ಆಗಸ್ಟ್ 05, 2011

ನಮ್ಮ ಹಳ್ಳಿಗಳು ನಿವೃತ್ತಿ ಪಡೆದವರ ಆಶ್ರಮಗಳಂತಾಗಿಬಿಟ್ಟಿವೆ :ಡಾ. ಎಚ್. ಗಣಪತಿಯಪ್ಪ


ನಮ್ಮ ಹಳ್ಳಿಗಳು ನಿವೃತ್ತಿ ಪಡೆದವರ ಆಶ್ರಮಗಳಂತಾಗಿಬಿಟ್ಟಿವೆ ಡಾ. ಎಚ್. ಗಣಪತಿಯಪ್ಪ






ದೇಶದ ಸ್ವಾತಂತ್ರ್ಯಕ್ಕಾಗಿ ನಡೆದ ಆಂದೋಲನದಲ್ಲಿ ಭಾಗವಹಿಸಿ ಜೈಲುವಾಸವನ್ನೂ ಅನುಭವಿಸಿನಂತರ ೫೦ರ ದಶಕದಲ್ಲಿ ಭೂಮಾಲೀಕರಿಂದ ರೈತಾಪಿಯ ಸ್ವಾತಂತ್ರ್ಯಕ್ಕಾಗಿ ಟೊಂಕ ಕಟ್ಟಿ ನಿಂತು ಚಾರಿತ್ರಿಕ ಕಾಗೋಡು ರೈತ ಚಳವಳಿಯ ಮುಂದಾಳತ್ವ ವಹಿಸಿದ್ದವರು ಹಿರಿಯ ಗಾಂಧೀವಾದಿ ಡಾ.ಎಚ್. ಗಣಪತಿಯಪ್ಪನವರು. ಅವರು ತಮ್ಮ ಈ ೮೮ನೆಯ ವಯಸ್ಸಿನಲ್ಲೂ ವೈಚಾರಿಕ ಎಚ್ಚರಿಕೆಯಲ್ಲಿ ಬದುಕುತ್ತಿರುವವರು. ಇವರೊಂದಿಗೆ ಹರ್ಷಕುಮಾರ್ ಕುಗ್ವೆ ನಡೆಸಿದ ಸಂದರ್ಶನ. 

ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಿದ ನಿಮಗೆ ಇಂದು ನಮ್ಮ ದೇಶ ಪ್ರಗತಿಯ ಹಂತದಲ್ಲಿದೆ ಅನ್ನಿಸಿದೆಯೇ?
            -ಎಲ್ಲಿಯ ಪ್ರಗತಿಒಂದರಲ್ಲಿ ಪ್ರಗತಿ ಇದ್ದರೆ ಮತ್ತೊಂದು ಊನಗೊಂಡಿರುವ ಸ್ಥಿತಿ ನಮ್ಮದು.  ನಾವು ಅಂದು ಹೊಂದಿದ್ದ ನಿರೀಕ್ಷೆಯ ಮಟ್ಟದಲ್ಲಿ ಯಾವುದೂ ಇಲ್ಲ. ದೇಶದ ತಳಹದಿಯಾಗಿರುವ ಹಳ್ಳಿಗಳೇ ಸೊರಗಿ ಹೋಗ್ತಾ ಇವೆ. ಇಂದು ನಮ್ಮ ಹಳ್ಳಿಗಳು ನಿವೃತ್ತಿ ಪಡೆದವರ ಆಶ್ರಮಗಳಂತಾಗಿಬಿಟ್ಟಿವೆ. ಹಳ್ಳಿಗಳ ಪ್ರಗತಿಯನ್ನು ಬಿಟ್ಟು ದೇಶದ ಪ್ರಗತಿಯನ್ನು ಕಲ್ಪಿಸಿಕೊಳ್ಳಲು ಸಾಧ್ಯವೇ ಇಲ್ಲ. ನಾವು ಮಹಾತ್ಮಾ ಗಾಂಧೀಜೀಯವರ ಗ್ರಾಮ ಸ್ವರಾಜ್ಯ ಕಲ್ಪನೆಯನ್ನು ಅರ್ಥ ಮಾಡಿಕೊಂಡು ಅದನ್ನು ಜಾರಿಗೆ ತರಲು ತುಂಬಾ ಹಿಂದೆ ಬಿದ್ದಿದೀವಿ ಅನ್ನಿಸಿದೆ. ಭಾರತದ ಅಭಿವೃದ್ಧಿ ಮಾಡುವಾಗ ದೇಶದ ಮೂಲ ಉದ್ಯೋಗಗಳಾದ ವ್ಯವಸಾಯನೇಕಾರಿಕೆಗೃಹ ಕೈಗಾರಿಕೆಗಳನ್ನು ಅಲುಗಾಡಿಸಬಾರದಿತ್ತು. ಅವನ್ನು ಅಲ್ಲಲ್ಲೇ ಗಟ್ಟಿಗೊಳಿಸಬೇಕಿತ್ತು. ಎಲ್ಲಾ ಉದ್ಯೋಗ ಪಟ್ಟಣಗಳಿಗೆ ಹೋಗಿಟ್ಟಿತು. ಹಾಗಾಗದಂತೆ ನೋಡಿಕೊಳ್ಳಬೇಕಿತ್ತು. ಅಂದು ಯಾವ ಪ್ರಮಾಣದಲ್ಲಿ ಬಡತನವಿತ್ತೋ ಇಂದೂ ಅದೇ ಪ್ರಮಾಣದಲ್ಲಿದೆ. ಯಾಕೆ ಅಂತ ಕೇಳಿಕೊಂಡಿಲ್ಲ. ಮೊದಲು ಹಳ್ಳಿಗಳನ್ನು ಕಟ್ಟುವ ಬದಲು ಡಿಲ್ಲಿ ಕಟ್ಟಲು ಹೋಗಿದ್ದಕ್ಕಲ್ಲವಾ?


