ಏಪ್ರಿಲ್ 29, 2012

ವೀರಣ್ಣ ಮಡಿವಾಳರ ಸಂದರ್ಶನ


ಕನ್ನಡದ  ಹೊಸತಲೆಮಾರಿನ ಸಂವೇದನಾಶೀಲ ಬರೆಹಗಾರರಲ್ಲಿ ಒಬ್ಬರಾದ ವೀರಣ್ಣ ಮಡಿವಾಳರ ಅವರ 'ನೆಲದ ಕರುಣೆಯ ದನಿ' ಕೃತಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಬಂದ ಸಂದರ್ಭದಲ್ಲಿ 'ದ ಸಂಡೆ ಇಂಡಿಯನ್' ಗಾಗಿ ನಡೆಸಿದ ಸಂದರ್ಶನ.


ನಿಮ್ಮ 'ನೆಲದ ಕರುಣೆಯ ದನಿ’ಗೆ ಕೇಂದ್ರ ಸಾಹಿತ್ಯ ಅಕಾಡೆಮಿಯ ಯುವ ಪ್ರಶಸ್ತಿ    ಲಭಿಸಿರುವುದು ಏನೆನ್ನಿಸುತ್ತದೆ? 

ಇದು ನನ್ನ ಮತ್ತು ನನ್ನ ತಲೆಮಾರಿನ ಅಭಿವ್ಯಕ್ತಿಗೆ ಸಂದ ಗೌರವವೆಂದು ಭಾವಿಸುತ್ತೇನೆ.
ಈ ಕ್ಷಣ ಅಪ್ಪನ ಬೆವರು, ಅವ್ವನ ಕನಸು ನೆನಪಾಗುತ್ತಿವೆ. ಈ ಪುರಸ್ಕಾರವನ್ನು ಕನ್ನಡ ಕಾವ್ಯವನ್ನು ಮತ್ತಷ್ಟು ಜೀವಪರವಾಗಿಸಿದ ಕವಿ ಎನ್.ಕೆ.ಹನುಮಂತಯ್ಯ, ವಿಭಾ ತಿರಕಪಡಿ, ಹಾಗೂ ನಾನು ಎಷ್ಟು ಓದಿದರೂ ಮತ್ತೆ ಮತ್ತೆ ಓದಬೇಕೆನಿಸುವ ಪುಟ್ಟ ಪುಸ್ತಕಗಳೇ ಆಗಿರುವ ನನ್ನ ಗಾವಡ್ಯಾನವಾಡಿ ಶಾಲೆಯ ಮಕ್ಕಳಿಗೆ ಅರ್ಪಿಸುತ್ತೇನೆ.

ವರ್ತಮಾನದ ಈ ಅವಘಡದ ಕಾಲದಲ್ಲಿ ಯಾವುದೇ ಸಂವೇದನಾಶೀಲ ಮನಸ್ಸು , ಯಾವುದೇ ಪುರಸ್ಕಾರವನ್ನು ಆನಂದಿಸುವ ಸ್ಥಿತಿಯಲ್ಲಿಲ್ಲ. ಈ ಕ್ಷಣ ನನ್ನ ಶಿಕ್ಷಕ ತರಬೇತಿಯ ಖಾಲಿ ಹೊಟ್ಟೆಯ ದಿನಗಳು ನೆನಪಾಗುತ್ತಿವೆ. ಈಗ ನನ್ನ ತುತ್ತಿಗೆ ದಾರಿಯಾಗಿರಬಹುದು, ಆದರೆ ಅದೆಷ್ಟು ಎಣಿಸಲಾಗದ ಹಸಿದ ಹೊಟ್ಟೆ ಚೀಲಗಳು ಕಣ್ಣಮುಂದೆಯೇ ಇವೆ. ಇಂದು ಕೇವಲ ಅನ್ನಕ್ಕಾಗಿ ಪರದಾಟ ಮಾತ್ರವಲ್ಲ, ಅದರಾಚೆಗೆ ಬದುಕಿಗೆ ಬೆಳಕಾಗುವ ವಿದ್ಯಾದೀಪದ ಹುಡುಕಾಟದ ದುರಂತವೂ ಇದೆ. ತೀರಾ ಹೊಟ್ಟೆ ಹಸಿದರೆ ಸೊಪ್ಪು ಸೊದೆ ತಿಂದು ಜೀವ ಹಿಡಿಯಬಹುದು, ವಿದ್ಯಗೇ ಕುತ್ತು ಬಂದರೆ? 

ಮೈಯೆಲ್ಲ ಗಾಯ ಮಾಡಿಕೊಂಡು ಬಂದ ನವಿಲೊಂದು ಕುಣಿಯುತ್ತಿದ್ದರೆ, ಅದರ ಕುಣಿತವನ್ನು ಮೆಚ್ಚಿ , ಸಿಂಹಾಸನದ ಮೇಲೆ ಕುಳ್ಳಿರಿಸಿ ದುಡ್ಡು ಕೊಟ್ಟು ಸನ್ಮಾನಿಸುವುದಾದರೆ ಏನು ಹೇಳುವುದು? ವರ್ತಮಾನದ ದುರಾಡಳಿತದ ದಾಳಿಗೆ ಒಳಗಾದ ಜೀವಸಮುದಾಯದಿಂದ ಬಂದ ನವಿಲು ನಾನು. ಗಾಯಗಳು ನನ್ನವಷ್ಟೇ ಅಲ್ಲ , ನನ್ನೆಲ್ಲ ಬಂಧುಗಳವೂ ಇವೆ. ಅವೆಲ್ಲ ತೋರಲಾಗದವು ತೋರಿತೀರದವು. ಇವನ್ನೆಲ್ಲ ಕಾಣುವ ಕಣ್ಣುಗಳನ್ನು ಹುಡುಕುತ್ತಿದ್ದೇನೆ. ಈ ಪುರಸ್ಕಾರದ ನೆಪದಿಂದಾದರೂ ನಮ್ಮನ್ನಾಳುವ ಪ್ರಭುಗಳು ನಮ್ಮ  ಅಭಿವ್ಯಕ್ತಿಯನ್ನು ಗಂಭೀರವಾಗಿ ಪರಿಗಣಿಸುತ್ತಾರಾ..?

ಸಾಹಿತ್ಯ ರಚನೆಯಲ್ಲಿ ತೊಡಗಿಕೊಳ್ಳಲು ನಿಮಗಿದ್ದ ಕಾರಣ ಪ್ರೇರಣೆಗಳೇನು?
      

ತಿರಸ್ಕಾರ ಅವಮಾನಗಳಿಗೆ ಸಿಕ್ಕು ನರಳುತ್ತಿದ್ದ ನಾನು ಬದುಕಿನ ಅರ್ಥವನ್ನು ಬೇರೆ ಬೇರೆ 
ಸಾಧ್ಯತೆಗಳಲ್ಲಿ ಶೋಧಿಸುತ್ತಿದ್ದಾಗ ಸಿಕ್ಕ ಅಪರೂಪದ ದಾರಿ ಸಾಹಿತ್ಯದ ಮಾಧ್ಯಮ. ಮೊದಮೊದಲು ಅದು ಓದಿನ ರೂಪದ್ದಿತ್ತು, ಆಕಸ್ಮಿಕವಾಗಿ ರಚನೆಯತ್ತಲೂ ಹೊರಳಿತು. ಪ್ರಾಥಮಿಕ ಶಾಲೆಯಲ್ಲಿ ಓದುತ್ತಿರುವಾಗ ನನ್ನ ಗುರುಗಳಾದ ಪಿ.ಎಂ.ಕ್ಯಾತಣ್ಣನವರ, ಎಸ್.ಕೆ ಗಾಡರೆಡ್ಡಿ ಯವರು ಬರೆಯುತ್ತಿದ್ದರು ನಮಗೂ ಬರೆಯಲು ಹುರಿದುಂಬಿಸುತ್ತಿದ್ದರು. ಬಂಡಾಯ ಸಾಹಿತ್ಯ ಸಂಘಟನೆ ತುಂಬ ಕ್ರಿಯಾಶೀಲವಾಗಿದ್ದ ದಿನಗಳವು. ಅದ್ಯಾವುದೂ ತಿಳಿಯುತ್ತಿರದಿದ್ದರೂ ಮನಸಿನಲ್ಲಿ ಆ ಚಟುವಟಿಕೆಗಳು ಅಚ್ಚೊತ್ತಿವೆ. 

ಬೇರೆ ಬೇರೆ ಸಂದರ್ಭಗಳಲ್ಲಿ ಬೇರೆ ಬೇರೆ ರೀತಿಯ ಪ್ರೇರಣೆಗಳು ಒದಗಿದವು. ಕೊಪ್ಪಳದಲ್ಲಿ ಆಕಸ್ಮಿಕವಾಗಿ ಸಿಕ್ಕ ವಿಜಯಅಮೃತರಾಜ ಸಾಹಿತ್ಯದ ಬಗ್ಗೆ ತುಂಬ ತಿಳುವಳಿಕೆ ಉಳ್ಳವರು ಅವರು ನನಗೆ ಮೊದಲಿಗೆ ಲಂಕೇಶ್ ರ ಪುಸ್ತಕಗಳನ್ನು ಪರಿಚಯಿಸಿದರು. ಮುಖ್ಯವಾದದ್ದು ಬಸವರಾಜ ಸೂಳಿಬಾವಿ ಯವರ ಸಂಪರ್ಕ. ಬಸೂ ಉತ್ತರ ಕರ್ನಾಟಕದ ಭೂ ಸಂಬಂಧಿತ ಹೋರಾಟಗಳನ್ನು ಸಂಘಟಿಸುತ್ತಿದ್ದ ಸಮಯದಲ್ಲಿ ನಾನೂ ಅದರಲ್ಲಿ ಭಾಗಿಯಾದೆ. ಅವು ನನ್ನ ಬದುಕಿನ ಕುರಿತಾದ ಗ್ರಹಿಕೆಗಳನ್ನು ತಿಳಿಯಾಗಿಸಿಕೊಳ್ಳುವ ನಿಟ್ಟಿನಲ್ಲಿ ಬಹಳ ಮುಖ್ಯವಾದವು.

