'ಮನಸ್ಸಿದ್ದರೆ ಮಾರ್ಗ’ ಎಂಬ ಹಳೆಯ ನಾಣ್ಣುಡಿಗೆ ನಾಡಿನ ಶಿಕ್ಷಣ ಕ್ಷೇತ್ರದಲ್ಲಿ ಸಿಗುವ ಇತ್ತೀಚಿನ ಉದಾಹರಣೆ ಎಂದರೆ ಬೆಂಗಳೂರಿನ ಸರ್ಕಾರಿ ವಿಜ್ಞಾನ ಕಾಲೇಜು. ಈ ಕಾಲೇಜು ಹತ್ತು ವರ್ಷಗಳಲ್ಲಿ ಹೇಗೆ ಬದಲಾವಣೆ ಸಾಧಿಸಿತು ಎಂಬುದರ ವರದಿ . ದ ಸಂಡೆ ಇಂಡಿಯನ್ ಪತ್ರಿಕೆ ಗಾಗಿ . .
ಖಾಸಗೀಕರಣದ ಈ ಯುಗದಲ್ಲಿ ಉತ್ತಮ ಗುಣಮಟ್ಟದ ಉನ್ನತ ಶಿಕ್ಷಣ ಎನ್ನುವುದು ಬಡ -ಮಧ್ಯಮ ಹಿನ್ನೆಲೆಯ ವಿದಾರ್ಥಿಗಳ ಪಾಲಿಗೆ ಗಗನ ಕುಸುಮವೇ ಆಗಿರುವಾಗ, ಯೂನಿವರ್ಸಿಟಿಗಳು ತಮ್ಮನ್ನುಳಿಸಿಕೊಳ್ಳಲು ಪರದಾಡುತ್ತಿರುವ ಈ ದಿನಗಳಲ್ಲೂ ಒಂದಷ್ಟು ಮಂದಿ ಪ್ರಾಧ್ಯಾಪಕರು ವಿಭಿನ್ನವಾಗಿ ಚಿಂತಿಸಿ, ಶ್ರದ್ಧೆಯಿಂದ ದುಡಿದರೆ ಅದ್ಭುತವನ್ನೇ ಸಾಧಿಸಬಹುದು ಎಂಬುದಕ್ಕೆ ಜೀವಂತ ಉದಾಹರಣೆ ಎಂದರೆ ಬೆಂಗಳೂರಿನ ನೃಪತುಂಗ ರಸ್ತೆಯಲ್ಲಿರುವ ಸರ್ಕಾರಿ ವಿಜ್ಞಾನ ಕಾಲೇಜು. 91 ವರ್ಷಗಳ ಇತಿಹಾಸ ಇರುವ ಈ ಕಾಲೇಜು ಹಿಂದೆ ’ಗ್ಯಾಸ್ ಕಾಲೇಜಿನ (ಸರ್ಕಾರಿ ಕಲಾ ಮತ್ತು ವಿಜ್ಞಾನ ಕಾಲೇಜು) ಭಾಗವಾಗಿದ್ದು 1972ರಲ್ಲಿ ಕೇವಲ ವಿಜ್ಞಾನ ಕಾಲೇಜಾಗಿ ಪ್ರತ್ಯೇಕಗೊಂಡಿತ್ತು. 1997- 1998ರ ವರೆಗೂ ರಾಜ್ಯದ ಎಲ್ಲಾ ಸರ್ಕಾರಿ ಕಾಲೇಜುಗಳ ರೀತಿಯಲ್ಲಿಯೇ ಇದೂ ಕೂಡಾ ಕ್ಷಯ ರೋಗ ಬಡಿದ ಕೃಶವಾದ ರೋಗಿಯಂತೆಯೇ ಇತ್ತು. ಒಂದಿದ್ದರೆ ಮತ್ತೊಂದಿರಲಿಲ್ಲ. ವಿಜ್ಞಾನದ ಪ್ರಯೋಗಾಲಯಗಳು ಪುರಾತನ ಕಾಲದ ವಸ್ತು ಸಂಗ್ರಹಾಲಯಗಳೇ ಆಗಿದ್ದ ಪರಿಸ್ಥಿತಿ ಅದು. ಶೌಚಾಲಯ ವ್ಯವಸ್ಥೆಯೂ ಇಲ್ಲದೇ ನಾರುವಂತಿತ್ತು ಕಾಲೇಜು.