*ನೀವು ಚಾರಿತ್ರಿಕ ಕಾಗೋಡು ಸತ್ಯಾಗ್ರಹದ ಮುಂದಾಳತ್ವ ವಹಿಸಿದ್ದಿರಿ. ಇದಕ್ಕೆ ನಿಮಗೆ ಅಂದು ಸಿಕ್ಕಿದ ಪ್ರೇರಣೆ ಏನಾಗಿತ್ತು?
            ಸ್ವಾತಂತ್ರ್ಯ ಎಂದರೆ ಅದು ಈ ದೇಶದ ರೈತರ ಸ್ವಾತಂತ್ರ್ಯ ಅನ್ನುವುದು ನನ್ನ ಬಲವಾದ ನಂಬಿಕೆ. ಆದರೆ ಸ್ವಾತಂತ್ರ್ಯ ಪಡೆದು ದಶಕವಾದ ಮೇಲೂ ನಮ್ಮ ಭಾಗದಲ್ಲಿ ಭೂಮಾಲೀಕತ್ವ ಹಾಗೇ ಇತ್ತು. ಮುಖ್ಯವಾಗಿ ಉಳುವವನೇ ಹೊಲದೊಡೆಯನಾಗಬೇಕು ಎಂಬುದು ನನ್ನ ತಿಳಿವಳಿಕೆಯಲ್ಲಿ ಮೊದಲಿಂದಲೂ ಇತ್ತು. ನಾನೂ ರೈತಾಪಿ ಕುಟುಂಬದಿಂದಲೇ ಬಂದು ಗೇಳಿದಾರ ಕುಟುಂಬದಲ್ಲಿದ್ದವನು. ಅಂದು ಧ್ವನಿಯಿಲ್ಲದೆ ಇದ್ದ ನಮ್ಮ ಹಳ್ಳಿಗಳ ರೈತರಿಗೆ ನಮ್ಮಂತ ವಿದ್ಯಾವಂತರೇ ಜಾಗೃತಿ ಮೂಡಿಸಿ ಹೋರಾಟಕ್ಕೆ ಹುರಿದುಂಬಿಸಿವುದು ನಮ್ಮ ಕರ್ತವ್ಯವೆಂಬ ಅರಿವೂ ಇತ್ತು. ಹೇಗೂ ಗಾಂಧೀಜೀಯವರ ಆದರ್ಶಗಳು ಇದ್ದಿದ್ದರಿಂದ ಆ ಹೋರಾಟ ನಡೆಯಿತು.

ಭೂಸುಧಾರಣೆ ತೃಪ್ತಿಕರವಾಗಿ ನಡೆದಿದೆಯೇ?
ನಾವು ಚಳವಳಿ ನಡೆಸಿ ಮೂರು ದಶಕಗಳು ಕಾಯಬೇಕಾಯ್ತು ಅದರ ಪ್ರತಿಫಲವನ್ನು ನಮ್ಮ ಜನತೆ ನೋಡಲು. ಆದರೆ ಭೂಮಿ ಸಮಸ್ಯೆ ಇಂದು ಬೇರೆಯದೇ ರೀತಿಯಲ್ಲಿ ನಮ್ಮ ರೈತರಿಗೆ ಎದುರಾಗಿರುವುದನ್ನೂ ನಾವು ಗಮನಿಸಬೇಕು. ಈ ಹಿಂದೆ ಒಂದು ಕುಟುಂಬದಲ್ಲಿ ಐದು ಜನರಿದ್ದರೆ ಇಂದು ಆ ಸಂಖ್ಯೆ ೨೫ ಆಗಿದೆ. ಭೂಹಿಡುವಳಿಗಳು ಸಂಕುಚಿತವಾಗಿತ್ತಿವೆ. ಆ ಭೂಮಿ ಇಂದು ಸಾಕಾಗುವುದಿಲ್ಲ. ಆಗ ಪಕ್ಕದ ಭೂಮಿಯನ್ನು ಉಳುಮೆ ಮಾಡುತ್ತಾರೆ. ಹೀಗೆ ಕಾನೂನನ್ನು ಮೀರಿಯಾದರೂ ಬಗರ್‌ಹುಕುಂ ಸಾಗುವಳಿ ಮಾಡುವುದು ಜನರಿಗೆ ಅನಿವಾರ್ಯವಾಗಿದೆ. ಆದರೆ ಸರ್ಕಾರಹಾಗೂ ಕುರ್ಚಿಯ ಮೇಲೆ ಕುಳಿತ ಅಧಿಕಾರಿಗಳು ಕಾಗದದ ಮೇಲೆ ಗರೆ ಎಳೆದು,ಒತ್ತುವರಿ ಮಾಡಿದ ಜನರನ್ನು ಅವರನ್ನು ಅಪರಾಧಿಗಳಾಗಿ ನೋಡುತ್ತಿದ್ದಾರೆ. ಅವರು ಹೇಗೆ ಅಪರಾಧಿಗಳಾಗುತ್ತಾರೆಕುರ್ಚಿ ಮೇಲೆ ಕುಳಿತುಕೊಂಡು ಜನರಿಗೆ ನೋಟೀಸು ಕುಡುತ್ತಾರಲ್ಲಾ ಅಧಿಕಾರಿಗಳು ಅವರು ಇದಕ್ಕೆ ಜವಾಬು ಕೊಡಲಿ.

