಾರೆ. ಶೋಷಣೆ ವಿರುದ್ಧ ಹೋರಾಡುವವರು ಒಗ್ಗಟ್ಟಾಗಿರುವುದಿಲ್ಲ. ತಮ್ಮದು ಮಾತ್ರ ನಡೆಯುತ್ತದೆ ಎಂಬ ನಿಲುವು ಅವರದ್ದು.
ಶಸ್ತ್ರ ಹಿಡಿದು ಕಾಡಿನಲ್ಲಿರುವ ಮಾವೋವಾದಿಗಳೂ ತಮ್ಮನ್ನು ತಾವು ಮಾರ್ಕ್ಸ್‌ವಾದಿಗಳು    ಎಂದುಕೊಳ್ಳುತ್ತಾರೆ. ಮಾವೋವಾದಿಗಳ ಮಾರ್ಗ ಎಷ್ಟರಮಟ್ಟಕ್ಕೆ ಕಾರ್ಯಸಾಧ್ಯವಾದದ್ದು?
ಶಸ್ತ್ರ ರೂಪದಲ್ಲಿ ಹಿಡಿದುಕೊಂಡು ಹೋರಾಟ ಮಾಡಬೇಕಾ ಇಲ್ಲವೇ ಎಂಬುದನ್ನು ಸೂತ್ರರೂಪದಲ್ಲಿ ಹೇಳಲು ಸಾಧ್ಯವಿಲ್ಲ. ಗಾಂಧಿಯ ಕಾಲದಲ್ಲಿ ಕೆಲವರು ನಾವು ಸಶಸ್ತ್ರ ಹಿಡಿದು ಹೋರಾಡುತ್ತೇವೆಂದಾಗ ಅವರು ನೀವು ಇದರಿಂದ ಗೆಲ್ಲುತ್ತೇವೆ ಎನ್ನುವದಾದರೆ ಇದರಿಂದಲೇ ಗೆಲ್ಲಿ ಹಾಗಾದರೆ ಎಂದು ಹೇಳಿದ್ದರಂತೆ. ಕಡೆಗೆ ಗೆದ್ದಿದ್ದು ಗಾಂಧಿಯೇ ಬಿಡಿ. ಇಲ್ಲಿ ಹಿಂಸೆ ಯಾವುದು ಅಹಿಂಸೆ ಯಾವುದು ಎಂಬುದೆಲ್ಲಾ ಬಹಳ ಅಮೂರ್ತ ಚರ್ಚೆ. ಒಬ್ಬನನ್ನು ಹೊಟ್ಟೆಗೆ ನೀಡದೆ ಸಾಯಿಸುವುದೂ ಹಿಂಸೆಯೇ ಅಲ್ಲವೇ? ಆದರೆ ಅವರ ಶಸ್ತ್ರಕ್ಕೆ ನಿಜವಾದ ಶಕ್ತಿ ಯಾವಾಗ ಬರುತ್ತದೆ ಎಂದರೆ ಜನರ ಮನಸ್ಸು ಆ ಶಸ್ತ್ರದ ಪರವಾಗಿದ್ದಾಗ ಮಾತ್ರ. ಆದರೆ ಆ ಬಂದೂಕಿಗೆ ಜನರೇ ಭಯಬೀಳುತ್ತಾರೆ ಎಂದಾಗ ಅದು ಯಾವ ಬದಲಾವಣೆಯನ್ನೂ ತರುವುದಿಲ್ಲ. ಜನಗಳ ಮನಸ್ಸನ್ನು ಪ್ರವೇಶ ಮಾಡದೇ ಇದ್ದರೆ ಶಸ್ತ್ರ ಹಿಡಿದಾಗಲೀ, ನಿಶಸ್ತ್ರವಾಗಲೀ ವ್ಯತ್ಯಾಸ ಬೀರುವುದಿಲ್ಲ. ಗೆಲುವಿನ ಖಾತ್ರಿ ಇರಬೇಕು, ಧ್ಯೇಯ ಮಕ್ಕಾಗಬಾರದು ಹಾಗೂ ತಲೆಗಳನ್ನು ಕೊಚ್ಚಿ ಹಾಕುವುದಾಗಬಾರದು. ಪೋಸ್ಕೋ ವಿರುದ್ಧ ಹೋರಾಟವನ್ನು ನೋಡಿ. ಜನರ ಮನಸ್ಸನ್ನು ಪ್ರವೇಶ ಮಾಡಿದಾಗ ಆಗುವ ಪರಿಣಾಮ ಏನೆಂದು ತಿಳಿಯುತ್ತದೆ.
ದೇವಿಪ್ರಸಾದ್ ಚಟ್ಟೋಪಾದ್ಯಾಯರ ’ಲೋಕಾಯತ’ ಗ್ರಂಥದ ಅನುವಾದ ಮಾಡಿ ಮುಗಿಸಿದ್ದೀರಿ. ಭಾರತೀತ ತತ್ವಶಾಸ್ತ್ರದಲ್ಲಿ ಲೋಕಾಯತದ ಪ್ರಾಮುಖ್ಯತೆಯ ಬಗ್ಗೆ ಹೇಳಬಹುದಾ?
ಲೋಕಾಯತ ಪದವೇ ಹೇಳವಂತೆ ಅದು ಜನರಿಂದಲೇ ಬಂದಿರುವಂತಹ ತತ್ವಸಾಸ್ತ್ರ. ತತ್ವಶಾಸ್ತ್ರದಲ್ಲಿ ಬಹಳ ಮೂಲಭೂತ ಪ್ರಮೇಯ ಏನೆಂದರೆ ಈ ಜಗತ್ತು ಇದೆಯಾ ಎನ್ನುವುದು. ಲೋಕಾಯತ ಎಂಬುದು ವಾಸ್ತವಿಕ  ಪ್ರಪಂಚವು ನಮ್ಮ ಪ್ರಜ್ಞೆಯಾಚೆಗೂ ಅಸ್ತಿತ್ವ ಪಡೆದಿದೆ ಎಂದು ಸಾರುತ್ತದೆ. ವಸ್ತುನಿಷ್ಠ ರೀತಿಯ ವಿಶ್ಲೇಷಣೆಗೆ ಪ್ರಾಮುಖ್ಯತೆ ನೀಡುತ್ತದೆ. ಅಮೂರ್ತವಾದದ್ದಕ್ಕೆ ಪ್ರಾಮುಖ್ಯತೆ ನೀಡಿ ಮೂರ್ತವಾದ್ದನ್ನು ಕಡೆಗಳಿಸುವುದನ್ನು ಅದು ಒಪ್ಪುವುದಿಲ್ಲ. ಚರಿತ್ರೆಯ ಒಂದು ಹಂತದಲ್ಲಿ ಯೋಚನೆ ಮಾಡುವ ಮನಸ್ಸು, ಕೆಲಸ ಮಾಡುವ ಕೈಗಳು ಜೊತೆಜೊತೆ ಸಾಗಿವೆ. ಮುಂದೊಂದು ಹಂತದಲ್ಲಿ ಚಿಂತಿಸುವ ಮನಸ್ಸು ಕೈಗಳಿಗಿಂತ ಶ್ರೇಷ್ಠ ಎಂದು ಘೋಷಿಸಿಬಿಟ್ಟವು. ಋಗ್ವೇದದಲ್ಲಿ ಒಬ್ಬ ಕವಿಯನ್ನು ’ಬಡಗಿ ಇದ್ದಂಗೆ ಕಣಯ್ಯಾ ನೀನು’ ಎಂದು ಹೊಗಳುವ ಮಾತು ಬರುತ್ತದೆ. ಇಂದು ಒಬ್ಬ ಕವಿಯನ್ನು ಕರೆದು ಹಾಗೆ ಹೇಳಿದರೆ ಅದನ್ನು ಹೊಗಳಿಕೆ ಎಂದೇ ಸ್ವೀಕರಿಸದಿರಬಹುದು. ಅದು ಅವಮಾನಕರವಾಗಿ ಅವನಿಗೆ ಅನಿಸಬಹುದು. ಇದು ಶ್ರಮ ಹಾಗೂ ಬುದ್ಧಿಯ ನಡುವೆ ಅಂತರವನ್ನುಂಟು ಮಾಡಿದ ಪರಿಣಾಮ. ಈ ರೀತಿಯಲ್ಲಿ ಶ್ರೇಷ್ಠ ಕನಿಷ್ಠ ಎಂದು ವಿಗಡಿಸುವುದನ್ನು ಒಪ್ಪದಿರುವ ತತ್ವ ಪ್ರಣಾಳಿಕೆಯೇ ಲೋಕಾಯತ.
ತತ್ವಶಾಸ್ತ್ರ ಎನ್ನುವುದು ಒಂದು ಆಯುಧವಾಗಿ ಬಳಕೆಯಾಗಿದೆ. ಪಾರಮಾರ್ಥಿಕ ಸತ್ಯದ ಬಗ್ಗೆ ಪುಂಕಾನುಪುಂಖವಾಗಿ ಮಾತನಾಡುವವರು ಲೌಕಿಕ ಸುಖಗಳಲ್ಲೇ ತೇಲುತ್ತಿರುತ್ತಾರೆ. ಇಹ ಸತ್ಯವಲ್ಲ, ಪಾರಮಾರ್ಥಿಕವೇ ಸತ್ಯ ಎನ್ನುವವರು ಹಾಗಾದರೆ ಅದನ್ನು ಪಡೆಯಲಿಕ್ಕಾಗಿ ಉಪವಾಸ ಇದ್ದು ಸತ್ತುಹೋಗಿ ಬಿಡಬಹುದಲ್ಲ? ಯಾವ ತತ್ವಸಾಶ್ತ್ರವು ಒಂದು ಆಯುಧವಾಗಿ ಬಳಕೆಸದೇ ಜನರ ಶ್ರೇಯಕ್ಕಾಗಿಯೇ ಇರುವ ಒಂದು ತತ್ವಪ್ರಣಾಳಿಕೆಯೇ ಲೋಕಾಯತ. ಭಗವದ್ಗೀತೆ ಹೇಳುತ್ತೆ ’ಯದ್ಭಾವಂ ತದ್ಭವತಿ’ ಅಂತ. ಬಡತನ ಅಂತ ಯಾಕೆ ಒದ್ದಾಡ್ತೀಯಾ. ಅದು ಬಡತನ ಅಲ್ಲ. ಮನೆ ಇಲ್ಲ ಅಂತ ಯಾಕೆ ಒದ್ದಾಡ್ತೀಯಾ ಅದು ಸತ್ಯ ಅಲ್ಲ. ಜಗತ್ತು ಮಿಥ್ಯೆ ಎಂದೆಲ್ಲಾ ಸಾಗುತ್ತದೆ ಈ ವಾದ. ಹೀಗೆ ವಾಸ್ತವತೆಯಿಂದ ಜನರನ್ನು ದಿಕ್ಕುತಪ್ಪಿಸುವುದೇ ಒಂದು ತತ್ವಶಾಸ್ತ್ರದ ಉದ್ದೇಶವಾದರೆ ಜನರನ್ನು ಸತ್ಯದೆಡೆಗೆ ಕರೆದೊಯ್ಯುವುದು ಲೋಕಾಯತ.
ಅಣ್ಣಾ ಹಜಾರೆ ನೇತೃದ್ವದಲ್ಲಿ ದೇಶದ ಮಧ್ಯಮ ವರ್ಗ ಬೀದಿಗಿಳಿದಿದೆ. ಈ ಭ್ರಷ್ಟಾಚಾರ ವಿರೋಧಿ ಹೋರಾಟದ ಕುರಿತ ನಿಮ್ಮ ಅಭಿಮತವೇನು?
ಇದನ್ನು ಕೆಲವರು ’ಎರಡನೇ ಸ್ವಾತಂತ್ರ್ಯ ಹೋರಾಟ’ ಎಂದು ಕರೆದರು. ನಮ್ಮ ದೇಶದಲ್ಲಿ ಈ ’ಎರಡನೆಯದು’ ಅದೆಷ್ಟು ಸಲ ಬರುತ್ತೆ ಅಂತ? ಮೂರನೆಯದು ಇಲ್ಲವೇ ಇಲ್ಲ. ಈಗ ನಾಗರಿಕ ಸಮಾಜ ಎಂದು ಕರೆದುಕೊಳ್ಳುವ ಶಕ್ತಿ ಈ ಮೂರು ಜನರಿಗೆ ಬಂದಿದ್ದೆಲ್ಲಿಂದ. ಆ ಅರವಿಂದ ಕೇಜ್ರಿವಾಲ್ ಫೋರ್ಡ್ ಫೌಂಡೇಷನ್ ಹಾಗೂ ಸ್ವಲ್ಪ ಹಿಂದೆ ಮುಳುಗಿ ಹೋದ ಅಮೆರಿಕದ ಲೆಹಮನ್ ಬ್ರದರ್ಸ್ ಕಂಪನಿಯಿಂದ ನಾಲ್ಕು ಲಕ್ಷ ಡಾಲರ್ ಪಡೆದುಕೊಂಡು ಈಗ ಭ್ರಷ್ಟಾಚಾರದ ಪಾಠ ಮಾಡುತ್ತಿದ್ದಾರೆ. ಹಾಗಂತ ಭ್ರಷ್ಟಾಚಾರವನ್ನು ಸಹಿಸಬೇಕು ಎಂದು ನಾನು ಹೇಳುತ್ತಿಲ್ಲ. ಆದರೆ ಭ್ರಷ್ಟಾಚಾರದ ಬಗ್ಗೆ ನಮ್ಮ ಕಲ್ಪನೆಯಾದರೂ ಏನು? ನನ್ನ ಪ್ರಕಾರ ಸಾರ್ವಜನಿಕ ಸಂಪತ್ತನ್ನು ಖಾಸಗೀ ಲಾಭ ಮಾಡಿಕೊಳ್ಳಲು ಅವಕಾಶ ಇರುವಾಗೆಲ್ಲಾ ಭ್ರಷ್ಟಾಚಾರ ಇದ್ದೇ ಇರುತ್ತದೆ. ಇದೇ ಅದರ ಮೂಲ. ನಮ್ಮ ಅರ್ಥಿಕ ನೀತಿ ಸಾರ್ವಜನಿಕ ಸಂಪತ್ತನ್ನು ಸಾರ್ವಜನಿಕರಿಗೆ ರೂಢಿಸಿಕೊಳ್ಳಬೇಕು ಎಂಬುದಾಗಿಲ್ಲದಿರುವಾಗ ಭ್ರಷ್ಟಾಚಾರವನ್ನು ತಡೆಯಲು ಆಗೋದೇ ಇಲ್ಲ. ನನ್ನ ಮಾತು ನಿಮಗೆ ಸಿನಿಕತೆಯಿಂದ ಕೂಡಿದ್ದು ಎಂದು ನಿಮಗೆ ಅನ್ನಿಸಬಹುದು. ಇಂದು ಪ್ರತಿಯೊಂದನ್ನೂ ಖಾಸಗಿಯವರಿಗೆ ಕೊಡುತ್ತಿರುವಾಗ ಯಾವ ’ಪಾಲ’ದಿಂದಲೂ ಭ್ರಷ್ಟಾಚಾರ ನಿರ್ಮೂಲನೆ ಆಗುವುದಿಲ್ಲವೇನೋ. ನೋಡಿ. ಕನಕಪುರ ರಸ್ತೆಯಲ್ಲಿ ರೈತರ ಜಮೀನು ಕಿತ್ತುಕೊಂಡು ತಾನೇ ದೊಡ್ಡ ಭ್ರಷ್ಟ ಆಗಿ ರೈತರಿಂದ ಒದೆತ ತಿನ್ನದೇ ಬಚಾವಾಗಿರುವ ರವಿಶಂಕರ್ ಗುರೂಜಿ ಈ ಹೋರಾಟದಲ್ಲಿ ಭಾಗವಹಿಸಿದರು. ಯಾವ ನೈತಿಕ ಹಕ್ಕು ಇವರಿಗಿತ್ತು? ಇಂತವರನ್ನು ಈ ಹೋರಾಟದಲ್ಲಿ ಬಿಟ್ಟುಕೊಂಡದ್ದು ಹೇಗೆ?
ನಿಮ್ಮ ಅಭಿಪ್ರಾಯದಲ್ಲಿ ಸಮಾಜವನ್ನು ಇಂದು ಕಾಡುತ್ತಿರುವ ಸಮಸ್ಯೆಗಳಲ್ಲಿ ಯಾವ ಸಮಸ್ಯೆ ಗಂಭೀರವಾದದ್ದು? 
ಇಂದು ಮುಖ್ಯವಾದ ಸಮಸ್ಯೆ ಜನರ ಪರಿಸ್ಥಿತಿಯನ್ನು ವಿಶ್ಲೇಷಣೆ ಮಾಡಲಿಕ್ಕೆ ಬೇಕಾದ ಸಾಮಗ್ರಿಯನ್ನೇ ನಾವು ಜನರಿಗೆ ತಲುಪಿಸದಿರುವುದು. ’ಸಮಸ್ಯೆ ಯಾಕಿದೆ ಎನ್ನುವುದು ತಿಳಿಯದಿರುವುದೇ ಇಂದು ದೊಡ್ಡ ಸಮಸ್ಯೆ ಎಂಬುದು ನನ್ನ ಭಾವನೆ.
ಮತ್ತೆ ಶಿಕ್ಷಣ ಮಾಧ್ಯಮದ ಬಗ್ಗೆ ಚರ್ಚೆ ನಡೆಯುತ್ತಿದೆ. ಶಿಕ್ಷಣ ಕ್ಷೇತ್ರದಲ್ಲಿ ಕೆಲಸಮಾಡಿರುವ ಶಿಕ್ಷಣ ಕ್ಷೇತ್ರದ ಸ್ಥಿತಿಗತಿಯ ಬಗ್ಗೆ ಏನು ಹೇಳುತ್ತೀರಿ?
 ಇಂಗ್ಲಿಷ್ ಓದಿದೋರೆಲ್ಲಾ ಅಮೆರಿಕಕ್ಕೆ ಹೋಗ್ತಾರೆ ಎನ್ನೋ ಒಂದು ಯೂಫೋರಿಯಾ ಇದೆ. ಎಂತಹಾ ಪರಿಸ್ಥಿತಿ ಇದೆ ಈ ಕಾನ್ವೆಂಟ್‌ಗಳಲ್ಲಿ ಅಂದರೆ  ಮಕ್ಕಳಿಗೆ ಜೋಕುಗಳನ್ನೂ ಗಟ್ಟು ಮಾಡಿಸಿ ಹೇಳಿಸುತ್ತಾರೆ. ಅದರ ಅರ್ಥವೇ ಅವರಿಗೆ ತಿಳಿದಿರುವುದಿಲ್ಲ. ನಮ್ಮಲ್ಲಿ ಹೆಚ್ಚು ಯಾಕೆ ವಿಜ್ಞಾನಿಗಳು ಬರುತ್ತಿಲ್ಲ?. ಈ ಕ್ಷೇತ್ರಗಳಿಗೆ ಇಷ್ಟೆಲ್ಲಾ ಹಣ ಖರ್ಚು ಮಾಡುವಾಗ ಅದಕ್ಕೆ ತಕ್ಕ ಉತ್ಪಾದನೆ ಯಾಕೆ ಬರುತ್ತಿಲ್ಲ? ಪ್ರಾಥಮಿಕ ಹಂತದಲ್ಲಿ ಮಕ್ಕಳಿಗೆ ಪರಿಕಲ್ಪನೆಗಳನ್ನು ಅರ್ಥ ಮಾಡಿಸುವ ಬದಲಿಗೆ ಗಟ್ಟು ಹೊಡೆಸುತ್ತಾರೆ. ಇದರಿಂದಾಗಿ ಮಕ್ಕಳಲ್ಲಿ ಹೊಸದನ್ನು ಕಂಡುಕೊಳ್ಳುವ ಸಾಮರ್ಥ್ಯವೇ ಹೊರಟು ಹೋಗುತ್ತ್ತಿದೆ. ನಮ್ಮ ದೇಶದಲ್ಲಿ ಮಾಧ್ಯಮದ ಒಂದೇ ಕಾರಣದಿಂದಾಗಿ ಮಕ್ಕಳ ಪ್ರತಿಭೆ ಕುಂಠಿತವಾಗುತ್ತ್ತಿದೆ. ಇಂಗ್ಲಿಷ್ ಕಲಿಯುವುದರಲ್ಲೇ ಅವರ ಎಲ್ಲಾ ಶಕ್ತಿ ಉಡುಗಿ ಹೋಗುತ್ತದೆ.  
ಮೊನ್ನೆ ಶಿಕ್ಷಣ ಹಕ್ಕು ಕಾಯ್ದೆ ಜಾರಿಯಗಿದೆ. ಖಾಸಗಿಯವರು ಅದರ ವಿರುದ್ಧ ನ್ಯಾಯಾಲಯಕ್ಕೆ ಹೋಗಿದ್ದಾರೆ. ಅವರ ಕೈಯೇ ಮೇಲಾಗಲೂಬಹುದು. ಇಲ್ಲಿ ಯಾವಾಗ ಶಿಕ್ಷಣದಲ್ಲಿ ಎಲ್ಲಾ ವರ್ಗಗಳಿಗೂ ಪ್ರವೇಶ ಸಾಧ್ಯವಾಯಿತೋಯಿತೋ ಆ ನಂತರದಲ್ಲಿ ಸಮಾಜದ ಮೇಲುಸ್ತರದ, ಮೇಲ್ವರ್ಗಗಳು ಶಿಕ್ಷಣದ ಖಾಸಗೀಕರಣಕ್ಕೆ ಒತ್ತಾಸೆಯಾಗಿ ನಿಂತು ತಮ್ಮ ಮಕ್ಕಳನ್ನು ಖಾಸಗಿ ಶಾಲಾ ಕಾಲೇಜುಗಳಿಗೆ ಕಳುಹಿಸುವ ವ್ಯವಸ್ಥೆ ಮಾಡಿಕೊಂಡರು. ಶಿಕ್ಷಣ ಖಾಸಗಿಕರಣಗೊಳಿಸಿರುವುದರಲ್ಲಿ ಸಮಾಜದ ಮೇಲ್ಜಾತಿ ಮನಸ್ಸುಗಳು ಕೆಲಸಮಾಡಿವೆ.
ಕನ್ನಡ ಸಾಹಿತ್ಯ ಕ್ಷೇತ್ರ ಯಾವ ದಿಸೆಯಲ್ಲಿ ಸಾಗುತ್ತಿದೆ ಎಂದು ನಿಮ್ಮ ಅವಗಾಹನೆ?
ಹಿಂದೆ ಒಬ್ಬ ಆಧುನಿಕ ಕವಿ ಏನಾದರೂ ಬರೆದದ್ದು ’ನನಗೆ ಅರ್ಥ ಆಯ್ತು’ ಎಂದರೆ ’ಮಹಾ ಜಂಭ ನಿನಗೆ. ಅವರು ಬರೆದದ್ದು ಅರ್ಥ ಆಗಿ ಬಿಟ್ಟಿತೋ’ ಎಂದು ಕೇಳುತ್ತಿದ್ದರು. ’ಏನೂ ಅರ್ಥ ಆಗಿಲ್ಲ’ ಎಂದರೆ ದಡ್ಡ ನೀನು ನಿನಗೇನು ಅರ್ಥ ಆಗುತ್ತೆ ಸಾಹಿತ್ಯ?’ ಎಂದು ಬೈಯುತ್ತಿದ್ದರು. ಹೇಗೂ ಬೈಸಿಕೊಳ್ಳೋದೇ ಆಗಿತ್ತು. ಪಾಶ್ಚಾತ್ಯ ದೇಶದಲ್ಲಿ ಏನೇನು ಸಾಹಿತ್ಯ ಪರಿಕಲ್ಪನೆಗಳು ಬರುತ್ತೋ ಅದು ಭಾರತದಲ್ಲಿ ಮೊತ್ತಮೊದಲು ಕನ್ನಡದಲ್ಲೇ ಬರುವುದು. ನೋಡಿ ಈಗ ’ರಾಚನಿಕೋತ್ತರ’ ಎನ್ನುತ್ತಾರೆ. ಏನು ಹಾಗಂದರೆ ಎಂದು ಯಾರಿಗಾದರೂ ಕೇಳಿ. ಇವೆಲ್ಲಾ ನಮ್ಮ ಸಂದರ್ಭದಲ್ಲಿ ಹುಟ್ಟಿರುವುದಲ್ಲ. ಯಾರದ್ದೋ ಅನುಭವವನ್ನು ಹಾಗೆ ಹೇಳುತ್ತಾನೆ. ನಾವು ಕೋತಿಗಳು. ಅದನ್ನು ಯಥಾವತ್ ಹಾಗೇ ಆಧುನಿಕೋತ್ತರ, ರಾಚನಿಕೋತ್ತರ ಎಂದೆಲ್ಲಾ ಬಡಬಡಿಸುತ್ತೇವೆ. ಕನಕದಾಸ ಸಾಹಿತ್ಯದಲ್ಲಿ ’ಪೋಸ್ಟ್ ಸ್ಟ್ರಕ್ಚರಲಿಸಂ’ ಇದೆ, ಡೆರಿಡಾನ ಮೆಥಡ್ ಇದೆ, ಡಿಕನ್ಸ್ಟ್ರಕ್ಷನ್ ಇದೆ ಎಂದೆಲ್ಲಾ ಎಲ್ಲಾ ಪಾರಿಭಾಷಿಕ ಪದಗಳನ್ನೂ ತುರುಕುತ್ತಿದ್ದೇವೆ. ಇದು ಪಂಡಿತರ ಒಂದು ಶಾಕೆ. ಮತ್ತೊಂದು ಎಲ್ಲರಿಗೂ ತಿಳಿಯುವಂತೆ ಬರೆಯುವ, ಸಾಮಾನ್ಯ ತುಮುಲಗಳನ್ನು ಪ್ರತಿಫಲಿಸುವ ಶಾಖೆ ಒಂದಿದೆ. ಈಗ ಇದ್ದುದರಲ್ಲಿ ಪಂಡಿತರ ಶಾಖೆ ದುರ್ಬಲಗೊಂಡಿದೆ ಎಂದೇ ಕಾಣಿಸತ್ತೆ. ಅದು ವಿಶ್ವವಿದ್ಯಾಲಯ ವಿಚಾರಸಂಕಿರಣ ಹಾಗೂ ಕೆಲವೇ ಸಾಹಿತ್ಯ ಪತ್ರಿಕೆಗಳಿಗೆ ಸೀಮಿತವಾಗಿದೆ. ಆದರೆ ಸಾಮಾನ್ಯರ ಸಾಹಿತ್ಯ, ಜನರ ಹತ್ತಿರಕ್ಕೆ ಹೋಗುತ್ತಿರುವ ಸಾಹಿತ್ಯ ಇಂದು ಮೊದಲಿಗಿಂತ ಹೆಚ್ಚಿಗೆ ಬರುತ್ತಿದೆ. ಬರೆಯುವಂತವರೂ ಎಲ್ಲಾ ಸ್ತರಗಳಿಂದಲೂ ಬರುತ್ತಿದ್ದಾರೆ. ಅಷ್ಟರ ಮಟ್ಟಿಗೆ ಇದು ಸ್ವಾಗತಾರ್ಹ.