ಆದರೆ ಅಂದಿನಿಂದ ಇಂದಿನವರೆಗಿನ ಹತ್ತು ಹನ್ನೆರಡು ವರ್ಷಗಳಲ್ಲಿ ಈ ಕಾಲೇಜಿನಲ್ಲಾದ ಬದಲಾವಣೆ ನೋಡಿದರೆ ನಿಜಕ್ಕೂ ಅಚ್ಚರಿಯಾಗುತ್ತದೆ. ಇಚ್ಛಾಶಕ್ತಿಯೊಂದಿದ್ದರೆ ಯಾವುದೂ ಅಸಾಧ್ಯ ಅಲ್ಲವೆನ್ನುವುದು ಇಲ್ಲಿ ವೇದ್ಯವಾಗುತ್ತದೆ. ಅಂದು ಕಾಲೇಜಿಗೆ ಜೈವಿಕ ತಂತ್ರಜ್ಞಾನದ ವೃತ್ತಿಪರ ಕೋರ್ಸೊಂದನ್ನು ಮಂಜೂರು ಮಾಡಿಸಿಕೊಳ್ಳಬೇಕೆಂಬ ಇಂಗಿತದೊಂದಿಗೆ ಪ್ರಯತ್ನಶೀಲರಾಗಿದ್ದವರು ಪ್ರೊ. ಹರಿಶ್ಚಂದ್ರ ಭಟ್, ಶ್ರೀಮತಿ ಕೆ.ಎಂ ಶಾರುರಾಜ್, ರಾಮಕೃಷ್ಣಯ್ಯ ಮುಂತಾದವರು. ಆಗ ಪ್ರಯತ್ನ ಕೈಗೂಡಿತ್ತಲ್ಲದೇ ಇಡೀ ಕಾಲೇಜಿನ ಅಮೂಲಾಗ್ರ ಬದಲಾವಣೆಗೆ ಇಟ್ಟ ಮೊದಲ ಹೆಜ್ಜೆ ಅದಾಗಿತ್ತು. ನಂತರ ಸರ್ಕಾರಿ ಪದವಿ ಕಾಲೇಜಿನ ಇತಿಹಾಸದಲ್ಲೇ ಮೊದಲ ಬಾರಿಗೆ ಇಲ್ಲೊಂದು ’ಕ್ಯಾಂಪಸ್ ಸೆಲೆಕ್ಷನ್’ ನಡೆದು ಮೊದಲ ಬ್ಯಾಚ್‌ನ ಎಲ್ಲಾ ವಿದ್ಯಾರ್ಥಿಗಳಿಗೂ ಕೆಲಸ ಖಾಯಂ ಆಗುವುದರೊಂದಿಗೆ ಕಾಲೇಜಿನ ಹಿರಿಮೆ ಹೆಚ್ಚಿತ್ತು.