ನಾಡಿನ ಹಿರಿಯ ಸಾಹಿತಿಗಳು ಮತ್ತು ಸಾಹಿತ್ಯದ ಓದು ನಿಮ್ಮ ಮೇಲೆ ಬೀರಿರುವ ಪ್ರಭಾವ ಯಾವ ಬಗೆಯದ್ದು? 

ಹಿರಿಯ ಸಾಹಿತಿಗಳ ಒಡನಾಟ ನನ್ನ ಬದುಕಿನ ವಿಸ್ಮಯಗಳಲ್ಲಿ ಮುಖ್ಯವಾದದ್ದು. ಅದು ವೈಯಕ್ತಿಕವಾಗಿ ಮತ್ತು ಓದಿನಿಂದ. ಇವೆರಡೂ ಇಲ್ಲದಿದ್ದರೆ ನನ್ನ ಬದುಕು ಕಲ್ಪಿಸಿಕೊಳ್ಳಲು ಸಾಧ್ಯವಿಲ್ಲ. ಓದು ನನಗೆ ಬದುಕು ಕೊಟ್ಟಿದೆ.

ಒಬ್ಬ ಯುವ ಬರಹಗಾರರಾಗಿ ಇಂದಿನ ಕನ್ನಡ ಸಾಹಿತ್ಯ ಪಡೆದಿರುವ ದಿಕ್ಕನ್ನು ಯಾವ ರೀತಿಯಾಗಿ ಪರಿಭಾವಿಸುತ್ತೀರಿ?

ನಿಜವಾದ ಸಮಾಜಮುಖಿ ನೆಲೆಯಲ್ಲಿ ಇಂದಿನ ಕನ್ನಡ ಸಾಹಿತ್ಯ ಚಲಿಸುತ್ತಿದೆಯೆಂಬುದೇ ನನ್ನ ಭಾವನೆ ಮತ್ತು ನಂಬಿಕೆ. ಆದರೆ ಈ ಚಲನೆ ತುಂಬ ಸಂಕೀರ್ಣವಾದದ್ದು. ವಚನ ಬಂಡಾಯದ ಕಾಲಘಟ್ಟದ ಸಾಹಿತ್ಯವೇ ನಮ್ಮ ನಿಜವಾದ ಮಾದರಿ. ಆದರೆ ಈ ಕಾಲ ಹಿಂದೆಂದಿಗೂ ಇಲ್ಲದಂಥ ದುಸ್ಥಿತಿಗೆ ನಮ್ಮನ್ನು ತಳ್ಳಿದೆ. ನಮಗೆ ನೋವಿರುವುದು ಈ ಕಾಲದ ಅವಘಡಗಳಿಗೆ ಮುಖಾಮುಖಿಯಾಗುವ ದಿಸೆಯಲ್ಲಿ ನಮ್ಮ ಸಾಹಿತ್ಯದ ತೋಳು ಇನ್ನೂ ಬಲಿಯದೇ ಇರುವುದು. 

ಸಾಹಿತ್ಯ - ಸಾಹಿತಿಗೆ ಇರುವಂತಹ ಸಾಮಾಜಿಕ ಹೊಣೆಗಾರಿಕೆ ಯಾವ ತೆರನಾದದ್ದು?

 ಹೊಣೆಗಾರಿಕೆ ಎಂಬುದು ಸಾಹಿತ್ಯ-ಸಾಹಿತಿಗೆ ಸಂಬಂಧಿಸಿದ್ದು ಎಂದು ನಾನು ಭಾವಿಸಿಲ್ಲ.               ಜೀವಂತಿಕೆ ಇರುವ ಮಾನವೀಯತೆಯನ್ನು ಉಳಿಸಿಕೊಂಡಿರುವ ಎಲ್ಲ ಮನಸ್ಸಿಗೆ ಇರಲೇಬೇಕಾದದ್ದು ಎನಿಸುತ್ತಿದೆ. ಸಾಹಿತ್ಯ ಮತ್ತು ಅಸಾಹಿತ್ಯದ ವ್ಯತ್ಯಾಸವಿಲ್ಲದಂತೆ ಇಂದಿನ ಬರವಣಿಗೆಯನ್ನು ವ್ಯಾಖ್ಯಾನಿಸಲಾಗುತ್ತಿದೆ. ಇದು ಗಾಬರಿ ಹುಟ್ಟಿಸುವ ಸಂಗತಿ. ಜೀವಪರ ಎನ್ನುವ ಪದವನ್ನೇ ಅಪಹಾಸ್ಯಕ್ಕೊಳಪಡಿಸುವ ಹಲವು ಜನ ಸಾಹಿತಿಗಳನ್ನು ನಾನು ನೋಡಿದ್ದೇನೆ. ಇವರಿಗೆ ಕ್ರೌರ‍್ಯವೂ ಸಹಜವಾಗಿಯೇ ಕಾಣುತ್ತದೆ. ಎಂದಿಲ್ಲದ ಎಚ್ಚರದ ಹೊಣೆಗಾರಿಕೆಯಲ್ಲಿ ನಾವು ನಮ್ಮ ಬರವಣಿಗೆ ಹೆಜ್ಜೆಯಿಡಬೇಕಾದ ನಿರ್ಣಾಯಕ ಸಂದರ್ಭದಲ್ಲಿ ನಾವಿದ್ದೇವೆ.

ಚಳವಳಿಗಳೆಲ್ಲಾ ಮುಸುಕಾಗಿರುವ ಈ ಹೊತ್ತಿನಲ್ಲಿ ಸಾಹಿತ್ಯವು ಯಾವ ಪಾತ್ರವನ್ನು ವಹಿಸುತ್ತಿದೆ ಎಂದು ನಿಮ್ಮ ಭಾವನೆ?

ಚಳುವಳಿಗಳೆಲ್ಲಾ ಮುಸುಕಾಗಿವೆ ಎನ್ನುವ ನಿಲುವಿನಲ್ಲೇ ದೋಷವಿದೆ. ಪ್ರಭುತ್ವದ ದಮನಕಾರಿ ನೀತಿಗೆ ಜೀವವನ್ನೇ ಪಣಕ್ಕಿಟ್ಟು ದಿನಾಲು ಸಾವರ ಸಾವಿರ ಜನ ಬೀದಿಗಿಳಿಯುತ್ತಾರಲ್ಲ ಇದಕ್ಕೆ ಬೇರೆ ಹೆಸರಿದೆಯೆ? ಪ್ರತಿರೋಧವೊಂದೇ ಕರ್ನಾಟಕದ ಈ ಕರಾಳ ವಾಸ್ತವವನ್ನು ಬದಲಿಸುವ ಸಶಕ್ತ ದಾರಿ. ಅದನ್ನು ಎದೆಯಲ್ಲಿಟ್ಟುಕೊಂಡೇ ನಮ್ಮ ಸಾಹಿತ್ಯ ನಿರ್ಣಾಯಕ ಪಾತ್ರವನ್ನು ವಹಿಸುತ್ತಿದೆ. ಸಾಮಾಜಿಕ ಕ್ರೌರ‍್ಯದ ಆತ್ಯಂತಿಕ ಸ್ಥಿತಿಯಲ್ಲಿರುವ ನಮಗೆ ಈ ದುರಾಡಳಿತವನ್ನು ಕೊನೆಗಾಣಿಸುವ ಇಚ್ಛಾಶಕ್ತಿಯೊಂದೇ ಪರ್ಯಾಯ. ಇಂಥ ಸಂದರ್ಭಗಳಲ್ಲಿ ಸಾಹಿತಿಗಳಾದವರೆ ಬೀದಿಯಲ್ಲಿ ನಿಂತು ಚಳುವಳಿಗಳನ್ನು ಮುನ್ನಡೆಸುತ್ತಿದ್ದಾರೆ. ಪ್ರತಿರೋಧದ ಹೊಸ ಮಾದರಿಗಳನ್ನು ಸೃಜನಶೀಲವಾಗಿ ಕಟ್ಟುತ್ತಿದ್ದಾರೆ.

ಊರು ಹಾಗೂ ಊರೊಳಗಿನ ದಲಿತರ ಕೇರಿಗಳ ನಡುವಿನ ಕಂದಕ ಹೆಚ್ಚುತ್ತಿರುವ ಘಟನೆಗಳು ನಿರಂತರವಾಗಿ ಸಂಭವಿಸುತ್ತಿರುವಾಗ ನಮ್ಮ ಚಳವಳಿಗಳು ನಿಷ್ಕ್ರಿಯವಾಗಿವೆ ಎನ್ನಿಸುವುದಿಲ್ಲವೆ? ಈ ಕುರಿತು ಏನು ಹೇಳುತ್ತೀರಿ?

