ಜನವರಿ 06, 2025

ಹೊಸತು - ಹಳತು : ಬುದ್ದ ತತ್ವ




ಲೋಕದ ಪ್ರತಿಯೊಂದೂ ಎಡೆಬಿಡದ ಚಲನೆಯಲ್ಲಿದೆ. ಕೆಲವೊಮ್ಮೆ ಬರಿಗಣ್ಣಿಗೆ ಚಲಿಸದೇ ಜಡವಾಗಿವೆ ಎಂದು ತೋರುವ ಪ್ರತಿಯೊಂದೂ ಚಲನೆಯಲ್ಲಿದೆ. ಒಂದು ಮರದ ತುಂಡು, ಕಬ್ಬಿಣದ ಬಿಲ್ಲೆ, ಕಲ್ಲಿನ ಗುಂಡು ಎಲ್ಲದರಲ್ಲಿ ಆಂತಕರಿಕ ಚಲನೆಯಿದೆ. ಈ ಚಲನೆಯ ಸ್ವರೂಪ ಎಂತಹದು? ಇದನ್ನು ಬುದ್ದ ಎರಡು ಪರಿಕಲ್ಪನೆಗಳ ಮೂಲಕ ತಿಳಿಸಿದ. ಒಂದು ಅನಿತ್ತ/ಅನಿತ್ಯ. (Impermanence) ಮತ್ತೊಂದು ಪತಿಚ್ಚ ಸಮುಪ್ಪಾದ (law of dependent origination).
ʼಅನಿತ್ತʼ ನಿಯಮದ ಪ್ರಕಾರ ಲೋಕದಲ್ಲಿ ಚಲನೆಯಲ್ಲಿರುವ ಯಾವದೂ ಈ ಕ್ಷಣದಲ್ಲಿದ್ದಂತೆ ಮುಂದಿನ ಕ್ಷಣದಲ್ಲಿ ಇರುವುದಿಲ್ಲ. ಯಾವುದಕ್ಕೂ ಶಾಶ್ವತ ಗುಣ ಎಂಬುದಿಲ್ಲ. ಯಾವ ವಸ್ತುವೂ ʼಇರುʼವುದಿಲ್ಲ, ಎಲ್ಲವೂ ʼಆಗುʼತ್ತಿರುತ್ತದೆ. ಅಲ್ಲಿ ಇದೆ ಎಂದು ಮೇಲುನೋಟಕ್ಕೆ ಕಾಣುತ್ತಿರುವುದೂ ಆಗುತ್ತಿರುತ್ತದೆ. ಹೀಗಾಗಿ ಪ್ರತಿಯೊಂದೂ ಅಶಾಶ್ವತವಾದದ್ದು ಅತವಾ ಕ್ಷಣಿಕವಾದದ್ದು. ಹೀಗಾಗಿ ಪ್ರತಿ ವಸ್ತು ಪ್ರತಿ ಜೀವಿಯೂ ಪ್ರತಿ ಜೀವಿಯೊಳಗಿನ ಚಿಂತನೆಯೂ ಪ್ರತಿಕ್ಷಣವೂ ಹಳತರಿಂದ ಹೊಸದಾಗುತ್ತಿರುತ್ತಲೇ ಇರುತ್ತದೆ.
ಬುದ್ದನ ಕಾಲದಲ್ಲಿ ವೇದಾಂತಕಾರರು ಆತ್ಮ -ಪರಮಾತ್ಮ ಸಂಬಂದದಲ್ಲಿ ಆತ್ಮದ ಶಾಶ್ವತತೆಯನ್ನು ಪ್ರತಿಪಾದಿಸುತ್ತಿದ್ದರು. ದೇಹ ನಶ್ವರ ಆತ್ಮ ಶಾಶ್ವತ ಎಂಬ ಕಟ್ಟುಕತೆ ಹೆಣೆದಿದ್ದರು. ಆದರೆ ಜಗತ್ತಿನ ಚಲನೆಯ ನಿಯಮದಲ್ಲೇ ಅಂತಹ ಶಾಶ್ವತವಾದುದು ಯಾವದೂ ಇಲ್ಲದಿರುವುದರಿಂದ ಜಗತ್ತು ಅನಿತ್ಯವಾಗಿದೆ ಮತ್ತು ಈ ಕಾರಣದಿಂದಲೇ ಇದರಲ್ಲಿ ಅಂತಹ ಶಾಶ್ವತವಾದ ಆತ್ಮವೂ ಇರಲು ಸಾದ್ಯವಿಲ್ಲ (ಅನತ್ತ). ಆತ್ಮ ಇಲ್ಲವೆಂದ ಮೇಲೆ ಶಾಶ್ವತ ಪರಮಾತ್ಮ ಅತವಾ ದೇವರು ಇರಲೂ ಅವಕಾಶವಿಲ್ಲ ಎಂದು ಬುದ್ದಗುರು ಬಲವಾಗಿ ಪ್ರತಿಪಾದಿಸಿದ. ಹೀಗಾಗಿ ಬುದ್ದಗುರು ಆತ್ಮವಾದಿಗಳನ್ನು ತನ್ನ ಬಲವಾದ ಅನಿತ್ಯ- ಅನತ್ತ ತತ್ವದ ಬಲದಿಂದ ಸಮರ್ತವಾಗಿ ಎದುರಿಸಿದ ಎನ್ನಬಹುದು.
ಇನ್ನು ಹೀಗೆ ಬದಲಾಗುವ ಪ್ರಕ್ರಿಯೆ ಯಾವಾಗಲೂ ಹಳತನ್ನು ಮುರಿದು ಹೊಸದು ಹುಟ್ಟುವ ರೀತಿಯಲ್ಲಿ ಇರುತ್ತದೆ. ಇದನ್ನು ಬುದ್ದಗುರು ಪತಿಚ್ಚ ಸಮುಪ್ಪಾದದ ತತ್ವದಲ್ಲಿ ಹೇಳಿದ‌. ಇದರ ಪ್ರಕಾರ ಪ್ರತಿಕ್ಷಣ ಹೊಸದಾಗಿ ಹುಟ್ಟುವ ಪ್ರತಿಯೊಂದರ ಕಾರಣ ಹಳತರಲ್ಲಿರುತ್ತದೆ. ಒಂದು ಹೊಸ ಹುಟ್ಟಿಗೆ ಯಾವುದೇ ಒಂದು ಕಾರಣ ಇರದೇ ಹಲವಾರು ಕಾರಣಗಳಿರುತ್ತವೆ. ಉದಾಹರಣೆಗೆ ಒಂದು ಹೊಸ ಮಡಕೆ ತಯಾರಾಗುತ್ತದೆ ಅಂದರೆ ಅದಕ್ಕೆ ಮಣ್ಣು, ನೀರು, ಅವುಗಳನ್ನು ತಿರುಗಿಸುವ ಯಂತ್ರ, ಅದನ್ನು ತಿರುಗಿಸುವ ವ್ಯಕ್ತಿ, ಅದನ್ನು ಸುಡಲು ಬಳಸುವ ಬೆಂಕಿ ಹೀಗೆ ಹಲಾವಾರು ಅಂಶಗಳು ಕಾರವಾಗಿರುತ್ತವೆ. ಹೀಗಾಗಿ ಮಡಕೆಯ ಹುಟ್ಟು ಈ ಎಲ್ಲವುಗಳಲ್ಲಿರುತ್ತದೆ. ಆದರೆ ಪತಿಚ್ಚ ಸಮುಪ್ಪಾದ ಏನು ಹೇಳುತ್ತದೆ ಎಂದರೆ ಹೊಸದು ಹುಟ್ಟುವಾಗ ಹಳೆಯದು ಅಸ್ತಿತ್ವ ಕಳೆದುಕೊಂಡಿರುತ್ತದೆ. ಒಂದು ಮತ್ತೊಂದಾಗುತ್ತದೆ.‌ ಆದರೆ ಹೊಸ ಹುಟ್ಟಿನ ಕಾರಣ ಮಾತ್ರ ಅದರಲ್ಲಿ ಕಾಣುವುದಿಲ್ಲ. ಕಾರಣವು ಅದರ ಕಾರ್ಯ ಅತವಾ ಪರಿಣಾಮದಲ್ಲಿ ಇರುವುದಿಲ್ಲ . ಹಾಗೇ ಕಾರಣ ಇರುವಾಗ ಪರಿಣಾಮ ಇರುವುದಿಲ್ಲ. ಮುಂದುವರಿದು ಒಂದು ಪರಿಣಾಮ (ಕಾರ್ಯ) ಮತ್ತೊಂದರ ಕಾರಣವೂ ಆಗಿರುತ್ತದೆ. ಅಂದರೆ ಹಳೆಯದರಿಂದ ಹುಟ್ಟಿದ ಹೊಸತು ಅದರ ಮುಂದಿನ ಹೊಸದಕ್ಕೆ ಹಳೆಯದಾಗಿರುತ್ತದೆ. ಆ ಹೊಸತು ಬರುವಾಗ ಈ ಹೊಸತು ಇರುವುದಿಲ್ಲ. ಇದೊಂದು ಮುಂದು ಮುಂದಕ್ಕೆ ಹರಿಯುವ ಎಡೆಬಿಡದ ಕ್ರಿಯೆ (eternal flux). ಇದು ಮನುಷ್ಯನ ಪ್ರಜ್ಞೆಗೂ ಅನ್ವಯವಾಗುತ್ತದೆ- ಪ್ರಜ್ಞಾ ಪ್ರವಾಹದ ರೂಪದಲ್ಲಿ. ಇದು ಮನುಕುಲದ ಇತಿಹಾಸಕ್ಕೂ ಅನ್ವಯವಾಗುತ್ತದೆ. ಲೋಕದ ಎಲ್ಲದಕ್ಕೂ ಅನ್ವಯವಾಗುತ್ತದೆ.
ಇದೆಲ್ಲಾ ತಿಳಿದುಕೊಂಡು ನಾವೇನು ಮಾಡಬೇಕು? ನಮ್ಮ ಜೀವನಕ್ಕೆ ಏನು ಪ್ರಯೋಜನ?
ಉತ್ತರ ಸರಳ. ಬುದ್ದ ಹೇಳಿದ ಈ ತತ್ವಗಳು ಹೇಳುವ ಸಾರವೆಂದರೆ ಲೋಕದಲ್ಲಿ ಹುಟ್ಟಿದ ಪ್ರತಿಯೊಂದು ಸಹ ಆ ವಸ್ತು/ಜೀವಿಯ ಆಂತರಿಕ ನಿಯಮಕ್ಕೆ ಒಳಪಟ್ಟಿರುತ್ತದೆಯೇ ಹೊರತು ಹೊರಗಿನ ಯಾವದರ ನಿಯಂತ್ರಣಕ್ಕೂ ಅಲ್ಲ. ಹೀಗಾಗಿ ನಮ್ಮನ್ನು ಯಾರೋ ಉಳಿಸುತ್ತಾರೆ, ಯಾರೋ ಬದುಕಿಸುತ್ತಾರೆ, ಯಾರೋ ಸಾಯಿಸುತ್ತಾರೆ, ನಮ್ಮ ಹಣೆಬರಹ ಇನ್ನಾರೋ ಬರೆದಿರುತ್ತಾರೆ, ಯಾವುದೋ ಪೂರ್ವಜನ್ಮ ಕರ್ಮದ ಪಲ, ಗ್ರಹಚಾರ ನಮಗೆ ಅಂಟಿಕೊಂಡಿರುತ್ತದೆ, ಯಾವುದೋ ಹೋಮ, ಹವನ, ಯಾಗಗಳು ನಮ್ಮ ಗ್ರಹಗತಿ ಹಣೆಬರಹ ಬದಲಿಸುತ್ತವೆ, ಇನ್ನಾವುದೋ ನಮಗೆ ಮೋಕ್ಷ ಕರುಣಿಸುತ್ತದೆ, ಪುಣ್ಯ ಸಿಗುತ್ತದೆ, ಸ್ವರ್ಗ ನರಕ ಸಿಗುತ್ತದೆ ಎಂಬುದೆಲ್ಲಾ ಸುಳ್ಳು ವಂಚನೆ ಮೋಸದ ಮಹಾಜಾಲ. ಇದರಲ್ಲಿ ಕೆಲವರ ಸ್ವಾರ್ತವಿದೆ. ಹಲವರ ವಿನಾಶವಿದೆ.
ಈ ಯಾವುದನ್ನೂ ನಂಬದೇ ಯಾವುದೇ ಸಮಸ್ಯೆಗೆ ಕಣ್ಣೆದುರಿನ ಕಾರಣಗಳನ್ನು ಕಂಡುಕೊಳ್ಳುವುದೇ ಪರಿಹಾರದ ಮೊದಲ ಮೆಟ್ಟಿಲಾಗಿರುತ್ತದೆ. ನಂತರ ನಡೆಸುವ ಪ್ರಜ್ಞಾಪೂರ್ವಕ ಪ್ರಯತ್ನ ನಮ್ಮನ್ನು ಗೆಲುವಿಗೆ ಕೊಂಡೊಯ್ಯುತ್ತದೆ. ಈ ಪ್ರಯತ್ನದಲ್ಲಿ ಎಡವಿ ಬಿದ್ದಾಗ ಆಗುವ ಸೋಲು ಕೂಡಾ ಅಗತ್ಯ ಅನಿವಾರ್ಯವಾಗಿರುತ್ತದೆ. ಯಾಕೆಂದರೆ ಅದರ ಕಾರಣ ಅದರ ಹಿಂದಿನ ಹಲವಾರು ಅಂಶಗಳಲ್ಲಿ ಇರುತ್ತದೆ.
ಗೆಳೆಯ ಗೆಳತಿಯರೆ,
ಹಳೆಯ 2024 ಕಳೆದು ಅದರ ಒಡಲೊಳಗಿಂದ 2025 ಬಂದಿದೆ. ಈ ಹೊಸ ವರುಷ ನಿಮ್ಮನ್ನು ಹೊಸ ಬಗೆಯಲ್ಲಿ ಹೊಸ ಚಿಂತನೆಗೆ ತೊಡಗಿಸಲಿ. ಹೊಸ ಹೊಸ ಅನುಬವಗಳೊಂದಿಗೆ ಹೊಸ ಸೋಲು ಗೆಲವುಗಳೊಂದಿಗೆ ನಿಮ್ಮ ಬಾಳು ಉನ್ನತಿಗೆ ಏರಲಿ. ನಿಮ್ಮ ಹಳೆಯ ಕನಸುಗಳು ಈಡೇರುವ ದಾರಿಯಲ್ಲಿ ಹೊಸ ಕನಸುಗಳು ಹುಟ್ಟಲಿ.
ಎಲ್ಲರಿಗೂ ಹೊಸ ವರುಷದ ಶುಬಾಶಯಗಳು ‌