ಬಿಜೆಪಿ ಸರ್ಕಾರವು ಮೂರುವರ್ಷಗಳನ್ನು ಪೂರೈಸಿರುವ ಹೊತ್ತಿನಲ್ಲಿ ಅದರ ಆಡಳಿತ ವೈಖರಿಯ ಕುರಿತು   ಹೇಳುತ್ತೀರಿ?
ಒಂದೇ ಮಾತಲ್ಲಿ ಹೇಳುವುದಾದರೆ ಇವರ ಹಿಂದೆ ಆಡಳಿತ ನಡೆಸಿದವರು ಮೂವತ್ತು ವರ್ಷದಲ್ಲಿ ಕಮಾಯಿಸಿದ್ದನ್ನು ಇವರು ಮೂರೇ ವರ್ಷದಲ್ಲಿ ಕಮಾಯಿಸಿದ್ದಾರೆ. ಕಾಂಗ್ರೆಸ್ ನವರಿಗೆ ಸ್ವಲ್ಪ ತಾಳ್ಮೆಯಾದರೂ ಇತ್ತು. ಈ ಸಲ ಧರ್ಮಸಿಂಗ್ ತಿನ್ನಲಿ ಮುಂದಿನವರ್ಷ ನಾನು ತಿನ್ನಬಹುದು ಎಂದು. ಆದರೆ ಇವರು ಹಾಗಲ್ಲ ಮುಂದೇ ಅವಕಾಶವೇ ಸಿಗುವುದಿಲ್ಲ ಎಂಬಂತೆ ತಿನ್ನುತ್ತಿದ್ದಾರೆ. ಅದಕ್ಕಾಗಿ ಇವರ ಕಚ್ಚಾಟ ನೋಡಿ. ಸಾಮಾನ್ಯವಾಗಿ ಸರ್ಕಾರದಲ್ಲಿ ಬೇರೆ ಬೇರೆ ಪಕ್ಷಗಳು ಸೇರಿ ಸಂಯುಕ್ತ ಸರ್ಕಾರ ರಚಿಸುತ್ತವೆ. ಆದರೆ ನಮ್ಮ ರಾಜ್ಯದಲ್ಲಿ ಒಂದೇ ಪಕ್ಷವೇ ಸಂಯುಕ್ತ ಸರ್ಕಾರ ರಚಿಸಿಕೊಂಡಿದೆ. ಅತ್ಯಂತ ಹೀನಾಯ ಮಟ್ಟವನ್ನು ಮುಟ್ಟಿದೆ. ಮೌಲ್ಯಗಳಿಗೆ ಅರ್ಥವೇ ಇಲ್ಲ. ರಾಜಕೀಯ ಸಿದ್ಧಾಂತಕ್ಕೆ ಸ್ಥಾನವೇ ಇಲ್ಲ. ಶಿಸ್ತು ಅದೂ ಇದೂ ಎಂದು ಮಾತಾಡುವ ಆರ್‌ಎಸ್‌ಎಸ್ ಇದಕ್ಕೆ ಏನು ಮಾಡಿದೆ?. ಸಂಘದಿಂದಲೇ ಮೌಲ್ಯ ಕಲಿಯಲು ಸಾಧ್ಯ ಎನ್ನುತ್ತಿದ್ದರಲ್ಲಾ. ನಾವು ಈಗ ನೋಡುತ್ತಿರುವುದೇನು? ಸಂಘದಿಂದ ಬಂದವರೇ ಮಾಡುತ್ತಿರುವುದೇನು? ಬೇರೇನೂ ಬೇಡ. ಈ ಹಿಂದೆ ಗೋಡೌನ್‌ಗಳಲ್ಲಿ ತುಂಬಿದ್ದ ೧೭ ಕೋಟಿ ರೂಪಾಯಿಗಳ ರಾಷ್ಟ್ರೋತ್ಥಾನದ ಪುಸ್ತಕಗಳನ್ನು ಬಿಜೆಪಿ ಸರ್ಕಾರ ಬಂದ ಮೇಲೆ ಶಾಲಾ ಕಾಲೇಜು ಲೈಬ್ರಿಗಳಿಗೆ ತುಂಬಿದರು. ಅದರಲ್ಲಿ ಒಳ್ಳೆಯದೂ ಇರಬಹುದು ಕೆಟ್ಟದೂ ಇರಬಹುದು. ನನ್ನ ಸರ್ಕಾರ ಬಂದೊಡನೆ ಹೀಗೆ ಒಂದೇ ಪ್ರಕಾಶನದ ಪುಸ್ತಕಗಳನ್ನು ಮಾರಿಬಿಡುವುದು ಯಾವ ಮೌಲ್ಯವನ್ನು ತೋರಿಸುತ್ತೆ? ನಾನು ಆರೆಸ್ಸೆಸ್ ವಿರೋಧಿಯಾದರೂ ಅವರಲ್ಲಿ ಕೆಲವರಾದೂ ನೀತಿ ನಿಯಮ ಇಟ್ಟುಕೊಂಡು ಬದುಕಿದವರಿದ್ದಾರೆ. ಅವರ ಭಾವನೆ ಸಿದ್ದಾಂತ ನಂಬದೇ ಇದ್ದರೂ ಅವರಲ್ಲಿ ಹಿಂದೆ ಕೆಲವರಾದರೂ ಒಳ್ಳೆಯ ನಡೆತೆಯವರು ಇರುತ್ತಿದ್ದರು. ವ್ಯಕ್ತಿಗತವಾಗಿ ಕಾಗೇರಿ ಬಗ್ಗೆ ನನಗೆ ಕೊಂಚ ಒಳ್ಳೆಯ ಭಾವನೆ ಇದೆ. ಆದರೆ ಉಳಿದ ಸಂಘದ ಹಿನ್ನೆಲೆಯ ವ್ಯಕ್ತಿಗಳನ್ನು ನೋಡಿ. ಅಸಹ್ಯ ಬರುತ್ತದೆ.