ಊರು ಮತ್ತು ಕೇರಿಗಳ ನಡುವಿನ ಕಂದಕವಷ್ಟೇ ಅಲ್ಲ, ಕೇರಿ ಕೇರಿಯ ಜನ ಅದರಲ್ಲೂ ಮಹಿಳೆಯರು, ಮಕ್ಕಳು ಇಂದು ಉಳಿವಿಗಾಗಿ ಹೋರಾಟ ನಡೆಸುವ ದುರಂತದಲ್ಲಿ ನಾವಿದ್ದೇವೆ. ತಿರುಮಲದೇವರಕೊಪ್ಪ ದಲ್ಲಿ ಬಸವರಾಜ ನೆಂಬ ಹುಡುಗನನ್ನು ಮನೆಶಾಂತಿಗಾಗಿ ಬಲಿಕೊಟ್ಟದ್ದು, ಭೋಜ ಎಂಬ ಹಳ್ಳಿಯಲ್ಲಿ ಕೇರಿಯ ಮೇಲಿನ ಸವರ್ಣೀಯರ ಅಟ್ಟಹಾಸಕ್ಕೆ ಬಲಿಯಾಗಿ ಅರೆಜೀವವಾಗಿ ಪ್ರಾಣ ಹಿಡಿದಿರುವ ಅಭೀಷೇಕ ಎಂಬ ಹುಡುಗನ ದಯನೀಯ ಸ್ಥತಿಯಾಗಲೀ, ಆಡುಗಳು ತಪ್ಪಿಸಿಕೊಂಡು ತೋಟಕ್ಕೆ ನುಗ್ಗಿದವು ಎಂಬ ಕಾರಣಕ್ಕೆ ಹತ್ತು ವರ್ಷದ ದಲಿತ ಹುಡುಗಿಯನ್ನ ಗಿಡಕ್ಕೆ ಕಟ್ಟಿ ಬಾರಿಸುವ ಕ್ರೌರ‍್ಯವನ್ನು ಕಂಡಾಗ ಎದೆತುಂಬಿ ಬಂದು ಎಂಥವರಿಗೂ ಈ ವ್ಯವಸ್ಥೆಯ ಕುರಿತು ರೇಸಿಗೆ ಹುಟ್ಟದೆ ಇರುವುದು. ಆದರೆ ನಾವು ಈ ಚಿತ್ರಗಳಲ್ಲಿರುವ ಆಂತರ್ಯದ ಕ್ರೌರ‍್ಯವನ್ನು ಮನಗಾಣಿಸಿ ಆರೋಗ್ಯವಂತ ಮನಸ್ಸುಗಳನ್ನು ಕಟ್ಟುವಲ್ಲಿ ನಮ್ಮ ಶ್ರಮ ಸಾಲದು ಎನಿಸುತ್ತಿದೆ. 

ನಮ್ಮೆದುರು ಸಂಭವಿಸುತ್ತಿರುವ ಸಮಾಜೋ - ಆರ್ಥಿಕ ವಿಪ್ಲವಗಳಿಗೆ ನಮ್ಮ ದೇಸೀಯ ಸಂಸ್ಕೃತಿ ಮತ್ತು ಸಾಹಿತ್ಯಗಳು ಯಾವ ಬಗೆಯಲ್ಲಿ ಪ್ರತಿಕ್ರಿಯಿಸುತ್ತಿವೆ? 

ಸಮಾಜೋ - ಆರ್ಥಿಕ ವಿಪ್ಲವಗಳನ್ನು ತುಂಬ ವಸ್ತುನಿಷ್ಠವಾಗಿ ಸಮರ್ಥವಾಗಿ ಕಟ್ಟಿಕೊಡುವ ನಿಟ್ಟಿನಲ್ಲಿ ಸಾಕಷ್ಟು ಪ್ರಯತ್ನಗಳು ಪರಿಣಾಮಕಾರಿಯಾಗಿ ನಡೆಯುತ್ತಿವೆ. ಆದರೆ ಇದಾವುದನ್ನು ನಿರ್ಲಕ್ಷಿಸುವ ಪ್ರಭುತ್ವದ ಉದಾಸೀನತೆ ಬೇಸರ ಹುಟ್ಟಿಸುತ್ತದೆ. 

ನಮ್ಮ ಮುಂದೆ ನಡೆಯುತ್ತಿರುವ ’ಅಭಿವೃದ್ಧಿ’ಯ ದಾರಿ - ಪರಿಣಾಮಗಳ ಬಗ್ಗೆ ನಿಮ್ಮ ಅವಗಾಹನೆ ಏನು?

ಅಭಿವೃದ್ಧಿ ಎನ್ನುವ ಪದವನ್ನು ಪ್ರಭುತ್ವ ವ್ಯಾಖ್ಯಾನಿಸಿಕೊಂಡಿರುವ ರೀತಿ ಮತ್ತು ಜನಸಾಮಾನ್ಯರು ಅಪೇಕ್ಷಿಸುವ ರೀತಿ ತದ್ವಿರುದ್ಧವಾಗಿವೆ. ಲಕ್ಷಕೋಟಿ ಬಜೆಟ್ಟು ಯಾರ ಅಭಿವೃದ್ಧಿಗೆ ಎಂಬುದು ಪ್ರಶ್ನೆ. ಸಾವಿರ ಸಾವಿರ ಗುಡಿಸಲುಗಳು ಕಣ್ಣಮುಂದೆಯೇ ಇವೆ. ನಮಗೆ ಅನ್ನ ನೀಡಿದ ರೈತ ಆತ್ಮಹತ್ಯೆಗೆ ಹೊರಟಿರುವ ಕರಾಳತೆಯ ಅರಿವು ಈ ಪ್ರಭುತ್ವಕ್ಕಿಲ್ಲ. 
ಅಭಿವೃದ್ಧಿಯಲ್ಲ ಉಳಿವಿಗಾಗಿ ನಮ್ಮ ಜನ ಹೋರಾಡುತ್ತಿರುವಾಗ ಕೋಟಿ ಕೋಟಿ ಬಜೆಟ್ಟನ್ನು ಮಂಡಿಸುವ ನಾಡಪ್ರಭುಗಳಿಗೆ ಮನುಷ್ಯತ್ವವಿದೆಯೆ ಎಂಬ ಪ್ರಶ್ನೆ ಮೂಡುತ್ತದೆ. 

ಕನ್ನಡ ಸಾಹಿತ್ಯಲೋಕದಲ್ಲಿ ಕಂಡುಬರುವ ವ್ಯಕ್ತಿಗಳ ಅಥವಾ ಗುಂಪುಗಳ ನಡುವಿನ ಅಭಿಪ್ರಾಯ ಭೇಧಗಳನ್ನು ಒಬ್ಬ ಯುವ ಸಾಹಿತಿಯಾಗಿ ಹೇಗೆ ನೋಡುತ್ತೀರಿ?

ಅಭಿಪ್ರಾಯ ಭೇದವಷ್ಟೇ ಆದರೆ ಸರಿ ನಡೆಯಲಿ ಎನ್ನಬಹುದು. ಆದರೆ ಜೀವವಿರೋಧಿ ಪ್ರಭುತ್ವದ ಸಮರ್ಥನೆಗಿಳಿದರೆ ಸಹಿಸುವುದು ಕಷ್ಟ. ಖಾವಿಯೊಂದೇ ಅನೈತಿಕ ಸಂಬಂಧವನ್ನು ಆಳುವ ಪ್ರಭುತ್ವದೊಂದಿಗೆ ಹೊಂದಿಲ್ಲ. ಕೆಲವರ ಚಿಂತನೆಗಳನ್ನು ಗಮನಿಸಿದರೆ ಈ ಕಾಲದ ಅವಘಡಗಳಿಗೆ ಸಾಹಿತ್ಯದ ಕೊಡುಗೆಯೂ ಇಲ್ಲದಿಲ್ಲ. 