(ಈ ಬರಹ ಮಹಾಪ್ರಾಣ ಬಳಸದ ಎಲ್ಲರ ಕನ್ನಡದಲ್ಲಿದೆ)

ಡಿಸೆಂಬರ್ 13, 2024

ಧರ್ಮ V/s ರಿಲಿಜನ್



ಧರ್ಮ ಎಂತರೆ ಒಳಿತು ಮಾಡುವುದು, ನೀತಿ ಮಾರ್ಗದಲ್ಲಿ ನಡೆಯುವುದು ಎಂದು ನೀವು ಭಾವಿಸುವುದಾದರೆ ಅಂತಹ ತತ್ವ ಹೇಳಿದ ಧರ್ಮಗಳು ಮೂರು. - 

1. ಬೌದ್ಧ ಧರ್ಮ

2. ಜೈನ ಧರ್ಮ ಮತ್ತು

3.  ಲಿಂಗಾಯತ ಧರ್ಮ 

- ಈ ಮೂರೂ ಧರ್ಮಗಳು ಹಲವಾರು ಸಮಾನ ಗುಣಗಳನ್ನು ಹೊಂದಿವೆ. ಬಹಳ ಮುಕ್ಯವಾಗಿ ಈ ಮೂರು ದರ್ಮಗಳು ವೇದಗಳನ್ನು, ಉಪನಿಷತ್ತುಗಳನ್ನು ಸಾರಾಗಟಾಗಿ ತಿರಸ್ಕರಿಸಿದವು. ಮನುಷ್ಯನ ಲೌಕಿಕ ಹಾಗೂ ಬೌದ್ಧಿಕ ಏಳಿಗೆಯ ಗುರಿಯನ್ನು ಶ್ರಮ- ಕಾಯಕದ ಮೂಲಕವೇ ಸಾಧಿಸುವ ದಾರಿ ಹೇಳಿದವು. ಲೋಕದ ಇರವು ಮತ್ತು ಮನುಷ್ಯನ ಅರಿವನ್ನು ವಸ್ತುನಿಷ್ಟವಾಗಿ ವಿವರಿಸಿಕೊಳ್ಳಲು ಯತ್ನಿಸಿದವು. ಪರಮಾತ್ಮನ ಅಗತ್ಯವನ್ನು ನಿರಾಕರಿಸಿದವು. ಒಳ್ಳೆಯ ನಡತೆಯನ್ನು ಬೋಧಿಸಿದವು.‌ ಹೀಗಾಗಿ ನಾನು ಇವುಗಳನ್ನು ಮಾತ್ರ ಧರ್ಮಗಳು ಎಂದು ಕರೆಯುತ್ತೇನೆ.‌ 


ಇನ್ನು, "ಹಿಂದೂ ಧರ್ಮ ಏನು?"  ಅಂತ ನೀವು ಕೇಳಿದರೆ ನನ್ನ ಸ್ಪಷ್ಟ ಉತ್ತರ ಇಷ್ಟೆ-  ಹಿಂದೂ ಧರ್ಮ ಎಂಬುದು ಇಲ್ಲ. ಆದರೆ ಬ್ರಾಹ್ಮಣ ರಿಲಿಜನ್ ಇದೆ. ಇದು ವೇದವನ್ನು ವ್ಯಾಖ್ಯಾನಿಸುತ್ತಾ ಆತ್ಮ - ಪರಮಾತ್ಮಗಳ ಪರಿಕಲ್ಪನೆಯೊಂದಿಗೆ ಹುಟ್ಟಿಕೊಂಡ ರಿಲಿಜನ್. ದ್ವೈತ, ಅದ್ವೈತ, ಉಪನಿಷತ್ತು ಇತ್ಯಾದಿಗಳು ಈ ಬ್ರಾಹ್ಮಣ ರಿಲಿಜನ್ ಒಳಗೆ ಬರುತ್ತವೆ‌. ಇದರೊಂದಿಗೆ ಆರ್ಯ ಶ್ರೇಷ್ಟತೆಯ ವರ್ಣಾಶ್ರಮ ಸಿದ್ದಾಂತವಿದೆ. ಬ್ರಾಹ್ಮಣ ರಿಲಿಜನ್ ಮತ್ತು ವರ್ಣಾಶ್ರಮಗಳು ಸೇರಿಕೊಂಡು ಈ ದೇಶದ ವೈದಿಕ ರಿಲಿಜನ್ ಉಂಟಾಗಿದೆ. ಇದನ್ನೇ ಸನಾತನ ಧರ್ಮ ಎಂದು ಕಟ್ಟುಕತೆ ಪುರಾಣಗಳ ಮೂಲಕ ನಂಬಿಸಲಾಗಿದೆ.‌  ವಾಸ್ತವದಲ್ಲಿ ಈ ಸನಾತನ ರಿಲಿಜನ್‌ ದೇವರು ಪರಮಾತ್ಮನ ಹೆಸರಿನಲ್ಲಿ ಮನುಷ್ಯರನ್ನು ಗುಲಾಮರಾಗಿಸುವ ಒಂದು ಹುನ್ನಾರದ ರಿಲಿಜನ್‌ ಮಾತ್ರ. ಇದರ ಹೊರತಾದ ಯಾವ ಪಾರಮಾರ್ಥಿಕವೂ ಇದರಲ್ಲಿ ಇಲ್ಲ. ಇದಕ್ಕಾಗಿ ಪಾಪ - ಪುಣ್ಯ, ಪೂರ್ವಜನ್ಮ ಕರ್ಮಗಳನ್ನು, ಸ್ವರ್ಗ ನರಕಗಳನ್ನು ಹೆಣೆಯಲಾಗಿದೆ.


ರಿಲಿಜನ್ ಎಂದರೆ ನಾನು ಮತ್ತು ಹೊರಗಿನ ಚೇತನವೊಂದರ ಸಂಬಂಧವನ್ನು ವಿವರಿಸಿಕೊಂಡು, ನನ್ನ ಸ್ಥಿತಿ ಗತಿಗೆ ಆ ಚೇತನವನ್ನು ಅವಲಂಬಿಸುವ ಇಲ್ಲವೇ ಹೊಣೆ ಮಾಡುವುದು. ಆದರೆ ಧರ್ಮ ಎಂದರೆ ಅಂತಹ ಯಾವುದೇ ಅತಿಮಾನುಷ ಚೇತನದ ಕುರಿತು ಮಾತಾಡದೇ ಸಹಮನುಷ್ಯರು ಬದುಕುವ ರೀತಿ ನೀತಿಗಳನ್ನು ನಿರ್ವಚಿಸುತ್ತದೆ. ಈ ವ್ಯತ್ಯಾಸವನ್ನು ನಾವು ಮೊದಲು ಅರಿಯಬೇಕು. 