ಅಕ್ಟೋಬರ್ 13, 2011

‘ಐ ಯಾಮ್ ಕಲಾಂ’


                                          


  ಕೆಲವು ಸಿನೆಮಾಗಳು ನಮ್ಮ ಮನಸ್ಸಿಗೆ ಮುದ ನೀಡಿದರೆ ಮತ್ತೆ ಕೆಲವು ಸೀದಾ ಹೃದಯಕ್ಕೇ ಲಗ್ಗೆ ಇಟ್ಟು ಬಿಡುತ್ತವೆ. ಮೊನ್ನೆ ನೋಡಿದ  'ಐ ಆ್ಯಮ್ ಕಲಾಂ     ಈ ಎರಡನೆಯ ಬಗೆಯ ಚಿತ್ರ. 

 ‘ಇರಾನಿನ ಮಜೀದ್ ಮಜೀದಿಯ ಸಿನೆಮಾಗಳನ್ನು ನೋಡುವಾಗಲೆಲ್ಲಾ ಅನಿಸುತ್ತಲ್ಲ, ‘ವಾವ್, ಇಷ್ಟೊಂದು ಸರಳವಾಗಿ ಇಷ್ಟು ಅದ್ಭುತವಾಗಿ ಸಿನೆಮಾ ಮಾಡಬಹುದಾ?!’ ಅಂತ... ಐ ಯಾಮ್ ಕಲಾಂ ಸಿನೆಮಾ ನೋಡುವಾಗ ಅನ್ನಿಸಿದ್ದೂ ಹೀಗೇನೇ

  ಈ ಸಿನೆಮಾ ನೆನೆಸಿಕೊಂಡಾಗಲೆಲ್ಲಾ ಕಥಾನಾಯಕ ಚೋಟು ಪಾತ್ರದಲ್ಲಿ ನಟಿಸಿರುವ ದೆಹಲಿಯ ಸ್ಲಂ ಬಾಲಕ ಹರ್ಷ ಮಯಾರ್‌ನಕಲಾಂಮುಖವೇ ಕಣ್ಣ ಮುಂದೆ ಬರುತ್ತಿದ್ದರೆ ರಾಜಕುಮಾರ್ ರಣವಿಜಯನ ಪಾತ್ರ ಮಾಡಿರುವ ಹಸನ್ ಸಾದ್‌ನ ಮುಗ್ಧ ಮೊಗ ಹಾಗೂ ಸಿಹಿಮಾತುಗಳು ಕಿವೆಯಲ್ಲಿ ಅನುರಣನೆಗೊಳ್ಳುತ್ತವೆ. ಅದೆಷ್ಟು ಮುದ್‌ಮುದ್ದಾಗಿ ನಟಿಸಿವೆ ಮಕ್ಕಳು..ವಾಹ್


ಇಡೀ ಚಿತ್ರದ ಕತೆ ನಡೆಯುವುದು ರಾಜಾಸ್ತಾನದ ಮರುಭೂಮಿಯಲ್ಲಿರುವ ಪ್ರವಾಸಿಗರು ಭೇಟಿ ಮಾಡುವ ಹೊಟೆಲ್ ಒಂದರ ಸುತ್ತ. ಮನೆಯಲ್ಲಿ ಕಷ್ಟವಿರುವ ಕಾರಣಕ್ಕೆ ಚೋಟುನ ತಾಯಿ ಅವನನ್ನು ಹೊಟೆಲ್ ಮಾಲಿಕ ಭಾಟಿಯ ಸುಪರ್ದಿಗಿಪ್ಪಿಸಿಬಿಡುತ್ತಾಳೆ. ಚೋಟು ಅದೆಂತಹ ಚೂಟಿ ಹುಡುಗ ಎಂದರೆ ಬಂದ ಮೊದಲ ದಿನದಿಂದಲೇ ಭಾಟಿಯ ಮೆಚ್ಚುಗೆಗಳಿಸುವಂತೆ ಕೆಲಸ ಮಾಡತೊಡಗುತ್ತಾನೆ. ಪಾಪ ಅಲ್ಲಿ ಬಹಳ ದಿನಗಳಿಂದ ಕೆಲಸ ಮಾಡುತ್ತಿರುವ ಲಪ್ಟನ್ (ಪಿತೋಬಾಶ್)ಗೆ ಚೋಟುವಿನಿಂದಾಗಿ ಅವಮಾನವಾಗತೊಡಗುತ್ತದೆ. ಆದರೆ ತನ್ನ ತರ್ಲೆ ಬುದ್ದಿಯಿಂದ ಲಪ್ಟನ್‌ಗೆ ಭೂತಚೇಷ್ಟೆ ಮಾಡಿ ಹೆದರಿಸಿಟ್ಟುಕೊಂಡುಬಿಡುತ್ತಾನೆ ಚೋಟು. ಚೋಟುಗೆ ಓದಿ ಬರೆಯುವ ಹುಚ್ಚು ಬಹಳ. ಹೋಟೆಲ್‌ನ ಟೀವಿಯಲ್ಲಿ ದೆಹಲಿಯಲ್ಲಿ ಗಣರಾಜ್ಯದಿನದ ಪೆರೇಡ್‌ನಲ್ಲಿ ಎಲ್ಲರಿಂದ ಸೆಲ್ಯೂಟ್ ಹೊಡೆಸಿಕೊಳ್ಳುವ ವ್ಯಕ್ತಿಯ ಹೆಸರು ಕಲಾಂ ಎಂದು ತಿಳಿಯುತ್ತದೆ. ಅಲ್ಲಿಂದ ಶುರುವಾಗುತ್ತದೆ ಚೋಟುನ ಕಲಾಂ ಕನಸು. ತಾನೂ ಓದಿ ಇಂಗ್ಲಿಷ್ ಕಲಿತು ಸೂಟು, ಬೂಟು ಹಾಕಿಕೊಂಡು ಕಲಾಂನಂತೆ ಎಲ್ಲರಿಂದ ಸೆಲ್ಯೂಟ್ ಹೊಡೆಸಿಕೊಳ್ಳಬೇಕು.... ಆಹಾ ಎಂತಹ ಕನಸು! ಮಾತ್ರವಲ್ಲ ಇನ್ನು ಮುಂದೆ ತಾನು ಕಲಾಂನಂತೆಯೇ ಕಾಣಿಸಬೇಕು. ಅದಕ್ಕಾಗಿ ತಲೆಗೆ ಎಣ್ಣೆ ಹಚ್ಚಿಕೊಂಡು ಎದುರಿಗೆ ಕಲಾಂ ಅವರ ಫೋಟೋ ಇಟ್ಟುಕೊಂಡು ಅದರಂತೆಯೇ ಬೈತಲೆ ತೆಗೆದುಕೊಳ್ಳುತ್ತಾರೆ ನಮ್ಮ ಚೋಟು!
 ಇದೇ ಹೊತ್ತಿಗೆ ಮತ್ತೊಂದು ಕಡೆ ಅಲ್ಲಿ ರಾಜವಂಶದ ಕುಟುಂಬವೊಂದು ಅರಮನೆಯಂತಹ ಭವ್ಯ ಹೋಟೆಲ್ ಒಂದನ್ನು ನಡೆಸುತ್ತಾ ಅದರ ಒಂದು ಭಾಗದಲ್ಲಿ ವಾಸಿಸಿರುತ್ತದೆ. ರಾಜವಂಶದ ಕುವರ ರಣವಿಜಯ್‌ನಿಗೆ ಆಟ ಆಡಲಿಕ್ಕೆ ಗೆಣೆಕಾರರೇ ಇಲ್ಲ. ದೊಡ್ಡ ಕೊಠಡಿಯ ನಿರ್ಜೀವ ಆಟಿಕೆಗಳು ಇವನಿಗೆ ಯಾವ ಉತ್ಸಾಹವನ್ನೂ ನೀಡುತ್ತಿಲ್ಲ. ಹೀಗಿರುವಾಗ ಅಚಾನಕ್ ಆಗಿ ಅರಮನೆಯೊಳಕ್ಕೆ ಬರುವ ಚೋಟುನೊಂದಿಗೆ ಪರಿಚಯವಾಗುತ್ತದೆ. ಆಗ ಚೋಟು ತನ್ನನ್ನು ಪರಿಚಯ ಮಾಡಿಕೊಳ್ಳುವುದು ಆಮ್ಯ್ ಕಲಾಂಎಂದೇ.
ಹೀಗೆಕಲಾಂಮತ್ತು ರಣವಿಜಯ್ ಪರಮಾಪ್ತರಾಗುತ್ತಾರೆ. ಚೋಟುಗೆ ರಣವಿಜಯ್ ಇಂಗ್ಲಿಷ್ ಕಲಿಸಿದರೆ, ಚೋಟುಕಲಾಂಗೆ ಹಿಂದಿ, ಮರ ಹತ್ತುವುದು, ಇತ್ಯಾದಿ ಕಲಿಸುವುದು ನಡೆಯುತ್ತದೆ.
ನಡುವೆ ಬಹಳ ದಿನಗಳ ನಂತರ ಭಾಟಿಯ ಹೋಟೆಲ್‌ಗೆ ಫ್ರೆಂಚ್ ಮಹಿಳೆ ಲೂಸಿಯ ಆಗಮನವಾಗುತ್ತದೆ. ಆಕೆ ಇಲ್ಲಿ ಸ್ಥಲೀಯ ಸಂಸ್ಕೃತಿಯನ್ನು ಅಧ್ಯಯನ ನಡೆಸಲು ಬಂದವಳು. ಭಾಟಿ ಮಹಾರಾಜರಿಗೆ ಲೂಸಿ ಮೇಲೆ ಹೇಳಿಕೊಳ್ಳಲಾರದ ಮೋಹ. ಅದಕ್ಕಾಗಿ ಆಕೆಯನ್ನು ಒಲಿಸಿಕೊಳ್ಳಲು ಬಹಳಾ ಕಷ್ಟಪಡುತ್ತಿರುತ್ತಾರೆ ಪಾಪ. ಆದರೆ ಲೂಸಿ ಮೇಡಂ ಚೋಟುಗೆ ಎರಡು ದಿನ ರಜೆ ಹಾಕಿಸಿ ತನ್ನೊಂದಿಗೆ ಕರೆದುಕೊಂಡು ಹೋಗಿಬಿಟ್ಟಾಗ ಭಾಟಿಯವರಿಗೆ ಬಹಳ ಕಷ್ಟವಾಗುತ್ತದೆ ಪಾಪ.
ಚೋಟು ಮತ್ತು ರಾಜಕುಮಾರನ ಒಡನಾಟ ಒಂದು ದಿನವೂ ತಪ್ಪುವುದಿಲ್ಲ. ಚೋಟು ಮೂಲಕ ಲೂಸಿಯ ಸಹಾಯದಿಂದ ರಾಜಕುಮಾರ ಫ್ರಂಚ್ ಪರೀಕ್ಷೆಯಲ್ಲಿ ಪ್ಲಸ್ ಗಿಟ್ಟಿಸಿಕೊಳ್ಳುತ್ತಾನೆಚೋಟು ಬರೆದ ಹಿಂದಿ ಭಾಷಣವನ್ನು ಹೇಳಿ ಪ್ರಶಸ್ತಿಯೂ ಗಿಟ್ಟುತ್ತದೆ. ಅತ್ತ ಚೋಟು ಎಲ್ಲರಿಗಿಂತ ಚೆನ್ನಾಗಿ ಇಂಗ್ಲಿಷ್ ಮಾತನಾಡುತ್ತಾನೆ. ಆದರೆ ರಾಯಲ್ ಹೋಟೆಲಿನ ಮ್ಯಾನೇಜರ್‌ಗೆ ಗೆಳೆತನ ತಿಳಿದು ಚೋಟು ಇರುವ ಹೊಟೆಲ್‌ಗೆ ಬಂದು ನೋಡಿದರೆ ಅಲ್ಲಿ ರಾಜಕುಮಾರ ನೀಡಿದ ಬಟ್ಟೆಬರೆಗಳೆಲ್ಲಾ ಸಿಕ್ಕಿ ತನ್ನ ತಾಯಿತೆದುರೇಕಳ್ಳಎನ್ನಿಸಿಕೊಳ್ಳಬೇಕಾಗಿ ಬಂದರೂ ಸತ್ಯವನ್ನು ಬಿಟ್ಟುಕೊಡುವುದಿಲ್ಲ ಚೋಟು. ಆದರೆ ತನಗಾದ ಅವಮಾನ ತಾಳದೇ ತನ್ನ ಬಹುದಿನದ ಕನಸಿನಂತೆ ಟ್ರಕ್ ಒಂದನ್ನು ಹತ್ತಿ ಡೆಲ್ಲಿಗೆ ಕಲಾಂ ಭೇಟಿ ಮಾಡಲು ಹೊರಟೇಬಿಡುತ್ತಾನೆ. ಇದೆಲ್ಲಾ ಕೊನೆಗೆ ರಾಜಕುಮಾರನಿಗೆ ತಿಳಿಸು ಅವನ ಹೃದಯ ಕಳೆದ ಪ್ರಾಣಮಿತ್ರನಿಗಾಗಿ ಬಿಕ್ಕತೊಡಗುತ್ತದೆ. ಎಲ್ಲರೆದುರು ಆತನೇ ಇದುವರೆಗೆ ನಡೆದ ಸತ್ಯವನ್ನು ಹೇಳಿ ತನ್ನ ಎಲ್ಲಾ ಸಾಧನೆಯ ಹಿಂದಿರುವುದುಕಲಾಂಎಂದೂ ತನಗೆ ಕಲಾಂ ಬೇಕೇ ಬೇಕು ಎಂದು ಹಠ ಹಿಡಿಯುತ್ತಾನೆ. ಹೀಗೆ ಅಲ್ಲಿ ಎಪಿಜೆ ಅಬ್ದುಲ್ ಕಲಾಂ ಹುಡುಕುತ್ತಾ ಚೋಟು ಹೊರಟರೆ, ಕಲಾಂನನ್ನು ಹುಡುಕಿಕೊಂಡು ರಾಜಕುಮಾರನ ಕುಟುಂಬ ಹಾಗೂ ಲೂಸಿ ಎಲ್ಲರೂ ಹುಡುಕುತ್ತಾರೆ.....
 ವಾಸ್ತವದಲ್ಲಿ ಸತ್ಯಘಟನೆಯೊಂದರ ಎಳೆಯನ್ನಿಟ್ಟುಕೊಂಡು ಇದನ್ನೊಂದು ಸಾಕ್ಷ್ಯಚಿತ್ರವಾಗಿಸಹೊರಟಿದ್ದರು ಇದರ ನಿರ್ದೇಶಕ ನೀಲಾ ಮಾಧವ್ ಪಾಂಡಾ. ಆದರೆ ಕೊನೆಗೆ ಮನಸ್ಸು ಬದಲಾಯಿಸಿ ಇದನ್ನು ಒಂದು ಬಾಲಿವುಡ್ ಸಿನಿಮಾ ಮಾಡಿದಾಗ ಇಂತಹ ಒಂದು ಅಭೂತಪೂರ್ವ ಅನುಭವ ನೀಡುವ ಐ ಯಾಮ್ ಕಲಾಂ ಚಿತ್ರ ರೂಪುಗೊಂಡಿದೆ! ಲಪ್ಟನ್, ಭಾಟಿ ಎಲ್ಲರ ಅಭಿನಯಗಳೂ ಚೆನ್ನಾಗಿಯೇ ಇವೆ. ಆದರೆಚೋಟುಮತ್ತು ರಣವಿಜಯ್ ಮಾತ್ರ ಹೃದಯದಲ್ಲುಳಿದುಬಿಡುತ್ತಾರೆ. ಸ್ಥಳೀಯ ಜಾನಪದ ರಾಗಗಳ ಹಾಡು ಮತ್ತು ಒಂದು ನೃತ್ಯ ಸಹ ಮುದನೀಡುತ್ತವೆ. ಚಿತ್ರ ಮನಸನ್ನು ರಂಜಿಸುತ್ತದೆ, ನಗಿಸುತ್ತದೆ, ಸ್ಪೂರ್ತಿ ಉಕ್ಕಿಸುತ್ತದೆ, ಬೇಸರ ಮೂಡಿಸುತ್ತದೆ ಕೊನೆಗೆ ಕಣ್ಣಂಚಲ್ಲಿ ನೀರನ್ನೂ ಹನಿಕಿಸುತ್ತದೆ. ಇನ್ನೇನು ಬೇಕು ಹೇಳಿ ಒಂದು ಅತ್ಯುತ್ತಮ ಸಿನಿಮಾ ಎನ್ನಲಿಕ್ಕೆ??