ಏಪ್ರಿಲ್ 16, 2012

'ಪ್ರಾಮಾಣಿಕತೆ ಎಂಬುದು ನಾವು ನಂಬಿದ ಮೌಲ್ಯದ ಪ್ರಶ್ನೆ’- ಚಿರಂಜೀವಿ ಸಿಂಗ್





ಚಿರಂಜೀವಿ ಸಿಂಗ್ ಅವರನ್ನು ನಾನು ಮೊದಲು ನೋಡಿದ್ದು, ಅವರ ಮಾತು ಕೇಳಿದ್ದು ಕೆಲವು ವರ್ಷಗಳ ಹಿಂದೆ, ಹೆಗ್ಗೋಡಿನ ನೀನಾಸಂ ಸಂಸ್ಕೃತಿ ಶಿಬಿರದಲ್ಲಿ.  'ಹಿಂಸೆಯ ಎಡ -ಬಲ’ ಎಂಬ ಕುರಿತ ಚರ್ಚೆಗಳನ್ನು ಅಂದು ಉದ್ಘಾಟಿಸಿದ್ದ ಚಿರಂಜೀವಿ ಸಿಂಗ್ ಮಾತುಗಳು ಎಲ್ಲರನ್ನು ಪ್ರಭಾವಿಸಿದ್ದವು. ನಂತರದಲ್ಲಿ ಅವರ ಕುರಿತು ಇತರೆ ಸ್ನೇಹಿತರು ಹೇಳಿದ್ದನ್ನು ಕೇಳಿದ್ದೇನೆ. ಅದರಲ್ಲೂ  ಹಿರಿಯ ಸ್ನೇಹಿತೆ ಹಾಗೂ ದಕ್ಷ ಅಧಿಕಾರಿ ವಿ. ಭಾಗ್ಯಲಕ್ಷ್ಮಿಯವರು ಚಿರಂಜೀವಿ ಸಿಂಗ್ ಅವರ ಬಗೆಗೆ ಅದೆಷ್ಟು ಭಾವುಕರಾಗಿ ಮಾತನಾಡಿದ್ದರಂದರೆ ಅವರ ಮಾತು ಕೇಳಿದಾಗಿನಿಂದಲೂ ನನಗೆ ಚಿರಂಜೀವಿ ಸಿಂಗ್ ಅವರ ಜೊತೆ ಸ್ವಲ್ಪ ಹೊತ್ತು ಕಳೆಯುವ ಇಚ್ಛೆಯಾಗಿತ್ತು. 
ನಮ್ಮ ’ದ ಸಂಡೆ ಇಂಡಿಯನ್’ನ 'ಸಾಕ್ಷಿಪ್ರಜ್ಞೆ'ಗಾಗಿ ನಾನು ಮತ್ತು ನನ್ನ ಸಹೋದ್ಯೋಗಿ ಅಹೋಬಲಪತಿ ಚಿರಂಜೀವಿ ಸಿಂಗ್ ಅವರ ಮನೆಗೆ ಹೋಗಿ ಸಂದರ್ಶನ ನಡೆಸಿಕೊಂಡು ಬಂದೆವು. ಅವರ ಬದುಕಿನ ಸರಳತೆ, ನಡೆ ನುಡಿಯ ಮಿದುತನಗಳು   ನಿಜಕ್ಕೂ ನಮ್ಮನ್ನು ತೀರಾ ಕುಬ್ಜರನ್ನಾಗಿಸಿದವು. ಹೀಗೇ ಮಾತು ಆರಂಭಿಸಿ 'ಸರ್, ನೀವು ಅಷ್ಟು ದೂರದಿಂದ ಬಂದು ಇಲ್ಲಿನವರೇ ಆಗಿಬಿಟ್ಟಿದ್ದೀರಿ. ನೀವು ವಾಪಾಸು ಹೋಗುವ ಆಲೋಚನೆ ಇದೆಯಾ? ನಿಮ್ಮ ಹುಟ್ಟೂರು ಯಾವುದು' ಎಂದೆಲ್ಲಾ ಕೇಳಿದೆ. 'ನಾನು ಹುಟ್ಟಿದ್ದು ಈಗಿನ ಪಾಕಿಸ್ತಾನದಲ್ಲಿ. ಎಂದು ಹೇಳಿದ ಅವರ ಮುಖದಲ್ಲಿ ಒಂದು ಬಗೆಯ ನೋವಿನ ಭಾವ ಮೂಡಿತು. ಈ ಕುರಿತು ಮತ್ತೆ ಏನೂ ಕೇಳಲು ಹೋಗಲಿಲ್ಲ. 
 ಐಎಎಸ್ ಅಧಿಕಾರಿಯಾಗಿ  ಕನ್ನಡ ನಾಡಿನಲ್ಲಿ ಸುದೀರ್ಘ ಕಾಲ ಸೇವೆ ಸಲ್ಲಿಸಿ ತಮ್ಮ ದಕ್ಷತೆ, ಪ್ರಾಮಾಣಿಕತೆಗಳ ಮೂಲಕ ಜನಪ್ರೀತಿಯನ್ನು ಗಳಿಸಿಕೊಂಡವರು ಚಿರಂಜೀವಿ ಸಿಂಗ್. ಸರ್ಕಾರದ ಉನ್ನತ ಹಂತದ ಅಧಿಕಾರಶಾಹಿಯ ಚೌಕಟ್ಟಿನಲ್ಲಿದ್ದುಕೊಂಡೇ ವೈಚಾರಿಕ ಬದ್ಧತೆಯನ್ನುಳಿಸಿಕೊಂಡು ಬಂದ ಸರಳ ಸಜ್ಜನಿಕೆಯ ವ್ಯಕ್ತಿತ್ವ ಇವರದ್ದು. ಈಗ ನಿವೃತ್ತ ಜೀವನ ನಡೆಸುತ್ತಿರುವ ಚಿರಂಜೀವಿ ಸಿಂಗ್ ಹಲವು ಸಮಕಾಲೀನ ವಿದ್ಯಮಾನಗಳ ಕುರಿತು ಇಲ್ಲಿ ತಮ್ಮ ನೋಟಗಳನ್ನು ಹಂಚಿಕೊಂಡಿದ್ದಾರೆ.  




ರಾಜ್ಯದ ಕಾರ್ಯಾಂಗದ ಭಾಗವಾಗಿ ಹಲವಾರು ವರ್ಷಗಳ ಉನ್ನತ ಹುದ್ದೆಯನ್ನು ಅಲಂಕರಿಸಿದ್ದೀರಿ. ನಿಮ್ಮ ಅನುಭವಗಳ ಹಿನ್ನೆಲೆಯಲ್ಲಿ ಸಮಾಜದಲ್ಲಿ ಒಬ್ಬ ಅಧಿಕಾರಿಯ ಪಾತ್ರವನ್ನು ಹೇಗೆ ನೋಡುತ್ತೀರಿ?
ಅಧಿಕಾರಿಯ ಪಾತ್ರ ಎಂದರೆ ಜನತೆಯ ಸೇವೆ ಮಾಡುವುದಷ್ಟೇ ಆಗಿರುತ್ತದೆ. ಒಬ್ಬ ಸಿವಿಲ್ ಸರ್ವೆಂಟ್ ಅಂದರೆ ಆತ ಜನತೆಯ ಸೇವಕನಾಗಿರಬೇಕು. 

ಹಲವಾರು ಅಧಿಕಾರಿಗಳು ವ್ಯವಸ್ಥೆಯ ಭ್ರಷ್ಟತೆಯೊಂದಿಗೆ ರಾಜಿಯಾಗಿ ಹೋಗುತ್ತಾರೆ. ಇಂತಹದ್ದರಲ್ಲಿ ಒಬ್ಬ ಪ್ರಾಮಾಣಿಕ ಅಧಿಕಾರಿಯಾಗಿ ಸೇವೆ ಸಲ್ಲಿಸಲು ನಿಮಗಿದ್ದ ಪ್ರೇರೇಪಣೆ ಏನು?
ಮುಖ್ಯವಾಗಿ ಪ್ರಾಮಾಣಿಕತೆ ಎನ್ನುವುದು ವ್ಯಕ್ತಿಯೊಬ್ಬ ಅಳವಡಿಸಿಕೊಳ್ಳುವ ಮೌಲ್ಯಗಳ ಪ್ರಶ್ನೆಯಾಗಿರುತ್ತದೆಯಷ್ಟೆ. ಎರಡನೆಯದಾಗಿ ನನ್ನ ಮೇಲಿದ್ದ ಬಹಳಷ್ಟು ಅಧಿಕಾರಿಗಳು ಬಹಳ ಒಳ್ಳೆಯವರಾಗಿದ್ದರು. ಹೀಗಾಗಿ ಬೇರೆ ದಾರಿಯೂ ಗೊತ್ತಾಗದ ವಾತಾವರಣದಲ್ಲಿ ನಾನು ಕೆಲಸ ಮಾಡಿದ್ದು ಮತ್ತೊಂದು ಕಾರಣ. ಆದರೆ ಮುಖ್ಯವಾದದ್ದು ನಾವು ಯಾವ ಮೌಲ್ಯವನ್ನು ಹೊಂದಿರುತ್ತೇವೆನ್ನುವುದು.  

ನಮ್ಮ ರಾಜಕೀಯ ವ್ಯವಸ್ಥೆ ಪ್ರಾಮಾಣಿಕ ಅಧಿಕಾರಿಗಳ ಮೇಲೆ ಒಂದು ಒತ್ತಡ ನೀಡುತ್ತಿರುತ್ತದಲ್ಲಾ?
ಇಲ್ಲಿ ಒತ್ತಡದ ಪ್ರಶ್ನೆ ಅಲ್ಲ. ಪತ್ರಕರ್ತರಾದ ನಿಮಗೆ ಒತ್ತಡ ಇರುವುದಿಲ್ಲವಾ? ಸೇವೆ ಸಲ್ಲಿಸಲು ನೀವು ಯಾವ ಹುದ್ದೆಯಲ್ಲಿದ್ದರೆ ಏನು? ಎಲ್ಲಿದ್ದರೇನು? ಹೆಚ್ಚೆಂದರೆ ಅವರು ನಿಮ್ಮನ್ನು ವರ್ಗಾವಣೆ ಮಾಡಬಹುದು. ಅದಕ್ಕಿಂತ ಜಾಸ್ತಿ ಏನೂ ಆಗುವುದಿಲ್ಲವಲ್ಲ? ಈಗ ಉದಾಹರಣೆಗೆ ನಾನು ಪಂಜಾಬ್‌ನಿಂದ ಬಂದಿದ್ದೇನೆ. ನನಗೆ ಗುಲ್ಬರ್ಗ, ಬೆಳಗಾವಿ ಯಾವುದಾದರೆ ಏನು? ಎಲ್ಲಾ ಒಂದೇ. ವರ್ಗಾವಣೆ ಎನ್ನುವುದು ಒಂದು ಒತ್ತಡ ಅಥವಾ ಭಯವಲ್ಲ. ಯಾರಿಗೂ ಈ ಭಯ ಇರಕೂಡದು. ಈಗಲೂ ಬಹಳಷ್ಟು ದಕ್ಷ ಆಧಿಕಾರಿಗಳಿದ್ದಾರೆ. ಅವರು ಎಲ್ಲೇ ಹೋಗಲಿ ದಕ್ಷತೆಯಿಂದ ಕೆಲಸ ಮಾಡುತ್ತಿದ್ದಾರೆ.