ಹಿಂದೂ ಎನ್ನುವ ಧರ್ಮ ಎಂದೂ ಹುಟ್ಟೇ ಇಲ್ಲ. ಮೂಲ ಭಾರತೀಯ ಸಂಸ್ಕೃತಿ ಪರಂಪರೆಗಳ  ಮೇಲೆ, ಅದರಲ್ಲೂ ಬುಡಕಟ್ಟು, ಮಾತೃಪ್ರದಾನ, ಫಲವಂತಿಕೆಯ ಸಂಸ್ಕೃತಿಗಳ ಮೇಲೆ ನಾನು ಮೇಲೆ  ಹೇಳಿದ ವೈದಿಕ ರಿಲಿಜನ್ ಮಾಡುತ್ತಿರುವ ಸವಾರಿಯನ್ನೇ "ಹಿಂದೂ ಧರ್ಮ" ದ ಚೌಕಟ್ಟು ಎಂದು ತೋರಿಸಿ ದೇಶದ ಬಹುಸಂಖ್ಯಾತರನ್ನು ಮಂಗ ಮಾಡಲಾಗಿದೆ. ಕೆಲವರು ಹೇಳುವಂತೆ ನಮ್ಮ ಸನಾತನ ಹಿಂದೂ ಧರ್ಮ,‌ ಸಂತರು ಹೇಳಿದ ಧರ್ಮ, ಗಾಂಧಿ ಹೇಳಿದ  ‌ಧರ್ಮ ಅಂತೆಲ್ಲ ಮಾತಾಡುವುದು ಅಂತಿಮವಾಗಿ ವೈದಿಕ ರಿಲಿಜನ್ ಒಳಗೆ ಸೇರಿಕೊಳ್ಳುವ ವ್ಯವಸ್ಥೆ ಇದೆ. 


ಕ್ರಿ. ಪೂ 5 ನೇ ಶತಮಾನದಲ್ಲಿ ಪರ್ಶಿಯನ್ ದೊರೆ ಡೇರಿಯಸ್-II ಸಿಂದ್ ಪ್ರದೇಶವನ್ನು ತನ್ನ ಸಾಮ್ರಾಜ್ಯದ ತೆಕ್ಕೆಗೆ ತೆಗೆದುಕೊಂಡಾಗ ಸ ಕಾರ ಬರದೇ ಹಿಂದ್ ಎಂದು ಕರೆದಿದ್ದೇ ಹಿಂದೂ ಎಂಬ ಪದದ ಮೂಲ. ನಂತರ ಮೊಗಲರು "ಹಿಂದೂ‌ಸ್ತಾನ" ಎಂದು ಕರೆದರು. ಆದರೆ ಅದು ಧರ್ಮ ಎಂಬ ಅರ್ಥದಲ್ಲಿ ಆಗಿರಲಿಲ್ಲ. ನಂತರ ಬ್ರಿಟಿಶರು ಮುಸ್ಲಿಮರಲ್ಲದ, ಕ್ರೈಸ್ತ ಪಾರ್ಸಿಗಳಲ್ಲದವರನ್ನು ಹಿಂದೂಗಳು ಎಂದು ಕರೆಯುತ್ತಾ ತಮ್ಮದೇ ರಿಲಿಜನ್ ರೀತಿ ಇವರಿಗೂ ರಿಲಿಜನ್ ಇದೆ ಎಂದುಕೊಂಡು ಹಿಂದೂ ರಿಲಿಜನ್ ಎಂದು ನೇಮಕ ಮಾಡಿದರು. ಹೀಗೆ ಸೊ ಕಾಲ್ಡ್ ಹಿಂದೂ ರಿಲಿಜನ್ ಪಾರ್ಸಿ-ಮೊಗಲ್-ಬ್ರಿಟಿಷರಿಂದ ಹುಟ್ಟಿಕೊಂಡಿತು. 


ಯಾವುದೇ ವೇದದಲ್ಲಿ, ಯಾವುದೇ ಧರ್ಮ ಗ್ರಂಥದಲ್ಲಿ ಹಿಂದೂ ಧರ್ಮ ಎಂಬ ಪದ ಸಿಕ್ಕುವುದಿಲ್ಲ. 


ಹೀಗಾಗಿ, ಭಾರತಕ್ಕೆ ತಡವಾಗಿ ಬಂದ ರುಗ್ವೇದಿಗಳ ವೈದಿಕ ಸಂಪ್ರದಾಯವನ್ನೇ ಸನಾತನ ಧರ್ಮ ಎಂದು ಕರೆಯುವವರು ಪರಮ ಅಜ್ಞಾನಿಗಳು. ಯಾಕೆಂದರೆ ಈ ವೈದಿಕ ಸನಾತನ ಇಲ್ಲಿ ನೆಲೆಯೂರುವುದಕ್ಕೆ 6000 ವರ್ಷಗಳ ಮೊದಲು ಇಲ್ಲಿ ದ್ರಾವಿಡರ ಹರಪ್ಪಾ ಸಂಸ್ಕೃತಿ ಚಿಗುರೊಡೆದಿತ್ತು. ಅವರು ಇಲ್ಲಿ ಕಾಲಿಡುವ ಹೊತ್ತಿಗೆ ದೊಡ್ಡ ನಗರ ಸಂಸ್ಕೃತಿಯಾಗಿ, ನಾಗರಿಕತೆಯಾಗಿ ಈ ನೆಲದಲ್ಲಿ ಹರಡಿಕೊಂಡಿತ್ತು.‌ ಇದರ ಮುಂದುವರಿಕೆಯಾಗಿಯೇ ಈ ನೆಲದಲ್ಲಿ ಚಾರ್ವಾಕ, ಲೋಕಾಯತ, ಸಾಂಖ್ಯ, ಜೈನ, ಬೌದ್ದ, ಆಜೀವಿಕ ಮೊದಲಾದ ತತ್ವ ಚಿಂತನೆಗಳು ಬೆಳೆದವು. 12 ನೇ ಶತಮಾನದ ಲಿಂಗಾಯತ ಕೂಡಾ ಅದೇ ತತ್ವಪ್ರಣಾಳಿಯಲ್ಲಿ ನಡೆದ ಕಾರಣದಿಂದಲೇ "ವೇದ ಶಾಸ್ತ್ರ ಪುರಾಣಂಗಳೆಲ್ಲ ಕೊಟ್ಟಣವ ಕುಟ್ಟುತ್ತ ನುಚ್ಚು ತೌಡು ಕಾಣಿಭೋ| ಇವ ಕುಟ್ಟಲೇಕೆ? ಎಂದು ಶರಣರು ನಿವಾಳಿಸಿ ಒಗೆದರು. 


ಭಾರತದ ಮೂಲ ಸಂಸ್ಕೃತಿಯ ಧರ್ಮಗಳನ್ನು ಅವುಗಳ ಮೂಲತತ್ವ ಚಿಂತನೆಗಳೊಂದಿಗೆ ಉಳಿಸಿಕೊಳ್ಳುವ ಅಗತ್ಯ, ಅನಿವಾರ್ಯತೆಗಳು ಇಂದು ಎಂದಿಗಿಂತ ಹೆಚ್ಚಿದೆ. ಈ ಮೂಲದರ್ಮಗಳು ಮತ್ತು ನಮ್ಮ ಮೂಲ ಸಂಸ್ಕೃತಿಗಳ ಮೇಲಿನ ಸನಾತನ ರಿಲಿಜನ್ ನ ದಾಳಿಯನ್ನು ತಡೆಯದೇ ಇದ್ದರೆ ಈ ದೇಶಕ್ಕೆ ಉಳಿಗಾಲವಿಲ್ಲ. 


ದೇಶದ ಮಹಾನ್ ಧರ್ಮಗಳು  ಉಳಿಯಲಿ ಡುಬಾಕ್ ಸನಾತನ ತೊಲಗಲಿ. 

ಜೂನ್ 26, 2023

ಮಾನ್ಯ ಸಬಾದ್ಯಕ್ಷರಿಗೆ ಒಂದು ಬಹಿರಂಗ ಪತ್ರ

 


ಮಾನ್ಯ ವಿದಾನಸಬೆಯ ಸಬಾದ್ಯಕ್ಷರಾದ ಯು ಟಿ ಕಾದರ್ ಅವರೆ,
ಶಾಸಕರ ಶಿಬಿರಕ್ಕೆ ಕೆಲವರು ಆಗಮಿಸುವುದು ದೃಡಪಟ್ಟಿಲ್ಲ ಎಂದು ತಿಳಿಸಿದ್ದೀರಿ. ಸಂತೋಷ. ದೃಡಪಡುವುದೇ ಬೇಡ ಎಂದು ನಮ್ಮಾಸೆ.‌
ಮಾನ್ಯ ಸ್ಪೀಕರ್ ಅವರೆ,
ಶಾಸಕರಿಗಾಗಿ ಶಿಬಿರ ನಡೆಸುವುದು ಬೇಡ ಎಂದು ಯಾರೂ ಹೇಳಿಲ್ಲ. ಶಾಸಕರಿಗೆ ಕಲಾಪ ನಡೆಯುವ ರೀತಿ ರಿವಾಜುಗಳ ಕುರಿತು, ಪ್ರಜಾಪ್ರಬುತ್ವದ ತತ್ವಗಳ ಕುರಿತು ಶಿಬಿರ ಪ್ರತಿ ಸಲ ನಡೆಯುತ್ತದೆ. ಅದು ಅಗತ್ಯ ಕೂಡಾ. ಈ ಬಗ್ಗೆ ಯಾವ ತಕರಾರೂ ಯಾರಿಗೂ ಇಲ್ಲ. ಸಮಸ್ಯೆ ಆಗಿದ್ದು ಈ ಸಲ ನೀವು ಹೊಸದಾಗಿ ಅದೇನೋ ಮೋಟಿವೇಶನ್ ಕೊಡಿಸೋಕೆ ಅಂತ ಕೆಲವರು ಮಹಾಮಹಿಮರ ಹೆಸರು ಹೇಳಿದ್ರಲ್ಲ... ಅದು. ನಿಮ್ಮ ಹೇಳಿಕೆಯಿಂದ ಎಲ್ಲರಿಗೂ ಸಿಕ್ಕಿದ ಸ್ಪಷ್ಟತೆ ಏನು ಎಂದರೆ ವೀರೇಂದ್ರ ಹೆಗ್ಗಡೆ, ರವಿಶಂಕರ ಗುರೂಜಿ, ಗುರುರಾಜ ಕರ್ಜಗಿ ಇವರ ಬಗ್ಗೆ ನಿಮಗೆ ಯಾವ ಸ್ಪಷ್ಟತೆ ಇಲ್ಲ ಎನ್ನುವುದು.
ಅದೇನೋ ಒತ್ತಡ ರಹಿತ ಕೆಲಸದ ನಿರ್ವಹಣೆ ಬಗ್ಗೆ ಆದ್ಯಾತ್ಮ ತರಬೇತಿ ಎಂದಿದ್ದೀರಿ. ನಿಮ್ಮ ಮಾತು ಹೇಗಿದೆ ಎಂದರೆ ಹೆಬ್ಬಾವನ್ನ ಕರೆದು ಕೋಳಿಮರಿಗಳಿಗೆ ಒತ್ತಡ ನಿರ್ವಹಣೆ ಹೇಗೆ ಎಂದು ತರಬೇತಿ ಕೊಡಿಸಿದಂತೆ.
ನೀವು ಕರಾವಳಿಯ ಒಬ್ಬ ಶಾಸಕರಾಗಿ ಆತ್ಮಸಾಕ್ಷಿ ಇಟ್ಟುಕೊಂಡು ಹೇಳಿ. ಒಬ್ಬ ಶಾಸಕ ಯಾವಾಗ ಒತ್ತಡವಿಲ್ಲದೆ ಶಾಂತಿ ಸಮಾದಾನದಿಂದ ಕೆಲಸ ನಿರ್ವಹಿಸಲು ಸಾಧ್ಯವಾಗುತ್ತದೆ? ಇಡೀ ರಾಜ್ಯದಲ್ಲಿ, ದೇಶದಲ್ಲಿ ಮತ್ತು ನಿಮ್ಮ ಕ್ಷೇತ್ರದಲ್ಲಿ ವಿವಿದ ದರ್ಮಗಳ ಜನರ ನಡುವೆ ಶಾಂತಿ ಸಹಬಾಳ್ವೆ ಇದ್ದಾಗ ಮಾತ್ರ ತಾನೆ? ಕೋಮು ದ್ವೇಷದ ವಾತಾವರಣ ಇದ್ದಾಗ ಶಾಸಕರು ಒತ್ತಡರಹಿತರಾಗಿ ಇರಬಲ್ಲರೇ? ಹಾಗಾದರೆ ನೀವು ಆಯ್ಕೆ ಮಾಡಿದ್ದ ಈ ಮೂವರು ಸೊ ಕಾಲ್ಡ್ ಆದ್ಯಾತ್ಮ ಬೋದಿಸುವವರು ಈ ನಾಡಿನಲ್ಲಿ ಶಾಂತಿ ಸಹಬಾಳ್ವೆಗೆ ನೀಡಿರುವ ಕೊಡುಗೆ ಏನು? ಮಾನ್ಯ ಸಬಾದ್ಯಕ್ಷರೆ ನಾಡಿನ ಜನರು ಹಸಿವಿಲ್ಲದೆ ನೆಮ್ಮದಿಯಿಂದ ಬಾಳಲಿ ಎಂದೇ ಅಲ್ಲವೆ ನಿಮ್ಮ ಸರ್ಕಾರ ಗ್ಯಾರಂಟಿ ಬಾಗ್ಯಗಳನ್ನು ಜಾರಿಗೆ ತಂದಿದ್ದು. ಇವುಗಳು ಸುಸೂತ್ರವಾಗಿ ಜನರಿಗೆ ತಲುಪಿದಾಗ ಮಾತ್ರ ನಿಮ್ಮ ಶಾಸಕರು ಒತ್ತಡರಹಿತವಾಗಿರಲು ಸಾದ್ಯ. ಆದರೆ ಈ ಕಲ್ಯಾಣ ಕಾರ್ಯಕ್ರಮಗಳನ್ನೇ ದೇಶಕ್ಕೆ ಗಂಡಾಂತರ ತರುವ ಬಿಟ್ಟಿ ಬಾಗ್ಯಗಳು ಎಂದು ಹೀಗಳಿಯುವ ಆರೆಸ್ಸೆಸ್ ಸ್ವಯಂಸೇವಕ ಗುರುರಾಜ ಕರ್ಜಗಿಯಿಂದ ನಿಮಗೆ ಪ್ರೇರಣೆ ಬೇಕಾ ಮಾನ್ಯ ಸಬಾದ್ಯಕ್ಷರೆ?
ತರಬೇತಿ ಶಿಬಿರ ನೋಡಿದ ಬಳಿಕ ಮಾತಾಡಬೇಕು ಎಂದು ಹೇಳಿದ್ದೀರಿ. ನೀವು ಅವಕಾಶ ಕೊಟ್ಟರೆ ದಾವೂದ್ ಇಬ್ರಾಹಿಂ ಕೂಡಾ ತರಬೇತಿ ಶಿಬಿರಕ್ಕೆ ಬಂದು ಶಾಸಕರಿಗೆ ಮೋಟಿವೇಶನ್ ಕೊಡಬಲ್ಲ. ಆದರೆ ಸರ್ಕಾರಕ್ಕೆ ಸಿಗುವ ಮರ್ಯಾದೆ ಏನು? ಕರ್ನಾಟಕವನ್ನು ಸರ್ವಜನಾಂಗದ ಶಾಂತಿಯ ತೋಟ ನಿರ್ಮಿಸುವ ಬದ್ದತೆ ಗೋಶಿಸಿರುವ ನೀವು ದ್ವೇಷದ ವ್ಯಾಪಾರಿ ನರೇಂದ್ರ ಮೋದಿಯ ಪರಮ ಬಕ್ತರನ್ನು, ರೇಸಿಸ್ಟ್ ಮತ್ತು ಪ್ಯಾಸಿಸ್ಟ್ ಸಂಗಟನೆಯಾಗಿರುವ ಆರೆಸ್ಸೆಸ್ ಸಿದ್ದಾಂತಿಗಳನ್ನು, ಸ್ಯೂಡೋ ಕಾರ್ಪೊರೇಟ್ ಆದ್ಯಾತ್ಮವಾದಿಗಳನ್ನು ಕರೆಯವುದು ಯಾವುದೇ ಶೋಬೆ ತರುವುದಿಲ್ಲ. ಅಂತಹ ನಡೆ ಅತ್ಯಂತ ನಕಾರಾತ್ಮಕ ಪ್ರಬಾವವನ್ನು ಉಂಟು ಮಾಡುತ್ತದೆ.
ಯಾವುದಾದರೂ ಶಾಸಕರಿಗೆ ಒತ್ತಡ ಇದ್ರೆ, ಮಾನಸಿಕ ಕ್ಷೋಬೆ ಇದ್ರೆ ಅವರು ಒಳ್ಳೆಯ ಮಾನಸಿಕ ತಜ್ಞರನ್ನು ಕಾಣಬೇಕೇ ಹೊರತು ಸ್ಯೂಡೋ ಆದ್ಯಾತ್ಮಿಕರೂ, ಜನರ ದೈವನಂಬಿಕೆಯನ್ನು ತಮ್ಮ ವ್ಯಾಪಾರಕ್ಕೆ ಬಳಸಿಕೊಳ್ಳುವರನ್ನೂ ಅಲ್ಲ. ನಿಜವಾದ ಆದ್ಯಾತ್ಮ ಚಿಂತಕರು ಸಮಾಜದಲ್ಲಿ ನೆರೆಹೊರೆಯ ಸಹಮನುಷ್ಯರ ನಡುವೆ ಸಂಬಂದಗಳು ಹೇಗಿರಬೇಕು, ನಮ್ಮಲ್ಲಿ ಸಹಾನುಬೂತಿ ಯಾಕಿರಬೇಕು, ಹೇಗಿರಬೇಕು, ದಯೆಯೆಂಬುದು ಮನುಶ್ಯರಿಗೆ ಯಾಕಿರಬೇಕು ಇತ್ಯಾದಿ ಸಂಗತಿಗಳನ್ನು ಮಾತಾಡುತ್ತಾರೆ. ಹೀಗೆ ನಿಜವಾದ ಆದ್ಯಾತ್ಮ ತಿಳಿಸುವ ಹತ್ತಾರು ಚಿಂತಕರಿದ್ದಾರೆ, ಶರಣ ಸಂಪ್ರದಾಯದ ಸ್ವಾಮೀಜಿಗಳಿದ್ದಾರೆ, ಬುದ್ದಗುರುವಿನ ನಿಜ ಅನುಯಾಯಿಗಳಿದ್ದಾರೆ... ಇವರನ್ನೆಲ್ಲಾ ಬಿಟ್ಟು ಇಡೀ ಕರಾವಳಿಗೆ ಕೋಮು ದಳ್ಳುರಿಯಿಂದ ಉರಿಯುವಾಗ ದಳ್ಳುರಿ ಹಚ್ಚುವ ಸಂಗಟನೆಗಳೊಂದಿಗೆ ಕೂಡಿಕೆ ಮಾಡಿಕೊಂಡವರು, ಕರಾವಳಿಯ ಜನತೆಗೆ ಒಂದೇ ಒಂದು ದಿನ ಸಹಬಾಳ್ವೆಯ ಸಂದೇಶ ನೀಡದವರು ನಿಮಗೆ ಆದ್ಯಾತ್ಮ ಬೋದಿಸುವರಾಗುತ್ತಾರೆ, ಅವರದೇ ಕೇಂದ್ರದಲ್ಲಿ ಶಿಬಿರ ನಡೆಯುತ್ತದೆ ಎಂದೂ ಹೇಳಿದ್ದೀರಿ.
ಮಾನ್ಯ ಸಬಾದ್ಯಕ್ಷರೆ ದಯವಿಟ್ಟು ಇಂತಹ ಅನಗತ್ಯ ಸಂಪ್ರದಾಯಕ್ಕೆ ನಾಂದಿ ಹಾಡಬೇಡಿ. ಸದ್ಯ ಶಾಸಕರಿಗೆ ಕಲಾಪಗಳು ನಡೆಯುವುದು ಹೇಗೆ, ಸಂವಿಧಾನದ ಆಶಯಗಳು ಏನು, ಯಾಕೆ ಸಂವಿದಾನದ ವಿರುದ್ದ ನಡೆದುಕೊಳ್ಳಬಾರದು, ನಮ್ಮ ದೇಶ ಕಟ್ಟಿದ ಮಹನೀಯರು ಕನಸುಗಳೇನಿದ್ದವು, ಈ ದೇಶಕ್ಕೆ ಒಂದು ಸಾರ್ವಬೌಮಿ, ಸೆಕ್ಯುಲರ್, ಸಮಾಜವಾದಿ, ಗಣರಾಜ್ಯದ ಬುನಾದಿ ಹಾಕಲು ಆ ನಮ್ಮ ಹಿರಿಯ‌ ಚೇತನಗಳು ಪಟ್ಟ ಪಾಡೇನು, ಮಾಡಿದ ತ್ಯಾಗಗಳೇನು ಇವುಗಳನ್ನು ತಿಳಿಸಿಕೊಡಿ ಸಾಕು.
ಸಂವಿದಾನದ ಪೀಟಿಕೆಯನ್ನು ಎಲ್ಲಾ ಶಾಸಕರಿಗೆ ಬಾಯಿಪಾಟ ಮಾಡಿಸಿ, ಅದರ ಒಂದೊಂದು ಅಂಶದ ಬಗೆಗೂ ಅರಿವು ಮೂಡಿಸಿ. ಶಾಸಕರಿಗೆ ನಮ್ಮ ಸಂವಿಧಾನದ ಪೀಟಿಕೆಗಿಂತ ದೊಡ್ಡ ಮೋಟಿವೇಶನ್‌ ಬೇಕಿಲ್ಲ. ಅದರಂತೆ ಎಲ್ಲಾ ಶಾಸಕರು ನಡೆದುಕೊಂಡರೆ ಸಾಕು ತಂತಾನೇ ಈ ನಮ್ಮ ಕನ್ನಡ ನಾಡು ಶಾಂತಿ, ಸಮೃದ್ದಿಯೆಡೆ ನಡೆಯುತ್ತದೆ.
ಯಾವ ಆದ್ಯಾತ್ಮವೂ ಬೇಡ, ಪುಕ್ಕಟೆ ಉಪದೇಶವೂ ಬೇಡ.
(ಕಡೆಯಲ್ಲಿ ಒಂದು ಮಾತು- ಸಾಮಾಜಿಕ ಜಾಲತಾಣದಲ್ಲಿ ಬರೆಯುವವರ ಕುರಿತು ನಿಮ್ಮ ಆಕ್ರೋಶವನ್ನು ಲೈಟಾಗಿ ಹೊರಹಾಕಿದ್ದೀರ. ಹೆಚ್ಚೇನೂ ಹೇಳುವುದಿಲ್ಲ, ಇವತ್ತು ಕಾಂಗ್ರೆಸ್ ಗೆದ್ದು, ನೀವು ಅದಿಕಾರ ಹಿಡಿಯುವಲ್ಲಿ ಸಾಮಾಜಿಕ ಜಾಲತಾಣಗಳ ಪಾತ್ರ ಇದೆಯೋ ಇಲ್ಲವೋ ಎದೆಮುಟ್ಟಿ ಹೇಳಿ. ಇದೆ ಎಂದಾದರೆ ಆಗ ನಮಗೆ ಸ್ಪಷ್ಟತೆ ಇತ್ತೋ ಇಲ್ಲವೋ ಅದನ್ನೂ ಹೇಳಿ)
ಇಂತಿ
ನಿಮ್ಮ ಒಬ್ಬ ಅಬಿಮಾನಿ
ಹರ್ಷಕುಮಾರ್ ಕುಗ್ವೆ
(ವಿ.ಸೂ. ಈ ಬರೆಹದಲ್ಲಿ ಮಹಾಪ್ರಾಣ ಅಕ್ಷರ ಬಳಸಿರುವುದಿಲ್ಲ)

