ನಾವು ಇಪ್ಪಂತೊಂದನೇ ಶತಮಾನಕ್ಕೆ ಕಾಲಿಟ್ಟಾಗಿದೆ. ಮನುಷ್ಯ ಕುಲ ಹಿಂದೆಂದೂ ಕಂಡರಿಯದ ತಂತ್ರಜ್ಞಾನದ ಏಳಿಗೆಯನ್ನು ಈ ಪೀಳಿಗೆ ಕಾಣುತ್ತಿದೆ. ನಮ್ಮ ಪಿಎಸ್ಎಲ್ವಿ ಉಡಾವಣಾ ವಾಹನಗಳು ಒಂದರ ಮೇಲೆ ಮತ್ತೊಂದರಂತೆ ಜಿಸ್ಯಾಟ್ ಕೃತಕ ಉಪಗ್ರಹಗಳನ್ನು ನಭೋಮಂಡಲಕ್ಕೆ ಚಿಮ್ಮಿಸಿ ಬರುತ್ತಿವೆ. ಮಾತ್ರವಲ್ಲ, ಇಸ್ರೋದ ಉಪಗ್ರಹಗಳು ಚಂದ್ರಯಾನ ಕೈಗೊಂಡು ಚಂದ್ರನಲ್ಲಿ ನೀರಿದೆಯೇ ಎಂಬುದನ್ನು ಹುಡುಕಾಡುತ್ತಿವೆ. ನಾವು ಅಂಗೈಯಗಲದ ಬ್ಲಾಕ್ಬೆರಿ ಉಪಯೋಗಿಸುತ್ತಾ ಜಗತ್ತನ್ನೇ ಬೆರಳ ತುದಿಯಲ್ಲಿಟ್ಟುಕೊಂಡಿದ್ದೇವೆ. ಇಡೀ ದೇಶ ಸೂಪರ್ ಪವರ್ ಆಗುವ ನಿಟ್ಟಿನಲ್ಲಿ ದಾಪುಗಾಲಿಡುತ್ತಿದೆ. ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಖಾಯಂ ಸದಸ್ಯನಾಗುವುದಕ್ಕೆ ಪೈಪೋಟಿ ನಡೆಸುವಷ್ಟು ಪ್ರಭಲ ಆರ್ಥಿಕತೆಯಾಗಿ ಹೊರಹೊಮ್ಮುತ್ತಿದೆ. ಮಾಹಿತಿ ತಂತ್ರಜ್ಞಾನ ಮತ್ತು ಜೈವಿಕ ತಂತ್ರಜ್ಞಾನಗಳ ವಿಶ್ವದ ರಾಜಧಾನಿಯಾಗಿ ಹೊರಹೊಮ್ಮುತ್ತಿದೆ. ಅಬ್ದುಲ್ ಕಲಾಮ್ರ ’ಕನಸಿನ ೨೦೨೦’ಕ್ಕೆ ಈಗ ಉಳಿದಿರುವುದು ಕೇವಲ ಎಂಟೇ ವರ್ಷಗಳು! ಹೀಗೆ ನಮ್ಮನ್ನು ನಾವು ಬೆನ್ನುತಟ್ಟಿಕೊಳ್ಳಲು ಈ ದೇಶದಲ್ಲಿ ಬಹಳಷ್ಟು ವಿಚಾರಗಳು ಸಿಗುತ್ತವೆ. ಆದರೆ ಇವೆಲ್ಲಾ ಸಾಧನೆಗಳ ಹಿರಿಮೆಯನ್ನೂ ಕ್ಷಣಾರ್ಧದಲ್ಲಿ ಮರೆಮಾಡಿಬಿಡುವ ಅತ್ಯಂತ ಅಮಾನವೀಯ ಪದ್ಧತಿಯೊಂದು ನಮ್ಮ ದೇಶದಲ್ಲಿ ಎಲ್ಲೆಡೆ ಅಸ್ತಿತ್ವದಲ್ಲಿದೆ. ಅದೇ ಮನುಷ್ಯರ ಮಲವನ್ನು ಮನುಷ್ಯರೇ ಹೊರುವ ಪದ್ಧತಿ!
ದುರಾದೃಷ್ವಶಾತ್ ನಾವು ವಿಸರ್ಜಿಸುವ ಅಮೇಧ್ಯವನ್ನು ತಮ್ಮ ಕೈಯಿಂದ ತೆಗೆದು ಹಾಕುವಂತಹ ಲಕ್ಷಾಂತರ ಜನರನ್ನು ಕಂಡೂ ಕಾಣದಂತೆ ಕಣ್ಣು, ಕಿವಿ, ಮೂಗು, ಬಾಯಿ ಮುಚ್ಚಿಕೊಂಡಿದ್ದೇವೆ ಎಂದರೆ ನಮ್ಮನ್ನು ನಾವು ನಾಗರೀಕರೆಂದು ಕರೆದುಕೊಳ್ಳಲು ಸಾಧ್ಯವೇ? ನಮ್ಮ ರಾಜ್ಯದಲ್ಲಿ ಕಕ್ಕಸು ಗುಂಡಿಗಳಿಗಿಳಿದು ಮೂಗಿಗೆ ವಿಷ ಬಡಿದು ಉಸಿರುಗಟ್ಟಿ ಜನರು ಸದ್ದಿಲ್ಲದೇ ಸಾಯತೊಡಗಿದ್ದರೂ ನಮ್ಮ ನಮ್ಮ ಮನಸ್ಸು ಅಂತಹ ಸುದ್ದಿಯನ್ನು ಜಾಹೀರಾತಿನಂತೆ ನೋಡಿ ಮರೆತುಬಿಡುತ್ತ್ತಿದೆ. ಆದರೂ ನಾವು ಹೇಳಿಕೊಳ್ಳುವುದು ಮಾತ್ರ ನಾವು ಆಧುನಿಕ ಸಮಾಜವೊಂದರ ನಾಗರಿಕ ಪ್ರಜೆಗಳು ಎಂದು! ಎಲ್ಲದಕ್ಕಿಂತ ನಾಚಿಗೆಗೇಡಿನ ವಿಷಯವೆಂದರೆ ಇಂತಹ ನಾಗರಿಕ ಸಮಾಜದ ಸರ್ಕಾರವೊಂದು ರಾಜ್ಯದ ಪ್ರತಿ ಜಿಲ್ಲೆಯಲ್ಲೂ ವ್ಯಾಪಕವಾಗಿ ಅಸ್ತಿತ್ವದಲ್ಲಿರುವ ಈ ಅನಿಷ್ಟ ಮಲ ಹೊರುವ ಪದ್ಧತಿಯನ್ನು ಹೊರಜಗತ್ತಿಗೆ ಮರೆಮಾಚಲು ಮಾಡುತ್ತಿರುವ ಯತ್ನ. ರಾಜ್ಯದ ಪ್ರತಿಯೊಂದು ಜಿಲ್ಲೆಯಲ್ಲೂ ಈ ಪದ್ಧತಿ ಇರುವುದನ್ನು ಒಪ್ಪಿಕೊಳ್ಳಲು ನಿರಾಕರಿಸಿ ’ಎಲ್ಲಾ ಸಫಾಯಿ ಕರ್ಮಚಾರಿಗಳಿಗೆ ಪುನರ್ವಸತಿ ನೀಡಿ ರಾಜ್ಯವನ್ನು ಮಲ ಹೊರುವ ಕೆಲಸದಿಂದ ಮುಕ್ತಗೊಳಿಸಿದೆ’ ಎಂದು ಹಸಿಹಸಿ ಸುಳ್ಳುಗಳನ್ನು ಪೋಣಿಸಿ ಘನತೆವೆತ್ತ ನ್ಯಾಯಾಲಯಗಳನ್ನೂ ಯಾಮಾರಿಸಲು ಯತ್ನಿಸುತ್ತ್ತಿದೆ! ಆದರೆ ಸತ್ಯವನ್ನು ಬಚ್ಚಿಡಬಹುದೇ ವಿನಃ ಮುಚ್ಚಿಡಲಾದೀತೆ? ಸರ್ಕಾರದ ಈ ಸುಳ್ಳನ್ನು ಪ್ರಶ್ನಿಸಿ ಮಾಜಿ ಅಡ್ವೊಕೇಟ್ ಜನರಲ್, ಹಿರಿಯ ವಕೀಲ ಆರ್.ಎನ್.ನರಸಿಂಹಮೂರ್ತಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು. ಇದರ ವಿಚಾರಣೆ ನಡೆಸಿದ ಉಚ್ಛ ನ್ಯಾಯಾಲಯದ ವಿಭಾಗೀಯ ಪೀಠದಲ್ಲಿ ನ್ಯಾಯಮೂರ್ತಿ ಜೆ.ಎಸ್. ಕೇಹೆರ್ ಅವರು ಸರ್ಕಾರವನ್ನು ತರಾಟೆಗೆ ತೆಗೆದುಕೊಂಡು ಈ ಸುಳ್ಳಿನ ಕುರಿತು ಈಗ ನಮಗೆ ಮನವರಿಕೆ ಆಗುತ್ತಿದೆ. ಸರ್ಕಾರ ಈ ಹಿಂದೆ ಸಲ್ಲಿಸಿದ್ದ ಪ್ರಮಾಣಪತ್ರಗಳನ್ನು ಆಧರಿಸಿ ಅದೆಷ್ಟು ತಪ್ಪು ತೀರ್ಮಾನಗಳನ್ನು ಕೊಟ್ಟಿದ್ದೇವೆಯೋ ಆ ದೇವರಿಗೇ ಗೊತ್ತು. ಅದೆಷ್ಟು ಅಮಾಯಕರು ಇದರಿಂದ ಪರದಾಡಿದ್ದಾರೋ ಗೊತ್ತಿಲ್ಲ. ನ್ಯಾಯಾಲಯಕ್ಕೇ ಸುಳ್ಳು ಪ್ರಮಾಣ ಪತ್ರ ಸಲ್ಲಿಸುವ ಸರ್ಕಾರವನ್ನು ಪ್ರಪಂಚದ ಎಲ್ಲಿಯೂ ನಾನು ನೋಡಿಯೇ ಇಲ್ಲ. ಎಲ್ಲವೂ ಮೋಸ. ಇಲ್ಲಿ ಏನು ನಡೆಯುತ್ತಿದೆ ಎಂಬುದೇ ತಿಳಿಯುತ್ತಿಲ್ಲ ಎಂದು ಕಿಡಿ ಕಾರಿದ್ದಾರೆ. ಮೂವರು ಉನ್ನತ ಅಧಿಕಾರಿಗಳ ಮೇಲೆ ನೋಟೀಸನ್ನೂ ಜಾರಿ ಮಾಡಿದ್ದಾರೆ.
ಕಳೆದ ವರ್ಷ ಜುಲೈ ೨೦ರಂದು ಹಾವೇರಿ ಜಿಲ್ಲೆಯ ಸವಣೂರಿನ ಭಂಗಿ ಸಮುದಾಯದ ಜನರು ಮಲಸ್ನಾನ ಮಾಡಿದಾಗ ನಾಗರಿಕ ಸಮಾಜ ಬೆಸ್ತು ಬಿದ್ದಿತ್ತು. ಇದರಿಂದ ಸರ್ಕಾರಕ್ಕೆ ಇರಿಸು ಮುರಿಸಾಗಿತ್ತು. ಪಿಯುಸಿಎಲ್ನ ವೈ.ಜೆ. ರಾಜೇಂದ್ರ, ಚಂದ್ರಶೇಖರ್ ಅತ್ತಿಬೆಲೆ ಹಾಗೂ ಪತ್ರಕರ್ತ ದಯಾನಂದ್ ಪ್ರತಿ ಜಿಲ್ಲೆಯಲ್ಲೂ ಮಲಹೊರುವ ಪದ್ಧತಿ ಇರುವದನ್ನು ವಿಡಿಯೋ ಚಿತ್ರೀಕರಣ ಮಾಡಿಕೊಂಡು ಬಂದು ನಾಡಿನ ಜನರೆದು ಇಡತೊಡಗಿದಂತೆ ಸರ್ಕಾರ ಮೈಪರಚಿಕೊಳ್ಳತೊಡಗಿದೆ. ರಾಜ್ಯದ ಮಾನವ ಹಕ್ಕುಗಳ ಆಯೋಗವೂ ಸಹ ಈಗ ಸರ್ಕಾರಕ್ಕೆ ಚಾಟಿ ಬೀಸತೊಡಗಿದೆ. ಈ ವಿಷಯದ ಕುರಿತು ಸರ್ಕಾರದ ಬಳಿ ಇರುವ ಮಾಹಿತಿ ಏನೆಂದು ತಿಳಿಯಲು ನಗರಾಭಿವೃದ್ಧಿ ಇಲಾಖೆಯನ್ನು ಟಿಎಸ್ಐ ಸಂಪರ್ಕಿಸಿದಾಗ ಇನ್ನೂ ಒಂದು ಆಶ್ಚರ್ಯ ಕಾದಿತ್ತು. ಯಾವ್ಯಾವ ಜಿಲ್ಲೆಯಲ್ಲಿ ಎಷ್ಟು ಕಾರ್ಮಿಕರು ಈ ನಿಕೃಷ್ಟ ಕೆಲಸದಲ್ಲಿ ತೊಡಗಿಕೊಂಡಿದ್ದಾರೆಂಬ ಮಾಹಿತಿಯೇ ಸರ್ಕಾರದ ಬಳಿಯಿಲ್ಲ. ಎಲ್ಲಾ ಜಿಲ್ಲಾ ಆಡಳಿತಗಳಿಗೂ ಈ ಕುರಿತು ಮಾಹಿತಿ ನೀಡಲು ಕೇಳಿದ್ದೇವೆ. ಇನ್ನೂ ಯಾವುದೇ ಮಾಹಿತಿ ಸಿಕ್ಕಿಲ್ಲ ಎಂಬ ಸಬೂಬು ಅಧಿಕಾರಿಗಳದ್ದು. ಸಫಾಯಿ ಕರ್ಮಾಚಾರಿಗಳ ಪರಿಹಾರದ ಹೊಣೆ ಹೊತ್ತಿರುವ ಡಾ. ಅಂಬೇಡ್ಕರ್ ಅಭಿವೃದ್ಧಿ ನಿಗಮದ ಶಶಿಕುಮಾರ್ ಹಾಗೂ ಗೋಪಾಲಾಚಾರಿ ಎಂಬ ಅಧಿಕಾರಿಗಳಿಗೆ ಕೇಳಿದರೆ ಇದರ ಬಗ್ಗೆ ನಮಗೆ ಏನೂ ಮಾಹಿತಿ ಇಲ್ಲ. ಸರ್ವೆ ನಡೆಸಿದ್ದೇವೆ. ೨೩೨ ಜನರಿಗೆ ಪರಿಹಾರ ನೀಡಿದ್ದೇವೆ ಎಂಬ ಬೇಜವಾಬ್ದಾರಿ ಉತ್ತರ ಬರುತ್ತದೆ. ರಾಜ್ಯ ಸರ್ಕಾರವು ’ನಮ್ಮದು ಮಲಹೊರುವ ಪದ್ಧತಿಯಿಂದ ಮುಕ್ತವಾದ ರಾಜ್ಯ’ ಎಂದು ಘೋಷಿಸಿಕೊಂಡು ಕೇವಲ ಪ್ರಮಾಣಪತ್ರಗಳಲ್ಲಿ ಹಾಗೂ ಸರ್ಕಾರಿ ದಾಖಲೆಗಳಲ್ಲಿ ಈ ಪದ್ಧತಿಯನ್ನು ನಿರ್ಮೂಲಿಸಲು ಯತ್ನಿಸುತ್ತಿದೆಯೇ ವಿನಃ ವಾಸ್ತವದಲ್ಲಿ ಈ ಹೀನ ಕೆಲಸದಲ್ಲಿ ತೊಡಗಿದವರನ್ನು ಅದರಿಂದ ಹೊರತರುವುದಕ್ಕೆ ಯಾವೊಂದು ಪ್ರಯತ್ನವನ್ನೂ ಮಾಡದಿರುವುದು ಇದರಿಂದ ತಿಳಿಯುತ್ತದೆ. ಮಾತ್ರವಲ್ಲ ಹೀಗೆ ಹೇಳಿಕೊಂಡು ಸರ್ಕಾರವು ಕೇಂದ್ರ ಸರ್ಕಾರದಿಂದ ಬರುವ ನೂರಾರು ಕೋಟಿ ರೂಪಾಯಿಗಳ ಸಹಾಯವು ಈ ನತದೃಷ್ಟ ದಲಿತರಿಗೆ ತಲುಪುವುದಕ್ಕೆ ಅಡ್ಡಗಾಲಾಗಿದೆ.