ನಂತರ ಸರ್ಕಾರಿ ವಿಜ್ಞಾನ ಕಾಲೇಜಿನ ಅಭಿವೃದ್ಧಿಯ ಮತ್ತೊಂದು ಪರ್ವ ಆರಂಭಗೊಂಡಿದ್ದು ೨೦೦೪ರಲ್ಲಿ. ಈ ಕಾಲೇಜಿನಲ್ಲಿ ಹಿಂದೆ ಓದಿರುವ ಹಳೆಯ ವಿದ್ಯಾರ್ಥಿಗಳ ಸಂಘ ಸ್ಥಾಪಿಸಿ ಅವರಲ್ಲಿ ಕೆಲವರು ವಿಶೇಷ ಆಸ್ಥೆ ವಹಿಸುವುದರೊಂದಿಗೆ ಕಾಲೇಜಿನ ಅಭಿವೃದ್ಧಿ ಹೊಸ ಹಂತ ತಲುಪಿತು. ಅದರಲ್ಲೂ ಇನ್ಫೋಸಿಸ್‌ನ ಸ್ಥಾಪಕ ಸದಸ್ಯರಲ್ಲೊಬ್ಬರಾದ ಕೆ. ದಿನೇಶ್ ಹಾಗೂ ಎಚ್.ಎಂ.ಟಿಯ ಮ್ಯಾನೇಜರ್ ಆಗಿರುವ ಎನ್. ಡಿ. ವೀರಣ್ಣಗೌಡ, ಅರಣ್ಯ ಸಹಾಯಕ ಸಂರಕ್ಷಕರಾಗಿದ್ದ ಸಿ. ಎಲ್. ಗೌಡ, ಡಾ. ಜೆ. ಆರ್. ವಿಶ್ವನಾಥ್, ಎಚ್. ಶರತ್‌ಚಂದ್ರ, ಮುಂತಾದವರು ತಾವು ಓದಿದ್ದ ಈ ಕಾಲೇಜಿನ ಅಭಿವೃದ್ಧಿಗೆ ಟೊಂಕ ಕಟ್ಟಿನಿಂತು ಯಾವ ಪ್ರಸಿದ್ಧಿ, ಪ್ರತಿಫಲಗಳ ಅಪೇಕ್ಷೆಯಿಲ್ಲದೆ ಶ್ರಮವಹಿಸಿ ದುಡಿದರು.
ಹಾಗೆ ನೋಡಿದರೆ ಈ ಬಗೆಯಲ್ಲಿ ಹೋರಗಿನಿಂದ ಸಹಕಾರ ನೀಡಲು ಎಲ್ಲಾ ಕಡೆಯೂ ಎಲ್ಲಾ ಕಾಲದಲ್ಲೂ ಜನರಿದ್ದೇ ಇರುತ್ತಾರೆ. ಆದರೆ ಎಷ್ಟೋ ಕಾಲೇಜುಗಳಲ್ಲಿ ಒಂದು ವಿಭಾಗ ಪ್ರಾಧ್ಯಾಪಕರಿಗೂ ಮತ್ತೊಂದು ವಿಭಾಗದವರಿಗೂ ಎಣ್ಣೆ ಸೀಗೇಕಾಯಿ ಸಂಬಂಧ. ಒಂದೇ ವಿಭಾಗದಲ್ಲೇ ಒಬ್ಬರ ಮುಖ ಮತ್ತೊಬ್ಬರ ನೋಡದ ಸ್ಥಿತಿ. ಇನ್ನು ಪ್ರಿನ್ಸಿಪಾಲರಿಗೂ ಪ್ರಾಧ್ಯಾಪಕರಿಗೂ ಎತ್ತು ಏರಿಗೆಳೆದರೆ ಕೋಣ ನೀರಿಗೆಳೆಯುವ ರೀತಿಯಿರುತ್ತದೆ. ಇಂತವರ ನಡುವೆ ವಿದ್ಯಾರ್ಥಿಗಳೆಂಬುವವರ ಪಾಡು ನಾಯಿಪಾಡಾಗಿರುತ್ತದೆ. ಆದರೆ ಸರ್ಕಾರಿ ವಿಜ್ಞಾನ ಕಾಲೇಜು ತೀರಾ ವಿಭಿನ್ನವಾಗಿ ಕಾಣುವುದು ಈ ವಿಚಾರದಲ್ಲಿಯೇ. ಇದೇ ಕಾಲೇಜಿನ ಸಾಧನೆಯ ಹಿಂದಿನ ರಹಸ್ಯವೂ ಹೌದು!