ಅಕ್ಟೋಬರ್ 09, 2011

ಅಮೆರಿಕಾದಲ್ಲಿ ಸಿಡಿದೆದ್ದ ಬಂಡಾಯ- ಒಂದು ಆಶಾಭಾವನೆ!



ಹಲವಾರು ದಿನಗಳಿಂದ ನನಗೆ ಒಂದು ಬಯಕೆಯಿತ್ತು. ಅದೇನೆಂದರೆ ಅಮೆರಿಕವೇ ಅಮೆರಿಕದ ವಿರುದ್ದ ಬಂಡೆದ್ದು ನಿಲ್ಲಬೇಕು ಎನ್ನುವ ಬಯಕೆ ಅದು. ಕಳೆದ ಸೆಪ್ಟೆಂಬರ್ ೧೭ರಿಂದ ಅಮೆರಿಕದಲ್ಲಿ ನಡೆಯುತ್ತಿರುವ ಘಟನಾವಳಿಗಳನ್ನು ನೋಡಿ ಕೊಂಚ ಥ್ರಿಲ್ ಆಗುತ್ತಿದೆ. ಜಗತ್ತಿನೆಲ್ಲೆಡೆ ನಡೆಯುತ್ತಿರುವ ಜನಾಂದೋಲನಗಳ ಸಾಲಿನಲ್ಲಿ ಈಗ ಅಮೆರಿಕದ ಜನರೂ ಹೊಸ ಹೆಜ್ಜೆ ಇಟ್ಟಿರುವುದು ನೋಡಿ ಖುಷಿಯಾಗಿದೆ. ಬಂಡಾಯ ಎಲ್ಲಿಯವರಗೆ ನಡೆಯುತ್ತದೆ, ಏನು ಸಾಧಿಸುತ್ತದೆ, ಯಾವುದೂ ಖಾತ್ರಿಯಿಲ್ಲ. ಆದರೆ ಜಗತ್ತಿನ ಪ್ರತಿಯೊಬ್ಬ ಪ್ರಜಾಪ್ರಭುತ್ವವಾದಿಯೂ ಮುಕ್ತ ಮನಸ್ಸಿನಿಂದ ಬೆಂಬಲಿಸಬೇಕಾದ ಚಳವಳಿ ಇದು ಎಂದು ಮಾತ್ರ ಹೇಳಬಹುದು. ಇದಕ್ಕೆ ಕಾರಣಗಳನ್ನು ಸ್ವಲ್ಪ ವಿವರವಾಗಿ ಗಮನಿಸುವ ಮುನ್ನ ಇಲ್ಲಿ ಏನೇನಾಗುತ್ತಿದೆ ಎಂದು ನೋಡೋಣ.  

ನಿಜಕ್ಕೂ ಅಚ್ಚರಿಯ ಹಾಗೂ ಬೇಸರದ ಸಂಗತಿಯಿಂದರೆ ಅಲ್ಲಿ ನಡೆಯುತ್ತಿರುವ ಇಂತಹ ಒಂದು ಅದ್ಭುತ ಬೆಳವಣಿಗೆಗ ನಮ್ಮ ಮಾಧ್ಯಮಗಳ ಪ್ರತಿಕ್ರಿಯೆ ಏನೂ ಇಲ್ಲವೆನ್ನುವಷ್ಟರ ಮಟ್ಟಿಗಿರುವುದು. ಇದು ಮಾಧ್ಯಮಗಳ ಜಾಣಮೌನವಾ? ಇದು ಇಲ್ಲಿನ ಮಾಧ್ಯಮಗಳ ಪರಿಸ್ಥಿತಿ ಮಾತ್ರವಲ್ಲ. ಅಮೆರಿಕದ ಮುಖ್ಯವಾಹಿನಿ ಮಾಧ್ಯಮಗಳೂ ಬೇಕೆಂದೇ ಚಳವಳಿಯ ಕುರಿತು ಉಪೇಕ್ಷೆಯನ್ನೂ ಹಾಗೂ ಅಪಪ್ರಚಾರವನ್ನೂ ನಡೆಸುತ್ತಿವೆ. ಈಜಿಪ್ಟಿನ, ಲಿಬಿಯಾದ, ಆಥವಾ ನಮ್ಮದೇ ಅಣ್ಣಾ ಚಳವಳಿಗಳನ್ನು ಮುಖಪುಟದಲ್ಲಿ ವಾರಗಟ್ಟಲೆ ವರದಿ ಮಾಡಿದ ಪತ್ರಿಕೆಗಳಿಗೆ, ಟೀವಿ ಚಾನಲ್‌ಗಳಿಗೆ ಈಗ ಕನಿಷ್ಟ ಒಂದು ವರದಿಯನ್ನೂ ಮಾಡದಿರುವಂತದ್ದು ಏನಾಗಿದೆ?! 

ಈಗ ಅಮೆರಿಕದಲ್ಲಿ ಆರಂಭಗೊಂಡಿರುವ ಚಳವಳಿ ವಾಲ್ ಸ್ಟ್ರೀಟ್ ವಶಪಡಿಸಿಕೊಳ್ಳಿಚಳವಳಿ. ಮೊದಲಿಗೆ ಹತ್ತಾರು ಸಂಖ್ಯೆಯಲ್ಲಿ ಚಳವಳಿಗಾರರು ಆರಂಭಿಸಿದ ಚಳವಳಿಯಲ್ಲಿ ದಿನಕಳೆದಂತೆ ಸಾವಿರ ಸಾವಿರ ಸಂಖ್ಯೆಯಲ್ಲಿ ಜನರನ್ನು ಸೇರಿಸಿಕೊಂಡು ಕಾಳ್ಗಿಚ್ಚಿನಂತೆ ಅಮೆರಿಕಾದಾದ್ಯಂತ ವ್ಯಾಪಿಸುತ್ತಿದೆ. ಅದರಲ್ಲೂ ಮುಖ್ಯವಾಗಿ ಹೊಸಪೀಳಿಗೆಯ ವಿದ್ಯಾರ್ಥಿಗಳು, ಯುವಕರು, ಕಾರ್ಮಿಕರು ಸೇರಿಕೊಳ್ಳುತ್ತಿದ್ದಾರೆ. ಮಾತ್ರವಲ್ಲವಾಲ್‌ಸ್ಟ್ರೀಟ್ ವಶಪಡಿಸಿಕೊಳ್ಳಿಚಳವಳಿಯನ್ನು ಬೆಬಂಬಲಿಸಿ ವಾಷಿಂಗ್ಟನ್ ಡಿಸಿ, ಬೋಸ್ಟನ್, ಚಿಕಾಗೋ, ಫಿಲಡೆಲ್ಫಿಯಾ, ಹೂಸ್ಟನ್, ಪೋರ್ಟ್‌ಲೆಂಟ್, ಓರೆಗಾಂವ್, ಸಿಯಾಟಲ್, ಹೂಸ್ಟನ್, ಟೆಕ್ಸಾಸ್, ಮುಂತಾದ ಹತ್ತಾರು ಕಡೆಗಳಲ್ಲಿ ಅದೇ ಮಾದರಿಯ ಚಳವಳಿಗಳೂ ಆರಂಭಗೊಳ್ಳುತ್ತಿವೆ. ದೊಡ್ಡ ಮತ್ತು ಸಣ್ಣ ಸುಮಾರು ಇನ್ನೂರು ನಗರಗಳಲ್ಲಿ ಪ್ರತಿಭಟನೆಗಳಾಗಿವೆ. ಮೊದಮೊದಲು ಇದನ್ನು ಬರೀ ಪಡ್ಡೆ ಹುಡುಗರ ಬಂಡಾಯ ಎಂದು ಉಪೇಕ್ಷೆ ಮಾಡಿದ್ದವರಿಗೆ ಈಗ ಆಘಾತವಾಗಿದೆ. ಅಮೆರಿಕದ ಹಲವಾರು ದೊಡ್ಡ ಕಾರ್ಮಿಕ ಸಂಘಟನೆಗಳೂ ನೆನ್ನೆಯಷ್ಟೇ ತಮ್ಮ ಬಹಿರಂಗ ಬೆಂಬಲವನ್ನು ಘೋಷಿಸಿವೆ. ವಾಲ್‌ಸ್ಟ್ರೀಟ್ ಬಳಿ ಇರುವ ಝುಕ್ಕೊಟ್ಟಿ ಪಾರ್ಕ್‌ನಲ್ಲಿ ನೂರಾರು ಕಾರ್ಯಕರ್ತರು ಕಾರ್ಡ್‌ಬೋರ್ಡ್ ಜೋಪಡಿ ಕಟ್ಟಿಕೊಂಡು ಕಳೆದ ಹದಿನೈದು ಇಪ್ಪತ್ತು ದಿನಗಳಂದ ಜಾಂಡಾ ಹೂಡಿದ್ದರೆ ಇವರಿಗೆ ಬಂಬಲವಾಗಿ ಅಮೆರಿಕದಾದ್ಯಂತ ಸಾವಿರಾರು ಜನರು ಕೇರಾಫ್ಆಕ್ಯುಪೈ ವಾಲ್‌ಸ್ಟ್ರೀಟ್ವಿಳಾಸಕ್ಕೆ ತಮ್ಮ ಕೈಲಾಗುವಂತಾದ್ದನ್ನೆಲ್ಲಾ ಸಹಾಯ ಮಾಡುತ್ತಿದ್ದಾರೆ. ಊಟ, ಬಟ್ಟೆ, ಬರೆ, ಮೊಬೈಲ್ ಫೋನ್‌ಗಳಿಗೆ ಬೇಕಾದ ಬ್ಯಾಟರಿಗಳು, ಬ್ಯಾಕಪ್ ಸರಕುಗಳು, ಬಾರಿಸಲು ಡ್ರಮ್‌ಗಳು, ಪೀಪಿಗಳು, ಹೀಗೆ ಏನೇನು ಸಾಧ್ಯವೋ ಎಲ್ಲಾ ಅಂಚೆಯ ಮೂಲಕ ಹರಿದು ಬರುತ್ತವೆ. ಗ್ರೀನ್ ಪೀಸ್ ಸಂಘಟನೆ ಈಗ ಪ್ರತಿಭಟನೆಯ ಸ್ಥಳದಲ್ಲಿ ಸೌರ ವಿದ್ಯುತ್ತನ್ನು ಅಳವಡಿಸುವ ಹೊಣೆ ಹೊತ್ತುಕೊಂಡಿದೆ.  ಮಾತ್ರವಲ್ಲದೆ ಈಗ ಚಳುವಳಿಸಾಮಾನ್ಯ ಶಾಸನಸಭೆಗಳನ್ನೂ (General assembly) ಸಂಘಟಿಸುತ್ತಿದೆ.
ಒಟ್ಟಾರೆಯಾಗಿ ನಿಧಾನಕ್ಕೆ ಬಂಡಾಯ ಒಂದು ಬೃಹತ್ ಜನಾಂದೋಲನವಾಗಿ ಚಳವಳಿಯಾಗುವ. ಕಳೆದ ಒಂದು ದಶಕದಲ್ಲಿ ಅಮೆರಿಕದಲ್ಲಿ ವ್ಯವಸ್ಥೆಯ ವಿರುದ್ಧ ಜನಸಾಮಾನ್ಯರಲ್ಲಿ ಮಡುಗಟ್ಟಿರುವ ಆಕ್ರೋಶವನ್ನು ಗಮನಿಸಿದರೆ ಸೂಚನೆ ತೋರುತ್ತದೆ
ನೀವೆಲ್ಲಾ ೧೯೮೪ರಲ್ಲಿ ತಥಾಕಥಿತ ಕಮ್ಯುನಿಸ್ಟ್ ಚೀನಾ ಸರ್ಕಾರದ ಸರ್ವಾಧಿಕಾರದ ವಿರುದ್ಧ ನಡೆಸಿದ್ದ ದಂಗೆಯ ಕುರಿತು ಕೇಳಿರಬಹುದು. ಇಂದು ಅಮೆರಿಕದಲ್ಲಿ ನಡೆಯುತ್ತಿರುವ ಚಳವಳಿಯನ್ನು ಗಮನಿಸಿದರೆ ಬಹುತೇಕ ಅದೇ ಮಾದರಿಯಲ್ಲಿ ನಡೆಯುತ್ತಿರುವುದು ತಿಳಿಯುತ್ತಿದೆ. ಆದರೆ ಇಲ್ಲಿ ನಡೆಯುತ್ತಿರುವುದು ಭಾರತದಲ್ಲಿ ಅಣ್ಣಾ ಹಜಾರೆ ಕೇವಲ ಕಾಂಗ್ರೆಸ್ ವಿರುದ್ಧ ನಡೆಸಿದಂತೆ ಬರೀ ಒಬಾಮಾ ಸರ್ಕಾರದ ನೀತಿಗಳ ವಿರುದ್ಧ ಮಾತ್ರವಲ್ಲ. ಇಡೀ ಜಗತ್ತಿನ ಹಣಕಾಸು ಮಾರುಕಟ್ಟೆಯನ್ನು ತನ್ನ ಬೆರಳ ತುದಿಯಲ್ಲಿ ಕುಣಿಸುತ್ತಿರುವವಾಲ್‌ಸ್ಟ್ರೀಟ್ ಹಣಕಾಸು ಸರ್ವಾಧಿಕಾರದ ವಿರುದ್ಧ ನಡೆಯುತ್ತಿರುವ ಚಳವಳಿ ಇದು.