ನಮ್ಮನ್ನು ಆಳಿಕೊಂಡು ಬಂದ ಸರ್ಕಾರಗಳು ಸಮಾಜದಲ್ಲಿ ಪ್ರಾಣಿಗಳಿಗಿಂತಲೂ ಕಡೆಯಾಗಿ ಬದುಕು ಸಾಗಿಸುತ್ತಿರುವ ದಲಿತರ ಬದುಕನ್ನು ಎಷ್ಟು ಹಗುರವಾಗಿ ನೋಡುತ್ತಿದ್ದಾರೆ ಎಂಬುದಕ್ಕೆ ಇದಕ್ಕಿಂತ ಒಳ್ಳೆಯ ಉದಾಹರಣೆ ಸಿಗುವುದಿಲ್ಲ. ಹೌದು. ಇಂದು ಈ ಕೆಲಸದಲ್ಲಿ ತೊಡಗಿರುವವರು ಯಾವುದೇ ಪ್ರಬಲ ಜಾತಿಗಳ ’ಓಟ್ ಬ್ಯಾಂಕ್’ ಜನರಲ್ಲ. ಅವರು ದಲಿತರಲ್ಲಿ ದಲಿತರು, ಹಿಂದುಳಿದವರಲ್ಲಿ ಹಿಂದುಳಿದವರು. ಕೋಲಾರದಲ್ಲಿ ತೋಟಗರು, ಮೈಸೂರು, ಬೆಂಗಳೂರು, ಹಾಸನ ಮಂಡ್ಯಗಳಂತ ಕಡೆ ಮಾದಿಗರು, ಜಲಗಾರರು, ಜಾಡಮಾಲಿಗಳು, ಹುಬ್ಬಳ್ಳಿ ಧಾರವಾಡಗಳಲ್ಲಿ ಸಿಕ್ಕಲಿಗರು, ಹಾವೇರಿ ಗುಲ್ಬರ್ಗಗಳಲ್ಲಿ ಭಂಗಿಗಳು. ಹಾಗಂತ ಇವರೆಲ್ಲ ಬಹಳ ಇಷ್ಟಪಟ್ಟು ಈ ಕೆಲಸ ಹುಡುಕಿಕೊಂಡಿದ್ದಾರೆಂದೇನಲ್ಲ. "ನಾವು ನೂರಾರು ಸಲ ಅಧಿಕಾರಿಗಳಿಗೆ ಅಲವತ್ತುಕೊಂಡಿದ್ದೇವೆ ಸಾರ್. ನಮ್ಮಿಂದ ಅರ್ಜಿಗಳನ್ನೂ ಹಾಕಿಸಿಕೊಂಡಿದ್ದಾರೆ. ಆದರೆ ಇಲ್ಲಿಯವರೆಗೆ ಯಾವುದೇ ಸಹಾಯ ಮಾಡಿಲ್ಲ. ಇಲ್ಲಿ ನಮಗೆ ಈ ಕೆಲಸ ಬಿಟ್ಟರೆ ಬೇರೆ ಗತಿ ಇಲ್ಲ. ಸರ್ಕಾರ ಅಲ್ಲದೆ ನಮಗೆ ಯಾರು ಸಹಾಯ ಮಾಡಬೇಕು ಸಾರ್. ಇಂತಹ ಹೊಲಸ ಕೆಲಸ ಮಾಡುವುದು ನಮಗಾದರೂ ಯಾಕೆ ಬೇಕು ಹೇಳಿ" ಎನ್ನುತ್ತಾರೆ ಗುಲ್ಬರ್ಗದ ರಾಜೇಶ್ ಭಂಗಿ.
ಕಳೆದ ಜೂನ್ ತಿಂಗಳಲ್ಲಿ ಕೆಜಿಎಫ್ನ ಕೆನಡೀಸ್ ಆಂಧ್ರ ಲೈನ್ನಲ್ಲಿ ದಲಿತರು ಅನಿವಾರ್ಯವಾಗಿ ಮಲಹೊತ್ತೇ ಬದುಕು ನಡೆಸಬೇಕಾಗಿರುವ ಅನಿವಾರ್ಯತೆಗೊಳಗಾಗಿರುವುದು ಮಾಧ್ಯಮದಲ್ಲಿ ಬಯಲಾಗಿದ್ದೇ ನಗರಾಭಿವೃದ್ಧಿ ಸಚಿವ ಸುರೇಶ್ ಕುಮಾರ್ ಕೆಜಿಎಫ್ಗೆ ದೌಡಾಯಿಸಿ ಅಧಿಕಾರಿಗಳಿಗೆ ಜೋರು ಮಾಡಿ ಬಂದರು. ಇದಾದ ಕೆಲವೇ ದಿನಗಳಲ್ಲಿ ಹಾಸನದ ಆಲೂರಿನಲ್ಲಿ ಮಲಹೊರುವ ಕೆಲಸಕ್ಕೆ ತೆರಳಿದ್ದಾಗ ಇಬ್ಬರು ಯುವಕರು ವಿಷಾನಿಲ ಸೇವಿಸಿ ಮೃತಪಟ್ಟರು. ಈ ಕುರಿತು ಪಿಯುಸಿಎಲ್ ಒಂದು ಸತ್ಯಶೋಧನಾ ವರದಿಯನ್ನು ನೀಡಿದೆ. ಆದರೆ ಜಿಲ್ಲೆಯ ಅಧಿಕಾರಿಗಳು ಇನ್ನೂ ಈ ಘಟನೆಗೆ ಸಂಬಂಧಿಸಿದಂತೆ ಯಾವ ಕ್ರಮವನ್ನೂ ಕೈಗೊಂಡಿಲ್ಲ.
ಇದೆಲ್ಲಾ ಸ್ಪಷ್ಟ ಪಡಿಸುವುದೇನೆಂದರೆ ಮಲಹೊರುವ ನಿಕೃಷ್ಟ ಪದ್ಧತಿಯ ಕುರಿತಂತೆ ವಾಸ್ತವ ಸತ್ಯಗಳು ಹೊರ ಜಗತ್ತಿಗೆ ತಿಳಿಯುವುದೇ ಸರ್ಕಾರಕ್ಕೆ ಬೇಡವಾಗಿದೆ. ೧೯೯೩ರಲ್ಲೇ ಜಾರಿಗೆ ಬಂದ ಕಾನೂನು ಈ ಪದ್ಧತಿಯನ್ನು ಕಾನೂನು ಬಾಹಿರಗೊಳಿಸಿದ್ದರೂ ನಂತರದ ಈ ೧೮ ವರ್ಷಗಳಲ್ಲಿ ಇದುವರೆಗೆ ಒಬ್ಬನೇ ಒಬ್ಬ ವ್ಯಕ್ತಿಯ ಈ ಕಾನೂನಿನಡಿಯಲ್ಲಿ ಶಿಕ್ಷೆಗೊಳಗಾಗಿಲ್ಲ ಎನ್ನುವುದೇ ಈ ವಿಷಯದ ಕುರಿತ ಸರ್ಕಾರಗಳ ಗಂಭೀರತೆಯನ್ನು ತೋರಿಸುತ್ತದೆ. ಈ ಕುರಿತು ಕೆಲವಾರು ತಿಂಗಳಿಂದ ಪ್ರತಿ ಜಿಲ್ಲೆಗೂ ಭೇಟಿ ನೀಡಿ ಮಲಹೊರುವ ವೃತ್ತಿಯಲ್ಲಿರುವ ಕುಟುಂಬಗಳನ್ನು ಖುದ್ದಾಗಿ ಸಂದರ್ಶನ ನಡೆಸಿರುವ ತಂಡದ ಸದಸ್ಯ ದಯಾನಂದ್ ಟಿ.ಕೆ. ಅವರು "ನಾವು ರಾಜ್ಯದ ಪ್ರತಿ ಜಿಲ್ಲೆಗೂ ಹೋಗಿ ಬಂದಿದ್ದೇವೆ. ಪ್ರತಿ ಜಿಲ್ಲೆಯನ್ನೂ ಮಲವನ್ನು ಕೈಯಿಂದ ತೆಗೆಯುವ ಪದ್ಧತಿ ಜಾರಿಯಲ್ಲಿದೆ. ಜಿಲ್ಲಾ ಕೇಂದ್ರ ಹಾಗೂ ತಾಲ್ಲೂಕು ಕೇಂದ್ರಗಳಲ್ಲೇ ಈ ಕೆಲಸ ಜಾರಿಯಲ್ಲಿರುವಾಗ ಹೋಬಳಿ ಕೇಂದ್ರಗಳಲ್ಲಿ ಇಲ್ಲದಿರುತ್ತದೆಯೇ?” ಎನ್ನುತ್ತಾರೆ.
ಈ ಮಲಹೊರುವ ಪದ್ಧತಿ ಯಾಕಿಷ್ಟು ವ್ಯಾಪಕವಾಗಿದೆ ಎನ್ನುವ ಕಾರಣಕ್ಕೆ ನಾವು ಮತ್ತೆ ದೂರಬೇಕಾಗುವುದು ಸರ್ಕಾರಗಳನ್ನೇ. ಕೈಯಿಂದಲೇ ಮಲ ಬಾಚುವ ಪದ್ಧತಿ ಇರುವ ಒಣಪಾಯಖಾನೆಗಳನ್ನು ನಡೆಸುವುದು ಕಾನೂನಿನ ಪ್ರಕಾರ ನಿಷಿದ್ಧ ಹಾಗೂ ಶಿಕ್ಷಾರ್ಹ ಅಪರಾಧ ಕೂಡ. ಆದರೆ ವಿಶೇಷ ಎಂದರೆ, ಅನೇಕ ಪುರಸಭೆ, ನಗರಸಭೆಗಳೇ ಒಣಪಾಯಿಖಾನೆಗಳನ್ನು ನಿರ್ಮಿಸಿವೆ! ಬೇಕಾದರೆ ತುಮಕೂರಿಗೆ ಹೋಗಿ ನೋಡಿ. ಒಣ ಪಾಯಿಖಾನೆಗಳನ್ನು ಅಲ್ಲಿನ ನಗರಸಭೆಯೇ ಖುದ್ದಾಗಿ ನಿರ್ಮಿಸಿ ನಿರ್ವಹಿಸುತ್ತಿದೆ ಎಂಬುದು ಕಣ್ಣಿಗೆ ರಾಚುತ್ತದೆ. ಮುಖ್ಯವಾಗಿ ಸ್ಲಂಗಳಿಗೆ ಸಮೀಪವಿರುವ ಎಷ್ಟೋ ಪಾಯಖಾನೆಗಳಲ್ಲಿ ಇಂತಹ ಪದ್ಧತಿ ಇದೆ. ಇನ್ನು ರೈಲು ನಿಲ್ದಾಣಗಳಲ್ಲಿರುವ ಪಾಯಖಾನೆಗಳಲ್ಲೂ ಸಹ ಒಣ ಪಾಯಖಾನೆಗಳೇ ಇದ್ದು ಅವು ಮಲಹೊರುವ ಪದ್ಧತಿಗೆ ನೇರವಾಗಿ ಸಹಕಾರಿಯಾಗಿರುವುದು ಸರ್ಕಾರ ನಡೆಸುವವವರಿಗೆ ತಿಳೀದಿಲ್ಲವೇ? ಇನ್ನು ರೈಲು ನಿಲ್ದಾಣದಲ್ಲಿರುವ ಪಾಯಖಾನೆಗಲ್ಲಿ ಸಹ ಒಳಚರಂಡಿ ವ್ಯವಸ್ಥೆ ಇಲ್ಲದ ಕಾರಣದಂದ ಇಲ್ಲಿನ ಶೌಚಾಲಯಗಳಿಂದ ಮಲವನ್ನು ಕೈಯಿಂದಲೇ ಬಳಿಯುವ ವ್ಯವಸ್ಥೆ ಇದೆ. ಕಣ್ಣೊರೆಸುವುದಕ್ಕೆ ಕಾನೂನು ರೂಪಿಸುವವರೂ ಅವರೆ, ಅದನ್ನು ರಾಜಾರೋಷವಾಗಿ ಮುರಿಯುವವರೂ ಅವರೆ!