ನಾವು ಇಂದು ಪಾಲಿಸುತ್ತಿರುವ ಅಭಿವೃದ್ಧಿಯ ಮಾನದಂಡಗಳು ಬಹುತೇಕ ವಿಶ್ವಬ್ಯಾಂಕ್- ಐಎಂಎಫ್ ಪ್ರಣೀತ ಮಾನದಂಡಗಳೇ ಆಗಿವೆ. ಇದು ದೇಶದ ಅಭಿವೃದ್ಧಿಗೆ ಎಷ್ಟು ಸಹಾಯಕ?
ಈ ಮಾನದಂಡಗಳು ತಪ್ಪು. ಯಾಕೆಂದರೆ ಅವು ಹೇಳುವುದು ಮಾರುಕಟ್ಟೆ ದೃಷ್ಟಿಕೋನವನ್ನು. ಪ್ರತಿಯೊಂದನ್ನೂ ಮಾರುಕಟ್ಟೆಯ ಮೇಲೇಯೇ ನಿರ್ಧರಿಸುವುದು ಸರಿಯಲ್ಲ. ಇದರಿಂದ ಹೊರಬರಲು ನಾವು ನಮ್ಮ ಸಾಂಪ್ರದಾಯಿಕ ದಾರಿಗಳನ್ನು ಕಂಡುಕೊಳ್ಳಬೇಕು. ಬರೀ ಶೇಕಡಾ ೯ ರ ಅಭಿವೃದ್ಧಿ ದರವನ್ನು ಬೆನ್ನತ್ತಿಕೊಂಡು ಹೋಗುವುದೇ ನಮ್ಮ ಏಕೈಕ ಗುರಿಯಾಗಬೇಕಾದ ಅಗತ್ಯವಿಲ್ಲ. ಬಡವರ ಮತ್ತು ಶ್ರೀಮಂತರ ನಡುವಿನ ಅಂತರ ಯಾವ ಪ್ರಮಾಣದಲ್ಲಿ ಹೆಚ್ಚಾಗುತ್ತಿದೆ ಎಂದು ನೋಡಿ. ಕೆಲವರು ಶೆಕಡಾ ೯ರ ಬೆಳವಣಿಗೆ ಸಾಧಿಸುತ್ತಿರುವುದು ಸರಿ. ಆದರೆ ಬಹಳಷ್ಟು ಜನರು ಶೇಕಡಾ ಒಂದರಷ್ಟೂ ಅಭಿವೃದ್ಧಿ ಹೊಂದುತ್ತಿಲ್ಲವಲ್ಲ? ನನ್ನ ದೃಷ್ಟಿಯಲ್ಲಿ ಇದು ಸರಿಯಲ್ಲ. ಬೇಕಾದರೆ ಅಭಿವೃದ್ಧಿ ಸೂಚ್ಯಂಕಗಳಲ್ಲಿ ನಮ್ಮದು ಅಲ್ಪ ಬೆಳವಣಿಗೆ ದರ ಇರಲಿ. ಆದರೆ ಎಲ್ಲರೂ ಸಮಾನವಾಗಿ ಮುಂದೆ ಬರಲಿ. ಎಲ್ಲಾ ಸಮಸ್ಯೆಗಳಿಗೆ ಮಾರುಕಟ್ಟೆಯೇ ಪರಿಹಾರ ಎಂದುಕೊಂಡಿರುವುದು ಸರಿಯಲ್ಲ. ಉದಾಹರಣೆಗೆ ಈ ಹಿಂದೆ ಗಣಿಗಾರಿಕೆಗೆ ಸಂಬಂಧಿಸಿದ ರಫ್ತು ಉದ್ದಿಮೆ ಸಾರ್ವಜನಿಕ ಕ್ಷೇತ್ರದ ಹಿಡಿತದಲ್ಲಿತ್ತು. ಎನ್.ಎಂ.ಡಿ.ಸಿಯನ್ನು ರಚಿಸಲಾಗಿತ್ತು. ಈಗ ಈ ಕ್ಷೇತ್ರವನ್ನು ಖಾಸಗಿಕರಿಸಿದ ಮೇಲೆ ಏನೆಲ್ಲಾ ಆಗಿದೆ ನೀವೇ ನೋಡುತ್ತಿದ್ದೀರಲ್ಲ. ನಮ್ಮ ಪರಿಸ್ಥಿತಿಯಲ್ಲಿ ಖಾಸಗೀಕರಣವೇ ಎಲ್ಲದಕ್ಕೂ ಪರಿಹಾರ ಅಲ್ಲ.  ಹಾಗಂತ ಪ್ರತಿಯೊಂದಕ್ಕೂ ಸರ್ಕಾರ ಕೈಹಾಕಬಾರದು ಎನ್ನುವುದನ್ನು ನಾನು ಒಪ್ಪುತ್ತೇನೆ. ಪ್ರವಾಸೋದ್ಯಮ, ಹೋಟೆಲ್ ಉದ್ಯಮ ಮುಂತಾದವನ್ನು ಸರ್ಕಾರ ನಡೆಸಬೇಕಾಗಿಲ್ಲ. ಆದರೆ ಖನಿಜ ಸಂಪತ್ತು, ನೀರು ಸರಬರಾಜು, ವಿದ್ಯುತ್, ಮುಖ್ಯವಾಗಿ ಶಿಕ್ಷಣ ಇಂತವನ್ನೆಲ್ಲಾ ಸರ್ಕಾರವೇ ನಡೆಸಬೇಕು. 

ಕರ್ನಾಟಕದಲ್ಲಿ ಆಡಳಿತ ಭಾಷೆಯಾಗಿ ಕನ್ನಡವನ್ನು ಬೆಳೆಸುವ ವಿಚಾರ ಇನ್ನೂ ಕನಸಾಗಿಯೇ ಉಳಿದಿದೆ. ಈ ವಿಷಯದಲ್ಲಿ ಏನಾಗಬೇಕಿದೆ? 
ಆಡಳಿತ ಭಾಷೆ ಕನ್ನಡ ಅಲ್ಲ ಎಂದು ಹೇಳುವುದು ತಪ್ಪಾಗುತ್ತದೆ. ಹಿಂದಿ ಪ್ರದೇಶಗಳನ್ನು ಬಿಟ್ಟಂತೆ ಉಳಿದ ರಾಜ್ಯಗಳಲ್ಲಿ ಎಲ್ಲಕ್ಕಿಂತ ಹೆಚ್ಚು ಪ್ರಾದೇಶಿಕ ಭಾಷೆಯಲ್ಲಿ ಕೆಲಸವಾಗುತ್ತಿರುವುದು ಕರ್ನಾಟಕದಲ್ಲೇ. ಕಛೇರಿಗಳಲ್ಲಿ ಟಿಪ್ಪಣಿ (ಫೈಲ್ ನೋಟಿಂಗ್) ಕುರಿತು ಹೇಳುವುದಾದರೆ ಅದೇನೂ ಸಾರ್ವಜನಿಕರೊಂದಿಗೆ ನಡೆಸುವ ವ್ಯವಹಾರ ಅಲ್ಲ. ಜನತೆಯೊಂದಿಗೆ ನಡೆಸುವ ಎಲ್ಲಾ ವ್ಯವಹಾರ ಜನರ ಭಾಷೆಯಲ್ಲಿ ನಡೆಯಬೇಕು. ಅದು ನಡೆಯುತ್ತಿದೆ. ಮಾತ್ರವಲ್ಲ ಶೇಕಡಾ ೯೦ ರಷ್ಟು ಫೈಲ್ ಕೆಲಸಗಳು ನಡೆಯುವುದೂ ಸಹ ಕನ್ನಡದಲೇ ನಡೆಯುತ್ತಿವೆ. 