ಹಳೆಯ ವಿದ್ಯಾರ್ಥಿಗಳ ಸಂಘಕ್ಕೆ ಚಾಲನೆ ದೊರೆತು ಹಲವಾರು ಜನರು ಕಾಲೇಜಿನ ಏಳಿಗೆಗಾಗಿ ಮುಂದೆ ಬರುತ್ತಿದ್ದಂತೆಯೇ ಕಾಲೇಜಿನ ಅಧ್ಯಾಪಕರೂ ಚುರುಕುಗೊಂಡು ತುಸು ಹೆಚ್ಚಿನ ಸ್ಪೂರ್ತಿಯಿಂದಲೇ ಕೆಲಸ ನಿರ್ವಹಿಸಿದ್ದಾರೆ. ನಾನಾ ಕೆಲಸಗಳಿಗೆ ಕೊಟ್ಯಂತರ ರೂಪಾಯಿಗಳ ಹಣ ಬರುತ್ತಿದ್ದಂತೆಯೇ ಅದರ ಸದ್ವಿನಿಯೋಗಕ್ಕಾಗಿ ಒಂದು ಆಂತರಿಕ ಗುಣಮಟ್ಟ ಖಾತ್ರಿ ಕೋಶವೊಂದು ರಚನೆಯಾಯಿತು. ಪ್ರಿನ್ಸಿಪಾಲರೂ ಅಷ್ಟೇ ಪಾತ್ರವಹಿಸಿದ್ದಾರೆ. ಆರ್. ಲಕ್ಷ್ಮಿನಾರಾಯಣರಿಂದ ಈ ನಿಟ್ಟಿನಲ್ಲಿ ಉತ್ತಮ ಪ್ರಯತ್ನ ಆರಂಭವಾಗಿತ್ತೆನ್ನಬಹುದು. ನಂತರದಲ್ಲಿ ಅಧಿಕಾರ ವಹಿಸಿಕೊಂಡ ದಿ. ದೊಡ್ಡಯ್ಯ ನಿರ್ಣಾಯಕ ಪಾತ್ರವಹಿಸಿದೆರೆನ್ನಬಹುದು. ಸರಿಯಾದ ಜನರಿಗೆ ಸರಿಯಾದ ಕೆಲಸ ವಹಿಸುತ್ತಿದ್ದ ಅವರ ಕಾರ್ಯತತ್ಪರತೆ ಕಾಲೇಜಿನ ಏಳಿಗೆಗೆ ಬಹಳಷ್ಟು ಕೊಡುಗೆ ನೀಡಿದೆ. ಸಮಿತಿಯ ಸಂಯೋಜಕರಾಗಿದ್ದ ಕೆ. ವೈ. ನಾರಾಯಣಸ್ವಾಮಿ, ಎನ್. ರಮೇಶ್ ರೆಡ್ಡಿ, ಕೆ. ಆರ್. ಕವಿತಾ, ರಾಮಕೃಷ್ಣ ರೆಡ್ಡಿ, ಸುಮಿತ್ರ, ಜಿಲಾನಿ, ಜಿಷಾ, ರಾಮಣ್ಣ, ಮುಂತಾದ ಹಲವಾರು ಪ್ರಾಧ್ಯಾಪಕರು ಶ್ರಮವಹಿಸಿ ದುಡಿದರು. ಪ್ರತಿಯೊಂದು ಖರ್ಚು ವೆಚ್ಚದಲ್ಲಿ ಗರಿಷ್ಠ ಪಾರದರ್ಶಕತೆಯನ್ನು ಕಾಪಾಡಿಕೊಂಡಿದ್ದಲ್ಲದೆ ಹಣವನ್ನು