ಮಲಹೊರುವ ಪದ್ಧತಿ ಜಾರಿಯಲ್ಲಲಿರಲು ಒಣಪಾಯಖಾನೆಗಳು ಮಾತ್ರ ಕಾರಣವಲ್ಲ. ಒಳಚರಂಡಿಗೆ ಸಂಪರ್ಕ ಹೊಂದಿರದ ಪಾಯಖಾನೆ ಗುಂಡಿಗಳು ವ್ಯಾಪಕವಾಗಿರುವುದೂ ಇದಕ್ಕೆ ಕಾರಣವಾಗಿದೆ. ಇಲ್ಲೆಲ್ಲಾ ಹೀರುಯಂತ್ರಗಳು ಕೆಲಸಕ್ಕೆ ಬಾರದವಾಗಿರುವುದೂ ಇದಕ್ಕೆ ಕಾರಣ. ಬೆಂಗಳೂರಿನಲ್ಲೆ ನೋಡಿದರೂ ಇಲ್ಲಿ ನಗರದ ಎಲ್ಲಾ ಭಾಗಗಳಲ್ಲೂ ಒಳಚರಂಡಿ ವ್ಯವಸ್ಥೆ ಇಲ್ಲದಿರುವುದರಿಂದ ಇಲ್ಲೆಲ್ಲಾ ಪಾಯಖಾನೆ ಗುಂಡಿಗಳಿಂದ ಕೈಯಿಂದಲೇ ಮಲ ಸಾಗಿಸುವ ವ್ಯವಸ್ಥೆಯೇ ಜಾರಿಯಲ್ಲಿದೆ.
ನಮ್ಮ ರಾಜ್ಯದಲ್ಲಿ ಮಲಹೊರುವ ಅಮಾನವೀಯ ಪದ್ಧತಿಯ ಕೆಲವೇ ನಿದರ್ಶನಗಳನ್ನು ಗಮನಿಸಿದರೆ ಪರಿಸ್ಥಿತಿಯ ಗಂಭೀರತೆ ಅರಿವಾಗಬಹುದು.
- ಚಾಮರಾಜಪೇಟೆಯ ಕೊಳ್ಳೇಗಾಲದಲ್ಲಿ ಮಲಹೊರುವುದು ಕಡ್ಡಾಯ. ಸದಾ ಅವಮಾನ ಅಪಮಾನಗಳಲ್ಲಿಯೇ ಬದುಕುವಂತೆ ಮಾಡುವ ಈ ವೃತ್ತಿಯನ್ನು ನಿರಾಕರಿಸಿದರೆ ಪೋಲೀಸರೇ ಹೆದರಿಸಿ, ಸುಳ್ಳು ಕೇಸು ಹಾಕಿ ಒಳಗೆ ಹಾಕುವ ಬೆದರಿಕೆ ಒಡ್ಡಿ ಮಲಹೊರುವಂತೆ ಮಾಡುತ್ತಿದ್ದಾರೆ!
- ರಾಯಚೂರಿನಲ್ಲಿ ಕೇವಲ ೨೦೦ ರೂಪಾಯಿ ಕೂಲಿಗಾಗಿ ದಲಿತರು ೧೫ ಅಡಿ ಅಳವಿರುವ ಕಕ್ಕಸು ಗುಂಡಿಗೆ ಇಳಿಯುತ್ತಾರೆ.
- ಗುಲ್ಬರ್ಗದಲ್ಲಿ ಮುಸ್ಲಿಂ ಮಹಿಳೆಯರು ತಮ್ಮ ಮಕ್ಕಳ ಶಾಲೆಯ ಫೀಜು ಕಟ್ಟುವ ಹಣಕ್ಕಾಗಿ ಸಾರ್ವಜನಿಕ ಪಾಯಖಾನೆಗಳಲ್ಲಿ ಮಲ ಬಳಿಯುತ್ತಾರೆ.
- ಉಡುಪಿಯಲ್ಲಿ ಬುಡಕಟ್ಟು ಸಮುದಾಯವಾದ ಕೊರಗರನ್ನು ಮಲಹೊರುವ ಕೆಲಸಕ್ಕೆ ತೊಡಗಿಲಾಗುತ್ತದೆ. ಇವರು ಇತರರ ಸಮಾರಂಭಗಳಲ್ಲಿ ಉಂಡು ಬಿಟ್ಟ ಎಲೆಗಳಲ್ಲಿನ ಊಟವನ್ನು ತಿನ್ನುವ ದುಸ್ಥಿತಿ ಇದೆ.
- ಕುಂದಾಪುರದಲ್ಲಿ ಲಿಂಗಾಯತ ಯುಕನೊಬ್ಬ ತನ್ನ ಸಮುದಾಯದ ಇಚ್ಛೆಗೆ ವಿರುದ್ಧವಾಗಿ ಕೆಳ ಜಾತಿಯ ಹುಡುಗಿಯನ್ನು ಮದುವೆಯಾದ ಎಂಬ ಕಾರಣಕ್ಕಾಗಿ ಆತ ಮಲಹೊರುವ ಕೆಲಸ ಮಾಡಬೇಕಾಗಿ ಬಂದಿದೆ.
ರಾಜ್ಯದ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪನವರ ತಾಲ್ಲೂಕು ಶಿಕಾರಿಪುರದಲ್ಲಿ ಪೆಂಚಾಲಯ್ಯ ಎಂಬ ವ್ಯಕ್ತಿ ತಾನು ಮಾಜಿ ಮುಖ್ಯಮಂತ್ರಿಗಳ ಮಾಲೀಕತ್ವದ ಮನೆಯ ಪಾಯಖಾನೆಯಲ್ಲಿ ಕೈಯಿಂದ ಮಲ ತೆಗೆದಿರುವುದನ್ನು ಬಯಲುಗೊಳಿಸಿದ್ದಾನೆ.
- ಮಂಗಳೂರಿನ ಮಡುವಿನಮುತ್ಲುವಿನಲ್ಲಿ ಸ್ಟಾಲಿನ್ ಮತ್ತು ಭೋಜ ಎಂಬಿಬ್ಬರು ಕಕ್ಕಸು ಗುಂಡಿಗಳಿಂದ ಹೊರಬಂದ ವಿಷಾನಿಲದಿಂದಾಗಿ ಅಸುನೀಗಿದ್ದಾರೆ. ಇವರ ನೆಯವರಿಗೆ ಇದುವರೆಗೂ ಒಂದು ನಯಾಪೈಸೆ ಪರಿಹಾರ ದೊರಕಿಲ್ಲ.
- ಮೈಸೂರಿನ ನಾರಾಯಣ ತನ್ನ ಮಗನ ಮದುಕು ತನ್ನಂತೆ ಮಲಹೊರುವ ಬದುಕಾಗಬಾರದೆಂದು ಶಾಲೆಗೆ ಕಳಿಸಲು ಎಷ್ಟೇ ಪ್ರಯತ್ನಿಸಿದರೂ ಕೊನೆಗೆ ಸಾಧ್ಯವಾಗಲೇ ಇಲ್ಲ. ಕಿತ್ತು ತಿನ್ನುವ ಬಡತನ, ಮೈಮುರಿದು ದುಡಿದರೂ ತುಂಬದ ಹೊಟ್ಟೆ ಆತನ ಮಗನೂ ಅದೇ ಕೆಲಸವನ್ನು ಹಿಡಿಯುಂತೆ ಮಾಡಿವೆ.
ಇದನ್ನೆಲ್ಲಾ ನೋಡಿದರೆ ನಾವು ನಿಜಕ್ಕೂ ಒಂದು ನಾಗರಿಕ ಸಮಾಜದಲ್ಲಿದ್ದೇವೆಯೇ ಎಂದು ಅನ್ನಿಸುತ್ತದೆಯೆ?
ಮಲಹೊರುವ ವೃತ್ತಿಗಳಲ್ಲಿರುವವರಿಗೆ ಬೇರೆ ಕೆಲಸಗಳನ್ನು ಮಾಡುವ ಅವಕಾಶವೇ ಇರುವುದಿಲ್ಲ. ಈ ಸಮುದಾಯಗಳ ಹೆಣ್ಣು ಮಕ್ಕಳು ಮನೆಗೆಲಸಗಳಲ್ಲಿ ತೊಡಗುತ್ತಾರಾದರೂ ಅಂಥವರನ್ನು ತೊಡಗಿಸುವುದು ಮನೆಯ ಟಾಯ್ಲೆಟ್ ಸ್ವಚ್ಛಗೊಳೀಸುವ ಕೆಲಸಕ್ಕೆ ಮಾತ್ರ. ಬಟ್ಟೆ ತೊಳೆಯುವ, ಪಾತ್ರೆ ತೊಳೆಯುವ ಕೆಲಸಗಳೂ ಈ ಹಣ್ಣುಮಕ್ಕಳಿಗೆ ಸಿಗುವುದಿಲ್ಲ. ಹೀಗಾಗಿ ಅವರ ಬದುಕು ಮೂರಾಬಟ್ಟೆಯಾಗಿರುತ್ತದೆ. ಇನ್ನು ಮಲವನ್ನು ಗುಂಡಿಗಳಲ್ಲಿ ಇಳಿದು ಎತ್ತಿಹಾಕುವ ಕೆಲಸ ಸಾಮಾನ್ಯವಾಗಿ ರಾತ್ರಿ ವೇಳೆಯಲ್ಲೇ ನಡೆಯುತ್ತದೆ. ’ನಾಗರಿಕ’ ಸಮಾಜದ ಮಂದಿ ಈಗಲೇ ಅವರನ್ನು ಹತ್ತಿರ ಸೇರಿಸಿಕೊಳ್ಳುವುದುದಿಲ್ಲ, ಇನ್ನು ಹಗಲಿನಲ್ಲೇ ಮಲಹೋರುವ ಕೆಲಸ ಮಾಡಿದರೆ ಅವರ ಮುಖವನ್ನೂ ತೋಡಲಿಚ್ಛಿಸುವುದಿಲ್ಲ ಎಂಬುದು ಅವರಿಗಿರುವ ಆತಂಕ.
ಈ ಕೆಲಸವನ್ನು ಒಬ್ಬೊರೇ ಮಾಡಲು ಸಾಧ್ಯವಿಲ್ಲ. ಕನಿಷ್ಠ ನಾಲ್ಕೈದು ಜನರ ತಂಡವಾದರೂ ಬೇಕಾಗುತ್ತದೆ. ಈ ಕೆಲಸ ಮಾಡುವಾಗ ಅವರು ಕಡ್ಡಾಯವಾಗಿ ಕುಡಿದಿರಲೇಬೇಕಾಗುತ್ತದೆ. ಮಲದ ಗುಂಡಿಯನ್ನು ನೆನೆಸಿಕೊಂಡರೇ ವಾಕರಿಕೆಪಡುವ ನಾವು ಅದರಲ್ಲಿ ಇಳಿದು ಅದನ್ನು ಕೈಯಾರೆ ಬಳಿಯುವ ಪರಿಸ್ಥಿತಿಯನ್ನೊಮ್ಮೆ ನೆನೆಸಿಕೊಂಡರೆ ಹೇಗಿರುತ್ತದೆ? ಸಾಮಾನ್ಯವಾಗಿ ೪ ರಿಂದ ೧೨ ಅಡಿ ಆಳವಿರುವ ಈ ಗುಂಡಿಗಳಲ್ಲಿ ಇಳಿಯುವುದು ಪ್ರಾಣವನ್ನೇ ಕೈಯಲ್ಲಿಟ್ಟುಕೊಂಡು ಇಳಿದಂತೆ. ಎಷ್ಟೋ ಸಲ ಆ ಗುಂಡಿಗಳಿಂದ ಕೊಳೆತ ಮಲದಿಂದ ಬಿಡುಗಡೆಯಾಗುವ ವಿಷಾನಿಲ ಇವರ ಪ್ರಾಣಕ್ಕೇ ಸಂಚಕಾರ ತರುತ್ತದೆ. ಮಾತ್ರವಲ್ಲ ಹಲವಾರು ರೋಗರುಜಿನಗಳಿಗೂ ಕಾರಣವಾಗುತ್ತದೆ. ಮಲಹೊರುವ ಜನರ ಸರಾಸರಿ ಜೀವನಾವಧಿ ೪೦ ವರ್ಷಗಳಿಗಿಂತ ಹೆಚ್ಚಿರುವುದಿಲ್ಲ. ಕೆಜಿಎಫ್ನ ಬಿಜಿಎಂಎಲ್ ಮಾಜಿ ಸಫಾಯಿ ಕರ್ಮಚಾರಿ ಎಲೀಶ್ ಮಲ ಎತ್ತುವ ಕೆಲಸದಲ್ಲಿರುವಾಗ ಚಪ್ಪಡಿ ಕಲ್ಲು ಮುರಿದು ಕಾಲಿನ ಮೇಲೆ ಬಿದ್ದು ಕಾಲು ತುಂಡಾಗಿ ಕಲ್ಲಿನ ಚೂರೊಂದು ಕಣ್ಣಿಗೆ ಬಿದ್ದು ಈಗ ಒಂದು ಕಾಲು, ಒಂದು ಕಣ್ಣು ಕಳೆದುಕೊಂಡು ಬದುಕು ದೂಡುತ್ತಿದ್ದಾರೆ. ಒಂದು ಮಲದ ಗುಂಡಿಯಿಂದ ಮಲ ಎತ್ತಲು ಸಾವಿರ ರೂಪಾಯಿ ಕೊಡುವುದಕ್ಕೂ ಮಾಲಿಕರು ಚೌಕಾಶಿ ಮಾಡುತ್ತಾರೆ. ಹಾಗೂ ಹೀಗೂ ಸಿಗುವ ೭೦೦-೮೦೦ ರೂಪಾಯಿಯಲ್ಲಿ ೨೫೦-೩೦೦ ರೂಪಾಯಿ ಸಾರಾಯಿಗೆ ಹೋದರೆ ಮತ್ತೆ ಇನ್ನೂರು ಮುನ್ನೂರು ರೂಪಾಯಿ ಇವರು ಬಾಡಿಗೆಗ ತಂದ ಗುದ್ದಲಿ, ಬಕೇಟುಗಳಿಗೆ ಹೋಗುತ್ತದೆ. ಉಳಿದ ಹಣದಲ್ಲಿ ನಾಲ್ಕೈದು ಜನರು ಹಂಚಿಕೊಂಡು ಮನೆಯಲ್ಲಿ ಹೆಂಡತಿಯ ಕೈಗೆ ನೀಡಿದರೆ ಅಂದಿನ ಊಟ ಅವರಿಗೆ ದಕ್ಕುತ್ತದೆ.