ಆದರೆ ಈ ಆಡಳಿತ ಭಾಷೆ ಎನ್ನುವುದು ಅಷ್ಟು ಜನಸ್ನೇಹಿಯಾಗಿಲ್ಲವಲ್ಲ?
ಇದು ಸಂಸ್ಕೃತೀಕರಣದ ಸಮಸ್ಯೆ. ಇಂದು ಹೊಸದಾಗಿ ಆಗುತ್ತಿರುವ ಪದಬಳಕೆ ಸಂಸ್ಕೃತದಲ್ಲಿ ಆಗುತ್ತಿದೆ. ಹಳೆಯ ಪದಬಳಕೆಯನ್ನು ಯಾಕೆ ನೀವು ಉಳಿಸಿಕೊಂಡು ಹೋಗುತ್ತಿಲ್ಲ? ಉದಾಹರಣೆಗೆ ನೋಡಿ. ಶೇಕ್‌ದಾರ್ ಎಂದರೆ ಎಲ್ಲರಿಗೂ ಗೊತ್ತಿದೆ. ಆದರೆ ಅದರ ಬದಲು ’ರಾಜಸ್ವ ನಿರೀಕ್ಷಕ’ ಎಂದು ಬಳಸುವ ಅಗತ್ಯ ಏನಿದೆ ಹೇಳಿ? ಶೇಕ್‌ದಾರ್ ಪದ ಪಾರ್ಸಿಯಿಂದ ಬಂದಿದೆ. ಸುಮಾರು ೨೦೦ ವರ್ಷಗಳಿಗಿಂತಲೂ ಹೆಚ್ಚು ಕಾಲದಿಂದ ಅದನ್ನು ಬಳಸುತ್ತಿದ್ದೇವೆ. ರಾಜಸ್ವ ನಿರೀಕ್ಷಕ ಎಂದರೆ ಯಾರಿಗೆ ತಾನೇ ಅರ್ಥವಾಗಬೇಕು? ಇಂಜಿನಿಯರ್ ಎಂದು ಎಲ್ಲರೂ ಹೇಳುತ್ತಾರೆ. ಅವರಿಗೆ ’ಅಭಿಯಂತರರು’ ಎಂದು ಯಾಕೆ ಕರೆಯಬೇಕು? ಹೀಗಾಗಿ ಆಡಳಿತ ಭಾಷೆಯ ಸಮಸ್ಯೆ ಕನ್ನಡದ ಸಮಸ್ಯೆಯಲ್ಲ. ಅದು ಸಂಸ್ಕೃತದ ಸಮಸ್ಯೆ. ಈಗ ನೋಡಿ ’ಇಲ್ಲಿ ಉಚ್ಚೆ ಮಾಡಬೇಡಿ’ ಎಂದು ಬರೆಯುವ ಬದಲು  'ಮೂತ್ರ ವಿಸರ್ಜನೆ ಮಾಡಬೇಡಿ’ ಎಂದು  ಬರೆಯುವಲ್ಲಿನ ಮೇಲರಿಮೆಯನ್ನು ಗಮನಿಸಿ. ನಮ್ಮ ಆಡು ಭಾಷೆಯನ್ನು ಬಳಸುವುದು ನಮ್ಮಲ್ಲಿ ಕೀಳರಿಮೆ ಮೂಡಿಸಿದಂತೆ ಎಂದು ಯೋಚಿಸುತ್ತೇವೆ. ಇದು ಗ್ರಾಮ್ಯ ಭಾಷೆ, ಕೀಳುಭಾಷೆ ಎಂಬ ಭಾವನೆ ನಮ್ಮಲ್ಲಿದೆ. ಇದು ನಮ್ಮ ಮಾನಸಿಕತೆಯ ಪ್ರಶ್ನೆ. ಪತ್ರಿಕೆಗಳಲ್ಲೇ ನೋಡಿ. ಸಂಸ್ಕೃತ ಪದಬಳಕೆ ಹೆಚ್ಚಾಗುತ್ತಿದೆ. 

ಇತ್ತೀಚೆಗೆ ಮಾಂಟೆಕ್ ಸಿಂಗ್ ಅಹ್ಲುವಾಲಿಯಾ ಮುಂದಿಟ್ಟ ಬಡತನ ರೇಖೆಯ ಮಾನದಂಡ ಸೂಕ್ತವೆನಿಸುತ್ತದೆಯೇ?
ಇದು ತುಂಬಾ ತಪ್ಪು ಕಲ್ಪನೆ. ಬಡತನ ರೇಖೆಯನ್ನು ೨೮ ರೂಪಾಯಿಗೆ ಇಳಿಸಿರುವುದು ಅತ್ಯಂತ ದಡ್ಡತನ. ಅಷ್ಟು ಹಣದಲ್ಲಿ ಯಾರು ಜೀವಿಸಲು ಸಾಧ್ಯ? ಅದು ಸಾಧ್ಯವಿಲ್ಲ. ಇಂದು ಪಿ. ಸಾಯಿನಾಥ್ ಕೂಡಾ ಇದೇ ವಿಷಯ ಬರೆದಿದ್ದಾರೆ ನೋಡಿ. ಕಾರ್ಪೊರೇಟ್ ಜಗತ್ತಿಗೆ ಎಷ್ಟೊಂದು ವಿನಾಯ್ತಿಗಳನ್ನು ನೀಡಿ ಬಡವರ ವಿಷಯದಲ್ಲಿ ಹೀಗೆ ಮಾಡುತ್ತಿರುವುದು ತಪ್ಪು. ಹೀಗೆ ಮಾಡುತ್ತಿರುವುದಕ್ಕೆ ಕಾರಣ ನನಗನ್ನಿಸುವಂತೆ ಬಜೆಟ್‌ನಲ್ಲಿ ಸಂಖ್ಯೆಯನ್ನು ಸೀಮಿತಗೊಳಿಸಲಿಕ್ಕೆ ಈ ರೀತಿ ಮಾಡಲಾಗಿದೆ. ಇದು ಬಜೆಟ್ ಪ್ರಶ್ನೆಯ ಜೊತೆಗೆ ಸರ್ಕಾರದ ಆದ್ಯತೆಯ ಪ್ರಶ್ನೆ ಕೂಡಾ ಹೌದು. ಶೇಕಡಾ ೯ ಅಭಿವೃದ್ಧಿ ದರ ಕಾರ್ಪೊರೇಟ್ ವಲಯದಿಂದ ಬಂದೊಡನೆ ಬಡತನ ನಿರ್ಮೂಲನೆಗೆ ಆಧ್ಯತೆಯಿಲ್ಲದಂತಾಗುತ್ತದೆ. ನನ್ನ ಪ್ರಕಾರ ನಮಗೆ ಬಡತನ ನಿರ್ಮೂಲನೆಯೇ ನಮ್ಮ ಪ್ರಥಮ ಆದ್ಯತೆಯಾಗಬೇಕು. 

ಸ್ವತಂತ್ರಗೊಂಡು ೬೦ ವರ್ಷಗಳಾದ ಮೇಲೂ ನಮ್ಮ ಆಡಳಿತ ವ್ಯವಸ್ಥೆಯಲ್ಲಿ ಬಿಡುಗಡೆಯಾದ ಹಣಕ್ಕೆ ’ಉತ್ತರದಾಯಿತ್ವ’ ಸಾಧಿಸಲು ಒಂದು ನೀತಿಯಾಗಲೀ, ಯಂತ್ರಾಂಗವಾಗಲೀ ಇಲ್ಲದಿರಲು ಏನು ಕಾರಣ?
ಇದು ಬಹಳ ಗಂಭೀರವಾದ ಸಮಸ್ಯೆ. ಈ ಹಿಂದೆ ಪಂಚಾಯತ್ ರಾಜ್ ಜಾರಿಯಾಗುವಾಗ ಈ ಸಮಸ್ಯೆ ಪರಿಹಾರವಾಗಬಹುದು ಎಂದು ಭಾವಿಸಲಾಗಿತ್ತು. ಆದರೆ ಅದು ಹಾಗೆ ಆಗಲೇ ಇಲ್ಲ. ಇದಕ್ಕೆ ಸುಲಭ ಪರಿಹಾರವೇನೂ ಇಲ್ಲ. ಜನರಲ್ಲಿ ಜಾಗೃತಿಯಾಗಬೇಕು. ಅವರೇ ಕ್ರಮ ಕೈಗೊಳ್ಳಬೇಕು. ಒಂದು ಗ್ರಾಮ ಪಂಚಾಯತಿಯಲ್ಲಿ ಎಷ್ಟು ಹಣ ಬಿಡುಗಡೆಯಗಿದೆ ಎಂದು ಜನರಿಗೆ ತಿಳಿದಿರುತ್ತದೆ. ಆದರೆ ತಮಗೆ ತಿಳಿದೂ ಜನರು ಮಾತನಾಡುವುದಿಲ್ಲ. ಇದಕ್ಕೆ ಬೇರೆ ಬೇರೆ ಕಾರಣಗಳಿರುತ್ತವೆ. ತಮಗೆ ಯಾಕೆ ಉಸಾಬರಿ ಬೇಕು ಎಂದು ಯೋಚಿಸುತ್ತಾರೆ ಇಲ್ಲವೇ ತಮ್ಮ ಜಾತಿಯವರೆಂದು ಅಂತವರನ್ನು ಪ್ರಶ್ನಿಸುವುದಿಲ್ಲ. ನಮ್ಮ ಜಾತಿಯ ಅಧಿಕಾರಿ ಅಥವಾ ಸಚಿವ ಇದ್ದರೆ ಆತ ಏನೇ ಮಾಡಿದರೂ ವಿನಾಯ್ತಿ ನೀಡುತ್ತೇವೆ. ಇಂತಹ ವಿಷಯಗಳಲ್ಲಿ ಕಾನೂನುಗಳ ಕೊರತೆಯಿಲ್ಲ. ಆದರೆ ಅದರ ಪಾಲನೆಗೆ ನಾವು ಮುಂದಾಗುವುದಿಲ್ಲ. 