ಈ ಸಮಸ್ಯೆಗಳನ್ನೆಲ್ಲಾ ಗ್ರಹಿಸಲು ನಮ್ಮ ಸರ್ಕಾರಗಳಿಗೆ ಏಕೆ ಆಗುತ್ತಿಲ್ಲ?
ಏಕೆಂದರೆ ಆಳುತ್ತಿರುವವರಿಗೆ ಸೇವಾ ಮನೋಭಾವನೆ ಇಲ್ಲ. ಅವರು ತಂತಮ್ಮ ಸೇವೆಯಲ್ಲೇ ಮುಂದಾಗಿದ್ದಾರೆಯೇ ವಿನಃ ತ್ಯಾಗ ಮನೋಭಾವನೆಯಲ್ಲಿ ಕೆಲಸ ಮಾಡುತ್ತಿಲ್ಲ. ಇದರಿಂದಲೇ ನಮ್ಮ ಜನರನ್ನು ಕಾಡುತ್ತಿರುವ ಯಾವ ಸಮಸ್ಯೆಗಳೂ ವಿಧಾನಸೌಧದಲ್ಲಿ ಕುಳಿತವರಿಗಾಗಲೀಕಛೇರಿಗಳಲ್ಲಿ ಕುಳಿತವರಿಗಾಗಲೀ ಕಾಣಿಸದಂತಾಗಿರುವುದು.  ಐಎಎಸ್ ಪಾಸು ಮಾಡಿದವರು ನಾವು ಜನರನ್ನು ಆಳೋಕೆ ಹುಟ್ಟಿರುವುದು ಎಂದು ಬಂದು ಆಳುವುದೇ ಎಲ್ಲಾ ಅನಾಹುತಗಳಿಗೆ ಕಾರಣವಾಗಿದೆ. ನಾವು ಆಳುವ ಪರೀಕ್ಷೆ ಪಾಸು ಮಾಡಿಕೊಂಡು ಬಂದೇ ಸೀಟಿನಲ್ಲಿ ಕೂತಿದೀವಿ ಎಂದು ಬಂದು ಆಳುತ್ತಾರಲ್ಲಾ... ಈ ಐಎಎಸ್‌ನವರ ಕಾಲದಲ್ಲೇ ದೇಶ ಹಾಳಾಗಿ ಹೋಯ್ತು ಎನ್ನುವುದು ನನ್ನ ಸ್ಪಷ್ಟ ಭಾವನೆ. ಇದು ಜನಸಾಮಾನ್ಯರರೈತರ ಅಧಿಕಾರವಾಗಬೇಕೇ ಹೊರತು ಐಎಎಸ್ ಅಧಿಕಾರ ಆಗಬಾರದು.