ಈ ಅಮಾನುಷ ಪದ್ಧತಿ ಎಲ್ಲೆಲ್ಲಿ ಅಸ್ತಿತ್ವದಲ್ಲಿದೆಯೋ ಅಲ್ಲೆಲ್ಲಾ ಈ ಜನರು ಈ ಹೊಲಸು ವೃತ್ತಿಯಿಂದ ಹೊರಬರಲು ತಮ್ಮದೇ ರೀತಿಯಲ್ಲಿ ಪ್ರಯತ್ನಿಸುತ್ತಲೇ ಇದ್ದಾರೆ. ಕೋಲಾರದ ತೋಟಿಗರು ಇದರಿಂದ ಹೊರಬಂದು ಬೆಂಗಳೂರಿನಲ್ಲಿ ಬದುಕು ಕಂಡುಕೊಳ್ಳಲು ಯತ್ನಿಸಿದ್ದಾರೆ. ಈ ಕುರಿತು ತನ್ನ ತನ್ನ ಅನುಭವ ಹಂಚಿಕೊಳ್ಳುವ ಪ್ರಸಾದ್ ಮಾತು ಕೇಳಿ. "ಹಂಗೂ ಒಂದಷ್ಟು ದಿನ ಬೆಂಗಳೂರಿಗೆ ಕೂಲಿನಾಲಿ ಮಾಡಕೆ ಅಂತ ರೈಲು ಹತ್ತಿಕಂಡು ವಿತೌಟ್ (ಟಿಕೆಟ್ ಇಲ್ಲದೆ) ಬೆಂಗಳೂರಿಗೆ ಹೋಗಿ ಬರ್ತಾ ಇದ್ವಿ. ಅದೇನಾಗಿಬಿಡ್ತು, ವಿತೌಟ್ ಹೋಗ್ತಾ ಇರಬೇಕಾದ್ರೆ ಚೆಕಿಂಗ್ನೋರು ಕೊಳಪಟ್ಟಿ ಹಿಡಕಂಡು ಜೈಲಿಗಾಕ್ತೀನಿ ಹಂಗೆ ಹಿಂಗೆ ಅಂತ ಹೆದರಿಸ್ತಾ ಇದ್ರು. ಕೊಡೋಕೆ ಕಾಸಿರಬೇಕಲ್ಲ? ಚೆಕಿಂಗ್ನೋರು ಅಲ್ಲಿ ಬಂದ್ರು ಅಂತಿದ್ದಂಗೆ ಇಲ್ಲಿ ರೈಲಿಂದ ದಫ ದಫ ದಫ ಅಂತ ಕೆಳಕ್ಕೆ ಜಂಪ್ ಮಾಡ್ತ ಇದ್ವಿ, ಕೆಳಗೇನು ಕೆರೆ ಇದೆಯೋ, ಹಳ್ಳಾನೋ ಗುಂಡೀನೋ, ಒಂದೂ ನೋಡ್ತಾ ಇರಲಿಲ್ಲ. ಹಂಗೆ ಹಿಂದೆ ಮುಂದೆ ನೋಡದಂಗೆ ರೈಲಿಂದ ಧುಮುಕ್ತಾ ಇದ್ವಿ. ಬಂಡೆಗೆ ತಲೆ ವಡಕಂಡು, ಕೊರಕಲಿಗೆ ಬಿದ್ದು ನಮ್ಮೋರು ಒಂದ್ ನಾಕೈದ್ ಜನ ಸತ್ತೇ ಹೋದ್ರು ಸಾರೂ.. ಪೇಪರಗೆಲ್ಲ ಬಂದಿತ್ತು.. ಟಿಕೆಟ್ಟಿಲ್ಲದಂಗೆ ಓಡಾಡೋರು ರೈಲಿಂದ ಜಂಪ್ ಮಾಡಿ ಸತ್ತೋದ್ರು ಅಂತ. ಒಂದೊತ್ತಿನ ಅನ್ನಕ್ಕೆ, ಒಂದು ಗ್ಲಾಸು ಗಂಜೀಕೆ ಕೂಲಿ ಹುಡಿಕ್ಕೆಂಡು ಹೋದೋರು ಟಿಕೆಟ್ಟಿಗೆ ಕಾಸಿಲ್ಲದಂಗೆ ಧುಮುಕಿ ಧುಮುಕಿ ಜೀವ ಕಳಕಂಡ್ರು. ನಮ್ ಜನಗಳಿಗೆ, ನಮ್ಮೂರಿಗೆ ಸಾಯೋದು ಅನ್ನೋದು ಬದುಕೋಕಿಂತ ಸುಲಭ ಅನ್ನೋ ಥರ ಆಗೋಗಿದೆ ಸಾರ್". ಸುವರ್ಣ ಕರ್ನಾಟಕದ ಮಣ್ಣಿನ ಮಕ್ಕಳು ಹೀಗೆ ಕಣ್ಣಂಚಿನಲ್ಲಿ ನೀರು ತಂದುಕೊಂಡು ಹೇಳುತ್ತಿದ್ದರೂ ಮಿಡಿಯದ ಹೃದಯವನ್ನು ನಮ್ಮ ’ನಾಗರಿಕ’ ಸಮಾಜ, ಸರ್ಕಾರ’ ಹೊಂದಿದೆ.
ಭಾರತದ ಸಂವಿಧಾನದ ೨೧ನೇ ವಿಧಿಯು ಇಲ್ಲಿನ ಪ್ರತಿಯೊಬ್ಬ ಪ್ರಜೆಗೂ ಘನತೆ ಗೌರವದಿಂದ ಬದುಕುವ ಹಕ್ಕನ್ನು ದಯಪಾಲಿಸಿದೆ. ಆದರೆ ತಮ್ಮ ಹುಟ್ಟಿನ ಕಾರಣದಿಂದಾಗಿ ಇಂತಹ ದಾರುಣ ಸ್ಥಿತಿಯಲ್ಲಿ ಜೀವನ ಬದುಕುತ್ತಲೇ ಸಾಯುತ್ತಿರುವ ಈ ಜನರನ್ನು ಒಮ್ಮೆ ಘನತೆ, ಗೌರವಗಳ ಅರ್ಥವೇನೆಂದು ಕೇಳಿ ನೋಡಿ. ಇದು ನಮ್ಮ ನಾಗರಿಕ ಸಮಾಜ ರೂಢಿಸಿಕೊಂಡು ಬಂದಿರುವ ನಾಗರಿಕತೆಯ ಪ್ರತಿಬಿಂಬ. ಕವಿಯೊಬ್ಬ ಕೇಳಿದ್ದ - ನಿಮ್ಮ ಮನೆಯ ಒಂದು ಕೋಣೆಯಲ್ಲಿ ಬೆಂಕಿ ಬಿದ್ದಿದ್ದರೆ ಇನ್ನೊಂದು ಕೋಣೆಯಲ್ಲಿ ನೆಮ್ಮದಿಯಿಂದ ನಿದ್ರಿಸಬಲ್ಲಿರಾ? ಹೌದು ಎನ್ನುವುದಾದರೆ ನಿಮ್ಮ ಬಳಿ ಮಾತಾಡಲು ಏನೂ ಇಲ್ಲ ಎಂದು. ಅದೇ ಪ್ರಶ್ನೆಯನ್ನು ನಾವೀಗ ಕೇಳಿಕೊಳ್ಳ ಬೇಕಾಗಿದೆ. ನಮ್ಮದೇ ನೆಲದಲ್ಲಿ ಹುಟ್ಟಿದ ನಮ್ಮದೇ ತರಹದ ಮನುಷ್ಯ ಜೀವಿಗಳು ಪ್ರಾಣಿಗಳಿಗಿಂತ ಕಡೆಯಾದ ಬದುಕು ಬದುಕುತ್ತಿದ್ದರೆ, ಸಮಾಜದಲ್ಲಿ ಹುಳುಹುಪ್ಪಟಿಗಳಂತೆ ಸಾಯುತ್ತಿದ್ದರೆ ನಾವು ಅದನ್ನೆಲ್ಲಾ ನೋಡಿಯೂ ನೋಡದಂತೆ ಚಂದ್ರಯಾನ, ಸೂಪರ್ ಪವರ್, ಐಟಿ-ಬಿಟಿ, ಉಪಗ್ರಹ ಉಡಾವಣೆ, ಬ್ಲಾಕ್ಬೆರ್ರಿಗಳ ಬಗ್ಗೆಯೇ ಹೆಮ್ಮೆ ಪಡುತ್ತಾ ಎಲ್ಲವೂ ಸರಿಯಾಗಿದೆ ಎಂಬ ಫೀಲ್ಗುಡ್ ಭಾವನೆಯಲ್ಲಿ ಬದುಕುವುದು ಸಾಧ್ಯವೇ?
****************
ಆಟಕ್ಕುಂಟು ಲೆಕ್ಕಕ್ಕಿಲ್ಲದ ಕಾನೂನು
೧೯೯೩ರಲ್ಲಿ ಜಾರಿಗೆ ಬಂದ ಸಫಾಯಿ ಕರ್ಮಾಚಾರಿಗಳ ಉದ್ಯೋಗ ಹಾಗೂ ಒಣಪಾಯಿಖಾನೆ (ನಿಷೇಧ) ಕಾಯ್ದೆಯು ಮಲಹೊರುವ ಪದ್ಧತಿಯನ್ನು ನಿಷೇಧಿಸಿದೆ. ಯಾರು ಈ ಕೆಲಸ ಮಾಡಿಸುತ್ತಾರೋ ಅಂತವರಿಗೆ ಒಂದು ವರ್ಷ ಜೈಲು ಶಿಕ್ಷೆ ಹಾಗೂ ದಂಡ ಶಿಕ್ಷೆಯನ್ನೂ ವಿಧಿಸಬಹುದಾಗಿದೆ. ಆದರೆ ಈ ಕಾಯ್ದೆ ಜಾರಿಗೊಳಿಸಿ ೧೮ ವರ್ಷಗಳಾದರೂ ಈ ಕಾನೂನಿನಡಿ ಒಬ್ಬನೇ ಒಬ್ಬ ವ್ಯಕ್ತಿಯ ಮೇಲೆ ಪ್ರಕರಣ ದಾಖಲಾಗಿರುವುದಾಗಲೀ, ಶಿಕ್ಷೆ ವಿಧಿಸಿರುವುದಾಗಲೀ ಇಲ್ಲ. ಈ ಕಾಯ್ದೆಯ ಪ್ರಕಾರ ಒಣಪಾಯಿಖಾನೆಗಳನ್ನು ಇಟ್ಟುಕೊಳ್ಳುವುದಾಗಲೀ ನಡೆಸುವುದಾಗಲೀ ಶಿಕ್ಷಾರ್ಹ ಅಪರಾಧ. ಹಾಗೆಯೇ ಮಲವನ್ನು ಪಾಯಿಖಾನೆಗಳಿಂದ ನೇರವಾಗಿಯಾಗಲೀ, ಗುಂಡಿಗಳಿಂದ ಸಾಗಿಸುವುದಾಗಲೀ ಅಪರಾಧ ಎನಿಸಿಕೊಳ್ಳುತ್ತದೆ. ಒಳಚರಂಡಿ ವ್ಯವಸ್ಥೆ ಇಲ್ಲದ ಸಂದರ್ಭದಲ್ಲಿ ಪಾಯಖಾನೆಗಳನ್ನು ಸೆಪ್ಟಿಕ್ ಟ್ಯಾಂಕ್ಗಳಿಗೆ ಜೋಡಿಸಿರತಕ್ಕದ್ದು. ಇದರಿಂದ ಹೀರುಯಂತ್ರಗನ್ನು ಬಳಸಿ (ಸಕಿಂಗ್ ಮಷೀನ್) ಮಲವನ್ನು ತೆಗೆಯಲು ಸಾಧ್ಯವಾಗುತ್ತದೆ ಎನ್ನುವ ಆಶಯ ಕಾಯ್ದೆಯಲ್ಲಿದೆ. ಆದರೆ ಈ ಕಾಯ್ದೆಯನ್ನು ಸರ್ಕಾರ ಕಾಲ ಕಸಕ್ಕಿಂತ ಕಡೆಯಾಗಿ ನೋಡಿದೆ ಬಿಟ್ಟರೆ ಅದರ ಒಂದಂಶವನ್ನೂ ಜಾರಿಗೊಳಿಸಲು ಯತ್ನಿಸಿಲ್ಲ. ಜಾರಿಗೊಳಿಸುವುದು ಹೋಗಲಿ ರಾಜ್ಯದಲ್ಲಿ ಮಲಹೊರುವ ಪದ್ಧತಿಯೇ ಇಲ್ಲ ಎಂದು ಪ್ರಮಾಣ ಪತ್ರ ನೀಡಿ ಈ ಕೆಲಸ ಮಾಡುವವರಿಗೆ ಕೇಂದ್ರ ಸರ್ಕಾರ ಬಿಡುಗಡೆ ಮಾಡುವ ನೂರಾರು ಕೋಟಿ ರೂಪಾಯಿಗಳು ತಲುಪದಂತೆ ಮಾಡಿ ಈ ಮಲಹೊರುವ ನತದೃಷ್ಟರನ್ನು ಹಾಗೇಯೇ ಅದೇ ಸ್ಥಿತಿಯಲ್ಲೇ ಉಳಿಯುವಂತೆ ಮಾಡಿರುವ ಕೀರ್ತಿ ನಮ್ಮ ರಾಜ್ಯ ಸರ್ಕಾರಕ್ಕೆ ಸಲ್ಲುತ್ತದೆ. ಇನ್ನೊಂದು ವಿಚಾರ ಎಂದರೆ, ಇಂತಹ ಒಂದು ಪದ್ಧತಿ ಮುಂದುವರೆದರೆ ಅದಕ್ಕೆ ನಿರ್ಧಿಷ್ಟವಾಗಿ ಯಾರನ್ನೂ ಹೊಣೆಗಾರರನ್ನಾಗಿಸದಿರುವುದು ಈ ಕಾಯ್ದೆಯ ಪ್ರಮುಖ ದೋಷ. ಅಲ್ಲದೇ ಒಪ್ಪೊತ್ತಿನ ಊಟಕ್ಕಾಗಿ ಮಲಬಳಿಯುವಂತಹ ಹೀನ ಕೆಲಸಕ್ಕೆ ಇಳಿಯುವವರನ್ನೇ ಅಪರಾಧಿಗಳನ್ನಾಗಿ ಈ ಕಾಯ್ದೆ ನೋಡುತ್ತದೆ. ಇಂತಹ ಪದ್ಧತಿ ಅಸ್ತಿತ್ವದಲ್ಲಿರುವುದಕ್ಕೆ ಜನಕಲ್ಯಾಣದ ಆಶಯದೊಂದಿಗೆ ಅಧಿಕಾರಕ್ಕೇರಿದ ಸರ್ಕಾರಗಳನ್ನು ಹೊಣೆಗಾರರನ್ನಾಗಿಸಬೇಕೇ ಹೊರತು ಆ ಪದ್ಧತಿಯ ಬಲಿಪಶುಗಳನ್ನಲ್ಲ.