ಬೇಕಾಬಿಟ್ಟಿ ಖರ್ಚು ಮಾಡುವ ಬದಲು ಚರ್ಚೆ ನಡೆಸಿ ಅಗತ್ಯವಿದ್ದ ಕೆಲಸಗಳಿಗೆ ಹಣವನ್ನು ಬಳಸಿಕೊಂಡು ಬರಲಾಗಿದೆ. ಈ ಸಂದರ್ಭದಲ್ಲಿ ಒಟ್ಟಾರೆ ಅಧ್ಯಾಪಕ ವರ್ಗ ತಳೆದ ಮನೋಭಾವದ ಬಗ್ಗೆ ಟಿಎಸ್‌ಐನೊಂದಿಗೆ ಮಾತನಾಡಿದ ಕಾಲೇಜಿನ ಕನ್ನಡ ಪ್ರಾಧ್ಯಾಪಕ ಡಾ. ಕೆ. ವೈ. ನಾರಾಯಣಸ್ವಾಮಿ, "ಇಲ್ಲಿ ಅಧ್ಯಾಪಕರುಗಳ ನಡುವೆ ಭಿನ್ನಾಭಿಪ್ರಾಯಗಳನ್ನು ಸೈರಿಸಿಕೊಳ್ಳುವ, ಗೌರವಿಸುವ ಮನೋಭಾವವೇ ಇಂತಹ ಒಂದು ಬದಲಾವಣೆ, ಅಭಿವೃದ್ಧಿಗಳಿಗೆ ಕಾರಣವಾಗಿದೆ" ಎನ್ನುತ್ತಾರೆ.
ಸೌಲಭ್ಯ, ಬೋಧನೆಯ ಗುಣಮಟ್ಟ, ಹಾಗೂ ಫಲಿತಾಂಶದ ದೃಷ್ಟಿಯಿಂದ ಅತ್ಯುತ್ತಮ ಸಾಧನೆ ಈ ಕಾಲೇಜಿನದ್ದು. ಇಡೀ ರಾಜ್ಯದಲ್ಲಿ ಯಾವುದಾದರೂ ಕಾಲೇಜು ಪ್ರಥಮ ಬಾರಿಗೆ ಡಿಜಿಟಲ್ ಗ್ರಂಥಾಲಯವೊಂದನ್ನು ಸ್ಥಾಪಿಸಿದ್ದರೆ ಅದು ಸರ್ಕಾರಿ ವಿಜ್ಞಾನ ಕಾಲೇಜು. ಕಾಲೇಜಿನ ಗ್ರಂಥಾಲಯದಲ್ಲಿ ನಾನಾ ವಿಷಯಗಳಿಗೆ ಸಂಬಂಧಿಸಿದ 67,000ದಷ್ಟು ಪುಸ್ತಕಗಳಿವೆ. ಇ- ಪುಸ್ತಕಗಳ ಸೌಲಭ್ಯವಿದೆ. ಕಾಲೇಜಿನಲ್ಲಿ ಇಂಟರ್‌ನೆಟ್ ಸೌಲಭ್ಯವಿದ್ದು ಲಾನ್ (ಲೋಕಲ್ ಏರಿಯಾ ನೆಟ್‌ವರ್ಕ್) ಜಾಲಕ್ಕೊಳಪಟ್ಟಿದೆ. ಉತ್ತಮ ವಾಚನಾಲಯ ರೂಪುಗೊಂಡಿದೆ. ಪ್ರಯೋಗಾಲಯಗಳಲ್ಲಿ ಅತ್ಯಾಧುನಿಕ ಸಾಧನ ಯಂತ್ರ ಸಲಕರಣೆಗಳನ್ನು ಅಳವಡಿಸಲಾಗಿರುವುದರಿಂದ ಜೈವಿಕ ತಂತ್ರಜ್ಞಾನ, ಜೆನೆಟಿಕ್ಸ್‌ನಂತಹ ವಿಭಾಗಗಳಲ್ಲಿ ವಿದ್ಯಾಭ್ಯಾಸ ಪಡೆಯುತ್ತಿರುವ ವಿದ್ಯಾರ್ಥಿಗಳು ಉತ್ತಮ ಫಲಿತಾಂಶ ತೋರಿಸಲು ಸಾಧ್ಯವಾಗುತ್ತಿದೆ. ಹೀಗಾಗಿಯೇ ’ಬಯೋಸ್ಪೆಕ್ಟ್ರಂ’ ಎಂಬ ಸಂಸ್ಥೆ ನಡೆಸಿದ ಅಖಿಲ ಭಾರತ ಮಟ್ಟದ ಸಮೀಕ್ಷೆಯಲ್ಲಿ ಸರ್ಕಾರಿ ವಿಜ್ಞಾನ ಕಾಲೇಜಿನ ಜೈವಿಕ ತಂತ್ರಜ್ಞಾನ ವಿಭಾಗವು ದೇಶದ ಹತ್ತು ಅತ್ಯತ್ತಮ ಜೈವಿಕ ವಿಜ್ಞಾನ ವಿಭಾಗಗಳಲ್ಲಿ ೮ ನೇ ಸ್ಥಾನ ಪಡೆದ ಹೆಗ್ಗಳಿಕೆಯನ್ನು ಸಾಧಿಸಿದೆ. ಕಾಲೇಜಿನಲ್ಲಿ ಒಟ್ಟು 17 ಸಂಯೋಜನೆಗಳಿವೆ. ವಿಶೇಷವಾಗಿ ದೇಶದ ಕೆಲವೇ ಕಾಲೇಜುಗಳಲ್ಲಿರುವ ’ಅರ್ಥಶಾಸ್ತ್ರ, ಗಣಿತಶಾಸ್ತ್ರ, ಸಂಖ್ಯಾಶಾಸ್ತ್ರ (ಇಎಂಎಸ್‌ಟಿ) ವಿಶೇಷ ಸಂಯೋಜನೆ ಇಲ್ಲಿ ಲಭ್ಯವಿದೆ. ಹಲವಾರು ರಾಂಕ್‌ಗಳೂ ಈ ಕಾಲೇಜಿನ ವಿದ್ಯಾರ್ಥಿಗಳಿಗೆ ದಕ್ಕಿವೆ. 2010ರಲ್ಲಿ ಸುಂದರ ದೀಪ್ತಿ ಎಂ.ವಿ ಜೈವಿಕ ತಂತ್ರಜ್ಞಾನ ವಿಭಾಗದಲ್ಲಿ ವಿಶ್ವ ವಿದ್ಯಾಲಯ ಮಟ್ಟದಲ್ಲಿ ಪ್ರಥಮ ರ‍್ಯಾಂಕ್ ಪಡೆದಿದ್ದನ್ನಿಲ್ಲಿ ಸ್ಮರಿಸಬಹುದು. ಇಲ್ಲಿ ವಿದ್ಯಾಭ್ಯಾಸ ಮಾಡಿದ ಬಹುತೇಕ ವಿದ್ಯಾರ್ಥಿಗಳು ಉತ್ತಮ ಕಂಪನಿಗಳಲ್ಲಿ ಕೆಲಸ ಗಿಟ್ಟಿಸಿಕೊಂಡಿದ್ದಾರೆ. ಅನೇಕರು ದೇಶ ವಿದೇಶದ ಪ್ರತಿಷ್ಠಿತ ಸಂಸ್ಥೆಗಳಲ್ಲಿ ಸಂಶೋಧನೆ ಕೈಗೊಂಡಿದ್ದಾರೆ.