ನಮ್ಮ ಬಜೆಟ್‌ಗಳು ಮಾತಿನಲ್ಲಿ ಮಾತ್ರ ’ಬಡವರ’ ಪರವಾಗಿವೆ. ಮಧ್ಯಮ ವರ್ಗದ ಹಿತವನ್ನೂ ಕಡೆಗಣಿಸಲಾಗಿರುತ್ತದೆ. ಜನರ ಜೀವನ ಮಟ್ಟದ ಅಭಿವೃದ್ಧಿಗೆ ಈ ಬಜೆಟ್‌ಗಳು ನಿಜಕ್ಕೂ ಸಹಕಾರಿಯಾಗುತ್ತಿವೆಯೇ?
ನನ್ನ ಅನುಭವದ ಮೂಲಕ ಹೇಳುವುದಾದರೆ ಬಜೆಟ್‌ಗಳಲ್ಲಿ ಒಂದು ಕಡೆಯಿಂದ ನೀಡಿದರೆ ಮತ್ತೊಂದು ಕಡೆಯಿಂದ ಕಿತ್ತುಕೊಳ್ಳಲಾಗುತ್ತದೆ. ಬಲಗೈಯಲ್ಲಿ ಕೊಡುವುದು ಎಡಕೈಯಿಂದ ಕಿತ್ತುಕೊಳ್ಳುವ ನೀತಿ ಇದು. ಕೇಂದ್ರ ಸರ್ಕಾರದ ಬಜೆಟನ್ನೇ ತೆಗೆದುಕೊಳ್ಳಿ. ರಕ್ಷಣೆ, ವಿಮೆ, ವೇತನ ಮತ್ತು ಸಬ್ಸಿಡಿಗಳೇ ಇಡೀ ಬಜೆಟ್‌ನ ನಾಲ್ಕನೇ ಮೂರರಷ್ಟು ಆಗುತ್ತವೆ. ಉಳಿದಿದ್ದು ನಾಲ್ಕನೇ ಒಂದು ಭಾಗ ಮಾತ್ರ. ಇಲ್ಲಿ ಸಬ್ಸಿಡಿ, ವಿನಾಯಿತಿಗಳನ್ನು ನೀಡುವಾಗ ಮತ್ತೆ ಸರ್ಕಾರದ ಆದ್ಯತೆಯ ಪ್ರಶ್ನೆ ಬರುತ್ತದೆ. ಇಲ್ಲಿ ಮತ್ತೆ ಶೇಕಡಾ ೯ ಅಭಿವೃದ್ಧಿ ದರ ಬೇಕು ಅಂದರೆ ಅದು ಕೈಗಾರಿಕೆಯಿಂದ ಮಾತ್ರ. ಕೃಷಿ ಹಾಗೂ ಗ್ರಾಮಾಭಿವೃದ್ಧಿಯಿಂದ ಆ ಅಭಿವೃದ್ಧಿ ಸಾಧ್ಯವಾಗುವುದಿಲ್ಲ. ಹೀಗಾಗಿ ಶೇಕಡಾ ೮-೯ರ ಅಭಿವೃದ್ಧಿ ದರವನ್ನು ಸಾಧಿಸಲಿಕ್ಕಾಗಿ ಎಲ್ಲಾ ಸಬ್ಸಿಡಿ, ವಿನಾಯ್ತಿಗಳನ್ನು ಕೈಗಾರಿಕೆಗೆ, ಕಾರ್ಪೊರೇಟ್‌ಗಳಿಗೆ ನೀಡಲಾಗುತ್ತಿದೆ. ಅದೇ ನೀವು ಮುಂದುವರೆದ ದೇಶಗಳಲ್ಲಿ ನೋಡಿ. ಒಂದು ಹಂತದ ಪ್ರಗತಿಯಾದ ನಂತರ ಅಲ್ಲಿ ಅಭಿವೃದ್ಧಿ ದರ ಎನ್ನುವುದು ಕೇವಲ ಶೇಕಡಾ ೧ ಅಥವಾ ೨ ಅಷ್ಟೆ. ನಮ್ಮಲ್ಲಿ ಆ ಮಟ್ಟದ ಪ್ರಗತಿಯಾಗಿರದಿದ್ದರೂ ಸಹ ಇಲ್ಲಿಯೂ ಸಾಮಾಜಿಕ ನ್ಯಾಯದ ಕಡೆ ನಾವು ಹೆಚ್ಚು ಗಮನ ನೀಡಬೇಕು. 

ಜಾಗತೀಕರಣದ ಪರಿಣಾಮವಾಗಿ ನಗರೀಕರಣ ಕೂಡಾ ಎಗ್ಗಿಲ್ಲದೇ ನಡೆಯುತ್ತಿದೆ. ಇದರ ಪರಿಣಾಮ ಯಾವ ಬಗೆಯದ್ದು?
ಪರಿಣಾಮ ಭೀಕರವಾದದ್ದು.  ಬೆಂಗಳೂರಿಗೇ ಎಲ್ಲಾ ಪ್ರಾಮುಖ್ಯತೆ ನೀಡುತ್ತಿರುವುದು ಒಳ್ಳೆಯದು ಮಾಡುವುದಿಲ್ಲ. ವಾಸ್ತವವಾಗಿ ನಾನು ನಗರಾಭಿವೃದ್ಧಿ ಕಾರ್ಯದರ್ಶಿಯಾಗಿದ್ದಾಗ ಸರ್ಕಾರಕ್ಕೆ ಒಂದು ಪ್ರಸ್ತಾಪವನ್ನು ಸಲ್ಲಿಸಿದ್ದೆ. ತುಂಗ ಭದ್ರೆಯ ದಡದಲ್ಲಿ ಹರಿಹರ - ರಾಣಿಬೆನ್ನೂರಿನಲ್ಲಿ ಒಂದು ಹೊಸ ರಾಜಧಾನಿ ನಿರ್ಮಿಸಬೇಕು ಎಂಬುದು ಆ ಪ್ರಸ್ತಾಪವಾಗಿತ್ತು. ಇದರಿಂದ ಉತ್ತರ ಕರ್ನಾಟಕಕ್ಕೂ ಸಮಾಧಾನವಾಗುತ್ತದೆಯಲ್ಲದೇ ಅದು ಕೇಂದ್ರಸ್ಥಾನ ಕೂಡ. ಇದರಿಂದ ಬೆಂಗಳೂರಿಗೂ ಸಹಕಾರಿಯಾಗುತ್ತದೆ. ಆದರೆ ಈಗ ಆಗುತ್ತಿರುವುದು ಕೊನೆಗೆ ಕುಡಿಯುವ ನೀರೂ ಸಿಗದ ಪರಿಸ್ಥಿತಿಗೆ ಕೊಂಡೊಯ್ಯಲಿದೆ. ಇಲ್ಲಿ ಟ್ರಾಫಿಕ್ ಸಮಸ್ಯೆ ದೊಡ್ಡದೆಂಬಂತೆ ನೋಡುತ್ತೇವೆ. ಆದರೆ ಇಲ್ಲಿ ನೀರಿನ ಸಮಸ್ಯೆಯ ಮುಂದೆ ಸಾರಿಗೆ ಸಮಸ್ಯೆ ಸಮಸ್ಯೆ ತೀರಾ ನಗಣ್ಯವಾಗಲಿದೆ.  

ರಾಜ್ಯದಲ್ಲಿಯಾಗಲೀ, ಕೇಂದ್ರದಲ್ಲಿಯಾಗಲೀ ಭ್ರಷ್ಟಾಚಾರ ಎನ್ನುವುದು ಮೇರೆ ಮೀರಿದೆ. ಜನಲೋಕಪಾಲಕ್ಕಾಗಿ ಅಣ್ಣಾ ಹಜಾರೆ ಆಂದೋಲನವೂ ನಡೆದಿದೆ. ಈ ಸಂದರ್ಭದಲ್ಲಿ ಭ್ರಷ್ಟಾಚಾರದ ನಿಯಂತ್ರಣ ಹೇಗೆ ಸಾಧ್ಯ ಎಂದು ನಿಮ್ಮ ಅಭಿಪ್ರಾಯ?
ಭ್ರಷ್ಟಾಚಾರ ಒಂದು ಸಾಮಾಜಿಕ ಕ್ಯಾನ್ಸರ್ ಆಗಿದೆ. ಜನಲೋಕಪಾಲದಿಂದಾಗಲೀ ಲೋಕಪಾಲದಿಂದಾಗಲೀ ಭ್ರಷ್ಟಾಚಾರವನ್ನು ತಡೆಯಬಹುದು ಎಂಬುದು ಕಾರ್ಯಸಾಧುವಲ್ಲ. ಎಲ್ಲಿಯವರೆಗೆ ಲಂಚ ಕೊಡುವವರು ಇರುತ್ತಾರೋ ಅಲ್ಲಿಯವರೆಗೆ ತೆಗೆದುಕೊಳ್ಳುವವರೂ ಇರುತ್ತಾರೆ. ನಾವು ಮೊದಲು ನಿರ್ಧರಿಸಬೇಕು. ನಾವು ಕೊಡಬಾರದುದು ಎಂದು. ಇಂದು ಸೇನಾ ಮುಖ್ಯಸ್ಥರು ಹೇಳಿರುವ ಸಂಗತಿಯನ್ನೇ ನೋಡಿ.  ಹತ್ತು, ಇಪ್ಪತ್ತು, ಐವತ್ತು ಕೋಟಿ ರೂಪಾಯಿಗಳ ಭ್ರಷ್ಟಾಚಾರದಲ್ಲಿ ಲೋಕಪಾಲ, ವಗೈರೆಗಳೆಲ್ಲಾ ಕೆಲಸ ಮಾಡುವುದಿಲ್ಲ. ಅಣ್ಣಾ ಹಜಾರೆ ಪಾಪ ಅಷ್ಟಾದರೂ ಭ್ರಷ್ಟಾಚಾರದ ವಿರುದ್ಧ ದನಿ ಎತ್ತಿದರು. ಇದು ಇನ್ನೂ ಮುಂದುವರೆದು ಜನತೆಯ ಸಾಮೂಹಿಕ ಚಳವಳಿಯಾದಾಗ ಮಾತ್ರ ಸಾಧ್ಯವಾಗುತ್ತದೆ, ಒದು ಲೋಕಪಾಲದಿಂದ ಏನೂ ಆಗುವುದಿಲ್ಲ. ಟ್ರಾಫಿಕ್ ಚೆಕ್‌ಪೋಸ್ಟ್‌ಗಳಲ್ಲಿ ಲೋಕಪಾಲರು ಬಂದು ನೋಡಲು ಆಗುತ್ತಾ? ಹಾಗೆಯೇ ಭ್ರಷ್ಟಾಚಾರದ ಮೂಲ ಇರುವುದೇ ಚುನಾವಣಾ ಭ್ರಷ್ಟಾಚಾಋದಲ್ಲಿ. ಚುನಾವಣಾ ಸುಧಾರಣೆಗಳಿಂದಲೇ ಭ್ರಷ್ಟಾಚಾರ ನಿಯಂತ್ರಣ ಆರಂಭವಾಗಬೇಕಿದೆ. ಇದೇ ಹೊತ್ತಿನಲ್ಲಿ ಇಂದು ನೋಡಿದರೆ ಸಾರ್ವಜನಿಕ ಕ್ಷೇತ್ರದಲ್ಲಿನ ಭ್ರಷ್ಟಾಚಾರಕ್ಕಿತಲೂ ಹತ್ತು ಪಟ್ಟು ಹೆಚ್ಚು ಖಾಸಗಿ ಕ್ಷೇತ್ರದದಲ್ಲಿ ಭ್ರಷ್ಟಾಚಾರ ನಡೆಯುತ್ತಿದೆ. ಇದರ ಬಗ್ಗೆ ಯಾರೂ ಮಾತನಾಡುತ್ತಿಲ್ಲವಲ್ಲ?    