ಕೆಲಸಕ್ಕೆ ಬಾರದ ಹೀರು ಯಂತ್ರ
ಪಕ್ಕದಲ್ಲೇ ಇದೆ ಸಕಿಂಗ್ ಮಷೀನ್! |
ಮಲಹೊರುವ ಪದ್ಧತಿಯನ್ನು ಸಂಪೂರ್ಣವಾಗಿ ನಿರ್ಮೂಲನೆ ಮಾಡಬೇಕೆಂದರೆ ಎಲ್ಲಾ ಪಾಯಖಾನೆಗಳನ್ನು ಒಳಚರಂಡಿ ವ್ಯವಸ್ಥೆಯೊಂದಿಗೆ ಸಂಪರ್ಕಿಸಬೇಕು. ಆದರೆ ಇಂದು ಬೆಂಗಳೂರಿನಂತಹ ನಗರದಲ್ಲೂ ಈ ಕೆಲಸ ಸಮರ್ಪಕವಾಗಿ ಆಗಿಲ್ಲ. ಬೆಂಗಳೂರಿನ ಕೆಲವೇ ಪ್ರದೇಶಗಳನ್ನು ಬಿಟ್ಟರೆ ಎಷ್ಟೋ ಪ್ರದೇಶಗಳಲ್ಲಿ ಒಳಚರಂಡಿ ವ್ಯವಸ್ಥೆಯನ್ನೇ ಮಾಡಲಾಗಿಲ್ಲ. ಹೀಗಾಗಿ ಇಲ್ಲೂ ಸಹ ಗುಂಡಿಗಳಲ್ಲೇ ಪಾಯಖಾನೆ ಶೇಖರಣೆಯಾಗಿ ಅದು ಭರ್ತಿಯಾದಾಗ ಕೈಯಿಂದಲೇ ತೆಗೆಸುವ ವ್ಯವಸ್ಥೆಯೇ ಚಾಲ್ತಿಯಲ್ಲಿದೆ. ಇನ್ನು ಒಳಚರಂಡಿಗಳಲ್ಲಿ ಕಸಕಡ್ಡಿ ಸಿಲುಕಿಕೊಂಡಾಗ ಸರ್ಕಾರ ಒದಗಿಸಿರುವ ಹೀರುಯಂತ್ರಗಳು ಉಪಯೋಗಕ್ಕೇ ಬಾರದಿರುವುದನ್ನು ಕಾಣುತ್ತೇವೆ. ಅವು ಒಳಚರಂಡಿಗಳ ನೀರನ್ನು ಮಾತ್ರವೆ ಹೀರಬಲ್ಲವು. ಆಳದಲ್ಲಿ ಉಳಿಯುವ ಗಟ್ಟಿ ಮಲವನ್ನು ತೆಗೆಯುವ ಕೆಲಸ ಅವುಗಳಿಂದಾಗುವುದಿಲ್ಲ. ಅಂತಹ ಸಂದರ್ಭಗಳಲ್ಲಿ ಕಕ್ಕಸು ಬೆರೆತ ನೀರು ಮ್ಯಾನ್ ಹೋಲ್ಗಳೀಂದ ಉಕ್ಕುಕ್ಕಿ ಬರುತ್ತಿದ್ದರೆ ಅಲ್ಲಿ ಮನುಷ್ಯರಲ್ಲೇ ಇಳಿಸಿ ಕಸಕಡ್ಡಿಯನ್ನು ತೆಗೆಸಲಾಗುತ್ತದೆ.
ಬೆಂಗಳೂರಿನಲ್ಲಿ ಮೆಟ್ರೋ ಕಾಮಗಾರಿ ನಡೆಯುತ್ತಿದೆ. ಸುಮ್ಮನೆ ಒಮ್ಮೆ ಹೋಗಿ ನೋಡಿ. ಎಂತೆಂಥ ದೈತ್ಯ ಯಂತ್ರಗಳನ್ನು ಕಂಡುಹಿಡಿದಿದ್ದಾರೆ, ಅವು ಎಂತೆಂಥ ಕ್ಲಿಷ್ಟಕರ ಕೆಲಸಗಳನ್ನು ಹೇಗೆ ನಾಜೂಕಾಗಿ ಮಾಡಿ ಮುಗಿಸುತ್ತಿವೆ ಎಂದು ಗೊತ್ತಾಗುತ್ತೆ. ಚಂದ್ರನ ಮೇಲೆ ನೀರು ಇದೆಯಾ ಎಂದು ಹುಡುಕುತ್ತಿರುವುದೂ ಕೂಡ ಯಂತ್ರಗಳೇ. ಆದರೆ, ಪಾಯಿಖಾನೆ ಪಿಟ್, ಒಳಚರಂಡಿ, ಮ್ಯಾನ್ಹೋಲ್ಗಳನ್ನು ಶುಚಿಗೊಳಿಸುವ ಕೆಲಸಕ್ಕೊಂದು ಪರಿಣಾಮಕಾರಿ ಯಂತ್ರ ಕಂಡುಹಿಡಿಯಲು ಆಗಿಲ್ಲ. ’ಹೇಗೂ ಇದ್ದಾರಲ್ಲ ಮಲ ಹೋರುವ ಜನ, ಅವರು ಮಾಡಲಿ ಬಿಡಿ’ ಎಂಬ ಧೋರಣೆ ತಾನೆ ಇದು?
ಪರಿಹಾರ ಪ್ರಹಸನ
ಸರ್ಕಾರಗಳು ಈ ಅಮಾನವೀಯ ಮಲಹೊರುವ ಪದ್ಧತಿಯನ್ನು ಗುರುತಿಸಿ ಪ್ರಮಾಣಿಕವಾಗಿ ಅದರ ನಿರ್ಮೂಲನೆಗಾಗಿ ಶ್ರಮಿಸಿದ್ದು ಇಲ್ಲವೇ ಇಲ್ಲ ಎನ್ನಬಹದು. ಆದರೆ ಯಾವಾಗೆಲ್ಲಾ ಈ ವಿಷಯ ಮಾಧ್ಯಮಗಳ ಮೂಲಕ ಬಯಲಾಗಿದೆಯೋ ಆವಾಗಲೆಲ್ಲಾ ತಡಬಡಿಸಿ ಎದ್ದು ತರಾತುರಿಯ ಕ್ರಮಗಳನ್ನು ಕೈಗೊಳ್ಳುತ್ತವೆ. ಸವಣೂರಿನಲ್ಲಿ ಭಂಗಿಗಳು ಮಲಸ್ನಾನ ಮಾಡಿ ಪ್ರತಿಭಟಿಸಿದಾಗ ಕೂಡಲೇ ಅವರಿಗೆ ಖಾಯಂ ಉದ್ಯೋಗ ಕಲ್ಪಿಸುವ ಭರವಸೆಯನ್ನು ಖುದ್ದು ಮುಖ್ಯಮಂತ್ರಿಗಳೇ ನೀಡಿದ್ದು ನಿಮಗೆ ನೆನಪಿದೆಯಲ್ಲವೆ? ಈಗ ಒಂದು ವರ್ಷಕ್ಕಿಂತ ಹೆಚ್ಚು ಸಮಯವಾಗಿದೆಯಲ್ಲ, ಈಗ ಹೋಗಿ ನೋಡಿ, ಮುಖ್ಯಮಂತ್ರಿಗಳ ಆಶ್ವಾಸನೆ ಎಷ್ಟರಮಟ್ಟಿಗೆ ಈಡೇರಿದೆ ಎಂದು. ಅವರಿಗೆ ಪುರಸಭೆಯಲ್ಲಿ ಗುತ್ತಿಗೆ ಕಾರ್ಮಿಕರ ಕೆಲಸ ಸಿಕ್ಕಿದೆ. ಮಲ ಹೋರುವಾಗಲೇ ಒಂದೊತ್ತಿನ ಊಟವಾದರೂ ಸಿಗುತ್ತಿತ್ತು. ಪುರಸಭೆಯಲ್ಲಿ ಗುತ್ತಿಗೆ ಕೆಲಸ ಸಿಕ್ಕಮೇಲೆ ಅದೂ ಇಲ್ಲದಂತಾಗಿದೆ. ಏಕೆಂದರೆ ಅಲ್ಲಿ ಈಗಾಗಲೇ ಇದ್ದ ಪೌರಕಾರ್ಮಿಕರಿಗೂ ಕೆಲವಾರು ತಿಂಗಳಿಂದ ಸಂಬಳವೇ ಬಂದಿರಲಿಲ್ಲ. ಇನ್ನು ಇವರಿಗೆಲ್ಲಿಂದ ಕೊಡ್ತಾರೆ?
ನಂತರ ಆ ಭಂಗಿ ಕುಟುಂಬಗಳಿಗೆ ಜಿಲ್ಲಾಡಳಿತ ಕುರಿಗಳನ್ನು ನೀಡಿತು. ಮಳೆ ಬಂದರೆ ತಮಗೇ ಮಲಗಲು ಜಾಗವಿಲ್ಲದ ಅವರ ಜೋಪಡಿಗಳಲ್ಲಿ ಈ ಜನರು ಕುರಿಗಳನ್ನು ಎಲ್ಲಿ ಸಾಕಬಹುದು ಎಂಬ ಸಣ್ಣ ಪ್ರಶ್ನೆಯೂ ಅಧಿಕಾರಿ ಮಹಾಶಯರಲ್ಲಿ ಬರಲಿಲ್ಲ. ಸರ್ಕಾರದ ಈ ಬೇಕಾಬಿಟ್ಟಿತನವನ್ನು ಮತ್ತೆ ಭಂಗಿಗಳು ಪ್ರತಿಭಟಿಸಿದಾಗ ಸುಮಾರು ೨೦೦ ಕುಟುಂಬಗಳ ಪೈಕಿ ಕೇವಲ ಒಂಭತ್ತು ಕುಟುಂಬಗಳ ಸದಸ್ಯರಿಗೆ ಮಾತ್ರ ಬದಲೀ ಕೆಲಸ ನೀಡಲಾಗಿದೆ. ಹೆಚ್ಚೂ ಕಡಿಮೆ ಇದೇ ಪರಿಸ್ಥಿತಿ ಕೆಜಿಎಫ್ನಲ್ಲೂ ಆಗಿದೆ. ಇತ್ತೀಚೆಗೆ ಕೆಜಿಎಫ್ಗೆ ಭೇಟಿ ನೀಡಿದ ಸಚಿವ ಸುರೇಶ್ ಕುಮಾರ್ ಅಧಿಕಾರಿಗಳ ಮೇಲೆ ಕಿಡಿಕಾರಿ ಬಂದರು. ಆದರೆ ಇಲ್ಲೂ ಸಹ ಈ ಜನರಿಗೆ ಖಾಯಂ ಕೆಲಸ ನೀಡಿಲ್ಲ. ಈಗ ನೀಡುತ್ತಿರುವ ಗುತ್ತಿಗೆ ಕೆಲಸಕ್ಕೆ ಸಂಬಳ ಕೊಡದೇ ತಿಂಗಳುಗಳಾದವು. ಹೀಗಾಗಿ ಮಲ ಹೊತ್ತು ಬಂದ ಹಣದಲ್ಲಿ ಗಂಜಿ ಕಾಯಿಸಿ ಕುಡಿಯುತ್ತಿದ್ದ ಜನರು ಈಗ ಅದಕ್ಕೂ ಗತಿ ಇಲ್ಲದೆ ರದ್ದಿ ಆರಿಸುವ ಕೆಲಸದಲ್ಲಿ ತೊಡಗಿದ್ದಾರೆ. ನಮಗೆ ಹತ್ತು ಸಾವಿರ ರೂಪಾಯಿಗಳನ್ನು ಸರ್ಕಾರ ಕೊಟ್ಟಿದೆ. ಆದರೆ ಕುಟುಂಬದಲ್ಲಿ ಐದಾರು ಮಂದಿ ಇರುವ ನಾವು ಆ ಹತ್ತು ಸಾವಿರ ರೂಪಾಯಿಯಲ್ಲಿ ಬದಲಿ ಉದ್ಯೋಗ ಹೆಂಗ ಮಾಡಕ್ಕಾಯ್ತದ ನೀವೇ ಹೇಳಿ ಸಾರ್ ಎಂದು ಕೇಳುತ್ತಾರೆ ಗುಲ್ಬರ್ಗದ ರಾಜೇಶ್ ಭಂಗಿ. ಹೀಗಿದೆ ನೋಡಿ ಸರ್ಕಾರದ ಪರಿಹಾರ ಪ್ರಹಸನ.