ಸ್ವತಂತ್ರ ಭಾರತದಲ್ಲಿ ಜನರನ್ನು ಕಾಡುತ್ತಿರುವ ಪ್ರಧಾನ ಸಮಸ್ಯೆ ಯಾವುದು ಎಂದು ನಿಮ್ಮ ಭಾವನೆ?
ಜನರನ್ನು ಆವರಿಸಿಕೊಂಡಿರುವ ಅಜ್ಞಾನ ಮೂಢನಂಬಿಕೆಗಳೇ ಪ್ರಧಾನ ಸಮಸ್ಯೆ ಎನ್ನುವವವನು ನಾನು. ಈ ಜನರಿಗೆ ವಿಚಾರವಮತಿಕೆಯೇ ಇಲ್ಲವೇನೋ. ಈ ದೇಶದಲ್ಲಿ ಕಂಡಿದ್ದನ್ನೆಲ್ಲಾ ದೇವರು ಎಂದು ಪೂಜೆ ಮಾಡುತ್ತಾರೆ. ಒಂದು ಕಲ್ಲಿನ ಮೇಲೆ ಕುಂಕುಮ ಸುರಿದರೂ ಅದಕ್ಕೆ ಪೂಜೆ ಮಾಡುತ್ತಾರೆಮರದಲ್ಲಿ ದೇವರಿದೆ ಎಂದರೂ ಅದಕ್ಕೆ ಪೂಜೆ ಊದುಬತ್ತಿ ಹಚ್ಚಿ ಹರಕೆ ಕಟ್ಟುತ್ತಾರೆ. ಯಾವುದನ್ನೂ ವಿಚಾರ ಮಾಡದೇ ಒಪ್ಪೊಕೊಂಡು ಬಿಡುತ್ತಾಲ್ಲ. ಇದು ನಮ್ಮ ದೇಶದಲ್ಲಿ ಬಹುಸಂಖ್ಯಾತರ ಮೇಲೆ ಬ್ರಾಹ್ಮಣತ್ವ ಸವಾರಿ ಮಾಡುತ್ತಿರುವ ರೀತಿ. ಜನರಲ್ಲಿ ವೈಜ್ಞಾನಿಕ ಚಿಂತನೆ ಎನ್ನುವುದೇ ಇಲ್ಲ. ಈ ಮೂಢನಂಬಿಕೆಯನ್ನು ಹೋಗಲಾಡಿಸುವ ಸಂಸ್ಥೆಗಳೂ ನನಗೆ ಕಾಣುವುದಿಲ್ಲ.

ನಮ್ಮ ದೇಶದಲ್ಲಿ ಸಾಮಾಜಿಕ ಪ್ರಗತಿಯೇ ಆಗಿಲ್ಲವೇ?
ಯಾವ ಸಾಮಾಜಿಕ ಪ್ರಗತಿಈ ಕಾಲದಲ್ಲೂ ಜನರು ಜಾತಿ ಪದ್ಧತಿಯ ಅಡಿಗೇ ನರಳುತ್ತಿದ್ದಾರೆ. ಇದರಲ್ಲಿ ಚಾತುರ್ವರ್ಣ ವ್ಯವಸ್ಥೆ ಎನ್ನುವುದು ಗಡ್ಡೆ ರೂಪದಲ್ಲಿ ಕೆಲಸ ಮಾಡುತ್ತಾ ಬಂದಿದೆ. ಮೇಲಿನ ಎಲ್ಲದನ್ನೂ ಅದೇ ನಿರ್ಧಾರ ಮಾಡುತ್ತೆ. ಏನೂ ಬರದಿರುವ ದಡ್ಡನನ್ನು ಕೂಡಾ ಜನಿವಾರ ಹಾಕಿ ಅವನನ್ನು ಮುಂದಾಳಾಗಿ ಮಾಡಿಬಿಟ್ಟರು ದೇಶದಲ್ಲಿ. ಇದನ್ನು ಹೋಗಲಾಡಿಸೋಕೇ ಆಗಿಲ್ಲ. ಎಂತೆಂಥವರೋ ಪ್ರಯತ್ನಿಸದರಾದರೂ ಆ ಕೆಲಸ ಇನ್ನೂ ಆಗಿಲ್ಲ. ದೇಶವನ್ನು ಆಳಿದ ಪ್ರತಿಯೊಬ್ಬ ರಾಜ ,ಮಹಾರಾಜನೂ ಈ ಚಾತುರ್ವರ್ಣದಿಂದಲೇ ತಮಗೆ ಲಾಭ ಇರುವುದನ್ನು ಕಂಡುಕೊಂಡು ಅದರ ಪ್ರಕಾರವೇ ಆಳ್ವಿಕೆ ನಡೆಸಿದಾರೆ. ಇವತ್ತಿಗೂ ಶಾಸನಗಳನಗಳನ್ನು ರಚಿಸುತ್ತಿರುವುದು ಜಾತಿಯಿಂದ ಮೇಲಿರುವ ಬುದ್ಧಿಜೀವಿಗಳೇ.