ಈಗ ನಡೆಯುತ್ತಿರುವ ಚಳವಳಿಯ ರೂಪುರೇಷೆಯನ್ನು ಮೊದಲು ನೀಡಿದ್ದು ಕೆನಡಾದಲ್ಲಿರುವಅಡ್‌ಬಸ್ಟರ್ಎಂಬ ಗುಂಪು. ಗುಂಪಿನ ಸಲಹೆ ಮೇರೆಗೆ ಹೋರಾಟದ ರೂಪುರೇಷೆಯನ್ನು ಸಿದ್ಧಪಡಿಸಿ ಸೆಪ್ಟೆಂಬರ್ ೧೭ರಂದು ಆರಂಭವಾಯಿತು. ಚಳವಳಿಯವರು ತಮ್ಮ ಹೋರಾಟವನ್ನು ಘೋಷಿಸಿಕೊಂಡಿರುವುದು ಹೀಗೆ- ಈಜಿಪ್ಟ್, ಗ್ರೀಸ್, ಸ್ಪೇನ್ ಹಾಗೂ ಐಸ್‌ಲ್ಯಾಂಡ್‌ಗಳಲ್ಲಿನ ನಮ್ಮ ಸಹೋದರಂತೆಯೇ ನಾವು ಕ್ರಾಂತಿಕಾರಿ ಅರಬ್ ಬಂಡಾಯವನ್ನು ಅಮೆರಿಕದಲ್ಲಿ ಪ್ರಜಾಪ್ರಭುತ್ವವನ್ನು ಪುನರ್‌ಸ್ಥಾಪಿಸಲು ಬಳಸುತ್ತಿದ್ದೇವೆ. ಇದರಲ್ಲಿ ಭಾಗವಹಿಸುವ ಪ್ರತಿಯಿಬ್ಬರ ಸುರಕ್ಷತರೆಯನ್ನು ಕಾಪಾಡುವ ನಿಟ್ಟಿನಲ್ಲಿ ನಾವು ಅಹಿಂಸಾ ಮಾರ್ಗವನ್ನು ಬಳಸುತ್ತಿದ್ದೇವೆ. ... ‘ವಾಲ್‌ಸ್ಟ್ರೀಟ್ ವಶಪಡಿಸಿಕೊಳ್ಳಿಒಂದು ನಾಯಕರಹಿತ ಚಳವಳಿ. ಇದರಲ್ಲಿ ಬೇರೆ ಬೇರೆ ವರ್ಣ, ಲಿಂಗ, ರಾಜಕೀಯ ದೃಷ್ಟಿಕೋನಗಳ ಜನರು ಭಾಗವಹಿಸುತ್ತಿದ್ದಾರೆ. ನಮ್ಮೆಲ್ಲರಲ್ಲಿರುವ ಸಮಾನ ಅಂಶವೆಂದರೆ % ಜನರ ದುರಾಸೆ ಹಾಗೂ ಭ್ರಷ್ಟಾಚಾರವನ್ನು ೯೯%ಜನರಾದ ನಾವು ಇನ್ನು ಮುಂದೆ ಸಹಿಸಲು ಸಾಧ್ಯವೇ ಇಲ್ಲ”.
ಇಲ್ಲಿ ಮೊಳಗುತ್ತಿರುವ ಘೋಷಣೆಗಳನ್ನೂ ನೋಡಿ-
 “ನಾವು ಬಹಳ ಮಂದಿ, ಅವರು ಕೆಲವೇ ಮಂದಿ, ನಾವು ಎದ್ದು ನಿಂತರೆ ಅವರೇನು ಮಾಡ್ತಾರೆ?”; “ಅವರು ಎಷ್ಟು ಅಂತ ಶ್ರೀಮಂತರಾಗುತ್ತಲೇ ಹೋಗುತ್ತಾರೆ? ಮೊದಲು ವಿದ್ಯಾರ್ಥಿಗಳ ಎಲ್ಲಾ ಸಾಲ ಮನ್ನಾ ಮಾಡಿ”; “ಅವರು ಹೇಳ್ತಾರೆ ಕಟ್ ಬ್ಯಾಕ್, ನಾವು ಹೇಳ್ತೀವಿ- ಫೈಟ್ ಬ್ಯಾಕ್”;ಸಾಲಪಾವತಿಗೆ ಒಂದೇ ದಾರಿ- ಯುದ್ಧ ನಿಲ್ಲಿಸಿ, ಶ್ರೀಮಂತರ ಮೇಲೆ ತೆರಿಗೆ ಹೆಚ್ಚಿಸಿ”, ಹೀಗೆ ಇಂತಹ ಹಲವಾರು ಘೋಷಣೆಗಳನ್ನು ಹಾಕುತ್ತಾ ಹುಮ್ಮಸ್ಸಿನಿಂದ ಪಾಲ್ಗೊಳ್ಳುತ್ತಿರುವ ಕಾರ್ಯಕರ್ತರ ಚಳುವಳಿಗೆ ಇಂದಿನ ಸಂದರ್ಭದಲ್ಲಿ ಜಾಗತಿಕ ಮಟ್ಟದ ಪ್ರಾಮುಖ್ಯತೆ ಇದೆ.

ಚಳವಳಿಯ ಹಲವಾರು ಬೇಡಿಕೆಗಳಲ್ಲಿ ಪ್ರಮುಖವಾದವೆಂದರೆ,
* ಜನರ ಎಲ್ಲಾ ಬಗೆಯ ಸಾಲಗಳನ್ನು ಮನ್ನಾ ಮಾಡಬೇಕು.
* ಸರ್ಕಾರ ಜನರ ತೆರಿಗೆ ಹಣದಲ್ಲಿ ಬೇಲೌಟ್ ನೀಡುವುದನ್ನು ನಿಲ್ಲಿಸಬೇಕು.
* ಉದ್ಯೋಗ ಭದ್ರತೆ ಹಾಗೂ ಉತ್ತಮ ವೇತನ ಖಾತ್ರಿಗೊಳಿಸಬೇಕು.
* ಸಾಮಾಜಿಕ ಭದ್ರತಾ ಕ್ರಮಗಳನ್ನು ಕಡಿತಗೊಳಿಸದೇ ಹೆಚ್ಚಿಸಬೇಕು.
* ಸರ್ವರಿಗೂ ಹೆಲ್ತ್ ಕೇರ್ ವ್ಯವಸ್ಥೆ ಜಾರಿಗೊಳಿಸುವುದು.
* ಸರ್ಕಾರದ ಆದಾಯ ಹೆಚ್ಚಿಸಲಿಕ್ಕಾಗಿ ಶೇಕಡಾ ೧೦ಷ್ಟು ಶ್ರೀಮಂತರ ಮೇಲೆ ತೆರಿಗೆ ಹೆಚ್ಚಿಸಬೇಕು
* ದೊಡ್ಡ ಕಾರ್ಪೊರೇಟ್ ಸಂಸ್ಥೆಗಳು ಜನತೆಯ ಭಾಗ ಅಲ್ಲ ಎಂದು ಸಂವಿಧಾನದಲ್ಲಿ ತಿದ್ದುಪಡಿ ತರಬೇಕು.
* ಉಚಿತ ಕಾಲೇಜು ಶಿಕ್ಷಣ ನೀಡಬೇಕು.
* ಮೂಲಸೌಕರ್ಯಗಳಿಗಾಗಿ (ನೀರು, ಒಳಚರಂಡಿ, ರೈಲ್ವೆ, ರಸ್ತೆ, ಸೇತುವೆ, ವಿದ್ಯುತ್) ಒಂದು ಲಕ್ಷಕೋಟಿ ಡಾಲರ್ ಮೀಸಲಿಡಬೇಕು
* ಪರಿಸರ ಸಂರಕ್ಷಣೆಗಾಗಿ ಒಂಟು ಲಕ್ಷ ಕೋಟಿ ಡಾಲರ್ ಮೀಸಲಿಡಬೇಕು.
* ತೈಲ ಇಂಧನಾಧಾರಿತ ವಿದ್ಯುತ್ ಮೇಲಿನ ಅವಲಂಬನೆ ಕೊನೆಗೊಳಿಸಿ ಪರ್ಯಾಯ ಮಾರ್ಗಗಳನ್ನು ಅಭಿವೃದ್ಧಿಪಡಿಸಬೇಕು.
* ಲಿಂಗ ಹಾಗೂ ಜನಾಂಗೀಯ ಭೇಧಗಳನ್ನು ಹೋಗಲಾಡಿಸುವ ನಿಟ್ಟಿನಲ್ಲಿ ಸಮಾನಹಕ್ಕು ತಿದ್ದು ಪಡಿ ತರಬೇಕು, ಇತ್ಯಾದಿ.

ವಾಲ್‌ಸ್ಟ್ರೀಟ್ ವಶಪಡಿಸಿಕೊಳ್ಳಿಚಳವಳಿಯ ಲೋಗೋ ನೋಡಿ. ’ಗೂಳಿ ಮೇಲೆ ನೃತ್ಯಗೈಯುತ್ತಿರುವ ಯುವತಿಯ ಚಿತ್ರ! ಚಳವಳಿ ತನ್ನ ಕೇಂದ್ರವನ್ನು ವಾಲ್‌ಸ್ಟ್ರೀಟನ್ನೇ ಕೇಂದ್ರಮಾಡಿಕೊಂಡಿರುವುದಕ್ಕೆ ಕಾರಣವಿದೆ. ಇಂದು ಅಮೆರಿಕದ ಇಡೀ ಹಣಕಾಸು ವ್ಯವಹಾರ ನಡೆಯುವುದು ವಾಲ್‌ಸ್ಟ್ರೀಟ್‌ನಲ್ಲಿ. ಜಗತ್ತಿನ ಅತಿದೊಡ್ಡ ಶೇರು ಮಾರುಕಟ್ಟೆಯಾದ ನ್ಯೂಯಾರ್ಕ್ ಸ್ಟಾಕ್ ಎಕ್ಸ್‌ಚೇಂಜ್ ಹಾಗೂ ನಾಸ್ಡಾಕ್, ಅಮೆರಿಕನ್ ಸ್ಟಾಕ್ ಎಕ್ಸ್ ಚೇಂಜ್,  ಎಲ್ಲಾ ಇರುವುದು ಇಲ್ಲೇ.
ತಮ್ಮ ಚಳವಳಿಗೆ ಮುಖ್ಯವಾಹಿನಿ ಮಾಧ್ಯಮಗಳು ಬೆಂಬಲ ನೀಡಲಾರವು ಎಂಬ ಸಂಶಯವಿಟ್ಟುಕೊಂಡೇ ಚಳವಳಿಗಾರರು ಸಾಧ್ಯವಿರುವ ಎಲ್ಲಾ ಪರ್ಯಾಯ ಮಾಧ್ಯಮಗಳನ್ನೂ ಬಳಸಿಕೊಳ್ಳುತ್ತಿದ್ದಾರೆ. ‘ಆಕ್ಯುಪೈ ವಾಲ್‌ಸ್ಟ್ರೀಟ್ ಜರ್ನಲ್ ಎಂಬ ಪತ್ರಿಕೆಯನ್ನೂಹೊರತರುತ್ತಿದ್ದಾರೆ. ಅದರ ಮೊದಲ ಸಂಚಿಕೆಯ ಮುಖಪುಟದಲ್ಲೇಕ್ರಾಂತಿ ಈಗ ತಾಯ್ನಾಡಿನಲ್ಲೇ ಭುಗಿಲೆದ್ದಿದೆ” ಎಂಬ ಒಕ್ಕಣೆಯಿತ್ತು. ಇದರೊಂದಿಗೆ ಫೇಸ್‌ಬುಕ್, ಟಿಟರ್‌ಗಳು, ಯೂಟ್ಯೂಬ್, ವೆಬ್‌ಸೈಟ್ ಹೀಗೆ ಎಲ್ಲವೂ ನಿರಂತರವಾಗಿ ಜನಸಾಮಾನ್ಯರಿಗೆ ಸುದ್ದಿವಾಹಿನಿಗಳಾಗಿ, ಚರ್ಚಾ ವೇದಿಕೆಗಳಾಗಿ ಕೆಲಸ ಮಾಡುತ್ತಿದೆ. ಇದೀಗ ಆನ್‌ಲೈನ್ ಚರ್ಚೆಗಳನ್ನು ಆರಂಭಿಸಿದ್ದಾರೆ. ಜನರು ವ್ಯಾಪಕವಾಗಿ ಬಳಸುವ ವಿಕಿಪಿಡಿಯಾ ಕೂಡಾ ಚಳವಳಿಯ ಬೆಳವಣಿಗೆಯನ್ನು ದಾಖಲಿಸುತ್ತಿದೆ. ಅರಬ್ ಹಾಗೂ ಭಾರತದಲ್ಲೇ ಸಾಕಷ್ಟು ಕೆಲಸ ಮಾಡಿರುವ ಇವುಗಳೆಲ್ಲಾ ಅಮೆರಿಕದಲ್ಲಿ ಮಾಡದಿರುತ್ತವೆಯೆ?