ಈ ಕುರಿತು ಇವರು ಹೇಳಿದ್ದು....
"ನಾವು ಕಂಡಿರುವಂತೆ ತಾಲ್ಲೂಕು ಕೇಂದ್ರಗಳಲ್ಲಿ ಹಾಗೂ ಹಳ್ಳಿಗಳಲ್ಲಿ ಶೇಕಡ ೮೦ರಷ್ಟು ಪಾಯಖಾನೆಗಳು ಸೆಪ್ಟಿಕ್ ಗುಂಡಿಗಳಾಗಿರುವುದಿಲ್ಲ. ಹೀಗಾಗಿ ಹೀರುಯಂತ್ರಗಳು ಅಲ್ಲಿ ಕೆಲಸ ಮಾಡುವುದಿಲ್ಲ. ಅನಿವಾರ್ಯವಾಗಿ ಜನರನ್ನೇ ಈ ಕೆಲಸಕ್ಕೆ ಬಳಸಲಾಗುತ್ತದೆ"
ಚಂದ್ರಶೇಖರ್ ಅತ್ತಿಬೆಲೆ, ಅಧ್ಯಯನ ತಂಡದ ಸದಸ್ಯ
"ಸರ್ಕಾರಕ್ಕೆ ಇಚ್ಚಾಶಕ್ತಿ ಇದ್ದಿದ್ದರೆ ಈ ಅನಿಷ್ಠ ಪದ್ದತಿಯನ್ನು ನಿರ್ಮೂಲಿಸುವುದು ಕಷ್ಟವೇನಲ್ಲ. ಎಲ್ಲಾ ದಲಿತ ಚಳವಳಿಗಳ ತವರಾದ ಕೋಲಾರ ಜಿಲ್ಲೆಯಲ್ಲಿ ಇದು ಬೆಳಕಿಗೆ ಬಂದಾಗ ಯಾವ ದಲಿತ ಸಂಘಟನೆಗಳೂ ಈ ಕುರಿತು ಮಾತನಾಡದೇ ಮೌನವಹಿಸಿರುವುದು ಆಶ್ಚರ್ಯವನ್ನುಂಟು ಮಾಡಿದೆ"
-ಡಾ.ಸಿ.ಎಸ್. ದ್ವಾರಕ್ನಾಥ್, ಹಿಂದುಳಿದ ವರ್ಗಗಳ ಆಯೋಗದ ಮಾಜಿ ಅಧ್ಯಕ್ಷರು.
ಮಲಹೊರುವವರ ಬದುಕೇ ದುಸ್ತರ
ಚಿನ್ನದ ಕೆಜಿಎಫ್ನ ಕರಾಳ ಕತೆ
ಕೋಲಾರದ ಚಿನ್ನದ ಗಣಿಯಲ್ಲಿ ಚಿನ್ನದ ಅದಿರನ್ನು ರಾಶಿ ರಾಸಿಯಾಗಿ ಹೊರತರುತ್ತಿದ್ದಾಗಲೇ ಅಲ್ಲೂ ದಲಿತರ ಕೈಗಳಿಂದ ಮಲತೆಗೆಸುವ ಪದ್ಧತಿ ಇದ್ದುದು ಹೊರ ಜಗತ್ತಿಗೆ ತಿಳಿದೇ ಇರಲಿಲ್ಲ. ಇದೇ ಪದ್ಧತಿ ರಾಯಚೂರಿನ ಹಟ್ಟಿ ಚಿನ್ನದ ಗಣಿಯಲ್ಲಿ ಈಗಲೂ ಮುಂದುವರೆದಿರುವ ಕುರಿತು ದ ಸಂಡೇ ಇಂಡಿಯನ್ ಕೆಲ ತಿಂಗಳ ಹಿಂದೆ ತನಿಖಾ ವರದಿ ಪ್ರಕಟಿಸಿದ್ದು ನಿಮಗೆ ನೆನಪಿರಬಹುದು. ಕೆಜಿಎಫ್ನ ಕೆನಡೀಸ್ ಆಂಧ್ರ ಲೈನ್ನಲ್ಲಿರುವ ದಲಿತರನ್ನು ಗಣಿ ಆಳದಲ್ಲಿ ಅದಿರು ಲೋಡ್ ಮಾಡಲು ತೊಡಗಿಸಿದ್ದರ ಜೊತೆಗೆ ಅಲ್ಲಿದ್ದ ಪಾಯಖಾನೆಗಳನ್ನು ಸ್ವಚ್ಛಗೊಳಿಸುವ ಕೆಲಸಕ್ಕೆ ಬಳಸಿಕೊಳ್ಳಲಾಗುತ್ತಿತ್ತು. ಯಾವಾಗ ಚಿನ್ನದ ಗಣಿ ಮುಚ್ಚಲ್ಪಟ್ಟಿತ್ತೋ ಆಗ ನಂತರ ಅಲ್ಲಿ ತೆಲುಗು ಮಾತನಾಡುವ ಜನರಿಗೆ ಗತಿಯಾಗಿದ್ದು ಮಲಹೊರುವ ಕೆಲಸ ಒಂದೇ. ಕೆಜಿಎಫ್ನಲ್ಲಿ ಒಳಚರಂಡಿ ವ್ಯವಸ್ಥೆ ಇಲ್ಲದಿರುವ ಕಾರಣದಿಂದ ಗಣಿ ಅಧಿಕಾರಿಗಳನ್ನೂ ಒಳಗೊಂಡಂತೆ ಎಲ್ಲರ ಮನೆಯನ್ನೂ ಇರುವುದು ಗುಂಡಿ ಪಾಯಖಾನೆಗಳೇ. ಹೀಗಾಗಿ ಈ ಜನರಿಗೆ ಗುಂಡಿಗಳು ತುಂಬಿದಾಗ ಅದನ್ನು ತೆಗೆಯುವ ಕೆಲಸವೇ ಖಾಯಮ್ಮಾಯಿತು. ತೋಟಿಗರು ಎಂದು ಕರೆಯಲ್ಪಡುವ ಈ ದಲಿತರು ಇಲ್ಲಿ ಈ ಕೆಲಸವನ್ನು ಬಿಟ್ಟರೆ ಬೇರೆ ಮಾಡುವಂತೆಯೇ ಇಲ್ಲದ ವಾತಾವರಣ ಇದೆ. ಬೇರೆ ಯಾವ ಕೆಲಸವೂ ಇವರಿಗೆ ಸಿಗುವುದಿಲ್ಲ. ಇವರು ಮಾತನಾಡುವ ತೆಲುಗು ಭಾಷೆಯಿಂದಲೇ ಇವರನ್ನು ಗುರ್ತು ಹಿಡಿದು ಬೇರೆ ಕೆಲಸವನ್ನು ನಿರಾಕರಿಸಿಬಿಡಲಾಗುತ್ತಿತ್ತು. ಇಂತಹ ದಾರುಣ ಸ್ಥಿತಿಯಲ್ಲಿ ಮಲಹೊರುವುದನ್ನೇ ಅನಿವಾರ್ಯವಾಗಿ ಕಾಯಕ ಮಾಡಿಕೊಂಡಿರುವ ಈ ಆರೋಗ್ಯ ಸ್ಥಿತಿಯಂತೂ ಚಿಂತಾಜನಕ. ಮೂರು ತಿಂಗಳಲ್ಲಿ ಐದು ಜನರು ತೀರಿಕೊಂಡಿದ್ದಾರೆ. ಎರಡು ತಿಂಗಳ ಹಿಂದೆ ಈ ಮಲಹೊರುವ ವೃತ್ತಿಯ ಕಾರಣದಿಂದಾಗಿ ತಗಲಿಕೊಂಡ ರೋಗಗಳಿಂದಾಗಿ ಕೆನೆಡೀಸ್ ಕಾಲೋನಿಯ ನಾಗರಾಜು ಎನ್ನುವವರು ತೀರಿಕೊಂಡರೆ ನಂತರ ಅವರ ಸಹೋದರ ಬಾಬು ಕೂಡಾ ತೀರಿಕೊಂಡ. ಈ ಇಬ್ಬರೂ ಮಕ್ಕಳನ್ನು ಕಳೆದುಕೊಂಡ ಮಾರ್ಥಮ್ಮ ಈಗ ಅನಾಥೆ. ಆಕೆ ಕೂಡಾ ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದಾಳೆ. ಹೀಗೆ ಕೆಜಿಎಫ್ನಲ್ಲಿ ಈ ಜನರಿಗೆ ಮಲಹೊರಿಸಿ ಅವರ ಸಾವುಗಳಿಗೆ ಕಾರಣವಾಗುತ್ತಿರುವ ವ್ಯವಸ್ಥೆಯ ಕುರಿತು ಮಾಧ್ಯಮಗಳು ಅದರಲ್ಲೂ ವೈ.ಜೆ.ರಾಜೇಂದ್ರ, ದಯಾನಂದ ಅವರ ತಂಡವು ಸಾಕ್ಷಾಧಾರಿತವಾಗಿ ಮಾಧ್ಯಮಗಳ ಮೂಲಕ ಬಯಲುಗೊಳಿಸಿದೊಡನೆಯೇ ಸಚಿವ ಸುರೇಶ್ ಕುಮಾರ್ರವರು ಈ ದಲಿತರ ಕಾಲೋನಿಗೆ ಭೇಟಿ ನೀಡಿ ಈ ವೃತ್ತಿಯಿಂದ ಮುಕ್ತಿಗೊಳಿಸುವ ಭರವಸೆ ನೀಡಿ ಈ ನಿಟ್ಟಿನಲ್ಲಿ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ತಾಕೀತು ಮಾಡಿದರು. ಮಲ ಹೊರುವ ಕಾಯಕ ನಡೆಸುತ್ತಿರುವವರಿಗೆ ನೇರ ನೇಮಕಾತಿಯ ಮೂಲಕ ದಿನಗೂಲಿ ಆಧಾರದಲ್ಲಿ ಕೋಲಾರ ಮತ್ತು ಕೆಜಿಎಫ್ ನಗರಸಭೆಗಳಲ್ಲಿ ಉದ್ಯೋಗ ನೀಡುವ ಜೊತೆಗೆ ಹಲವು ಸೌಲಭ್ಯಗಳನ್ನು ನೀಡುವ ಭರವಸೆಯನ್ನೂ ನೀಡಲಗಿತ್ತು. ನಂತರ ಮತ್ತೆ ೨೪.೦೬.೨೦೧೧ ರಂದು ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗದ ಸದಸ್ಯರಾದ ಶ್ರೀ. ಎಚ್.ಆರ್ ರೆಡ್ಡಿಯವರು ಸಹ ಕೆಜಿಎಫ್ಗೆ ಭೇಟಿ ನೀಡಿ ಎಲ್ಲಾ ಜಿಲ್ಲಾ ಹಾಗೂ ಸ್ಥಳೀಯ ಅಧಿಕಾರಿಗಳನ್ನು ಸ್ಥಳಕ್ಕೆ ಕರೆಸಿಕೊಂಡು ವಿಚಾರಣೆ ನಡೆಸಿ ವಿಷಯವನ್ನು ಮತ್ತಷ್ಟು ಗಂಭೀರವಾಗಿ ಪರಿಗಣಿಸಿ ಕೂಡಲೇ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳುವಂತೆ ನಿರ್ದೇಶಿಸಿದ್ದರಲ್ಲದೆ ಸರ್ಕಾರಕ್ಕೆ ಈ ಕುರಿತು ವಿವರಣೆ ನೀಡಲು ತಿಳಿಸಿದ್ದರು.
ಇಷ್ಟೆಲ್ಲಾ ಆದ ಮೇಲೂ ಸರ್ಕಾರ ಮತ್ತೆ ಉಲ್ಟಾ ರೋಪ್ ಹೊಡೆಯುತ್ತಿರುವುದು ನಿಚ್ಚಳವಾಗಿದೆ. ಈಗ ನೊಡಿ. ಆಗಸ್ಟ್ ೨೯ ರಂದು ಕೆಜಿಎಫ್ನ ಅಧ್ಯಕ್ಷ ಪಿ. ದಯಾನಂದ್ ಹಾಗೂ ಆಯುಕ್ತ ಬಾಲಚಂದರ್ ಸೇರಿ ಪತ್ರಿಕಾ ಗೋಷ್ಟಿಯೊಂದನ್ನು ನಡೆಸಿ ಕೆಜಿಎಫ್ನಲ್ಲಿ ಮಲಹೊರುವ ಪದ್ಧತಿ ಇದೆ ಎಂದು ಮಾಧ್ಯಮಗಳು ಹೇಳುತ್ತಿರುವುದೆಲ್ಲಾ ಸುಳ್ಳು ಎಂದೂ ಅವು ಅಮಾಯಕರನ್ನು ದಾರಿ ತಪ್ಪಿಸುತ್ತಿದ್ದಾರೆ ಎಂದೂ ತಿಳಿಸಿದ್ದಾರೆ. ದಾಷ್ಟ್ಯ ಎಂದರೆ ಇದೇ ಇರಬೇಕು. ೨೦೦೦ ದಿಂದ ೩೦೦೦ ಸಫಾಯಿ ಕರ್ಮಚಾರಿಗಳಿಗೆ ಪುನರ್ವಸತಿ ನೀಡಲಾಗಿದೆ ಎಂದೂ ತಿಳಿಸಿದ್ದಾರೆ. ಮಾತ್ರವಲ್ಲ ಮೊನ್ನೆ ಯಾವ ಸಫಾಯಿ ಕರ್ಮಾಚಾರಿಗಳನ್ನು ಸುರೇಶ್ ಕುಮಾರ್ ಮಾತನಾಡಿಸಿ ಧೈರ್ಯ ಹೇಳಿ ಬಂದಿದ್ದರೋ ಅವರೇ ಸರ್ಕಾರದ ಸಾಲವನ್ನು ನಿರಾಕರಿಸಿದ್ದಾರೆ ಎಂದು ಅವರ ಮೇಲೆಯೇ ಆರೋಪ ಹೊರಿಸಿದ್ದಾರೆ. ಆದರೆ "ಜನರನ್ನು ದಿಕ್ಕು ತಪ್ಪಿಸುತ್ತಿರುವುದು ಕೆಜಿಎಫ್ನ ಕಮಿಷನರ್ ಹಾಗೂ ಅಧ್ಯಕ್ಷರು. ಮಲಹೊರುವ ಪದ್ಧತಿ ಅಲ್ಲಿರುವುದಕ್ಕೆ ನಾವು ವಿಡಿಯೋ ಚಿತ್ರೀಕರಣ ಮಾಡಿರುವ ಸಾಕ್ಷಿಗಳನ್ನು ಒದಗಿಸಿದ್ದೇವೆ. ಈಗ ಈ ಅಧಿಕಾರಿಗಳು ಹೀಗೆ ಹೇಳಲು ಕಾರಣ ಪುರಸಭೆಯ ಗುತ್ತಿಗೆದಾರರ ಲಾಭಿಯೇ ಆಗಿದೆ. ಈಗ ಸಫಾಯಿ ಕರ್ಮಾಚಾರಿಗಳಿಗೆ ತಿಂಗಳಿಗೆ ೪೫೦೦ ರೂಪಾಯಿ ನೀಡಬೇಕೆಂದು ತೀರ್ಮಾನವಾಗಿರುವುದು ಗುತ್ತಿಗೆದಾರರಿಗೆ ಬಿಸಿತುಪ್ಪವಾಗಿ ಪರಿಣಮಿಸಿದೆ. ಈ ಲಾಭಿಗೆ ಅಧಿಕಾರಿಗಳು ತಲೆಬಾಗಿದ್ದಾರೆ ಅಷ್ಟೆ" ಎಂದು ಅಧಿಕಾರಿಗಳ ಇಬ್ಬಂದಿತನದ ಬಗ್ಗೆ ಕಿಡಿ ಕಾರುತ್ತಾರೆ ಈ ಕುರಿತು ಟಿಎಸ್ಐ ನೊಂದಿಗೆ ಮಾತನಾಡಿದ ಪಿಯುಸಿಎಲ್ನ ವೈ.ಜೆ.ರಾಜೇಂದ್ರ.