ಹಾಗಾದರೆ ಇದಕ್ಕೆ ಪರಿಹಾರ ಎಲ್ಲಿದೆ ಎಂದು ನಿಮ್ಮ ಭಾವನೆ?
ಶೂದ್ರ ಎಂದು ಕರೆದು ನೀನು ಕೀಳು ಎಂದಾಗ ಅದನ್ನು ಒಪ್ಪಿಕೊಳ್ಳದಿರುವ ಮನೋಭಾವನೆ ದುಡಿಯುವ ಜನರಲ್ಲಿ ಬಂದುಬಿಟ್ಟರೆ ಸಾಕು. ಇಂದು ಮನುಸ್ಮೃತಿಯೇ ನಮ್ಮ ಧಾರ್ಮಿಕ ಕಾನೂನಾಗಿದೆ. ಅಧಿಕಾರಕ್ಕೆ ಹೋದವರೂ ಅದರ ಆಧಾರದಲ್ಲಿಯೇ ಕಾನೂನು ರಚಿಸುತ್ತಾರೆ. ಇದಕ್ಕೆ ತದ್ವಿರುದ್ಧವಾಗಿ ನಮ್ಮ ಸಂವಿಧಾನದಲ್ಲಿರುವ ಜಾತ್ಯಾತೀತ ಪರಿಕಲ್ಪನೆಗಳಿಗೆ ತಕ್ಕಂತೆ ಕಾನೂನು ರಚಿಸುತ್ತಲೇ ಇಲ್ಲ. ಮೊದಲು ಆ ಕೆಲಸವಾಗಬೇಕಾಗಿದೆ. ತುಳಿತಕ್ಕೊಳಗಾದ ಸಮುದಾಯದ ವಿದ್ಯಾವಂತರಾದವರು ತಮ್ಮ ಸಮಾಜದಲ್ಲಿ ಜಾಗೃತಿ ಉಂಟು ಮಾಡುವ ಜವಾಬ್ದಾರಿ ಹೊರಬೇಕು. ಬಸವಣ್ಣನವರು ಹೇಳಿದ್ದರಲ್ಲ ಕಾಯಕವೇ ಕೈಲಾಸ ಎಂದು. ಹೀಗೆ ಇಂದು ಕಾಯಕದಲ್ಲಿರುವ ಶ್ರಮ ಜೀವಿಗಳಿರುವುದೇ ಕೈಲಾಸ. ನಾವು ದುಡಿದಿದ್ದನ್ನು ತಿಂದು ಸುಳ್ಳು ಬೋಧನೆ ಮಾಡುವ ಜನರೇನಿದ್ದಾರೆ ಅವರಿರುವುದು ನರಕ. ದೇಶಕ್ಕೆ ಬೇಕಾದ್ದನ್ನು ಉತ್ಪಾದನೆ ಮಾಡುವ ಶೇಕಡಾ ೮೦ ಶ್ರಮ ಜೀವಿಗಳಲ್ಲಿ ಜಾಗೃತಿ ಹುಟ್ಟಿಸುವವರೇ ನನಗೆ ಕಾಣಿಸುತ್ತಿಲ್ಲ. ಹಿಂದೆ ಬಹಳ ಮಹಾನುಭಾವರಿದ್ದರು. ಇಂದು ಎಲ್ಲೋ ಕೆಲವರಿರಬಹುದಷ್ಟೆ.

*ನಮ್ಮ ಸಮಾಜದ ಪ್ರಗತಿ ಯಾವ ದಿಕ್ಕಿನಲ್ಲಿ ಸಾಗಬೇಕು ಎನ್ನುತ್ತೀರಿ?
ಮೊದಲನೆಯದಾಗಿ ನಮ್ಮ ರೈತರು ವರ್ಗ ಸರ್ಕಾರದ ಅಧೀನದಲ್ಲಿರಬಾರದು. ಎಲ್ಲಿಯವರೆಗೆ ರೈತರು ಹಾಗೆ ಮತ್ತೊಂದು ಶಕ್ತಿಯ ಅಧೀನದಲ್ಲಿರುತ್ತಾರೋ ಅಲ್ಲಿಯವರೆಗೂ ಅವರಿಗೆ ಸ್ವಾತಂತ್ರ್ಯ ಇಲ್ಲ. ನಗರ ಕೇಂದ್ರಿತವಾಗಿರುವವರು ತಮ್ಮನ್ನು ತಾವು ನಿಯಂತ್ರಣದಲ್ಲಿ ಇಟ್ಟುಕೊಳ್ಳಬೇಕು. ಆಹಾರ ಉತ್ಪಾದಕ ಶಕ್ತಿಗೆ ಧಕ್ಕೆ ಕೊಡದ ರೀತಿ ಬದುಕಬೇಕು. ರಾಜ್ಯದ ಜನರೆಲ್ಲಾ ವಿದ್ಯಾವಂತರಾಗಲು ಎಲ್ಲಿ ಹಿಂದೆ ಬೀಳುತ್ತಿದ್ದರೆ ನೋಡಿ ಅವರಿಗೆ ಜ್ಞಾನೋದಯವಾಗುವಂತೆ ಮಾಡಬೇಕೇ ವಿನಃಇವರನ್ನು ಆಳುತ್ತೇವೆ ಎಂದು ಹೋಗ ಬಾರದು. ನಾಗರೀಕತೆ ಎಂದರೆ ಕೆಲವರ ಅಭಿವೃದ್ಧಿ ಅಲ್ಲ. ಎಲ್ಲರ ಸುಧಾರಣೆ ಆಗಬೇಕು. ನಗರವಾಸಿ ಆದವನು ಶೋಷಕ ವ್ಯವಸ್ಥೆಯೊಳಗೆ ತಾನೂ ಒಬ್ಬ ತಿನ್ನುವನಾಗಿಬಿಟ್ಟರೆ ಹೇಗೆ ಸಮಾಜ ಬದಲಾವಣೆ ಆಗುತ್ತದೆ?.