ಸೆಪ್ಟೆಂಬರ್ ೧೭ರಿಂದ ಆರಂಭವಾದ ಚಳವಳಿಯ ಮೊದಲ ದಿನ ಸುಮಾರು ಒಂದು ಸಾವಿರ ಕಾರ್ಯಕರ್ತರು ಬೀದಿಗಳಲ್ಲಿ ಜಮಾಯಿಸಿ ಝುಕ್ಕೊಟ್ಟಿ ಪಾರ್ಕ್‌ನಲ್ಲಿ ಕಾರ್ಡ್‌ಬೋರ್ಡ್‌ಗಳ ಸಹಾಯದಿಂದ ಜೋಪಡಿ ಹಾಕಿಕೊಂಡು ತಂಗಿದ್ದರು, (ನ್ಯೂಯಾರ್ಕ್ ಪೋಲೀಸ್ ಇಲಾಖೆ ಟೆಂಟ್ ಬಳಕೆಯನ್ನು ನಿಷೇಧಿಸಿದ ಕಾರಣ). ವಾರ ಪೋಲೀಸರು ನಾಲ್ಕು ಜನರನ್ನು ಬಂಧಿಸಿದ್ದರು. ಸೆ.24ರಂದು ಕನಿಷ್ಟ 80 ಜನರನ್ನು ಬಂಧಿಸಲಾಗಿತ್ತು. ಅಂದು ನಡೆದ ಜಟಾಪಟಿಯಲ್ಲಿ ಮೂವರು ಮಹಿಳೆಯರ ಮೇಲೆ ಪೋಲೀಸರು ಬಲೆಯನ್ನು ಬೀಸಿಪೆಪ್ಪರ್’ (ಮೆಣಸು ಕಾಳಿನ ದ್ರವ) ಸಿಂಪಡಿಸಿ ಹಲ್ಲೆ ನಡೆಸಿದ್ದರು. ಇದನ್ನು ಕೂಡಲೇ ಯೂಟ್ಯೂಬ್‌ನಲ್ಲಿ ಬಹಿರಂಗಪಡಿಸಿದ ಪ್ರತಿಭಟನಾಕಾರರು ಪೋಲೀಸ್ ಅಧಿಕಾರಿಯ ಸಂಪೂರ್ಣ ವಿವರ, ಫೋನ್ ನಂಬರ್‌ಗಳನ್ನೂ ಪ್ರಕಟಿದ್ದರು. ಯಾವುದೇ ಪೊಲೀಸ್ ಅಧಿಕಾರಿ ಕೆಟ್ಟದಾಗಿ ವರ್ತಿಸಿದ ಮರುಕ್ಷಣವೇ ಆತನ ಎಲ್ಲಾ ವರ್ತನೆಯನ್ನೂ ವಿಡಿಯೋ ಸಮೇತ ಜಗತ್ತಿನ ವೀಕ್ಷಣೆಗೆ ಬಿಡಲಾಗುತ್ತಿದೆ!
ಅಕ್ಟೋಬರ್ 1ರಂದು ಬ್ರೂಕ್‌ಲಿನ್ ಸೇತುವೆ ಮೇಲೆ ಪ್ರತಿಭಟಿಸಿದ ಸುಮಾರು 700 ಜನರನ್ನು ಪೋಲೀಸರು ಬಂಧಿಸಿದ್ದರು. ಇಲ್ಲಿ ಹೀಗೆ ಬಂಧಿಸುವಾಗ ಪೋಲೀಸರುಕೆಟ್ಲಿಂಗ್ಎಂಬ ತಂತ್ರವನ್ನು ಪ್ರಯೋಗಿಸುತ್ತಿದ್ದಾರೆ. ನಮ್ಮ ದೇಶದಲ್ಲಿ ನಡೆಸುವಂತೆ ಹಠಾತ್ ಲಾಠಿ ಚಾರ್ಜು, ಗೋಲಿಬಾರ್‌ಗಳನ್ನು, ಹಲ್ಲೆಗಳನ್ನು ಅಮೆರಿಕದಲ್ಲಿ ನಡೆಸಿ ಸುಲಭವಾಗಿ ದಕ್ಕಿಸಿಕೊಳ್ಳಲು ಸಾಧ್ಯವಾಗುಗುವುದಿಲ್ಲ. ಮಾನವ ಹಕ್ಕು, ಪ್ರಜಾತಂತ್ರಗಳ ಕುರಿತ ಮುಂದುವರಿದ ದೇಶಗಳ ಜನರ ಜನರ ಪ್ರಜ್ಞಾಮಟ್ಟ ಹೆಚ್ಚಿರುವುದರಿಂದ ಪೋಲೀಸ್ ಅಧಿಕಾರಿಗಳು ಮನಬಂದಂತೆ ವರ್ತಿಸಲು ಬರುವುದಿಲ್ಲ. ಹೀಗಾಗಿ ಪ್ರತಿಭಟನಾಕಾರರನ್ನು ಆದಷ್ಟು ಚದುರಿಸಿ, ದಿಕ್ಕು ತಪ್ಪಿಸಿ ಗುಂಪು ಗುಂಪಾಗಿ ಬಂದಿಸುವ ತಂತ್ರ ಹೂಡುವ ಕೆಟ್ಲಿಂಗ್ ಕೂಡಾ ಬಹಳಷ್ಟು ಸಲ ಟೀಕೆಗೊಳಗಾಗಿದೆ. ನಂತರ ಅಕ್ಟೋಬರ್ 5 ರಂದು ನ್ಯೂಯಾರ್ಕ್ ನಗರದ ಹತ್ತಾರು ಶಾಲಾಕಾಲೇಜುಗಳ ಸಾವಿರಾರು ವಿದ್ಯಾರ್ಥಿಗಳು ತರಗತಿಗಳನ್ನು ಬಹಿಷ್ಕರಿಸಿ ಪ್ರತಿಭಟನೆಯಲ್ಲಿ ಸೇರಿಕೊಂಡರು. ಅಂದು ನಡೆದ ಮೆರವಣಿಗೆಯಲ್ಲಿ ಸುಮಾರು 15,000 ಜನರು ಪಾಲ್ಗೊಂಡಿದ್ದರು. ಹೀಗೆ ದಿನೇ ದಿನೇ ಆಂದೋಲನದಲ್ಲಿ ಹೆಚ್ಚೆಚ್ಚು ಜನರು ಭಾಗವಹಿಸುತ್ತಲೇ ಇದ್ದಾರೆ.

1999ರಲ್ಲಿ ಸಿಯಾಟಲ್‌ನಲ್ಲಿ ನಡೆದ ಡಬ್ಲ್ಯೂಟಿಓ ಸಮ್ಮೇಳನದ ವಿರುದ್ಧ ಹಾಗೂ ನಂತರ ಇರಾಕ್ ಯುದ್ಧದ ವಿರುದ್ಧ ಬೃಹತ್ ಚಳವಳಿ ನಡೆದಿದ್ದವು ಅವುಗಳಲ್ಲಿ ಲಕ್ಷಾಂತರ ಜನರು ಸೇರಿದ್ದರಾದರೂ ಅವು ನಿರ್ದಿಷ್ಟ ದಿನಗಳಂದು ನಡೆದ ಸೀಮಿತ ಪ್ರದರ್ಶನಗಳು. ಆದರೆ ಈಗ ನಡೆಯುತ್ತಿರುವುದು ಬೇರೆಯದೇ ಸ್ವರೂಪದ್ದು.
ಹಾಗಾದರೆ ಇಡೀ ಜಗತ್ತಿಗೇ ಬುದ್ಧಿ ಹೇಳುವ ಅಮೆರಿಕದಂತ ಅಮೆರಿಕದಲ್ಲಿ ಇಂತಹ ಒಂದು ಬಂಡಾಯ ಹುಟ್ಟಿಕೊಂಡಿರುವುದು ಯಾಕೆ? ಈಗ ಹುಟ್ಟಿರುವ ಚಳವಳಿಯ ವ್ಯಾಪ್ತಿಯೇನು? ಇದರ ಶಕ್ತಿ ಏನು? ದೌರ್ಬಲ್ಯಗಳೇನು? ಕುರಿತು ಕೊಂಚ ತಲೆಕೆಡಿಸಿಕೊಳ್ಳುವ ಅಗತ್ಯ ಭಾರತೀಯರಿಗೂ ಇದೆ. ಯಾಕೆ ಇದರ ಅಗತ್ಯ ನಮಗಿದೆ ಎಂದರೆ ಎರಡನೆಯ ವಿಶ್ವ ಮಹಾಯುದ್ಧದ ನಂತರದಲ್ಲಿ ಅದರಲ್ಲೂ ಸೋವಿಯತ್ ಒಕ್ಕೂಟ ಕುಸಿದ ಮೇಲೆ ಇಡೀ ಜಗತ್ತನ್ನು ತನ್ನ ಅಂಕೆಯಲ್ಲಿಟ್ಟುಕೊಂಡಿರುವುದು ಅಮೆರಿಕ. ನೂರಾರು ದೇಶಗಳಲ್ಲಿ ಬುಡಮೇಲು ಕೃತ್ಯಗಳನ್ನು, ಸಾವಿರಾರು ಪ್ರಾಕ್ಸಿ ಯುದ್ಧಗಳನ್ನು ನಡೆಸುತ್ತಾ ಇಡೀ ಜಗತ್ತಿನ ಬಹುಪಾಲು ದೇಶಗಳನ್ನು ತನ್ನ ಪದತಲದಲ್ಲಿ ಬೀಳುವಂತೆ ಮಾಡಿಕೊಂಡು ಕೇಕೆ ಹಾಕುತ್ತಿರುವುದು ಅಮೆರಿಕ. ಒಂದು ಕಡೆ ಮುಕ್ತ ಆರ್ಥಿಕತೆಯ ನೀತಿಗಳನ್ನು ಎಲ್ಲರ ಮೇಲೆ ಹೇರುತ್ತಲೇ ತಾನು ಮಾತ್ರ ರಕ್ಷಣಾತ್ಮಕ ನೀತಿಗಳನ್ನು ಪಾಲಿಸಿಕೊಂಡು ಇಬ್ಬಗೆಯ ನೀತಿಯನ್ನು ಪಾಲಿಸುತ್ತಿರುವುದು ಇದೇ ಅಮೆರಿಕ. ಜಗತ್ತಿನ ತೈಲಸಂಪನ್ಮೂಲಗಳ ಮೇಲಿನ ಹಿಡಿತಕ್ಕಾಗಿ ಲಕ್ಷಾಂತರ ಜನರ ಮಾರಣ ಹೋಮನಡೆಸಿರುವುದೂ ಇದೇ ಅಮೆರಿಕ. ಇಂದು ಇಡೀ ಜಗತ್ತನ್ನು ಕಾಡುತ್ತಿರುವಇಸ್ಲಾಂ ಭಯೋತ್ಪಾದನೆಗೆಬೀಜ ನೆಟ್ಟು, ನೀರು ಗೊಬ್ಬರ ಹಾಕಿ ಈಗ ಮತ್ತೆ ಭಯೋತ್ಪಾದನೆಯ ವಿರುದ್ಧದ ಹೋರಾಟದ ಹೆಸರಿನಲ್ಲಿ ತನ್ನ ಅಜೆಂಡಾಗಳನ್ನು ಜಗತ್ತಿನ ಮೇಲೆ ಹೇರುತ್ತಿರುವುದೂ ಇದೇ ಅಮೆರಿಕ. ಇಂದು ಜಗತ್ತಿನ ಪ್ರತಿಯೊಬ್ಬ ಮನುಷ್ಯನೂ ಕೂಡ ಅಮೆರಿಕ ತನ್ನ ಹಿತಾಸಕ್ತಿಗಾಗಿ ಹಾಕಿಕೊಟ್ಟ ಅಜೆಂಡಾಗಳನ್ನು ಒಂದಲ್ಲಾ ಒಂದು ರೀತಿಯಲ್ಲಿ ಪಾಲಿಸುತ್ತಲೇ ಇದ್ದಾನೆ ಎಂದರೆ ಅತಿಶಯೋಕ್ತಿಯಲ್ಲ. ಆದರೆ ಇದೆಲ್ಲಾ ಜಾಗತೀಕರಣ ಮುಸುಕಿನಲ್ಲಿ ನಡೆಯುತ್ತಿರುವುದರಿಂದ ಅದನ್ನೆಲ್ಲಾ ನಮ್ಮದೇ ಎಂಬಂತೆ ನಾವು ಒಪ್ಪಿಕೊಂಡು ಹೋಗುತ್ತಿದ್ದೇವಷ್ಟೆ.
ಜಾಗತೀಕರಣಎಂದರೆಅಮೇರಿಕೀಕರಣಎಂದು ಬಣ್ಣಿಸುವ ನಮ್ಮ ಡಾ. ಯು. ಆರ್. ಅನಂತಮೂರ್ತಿಯಂತಹವರ ಅಭಿಪ್ರಾಯ ಮುಖ್ಯವಾಗುವುದು ಕಾರಣದಿಂದಲೇ.

ಇಂತಿಪ್ಪ ಅಮೆರಿಕದ ಪ್ರಭುತ್ವದ ವಿರುದ್ಧ ಅಮೆರಿಕದ ಪ್ರಜೆಗಳೇ ದಂಗೆಯೇಳುವ ಸ್ಥಿತಿ ಉಂಟಾಗಿದೆ ಎಂದರೆ ನಾವು ಕಂಡಿತಾ ಇದನ್ನು ಕೊಂಚ ಹತ್ತಿರದಿಂದ ಗಮನಿಸುವ ಅಗತ್ಯವಿದೆ. ಇದಕ್ಕಾಗಿ ಚಳವಳಿಗೆ ಕಾರಣವಾಗಿರುವ ಅಮೆರಿಕ ಆರ್ಥಿಕತೆಯನ್ನು ಸಂಕ್ಷಿಪ್ತವಾಗಿಯಾದರೂ ಅರಿಯಬೇಕಾಗುತ್ತದೆ.