ರಾಮನ್ ಕ್ಲಬ್, ‘ಸವಿ’ ಪತ್ರಿಕೆ, ನಾಟಕ ತರಬೇತಿ, ರಾಮಾನುಜನ್ ಕ್ಲಬ್, ಲೈಫ್ ಸೈನ್ಸ್ ಕ್ಲಬ್, ವಾರದ ಸಮಾವೇಶ, ಚಲನ ಚಿತ್ರ ಅಭಿರುಚಿ ಕೇಂದ್ರ, ಡ್ರೀಮ್ಸ್ ಕ್ಲಬ್, ಎನ್‌ಎಸ್‌ಎಸ್, ಎನ್‌ಸಿಸಿ, ಹೀಗೇ ನಾನಾ ಚಟುವಟಿಕೆಗಳಲ್ಲಿ ಭಾಗಿಯಾಗುವ ವಿದ್ಯಾರ್ಥಿಗಳಾದರೂ ಅಷ್ಟೇ ಸ್ಪೂರ್ತಿಯಿಂದ ತಮ್ಮನ್ನು ತೊಡಗಿಸಿಕೊಳ್ಳುವುದನ್ನು ಇಲ್ಲಿ ಕಾಣಬಹುದು.
ಕಾಲೇಜ್ ಕ್ಯಾಂಟೀನ್- ಅಧ್ಯಾಪಕರಿಂದ ಬಡ ವಿದ್ಯಾರ್ಥಿಗಳಿಗಾಗಿ
ಸ್ಲಂಗಳಿಂದ, ತೀರಾ ಬಡತನದ ಹಿನ್ನೆಲೆಯಿಂದ ಬಂದು ಕಾಲೇಜು ಸೇರುವ ವಿದ್ಯಾರ್ಥಿಗಳಿಗೆ ಇಲ್ಲಿ ಪ್ರತಿದಿನದ ಊಟದ ಖರ್ಚು ಭರಿಸುತ್ತಿರುವುದು ಇಲ್ಲಿನ ಪ್ರಾಧ್ಯಾಪಕರೇ. ತಾವು ಪಡೆಯುವ ವೇತನದಲ್ಲಿ ಅಧ್ಯಾಪಕರು ಪ್ರತಿತಿಂಗಳೂ ತಲಾ 500 ರೂಪಾಯಿಗಳನ್ನು ನೀಡಿ ಸುಮಾರು ೧೫೦ ಬಡ ವಿದ್ಯಾರ್ಥಿಗಳಿಗೆ ವರ್ಷವಿಡೀ ಉಚಿತ ಊಟ, ಉಪಹಾರ ಸಿಗುವ ವ್ಯವಸ್ಥೆ ಇಲ್ಲಿ ಮಾಡಲಾಗಿದೆ. ಈ ವ್ಯವಸ್ಥೆ ಮಾಡುವ ಮೊದಲು ಎಷ್ಟೋ ವಿದ್ಯಾರ್ಥಿ, ವಿದ್ಯಾರ್ಥಿನಿಯರು ಲ್ಯಾಬ್‌ಗಳಲ್ಲಿ ನಿತ್ರಾಣರಾಗಿ ಬಿದ್ದು ಬಿಡುತ್ತಿದ್ದರು. ಹೀಗಾಗಿ ಇಂತಹ ಒಂದು ನಿರ್ಧಾರಕ್ಕೆ ಬಂದ ಪ್ರಾಧ್ಯಾಪಕರು ಅಂತಹ ಆರ್ಥಿಕವಾಗಿ ಅಶಕ್ತ ವಿದ್ಯಾರ್ಥಿಗಳ ಸೇವೆಗೆ ಮುಂದಾಗಿದ್ದು ನಿಜಕ್ಕೂ ಶ್ಲಾಘನೀಯ. ಆರೋಗ್ಯ ತಪಾಸಣೆ, ರಕ್ತ ಗುಂಪು ತಪಾಸಣಾ ಶಿಬಿರ ಹಾಗೂ ಯುಜಿಸಿ ನೆರವಿನಿಂದ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ನೀಡುವಂತಹ ಹಲವಾರು ಯೋಜನೆಗಳ ಪ್ರಯೋಜನವನ್ನು ಸರ್ಕಾರಿ ವಿಜ್ಞಾನ ಕಾಲೇಜಿನ ವಿದ್ಯಾರ್ಥಿಗಳು ಪಡೆಯುತ್ತಿದ್ದಾರೆ.