ಇಂದಿನ ಜಾಗತೀಕರಣದಿಂದ ಅಭಿವೃದ್ಧಿ ಸಾಕಷ್ಟು ಆಗಿದೆ ಎಂಬ ತಿಳಿವಳಿಕೆ ನಮ್ಮಲ್ಲಿದೆಯಲ್ಲ?
ದೇಶದ ನಿಜವಾದ ಅಭಿವೃದ್ಧಿ ಆಗಬೇಕೆಂದರೆ ಅದು ಗಾಂಧಿ ಕಲ್ಪನೆಯ ಗಾಮ ಸ್ವರಾಜ್ಯದಿಂದ ಮಾತ್ರ ಸಾಧ್ಯ. ಈ ಜಾಗತೀಕರಣದಿಂದ ಅಲ್ಲ. ಈ ಜಾಗತೀಕರಣ ಎಂದರೆ ಅದೇನೂ ವಿಶ್ವ ಸರ್ಕಾರವಲ್ಲ. ಲೋಹಿಯಾರವರು ಕೊಟ್ಟ ಅಂತಹ ವಿಶ್ವ ಸರ್ಕಾರದಲ್ಲಿ ಗ್ರಾಮಾಡsಳಿತ ಇರಬೇಕು. ಸರ್ಕಾರಗಳೇ ಇರಬಾರದು. ಗಡಿಗಳೂ ಇರಬಾರದುಡಿಂದಿನ ಜಾಗತೀಕರಣ ಅದನ್ನು ಮಾಡುತ್ತಿದೆಯೇಎಲ್ಲರನ್ನೂ ಸ್ವತಂತ್ರರನ್ನಾಗಿ ಮಾಡೋದಿಕ್ಕೆಎಲ್ಲರೂ ಮನಸಸ್ಸಿನಲ್ಲೂ ದುಗುಡ ಇಲ್ಲದೆ ಉಂಡುತಿಂದು ದೇಶದ ಉತ್ಪಾದನೆ ಜಾಸ್ತಿ ಮಾಡಿಆ ಉತ್ಪಾದನೆ ದೇಶದ ಎಲ್ಲರಿಗೂ ಸಿಗುವ ರೀತಿಬಡತನ ಎನ್ನುವುದು ಕಲ್ಪನೆಗೇ ಬರದಿರುವ ರೀತಿ ಸಮೃದ್ಧ ದೇಶ ನಿರ್ಮಾಣಕ್ಕೆ ಗಾಂಧಿ ಮಾರ್ಗವೇ ಇಂದಿಗೂ ಸೂಕ್ತವೇ ಹೊರತು ಇನ್ನಾವ ಮಾರ್ಗವೂ ಸರಿ ಇಲ್ಲ.


ನಮ್ಮ ರಾಜಕೀಯ ವ್ಯವಸ್ಥೆಯಲ್ಲಿ ಇದಕ್ಕೆಲ್ಲಾ ಅವಕಾಶ ಇದೆಯೆಂದು ನಿಮಗನ್ನಿಸಿದೆಯಾ?
ನಮ್ಮ ಜನಪ್ರತಿನಿಧಿಗಳಾದವರಿಗೆ ಎಲ್ಲಿವರೆಗೂ ಅಧಿಕಾರ ಉಳಿಸಿಕೊಳ್ಳುವುದನ್ನು ಬಿಟ್ಟು ಸೇವಾ ಮನೋಭಾವನೆ ಬರೋದಿಲ್ಲವೋ ಅಲ್ಲಿವರೆಗೂ ಹೀಗೇ ಇದು ಕೆಡುತ್ತಲೇ ಹೋಗುತ್ತದೆ. ಎಲ್ಲಿಯವರೆಗೆ ತ್ಯಾಗ ಮನೋಭಾವನೆ ಹೊಂದಿರುವವರನ್ನು ನಾವು ಕಳಿಸುವುದಿಲ್ಲ ಅಥವಾ ಆರಿಸಿ ಹೋದವರಿಗೆ ಆ ಭಾವನೆ ಇರುವುದಿಲ್ಲ ಇದು ಹೀಗೇ ನಡೆಯುತ್ತಿದೆ. ನಾನೂ ಚುನಾವಣೆಗೆ ನಿಂತಿದ್ದೆ. ನಾನು ಆರಿಸಿ ಬಂದರೆ ಏನೋ ಸಾಧನೆ ಆಗುತ್ತೆ ಎನ್ನುವ ಭಾವನೆಯಿಂದ ನಾನು ಸ್ಪರ್ಧೆ ಮಾಡಿದೆ. ಜನರು ಅದಕ್ಕೆ ಅವಕಾಶ ಕೊಡಲಿಲ್ಲ. ತನಗೇ ಬಸ್ ಚಾರ್ಜಿಗೆ ದುಡ್ಡಿಲ್ಲದವನು ಅಲ್ಲಿ ಹೋಗಿ ಏನು ಮಾಡುತ್ತಾನೆ ಎಂಬ ಭಾವನೆ ಜನಕ್ಕೆ. ಇವತ್ತಿನ ರಾಜಕೀಯ ನೋಡಿ ಎಷ್ಟು ಹೊಲಸಾಗಿದೆ ಅಂತ. ಅಲ್ಲಾ ಈ ಮುಖ್ಯ ಮಂತ್ರಿ ಇಷ್ಟೆಲ್ಲಾ ಆದಮೇಲೆ ಬಿಟ್ಟು ಬಂದು ಬಿಡಬೇಕಿತ್ತು. ಅವರೂ ನನ್ನ ಹಾಗೆ ಒಬ್ಬ ಹೋರಾಟಗಾರನಾಗಿ ಮೇಲೆ ಹೋಗಿ ಈಗ ಇಷ್ಟೆಲ್ಲಾ ಅವಮಾನವಾದ ಮೇಲೂ ಅದೇ ಸೀಟಲ್ಲಿ ಕುಳಿತುಕೊಳ್ಳಬೇಕಿತ್ತಾಅವರೇನು ಆಳೋಕಾಗೇ ಹುಟ್ಟಿದ್ದಾರಾ?. ಇಂದು ಸರ್ಕಾರದಲ್ಲಿ ನಡೆಯುತ್ತಿರುವ ಭಾನಗಡಿಗಳನ್ನೆಲ್ಲಾ ನೋಡುತ್ತಿದ್ದರೆ ನಾನು ಸ್ವಾತಂತ್ರ್ಯ ಹೋರಾಟಗಾರನಾಗಿ ಇನ್ನೂ ಯಾಕೆ ಬದುಕಿದ್ದೇನೋ ಅನ್ನಿಸುತ್ತಿದೆ. ಇಷ್ಟರಲ್ಲೇ ಸತ್ತು ಹೋಗಿಬಿಡಬೇಕಿತ್ತು.