ಕಳೆದ ಆಗಸ್ಟ್ ತಿಂಗಳಲ್ಲಿ ಅಮೆರಿಕ ಅಮೆರಿಕ ಸರ್ಕಾರದ ಋಣಾರ್ಹತೆ ಮಟ್ಟವನ್ನು ಅಲ್ಲಿನ ಪ್ರಮುಖ ಮೌಲ್ಯಮಾಪನಾ ಸಂಸ್ಥೆಗಳಲ್ಲೊಂದಾದ ಎಸ್ & ಪಿ  AAA ಯಿಂದ AA+ಗೆ ಇಳಿಸಿತ್ತು. ತಾನು ಸುಸ್ತಿದಾರನಾಗುವ (Defaulter) ಹಂತಕ್ಕೆ ಹೋಗುವುದನ್ನು ತಪ್ಪಿಸಲು ಒಬಾಮಾ ಸರ್ಕಾರವು ಸಾಲ ಒಪ್ಪಂದ ಕಾಯ್ದೆಯನ್ನು (Debt ceiling Act) ಜಾರಿ ಮಾಡಿತು.
ಇನ್ನೂ ಸ್ವಲ್ಪ ಹಿಂದಕ್ಕೆ ಹೋಗೋಣ. 2008ರ ಸೆಪ್ಟೆಂಬರ್ ತಿಂಗಳಲ್ಲಿ ಅಮೆರಿಕದ ಸಬ್‌ಪ್ರೈಂ ಗೃಹಸಾಲ ಬಿಕ್ಕಟ್ಟು ಸ್ಪೋಟಗೊಂಡಿತ್ತು. ಅಮೆರಿಕಾದ ವಾಣಿಜ್ಯ ಬ್ಯಾಂಕುಗಳು, ವಿಮಾ ಕಂಪನಿಗಳು ಹಾಗೂ ಎಲ್ಲಾ ಹಣಕಾಸು ಉದ್ದಿಮೆಗಳೂ ಸಹ ಒಂದಲ್ಲಾ ಒಂದು ರೀತಿಯಲ್ಲಿ ಸಬ್‌ಪ್ರೈಮ್ ಗೃಹಸಾಲ ಮಾರುಕಟ್ಟೆಯೊಳಗೆ ಕಾಲಿಟ್ಟಿದ್ದವು. ಅಗ್ಗದ ಬಡ್ಡಿ ದರದಲ್ಲಿ ನೀಡತೊಡಗಿದ್ದ ಗೃಹಸಾಲ ಉದ್ದಿಮೆಗೆ ಕಾಲಿಟ್ಟ ಹಣಕಾಸು ಸಂಸ್ಥೆಗಳು ಬೃಹತ್ ಮಟ್ಟದಲ್ಲಿ ರಿಯಲ್ ಎಸ್ಟೇಟ್ ದಂಧೆ ನಡೆಸತೊಡಗಿದ್ದೇ ಬೃಹತ್ ಪ್ರಮಾಣದ ಬಂಡವಾಳ ಸಂಚಯವಾಗತೊಡಗಿತ್ತು. ಆದರೆ ಯಾವಾಗ ಇದ್ದಕ್ಕಿದ್ದಂತೆ ಹೆಚ್ಚೆಚ್ಚು ಜನರು ಗೃಹಸಾಲದ ಕಂತುಕಟ್ಟಲಾರದೆ ಡಿಫಾಲ್ಟರ್ ಆಗತೊಡಗಿದ್ದರೋ ಆಗ ಉದ್ದಿಮೆಯನ್ನವಲಂಭಿಸಿ ಬಹುದೂರ ಹೋಗಿಬಿಟ್ಟದ್ದ ಆರ್ಥಿಕತೆಯೆಲ್ಲವೂ ಕುಸಿಯತೊಡಗಿತ್ತು. ಎಂತಹ ಪರಿಸ್ಥಿತಿ ಸೃಷ್ಟಿಯಾಗಿತ್ತೆಂದರೆ 2007ರ ಡಿಸೆಂಬರ್‌ನಲ್ಲಿ ಅಮೆರಿಕಾದಲ್ಲಿ ಬ್ಯಾಂಕುಗಳಿಗೆ ಬಾಕಿ ಬರಬೇಕಿದ್ದ ಸಬ್‌ಫ್ರೈಮ್ ಗೃಹಸಾಲದ ಒಟ್ಟು ಮೊತ್ತ 70 ಲಕ್ಷ ಕೋಟಿ ರೂಗಳು! ಅದೇ ವರ್ಷ 12 ಲಕ್ಷ ಮನೆಗಳು ಜಪ್ತಿಯಾದವು. ಹೀಗೆ ಜಪ್ತಿಯಾಗಿ ಅಕ್ಷರಶಃ ಬೀದಿಗೆ ಬಿದ್ದವರ ಸಂಖ್ಯೆ 45 ಲಕ್ಷ ದಾಟಿತ್ತು!. ಮನೆಗಳ ಬೆಲೆಗಳು ಶೇಕಡಾ 40 ರಷ್ಟು ಕುಸಿದಿದ್ದರೂ ಕೊಳ್ಳುವವರೇ ಗತಿ ಇರಲಿಲ್ಲ. 1.86 ಕೋಟಿ ಮನೆಗಳು ಹೀಗೆ ದೂಳು ಹಿಡಿದು ಕೂತಿದ್ದವು. ಆದರೆ ಮನೆಗಳಲ್ಲಿರಬೇಕಾದವರು ಬೀದಿ ಮೂಲೆಗಳಲ್ಲಿ, ತಮ್ಮ ಕಾರುಗಳೊಳಗೆ, ರೈಲು ಬೋಗಿಗಳಲ್ಲಿ, ಪಾರ್ಕ್‌ಗಳಲ್ಲಿ ರಾತ್ರಿಗಳನ್ನು ಕಳೆಯುವ ಪರಿಸ್ಥಿತಿ ಬಂದೊದಗಿತ್ತು!
ಮತ್ತೊಂದೆಡೆ ಲೀಮಾನ್ ಬ್ರದರ್‍ಸ್‌ನಂತಹ ಅತಿದೊಡ್ಡ ಹೂಡಿಕೆ ಬ್ಯಾಂಕುಗಳು ದಿವಾಳಿಯಾದವು. ಕೆಲವು ಬ್ಯಾಂಕುಗಳನ್ನು ಸರ್ಕಾರ ರಾಷ್ಟ್ರೀಕರಣ ಮಾಡಿ ಉಳಿಸಿಕೊಂಡಿತು. ಅಮೆರಿಕ ಸರ್ಕಾರ ಕೂಡಲೇ ಸುಮಾರು 700 ಶತಕೋಟಿ ಡಾಲರುಗಳ ಬೇಲೌಟ್ ನೀಡಿತ್ತು. ಹಣಕಾಸು ಸಂಸ್ಥೆಗಳಿಗೆ ತತ್ಕಾಲಿಕ ಸಾಲ ನೀಡುವ ಕಮರ್ಷಿಯಲ್ ಪೇಪರ್ ಕೂಡಾ ಕುಸಿದು ಬಿದ್ದಿದ್ದು ದಿಢೀರ್ ಅವಘಟಗಳೀಗೆ ಕಾರಣವಾಗಿತ್ತು. ಆರ್ಥಿಕತೆಯ ಬಿಕ್ಕಟ್ಟಿನಿಂದಾಗಿ ಅಂದು ಅಮೆರಿಕ ಒಂದರಲ್ಲಿ  ಕೆಲಸ ಕಳೆದುಕೊಂಡವರು 12 ಲಕ್ಷಕ್ಕಿಂತ ಹೆಚ್ಚು ಮಂದಿ! ಬಿಕ್ಕಟ್ಟು ಅಂದು ಇತರ ದೇಶಗಳಿಗೂ ಹರಡಿ ಎಲ್ಲೆಡೆ ಇದೇ ಬೆಳವಣಿಗೆಗಳಾದವು.
1930ರಲ್ಲಾದಂತೆಯೇ ಮತ್ತೊಂದು ಆರ್ಥಿಕ ಮಹಾಕುಸಿತದ (The Great Deppression) ಮುನ್ಸೂಚನೆ ದೊರೆತು ಜಗತ್ತು ತಲ್ಲಣಗೊಂಡಿತ್ತು. ಇದು ಅಮೆರಿಕದಲ್ಲಿ ಡಬಲ್ ಡಿಪ್ ರಿಶೆಷನ್ ಸ್ಥಿತಿ. ಅಂದರೆ ಈಗಾಗಲೇ ಒಂದು ಬಿಕ್ಕಟ್ಟಿನಿಂದ ಪೂರ್ತಿ ಚೇತರಿಸಿಕೊಳ್ಳುವಷ್ಟರಲ್ಲೇ ಮತ್ತೊಂದು ಆರ್ಥಿಕ ಕುಸಿತದ ಭಯ!
2008ರಲ್ಲಿ ಕುಸಿತವಾದಾಗ ಅಮೆರಿಕ ಸರ್ಕಾರ ಹಾಗೂ ಅನೇಕ ಆರ್ಥಿಕ ಪಂಡಿತರು ಗೃಹಸಾಲ ಮಾರುಕಟ್ಟೆಯನ್ನು ದೂರಿದರಾಗಲೀ ಸಮಸ್ಯೆಯ ಕಾರಣವನ್ನು ಗುರುತಿಸಿ ಅದಕ್ಕೆ ಪರಿಹಾರ ಕಂಡು ಹಿಡಿಯುವ ಪ್ರಯತ್ನ ಮಾಡಲಿಲ್ಲ.

ಇಷ್ಟಕ್ಕೆಲ್ಲ ಇರುವ ಮೂಲ ಕಾರಣವನ್ನು ಹೆಚ್ಚಿನ ವಿವರಗಳನ್ನೂ ಅಂಕಿ ಅಂಶಗಳನ್ನು ನೀಡುವ ಗೊಡವೆಗೆ ಹೋಗದೇ ಅತ್ಯಂತ ಸರಳವಾಗಿ ಹೀಗೆ ಹೇಳಬಹುದು - ಅದು ಅಮೆರಿಕ ಕೇಂದ್ರಿತ ಜಾಗತಿಕ ಮಾರುಕಟ್ಟೆ ವ್ಯವಸ್ಥೆ ನೈಜವಾದ ಆರ್ಥಿಕತೆಯಿಂದ (ಅಂದರೆ ಉತ್ಪಾದನೆಯನ್ನು, ಉದ್ಯೋಗಬೆಳವಣಿಗೆಯನ್ನು ಆಧರಿಸಿದ ಆರ್ಥಿಕತೆ) ವಿಮುಖಗೊಂಡು ಹಣಕಾಸು ಬಂಡವಾಳವನ್ನು ಅಗಾಧವಾಗಿ ಸಂಚಯಿಸಿಕೊಳ್ಳುತ್ತಾ ಹೋದದ್ದು. (financialization of economy) ಕೊನೆಗೆ ಇಡೀ ಆರ್ಥಿಕತೆಯೇ ಸಾಲದ ವ್ಯಸನಕ್ಕೊಳಗಾಗಿ ಈಗ ದಿವಾಳಿ ಹಂತಕ್ಕೆ ತಲುಪಿದ್ದು. ಉತ್ಪಾದನೆ ಆಧಾರಿತ ಕೈಗಾರಿಕೆ ಮತ್ತು ಸೇವಾಕ್ಷೇತ್ರಗಳು ಒಂದು ಹಂತದಲ್ಲಿ ಸ್ಥಗಿತಗೊಂಡು ಸಾಲಾಧಾರಿತ ಸಟ್ಟಾ ವ್ಯಾಪಾರದ (speculative business) ಪ್ರಾಬಲ್ಯ ತೀವ್ರಗೊಂಡಿದ್ದು. ಇದು ಬೇರೇನೂ ಆಗಿರದೇ ಹಣಕಾಸು ಮಾರುಕಟ್ಟೆಯೊಳಗಿನ ಜೂಜು ಮಾತ್ರವಾಗಿದ್ದದ್ದು.
ಅಮೆರಿಕದಲ್ಲಿ ಎಲ್ಲಾ ಕ್ಷೇತ್ರಗಳನ್ನೂ ಗಣನೆಗೆ ತೆಗೆದುಕೊಂಡರೆ 1954ರಲ್ಲಿ ಒಟ್ಟು ಜಿಡಿಪಿಗೆ ಹೋಲಿಸಿ ನೋಡಿದಾಗ ಅಲ್ಲಿನ ಸಾಲ ಶೇಕಡಾ 153ರಷ್ಟಿದ್ದರೆ 2007ರಲ್ಲಿ ಶೇಕಡಾ 373ರಷ್ಟಿತ್ತೆಂದರೆ ಸಾಲದ ಪಾತ್ರವನ್ನು ಊಹಿಸಬಹುದು. ಪ್ರಪಂಚದ ಅತಿದೊಡ್ಡ ಸಾಲಗಾರನಾಗಿರುವ ಅಮೆರಿಕದ ಈಗಿನ 14 ಲಕ್ಷ ಕೋಟಿ ಡಾಲರ್‌ಗಳು!. ಮಾತ್ರವಲ್ಲ ಅತ್ತ ನೈಜ ಆರ್ಥಿಕತೆ ಯಾವ ಬೆಳವಣಿಗೆಯನ್ನೂ ಕಾಣದೇ ಬಡತನ, ನಿರುದ್ಯೋಗಗಳು ಕ್ರಮೇಣ ಹೆಚ್ಚತೊಡಗಿದ್ದರೆ ಆರ್ಥಿಕತೆಯನ್ನು ಹೀಗೆ ಬರೀ ಪೇಪರ್ ಮೇಲಿನ ಹಣದ (ಕಂಪ್ಯೂಟರ್ ಎಂದು ಓದಿಕೊಳ್ಳಿ) ಮೇಲೆಯೇ ನಿಲ್ಲಿಸಿದ ಪರಿಣಾಮವಾಗಿ ದೊಡ್ಡ ಕಾರ್ಪೊರೇಷನ್‌ಗಳು ವಿಪರೀತ ಲಾಭ ಮಾಡತೊಡಗಿದವು. ಮಧ್ಯಮ ವರ್ಗದವರ ಆದಾಯದಲ್ಲಿ ಅಂತಹ ಏರಿಕೆ ಇಲ್ಲದಿದ್ದರೂ ಹಣಕಾಸು ಸಂಸ್ಥೆಗಳು ಸಾವಿರ ಸಾವಿರ ಪಟ್ಟು ಲಾಭ ಮಾಡಿಕೊಂಡವು. ಅಮೇರಿಕಾದಲ್ಲಿ 2001ರಲ್ಲಿ ಹಣಕಾಸು ವ್ಯವಸ್ಥೆಯ ತುತ್ತತುದಿಯಲ್ಲಿದ್ದ ಶೇಕಡಾ 1ರಷ್ಟು ಹಣಕಾಸು ಬಂಡವಾಳವು ಅಲ್ಲಿನ ಕೆಳಹಂತದ ಶೇಕಡಾ 80ರಷ್ಟು ಜನರ ಒಟ್ಟು ಆದಾಯದ ನಾಲ್ಕು ಪಟ್ಟು ಇತ್ತು. 2006ರಲ್ಲಿ ಅಮೆರಿಕಾದ ಕೇವಲ 60 ಅತಿದೊಡ್ಡ ಶ್ರೀಮಂತರ ಬಳಿ ಶೇಖರಣೆಗೊಂಡಿದ್ದ ಸಂಪತ್ತು 630 ಶತಕೋಟಿ ಡಾಲರುಗಳಷ್ಟು ಎಂದರೆ ಯೋಚಿಸಿ!. ಆರ್ಥಿಕತೆ ಎಂದರೇ ಹಣಕಾಸು ಆರ್ಥಿಕತೆ ಎಂದು ಆದ ಪರಿಣಾಮವಾಗಿ ಇಡೀ ವ್ಯವಸ್ಥೆಯನ್ನು ನಿಯಂತ್ರಿಸುವವರೇ ಕಾರ್ಪೊರೇಟರ್‌ಗಳಾದರು. ಹೀಗೆ ಪ್ರಜಾಪ್ರಭುತ್ವ ವ್ಯವಸ್ಥೆಗಳು ಕಾರ್ಪೊರೇಟ್ ಪ್ರಭುತ್ವಗಳಾಗಿ ಪರಿವರ್ತನೆಯಗಿದ್ದವು.
ಆದರೆ ಒಳಗೆ ಯಾವ ಹೂರಣವೂ ಇಲ್ಲದೇ ಹೀಗೆ ಬಲೂನಿನಂತೆ ಊದಿಕೊಳ್ಳುತ್ತಲೇ ಹೋದ ಆರ್ಥಿಕತೆ ಭಾರೀ ಸದ್ದಿನೊಂದಿಗೆ ಒಡೆದು ಜಗತ್ತಿನ ಆರ್ಥಿಕ ವ್ಯವಸ್ಥೆಯನ್ನು ಅಲ್ಲೋಲ ಕಲ್ಲೋಲ ಮಾಡುವ ಸೂಚನೆ 2008ರಲ್ಲಿ ಸಿಕ್ಕಿತ್ತು. ಆದರೆ ತಾವು ಆರ್ಥಿಕತೆಯಲ್ಲಿ ಸೃಷ್ಟಿಸಿದ್ದ ನಿಜವಾದ ಸಮಸ್ಯೆಯನ್ನು ಸರಿಪಡಿಸಲು ಬಂಡವಾಳದ ನೇತಾರರು ತಯಾರಿಲ್ಲ.