ಸೆಪ್ಟೆಂಬರ್ 06, 2020

ಗೌರಿ ಮೇಡಂ ಜೊತೆಗಿನ ಒಡನಾಟದ ನೆನಪುಗಳು

 

 


ಅದು 2008ನೇ ಇಸವಿ. ಶಿವಮೊಗ್ಗದಲ್ಲಿ ವಿದ್ಯಾರ್ಥಿ ಸಂಘಟನೆಯಲ್ಲಿ ಪೂರ್ಣಾವಧಿ ಹೋರಾಟಗಾರನಾಗಿ ಕೆಲಸ ಮಾಡುತ್ತಿದ್ದ ನನಗೆ ಜೀವನದಲ್ಲಿ ದೊಡ್ಡ ಆಘಾತವೊಂದು ಎದುರಾಗಿತ್ತು. ನನ್ನ ಅವ್ವನಿಗೆ ದಿಢೀರ್ ಅನಾರೋಗ್ಯ ಕಾಣಿಸಿಕೊಂಡಿತ್ತು. ಅದುವರೆಗೆ ಸುಮಾರು ಹತ್ತು ಹನ್ನೆರಡು ವರ್ಷಗಳಿಂದ ಮನೆ, ಮಠ, ತಮ್ಮ, ತಂಗಿ, ಅಪ್ಪ, ಅಮ್ಮ ಎಲ್ಲರನ್ನೂ ಬಹುತೇಕ ತೊರೆದು ಸಮಾಜದಲ್ಲಿ ಬದಲಾವಣೆ ತರಬೇಕು ಎಂದುಕೊಂಡು ಕೆಲಸ ಮಾಡುತ್ತಿದ್ದ ನನ್ನ ಜಂಘಾಬಲ ಉಡುಗಿಸಿತ್ತು ಘಟನೆ. ಅವ್ವನನ್ನು ಆಸ್ಪತ್ರೆಗೆ ಸೇರಿಸಿ ಒಂದು ವಾರ ಅಡ್ಮಿಟ್ ಮಾಡಿಕೊಂಡರೆ ಡಿಸ್ಚಾರ್ಜ್ ಮಾಡಿಸುವಾಗ ಕೈಯಲ್ಲಿ ನಯಾಪೈಸೆ ಕಾಸಿಲ್ಲ. ಮನೆಯಲ್ಲಿ ಸಹ ಇದೇ ಸ್ಥಿತಿ. ಅವ್ವನ ಅನಾರೋಗ್ಯಕ್ಕೂ ಒಂದು ರೀತಿಯಲ್ಲಿ ನಾನೇ ಕಾರಣನಾಗಿದ್ದೆ. ನನ್ನ ಬಗ್ಗೆ ದೊಡ್ಡ ಕನಸುಗಳಿಟ್ಟುಕೊಂಡಿದ್ದ ಅವ್ವ ಒಂದು ರೀತಿ ಭ್ರಮನಿರಸನಳಾಗಿ ಮಾನಸಿಕ ಆಘಾತಕ್ಕೊಳಗಾಗಿದ್ದಳು. ಕೊನೆಗೆ ಆಸ್ಪತ್ರೆಗೆ ಕಟ್ಟಲು ಬೇಕಾಗಿದ್ದ 12 ಸಾವಿರ ರೂಪಾಯಿಗೆ ಶಿವಮೊಗ್ಗದ ಹಿರಿಯ ಕಿರಿಯ ಗೆಳೆಯರ ಬಳಿ ನಾಲ್ಕೈದು ದಿನ ಸೈಕಲ್ ಹೊಡೆದು ಸಾಲ ಮಾಡಿ ಆಸ್ಪತ್ರಗೆ ಕಟ್ಟಿ ಮನೆಗೆ ಕರೆದುಕೊಂಡು ಹೋಗಿದ್ದೆ. ಅಮ್ಮ ಪೂರ್ತಿ ಹುಷಾರಾಗಬೇಕಾದರೆ ತಂಗಿ ಮದುವೆಯ ಜವಾಬ್ದಾರಿಯನ್ನು ನಾನೇ ಹೊತ್ತು ನೆರವೇರಿಸುವುದು ಒಂದೇ ದಾರಿ ಎಂದು ತೋರಿತು. ಆಗಲೇ ನನಗೆ ಹೋರಾಟದ ದಾರಿಯನ್ನು ಸ್ವಲ್ಪ ಮಟ್ಟಿಗೆ ಕೈ ಬಿಟ್ಟುಸಂಬಳಕ್ಕಾಗಿ ಕೆಲಸವೊಂದನ್ನು ಮಾಡುವ ಅನಿವಾರ್ಯತೆ ಉಂಟಾಗಿದ್ದು.

 ಆದರೆ ನನಗೆ ಕೆಲಸ ಯಾರು ಕೊಡುತ್ತಾರೆ? ನೆಟ್ಟಗೆ ಡಿಗ್ರಿ ಮುಗಿಸಿರಲಿಲ್ಲ, ಕಾನೂನು ಓದು ಪೂರ್ಣವಾಗಿರಲಿಲ್ಲ, ಏನು ಮಾಡುವುದು?

 ಆಗ, ನನಗೂ ಒಂದು ದಾರಿ ಇದೆ ಎಂದು ಕೈ ಹಿಡಿದಿದ್ದು ಬೇರೆ ಯಾರೂ ಅಲ್ಲ, ಗೌರಿ ಲಂಕೇಶ್. ಗೌರಿ ಲಂಕೇಶ್ ಪತ್ರಿಕೆಯಲ್ಲಿ ಅಂಕಣಕಾರರೂ, ಹಿರಿಯ ಸಂಗಾತಿಯೂ ಆದ ಶಿವಸುಂದರ್ ಅವರು ನನ್ನನ್ನು ಲಂಕೇಶ್ ಕಚೇರಿಗೆ ಬರಲು ತಿಳಿಸಿದರು. ಮರುದಿನ ಹೋದೆ. ಮತ್ತೊಬ್ಬ ಹಿರಿಯ ಮಿತ್ರರಾದ ಪಾರ್ವತೀಶ್ ಮತ್ತು ಗೌರಿ ಮೇಡಂ ನನ್ನನ್ನು ಕೂರಿಸಿಕೊಂಡು ನೀನು ನಮ್ಮಗೈಡ್ಪತ್ರಿಕೆಗೆ 15 ದಿನ ಇಲ್ಲಿದ್ದುಕೊಂಡು ಕೆಲಸ ಮಾಡು, ಉಳಿದ 15 ದಿನ ಶಿವಮೊಗ್ಗದಲ್ಲಿ ನಿನ್ನ ಇತರೆ ಕೆಲಸಗಳ ಜೊತೆಯಲ್ಲಿ ಲಂಕೇಶ್ ಪತ್ರಿಕೆಗೆ ಏನಾದರೂ ಬರಿಎಂದರು. ಹೀಗೆ ಶುರುವಾದದ್ದು ನನ್ನ ಪತ್ರಿಕೋದ್ಯಮದ ಜೀವನ. ನಂತರ ಒಂದೂವರೆ ವರ್ಷ ರೀತಿ ಕೆಲಸ ಮಾಡಿದೆ. ನಡುವೆ ಶಿವಮೊಗ್ಗದಲ್ಲಿದ್ದುಕೊಂಡೇ ಒಂದಷ್ಟು ಅನುವಾದ ಮತ್ತಿತರ ಕೆಲಸಗಳನ್ನು ಮಾಡಬಹುದು ಎಂದುಕೊಂಡು ಒಂದು ಕಂಪ್ಯೂಟರ್ ತರಲು ಯೋಚಿಸಿದೆ. ಆದರೆ ಅದಕ್ಕೂ ಸಾಕಷ್ಟು ಹಣವಿರಲಿಲ್ಲ. ಆಗ ಗೌರಿ ಮೇಡಂ ತಾವೇ ಒಂದು ಸಲಹೆ ನೀಡಿದರು. ಇದಕ್ಕೆ ಅರ್ಧದಷ್ಟು ಹಣ ನಾನು ಕೊಡುತ್ತೇನೆ, ಮಿಕ್ಕ ಅರ್ಧ ಹಣ ಹೊಂದಿಸಿಕೋ. ನಾವು ಕೊಟ್ಟ ಹಣವನ್ನು ತೀರಿಸಲು ತಿಂಗಳಿಗೆ ಒಂದು ಸಾವಿರ ರೂಪಾಯಿಯನ್ನು ನಿನ್ನ ಸಂಬಳದಲ್ಲಿ ಕಟ್ ಮಾಡಿಕೊಳ್ಳುತ್ತೇವೆ' ಎಂದರು. ಇದು ನನಗೆ ಬಹಳ ಸಹಕಾರಿಯಾದ ದಾರಿಯಾಗಿದ್ದರಿಂದಆಯ್ತು ಮೇಡಂಎಂದೆ. ಅದರಂತೆ ಮರುದಿನವೇ ಲಂಕೇಶ್ ಕಚೇರಿಯಲ್ಲಿ ನನ್ನ ಸಹೋದ್ಯೋಗಿಯಾಗಿದ್ದ ಕುಮಾರ್ ಬುರಡಿಕಟ್ಟಿ ಜೊತೆಗೆ ಎಸ್ಪಿ ರೋಡಿಗೆ ಹೋಗಿ ಒಂದು ಕಂಪ್ಯೂಟರ್ ಖರೀದಿಸಿಕೊಂಡು ಶಿವಮೊಗ್ಗಕ್ಕೆ ತಂದೆ.