*ಜನಸಾಮಾನ್ಯರಿಗೆ ಇದರಿಂದೆಲ್ಲಾ ಹೊರಬರಲು ದಾರಿ ಇದೆಯೇ?
ಇಲ್ಲಿ ಆಳಲು ಹೋದವರಂತೆಯೇ ಜನರಲ್ಲೂ ಸಮಸ್ಯೆ ಇದೆ. ಆಳಲು ಹೋದವರು ಒಮ್ಮೆ ಅಧಿಕಾರ ಹಿಡಿದರೆ ಮುಗಿಯಿತು. ಅದನ್ನು ಉಳಿಸಿಕೊಳ್ಳೋದೇ ಅವರ ಮುಖ್ಯ ಕರ್ತವ್ಯವಾಗಿಬಿಡುತ್ತದೆ. ಅದೇನೂ ಜನಸೇವೆಯಿಂದ ಅಲ್ಲ ಮತ್ತೆ. ಜನರಲ್ಲಿ ಸಹ ಗುಲಾಮಗಿರಿ ಭಾವನೆ ಹೋಗಿಲ್ಲ. ನಾವು ಆಳಿಸಿಕೊಳ್ಳೋಕೇ ಇರುವವರು ಎಂಬ ಮನಸ್ಥಿತಿಯಲ್ಲಿಯೇ ಅವರಿರುತ್ತಾರೆ. ಏನೇ ಅನ್ಯಾಯ ನಡೆದರೂ ಅದನ್ನು ಪ್ರಶ್ನಿಸುವ ಮನೋಭಾವವೇ ಇಂದು ಜನರಲ್ಲಿ ಇಲ್ಲವಲ್ಲ. ಆದರೂ ಚಳುವಳಿಗಳ ಮೂಲಕ ಬದಲಾವಣೆ ಸಾಧ್ಯ ಎಂಬ ನಂಬಿಕೆ ನನ್ನಲ್ಲಿ ಇದೆ. ಏಕೆಂದರೆ ಚಳುವಳಿಯ ಶಕ್ತಿ ಏನೆಂದು ನನಗೆ ತಿಳಿದಿದೆ. ಅದು ಜನರ ಇಂತಹ ಕೀಳು ಮನೋಭಾವನೆಯನ್ನೂ ದೂರಮಾಡಿಬಿಡುತ್ತದೆ.

ನೀವು ಅಂದು ನಡೆಸಿದ ಬಗೆಯಲ್ಲಿ ಇಂದು ಚಳವಳಿಗಳು ನಡೆಯಲು ಸಾಧ್ಯವೇ?
ಇವತ್ತಿಗೂ ಆ ಸಮಜವಾದಿ ಚಳವಳಿಯ ಮಟ್ಟದಲ್ಲಿ ಬೇರೆ ಯಾವ ಚಳುವಳಿಯೂ ಬೆಳೆದಿಲ್ಲ.  ಜಯಪ್ರಕಾಶ್ ನಾರಯಣ್ಲೋಹಿಯಾರಂತವರೂ ಭಾಗವಹಿಸಿ ಜೈಲಿಗೆ ಹೋಗಿರುವಂತಹ ಆ ಚಳುವಳಿಗಿದ್ದ ಹೆಸರು ಬೇರಾವ ಚಳವಳಿಗೂ ಇಲ್ಲ. ಇಂದೂ ಸಹ ಏನೇ ಬದಲಾವಣೆ ಬಂದರೂ ಚಳವಳಿಗಳಿಂದಲೇ ಬರುತ್ತದೆ. ಚಳವಳಿ ಎಂದರೆ ಇಂದು ನಡೆಯುತ್ತಿರುವ ಅನೇಕ ಸ್ವಾರ್ಥ ಹಿತಾಸಕ್ತಿಗಳ ಚಳವಳಿಯಲ್ಲ. ಅವು ನಾಮಕಾವಸ್ಥೆ ಚಳವಳಿಯಾಗಿರಬಾರದು. ಅದು ಈ ಸರ್ಕಾರಗಳನ್ನೇ ನಡುಗಿಸುವ ಮಟ್ಟಿಗೆ ಇರಬೇಕು.