ಹೀಗೆ ಆರ್ಥಿಕತೆಯನ್ನು ಹಣಕಾಸಿನ ನೀರುಗುಳ್ಳೆಯ ಮಟ್ಟಕ್ಕೆ ಸೀಮಿತಗೊಳಿಸುವುದರ ಅಪಾಯವನ್ನು 1930ರ ದಶಕದಲ್ಲೇ ಪ್ರಸಿದ್ಧ ಆರ್ಥಸಾಸ್ತ್ರಜ್ಞ ಕೀನ್ಸ್ ವಿವರಿಸಿದ್ದರು. ಕೀನ್ಸ್ ಒಬ್ಬ ಬಂಡವಾಳವಾದಿ ವ್ಯವಸ್ಥೆಯ ಪರವಾದ ಅರ್ಥಜ್ಞನೇ ಆಗಿದ್ದರೂ ಅವರು ಪ್ರತಿಪಾದಿಸಿದ್ದು ವಿವೇಚನಾಶೀಲ ಬಂಡವಾಳವಾದವನ್ನು. ಬದಲಾಗಿ ಇಂದು ಬೆಳೆದಿರುವ ದುರಾಸೆಯ ವಿಕೃತ ಬಂಡವಾಳವಾದವನ್ನು ಖಂಡಿತಾ ಆಗಿರಲಿಲ್ಲ. 1930ರ ದಶಕದಲ್ಲಿ ಅಮೆರಿಕ ಕೇಂದ್ರಿತ ಜಾಗತಿಕ ಹಣಕಾಸು ವ್ಯವಸ್ಥೆಯ ಜಾಡು ಹಿಡಿದ ಪೌಲ್ ಸ್ವೀಜಿಯಂತಹ ಎಡಪಂಥೀಯ ಅರ್ಥಶಾಸ್ತ್ರಜ್ಞರೂ ಸಹ ಸನಿಹದಲ್ಲೇ ಬಂದೆರಗಲಿರುವ ಭಾರೀ ಅಪಾಯವನ್ನು ತಿಳಿಸಿದ್ದರು. ಇದು ಇಡೀ ಜಗತ್ತನ್ನು ಮತ್ತೊಂದು ಮಹಾನ್ ಆರ್ಥಿಕ ಕುಸಿತಕ್ಕೆ ಕೊಂಡೊಯ್ಯಲಿದೆ ಎಂದೂ ಅಂಕಿ ಅಂಶಗಳ ಸಮೇತ ತಿಳಿಸಿದ್ದರು. ಅವರು ಹೇಳಿದ್ದೆಲ್ಲಾ ಈಗ ಸಾಕ್ಷಾತ್ಕಾರವಾಗಿತ್ತಿದೆ
ಇಂತಹ ಒಂದು ಸಂದರ್ಭದಲ್ಲಿ ಹುಟ್ಟಿಕೊಂಡಿರುವ ಅಮೆರಿಕದ ಚಳವಳಿವಾಲ್‌ಸ್ಟ್ರೀಟ್ ವಶಪಡಿಸಿ’ಕೊಳ್ಳುವ ಕರೆನೀಡಿ ಹೊರಟಿರುವುದು ಅರ್ಥಪೂರ್ಣವಾಗಿದೆ. ಪ್ರಪಂಚದ  ಪ್ರಜಾಪ್ರಭುತ್ವವಾದಿಗಳೆಲ್ಲರೂ ಸ್ವಾಗತಿಸಬೇಕಾದ ಬೆಳವಣಿಗೆ ಇದು. ಜಗತ್ತಿನ ಜನಸಾಮಾನ್ಯರ ಸಾಕ್ಷಿಪ್ರಜ್ಞೆ ಎಂದೇ ಕರೆಯಬಹುದಾದ ನೋಮ್ ಚಾಮ್‌ಸ್ಕಿ ಕೂಡಾ ಚಳವಳಿಯ ಕುರಿತು ಪ್ರತಿಕ್ರಿಯಿಸಿ ಆಶಾಭಾವನೆ ವ್ಯಕ್ತಪಡಿಸಿದ್ದಾರೆ.
ಚಳವಳಿ ತನ್ನನ್ನು ತಾನುನಾಯಕರಹಿತಎಂದು ಘೋಷಿಸಿಕೊಂಡಿದೆ. ಆದರೆ ಇದರಲ್ಲಿ ಒಳಿತೂ ಉಂಟು, ಕೆಡುಕೂ ಉಂಟು. ಒಬ್ಬ ನಾಯಕ ಅಥವಾ ಇಲ್ಲದೇ ಪ್ರತಿಯೊಂದು ನಿರ್ಧಾರವನ್ನೂ ಸಾಮೂಹಿಕವಾಗಿ ತೆಗೆದುಕೊಳ್ಳುತ್ತಿರುವ ಕಾರಣ ಸರ್ಕಾರಕ್ಕೆ ಚಳವಳಿಯನ್ನು ಹತ್ತಿಕ್ಕಲು ಸುಲಭ ಸಾಧ್ಯವಾಗಲಾರದು. ಮತ್ತು ಒಬ್ಬನ ಅಭಿಪ್ರಾಯವನ್ನು ಇಡೀ ಚಳವಳಿಯ ಮೇಲೆ ಹೇರಲು ಸಾಧ್ಯವಾಗಲಾರದು. ಆದರೆ ಇಡೀ ಜಗತ್ತಿನ ಚಳವಳಿಗಳನ್ನು ನೋಡಿದರೆ ಅಲ್ಲಿ ಒಬ್ಬ ನಾಯಕನಿರುತ್ತಾನೆ ಎಂದರೆ ಆತನ ಬೆನ್ನಿಗೆ ಒಂದು ಸಿದ್ದಾಂತವೂ ಇರುತ್ತದೆ. ಸಿದ್ಧಾಂತ ಎಷ್ಟು ಮಾನವೀಯವಾಗಿರುತ್ತದೆಯೋ ಅಷ್ಟು ಗಟ್ಟಿತನ ಚಳವಳಿಗಿರುತ್ತದೆ. ಒಂದೊಮ್ಮೆ ನಾಯಕಸಾಮೂಹಿಕ ಪ್ರಜ್ಞೆ’ಯನ್ನು ಸಮರ್ಥವಾಗಿ ಪ್ರತಿಬಿಂಬಿಸುವಂತಾದಾಗ ಚಳುವಳಿ ಇನ್ನಷ್ಟು ಬಲಗೊಳ್ಳುವ ಸಾಧಱಯತೆಯಿರುತ್ತದೆ. ಅಮೆರಿಕದಲ್ಲೇ ನೋಡುವುದಾದರೆ ಹಿಂದೆ ಸಮಾನತೆಗಾಗಿ ಚಳವಳಿ ನಡೆಸಿದ ಮಾರ್ಟಿನ್ ಲೂಥರ್ ಕಿಂಗ್ ಜ್ಯೂನಿಯರ್ ಹಾಗೂ ರೋಸಾ ಪಾರ್ಕ್‌ರಂತದ ಉದಾತ್ತ ವ್ಯಕ್ತಿಗಳ ಉದಾಹರಣೆಗಳಿವೆ. ಈಗಿನ ಚಳವಳಿ ಪ್ರಮುಖವಾಗಿ ಅಲ್ಲಿನ ಮಧ್ಯಮ ವರ್ಗದ ಕೈಯಲ್ಲಿರುವುದರಿಂದ ಅದು ಎಷ್ಟರ ಮಟ್ಟಿಗೆ ಯಶಸ್ಸು ಸಾಧಿಸುತ್ತದೆ ಎನ್ನುವುದೂ ಸಂಶಯಕ್ಕೆಡೆ ಮಾಡಿದೆ. ಸಧ್ಯಕ್ಕೆ ಈ ಚಳವಳಿ  ಹಲವಾರು ವಿಚಾರಧಾರೆಗಳ ಕಾಕ್‌ಟೇಲ್ ಆಗಿದೆ. ಇಲ್ಲಿ ಎನ್ ಜಿ ಒಗಳು ಟ್ರೇಡ್ ಯೂನಿಯನ್ ಕಾರ್ಯಕರ್ತರು, ಪೈಲಟ್ ಗಳು, ಶಿಕ್ಷಕರ ಸಂಘಗಳು,  ಬಲಪಂಥೀಯರು, ಎಡಪಂಥೀಯರು, ಅನಾರ್ಕಿಸ್ಟರು, ಒಂದೆರಡು ಮಾವೋವಾದಿ ಗುಂಪುಗಳ ಕಾರ್ಯಕರ್ತರು ಹೀಗೆ ಎಲ್ಲಾ ಬಗೆಯವರೂ ಒಂದಲ್ಲಾ ಒಂದು ಮಟ್ಟದಲ್ಲಿ ಭಾಗವಹಿಸುತ್ತಿದ್ದಾರೆಇಲ್ಲಿ ಕೂಡಾ ಚಳವಳಿಯ ನೀತಿ ನಿರೂಪಣೆಗಳ ಮೇಲೆ, ಕಾರ್ಯಕರ್ತರ ಮೇಲೆ ತಂತಮ್ಮ ಸಿದ್ದಾಂತಗಳನ್ನು ಹೇರುವ ಪ್ರಯತ್ನಗಳು ನಡೆಯುತ್ತಿವೆ. ಇಂತಹ ಪರಿಸ್ಥಿತಿ ಗೊಂದಲ ಮೂಡಿಸುವುವ ಸಾಧ್ಯತೆಯೂ ಇರುತ್ತದೆ. ಚಳವಳಿಗೆ ಬೆಂಬಲಿಸುತ್ತಲೇ ಇದನ್ನು ಹಲವಾರು ಬಗೆಯಲ್ಲಿ ದಿಕ್ಕುತಪ್ಪಿಸುವ ಪ್ರಯತ್ನವನ್ನೂ ಡೆಮಾಕ್ರಾಟರು, ರಿಪಬ್ಲಿಕನ್ನರು ಮಾಡುತ್ತಿರುವುದೂ ಗೋಚರಿಸುತ್ತಿದೆ.
ಅಮೆರಿಕದ ಪ್ರಭುತ್ವಕ್ಕೆ ಚಳವಳಿಗಳನ್ನು ಎಲ್ಲಾ ರೀತಿಯಲ್ಲೂ ಬಗ್ಗು ಬಡಿಯುವ ವಿಧಾನಗಳೂ ಗೊತ್ತಿವೆ. ಸೈನಿಕವಾಗಿಯೂ, ರಾಜಕೀಯವಾಗಿಯೂ ನೂರಾರು ಚಳವಳಿಗಳನ್ನು ಹುಟ್ಟು ಹಾಕಿದ ಹಾಗೂ ಬಗ್ಗುಬಡಿದ ಚರಿತ್ರೆಯೇ ಅಮೆರಿಕದಪೆಂಟಗನ್ಗೆ ಇದೆ. ಈಗ ಭುಗಿಲೆದ್ದ ಚಳವಳಿಯನ್ನು ಅಗತ್ಯ ಬಂದರೆ ಅತ್ಯಂತ ತೀವ್ರವಾಗಿ ಸರ್ಕಾರ ಹತ್ತಿಕ್ಕಬಹುದು. ಈಗ ಅಮೆರಿಕದಲ್ಲಿ ಮತ್ತೊಂದುತಿಯನನ್‌ಮನ್ ಚೌಕ’ ಮರುಕಳಿಸಬಹುದು. ಆದರೆ ಇಂದಿನ ಅಮೆರಿಕದ ಟೆಕ್ ಸ್ಯಾವಿ ಪೀಳಿಗೆಯ ಮುಂದೆ ಅಂತದ್ದೊಂದನ್ನು ನಡೆಸುವುದೇನೂ ಸುಲಭಸಾಧ್ಯವಲ್ಲ. ಎಚ್ಚೆತ್ತ ಜನಶಕ್ತಿಯ ಮುಂದೆ ಎಲ್ಲಾ ಬಗೆಯ ಸರ್ವಾಧಿಕಾರಗಳೂ ಮಂಡಿಯೂರಿರುವುದೂ ಇತಿಹಾಸವೇ ಅಲ್ಲವೇ
ಇದೇ ಸಂದರ್ಭ ಅಮೆರಿಕನ್ನರಿಗೆ ಮತ್ತೊಂದು ಅವಕಾಶವನ್ನೂ ಸೃಷ್ಟಿಸಿದೆ. ಅದೇನೆಂದರೆ ಅವರು ನಿಜವಾದ ಅರ್ಥದಲ್ಲಿ ಮನುಷ್ಯರಾಗುವ ಅವಕಾಶ!. ವಾಸ್ತವದಲ್ಲಿ ಇಂದು ಅಮೆರಿಕದ ಶ್ರೀಮಂತಿಕೆ ನಿಂತಿರುವುದೇ ತೃತೀಯ ಜಗತ್ತಿನ ಸಂಪತ್ತಿನ ಲೂಟಿಯನ್ನಾಧರಿಸಿ ಹಾಗೂ ಬಡದೇಶಗಳ ಜನರ ಅಗ್ಗದ ಶ್ರಮವನ್ನು ದೋಚಿದ್ದರ ಪರಿಣಾಮವಾಗಿ. ಯಾವ ಸರ್ಕಾರಗಳು ಬಂಡವಾಳಿಗರ ಲಾಭಕ್ಕಾಗಿ ಸರಕು ಸಂಸ್ಕೃತಿಯನ್ನು, ಕೊಳ್ಳುಬಾಕ ಸಂಸ್ಕೃತಿಯನ್ನು ಪ್ರೇರೇಪಿಸಿ ತಾವು ಸಾಲದ ಬಲೆಯಲ್ಲಿ ಬೀಳುವ ಜೊತೆಗೆ ಜನರನ್ನೂ ಸಾಲದ ವ್ಯಸನಕ್ಕೆ ಗುರಿಮಾಡಿದ್ದರೋ ಎಲ್ಲಾ ಸರ್ಕಾರಗಳನ್ನೂ ಅಮೆರಿಕನ್ನರು ಚುನಾವಣೆಯಿಂದ ಚುನಾವಣೆಗೆ ಗೆಲ್ಲಿಸಿಕೊಂಡೇ ಬಂದಿದ್ದಾರೆ. ತಮ್ಮ ಸರ್ಕಾರಗಳ ಇಂತಹ ನೀತಿಗಳನ್ನು ಹಾಗೂ ತಮ್ಮ ಅನುಭೋಗೀ ಸಂಸ್ಕೃತಿಯ ಕುರಿತ ದೊಡ್ಡ ಮಟ್ಟದಲ್ಲಿ ಮರುಚಿಂತನೆ ನಡೆಸಿ ಇದುವರೆಗೆ ಕಾರ್ಪೊರೇಟ್ ಪ್ರಭುತ್ವಗಳು ಪ್ರೇರೇಪಿಸುತ್ತಾ ಬಂದಿರುವ ಲ್ಯಾವಿಶ್ ಬದುಕಿನ ರೀತಿ ರಿವಾಜುಗಳನ್ನು ಧಿಕ್ಕರಿಸಿ ಆದಷ್ಟು ಸರಳ ಹಾಗೂ ಪರಿಸರ ಸ್ನೇಹಿ ಜೀವನಶೈಲಿಯನ್ನು ಅಳವಡಿಸಿಕೊಳ್ಳುವ ನಿಟ್ಟಿನಲ್ಲಿ ಹೆಜ್ಜೆಯಿಡುವ ಅವಕಾಶವನ್ನಾದರೂ ಈಗಿನ ಚಳವಳಿ ಸೃಷ್ಟಿಸಿದರೆ ಅದೇ ಚಳವಳಿಯ ಅತಿದೊಡ್ಡ ಯಶಸ್ಸಾಗಲಿದೆ. ಜಗತ್ತನ್ನು ಎಲ್ಲಾ ಬಗೆಯ ಬಿಕ್ಕಟ್ಟುಗಳಿಂದಲೂ ರಕ್ಷಿಸಬಹುದಾದ ಏಕೈಕ ದಾರಿಯಿದು

ಹೊಸತು - ಹಳತು : ಬುದ್ದ ತತ್ವ

ಲೋಕದ ಪ್ರತಿಯೊಂದೂ ಎಡೆಬಿಡದ ಚಲನೆಯಲ್ಲಿದೆ. ಕೆಲವೊಮ್ಮೆ ಬರಿಗಣ್ಣಿಗೆ ಚಲಿಸದೇ ಜಡವಾಗಿವೆ ಎಂದು ತೋರುವ ಪ್ರತಿಯೊಂದೂ ಚಲನೆಯಲ್ಲಿದೆ. ಒಂದು ಮರದ ತುಂಡು, ಕಬ್ಬಿಣದ ಬಿಲ್ಲೆ,...

ಮರದೊಂದು ಎಲೆ ನಾನು..

ನನ್ನ ಫೋಟೋ
A Writer, Researcher, Journalist and Activist. Born and brought up from Kugwe a village near Sagara, Shimoga district of Karnataka state. Presently working as the Editor In Chief of PEEPAL MEDIA /PEEPAL TV.