ಸಕಲೇಶಪುರು: ಮಲದ ಗುಂಡಿಯಿಂದೆದ್ದ ಕಹಿಸತ್ಯ
ಕಳೆದ ಜುಲೈ ೯ ರಂದು ಶನಿವಾರ ಮದ್ಯಾಹ್ನ ೧೨.೩೦ರ ಸುಮಾರಿಗೆ ಅನಿಷ್ಠ ಮಲಹೊರುವ ಪದ್ಧತಿಯಿಂದಾಗಿ ಹಾಸನ ಜಿಲ್ಲೆಯ ಸಕಲೇಶಪುರದ ಎರಡು ಜೀವಗಳು ಬಲಿಯಾದವು. ಒಬ್ಬ ಮಹದೇವ, ಮತ್ತೊಬ್ಬ ಅರ್ಜುನ. ಇಬ್ಬರೂ ದಿನಗೂಲಿ ಗುತ್ತಿಗೆ ಆಧಾರದಲ್ಲಿ ಸಕಲೇಶಪುರ ಪುರಸಭೆಯಲ್ಲಿ ಕೆಲಸ ಮಾಡುತ್ತಿದ್ದವರು. ಅಂದು ಕೆಂಚಮ್ಮನ ಹೊಸಕೋಟೆ ಬಳಿಯ ಪೂರ್ಣರಾಮ ಎಸ್ಟೇಟ್ನಲ್ಲಿ ಮಲದ ಗುಂಡಿ ಭರ್ತಿಯಾಗಿದೆ ಎಂದೂ ಅದನ್ನು ಸ್ವಚ್ಛಗೊಳಿಸಲು ಬರಬೇಕೆಂದೂ ಈ ಯುವಕರಿಗೆ ಎಸ್ಟೇಟ್ ಮಾಲೀಕರು ಹೇಳಿ ಕಳಿಸಿದ್ದರು. ಎಸ್ಟೇಟ್ನ ಮಾಲೀಕ ಸಂಜಯ್ ಗೌಡ ಅವರ ಅಣತಿಯಂತೆ ರೈಟರ್ ಹಾಗೂ ಮ್ಯಾನೇಜರ್ ಈ ಯುವಕರಿಗೆ ಕರೆಕಳಿಸಿದ್ದರು. ಮತ್ತಿಬ್ಬರು ಸೋದರ ಸಂಬಂಧಿಗಳಾದ ಮಂಜ ಮತ್ತು ಮುರುಗರೊಂದಿಗೆ ಅಲ್ಲಿಗೆ ಹೋದರು.
ಅದು ಆ ಕಾಫಿ ಎಸ್ಟೇಟ್ನ ಲೈನ್ ಮನೆಗಳಿಗಾಗಿ ನಿರ್ಮಿಸಲಾಗಿದ್ದ ಪಾಯಖಾನೆಯ ಗುಂಡಿಯಾಗಿತ್ತು. ಕೆಲವಾರು ವರ್ಷಗಳಲ್ಲಿ ಆ ಮನೆಗಳಲ್ಲಿ ಯಾರೂ ಇಲ್ಲದ್ದರಿಂದ ಆ ಪಾಯಖಾನೆಗಳನ್ನು ಯಾರೂ ಉಪಯೋಗಿಸುತ್ತಿರಲಿಲ್ಲ. ಇತ್ತೀಚೆಗೆ ಅಲ್ಲಿ ಕೆಲಸ ಮಾಡಲು ಕಾರ್ಮಿಕರು ಬಂದಿದ್ದರಿಂದ ಮತ್ತೆ ಅವುಗಳನ್ನು ಬಳಕೆ ಮಾಡತೊಡಗಿದ್ದರು. ಆದರೆ ಆ ಪಾಯಖಾನೆಗಳು ಕಟ್ಟಿಕೊಂಡಿದ್ದವು. ಪ್ರಾಯಶಃ ಗುಂಡಿ ಭರ್ತಿಯಾಗಿ ಹೀಗೆ ಕಟ್ಟಿಕೊಂಡಿವೆ ಎಂದು ಭಾವಿಸಿದ್ದ ಎಸ್ಟೇಟ್ನವರು ಈ ಯುವಕರನ್ನು ಕರೆಸಿದ್ದರು. ಗುಂಡಿಯನ್ನು ಖಾಲಿ ಮಾಡಲು ಈ ಯುವಕರು ಗುಂಡಿಯ ಮೇಲೆ ಮುಚ್ಚಿಕೊಂಡಿದ್ದ ಮಣ್ಣು ತೆಗೆದು ಚಪ್ಪಡಿ ಕಲ್ಲು ಸರಿಸಿ ನೋಡಿದಾಗ ನೋಡಿದಾಗ ಅವರಿಗೆ ತಿಳಿದು ಬಂದಿದ್ದೇನೆಂದರೆ ಅದು ಸಂಪೂರ್ಣ ಭರ್ತಿಯಾಗಿರಲಿಲ್ಲ. ಆದರೂ ಇರುವಷ್ಟು ಮಲವನ್ನು ತೆಗೆಯಲಿಕ್ಕಾಗಿ ಈ ತಂಡ ಅಣಿಯಾಗಿದೆ. ಆದರೆ ಜವರಾಯ ೧೦-೧೨ ಅಡಿ ಆಳದ ಆ ಗುಂಡಿಯಲ್ಲೇ ಅಡಗಿ ಕುಳಿತಿದ್ದ ಎಂದು ಈ ಯುವಕರಿಗೆ ಹೇಗೆ ತಿಳಿಯಬೇಕು?.
ಸಾಮಾನ್ಯವಾಗಿ ಗುಂಡಿಗಳು ಪೂರ್ತಿ ಭರ್ತಿಯಾದಾಗ ಅದರಲ್ಲಿ ಅನಿಲ ಬಿಡುಗಡೆಯಾಗಲು ಅವಕಾಶವಿರುವುದಿಲ್ಲ. ಆದರೆ ಇದು ಅರ್ಧ ತುಂಬಿ ಬಹಳ ದಿನಗಳ ಕಾಲ ಹಾಗೇ ಬಿಟ್ಟಿದ್ದ ಕಾರಣಕ್ಕೆ ವಿಷಾನಿಲಗಳು ಬಿಡುಗಡೆಯಾಗಿದ್ದು ಈ ನತದೃಷ್ಟ ಯುಕರಿಗೆ ತಿಳಿಯಲೇಇಲ್ಲ. ಆದರೆ ಸಾಮಾನ್ಯವಾಗಿ ಇಂತಹ ಗುಂಡಿಗಳಿಗೆ ಇಳಿಯುವಾಗ ಮೊದಲು ಒಂದು ದೀಪವನ್ನು ದಾರಕ್ಕೆ ಕಟ್ಟಿ ಕೆಳಗೆ ಬಿಟ್ಟು ಪರೀಕ್ಷಿಸುವ ಪರಿಪಾಠವಿದೆ. ಒಂದೊಮ್ಮೆ ಅದು ಭಗ್ ಎಂದು ಹೊತ್ತಿಕೊಂಡರೆ ಅಪಾಯದ ಮುನ್ಸೂಚನೆ ಅರಿತು ಒಂದೆರಡು ದಿನ ಗುಂಡಿಯ ಬಾಯಿ ತೆರೆದಿಟ್ಟು ಆಮೇಲೆ ಖಾಲಿ ಮಾಡುತ್ತಾರೆ. ಈ ಕೆಲಸ ಮಾಡುವಾಗ ಕುಡಿದಿರಲೇಬೇಕಾದದ್ದು ಕಡ್ಡಾಯವಾದದ್ದರಿಂದ ಅಂದೂ ಸಹ ಕುಡಿದಿದ್ದ ಈ ಯುವಕರಿಗೆ ಇವ್ಯಾವುದೂ ತಲೆಗೆ ಹೊಳೆಯಲೇ ಇಲ್ಲ. ಹೇಗೂ ಸ್ವಲ್ಪ ಮಲ ತಳದಲ್ಲಿ ಇರುವುದರಿಂದ ಅದನ್ನು ಖಾಲಿ ಮಾಡಿ ಬಿಡೋಣ ಎಂದುಕೊಂಡಿದ್ದಾರೆ. ಹೀಗೆ ಹಿಂದೆ ಮುಂದೆ ಯೋಚಿಸದೇ ಮೊದಲು ಗುಂಡಿಯೊಳಕ್ಕೆ ಇಳಿದ ಮಹದೇವ ಕ್ಷಣಾರ್ಧದಲ್ಲಿ ಇದ್ದಕ್ಕಿದ್ದಂತೆ ವಿಲವಿಲ ಒದ್ದಾಡ ತೊಡಗಿದ್ದಾನೆ. ಇದನ್ನು ನೋಡಿದ ಅರ್ಜುನ ಆತನನ್ನು ರಕ್ಷಿಸಲು ತಾನೂ ಕೂಡಲೇ ಗುಂಡಿಗೆ ಇಳಿದಿದ್ದಾನೆ. ಒಳಗಿನ ವಿಷಾನಿಲ ಅದೆಷ್ಟು ಪ್ರಭಾವಶಾಲಿಯಾಗಿತ್ತೆಂದರೆ ಕೆಲವೇ ಸೆಕೆಂಡುಗಳಲ್ಲಿ ಇಬ್ಬರ ಪ್ರಾಣಪಕ್ಷಿ ಹಾರಿ ಹೋಗಿದೆ. ಆಗ ಪರಿಸ್ಥಿತಿಯ ಗಂಭೀರತೆ ಮುರುಗ ಹಾಗೂ ಮಂಜರಿಗೆ ಅರ್ಥವಾಗಿದೆ. ಆದರೆ ಹತ್ತಿರ ಹೋದ ಮುರುಗನ ದೇಹದೊಳಕ್ಕೂ ವಿಷಕಾರಿ ಅನಿಲ ಪ್ರವೇಶಿಸಿ ಪ್ರಜ್ಞೆ ತಪ್ಪುವಂತಾಗಿದೆ. ಮಂಜ, ಮುರುಗ ಇಬ್ಬರೂ ಜೋರಾಗಿ ಕೂಗಿಕೊಂಡಿದ್ದಾರೆ. ಆಗ ಅಲ್ಲಿ ಜನರು ಸೇರಿ ಇಬ್ಬರ ಕಳೇಬರಗಳನ್ನು ಗುಂಡಿಗಳಿಂದ ಹುಷಾರಾಗಿ ಹೊರತೆಗೆದಿದ್ದಾರೆ.
ಮಹದೇವ ಹಾಗೂ ಅರ್ಜುನ ಇಬ್ಬರೂ ತಂದೆ ಇಲ್ಲದ ಮಕ್ಕಳು. ಮಹದೇವನಿಗೆ ಇನ್ನೂ ಇಪ್ಪತ್ತೈದು ವರ್ಷವಾಗಿತ್ತು. ಮೂವರು ಮಕ್ಕಳಿದ್ದಾರೆ. ಇಬ್ಬರು ಗಂಡು, ಒಬ್ಬ ಹೆಣ್ಣುಮಗಳು. ಅರ್ಜುನನಿಗೆ ಇನ್ನೂ ಮದುವೆಯಾಗಿಲ್ಲ. ಬೆಳೆದು ನಿಂತ ತಂಗಿಯಿದ್ದಾರೆ.