ಇಂದಿನ ಯುವಜನರಿಗೆ ಯಾವ ಸಂದೇಶ ನೀಡಲು ಇಚ್ಚಿಸುತ್ತೀರಿ?
            ಯುವಕರು ಯಾವ ಉದ್ಯೋಗದಲ್ಲೇ ಇರಲಿ ನನ್ನ ದೇಶದ ಜನ ಯಾವ ಕಡೆ ಹೋಗಬೇಕು ಎಂಬುದನ್ನು ನಿರ್ಧರಿಸಿ ವರು ಕೆಲಸ ಮಆಡಬೇಕು. ನಮ್ಮ ಜನರು ಇಂದು ಹಣ ತೊಗೊಂಡು ಓಟು ಕೊಡುವ ಪರಿಸ್ಥಿತಿಯಲ್ಲಿದ್ದಾರೆಂದರೆ ಅದಕ್ಕಿಂತಾ ಹೀನಾಯವಾದುದು ಬೇರೆ ಇಲ್ಲ. ಓಟಿನ ಹಕ್ಕನ್ನು ನಮಗೆ ಕೊಟ್ಟ ಸ್ವಾತಂತ್ರ್ಯಕಾಗಿ ಅಮದು ಏನೇನೆಲ್ಲಾ ನಡೆಯಿತುಎಷ್ಟು ಜನ ಪ್ರಾಣ ಕಳೆದುಕೊಂಡರುಎಷ್ಟು ಜನ ಏನೇನು ಅನಾಹುತಕ್ಕೆ ಗುರಿಯಾಗಿಎಷ್ಟು ಜನ ನೇಣಿಗೆ ಬಿದ್ದುಎಷ್ಟು ಜನ ಜೈಲಿಗೆ ಸೇರಿದ್ದರುನಾನೂ ಸಹ ನಾಲ್ಕು ವರ್ಷ ಜೈಲುವಾಸ ಅನುಭವಿಸಿದವನೇ. ಹೀಗೆ ತಂದಂತಹ ಸ್ವಾತಂತ್ರ್ಯದಲ್ಲಿ ಇಂದು ಹತ್ತು ರೂಪಾಯಿಗೆ ಓಟು ಮಾರಿಕೊಳ್ಳುವ ಪರಿಸ್ಥಿತಿ ಇದೆ ಎಂದರೆ ಏನು ಹೇಳುವುದು. ಇದನ್ನೆಲ್ಲಾ ಇಂದಿನ ಯುವಕರು ಗಂಭೀರವಾಗಿ ಆಲೋಚಿಸಿ ಕೆಲವರಾದರೂ ಅದನ್ನೆಲ್ಲಾ ತಡೆಯುವ ನಿಟ್ಟಿನಲ್ಲಿ ಪ್ರಯತ್ನ ಹಾಕಿದರೂ ಅಷ್ಟು ಉಪಕಾರವಾಗುತ್ತದೆ.





2 ಕಾಮೆಂಟ್‌ಗಳು:

ಭಾರವಿ ಹೇಳಿದರು...

ಗಾಂಧಿವಾದದೊಂದಿಗೆ ಲೋಹಿಯಾರನ್ನು ಸೇರಿಸುವ ದ್ವಂದ್ವ ಯಾಕೆಂದು ಅರ್ಥವಾಗಲಿಲ್ಲ...ಎರಡೂ ವಿಮುಖ ಧೃವಗಳು...

Prajwal K ಹೇಳಿದರು...

Great person ������

ಹೊಸತು - ಹಳತು : ಬುದ್ದ ತತ್ವ

ಲೋಕದ ಪ್ರತಿಯೊಂದೂ ಎಡೆಬಿಡದ ಚಲನೆಯಲ್ಲಿದೆ. ಕೆಲವೊಮ್ಮೆ ಬರಿಗಣ್ಣಿಗೆ ಚಲಿಸದೇ ಜಡವಾಗಿವೆ ಎಂದು ತೋರುವ ಪ್ರತಿಯೊಂದೂ ಚಲನೆಯಲ್ಲಿದೆ. ಒಂದು ಮರದ ತುಂಡು, ಕಬ್ಬಿಣದ ಬಿಲ್ಲೆ,...

ಮರದೊಂದು ಎಲೆ ನಾನು..

ನನ್ನ ಫೋಟೋ
A Writer, Researcher, Journalist and Activist. Born and brought up from Kugwe a village near Sagara, Shimoga district of Karnataka state. Presently working as the Editor In Chief of PEEPAL MEDIA /PEEPAL TV.