 ಇದು ನನ್ನಂತಹ ಒಬ್ಬ ಕಾರ್ಯಕರ್ತನಿಗೆ ಗೌರಿ ಮೇಡಂ ಬದುಕು ಕಟ್ಟಿಕೊಳ್ಳಲು ನೆರವಾದ ರೀತಿ.

 ಎರಡು ವರ್ಷಗಳ ನಂತರ ಒಂದು ದಿನ ನನಗೆ ಅನಿರೀಕ್ಷಿತವಾಗಿ ಮತ್ತೊಂದು ಪತ್ರಿಕೆಯಲ್ಲಿ ಕೆಲಸ ಅವಕಾಶವೊಂದು ಹುಡುಕಿಕೊಂಡು ಬಂತು. ಸ್ವಲ್ಪ ಹೆಚ್ಚಿಗೆ ಸಂಬಳಕ್ಕಾಗಿ ಪೂರ್ಣಾವಧಿ ಕೆಲಸ ಮಾಡುವುದು ನನಗೆ ಅನಿವಾರ್ಯವೂ ಅನಿಸಿಗೌರಿ ಲಂಕೇಶ್ಮತ್ತು ಗೈಡ್ ತಂಡವನ್ನು ಬಿಟ್ಟು ಹೊರಡಬೇಕಾಯಿತು. ಇದನ್ನು ಗೌರಿ ಮೇಡಂಗೆ ತಿಳಿಸಿದಾಗ ಅವರು ಕೊಂಚವೂ ಬೇಸರ ಮಾಡಿಕೊಳ್ಳಲಿಲ್ಲ. “ಏಯ್ ಮರಿ, ಅಲ್ಲಿ ಪತ್ರಿಕೆ ಇನ್ಚಾರ್ಜ್ ಆಗಿರೋದು ನನ್ನ ಫ್ರೆಂಡೇ, ಬೇಕಾದರೆ ನಿನ್ನ ಬಗ್ಗೆ ನಾನೂ ರೆಕಮೆಂಡ್ ಮಾಡ್ತೀನಿಅಂದರು. ಮಾತ್ರವಲ್ಲ ನನಗೆ ಲಂಕೇಶ್ ಪತ್ರಿಕೆಯಿಂದ ಒಂದು ಬಹಳ ಪಾಸಿಟಿವ್ ಆದಅನುಭವ ಪತ್ರವನ್ನೂ ಬರೆದು ಕೊಟ್ಟರು. ನನ್ನ ಹೃದಯ ತುಂಬಿ ಬಂತು. ಒಂದು ಕಡೆ ಅವರಿಗೆ ಕೈಕೊಟ್ಟು ಹೋಗುತ್ತಿದ್ದೇನೆ ಎಂಬ ಗಿಲ್ಟ್ ನನ್ನನ್ನು ಕಾಡುತ್ತಿತ್ತು. ಆದರೂ ಅನಿವಾರ್ಯ ಎನಿಸಿತ್ತು.

 ಕೆಲವು ದಿನಗಳ ನಂತರ ಗೌರಿ ಮೇಡಂಗೆ ಒಂದು ಪರ್ಸನಲ್ ಪತ್ರ ಬರೆದೆ. ಸಾರಾಂಶದಲ್ಲಿ ಅವರಿಗೆ ಕೃತಜ್ಞತೆ ತಿಳಿಸಿ, ನಾನು ಲಂಕೇಶ್ ಪತ್ರಿಕೆಯ ಜೊತೆ ಕೆಲಸ ಮಾಡುವ ಅವಕಾಶ ಸಿಕ್ಕಿದ ಕಾರಣಕ್ಕಾಗಿ ಲಂಕೇಶ್ ಅವರನ್ನೂ ಓದಿಕೊಳ್ಳುವ ಅವಕಾಶ ಬಂತು. ಮತ್ತು ನಾನು ಇದುವರೆಗೆ ನನ್ನ ಸಾಮಾಜಿಕ ಜೀವನದಲ್ಲಿ ಕಲಿಯದ ಕೆಲವು ಸಂಗತಿಗಳನ್ನೂ ಲಂಕೇಶ್ ಅವರ ಓದಿನಿಂದ ತಿಳಿದಂತಾಗಿದೆ, ಎಲ್ಲದಕ್ಕೂ ನಿಮಗೆ ಋಣಿಯಾಗಿದ್ದೇನೆ ಎಂದು ಬರೆದೆ. ಆದರೆ ಗೌರಿ ಮೇಡಂ ಹತ್ರ ಪರ್ಸನಲ್ ಅನ್ನೋದೇನೂ ಇರಲಿಲ್ಲ. ಅವರದನ್ನು ಸಹೋದ್ಯೋಗಿಗಳಿಗೂ ತೋರಿಸಿದ್ದರು. ಇದು ಯಾವ ಬಗೆಯಲ್ಲಿ ವ್ಯಾಖ್ಯಾನಿಸಲ್ಪಟ್ಟಿತ್ತು ಎಂದರೆ ನಾನುಕಾರ್ಲ್ ಮಾರ್ಕ್ಸ್ ಗಿಂತಲೂ ಲಂಕೇಶ ಅವರನ್ನು ಹೆಚ್ಚೆಂದು ನೋಡಿದ್ದೀನೆಂದು! ಯಾವಾಗ ಪತ್ರ ನನಗೆ ಬೂಮರ್ಯಾಂಗ್ ಆಯ್ತೋ ಅಂದಿನಿಂದಸಾವಾಸ ಸಾಕಪ್ಪಾಅಂತ ದೂರ ಇದ್ದುಬಿಟ್ಟೆ. ಇದಾದ ಕೆಲವು ಒಂದೆರಡು ವರ್ಷಗಳ ಕಾಲ ಮತ್ತೆ ನಾನು ಕಡೆ ಹೋದದ್ದೇ ಕಡಿಮೆ.

 2016 ಜನವರಿ ತಿಂಗಳಲ್ಲಿ ಹೈದ್ರಾಬಾದ್ ವಿಶ್ವವಿದ್ಯಾಲಯದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದ ದಲಿತ ಸಂಶೋಧನಾ ವಿದ್ಯಾರ್ಥಿ ರೋಹಿತ್ ವೇಮುಲನ ಡೆತ್ ನೋಟ್ ಒಂದು ವೈರಲ್ ಆಯಿತು.. ಅದು ಒಂದು ಬಗೆಯಲ್ಲಿ ಇಡೀ ದೇಶದ ಪ್ರಜ್ಞಾವಂತರಲ್ಲಿ ಒಂದು ಬಗೆಯ ವಿಷಾದ ಮತ್ತು ಸಂಚಲನವನ್ನು ಮೂಡಿಸಿತು. ಇದು ದೇಶದಾದ್ಯಂತ ಆಕ್ರೋಶದ ಕಟ್ಟೆಯೊಡೆಯಲು ಕಾರಣವಾಯಿತು. ಎಲ್ಲೆಡೆ ಪ್ರತಿಭಟನೆಗಳು ಜರುಗಿದವು. ಇದೇ ಹೊತ್ತಿಗೆ ಜೆ ಎನ್ ಯು ನಲ್ಲಿ ವಿದ್ಯಾರ್ಥಿ ಮುಖಂಡ ಕನ್ಹಯ್ಯ ಕುಮಾರ್ ಮೇಲೆದೇಶದ್ರೋಹಿಆರೋಪ ಮಾಡಿ, ದಾಳಿ ನಡೆಸಿದ ಘಟನೆ ನಡೀತು.. ಹೊತ್ತಿನಲ್ಲಿ ನಾನು ಬೇರೊಂದು ವೃತ್ತಿಯಲ್ಲಿ ತೊಡಗಿದ್ದರೂ ನನ್ನೊಳಗಿನ ಆಕ್ಟಿವಿಸ್ಟ್ ಬರೆಹಗಾರ ಚಡಪಡಿಸುತ್ತಿದ್ದ. ಆಗ ಒಂದು ದಿನ ಗೌರಿ ಮೇಡಂ ಫೋನು ಬಂತು. “ರೋಹಿತ್ ವೇಮುಲ ಮತ್ತು ಕನ್ನಯ್ಯ ಬಗ್ಗೆ ಒಂದು ಪುಸ್ತಕ ಮಾಡೋಣ, ನೀನೇ ಅದಕ್ಕೆ ಏನೇನು ಬೇಕೋ ರೆಡಿ ಮಾಡು, ಪ್ರಿಂಟ್ ಹಾಕಿಸುವ ಜವಾಬ್ದಾರಿ ನನ್ನದುಎಂದರು. ನಾನೂ ಮರು ಮಾತಿಲ್ಲದೇಓಕೆ ಮೇಡಂಅಂದೆ. ಹೀಗೆ ನನ್ನ ಸಂಪಾದಕತ್ವದಲ್ಲಿ ಗೌರಿ ಮೇಡಂ ಪ್ರಕಟಿಸಿದ ಪುಸ್ತಕದೇಶ ಅಂದರೆ ಮನುಷ್ಯರು”. ಹೀಗೆ ಸಾಮಾಜಿಕ-ರಾಜಕಿಯ ಸಂದರ್ಭಗಳು ಮತ್ತೆ ನಮ್ಮನ್ನು ಹತ್ತಿರ ತಂದಿದ್ದವು.

 


ನಂತರ ಸೆಪ್ಟೆಂಬರ್-ಅಕ್ಟೋಬರ್ ಹೊತ್ತಿಗೆ ಚಲೋ ಉಡುಪಿ ಆಂದೋಲನ ನಡೀತು, ಇದಾದ ನಂತರ ಚಲೋ ತುಮಕೂರು, ಚಲೋ ಗುಡಿಬಂಡೆ, ಚಲೋ ಮಡಿಕೇರಿ ಹೀಗೆ ಸಾಲು ಸಾಲು ಚಲೋಗಳು ನಡೆದವು. ಅವಧಿಯುದ್ದಕ್ಕೂ ನನಗೆ ಗೌರಿ ಮೇಡಂ ಅವರಲ್ಲಿ ಕಂಡಿದ್ದು ನನಗಿಂತಲೂ ಹೆಚ್ಚಿನ ಬದ್ಧತೆ ಹೊಂದಿ ಒಬ್ಬ ಸಾಮಾಜಿಕ ಕಾರ್ಯಕರ್ತೆಯಾಗಿದ್ದ ಗೌರಿ ಲಂಕೇಶ್ ಅವರನ್ನು. ಅವರು ಜಿಗ್ನೇಶ್, ಕನ್ಹಯ್ಯ, ಉಮರ್ ಖಾಲೀದ್, ಭೀಮ್ ಆರ್ಮಿಯ ಚಂದ್ರಶೇಖರ್ ಆಜಾದ್, ಶೆಹ್ಲಾ, ಇವರನ್ನೆಲ್ಲಾ ತನ್ನ ದತ್ತು ಮಕ್ಕಳು ಎಂದು ಕರೆದುಕೊಂಡು ಅವರಿಗೆಲ್ಲಾ ಪ್ರೀತಿ ಹಂಚುತ್ತಿದ್ದಾಗ ಬಹಳ ಖುಶಿಯಾಗುತ್ತಿತ್ತು.