ಪತ್ರಿಕೋದ್ಯಮ ಸಾಗುತ್ತಿರುವ ದಿಕ್ಕಿನ ಕುರಿತು ಏನು ಹೇಳುತ್ತೀರಿ? 
ಪತ್ರಿಕೋದ್ಯಮ ಒಂದು ಕಡೆ ಕಾರ್ಪೊರೇಟೀಕರಣವಾಗುತ್ತಿದ್ದರೆ ಮತ್ತೊಂದು ಕಡೆ ಕೆಲವೇ ಮೀಡಿಯಾ ಹೌಸ್‌ಗಳು ಎಲ್ಲಾ ಸುದ್ದಿ ಮಾಧ್ಯಮಗಳನ್ನೂ ಕಬ್ಜ ಮಾಡಿಕೊಳ್ಳುತ್ತಿರುವುದು ಬಹಳ ಅಪಾಯಕಾರಿ ಬೆಳವಣಿಗೆ. ಕೆಲವೇ ಪತ್ರಿಕೆಗಳು ಬಿಟ್ಟರೆ ಎಲ್ಲಾ ಮನೋರಂಜನೆಯಾಗಿಬಿಟ್ಟಿದೆ. ಸುದ್ದಿ ಕೂಡಾ ಇಂದು ಮನರಂಜನೆಯಾಗಿಬಿಟ್ಟಿದೆಯಲ್ಲ?

ನಕ್ಸಲಿಸಂ’ ಸಮಸ್ಯೆಯ ಕುರಿತು ಪ್ರಭುತ್ವದ ನಿಲುವು ಏನಾಗಿರಬೇಕು ಎನ್ನುತ್ತೀರಿ?
ನಕ್ಸಲಿಸಂ ನಮ್ಮ ಕರ್ನಾಟಕ ರಾಜ್ಯದಲ್ಲಿ ಅಷ್ಟೊಂದು ದೊಡ್ಡ ಸಮಸ್ಯೆಯಾಗಿಲ್ಲ. ಆದರೆ ನೀವು ಜಾರ್ಖಂಡ್, ಛತ್ತೀಸ್‌ಗಢ, ಮಧ್ಯಪ್ರದೇಶ, ಒಡಿಶಾಗಳಲ್ಲಿ ನೋಡಿದಾಗ ಆದಿವಾಸಿ ಜನರ ಭೂಮಿಯನ್ನು, ಅವರ ನೀರನ್ನು ಕಿತ್ತುಕೊಂಡು ಕಾರ್ಪೊರೇಟ್‌ಗಳಿಗೆ ಒಪ್ಪಿಸಲಾಗುತ್ತಿದೆ. ಹೀಗೆ ಈ ಶೇಕಡಾ ೮-೯ರ ಅಭಿವೃದ್ಧಿ ದರಕ್ಕಾಗಿ ಜನರದ್ದೆಲ್ಲವನ್ನೂ ಕಿತ್ತುಕೊಳ್ಳಲಾಗುತ್ತಿದ್ದರೆ ಅವರಿಗೆ ಬೇರೆ ದಾರಿ ಏನಿದೆ? ಹೀಗಾಗಿ ಇದನ್ನು ಬರೀ ಕಾನೂನು ಸುವ್ಯವಸ್ಥೆಯ ಪ್ರಶ್ನೆಯನ್ನಾಗಿ ನೋಡುತ್ತೀರೋ ಅಥವಾ ಕಾರ್ಪೊರೇಟ್ ಲೂಟಿಯ ಪ್ರಶ್ನೆಯನ್ನಾಗಿ ನೋಡುತ್ತೀರೋ? ಕರ್ನಾಟಕದ ಲ್ಯಾಂಡ್ ಬ್ಯಾಂಕ್ ನೀತಿಯನ್ನೇ ನೋಡಿ. ಇಲ್ಲ್ಲಿ ದೊಡ್ಡ ಜಮೀನ್ದಾರರಿಲ್ಲ. ಇಲ್ಲಿ ಹತ್ತು ಎಕರೆ ಜಮೀನು ಇಟ್ಟುಕೊಂಡವನು ಚಿಕ್ಕಪೇಟೆಯಲ್ಲಿ ಒಂದು ಚಿಕ್ಕ ಅಂಗಡಿ ಇಟ್ಟುಕೊಂಡವನಿಗಿಂತ ಕಡಿಮೆ ಆದಾಯ ಹೊಂದಿರುತ್ತಾನೆ. ಅಂತಹ ರೈತರ ಜಮೀನನ್ನು ತೆಗೆದುಕೊಂಡು ಕಾರ್ಪೊರೇಟ್‌ಗಳಿಗೆ ಕೊಟ್ಟಾಗ ಅವರು ಹೇಗೆ ಧ್ವನಿ ಎತ್ತಬೇಕು? ಇಂತಹ ಪರಿಸ್ಥಿತಿಯನ್ನು ನಕ್ಸಲೀಯರು ಬಳಸಿಕೊಳ್ಳುತ್ತಿದ್ದಾರೆ. ಆದರೆ ನಕ್ಸಲೈಟ್ ಚಳವಳಿಯಿಂದ ದನಿ ಇಲ್ಲದವರಿಗೆ ದನಿ ಸಿಕ್ಕಿದೆ ಎಂಬುದನ್ನು ನಾವು ಮೊದಲು ಗುರುತಿಸಬೇಕು. ಜನರಿಗೆ ಸರ್ಕಾರ ಯಾಕೆ ಧ್ವನಿಯಾಗಿಲ್ಲ? ಕೇವಲ ಉದ್ಯಮಿಗಳ ಪರವಾಗಿ ಸರ್ಕಾರ ಏಕೆ ಕೆಲಸ ಮಾಡುತ್ತಿದೆ ಎಂಬ ಪ್ರಶ್ನೆ ಬರುತ್ತದೆ. ಇದೇ ವೇಳೆಗೆ ಒಬ್ಬ ರೈತರ ಕುಟುಂಬದಿಂದ ಬಂದ ಪೊಲೀಸ್ ಪೇದೆಗಳನ್ನು ಕೊಲ್ಲುವ ಮೂಲಕ ನಕ್ಸಲೀಯರು ಯಾವ ದೊಡ್ಡ ಕ್ರಾಂತಿ ಮಾಡಲೂ ಸಾಧ್ಯವಿಲ್ಲ. ಇದೂ ಕೂಡ ತಪ್ಪು. ಆದರೆ ನಕ್ಸಲೀಯರ ಹಿಂದೆ ಜನರು ಏಕೆ ಹೋಗುತ್ತಾರೆ ಎಂಬುದನ್ನು ಮುಖ್ಯವಾಗಿ ನೋಡಬೇಕು.

ಇಂದಿನ ಯುವಜನರಿಗೆ ಯಾವ ಸಂದೇಶ ನೀಡಲು ಬಯಸುತ್ತೀರಿ?

ಇಂದಿನ ಯುವಕರು ಬಹಳ ಬುದ್ಧಿವಂತರು. ಅವರಿಗೆ ನನ್ನಂತವರು ಸಂದೇಶ ನೀಡಲು ಏನಿಲ್ಲ  ಬಿಡಿ   

ಹೊಸತು - ಹಳತು : ಬುದ್ದ ತತ್ವ

ಲೋಕದ ಪ್ರತಿಯೊಂದೂ ಎಡೆಬಿಡದ ಚಲನೆಯಲ್ಲಿದೆ. ಕೆಲವೊಮ್ಮೆ ಬರಿಗಣ್ಣಿಗೆ ಚಲಿಸದೇ ಜಡವಾಗಿವೆ ಎಂದು ತೋರುವ ಪ್ರತಿಯೊಂದೂ ಚಲನೆಯಲ್ಲಿದೆ. ಒಂದು ಮರದ ತುಂಡು, ಕಬ್ಬಿಣದ ಬಿಲ್ಲೆ,...

ಮರದೊಂದು ಎಲೆ ನಾನು..

ನನ್ನ ಫೋಟೋ
A Writer, Researcher, Journalist and Activist. Born and brought up from Kugwe a village near Sagara, Shimoga district of Karnataka state. Presently working as the Editor In Chief of PEEPAL MEDIA /PEEPAL TV.