ಈ ಕೆಲಸ ಮಾಡಿಸುವುದು ಕಾನೂನು ಬಾಹಿರವಾದ್ದರಿಂದ ತಮ್ಮ ಮೇಲೆ ಯಾವುದೇ ಕಾನೂನು ಕ್ರಮಗಳಿಗೆ ಕುಟುಂಬಗಳು ಮುಂದಾಗದಿರಲಿ ಎಂದು ಎಸ್ಟೇಟ್ ಮಾಲೀಕರು ಕೆಲ ಸುಳ್ಳು ಆಶ್ವಾಸನೆಗಳನ್ನು ಅಂದು ನೀಡಿದ್ದರು. ಕಾರಣವನ್ನು ಮುಚ್ಚಿಡಲು ನಡೆಸಿದ ಅವರ ಪ್ರಯತ್ನಗಳೆಲ್ಲವೂ ಈಗ ವಿಫಲ ಗೊಂಡಿವೆ. ಘಟನೆಯ ಕುರಿತು ಸತ್ಯಶೋಧನೆ ವರದಿ ಬಿಡುಗಡೆ ಮಾಡಿದ ಪಿ.ಯು.ಸಿ.ಎಲ್ ಈ ಘಟನೆಯ ಬಗ್ಗೆ ಮಾಹಿತಿಯೇ ಇರದಿದ್ದ ಜಿಲ್ಲಾಧಿಕಾರಿ ಕೆ.ಜಿ.ಜಗದೀಶ್ ಅವರಿಗೆ ಮನವರಿಕೆ ಮಾಡಿದೆ. ನಂತರದಲ್ಲಿ ಒತ್ತಡ ಹೆಚ್ಚಿದ ಕಾರಣಕ್ಕಾಗಿ ಆಲೂರು ಪೋಲೀಸರು ಎಸ್ಸಿ ಎಸ್ ಟಿ ದೌರ್ಜನ್ಯ ತಡೆ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಈಗ ಎಸ್ಟೇಟ್ ಮಾಲೀಕ ಸಂಜಯ್ ಗೌಡ ಬಂಧನದಿಂದ ತಪ್ಪಿಸಿಕೊಳ್ಳಲು ತಲೆಮರೆಸಿಕೊಂಡಿದ್ದಾರೆ. ಮರಣೋತ್ತರ ಪರೀಕ್ಷೆಯಲ್ಲಿ ಈ ಸಾವುಗಳು ಆಘಾತ ಹಾಗೂ ರಕ್ತ ಹೆಪ್ಪುಗಟ್ಟುವಿಕೆಯಿಂದ ಈ ಸಾವುಗಳು ಉಂಟಾಗಿರುವುದನ್ನು ದಾಖಲಿಸಲಾಗಿದೆ. ಸಕಲೇಶಪುರದಲ್ಲಿ ಮಲದ ಗುಂಡಿಗಳಿಂದ ಮಲವನ್ನು ತೆಗೆಯುವ ಹೀರು ಯಂತ್ರವೊಂದು ಕಾರ್ಯಾರಂಭ ಮಾಡಿ ಇನ್ನೂ ಹದಿನೈದು ದಿನ ತುಂಬುವುದರೊಳಗೇ ಹೀಗೆ ಮಲದ ಗುಂಡಿಯಲ್ಲಿ ಇಬ್ಬರು ಯುವಕರು ಪ್ರಾಣ ಕಳೆದುಕೊಳ್ಳುವುದು ಎಂತಹ ವಿಪರ್ಯಾಸ ನೋಡಿ. ಆಗಸ್ಟ್ ೩೦ ರಂದು ಹಾಸನ ಜಿಲ್ಲಾಧಿಕಾರಿ ಜಗದೀಶ್ ಮತ್ತೊಮ್ಮೆ ಸಭೆ ನಡೆಸಿ, ತಾವು ಈ ಘಟನೆಯಲ್ಲಿ ನೊಂದ ಕುಟುಂಬಗಳಿಗೆ ಜಿಲ್ಲಾಡಳಿತ ನೆರವಾಗುವುದಾಗಿ ತಿಳಿಸಿದ್ದಾರೆ. ಹಾಸನ ಜಿಲ್ಲೆಯಲ್ಲಿ ಮಲಹೊರುವ ಪದ್ಧತಿ ಇಲ್ಲ ಎನ್ನುವುದು ಅಲ್ಲಿನ ಅಧಿಕಾರಿಗಳ ಇದುವರೆಗಿನ ತಿಳಿವಳಿಕೆಯಾಗಿತ್ತು. ಇದು ಇಲ್ಲಿನ ಅಧಿಕಾರಿಗಳ ಮಾತುಗಳಿಂದ ತಿಳಿಯುತ್ತದೆ. ಆದರೆ ಮಲದ ಗುಂಡಿಯಲ್ಲಿ ಬಲಿಯಾದ ಮಹದೇವ ಹಾಗೂ ಅರ್ಜುನರ ಸಾವುಗಳು ಕಹಿ ಸತ್ಯವನ್ನು ಹೊರಗೆಡವಿದೆ. ಇದು ಕೇವಲ ಹಾಸನದ ಪರಿಸ್ಥಿತಿಯೇನಲ್ಲ. ಎಲ್ಲೆಡೆ ನತದೃಷ್ಟ ಮಹದೇವ, ಅರ್ಜುನರಿದ್ದಾರೆ, ಮುರುಗ ಮಂಜ, ಪ್ರಸಾದ್, ಮಾರ್ಥಮ್ಮ ಇದ್ದಾರೆ. ಆದರೆ ವಾಸ್ತವವನ್ನು ಒಪ್ಪಿಕೊಳ್ಳದ ನಮ್ಮ ನಾಗರಿಕ ಸಮಾಜ ಅವರನ್ನು ಮನುಷ್ಯರಂತೆ ನೋಡಿ ತಮ್ಮ ಅಳಲನ್ನು ಹೇಳಿಕೊಳ್ಳಲು ಅವಕಾಶವನ್ನಾದರೂ ಎಲ್ಲಿ ನೀಡಿದೆ? ಹೇಳಿಕೊಂಡರೂ ಅದಕ್ಕೆ ಸ್ಪಂದಿಸುವ ತಾಳ್ಮೆಯಾಗಲೀ ಅವರನ್ನು ದಾರುಣ ಸ್ಥಿತಿಯಿಂದ ಹೊರತರಬೇಕೆಂಬ ಇಚ್ಚಾಶಕ್ತಿಯೇ ನಮ್ಮ ವ್ಯವಸ್ಥೆಯಲ್ಲಿಲ್ಲ. ಇಂದು ಮಲಹೊರುವ ಪದ್ಧತಿ ರಾಜ್ಯದಲ್ಲಿ ಇಲ್ಲವೇ ಇಲ್ಲ ಎಂದು ಕಾಗದದ ಮೇಲೆ ಸಾಧಿಸಲು ಏನೇನೆಲ್ಲಾ ಪ್ರಯತ್ನ ಪಡುತ್ತಿರುವ ನಮ್ಮ ಅಧಿಕಾರಿಗಳಿಗೆ, ಸರ್ಕಾರಗಳಿಗೆ ಈ ಕೆಲಸ ಮಾಡುವವರ ಬಗ್ಗೆ ಇರುವ ಅನಾಧರ ಎಂಥದೆಂಬುದನ್ನು ಇಂತಹ ಘಟನೆಗಳು ತೋರಿಸುತ್ತವೆ. ಹೀಗಾಗಿಯೇ ಅಲ್ಲವೇ ಸ್ವತಂತ್ರಗೊಂಡ ೬೪ ವರ್ಷಗಳ ನಂತರವೂ ಈ ಹೊಲಸು ಪದ್ಧತಿ ದಲಿತರ ಬದುಕನ್ನು ನರಕ ಸದೃಶಗೊಳಿಸುತ್ತಿರುವುದು?
ಕೃಪೆ- ದ ಸಂಡೆ ಇಂಡಿಯನ್ (sept5-sept18)
(ಈ ಲೇಖನವು ದ ಸಂಡೇ ಇಂಡಿಯನ್ ಪತ್ರಿಕೆಯ ಈ ವಾರದ ಸಂಚಿಕೆಯಲ್ಲಿ ಪ್ರಕಟಗೊಂಡಿದೆ. ಇದರೊಂದಿಗೆ ಮಾನವ ಹಕ್ಕುಗಳ ಆಯೋಗದ ಡಾ.ನ್ಯಾ. ಎಸ್. ಆರ್ ನಾಯಕ್ ಹಾಗೂ ಹಿರಿಯ ನ್ಯಾಯವಾದಿ ಪ್ರೊ. ರವಿವರ್ಮ ಕುಮಾರ್ ರ ಲೇಖನಗಳೂ ಇವೆ. ಓದಲು ಮನವಿ- ಹರ್ಷ)
6 ಕಾಮೆಂಟ್ಗಳು:
It is terrible thing that this is happening in our so called tech savvy state. I dont know what our three major parties have to say about this. Shame!
YES REALLY ASHAMED.
inthaha barahagalnnu dayavittu bareyabedi....... namma thyajyavannu naave shuddavaagisabeku...mala horuvudu anthaha heenaayavendu yaake thilidukondiddeera...... naavu maadiruva galeejannu naavallade praanigalu swaccha maaduvudilla....idarinda aada kedukaadaaru yenu mr.harsha... thamma baravanigege utthamavaada vichaaravannu aarisikondu bareyuva honegaarikeyannu dayavittu mareya bedi.....yaaro obba corporater hogi ondu sala guddaliyannu hididu ondu kshana charandige adannu bittu chaayagrahakanige pose kottare adannu maha samaaja seve yendu baritheera.... nimmanthahavaru idannu amaanaveeya yennuvudara badalu samaaja seve yendu yeke thiliyuvudilla.... naachige gedaaguva vishayagallanu barvanige yendu thorisikolla bedi mr.harsha
bahusha nithya the stupid boy intaha samaja seve ge tayaraadante kanuttide.
ಗೆಳೆಯ ನಿತ್ಯ, ನೀವು ಹೇಳೋದು ನಿಜ. ಇದನ್ನು ಅಸಹ್ ಯೆಂದು ನೋಡಬೇಕಿಲ್ಲ... ಸಮಸ್ಯೆ ಅದಲ್ಲ. ಆದರೆ ಈ ದೇಶದಲ್ಲಿ ಮಲಹೊರುವ ಕೆಲಸ ಕೇವಲ ದಲಿತ ಜಾತಿಗಳಿಗೇ ಏಕೆ ಮೀಸಲಾಗಿದೆ? ಈ ಕೆಲಸ ಮಾಡುವವರ ಬದುಕು ಯಾಕೆ ದಾರುಣವಾಗಿದೆ? ಇವರು ಹತ್ತಿರ ಬಂದಾಗ ಅವರನ್ನು ಉಳಿದೆಲ್ಲ ಮನುಷ್ಯರಂತೆ ಕಾಣಲು ಏನು ಮಾಡ ಬೇಕು? ನಿಮ್ಮೂರಲ್ಲೇ ಈ ಜನರು ಬಂದರೆ ಎಷ್ಟು ಜನ ಸಲೀಸಾಗಿ ಒಳಗೆ ಬಿಟ್ಟುಕೊಂಡು ಒಳಮನೆಯಲ್ಲಿ ಊಟ ಹಾಕುತ್ತಾರೆ? ಅಂತಹ ಪರಿಸ್ಥಿತಿ ಇಲ್ಲವಾದರೆ ಯಾಕಿಲ್ಲ? ಸ್ವಲ್ಪ ಗಂಭೀರವಾಗಿ ಯೋಚಿಸಬೇಕೆಲ್ಲವೇ? ನಮ್ಮದು ಜಾತಿ ಗ್ರಸ್ತ ಸಮಾಜ ಸ್ವಾಮಿ... ನೀವು ಹೇಳಿದಂತೆಯೇ ಗಾಂಧೀಜಿ ಕೂಡಾ ಹೇಳಿದ್ದರು. ಆದರೆ ಅಂಬೇಡ್ಕರ್ ಅವರು ಗಾಂಧಿಜೀಯ ಾ ನಿಲುವನ್ನು ಖಂಡತುಂಡವಾಗಿ ಖಂಡಿಸಿದ್ದರು. ಯಾಕೆಂದರೆ ಅದರ ಮೂಲಕ ದಲಿತರೇ ಮಾಡುವ ೀ ಕೆಲಸಕ್ಕೆ ಬಹಳ ಗೌರವ ತಂದುಕೊಟ್ಟು ದಲಿತರನ್ನು ಅದೇ ಕೆಲಸದಲ್ಲೇ ಉಳಿಸುವ ಹುನ್ನಾರ ಿದು ಎಂಬುದು ಅಂಬೇಡ್ಕರ್ ಅವರ ಆತಂಕವಾಗಿತ್ತು. ನಮಗೆ ಹೊರಗೆ ನಿಂತು ಆದರ್ಶವಾಗಿ ಮಾತನಾಡಲು ಬಹಳ ಸುಲಭ. ಆದರೆ ಹೆಜ್ಜೆ ಹೆಜ್ಜೆಗೂ ಅವಮಾನದಲ್ಲಿ ನಲುಗುತ್ತಿರುವ, ಹಸಿವಿನಿಂದ ಸಾಯುತ್ತಿರುವ ಾ ಸಮುದಾಯಗಳ ೊಳಗ ೆನಿಂತು ಯೋಚಿಸುವುದು ಅಷ್ಟು ಸುಲಭವಲ್ಲ..
ಸ್ವತಂತ್ರ ಬಂದು, ಮೀಸಲಾತಿ ಜಾರಿಯಾಗಿ ಎಷ್ಟೋ ದಲಿತ ಅಧಿಕಾರಿಗಳು ಉನ್ನತ ಸ್ಥಾನ ಮಾನ ದಲ್ಲಿ ಇದ್ದಾರೆ . ಆದರೆ ಅವರ್ಯಾರು ಈ ಬಗ್ಗೆ ಚಿಂತಿಸುತ್ತಿಲ್ಲ . ಇದು ಪ್ರಜಾ ಪ್ರಭುತ್ವದ ದುರಂತ. ತಮ್ಮ ಸಮುದಾಯವನ್ನು ಇಂಥಹ ಹೀನಾಯ ವೃತ್ತಿ ಯಿಂದ ಹೊರತರಬೇಕು ಎಂದು ಎಷ್ಟು ಜನ ಅಧಿಕಾರಿಗಳು ಚಿಂತಿಸುತ್ತಿದ್ದಾರೆ .. ನಿಮ್ಮ ಬರಹ ವಾಸ್ತವಿಕ ಸತ್ಯಗಳನ್ನು ತೆರೆದಿಟ್ಟಿದೆ ...ಧನ್ಯವಾದಗಳು ಹರ್ಷರವರೆ ...
ಕಾಮೆಂಟ್ ಪೋಸ್ಟ್ ಮಾಡಿ