 ಒಮ್ಮೆ ಜಿಗ್ನೇಶ್ ಬಂದಿದ್ದಾಗ ಅವರನ್ನು ಬೀಳ್ಕೊಡುವ ಸಂದರ್ಭದಲ್ಲಿ ನಾನು ಮತ್ತು ಗೌರಿ ಮೇಡಂ ವಿಮಾನ ನಿಲ್ದಾಣದ ವರೆಗೆ ಹೋಗಿ ಬಿಟ್ಟು ಬಂದಿದ್ದೆವು. ಇದಕ್ಕೂ ಮೊದಲು ಗಾಂಧಿ ಬಜಾರಿನ ಒಂದು ಬಟ್ಟೆ ಅಂಗಡಿಗೆ ಇಬ್ಬರೂ ಹೋಗಿ ಜಿಗ್ನೇಶ್ ಗೆ ಬೇಕಾದ ಹೊಸ ಬಟ್ಟೆಗಳನ್ನು ಕೊಂಡು ತಂದಿದ್ದೆವು. ದಿನಗೌರಿಅವ್ವನ ಪ್ರೀತಿಯಲ್ಲಿ ಜಿಗ್ನೇಶ್ ಚಿಕ್ಕ ಮಗುವಾಗಿಬಿಟ್ಟಿದ್ದರು. ಸಂದರ್ಭದಲ್ಲಿ ಹೊಟೆಲ್ ಒಂದರಲ್ಲಿ ಊಟ ಮಾಡುವಾಗ ತೆಗೆದುಕೊಂಡಿದ್ದ ಒಂದು ಫೋಟೋ ನೋಡಿದಾಗಲೆಲ್ಲಾ ದುಃಖವಾಗುತ್ತದೆ.



 ಒಮ್ಮೆ ನಾನು ಫೇಸ್ಬುಕ್ಕಿನಲ್ಲಿ ನಮ್ಮೂರಿನ ವಿಶೇಷ ಅಡುಗೆಯಾದ ಕೋಳಿ-ಕಜ್ಜಾಯದ ಫೋಟೋ ಹಾಕಿದ್ದೆ. ಆಗ ಗೌರಿ ಮೇಡಂ ಮೆಸೇಜ್ ಮಾಡಿ, "ಇದು ಒಂದು ದೊಡ್ಡ ಕತೆ ಆಯಿತು! ಹಲವು ದಿನಗಳ ಹಿಂದೆ ಹರ್ಷಕುಮಾರ್ ಎಂಬುವವನು ಅದ್ಯಾವುದೋ ಕೋಳಿ ಕಜ್ಜಾಯ ಅಂತ ಹೊಟ್ಟೆ ಉರಿಸಿದ. ಈಗ ಪ್ರಗತ್ ಅನ್ನುವವನು ಮಲೆನಾಡಿಗರ ಫೇವರೆಟ್ ಕಡುಬು ಚಿಕನ್ ಅಂತ ಶೇರ್ ಮಾಡಿದ್ದಾನೆ. ಹರ್ಷ, ಪ್ರಗತ್ ತರಹದ ಯುವಕರು ಸುಖಾಸುಮ್ಮನೆ ನನ್ನನ್ನು ಅಮ್ಮ, ಅಕ್ಕಾ ಅಂತ ಫೇಸ್ಬುಕ್ನಲ್ಲಿ ಕರೆಯುತ್ತಾರೆ. ಒಂದಾದರು ದಿನಬಾರಕ್ಕ, ಬಾರಮ್ಮ ನಮ್ಮ ಮನೆಗೆ ನಿನಗೆ ಕೋಳಿ ಕಜ್ಜಾಯ ಕೊಡ್ತೀನಿ, ಕಡುಬು ಚಿಕನ್ ಕೊಡ್ತೀನಿಅಂದಿದ್ದಾರ? ವೇಸ್ಟ್ ಬಾಡೀಸ್ ನೀವೆಲ್ಲ. ಇದನ್ನು ಪ್ರೀತಿಯಿಂದ ಹೇಳುತ್ತಿದ್ದೇನೆ. ವೇಸ್ಟ್ ಬಾಡೀಸ್!!!!!!!!" ಎಂದು ಪ್ರೀತಿಯಿಂದ ಮುನಿಸಿಕೊಂಡಿದ್ದರು.ಇದಾದ ಕೆಲವು ತಿಂಗಳ ನಂತರ ಒಂದು ಕೇಸಿಗಾಗಿ ಗೌರಿ ಮೇಡಂ ಶಿವಮೊಗ್ಗಕ್ಕೆ ಬರುತ್ತಾರೆಂದು ಅವರ ವಕೀಲರಾಗಿದ್ದ ಶ್ರೀಪಾಲ್ ತಿಳಿಸಿದರು. ದಿನ ನಾನು ಊರಿನಲ್ಲಿದ್ದೆ. ಕೋಳಿ ಕಜ್ಜಾಯ ರೆಡಿ ಮಾಡುವುದು ಎಂದು ಮನೆಯಲ್ಲಿ ಹೇಳಿ ಗೌರಿ ಮೇಡಂಗೆ ಫೋನ್ ಮಾಡಿದರೆ ಅವರು ದಿನ ಕೇಸಿಗೆ ಬಂದಿರಲೇ ಇಲ್ಲ. ನನಗೆ ತುಂಬಾನೇ ನಿರಾಸೆಯಾಗಿತ್ತು. “ಇಲ್ಲ ಮರಿ, ಸಾರಿ, ಬೇರೊಂದು ಕೆಲಸ ತುರ್ತಾಗಿ ಬಂದು ಬರಲಾಗಲಿಲ್ಲ, ಮುಂದಿನ ಡೇಟಿಗೆ ಖಂಡಿತಾ ಬರುತ್ತೇನೆ, ಆಗ ಕೊಳಿ-ಕಜ್ಜಾಯ ಮಾಡಿಸುವಿಯಂತೆಅಂದಿದ್ದರು. “ಆಯ್ತು ಮೇಡಂಅಂದೆ. ಆದರೆ ಮತ್ತೊಂದು ಡೇಟ್ ಎಂದೂ ಬರಲೇ ಇಲ್ಲ!

 

2017 ಮಾರ್ಚ್ಏಪ್ರಿಲ್ ತಿಂಗಳು ಎಂದು ಕಾಣುತ್ತದೆ. ಡಾ.ಸಿ.ಎಸ್,ದ್ವಾರಕಾನಾಥ್ ಅವರ ಮಾರ್ಗದರ್ಶನದಲ್ಲಿ ಸಮಾಜ ಕಲ್ಯಾಣ ಇಲಾಖೆಯ ಅಡಿ ಕೆಲಸ ಮಾಡುವ ಡಾ.ಬಿ.ಆರ್.ಅಂಬೇಡ್ಕರ್ ಸಂಶೋಧನಾ ಸಂಸ್ಥೆಗಾಗಿ ಅಲೆಮಾರಿ ಸಮುದಾಯಗಳ ಕುರಿತು ಒಂದು ಸಂಶೋಧನೆ ಮಾಡುವ ಅವಕಾಶ ಬಂದಿತ್ತು. ಇದು ನಡೆಯುತ್ತಿದ್ದ ಸಮಯದಲ್ಲಿ ಒಂದು ರಾತ್ರಿ 11 ಗಂಟೆಗೆ ಗೌರಿ ಮೇಡಂ ಒಂದು ದೊಡ್ಡ ಮೆಸೇಜ್ ಕಳಿಸಿದರು. ಅದರಲ್ಲಿ ನನ್ನ ಕುರಿತು ಕೆಲವು ಆರೋಪಗಳಿದ್ದವು. ಸಂಶೋಧನೆ ಯೋಜನೆಯ ಕುರಿತು ಕೆಲವು ತಪ್ಪು ಮಾಹಿತಿಗಳಿಂದ ಕೂಡಿದ ಆರೋಪಗಳೂ ಇದ್ದವು. ನನಗೆ ಅದನ್ನು ನೋಡಿ ಮೇಡಂ ಹೀಗೆಲ್ಲಾ ಯೋಚಿಸುವುದಾ ಅನಿಸಿದರೂ, ಅವುಗಳಿಗೆ ಉತ್ತರಿಸುವುದು ನನ್ನ ಜವಾಬ್ದಾರಿ ಎಂದೆಣಿಸಿ ಅವರು ಬರೆದಿದ್ದ ಪ್ರತಿಯೊಂದು ಅಂಶಕ್ಕೂ ವಿವರಣೆಯನ್ನು ಬರೆದು ರಾತ್ರಿ 2 ಗಂಟೆಯ ಸುಮಾರಿಗೆ ಕಳಿಸಿದೆ. ಅದನ್ನು ಓದಿದ ಮೇಡಂ ನಿಜಕ್ಕೂ ಕನ್ವಿನ್ಸ್ ಆಗಿದ್ದರು. ಮೊದಲು ಬಹಳ ಬಿರುಸಿನಿಂದ ಶುರುವಾಗಿದ್ದ ಮೆಸೆಂಜರ್ ಮಾತುಕತೆ ಮುಗಿಯುವಾಗ ಪರಸ್ಪರ ಸಾರಿ ಕೇಳಿಕೊಳ್ಳುವಲ್ಲಿಗೆ ಸುಖಾಂತ್ಯ ಕಂಡಿತ್ತು.

 ಗೌರಿ ಮೇಡಂ ಹತ್ಯೆಯಾಗುವ ಕೆಲವು ದಿನಗಳ ಮೊದಲು ಗೌರಿಯವರು ಇಷ್ಟಪಡುತ್ತಿದ್ದ ಕೆಲವಾರು ಪ್ರಗತಿಪರ ಶಕ್ತಿಗಳು ತಮ್ಮ ತಮ್ಮೊಳಗೆ ಕಚ್ಚಾಡುತ್ತಿದ್ದುದನ್ನು ಕಂಡು ತುಂಬಾ ಮನಸಿಗೆ ಹಚ್ಚಿಕೊಂಡಿದ್ದರು. ಆಗಷ್ಟೇ ಅವರು ಟ್ವಿಟರ್ ಅಕೌಂಟ್ ಮಾಡಿಕೊಂಡು ಟ್ವೀಟ್ ಮಾಡುತ್ತಿದ್ದರು. ಅದರಲ್ಲೂ ನಾವೆಲ್ಲಾ ಒಂದು ಉದ್ದೇಶಕ್ಕಾಗಿ ಕೆಲಸ ಮಾಡೋಣ, ನಮ್ಮ ನಮ್ಮಲ್ಲೇ ಕಚ್ಚಾಟ ಬೇಡ ಎಂದು ಕೋರಿಕೊಂಡಿದ್ದರು. ಇದು ಕೇವಲ ಸಾಮಾಜಿಕ ಜಾಲತಾಣಗಳಲ್ಲಿ ನಡೆಯುತ್ತಿದ್ದ ಜಗಳಗಳ ಹಿನ್ನೆಲೆಯಲ್ಲೇ ಅವರು ಮಾಡಿದ್ದ ಟ್ವೀಟ್ ಆಗಿತ್ತು. ಆದರೆ ಇದನ್ನು ವಿಕೃತ ರೀತಿಯಲ್ಲಿ ಬಳಸಿಕೊಂಡಿದ್ದು ಕೆಲ ಬಲಪಂಥೀಯ ಪತ್ರಕರ್ತರಾಗಿದ್ದರು. ಸಂದರ್ಭದಲ್ಲಿ ನಾವು ಯಾರಾದರೂ ಸಿದ್ದರಾಮಯ್ಯ ಅವರ ಕುರಿತು ಏನಾದರೂ ವಿಮರ್ಶೆ ಬರೆದರೆ ಗೌರಿ ಮೇಡಂ ತುಂಬಾ ಸಿಡಿಮಿಡಿಯಾಗುತ್ತಿದ್ದರು. ಬಿಜೆಪಿ-ಸಂಘಪರಿವಾರವನ್ನು ಎದುರಿಸಲು ನಮಗೆ ಅನಿವಾರ್ಯವಾದ ಆಯ್ಕೆ ಸಿದ್ದರಾಮಯ್ಯ ಮತ್ತು ಕಾಂಗ್ರೆಸ್ ಎಂಬುದು ಅವರ ಗಟ್ಟಿ ನಂಬಿಕೆಯಾಗಿತ್ತು. ಕುರಿತು ಒಂದೆರಡು ಸಲ ನನಗೂ ಗೌರಿ ಮೇಡಂಗೂ ಫೇಸ್ಬುಕ್ಕಿನಲ್ಲಿ ಸಣ್ಣ ಮಾತಿನ ತಿಕ್ಕಾಟವೂ ಆಗಿತ್ತು. ಆದರೆ ಅದು ವೈಯಕ್ತಿಕ ಮಟ್ಟದಲ್ಲಂತೂ ಇರಲಿಲ್ಲ.

 2017 ಸೆಪ್ಟೆಂಬರ್ 05ರಂದು ಗೌರಿ ಮೇಡಂ ಹತ್ಯೆ ಕನ್ಪರ್ಮ್ ಆದ ಕ್ಷಣದಲ್ಲಿ ಕುಸಿದು ಬಿದ್ದಂತಾಯಿತು. “ನಾನು ಗೌರಿಎಂದು ಫೇಸ್ಬುಕ್ಕಿನಲ್ಲಿ ಒಂದು ವಾಕ್ಯವನ್ನು ಬರೆದು ಕೆಲವು ಗಂಟೆಗಳ ಕಾಲ ಸುಮ್ಮನೇ ಕುಳಿತುಬಿಟ್ಟೆ.

ತಾನಿರುವ ಕಾಲವನ್ನು, ಕಾಲದ ಬಿಕ್ಕಟ್ಟುಗಳನ್ನು ಸರಿಯಾಗಿ ಗ್ರಹಿಸಿಕೊಂಡು ಅದಕ್ಕೆ ತಕ್ಕಂತೆ ಪಕ್ಷ ಸಿದ್ಧಾಂತಗಳ ಗಡಿಗಳನ್ನು ಮೀರಿ ಎಲ್ಲರೂ ಒಂದಾಗಿ ಕೆಲಸ ಮಾಡಬೇಕು ಎಂಬ ನಿಟ್ಟಿನಲ್ಲಿ ತನ್ನನ್ನು ತಾನು ತೇಯ್ದುಕೊಳ್ಳುತ್ತಿದ್ದರು ಗೌರಿ ಲಂಕೇಶ್. ತಾನೊಬ್ಬ ಹೈಫೈ ಪತ್ರಕರ್ತೆಯಾಗುವ ಎಲ್ಲಾ ಅವಕಾಶಗಳನ್ನು ಬಿಟ್ಟು ತನಗೆ ಆತ್ಮತೃಪ್ತಿಯಾಗುವ ರೀತಿಯಲ್ಲಿ ಕನ್ನಡ ಪತ್ರಿಕೋದ್ಯಮವನ್ನೇ ಆರಿಸಿಕೊಂಡು, ಕೆಲವೇ ವರ್ಷಗಳಲ್ಲಿ ಅದ್ಭುತವಾಗಿ ವಿಶ್ಲೇಷಣೆ ನಡೆಸಿ ಬರೆಯುವ ಮಟ್ಟಿಗೆ ಒಬ್ಬ ಧೀಮಂತ ಪತ್ರಕರ್ತೆಯಾಗಿ ಬೆಳೆದಿದ್ದು ಗೌರಿ ಲಂಕೇಶ್. ಹೇಗೆ ಅವರಪ್ಪ ಲಂಕೇಶ್ಪ್ರಗತಿ ರಂಗಕಟ್ಟಿಕೊಂಡು ರಾಜ್ಯವನ್ನೆಲ್ಲಾ ಸುತ್ತಿದ್ದರೋ ಹಾಗೆಯೇ ಗೌರಿ ಲಂಕೇಶ್ ಕೂಡಾ ನಾಡಿನ ಎಲ್ಲಾ ಜನಪರ ಶಕ್ತಿಗಳ ಕಣ್ಮಣಿಯಾಗಿ ಕೆಲಸ ಮಾಡುತ್ತಿದ್ದರು. ಅವರೆಷ್ಟು ಸರಳತೆಯನ್ನು ಮೈಗೂಡಿಸಿಕೊಂಡಿದ್ದರು ಎಂದರೆ ಆಶ್ಚರ್ಯವಾಗುತ್ತದೆ.

 


ಗೌರಿ ಮೇಡಂ ಅವರು ಕೆಲಸ ಮಾಡುತ್ತಿದ್ದ ರೀತಿಯನ್ನು ಹತ್ತಿರದಿಂದ ನೋಡಿರುವ ನಾನು ಎಷ್ಟೋ ಸಲ ದಂಗಾಗಿದ್ದೇನೆ. ಗೈಡ್, ಲಂಕೇಶ್ ಪತ್ರಿಕೆ, ಹಲವಾರು ಪುಸ್ತಕಗಳ ಪ್ರಕಾಶನ ಇತ್ಯಾದಿ ಕೆಲಸಗಳನ್ನು ಅವರು ಅದ್ಯಾವ ಪರಿ ಮಾಡುತ್ತಿದ್ದರೆಂದರೆ ಕೆಲವೊಮ್ಮೆ ಹತ್ತಾರು ಗಂಟೆಗಳ ಕಾಲ ಎಡೆಬಿಡದೇ ಕೆಲಸ ಮಾಡುತ್ತಿದ್ದರು. ಕೆಲವೊಮ್ಮೆ ಎಲ್ಲಾ ಕೆಲಸವನ್ನೂ ಅವರೊಬ್ಬರೇ ಮಾಡಬೇಕಾದ ಪರಿಸ್ಥಿತಿ ಎದುರಾದಾಗಲೂ ತಾಳ್ಮೆಯಿಂದಲೇ ಎಲ್ಲವನ್ನೂ ನಿರ್ವಹಿಸುತ್ತಿದ್ದರು. ಬಹುಶಃ ನಾನಾಗಲೀ, ಕುಮಾರ್ ಬುರಡಿಕಟ್ಟಿಯಾಗಲೀ ಲಂಕೇಶ್ ತೊರೆದು ಬೇರೆ ಕೆಲಸ ನೋಡಿಕೊಳ್ಳದೇ ಹೋಗಿದ್ದರೆ ಅವರ ಹೊರೆಯಲ್ಲಿ ಒಂದಷ್ಟು ನಾವೂ ಹೊತ್ತು ಅವರಿಗೆ ಒಂದಷ್ಟು ಹಗರುವಾಗುತ್ತಿತ್ತು ಎನಿಸುತ್ತದೆ. ಆದರೆ ಈಗ ಹಳಹಳಿಸಿ ಏನೂ ಪ್ರಯೋಜನವಿಲ್ಲ. ಅಂದಿನ ನನ್ನ ಪರಿಸ್ಥಿತಿಯೂ ಹಾಗಿರಲಿಲ್ಲ.

 ಒಟ್ಟಿಗೇ ಕೆಲಸ ಮಾಡಿದ, ಒಟ್ಟಿಗೇ ಊಟ ಮಾಡಿದ, ಬಸವನಗುಡಿಯ ಬುಲ್ ಟೆಂಪಲ್ ಪಾರ್ಕಿನಲ್ಲಿ ಒಟ್ಟಿಗೇ ಶಟಲ್ ಆಡಿದ, ಒಟ್ಟಿಗೇ ಹೋರಾಟಗಳಲ್ಲಿ ಭಾಗಿಯಾದ ಗೌರಿ ಮೇಡಂ ಈಗ ನಮ್ಮೊಂದಿಗೆ ಇರಬೇಕಿತ್ತು ಎಂದು ಅನಿಸುತ್ತಲೇ ಇರುತ್ತದೆ.

 ನನಗೆ ಜೀವ ಕೊಟ್ಟ ಅವ್ವನ ಹೆಸರು ಪಾರ್ವತಿ. ಬದುಕು ಕಟ್ಟಿಕೊಳ್ಳಲು ನೆರವಾದ ಮತ್ತೊಬ್ಬಅವ್ವಗೌರಿ. ಜೀವನದಲ್ಲಿ ನನಗೆ ಹೊಸ ವೃತ್ತಿ ಬದುಕಿಗೆ ಅಡಿಪಾಯ ಹಾಕಿಕೊಟ್ಟ ಅವ್ವಗೌರಿಯನ್ನು ನೆನೆಯದೇ ಇದ್ದರೆ ನನ್ನಷ್ಟು ಕೃತಘ್ನ ಯಾರೂ ಇರುವುದಿಲ್ಲ.

 #ನಾನು_ಗೌರಿ_ನಾವೆಲ್ಲ_ಗೌರಿ

 










ಹೊಸತು - ಹಳತು : ಬುದ್ದ ತತ್ವ

ಲೋಕದ ಪ್ರತಿಯೊಂದೂ ಎಡೆಬಿಡದ ಚಲನೆಯಲ್ಲಿದೆ. ಕೆಲವೊಮ್ಮೆ ಬರಿಗಣ್ಣಿಗೆ ಚಲಿಸದೇ ಜಡವಾಗಿವೆ ಎಂದು ತೋರುವ ಪ್ರತಿಯೊಂದೂ ಚಲನೆಯಲ್ಲಿದೆ. ಒಂದು ಮರದ ತುಂಡು, ಕಬ್ಬಿಣದ ಬಿಲ್ಲೆ,...

ಮರದೊಂದು ಎಲೆ ನಾನು..

ನನ್ನ ಫೋಟೋ
A Writer, Researcher, Journalist and Activist. Born and brought up from Kugwe a village near Sagara, Shimoga district of Karnataka state. Presently working as the Editor In Chief of PEEPAL MEDIA /PEEPAL TV.